
ಪರಿಚಯ:
ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಕೃತಿಯ ಮೂಲಕ ಜಗತ್ತಿಗೆ ಮಹಾವತಾರ್ ಬಾಬಾಜಿಯವರ ಬಗ್ಗೆ ತಿಳಿಯಿತು, ನಿಜಕ್ಕೂ ಅವರು ಒಂದು ವಿಸ್ಮಯಕಾರಿ ಆಧ್ಯಾತ್ಮಿಕ ವ್ಯಕ್ತಿ.
ಬಾಬಾಜಿ ಒಬ್ಬ ಮಹಾನ್ ಚೇತನ, ಅವರು ಈ ಆಧುನಿಕ ಯುಗದಲ್ಲಿ ಪುರಾತನ ಕ್ರಿಯಾ ಯೋಗ ವಿಜ್ಞಾನವನ್ನು ಪುನರುಜ್ಜೀವನಗೊಳಿಸಿದರು ಮತ್ತು ಇವರು ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಕಾರ್ಯದ ಹಿಂದಿರುವ ಜ್ಞಾನೋದಯ ಪಡೆದ ಗುರುಗಳ ಪರಂಪರೆಯಲ್ಲಿ ಪರಮ ಗುರು ಆಗಿದ್ದಾರೆ. ಯೋಗಿಯ ಆತ್ಮಕಥೆ ಕೃತಿಯಲ್ಲಿ ವಿವರಿಸಿದಂತೆ, ಅವರು ಅಸಂಖ್ಯ ಶತಮಾನಗಳಿಂದ ಹಿಮಾಲಯದಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದಾರೆ.
ಜುಲೈ 25, 1920 ರಂದು, ಪರಮಹಂಸ ಯೋಗಾನಂದರು ಭಾರತವನ್ನು ಬಿಡುವ ಮೊದಲು ಕೋಲ್ಕತ್ತಾದಲ್ಲಿ ಬಾಬಾಜಿಯವರು ಅವರನ್ನು ಭೇಟಿಯಾಗಿ, ಜಗತ್ತಿಗೆ ಕ್ರಿಯಾ ಯೋಗವನ್ನು ಪರಿಚಯಿಸಲು ಆಶೀರ್ವದಿಸಿದ ಆ ದಿನವನ್ನು ವೈಎಸ್ಎಸ್/ಎಸ್‌ಆರ್‌ಎಫ್ ಪ್ರತಿ ವರ್ಷ ಸ್ಮರಿಸುತ್ತದೆ.
“ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಯಾ ಯೋಗದ ಸಂದೇಶವನ್ನು ಪ್ರಚಾರ ಮಾಡಲು ನಾನು ನಿನ್ನನ್ನೇ ಆರಿಸಿದ್ದೇನೆ” ಎಂದು ಬಾಬಾಜಿ ಆ ಭೇಟಿಯ ಸಮಯದಲ್ಲಿ ಹೇಳಿದರು. “ದೇವರನ್ನು ಅರಿತುಕೊಳ್ಳುವ ವೈಜ್ಞಾನಿಕ ತಂತ್ರವಾದ ಕ್ರಿಯಾ ಯೋಗವು ಅಂತಿಮವಾಗಿ ಎಲ್ಲಾ ದೇಶಗಳಲ್ಲಿ ಹರಡುತ್ತದೆ ಮತ್ತು ಮನುಷ್ಯನ ವೈಯಕ್ತಿಕ, ಅತೀಂದ್ರಿಯ ಅನುಭವದ ಮೂಲಕ ಪರಮಪಿತನನ್ನು ಅರಿತುಕೊಳ್ಳುವಲ್ಲಿ ರಾಷ್ಟ್ರಗಳ ನಡುವೆ ಸಾಮರಸ್ಯ ತರಲು ಸಹಾಯ ಮಾಡುತ್ತದೆ.”
ಮಹಾವತಾರ್ ಬಾಬಾಜಿಯವರ ಜಗತ್ತನ್ನು ಪರಿವರ್ತಿಸುವ ಪ್ರಭಾವದ ಬಗ್ಗೆ ಪರಮಹಂಸ ಯೋಗಾನಂದರ ಮಾತುಗಳನ್ನು ಕೆಳಗೆ ಓದಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಪರಮಹಂಸ ಯೋಗಾನಂದರ ಮಾತುಗಳು ಮತ್ತು ಬರಹಗಳಿಂದ:
ಯೋಗವು ಒಂದು ವಿಜ್ಞಾನವಾಗಿದ್ದು, ಅದರ ಮೂಲಕ ಆತ್ಮವು ದೇಹ ಮತ್ತು ಮನಸ್ಸಿನ ಸಾಧನಗಳ ಮೇಲೆ ಹಿಡಿತ ಸಾಧಿಸುತ್ತದೆ ಮತ್ತು ಅವುಗಳನ್ನು ಆತ್ಮ-ಸಾಕ್ಷಾತ್ಕಾರಕ್ಕೆ ಬಳಸುತ್ತದೆ. ಇದು ಆತ್ಮದ ಅತೀಂದ್ರಿಯ, ಅಮರ ಸ್ವಭಾವದ ಮತ್ತು ಪರಮಾತ್ಮನೊಂದಿಗೆ ಒಂದಾಗಿರುವ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುತ್ತದೆ.
ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಕಲಿಸಿದ ಮತ್ತು ಉಲ್ಲೇಖಿಸಲಾದ ಕ್ರಿಯಾ ಯೋಗ ತಂತ್ರವು, ಯೋಗ ಧ್ಯಾನದ ಪರಮ ಆಧ್ಯಾತ್ಮಿಕ ವಿಜ್ಞಾನವಾಗಿದೆ. ಭೌತಿಕ ಯುಗಗಳಲ್ಲಿ ಗುಪ್ತವಾಗಿರಿಸಲ್ಪಟ್ಟಿದ್ದ ಈ ಅವಿನಾಶಿ ಯೋಗವನ್ನು, ಮಹಾವತಾರ್ ಬಾಬಾಜಿ ಆಧುನಿಕ ಮಾನವನಿಗಾಗಿ ಪುನರುಜ್ಜೀವನಗೊಳಿಸಿದರು. ಬಾಬಾಜಿ ಮತ್ತು ನನ್ನ ಗುರುಗಳ ಆಜ್ಞೆಯ ಮೇರೆಗೆ ನಾನು ಸ್ಥಾಪಿಸಿದ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ [ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ] ಸಂಸ್ಥೆಯ ಮೂಲಕ ಈ ಪವಿತ್ರ ದೈವಿಕ ವಿಜ್ಞಾನವನ್ನು ಪ್ರಚಾರ ಮಾಡಲು ಬಾಬಾಜಿ ಸ್ವತಃ ನನ್ನನ್ನು ನೇಮಿಸಿದರು.
ಬಾಬಾಜಿ ಆಧುನಿಕ ಕಾಲದ ಪ್ರವೃತ್ತಿಗಳ ಬಗ್ಗೆ, ವಿಶೇಷವಾಗಿ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವ ಮತ್ತು ಸಂಕೀರ್ಣತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾರೆ, ಮತ್ತು ಯೋಗದ ಮೂಲಕ ಆತ್ಮ-ವಿಮೋಚನೆಯನ್ನು ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ಸಮಾನವಾಗಿ ಹರಡಬೇಕಾದ ಅಗತ್ಯವನ್ನು ಅರಿತಿದ್ದಾರೆ.
[ಮಹಾವತಾರ್ ಬಾಬಾಜಿ ಹೇಳಿದರು:] “ದೇವರನ್ನು ಅರಿಯುವ ವೈಜ್ಞಾನಿಕ ತಂತ್ರವಾದ ಕ್ರಿಯಾ ಯೋಗವು ಅಂತಿಮವಾಗಿ ಎಲ್ಲಾ ದೇಶಗಳಲ್ಲಿ ಹರಡುತ್ತದೆ ಮತ್ತು ಮನುಷ್ಯನ ವೈಯಕ್ತಿಕ, ಅತೀಂದ್ರಿಯ ಅನುಭವದ ಮೂಲಕ ಪರಮಪಿತನನ್ನು ಅರಿತುಕೊಳ್ಳುವಲ್ಲಿ ರಾಷ್ಟ್ರಗಳ ನಡುವೆ ಸಾಮರಸ್ಯ ತರಲು ಸಹಾಯ ಮಾಡುತ್ತದೆ.”

ಮಹಾವತಾರ್ ಬಾಬಾಜಿಯವರ ಆಧ್ಯಾತ್ಮಿಕ ಸ್ಥಾನಮಾನ ಮತ್ತು ವಿಶೇಷ ಪಾತ್ರವನ್ನು ವಿವರವಾಗಿ ವಿವರಿಸುವ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಶ್ರೇಷ್ಠ ಕೃತಿಯಾದ ಯೋಗಿಯ ಆತ್ಮಕಥೆಯಲ್ಲಿನ “ಬಾಬಾಜಿ, ಆಧುನಿಕ ಭಾರತದ ಯೋಗಿ-ಕ್ರಿಸ್ತ” ಎಂಬ ಅಧ್ಯಾಯವನ್ನು ಓದಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಜಗತ್ತನ್ನು ಉನ್ನತೀಕರಿಸಲು ಕಾರ್ಯನಿರ್ವಹಿಸುವ ಮತ್ತು ಕ್ರಿಯಾ ಯೋಗದ ಹಾದಿಯಲ್ಲಿರುವ ಸಾಧಕರಿಗೆ ನಿರಂತರವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿರುವ ಈ ಮಹಾನ್ ಚೇತನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.