
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ…
ಮೂಲಭೂತವಾಗಿ ನಿಮ್ಮ ಮಾನವೀಯ ಪ್ರೇಮದಲ್ಲಿ ಭಗವಂತನ ಪ್ರೇಮವನ್ನೇ ಅರಸುತ್ತಿದ್ದೀರಿ ಎಂದು ನೀವು ಅಂತಿಮವಾಗಿ ಅರ್ಥಮಾಡಿಕೊಳ್ಳುವಿರಿ ಎಂಬ ಕಾರಣಕ್ಕೆ ಅವನು ಮಾನವರ ಹೃದಯಗಳ ಮೂಲಕ ಕಣ್ಣು-ಮುಚ್ಚಾಲೆಯಾಡುತ್ತಿದ್ದಾನೆ. ನಿಮ್ಮ ಮಾನವೀಯ ಪ್ರೇಮದಲ್ಲಿ ನೀವು ಭಗವಂತನನ್ನು ನಿರ್ಲಕ್ಷಿಸಿದರೆ, ಪ್ರೇಮವು ಕಣ್ಮರೆಯಾಗುತ್ತದೆ. ಆದರೆ ಭಗವಂತನನ್ನು ನಿಮ್ಮ ದಿನನಿತ್ಯದ ಜೀವನದಲ್ಲಿ ಬರಮಾಡಿಕೊಳ್ಳುವುದರಿಂದ, ಸಾಧಾರಣ ಮಾನವೀಯ ಪ್ರೇಮವು, ನಿಮ್ಮೊಳಗಿರುವ ಭಗವಂತನ ಸ್ವರೂಪದಿಂದ ಅಭಿವ್ಯಕ್ತಿಯಾದ ದಿವ್ಯ ಪ್ರೇಮವಾಗಿ ಬದಲಾಗುತ್ತದೆ.
ಎಲ್ಲ ಮಾನವರನ್ನು ಮತ್ತು ಇತರ ಜೀವಿಗಳನ್ನು ಖುದ್ದಾಗಿ ಮತ್ತು ವೈಯಕ್ತಿಕವಾಗಿ ತಿಳಿದು ಪ್ರೇಮಿಸುವ ಅವಶ್ಯಕತೆಯಿಲ್ಲ. ಆದರೆ ನೀವು ಮಾಡಬೇಕಾದದ್ದೇನೆಂದರೆ ನೀವು ಸಂಧಿಸಬಹುದಾದ ಎಲ್ಲ ಜೀವಿಗಳಿಗೂ ಎಲ್ಲ ಸಮಯದಲ್ಲೂ ಸ್ನೇಹಪೂರ್ಣ ಸೇವೆಯ ಬೆಳಕನ್ನು ಹರಿಸಲು ಸಿದ್ಧರಿರಬೇಕು. ಈ ಪ್ರವೃತ್ತಿಯು ನಿರಂತರ ಮಾನಸಿಕ ಶ್ರಮ ಮತ್ತು ಸಿದ್ಧತೆಯನ್ನು ಬೇಡುತ್ತದೆ; ಬೇರೆ ಶಬ್ದಗಳಲ್ಲಿ ಹೇಳಬಹುದಾದರೆ, ನಿಸ್ವಾರ್ಥತೆ.
ಸಂಬಂಧಗಳ ಆಧ್ಯಾತ್ಮಿಕ ಉದ್ದೇಶವನ್ನು ನಾವು ಅರ್ಥಮಾಡಿಕೊಂಡರೆ — ಸ್ವ-ಪ್ರೇಮವನ್ನು ಇತರರಿಗಾಗಿ ನಿತ್ಯ-ವೃದ್ಧಿಸುತ್ತಿರುವ ಪ್ರೇಮದ ವಲಯವಾಗಿ ವಿಸ್ತರಿಸಲು ಕಲಿಸುವುದು — ನಂತರ ಮಿತ್ರತ್ವದ, ದಾಂಪತ್ಯ ಪ್ರೇಮದ, ಮಾತಾಪಿತೃಗಳ ಪ್ರೇಮದ ಮತ್ತು ಎಲ್ಲ ಸಹಚರರ ಮತ್ತು ಎಲ್ಲ ಪ್ರಾಣಿ ಸಂಕುಲದ ಪ್ರೇಮದ ದ್ವಾರಗಳ ಮೂಲಕ ನಾವು ಸರ್ವಶಕ್ತನ, ಅತ್ಯುತ್ಕೃಷ್ಟವಾದ, ಪರಮ-, ಅಥವಾ ದಿವ್ಯ ಪ್ರೇಮದ ಸಾಮ್ರಾಜ್ಯವನ್ನು ಪ್ರವೇಶಿಸಬಹುದು.
ಭಗವಂತನ ಪ್ರೇಮದೊಂದಿಗೆ ಒಂದಾಗದ ಯಾವುದೇ ಪ್ರೇಮವು ನೈಜ ಪ್ರೇಮವಲ್ಲ; ಏಕೆಂದರೆ ಎಲ್ಲ ನೈಜ ಪ್ರೇಮವೂ ಕೇವಲ ಭಗವಂತನಿಂದ ಮಾತ್ರ ಬರುತ್ತದೆ. ಮಾನವೀಯ ಪ್ರೇಮವು, ದಿವ್ಯವಾಗಿರಬೇಕಾದರೆ, ಅದು ಗಾಢವಾದದ್ದು ಮತ್ತು ನಿಸ್ವಾರ್ಥದ್ದಾಗಿರಬೇಕು. ಪ್ರೇಮವು ದಿವ್ಯವಾಗುವವರೆಗೂ ಅಂತರಾಳದ ಪ್ರೇಮವನ್ನು ಸ್ವಚ್ಛಗೊಳಿಸಿ.
ಅಭ್ಯಾಸ ಮಾಡಲು ಒಂದು ದೃಢೀಕರಣ: “ಇತರರೆಡೆಗೆ ಪ್ರೀತಿ ಮತ್ತು ಸದ್ಭಾವನೆಗಳನ್ನು ಹೊರಸೂಸುತ್ತಾ ಭಗವಂತನ ಪ್ರೀತಿಯು ನನ್ನೆಡೆಗೆ ಬರುವ ಕಾಲುವೆಯನ್ನು ತೆರೆಯುತ್ತೇನೆ. ಎಲ್ಲಾ ಒಳಿತನ್ನು ನನ್ನಡೆಗೆ ಆಕರ್ಷಿಸುವ ಅಯಸ್ಕಾಂತವೇ ಭಗವಂತನ ಪ್ರೀತಿ.”
ಕೆಳಗಿನ ಲಿಂಕ್‌ನಲ್ಲಿ ನೀವು ದಿವ್ಯ ಪ್ರೇಮದ ಸ್ವರೂಪ ಮತ್ತು ಅದನ್ನು ನಿಮ್ಮ ಜೀವನದಲ್ಲಿ ಹೇಗೆ ಅನುಭವಿಸುವುದು ಮತ್ತು ವ್ಯಕ್ತಪಡಿಸುವುದು ಎಂಬುದರ ಬಗ್ಗೆ ಪರಮಹಂಸಜಿಯವರ ಆಳವಾದ ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ನೋಡುತ್ತೀರಿ.