ಪ್ರೇಮ: ಮಾನುಷ ಮತ್ತು ದಿವ್ಯ

Merging of sky and ocean depicting Human and Divine love.ನೀವು ಅನುಭವಿಸಬಹುದಾದ ಅತ್ಯುನ್ನತ ಪ್ರೇಮ ಎಂದರೆ ಧ್ಯಾನದಲ್ಲಿನ ದೇವರೊಡನೆಯ ಸಂಸರ್ಗ. ನೀವೆಲ್ಲರೂ ಅರಸುತ್ತಿರುವ ಪ್ರೇಮ ಯಾವುದೆಂದರೆ, ಪರಿಪೂರ್ಣ ಪ್ರೇಮವಾದ ಆತ್ಮ ಮತ್ತು ಪರಮಾತ್ಮನ ನಡುವಿನ ಪ್ರೇಮ. ನೀವು ಧ್ಯಾನ ಮಾಡಿದಾಗ, ಪ್ರೇಮವು ಬೆಳೆಯುತ್ತದೆ. ಲಕ್ಷಾಂತರ ಪುಳಕಗಳು ನಿಮ್ಮ ಹೃದಯದ ಮೂಲಕ ಹಾದುಹೋಗುತ್ತವೆ….ನೀವು ಗಾಢವಾಗಿ ಧ್ಯಾನಿಸಿದಲ್ಲಿ ಯಾವುದೇ ಮಾನವ ನುಡಿ ವಿವರಿಸಲಾಗದಂತಹ ಒಂದು ಪ್ರೇಮ ನಿಮ್ಮನ್ನು ಆವರಿಸುತ್ತದೆ; ನಿಮಗೆ ಅವನ ದಿವ್ಯ ಪ್ರೇಮದ ಅರಿವಾಗುತ್ತದೆ, ಮತ್ತು ಆ ಶುದ್ಧ ಪ್ರೇಮವನ್ನು ನೀವು ಇತರರಿಗೂ ಕೊಡಲು ಸಾಧ್ಯವಾಗುತ್ತದೆ.

ನಿಮಗೆ ದಿವ್ಯ ಪ್ರೇಮದ ಒಂದು ಕಣದಷ್ಟಾದರೂ ಅನುಭವವಾದರೆ, ನಿಮ್ಮ ಆನಂದ ಎಷ್ಟು ಹೆಚ್ಚಿರುವುದೆಂದರೆ, ಎಷ್ಟು ಪರವಶಗೊಳಿಸುವಂಥದ್ದೆಂದರೆ, ನಿಮಗೆ ಅದನ್ನು ತಡೆದುಕೊಳ್ಳಲಾಗುವುದಿಲ್ಲ.

ಇಡೀ ಜಗತ್ತು ಪ್ರೇಮವೆಂಬ ಶಬ್ದದ ನಿಜವಾದ ಅರ್ಥವನ್ನೇ ಮರೆತುಬಿಟ್ಟಿದೆ. ಪ್ರೇಮವು ಮನುಷ್ಯನಿಂದ ಅದೆಷ್ಟು ದುರುಪಯೋಗಿಸಲ್ಪಟ್ಟು ಶಿಲುಬೆಗೇರಿಸಲ್ಪಟ್ಟಿದೆಯೆಂದರೆ, ಕೇವಲ ಕೆಲವೇ ಜನರಿಗೆ ಮಾತ್ರ ನಿಜವಾದ ಪ್ರೇಮವೆಂದರೇನೆಂದು ತಿಳಿದಿದೆ. ಆಲಿವ್‌ನ ಎಲ್ಲ ಭಾಗಗಳಲ್ಲೂ ಎಣ್ಣೆ ಇರುವಂತೆ, ಪ್ರೇಮವು ಸೃಷ್ಟಿಯ ಎಲ್ಲ ಭಾಗಗಳನ್ನೂ ಆವರಿಸಿಕೊಂಡಿದೆ. ಆದರೆ ಒಂದು ಕಿತ್ತಳೆಯ ಸ್ವಾದವನ್ನು ಪದಗಳಿಂದ ಸಂಪೂರ್ಣವಾಗಿ ಹೇಗೆ ವಿವರಿಸಲು ಸಾಧ್ಯವಿಲ್ಲವೋ ಅದೇ ಕಾರಣಕ್ಕಾಗಿ ಪ್ರೇಮದ ಅರ್ಥವನ್ನು ವಿವರಿಸುವುದೂ ಬಹಳ ಕಷ್ಟ. ಹಣ್ಣಿನ ಸ್ವಾದವನ್ನು ಅರಿಯಲು ಅದರ ರುಚಿ ನೋಡಲೇ ಬೇಕು. ಅಂತೆಯೇ ಪ್ರೇಮವೂ ಕೂಡ.

ಸರ್ವವ್ಯಾಪೀ ಅರ್ಥದಲ್ಲಿ, ಪ್ರೇಮವು ಸೃಷ್ಟಿಯಲ್ಲಿರುವ ಆಕರ್ಷಣೆಯೆಂಬ ದಿವ್ಯಶಕ್ತಿ, ಅದು ಸಮರಸವನ್ನು ಉಂಟುಮಾಡುತ್ತದೆ, ಒಂದುಗೂಡಿಸುತ್ತದೆ, ಒಟ್ಟಿಗೆ ಬಂಧಿಸಿಡುತ್ತದೆ….ಪ್ರೇಮದ ಆಕರ್ಷಣ ಶಕ್ತಿಯೊಂದಿಗೆ ಶ್ರುತಿಗೂಡಿಸಿಕೊಂಡು ಬಾಳುತ್ತಿರುವವರು ಪ್ರಕೃತಿಯೊಂದಿಗೆ ಮತ್ತು ತಮ್ಮ ಸಹಚರರೊಂದಿಗೆ ಸಾಮರಸ್ಯವನ್ನು ಸಾಧಿಸಿರುತ್ತಾರೆ, ಮತ್ತು ಭಗವಂತನೊಂದಿಗಿನ ಪರಮಾನಂದಮಯ ಪುನರ್ಮಿಲನದತ್ತ ಆಕರ್ಷಿತರಾಗುತ್ತಾರೆ.

“ಸಾಮಾನ್ಯ ಪ್ರೇಮ ಸ್ವಾರ್ಥಮೂಲವಾದುದು, ಆಸೆಗಳಲ್ಲಿ ಮತ್ತು ತೃಪ್ತಿಗಳಲ್ಲಿ ಕರಾಳವಾಗಿ ಬೇರು ಬಿಟ್ಟಿರುವುದು,” [ಶ್ರೀ ಯುಕ್ತೇಶ್ವರರು ಹೇಳಿದರು]. “ದಿವ್ಯ ಪ್ರೇಮಕ್ಕೆ ನಿರ್ಬಂಧಗಳಿಲ್ಲ, ಮೇರೆಗಳಿಲ್ಲ, ವ್ಯತ್ಯಾಸವೆಂಬುವುದಿಲ್ಲ. ಸ್ತಂಭಿತಗೊಳಿಸುವಂತಹ ಪವಿತ್ರ ಪ್ರೇಮದ ಸ್ಪರ್ಶವಾಯಿತೆಂದರೆ, ಮಾನವ ಹೃದಯದ ಬದಲಾವಣೆಗಳ ನಿರಂತರ ಪ್ರವಾಹವು ಸದಾಕಾಲಕ್ಕೆ ಸ್ತಬ್ಧವಾಗಿ ಬಿಡುತ್ತದೆ.”

ಅನೇಕ ಜನರು “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಒಂದು ದಿನ ಹೇಳುತ್ತಾರೆ, ಆದರೆ ಮರುದಿನ ತಿರಸ್ಕರಿಸುತ್ತಾರೆ. ಅದು ಪ್ರೀತಿಯಲ್ಲ. ಯಾರ ಹೃದಯವು ಭಗವತ್ ಪ್ರೇಮದಿಂದ ತುಂಬಿಕೊಂಡಿರುವುದೋ ಅವರು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸಲಾರರು. ನೀವು ಯಾವುದೇ ಷರತ್ತಿಲ್ಲದೆ ಭಗವಂತನನ್ನು ಪ್ರೀತಿಸಿದಾಗ, ಅವನು ಎಲ್ಲರಿಗಾಗಿರುವ ತನ್ನ ಅನಿರ್ಬಂಧಿತ ಪ್ರೀತಿಯಿಂದ ನಿಮ್ಮ ಹೃದಯವನ್ನು ತುಂಬುತ್ತಾನೆ. ಆ ಪ್ರೇಮವನ್ನು ಯಾವ ಮಾನವ ನಾಲಿಗೆಯೂ ಬಣ್ಣಿಸಲಾರದು…ಈ ರೀತಿಯಲ್ಲಿ ಇನ್ನೊಬ್ಬರನ್ನು ಪ್ರೀತಿಸಲು ಸಾಮಾನ್ಯ ಮನುಷ್ಯನು ಅಸಮರ್ಥನಾಗುತ್ತಾನೆ. “ನಾನು, ನನಗೆ ಹಾಗೂ ನನ್ನದು” ಎಂಬ ಪ್ರಜ್ಞೆಯಲ್ಲಿ ಸ್ವಾರ್ಥಪರನಾಗಿರುವವನು ತನ್ನಲ್ಲಿ ಹಾಗೂ ಇತರ ಎಲ್ಲ ಜೀವಿಗಳಲ್ಲಿ ನೆಲೆಸಿರುವ ಸರ್ವವ್ಯಾಪಿ ಭಗವಂತನನ್ನು ಇನ್ನೂ ಕಂಡುಕೊಂಡಿರುವುದಿಲ್ಲ. ನನಗೆ, ಒಬ್ಬ ವ್ಯಕ್ತಿಗೂ ಮತ್ತೊಬ್ಬ ವ್ಯಕ್ತಿಗೂ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ; ನಾನು ಎಲ್ಲರನ್ನೂ ಒಬ್ಬನೇ ಭಗವಂತನ ಆತ್ಮ-ಪ್ರತಿಬಿಂಬಗಳಂತೆ ಕಾಣುತ್ತೇನೆ. ನನಗೆ ಯಾರನ್ನೂ ಅಪರಿಚಿತರು ಎಂದು ಭಾವಿಸಲು ಸಾಧ್ಯವಿಲ್ಲ, ಏಕೆಂದರೆ ನಾವೆಲ್ಲರೂ ಒಂದೇ ಅಮೂರ್ತಚೇತನದ ಅಂಶಗಳು ಎಂದು ನನಗೆ ತಿಳಿದಿದೆ. ಧರ್ಮದ ನಿಜವಾದ ಅರ್ಥವನ್ನು ನೀವು ಅರಿತಾಗ, ಅವನೇ ನಿಮ್ಮ ಆತ್ಮ ಎಂದೂ, ಅವನು ಎಲ್ಲ ಜೀವಿಗಳಲ್ಲಿ ಸಮಾನವಾಗಿ ಮತ್ತು ನಿಷ್ಪಕ್ಷಪಾತವಾಗಿ ನೆಲೆಸಿರುವನೆಂದೂ ಅರಿಯುವಿರಿ. ಆಗ ನಿಮಗೆ ಇತರರನ್ನು ನಿಮ್ಮಂತೆಯೇ ಪ್ರೀತಿಸಲು ಸಾಧ್ಯವಾಗುತ್ತದೆ.

ಭಗವಂತನ ದಿವ್ಯಪ್ರೇಮದಲ್ಲಿ ಮುಳುಗಿರುವವನ ಪ್ರಜ್ಞೆಯಲ್ಲಿ ಕಪಟವಿರುವುದಿಲ್ಲ, ಜಾತಿ ಮತಗಳ ಸಂಕುಚಿತತೆಯಿರುವುದಿಲ್ಲ, ಯಾವುದೇ ರೀತಿಯ ಸೀಮಾರೇಖೆಗಳೂ ಇರುವುದಿಲ್ಲ. ನೀವು ಅಂತಹ ದಿವ್ಯಪ್ರೇಮವನ್ನು ಅನುಭವಿಸಿದಾಗ ನಿಮಗೆ ಹೂವು ಮತ್ತು ಪಶುಗಳ ನಡುವೆ, ಮನುಷ್ಯ ಮತ್ತು ಮನುಷ್ಯರ ನಡುವೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಇಡೀ ಪ್ರಕೃತಿಯೊಂದಿಗೆ ನೀವು ತಲ್ಲೀನರಾಗುವಿರಿ, ಹಾಗೂ ಇಡೀ ಮನುಕುಲವನ್ನು ಸಮಾನವಾಗಿ ಪ್ರೀತಿಸುವಿರಿ.

ದೈವ ಸಾಕ್ಷಾತ್ಕಾರವಾಗಬೇಕಾದಲ್ಲಿ ಸಮಸ್ತ ಜೀವಿಗಳ ಬಗ್ಗೆ ದಯೆ ಇರಬೇಕಾದುದು ಅಗತ್ಯ ಏಕೆಂದರೆ ಸ್ವತಃ ಭಗವಂತನೇ ಈ ಗುಣದಿಂದ ತುಂಬಿ ತುಳುಕುತ್ತಿದ್ದಾನೆ. ದಯಾರ್ದ್ರ ಹೃದಯವುಳ್ಳವರು ತಮ್ಮನ್ನು ಇತರರ ಸ್ಥಾನದಲ್ಲಿ ಊಹಿಸಿಕೊಂಡು ಅವರ ಸಂಕಟವನ್ನು ಅನುಭವಿಸಬಲ್ಲರು ಹಾಗೂ ಅದನ್ನು ನಿವಾರಿಸಲು ಪ್ರಯತ್ನಿಸುವರು.

ಪತಿ-ಪತ್ನಿಯರ ನಡುವೆ, ಪೋಷಕರು ಮತ್ತು ಮಕ್ಕಳ ನಡುವೆ, ಸ್ನೇಹಿತರ ನಡುವೆ, ನಮ್ಮ ಮತ್ತು ಉಳಿದವರ ನಡುವೆಯೂ ಪರಿಶುದ್ಧವಾದ ಮತ್ತು ಷರತ್ತಿಲ್ಲದ ಪ್ರೇಮವನ್ನು ಬೆಳೆಸಿಕೊಳ್ಳುವ ಪಾಠವನ್ನು ಕಲಿಯಲೆಂದೇ ನಾವು ಈ ಭೂಲೋಕಕ್ಕೆ ಬಂದಿದ್ದೇವೆ.

ಪ್ರೀತಿಪಾತ್ರರ ಪರಿಪೂರ್ಣತೆಯನ್ನು ಬಯಸುವುದು, ಹಾಗೂ ಆ ಆತ್ಮದ ನೆನಪಿನಲ್ಲಿ ಪರಿಶುದ್ಧ ಆನಂದವನ್ನು ಅನುಭವಿಸುವುದೇ, ದಿವ್ಯ ಪ್ರೇಮ; ಮತ್ತು ಅದೇ ನೈಜ ಸ್ನೇಹದ ಪ್ರೇಮ.

ದೇವರ ಪ್ರೇಮವು, ಅಂದರೆ ಅಮೂರ್ತ ಚೇತನದ ಪ್ರೇಮವು ಎಲ್ಲವನ್ನೂ ಆವರಿಸುವಂತಹ ಪ್ರೇಮ. ಅದನ್ನು ನೀವು ಒಂದು ಬಾರಿ ಅನುಭವಿಸಿದಲ್ಲಿ, ಅದು ನಿಮ್ಮನ್ನು ಚಿರಂತನ ಸಾಮ್ರಾಜ್ಯದಲ್ಲಿ ನಡೆಸಿಕೊಂಡು ಹೋಗುತ್ತಲೇ ಇರುತ್ತದೆ. ಆ ಪ್ರೇಮವನ್ನು ನಿಮ್ಮ ಹೃದಯದಿಂದ ಎಂದಿಗೂ ದೂರ ಮಾಡಲಾಗುವುದಿಲ್ಲ. ಅದು ಅಲ್ಲಿಯೇ ಉರಿಯುತ್ತಿರುತ್ತದೆ, ಅದರ ಅಗ್ನಿಯಲ್ಲಿ ಇತರರನ್ನು ನಿಮ್ಮೆಡೆಗೆ ಸೆಳೆಯುವಂತಹ, ಮತ್ತು ನಿಮಗೆ ನಿಜವಾಗಿಯೂ ಅವಶ್ಯವಿರುವ ಅಥವಾ ನೀವು ಬಯಸುವ ಸಕಲವನ್ನೂ ಆಕರ್ಷಿಸುವಂತಹ ಶುದ್ಧ ಚೇತನದ ವಿಶೇಷ ಅಯಸ್ಕಾಂತವನ್ನು ಕಾಣುವಿರಿ.

ನಾನು ನಿಮಗೆ ನಿಜವಾಗಿಯೂ ಹೇಳುತ್ತಿದ್ದೇನೆ, ನನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿದೆ, ಮಾನವನ ಮುಖಾಂತರವಲ್ಲ, ದೇವರ ಮುಖಾಂತರ. ಅವನಿದ್ದಾನೆ. ಅವನಿದ್ದಾನೆ. ಅವನ ಚೇತನವೇ ನಿಮ್ಮೊಂದಿಗೆ ನನ್ನ ಮೂಲಕ ಮಾತನಾಡುತ್ತದೆ. ನಾನು ಮಾತನಾಡುತ್ತಿರುವುದು ಅವನ ಪ್ರೇಮದ ಬಗ್ಗೆಯೇ. ಪುಳಕದ ಮೇಲೆ ಪುಳಕ! ಶಾಂತ ಮಂದಮಾರುತದಂತೆ ಅವನ ಪ್ರೇಮವು ಆತ್ಮವನ್ನು ಆವರಿಸುತ್ತದೆ. ಹಗಲೂ ಮತ್ತು ರಾತ್ರಿ, ವಾರದಿಂದ ವಾರಕ್ಕೆ, ವರ್ಷದಿಂದ ವರ್ಷಕ್ಕೆ ಅದು ಹೆಚ್ಚುತ್ತಲೇ ಹೋಗುತ್ತದೆ — ಕೊನೆಯೆಲ್ಲಿ ಎಂದು ನಿಮಗೆ ತಿಳಿಯುವುದೇ ಇಲ್ಲ. ಅದನ್ನೇ ನೀವು ಅರಸುತ್ತಿರುವುದು, ನಿಮ್ಮಲ್ಲಿ ಪ್ರತಿಯೊಬ್ಬರೂ. ನಿಮಗೆ ಮಾನವ ಪ್ರೇಮ ಮತ್ತು ಸಂಪತ್ತಿನ ಬಯಕೆಯಿದೆ ಎಂದಂದುಕೊಳ್ಳುತ್ತೀರಿ, ಆದರೆ ಅವುಗಳ ಹಿಂದೆ ನಿಮ್ಮನ್ನು ಕರೆಯುತ್ತಿರುವುದು ನಿಮ್ಮ ಪರಮಪಿತ. ಅವನ ಎಲ್ಲಾ ಕೊಡುಗೆಗಳಿಗಿಂತ ಅವನೇ ಶ್ರೇಷ್ಠ ಎಂದು ನೀವು ಅರ್ಥಮಾಡಿಕೊಂಡಾಗ, ಅವನನ್ನು ಕಾಣುವಿರಿ.

ನಮ್ಮ ಆತ್ಮೀಯರು ಎಂದೆಂದಿಗೂ ನಮ್ಮನ್ನು ಪ್ರೀತಿಸುವ ಭರವಸೆ ನೀಡುತ್ತಾರೆ; ಆದರೂ ಅವರು ದೀರ್ಘ ನಿದ್ರೆಯಲ್ಲಿ (ಮರಣದಲ್ಲಿ) ಮುಳುಗಿದಾಗ, ಅವರ ಭೂಮಿಯ ನೆನಪುಗಳು ಮರೆತುಹೋಗುತ್ತವೆ, ಆಗ ಅವರ ಪ್ರತಿಜ್ಞೆಗೆ ಏನು ಬೆಲೆ? ಯಾರು, ನಮಗೆ ಮಾತಿನಲ್ಲಿ ಹೇಳದೆ, ನಮ್ಮನ್ನು ಶಾಶ್ವತವಾಗಿ ಪ್ರೀತಿಸುವುದು? ಎಲ್ಲರೂ ನಮ್ಮನ್ನು ಮರೆತಿರುವಾಗ ಯಾರು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ? ನಾವು ಈ ಪ್ರಪಂಚದ ಸ್ನೇಹಿತರನ್ನು ತೊರೆದಾಗಲೂ ನಮ್ಮೊಂದಿಗೆ ಇರುವವರು ಯಾರು? ಭಗವಂತ ಮಾತ್ರ!

ಭಗವಂತ ನಿಮ್ಮಲ್ಲಿ ಮೌನವಾಗಿ ಪಿಸುಗುಟ್ಟುತ್ತಾನೆ:…

“ಒಂದು ಮಾತನ್ನೂ ಆಡದೆ ನಾನು ನಿನ್ನನ್ನು ಸದಾ ಪ್ರೀತಿಸಿದೆ. ʼನಾನು ನಿನ್ನನ್ನು ಪ್ರೀತಿಸುತ್ತೇನೆʼ ಎಂದು ನಾನು ಮಾತ್ರ ನಿಜವಾಗಿಯೂ ಹೇಳಲು ಸಾಧ್ಯ; ಏಕೆಂದರೆ ನೀನು ಹುಟ್ಟುವ ಮೊದಲೇ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ; ಈ ಕ್ಷಣದಲ್ಲೂ ನನ್ನ ಪ್ರೀತಿಯು ನಿನಗೆ ಜೀವನ ಕೊಡುತ್ತದೆ ಮತ್ತು ನಿನ್ನನ್ನು ಪೋಷಿಸುತ್ತದೆ; ಮತ್ತು ಸಾವಿನ ದ್ವಾರಗಳು ನಿನ್ನನ್ನು ಬಂಧಿಸಿದ ನಂತರ, ಎಲ್ಲಿ ಯಾರೂ, ನಿನ್ನ ಮಹಾನ್ ಮಾನವ ಪ್ರೇಮಿಯು ಕೂಡಾ ನಿನ್ನನ್ನು ತಲುಪಲಾರರೋ ಅಲ್ಲಿ ನಾನು ಮಾತ್ರ ನಿನ್ನನ್ನು ಪ್ರೀತಿಸಬಲ್ಲೆ.”

ನೀವು ಹೊಂದಬಹುದಾದ ಶ್ರೇಷ್ಠ ಪ್ರಣಯವೆಂದರೆ ದೇವರೊಂದಿಗಿನ ಪ್ರಣಯ. ಮಾನವ ಪ್ರೀತಿಯು ಸ್ವಲ್ಪ ಸಮಯದ ನಂತರ ಹೊರಟುಹೋಗುತ್ತದೆ, ಆದರೆ ದೇವರೊಂದಿಗಿನ ನಿಮ್ಮ ಪ್ರಣಯವು ಶಾಶ್ವತವಾದುದು. ಅವನನ್ನು ನೋಡದೆ ಒಂದು ದಿನವೂ ಕಳೆಯಬಾರದು. ಆದ್ದರಿಂದಲೇ ನಾನು ಬರೆದಿದ್ದು, “ನನ್ನೆಲ್ಲ ಬೆಳ್ಳಿಯ ಸ್ವಪ್ನಗಳ ತೊರೆಗಳ ಬದಿಯಲ್ಲಿ ಹುಡುಕುತ್ತ, ಅಂತ್ಯವಿಲ್ಲದ ಜನ್ಮಜನ್ಮಾಂತರಗಳಿಂದ ನಾನು ನಿನ್ನ ಹೆಸರನ್ನು ಕರೆಯುತ್ತಿದ್ದೇನೆ.”* ನನ್ನನ್ನು ಹೊರಗೆ ಕಳುಹಿಸಲು ಅವನೇ ಕಾರಣ ಎಂದು ನಾನು ಯಾವಾಗಲೂ ಅವನಲ್ಲಿ ದೂರುತ್ತೇನೆ; ಆದರೆ ಜೀವನದ ಎಲ್ಲಾ ಭ್ರಮೆಗಳಿರುವುದು, ನಾನು ಅವನನ್ನು ಹೆಚ್ಚು ತಿಳಿದುಕೊಳ್ಳುವುದಕ್ಕಾಗಿ, ಅವನನ್ನು ಅರಸುವಂತೆ ನನ್ನನ್ನು ಪ್ರಚೋದಿಸುವುದಕ್ಕಾಗಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಜನ್ಮಜನ್ಮಾಂತರಗಳಲ್ಲಿ ಹುಡುಕಿದ್ದು, ಸದಾ ಅವನನ್ನೇ, ಎಲ್ಲಾ ತಂದೆಯಂದಿರ ಹಿಂದಿನ ತಂದೆಯನ್ನು, ಎಲ್ಲಾ ತಾಯಂದಿರ ಹಿಂದಿನ ತಾಯಿಯನ್ನು ಮತ್ತು ಎಲ್ಲಾ ಪ್ರೇಮಿಗಳ ಹಿಂದಿನ ಪ್ರೇಮಿಯನ್ನು. ಅವನು ಪ್ರೇಮಿ ಮತ್ತು ನಮ್ಮ ಆತ್ಮಗಳು ಪ್ರಿಯತಮೆ, ಮತ್ತು ಆತ್ಮವು ವಿಶ್ವದ ಶ್ರೇಷ್ಠ ಪ್ರೇಮಿಯನ್ನು ಭೇಟಿಯಾದಾಗ, ಶಾಶ್ವತ ಪ್ರಣಯವು ಮೊದಲಾಗುತ್ತದೆ. ಎಲ್ಲಾ ಮಾನುಷ ಪ್ರೀತಿಗಳ ಮೂಲಕ ನೀವು ಜನ್ಮಜನ್ಮಾಂತರಗಳಿಂದ ಹುಡುಕುತ್ತಿರುವ ಪ್ರೀತಿಯು ಕೊನೆಗೂ ನಿಮ್ಮದಾಗಿದೆ. ನೀವು ಇನ್ನೆಂದಿಗೂ ಬೇರೇನನ್ನೂ ಬಯಸುವುದಿಲ್ಲ.

* “ಡಿವೈನ್‌ ಲವ್‌ ಸಾರೋಸ್‌,” ಸಾಂಗ್ಸ್‌ ಆಫ್‌ ದ ಸೋಲ್‌ ನಲ್ಲಿ

ಇದನ್ನು ಹಂಚಿಕೊಳ್ಳಿ