ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಪ್ರಸ್ತುತ ಅಧ್ಯಕ್ಷರ ಘೋಷಣೆ

2 ಸೆಪ್ಟೆಂಬರ್‌, 2017

Swami Chidananda current Spiritual head of YSS/SRF.

ಸ್ವಾಮಿ ಚಿದಾನಂದ ಗಿರಿಯವರನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರನ್ನಾಗಿ ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರನ್ನಾಗಿ ಚುನಾಯಿಸಲಾಯಿತು

ಜನವರಿ 2011ರಿಂದ ಕಳೆದ ತಿಂಗಳು ಅವರು ಸ್ವರ್ಗಸ್ಥರಾಗುವವರೆಗೂ ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದ ಶ್ರೀ ಶ್ರೀ ಮೃಣಾಲಿನಿ ಮಾತಾರವರ ಸ್ಥಾನದಲ್ಲಿ ಸ್ವಾಮಿ ಚಿದಾನಂದ ಗಿರಿಯವರನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ (ವೈಎಸ್‌ಎಸ್‌/ಎಸ್‌ಆರ್‌ಎಫ್‌) ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು ಎಂಬ ಸಮಾಚಾರವನ್ನು ನಿಮ್ಮೊಡನೆ ಹಂಚಿಕೊಳ್ಳಲು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ನಿರ್ದೇಶಕರ ಮಂಡಳಿಗೆ ಬಹಳ ಸಂತೋಷವಾಗುತ್ತಿದೆ. ಬುಧವಾರ, ಆಗಸ್ಟ್‌ 30, 2017ರಂದು ಅವರ ನೇಮಕಾತಿಯನ್ನು ಎಸ್‌ಆರ್‌ಎಫ್‌ನ ನಿರ್ದೇಶಕರ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿತು.

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿದ್ದ ದಿವಂಗತ ಶ್ರೀ ಶ್ರೀ ದಯಾ ಮಾತಾರವರು 2010ರಲ್ಲಿ ಅವರು ಸ್ವರ್ಗಸ್ಥರಾಗುವ ಮುನ್ನ ಸ್ವಾಮಿ ಚಿದಾನಂದ ಗಿರಿಯವರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿ ಶ್ರೀ ಮೃಣಾಲಿನಿ ಮಾತಾರವರ ನಂತರ ಅವರ ಸ್ಥಾನವನ್ನು ತೆಗೆದುಕೊಳ್ಳಬೇಕು ಎಂಬ ಅವರ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ಮೃಣಾಲಿನಿ ಮಾತಾಜಿ ಇದನ್ನು, ಅವರು ಆಗಸ್ಟ್‌ 3, 2017ರಲ್ಲಿ ಸ್ವರ್ಗಸ್ಥರಾಗುವ ಕೆಲವು ತಿಂಗಳುಗಳ ಮೊದಲು ಸ್ಥಿರಪಡಿಸಿದ್ದರು ಮತ್ತು ಶ್ರೀ ದಯಾ ಮಾತಾರವರ ಸಲಹೆಗೆ ತಮ್ಮ ಒಪ್ಪಿಗೆಯಿದೆ ಎಂಬುದನ್ನು ನಿರ್ದೇಶಕರ ಮಂಡಳಿಗೆ ದೃಢಪಡಿಸಿದ್ದರು.

ಸ್ವಾಮಿ ಚಿದಾನಂದ ಗಿರಿಯವರು 40 ವರ್ಷಗಳಿಂದಲೂ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಒಬ್ಬ ಸನ್ಯಾಸಿಯಾಗಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. ಬಹುತೇಕ ತಮ್ಮ ಸನ್ಯಾಸಿ ಜೀವನದ ಆರಂಭದಿಂದಲೂ ಅವರು ಶ್ರೀ ಮೃಣಾಲಿನಿ ಮಾತಾರ ಜ್ಞಾನಭರಿತ ಹಾಗೂ ಗುರುವಿನೊಂದಿಗೆ ಶ್ರುತಿಗೂಡಿದ ತರಬೇತಿಯನ್ನು ಪಡೆದುಕೊಳ್ಳುತ್ತ, ಪರಮಹಂಸ ಯೋಗಾನಂದರ ಹಾಗೂ ಇತರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪ್ರಕಟಣೆಗಳ ಕಾರ್ಯದಲ್ಲಿ ಪರಿಷ್ಕರಣೆ ಮತ್ತು ಪ್ರಕಟಣೆಯಲ್ಲಿ ಅವರಿಗೆ ಸಹಾಯ ಮಾಡುತ್ತಾ ಅವರ ಜೊತೆ ಬಹಳ ನಿಕಟವಾಗಿ ಕೆಲಸ ಮಾಡಿದ್ದಾರೆ.

ಭಗವಂತ ಮತ್ತು ಎಸ್‌ಆರ್‌ಎಫ್‌ ಕಾರ್ಯಗಳನ್ನು ಮಾಡಲು ಒಂದು ಜಾಗೃತಿ

ಅನ್ನಾಪೊಲಿಸ್‌, ಮೇರಿಲ್ಯಾಂಡ್‌ನಲ್ಲಿ 1953ರಲ್ಲಿ ಜನಿಸಿದ ಸ್ವಾಮಿ ಚಿದಾನಂದರವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್‌ ಡಿಯಾಗೋದಲ್ಲಿ ಸಮಾಜಶಾಸ್ತ್ರ ಹಾಗೂ ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ 1970ರ ಆರಂಭದಲ್ಲಿ ಪರಮಹಂಸ ಯೋಗಾನಂದ ಹಾಗೂ ಅವರ ಎನ್ಸಿನಿಟಾಸ್‌ನ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಬಗ್ಗೆ ಮೊದಲು ಮುಖಾಮುಖಿಯಾದರು. ಭಾರತದ ಆಧ್ಯಾತ್ಮಿಕತೆಯ ಕಡೆಗೆ ದೀರ್ಘ-ಕಾಲದ ಆಸಕ್ತಿಯಿಂದ ಸೆಳೆಯಲ್ಪಟ್ಟ ಅವರು ವಿಶ್ವವಿದ್ಯಾಲಯದ ಆವರಣದಿಂದ ಸ್ವಲ್ಪ ಉತ್ತರಕ್ಕಿದ್ದ ಎನ್ಸಿನಿಟಾಸ್‌ನ ಎಸ್‌ಆರ್‌ಎಫ್‌ ಆಶ್ರಮದ ಕೇಂದ್ರಕ್ಕೆ ಭೇಟಿ ನೀಡಿದರು. ಈ ಆಶ್ರಮವು ಅಕ್ಕಪಕ್ಕದ ತೀರಗಳ ಸಮುದಾಯಗಳಲ್ಲಿ ವಾಸಿಸುತ್ತಿದ್ದ ಅನೇಕ ವಿದ್ಯಾರ್ಥಿಗಳಿಗೆ ಒಂದು ಚಿರಪರಿಚಿತ ಸ್ಥಳವಾಗಿತ್ತು.

ಕೆಲವು ತಿಂಗಳುಗಳ ನಂತರ ಅವರಿಗೆ ಆಟೋಬಯಾಗ್ರಫಿ ಆಫ್‌ ಎ ಯೋಗಿ (ಯೋಗಿಯ ಆತ್ಮಕಥೆ) ಪುಸ್ತಕ ಸಿಕ್ಕಿತು. ಅದರ ಪುಟಗಳಲ್ಲಿ ವಿವರಿಸಿದ್ದ ಮಹತ್ತರ ಜ್ಞಾನ ಹಾಗೂ ದಿವ್ಯ ಪ್ರಜ್ಞೆಯಿಂದ ಅವರು ತತ್‌ಕ್ಷಣ ಆಕರ್ಷಿಸಲ್ಪಟ್ಟರು. ವಿಶ್ವವಿದ್ಯಾಲಯದಲ್ಲಿನ ತಮ್ಮ ಕೊನೆಯ ವರ್ಷದಲ್ಲಿ ಅವರು ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಪಾಠಗಳಿಗೆ ಸದಸ್ಯರಾಗಿ ಎನ್ಸಿನಿಟಾಸ್‌ನಲ್ಲಿಯ ಎಸ್‌ಆರ್‌ಎಫ್‌ ಸತ್ಸಂಗಗಳಿಗೆ ಹೋಗಲಾರಂಭಿಸಿದರು. ಆಗ ನಿರ್ವಾಹಕರಾಗಿದ್ದ ಸ್ವಾಮಿ ಆನಂದಮಯಿಯವರ ಉಪನ್ಯಾಸಗಳಿಂದ ಇವರು ಪ್ರಭಾವಿತರಾದರು ಮತ್ತು ಆನಂದಮಯಿಯವರ ವೈಯಕ್ತಿಕ ಸಲಹೆಗಳಿಂದ ಕೂಡ ಪ್ರಯೋಜನ ಪಡೆದರು. ಪರಮಹಂಸಜಿಯವರ ಸ್ಪಂದನಗಳಿಂದ ವ್ಯಾಪ್ತವಾದ ಈ ಪವಿತ್ರ ವಾತಾವರಣದಲ್ಲಿ ಅವರು ಅಲ್ಲಿ ವಾಸಿಸುತ್ತಿದ್ದ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿಂದ ಗಂಭೀರವಾಗಿ ಪ್ರಭಾವಿತರಾದರು ಮತ್ತು ಒಬ್ಬ ಸನ್ಯಾಸಿ ಶಿಷ್ಯನಾಗಿ ಭಗವಂತನನ್ನು ಅರಸುವ ಮತ್ತು ಪರಮಹಂಸ ಯೋಗಾನಂದರ ಕಾರ್ಯಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಮಾಡುವ ಬಯಕೆಯು ತತ್‌ಕ್ಷಣ ಜಾಗೃತವಾಯಿತು.

ಸ್ವಾಮಿ ಚಿದಾನಂದರು ನವೆಂಬರ್‌ 19, 1977ರಂದು ಎನ್ಸಿನಿಟಾಸ್‌ನ ಸನ್ಯಾಸಿಗಳ ಪ್ರವೇಶಾರ್ಥಿ ಆಶ್ರಮವನ್ನು ಪ್ರವೇಶಿಸಿದರು ಮತ್ತು ಒಂದೂವರೆ ವರ್ಷಗಳ ಕಾಲ ಆಗ ಯುವ ಸನ್ಯಾಸಿಗಳಿಗೆ ತರಬೇತಿ ನೀಡುವ ನಿರ್ವಾಹಕರಾಗಿದ್ದ ಸಂತನಂತಹ ಸ್ಥಳೀಯ ಸಹೋದರ ಸ್ವಾಮಿ ಪ್ರೇಮಮಯಿ ಅವರ ಶಿಸ್ತಿನ ಮತ್ತು ಪ್ರೇಮಪೂರ್ಣ ಮಾರ್ಗದರ್ಶನದಲ್ಲಿ ಕಳೆದರು. ಈ ಯುವ ಸನ್ಯಾಸಿಯನ್ನು ಎಸ್‌ಆರ್‌ಎಫ್‌ ಸಂಪಾದಕ ವಿಭಾಗಕ್ಕೆ ಸೇರಿಸಿಕೊಳ್ಳಬೇಕೆಂದು ಶ್ರೀ ಮೃಣಾಲಿನಿ ಮಾತಾರವರಿಗೆ ಮೊದಲು ಸಲಹೆ ಮಾಡಿದ್ದು ಸ್ವಾಮಿ ಪ್ರೇಮಮಯಿ ಅವರೇ. ಏಪ್ರಿಲ್‌ 1979ರಲ್ಲಿ ಸ್ವಾಮಿ ಚಿದಾನಂದರು ತಮ್ಮ ಪ್ರವೇಶಾರ್ಥಿ ತರಬೇತಿಯನ್ನು ಪೂರೈಸಿದ ನಂತರ, ಅವರನ್ನು ಮೌಂಟ್‌ ವಾಷಿಂಗ್ಟನ್‌ನ ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯಕ್ಕೆ ವರ್ಗಾವಣೆ ಮಾಡಲಾಯಿತು ಮತ್ತು ತತ್‌ಕ್ಷಣ ಶ್ರೀ ಮೃಣಾಲಿನಿ ಮಾತಾ ಮತ್ತು ಅವರ ಮುಖ್ಯ ಸಹ-ಸಂಪಾದಕರಾದ ಶ್ರೀ ಸಹಜ ಮಾತಾ – ಗುರುಗಳು ತಮ್ಮ ಬರಹಗಳು ಮತ್ತು ಉಪನ್ಯಾಸಗಳ ಮುಂದಿನ ಪ್ರಕಟಣೆಗಾಗಿ ಪರಿಷ್ಕರಿಸಲು ಅವರಿಬ್ಬರಿಗೂ ತಾವೇ ಸ್ವತಃ ತರಬೇತಿ ನೀಡಿದ್ದರು – ಅವರ ಕೈಕೆಳಗೆ ಸಂಪಾದಕೀಯ ಕೆಲಸ ಮಾಡಲು ಪ್ರಕಟಣಾ ವಿಭಾಗಕ್ಕೆ ಕಳಿಸಲಾಯಿತು.

1966ರಲ್ಲಿ ಸಹಜ ಮಾತಾರವರು ಸ್ವರ್ಗಸ್ಥರಾದ ನಂತರದ ಸ್ವಲ್ಪ ದಿನಗಳಲ್ಲೇ, ಎಸ್‌ಆರ್‌ಎಫ್‌/ವೈಎಸ್‌ಎಸ್‌ ಅಂತರರಾಷ್ಟ್ರೀಯ ಪ್ರಕಟಣಾ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ದಯಾ ಮಾತಾರವರು ಸ್ವಾಮಿ ಚಿದಾನಂದರನ್ನು ಪ್ರಕಟಣಾ ಮಂಡಳಿಗೆ ನೇಮಿಸಿದರು ಮತ್ತು ಅವರು ದಯಾ ಮಾತಾ ಹಾಗೂ ಮೃಣಾಲಿನಿ ಮಾತಾರವರೊಡನೆ, 2010ರಲ್ಲಿ ದಯಾ ಮಾತಾರವರು ಸ್ವರ್ಗಸ್ಥರಾಗುವವರೆಗೆ ಅಲ್ಲಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ಈ ಇಬ್ಬರೂ ಹಿರಿಯ ನೇರ ಶಿಷ್ಯರಿಗೆ ಪರಮಹಂಸಜಿಯವರ 1980ರಿಂದ ಈವರೆಗೂ ಲೋಕಾರ್ಪಣೆ ಮಾಡಲಾದ ಬೃಹದ್ಗಾತ್ರದ ಪವಿತ್ರ ಗ್ರಂಥಗಳ ಭಾಷ್ಯವೂ (ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತ ಅಂಡ್‌ ದಿ ಸೆಕಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್‌: ದಿ ರಿಸರೆಕ್ಷನ್‌ ಆಪ್‌ ದಿ ಕ್ರೈಸ್ಟ್‌ ವಿದಿನ್‌ ಯು) ಸೇರಿದಂತೆ ಇನ್ನಿತರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪ್ರಕಟಣೆಗಳ ಸಿದ್ಧತೆ ಹಾಗೂ ಪ್ರಕಟಣೆಗಳಿಗೆ ಸಹಾಯ ಮಾಡಿದರು. ದಯಾ ಮಾತಾ, ಮೃಣಾಲಿನಿ ಮಾತಾ ಹಾಗೂ ಸಹಜ ಮಾತಾರವರ ಹಂತಹಂತವಾದ ಆಳವಾದ ತರಬೇತಿಯಿಂದಾಗಿ, ಇವರನ್ನು ಮೃಣಾಲಿನಿ ಮಾತಾರವರು ತಮ್ಮ ನಂತರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪ್ರಕಟಣೆಗಳ ಮುಖ್ಯ ಸಂಪಾದಕರೆಂದು ಘೋಷಿಸಿದರು.

ಸ್ವಾಮಿ ಚಿದಾನಂದರಿಗೆ ಅಂತಿಮ ಸನ್ಯಾಸಿ ಶಪಥವನ್ನು 1997ರಲ್ಲಿ ಶ್ರೀ ದಯಾ ಮಾತಾ ಬೋಧಿಸಿದರು. ಅವರ ಸನ್ಯಾಸಿ ಹೆಸರಾದ ಚಿದಾನಂದ ಎಂದರೆ, “ಅಸೀಮ ದಿವ್ಯ ಪ್ರಜ್ಞೆಯ (ಚಿತ್‌) ಮೂಲಕ ಆನಂದ.” ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಒಬ್ಬ ವಿಧಿಬದ್ಧ ಸನ್ಯಾಸಿಯಾಗಿ, ಅವರು ಸಂಯುಕ್ತ ರಾಜ್ಯಗಳಲ್ಲಿ (ಯುನೈಟೆಡ್‌ ಸ್ಟೇಟ್ಸ್‌), ಕೆನಡಾ, ಯುರೋಪ್‌ ಮತ್ತು ಭಾರತದಾದ್ಯಂತ ಮಾಡಿದ ಉಪನ್ಯಾಸಗಳ ಪ್ರವಾಸಗಳು ಮತ್ತು ಧ್ಯಾನಶಿಬಿರಗಳ ಕಾರ್ಯಕ್ರಮಗಳಲ್ಲಿ ಹಾಗೂ ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ ವಾರ್ಷಿಕ ಎಸ್‌ಆರ್‌ಎಫ್‌ ವಿಶ್ವ ಘಟಿಕೋತ್ಸವಗಳಲ್ಲಿ ಪರಮಹಂಸ ಯೋಗಾನಂದರ ಬೋಧನೆಗಳನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಶ್ರೀ ದಯಾ ಮಾತಾ ಇವರನ್ನು ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ನಿರ್ದೇಶಕರ ಮಂಡಳಿಯ ಸದಸ್ಯರನ್ನಾಗಿ ನೇಮಕಾತಿ ಮಾಡಿದರು ಮತ್ತು ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಡೆಯುವ ಎಸ್‌ಆರ್‌ಎಫ್‌ನ ಅಸಂಖ್ಯಾತ ಚಟುವಟಿಕೆಗಳ ಮತ್ತು ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುವ ನಿರ್ವಾಹಕ ಮಂಡಳಿಯ ಸದಸ್ಯರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

“ನಮ್ಮೆಲ್ಲರ ಆತ್ಮಗಳ ಏಕೈಕ ಪ್ರೀತಿಪಾತ್ರನಾದವನು ಎಂದು ಒಟ್ಟುಗೂಡಿ ಭಗವಂತನನ್ನು ಅನ್ವೇಷಿಸುವುದು…”

ಚುನಾವಣೆಯ ಘೋಷಣೆಯಾದ ನಂತರ ಎಸ್‌ಆರ್‌ಎಫ್‌/ವೈಎಸ್‌ಎಸ್‌ ಸನ್ಯಾಸಿಗಳೊಂದಿಗೆ ಮಾತನಾಡುತ್ತಾ, ಸ್ವಾಮಿ ಚಿದಾನಂದಜಿ ಹೇಳಿದರು:

“ಗುರುದೇವ ಪರಮಹಂಸ ಯೋಗಾನಂದರು ಎಂದೆಂದೂ ಈ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ ಎಂಬ ನಮ್ರ ಭಾವ ಹಾಗೂ ಅರಿವಿನಲ್ಲಿ ಮತ್ತು ನಮ್ಮ ಪ್ರೀತಿಪಾತ್ರರಾದ ಶ್ರೀ ದಯಾ ಮಾತಾ ಹಾಗೂ ಶ್ರೀ ಮೃಣಾಲಿನಿ ಮಾತಾರವರ ಕೋರಿಕೆಯಂತೆ ಅವರ ಹಾದಿಯಲ್ಲಿ ನಡೆಯಲು, ನಾನು ನಿಮ್ಮೆಲ್ಲರ ಹಾರೈಕೆಗಳು ಮತ್ತು ಸಹಾಯ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ. ಗುರುದೇವರ ಪ್ರೇಮದ ಶುದ್ಧ ಮಾಧ್ಯಮವಾಗಬೇಕೆಂಬ ಅವರ ಬದ್ಧತೆಯು – ಪ್ರತಿಯೊಂದು ಆಲೋಚನೆ, ನಿರ್ಧಾರ ಮತ್ತು ಕ್ರಿಯೆಯನ್ನು ಗುರುದೇವರ ಇಚ್ಛೆ ಮತ್ತು ಮಾರ್ಗದರ್ಶನದೊಂದಿಗೆ ಶ್ರುತಿಗೂಡಬೇಕೆಂದು ಸದಾ ಬಯಸುತ್ತಿದ್ದ ಅವರ ದಿವ್ಯ ಉದಾಹರಣೆಯು– ಆಶ್ರಮದಲ್ಲಿನ ನನ್ನ ಇಡೀ ಜೀವನದ ಸ್ಫೂರ್ತಿಯಾಗಿದೆ; ಮತ್ತು ಆ ಪವಿತ್ರ ಜವಾಬ್ದಾರಿಯ ಮನೋಭಾವದಿಂದ ನಾನು ಮುಂಬರುವ ವರ್ಷಗಳಲ್ಲಿ ನಿಮ್ಮೆಲ್ಲರ ಸಹಾಯ, ಹಾರೈಕೆಗಳು, ಅಭಿಮಾನ ಹಾಗೂ ದಿವ್ಯ ಮಿತ್ರತ್ವದ ಮೇಲಿನ ಭರವಸೆಯಿಂದ ಭಗವಂತ ಮತ್ತು ಗುರುಗಳ ಮಹಾನ್‌ ಕಾರ್ಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ.

“ನಿಮ್ಮಲ್ಲಿ ಪ್ರತಿಯೊಬ್ಬರೂ ಗುರುಗಳೇ ಸ್ವತಃ ಆಯ್ಕೆ ಮಾಡಿದ ಶಿಷ್ಯರಾಗಿದ್ದೀರಿ, ಮತ್ತು ಗುರುದೇವರ ಶಿಷ್ಯರ ಒಂದುಗೂಡಿದ ಆಧ್ಯಾತ್ಮಿಕ ಕುಟುಂಬವಾಗಿ ಮಾತ್ರ ನಾವು ಒಟ್ಟಾಗಿ, ದಿವ್ಯ ಪ್ರೀತಿ, ಆನಂದ ಮತ್ತು ಸ್ವ-ಶರಣಾಗತಿಯ ಮನೋಭಾವದಲ್ಲಿ ವೈಎಸ್ಎಸ್/ಎಸ್‌ಆರ್‌ಎಫ್‌ನ ಈ ಮಹಾನ್ ಕಾರ್ಯವನ್ನು ಮುಂದುವರಿಸಲು ಸಾಧ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾ ನಿಮ್ಮ ಪಾದದ ಧೂಳನ್ನು ನಾನು ಸ್ವೀಕರಿಸುತ್ತೇನೆ — ನಮ್ಮ ಗುರುಗಳು ನಮಗೆಲ್ಲರಿಗೂ ಆದೇಶಿಸಿದ ಮತ್ತು ಸದಾ ಅವರ ಸಂಸ್ಥೆಯ ಜೀವಾಳ ಮತ್ತು ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ಅವರು ಭವಿಷ್ಯ ನುಡಿದ ಆ ಮನೋಭಾವದಿಂದ ಭಗವಂತನನ್ನು ನಮ್ಮ ಆತ್ಮಗಳ ಏಕೈಕ ಪ್ರಿಯದೇವನನ್ನಾಗಿ ಅರಸುತ್ತ. ಜೈ ಗುರು! ಜೈ ಮಾ!”

ಜಗದಾದ್ಯಂತದ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಆಧ್ಯಾತ್ಮಿಕ ಪರಿವಾರಕ್ಕೆ ಸ್ವಾಮಿ ಚಿದಾನಂದಜಿ ಈ ಕೆಳಗಿನ ಸಂದೇಶವನ್ನು ತಿಳಿಸಬಯಸುತ್ತಾರೆ:

“ಪ್ರೀತಿ ಪಾತ್ರರೇ, ಭಗವಂತ ಮತ್ತು ಗುರುಗಳ ಪ್ರೀತಿಯಲ್ಲಿ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸ ಬಯಸುತ್ತೇನೆ ಮತ್ತು ಪರಮಹಂಸ ಯೋಗಾನಂದರು ನೀಡಿದ ಕ್ರಿಯಾ ಯೋಗ ಧ್ಯಾನದ ಪವಿತ್ರ ಮಾರ್ಗದಲ್ಲಿ ನಡೆಯುತ್ತ ಮತ್ತು ಭಗವಂತನೊಂದಿಗೆ ಶ್ರುತಿಗೂಡಿಕೊಂಡು ಬದುಕುತ್ತಿರುವಾಗ ಅವರ ಅನುಗ್ರಹಗಳು ಸದಾ ನಮ್ಮೆಲ್ಲರಿಗೂ ಇರಲಿ ಎಂದು ಆಶಿಸುತ್ತೇನೆ. ಅವರ ಹೆಸರಿನಲ್ಲಿ ನಿಮ್ಮೆಲ್ಲರಿಗೂ ಸೇವೆ ನೀಡುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಹಾಗೂ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಎಲ್ಲ ಸನ್ಯಾಸಿಗಳೂ ಮತ್ತು ಸನ್ಯಾಸಿನಿಯರೂ ನಮ್ರತೆಯಿಂದ ಕೃತಜ್ಞರಾಗಿದ್ದೇವೆ. ಜಗದಾದ್ಯಂತದ ಭಗವದ್‌-ಅನ್ವೇಷಣೆಯ ಆತ್ಮಗಳ ಪರಿವಾರವಾಗಿ — ಒಬ್ಬ ಸಾಮಾನ್ಯ ಶಿಷ್ಯನಾಗಿ ಇಲ್ಲ ಸನ್ಯಾಸಿ ಮಾರ್ಗದವರಾಗಿ – ನಾವೆಲ್ಲರೂ ಒಟ್ಟಾಗಿ ಈ ಬೋಧನೆಗಳ ದಿವ್ಯ ಅನುಗ್ರಹಗಳಿಗೆ ಕೃತಜ್ಞರಾಗಿರುತ್ತ, ಭಗವಂತ ಮತ್ತು ಮಹಾನ್‌ ಪುರುಷರ ಜೊತೆಗಿನ ಆಂತರಿಕ ಸಂಸರ್ಗಕ್ಕಾಗಿ ನಮ್ಮ ಸ್ವ-ಸಾಧನೆಯನ್ನು ಗಾಢವಾಗಿಸುತ್ತೇವೆಂದು ಶಪಥ ಮಾಡೋಣ. ನೀವು ಪ್ರತಿಯೊಬ್ಬರೂ ಅವರ ನಿರಂತರ ಅನುಗ್ರಹಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ. ಜೈ ಗುರು!”

ಇದನ್ನು ಹಂಚಿಕೊಳ್ಳಿ