
ಗುರುಗಳ ಬೇಷರತ್ ಪ್ರೀತಿಯ ಪ್ರಭಾವಳಿಯಲ್ಲಿ, ಆಧ್ಯಾತ್ಮಿಕವಾಗಿ ಕ್ರಿಯಾಶೀಲನಾಗಿರುವ ಶಿಷ್ಯನ ಹೃದಯವು ಮಿಂದೆದ್ದಾಗ, ಗುರುಗಳಲ್ಲಿ ನಿಷ್ಠೆಯು ಸಹಜವಾಗಿ ಮೂಡುತ್ತದೆ. ತಾನು ಅಂತಿಮವಾಗಿ ಒಬ್ಬ ನಿಜವಾದ ಸ್ನೇಹಿತ, ಸಲಹೆಗಾರ, ಮತ್ತು ಮಾರ್ಗದರ್ಶಕ ಸಿಕ್ಕಿದ್ದಾನೆಂದು ಆತ್ಮವು ಅರಿಯುತ್ತದೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಆತ್ಮೀಯರೇ,
ಗುರುಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು. ನಮ್ಮ ವೈಎಸ್‌ಎಸ್/ಎಸ್‌ಆರ್‌ಎಫ್ ನ ಮಹಾಗುರುಗಳ ಪರಂಪರೆಯಂತೆಯೇ, ಯುಗಯುಗಾಂತರಗಳಿಂದ ಮನುಕುಲವನ್ನು ಆಧ್ಯಾತ್ಮಿಕ ಜ್ಯೋತಿಯಿಂದ ಬೆಳಗುತ್ತಿರುವ, ಜ್ಞಾನೋದಯ ಪಡೆದ ಎಲ್ಲ ಮಹಾತ್ಮರನ್ನು ಗೌರವಿಸುವ ಈ ಪವಿತ್ರ ಸಂಪ್ರದಾಯದ ಆಚರಣೆಯ ಸಮಯದಲ್ಲಿ ನಾವೆಲ್ಲರೂ ನಮ್ಮ ಭಕ್ತಿಯ ಭಾವೈಕ್ಯತೆಯಲ್ಲಿ ಒಂದಾಗೋಣ. ನಮ್ಮ ವೈಯಕ್ತಿಕ ಮೋಕ್ಷಕ್ಕಾಗಿ ಭಗವಂತನೇ ಪ್ರಕಟಗೊಂಡಿರುವ ನಮ್ಮ ದೈವನಿಯಮಿತ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರನ್ನು ಪಡೆದಿರುವ ನಾವೆಷ್ಟು ಧನ್ಯರು! ನಾನು ಅರಿತಿರುವಂತೆ, ಅಂತಹ ಮಹಾತ್ಮರ ಪಾದಕಮಲಗಳತ್ತ ಸೆಳೆಯಲ್ಪಡುವುದು ಜನ್ಮ ಜನ್ಮಾಂತರಗಳ ಪರಮೋಚ್ಚ ಆಶೀರ್ವಾದವಾಗಿದೆ ಎಂಬುದು ನಿಮಗೂ ಮನವರಿಕೆಯಾಗಿದೆ ಎಂದು ನಾನು ಖಚಿತವಾಗಿ ನಂಬುತ್ತೇನೆ—ಇದು ಆಧ್ಯಾತ್ಮಿಕ ಪಥದಲ್ಲಿನ ಎಲ್ಲಾ ನಿಧಿಗಳಿಗಿಂತಲೂ ಮಿಗಿಲಾದ ನಿಧಿಯಾಗಿದೆ.
ಅವರ ಅಪರಿಮಿತ ಔದಾರ್ಯ ಮತ್ತು ಅಗಾಧ ಪ್ರೇಮದಿಂದ, ಗುರುದೇವರು ನಮಗೆ ತಮ್ಮ ಅಪಾರ ಆಧ್ಯಾತ್ಮಿಕ ಸಂಪತ್ತನ್ನು ಅನುಗ್ರಹಿಸಿದ್ದಾರೆ: ಕ್ರಿಯಾ ಯೋಗದ ದಿವ್ಯ ವಿಜ್ಞಾನ; ಪರಮ ಆನಂದ ಮತ್ತು ಪರಮಾತ್ಮನೊಂದಿಗಿನ ಸಾಮರಸ್ಯವನ್ನು ತಂದುಕೊಡುವ ಜೀವನ ಸೂತ್ರಗಳು. ಅದಲ್ಲದೇ, ನಮಗರಿವಿಲ್ಲದಂತೆಯೇ ಸ್ಫೂರ್ತಿ ತುಂಬುವ ಅವರ ಯಶಸ್ವಿ ಜೀವನವೇ ಒಂದು ಉದಾಹರಣೆಯಾಗಿದೆ ಮತ್ತು ಅವರನ್ನು ಸದ್ಗುರುವೆಂದು ಪೂಜಿಸುವ ಪ್ರತಿಯೊಬ್ಬ ನೈಜ ಶಿಷ್ಯನಿಗೂ, ಅವರು ಮಿತಿಯಿಲ್ಲದ ಆತ್ಮಾನಂದ ಹಾಗೂ ಮುಕ್ತಿಯನ್ನು ಕರುಣಿಸುತ್ತಾರೆ.
ಗುರೂಜಿಯವರಲ್ಲಿ, ನಾವು ಒಬ್ಬ ಸರ್ವದಾ ನಮ್ಮ ಜೊತೆಗಿರುವ ಸ್ನೇಹಿತ, ಸಲಹೆಗಾರ, ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರನ್ನು ಕಾಣುತ್ತೇವೆ. ಅವರು ತಮ್ಮ ಅಮರ ಬೋಧನೆಗಳ ಮೂಲಕ ಮತ್ತು ನಮ್ಮ ಧ್ಯಾನದಿಂದ-ಮೂಡಿದ ಗ್ರಹಣಶಕ್ತಿಯ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ. ಅವರು ನೀಡಿರುವ ಸಾಧನೆಯನ್ನು ನಾವು ಪ್ರಾಮಾಣಿಕವಾಗಿ ಅಭ್ಯಾಸ ಮಾಡುವುದರಿಂದ, ಅವರು ಭೌತಿಕ ರೂಪದಲ್ಲಿದ್ದಾಗ ಕಾಣಿತ್ತಿದ್ದಷ್ಟೇ ನೈಜವಾಗಿ, ಈ ಕ್ಷಣದಲ್ಲಿಯೂ ಇರಬಲ್ಲರು.
ಈ ವಿಶೇಷ ದಿನದಂದು ಮತ್ತು ಸದಾಕಾಲವೂ, ನಾವು ಗುರುದೇವರಿಗೆ ಅರ್ಪಿಸಬಹುದಾದ ಅತ್ಯುನ್ನತ ಕಾಣಿಕೆಯೆಂದರೆ, ನಿಷ್ಠೆಯ ದಾರದಲ್ಲಿ ಪೋಣಿಸಲ್ಪಟ್ಟ ಮತ್ತು ಅವರ ಆಧ್ಯಾತ್ಮಿಕ ಆದರ್ಶಗಳಿಗೆ ನಮ್ಮ ಭಕ್ತಿ ಹಾಗೂ ಅಚಲವಾದ ಬದ್ಧತೆಯ ಪುಷ್ಪಗಳಿಂದ ಅಲಂಕೃತವಾದ ನಮ್ಮ ಸತ್ಯನಿಷ್ಠ ಶಿಷ್ಯತ್ವದ ಮಾಲೆ. ನನ್ನ ಪ್ರಾರ್ಥನೆಗಳು ಸದಾ ನಿಮ್ಮೊಂದಿಗಿರುತ್ತವೆ, ನೀವು ಅವರ ರಕ್ಷಣಾತ್ಮಕ ಉಪಸ್ಥಿತಿಯನ್ನು ಮತ್ತು ದೈವಿಕ ಪ್ರೇಮ ಸದಾ ನಿಮ್ಮನ್ನು ಆವರಿಸಿಕೊಳ್ಳುವುದನ್ನು ಅನುಭವಿಸಿ, ನಿಮ್ಮ ಪ್ರಜ್ಞೆಯನ್ನು ನಿತ್ಯ ಪ್ರಕಾಶ ಮತ್ತು ಆನಂದದ ಲೋಕಗಳಿಗೆ ಏರಿಸುತ್ತೀರಿ ಎಂದು. ಜೈ ಗುರು!
ಭಗವಂತ ಮತ್ತು ಗುರುದೇವರ ನಿರಂತರ ಆಶೀರ್ವಾದಗಳೊಂದಿಗೆ,
ಸ್ವಾಮಿ ಚಿದಾನಂದ ಗಿರಿ