ಸ್ವಾಮಿ ಚಿದಾನಂದ ಗಿರಿ ಅವರಿಂದ ಜನ್ಮಾಷ್ಟಮಿ ಸಂದೇಶ – 2025

9 ಆಗಸ್ಟ್, 2025

ನನ್ನಲ್ಲಿ ಮನಸ್ಸು ಮಗ್ನವಾದಾಗ ಮತ್ತು ನನ್ನ ಕೃಪೆಯಿಂದ, ನೀನು ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಳ್ಳುವೆ.

— ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದ ಭಗವದ್ಗೀತ

ಆತ್ಮೀಯರೇ,

ಈ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು! ಭಗವಾನ್ ಶ್ರೀ ಕೃಷ್ಣನ ಜನ್ಮದಿನೋತ್ಸವವನ್ನು ಆಚರಿಸಲು ನಾನು ನಿಮ್ಮೊಂದಿಗೆ ಮತ್ತು ಪ್ರಪಂಚದಾದ್ಯಂತ ಇರುವ ಅನೇಕ ಭಕ್ತರೊಂದಿಗೆ ಸೇರಿಕೊಳ್ಳುತ್ತಿದ್ದೇನೆ. ಅವನು ಅನಂತ ದೈವೀ ಪ್ರೀತಿ, ಜ್ಞಾನ, ಶಕ್ತಿ ಮತ್ತು ಸೌಂದರ್ಯದ ದಿವ್ಯ ಸಂದೇಶವಾಹಕನು. ಅವನು ರಾಜನಾಗಿ ಮತ್ತು ಯೋಗಿಯಾಗಿ ಜೀವಿಸಿದನು, ತನ್ನ ಜೀವನದ ಉದಾಹರಣೆಯ ಮೂಲಕ ಮತ್ತು ಭಗವದ್ಗೀತೆಯ ರಾಜಯೋಗದ ಮೂಲಕ, ನಮ್ಮ ಲೌಕಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ದೈವಪ್ರಜ್ಞೆಯನ್ನು ಪ್ರಕಟಪಡಿಸಲು ಸಾಧ್ಯ ಎಂಬುದನ್ನು ಅವನು ತೋರಿಸಿದನು.

ನಮ್ಮ ಗುರುಗಳಾದ ಪರಮಹಂಸ ಯೋಗಾನಂದಜಿಯವರು, ಯೋಗದ ಸಾರಾಂಶವನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್ ಪಾಠಗಳಲ್ಲಿ ಅಷ್ಟು ಸಮಗ್ರವಾಗಿ ಅನಾವರಣಗೊಳಿಸಿರುವುದು ನಮ್ಮ ಸೌಭಾಗ್ಯವೇ ಸರಿ!—ಇದು ಸಾವಿರಾರು ವರ್ಷಗಳ ಹಿಂದೆ ಭಗವಾನ್ ಕೃಷ್ಣನು ಗೀತೆಯಲ್ಲಿ ಶ್ಲಾಘಿಸಿದ ಆತ್ಮ-ಸಂಯಮದ (ಸ್ವಯಂ ನಿಯಂತ್ರಣದ) ಅದೇ ವಿಜ್ಞಾನವಾಗಿದೆ. ಕ್ರಿಯಾ ಯೋಗದ ಧ್ಯಾನ ತಂತ್ರಗಳನ್ನು ಭಕ್ತಿಯಿಂದ ಅಭ್ಯಾಸ ಮಾಡುವುದರಿಂದ, ನಾವು ದೇಹವೂ ಅಲ್ಲ, ಮನಸ್ಸೂ ಅಲ್ಲ ಎಂಬ ಪ್ರಜ್ಞೆ ನಮಗೆ ಮೂಡುತ್ತದೆ, ಅವುಗಳ ದುರ್ಬಲತೆಗಳು ಮತ್ತು ಸ್ವಯಂ-ಸೀಮಿತ ಇಂದ್ರಿಯ-ಆಧಾರಿತ ಇಷ್ಟಾನಿಷ್ಟಗಳೊಂದಿಗೆ ನಾವು ಗುರುತಿಸಲ್ಪಟ್ಟುಕೊಳ್ಳದೆ, ನಾವು ಅಮರ ಆತ್ಮ, ಪರಮಾತ್ಮನ ಪ್ರತಿಬಿಂಬ ಎಂಬುದನ್ನು ಅರಿಯುತ್ತೇವೆ. ಶ್ರೀ ಕೃಷ್ಣನಂತೆ ನಾವು ಆತ್ಮ-ಪ್ರಜ್ಞೆಯ ಗಾಂಭೀರ್ಯದಲ್ಲಿ (ರಾಜತ್ವದಲ್ಲಿ) ಜೀವಿಸಬಹುದು, ದೈನಂದಿನ ಧ್ಯಾನ ಮತ್ತು ಧರ್ಮನಿಷ್ಠ ಚಟುವಟಿಕೆಯ ಮೂಲಕ, ದೈವದ ಉದಾರ ಕೃಪೆ ಮತ್ತು ಆಶೀರ್ವಾದಗಳಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು.

ಭಗವಾನ್, ಈ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ನಮ್ಮನ್ನು ಒಂಟಿಯಾಗಿ ಬಿಟ್ಟಿಲ್ಲ, ಆದರೆ ಶಾಶ್ವತ ಸ್ನೇಹಿತನಾಗಿ ಪ್ರೀತಿಯಿಂದ ನಮ್ಮ ಪಕ್ಕದಲ್ಲೇ ಇದ್ದಾನೆ: ಮಾಯೆಯ ಬಿರುಗಾಳಿಗಳ ಸಮಯದಲ್ಲಿ ನಮ್ಮನ್ನು ರಕ್ಷಿಸುತ್ತಾನೆ, ಜೀವನದ ಯುದ್ಧಭೂಮಿಯಲ್ಲಿ ಜ್ಞಾನಿ ಸಾರಥಿಯಾಗಿ ನಮ್ಮನ್ನು ಮಾರ್ಗದರ್ಶಿಸುತ್ತಾನೆ ಮತ್ತು ಬ್ರಹ್ಮಾಂಡದ ಸ್ವಪ್ನ-ನಾಟಕದಲ್ಲಿ ನಮ್ಮ ಪ್ರೀತಿಯ ಸಂಗಾತಿಯಾಗಿ ಸಂತೋಷದಿಂದ ನೃತ್ಯವನ್ನೂ ಮಾಡುತ್ತಾನೆ. ನಾವು ನಮ್ಮ ದೈವೀ ಅನ್ವೇಷಣೆಯನ್ನು ಭಕ್ತಿಯಿಂದ ತುಂಬಿದಾಗ, ಭಗವಂತನು ಮಾಯೆಯ ಬಂಧನದಿಂದ ನಮ್ಮನ್ನು ಮುಕ್ತಗೊಳಿಸಲು ಯಾವುದೇ ಪಾತ್ರವನ್ನು ವಹಿಸಿಕೊಳ್ಳಬಹುದು ಎಂಬುದನ್ನು ಶ್ರೀ ಕೃಷ್ಣನ ಅನೇಕ ಹೆಸರುಗಳು ನಮಗೆ ತೋರಿಸಿಕೊಡುತ್ತವೆ.

ಧ್ಯಾನದ ಮತ್ತು ಜಗತ್ತಿನಲ್ಲಿ ಸದ್ಗುಣದ ಕ್ರಿಯೆಯ ಸುವರ್ಣ ಮಧ್ಯಮ ಮಾರ್ಗದಲ್ಲಿ ನಡೆಯುವ ಎಲ್ಲಾ ಆಧ್ಯಾತ್ಮಿಕ ಆಕಾಂಕ್ಷಿಗಳಿಗೆ ವಿಜಯ ಮತ್ತು ವೈಯಕ್ತಿಕ ಸಹಾಯದ ಭಗವಾನ್ ಕೃಷ್ಣನ ವಾಗ್ದಾನವು, ನಮ್ಮ ಅಗಾಧ ಆತ್ಮ-ಸಾಮರ್ಥ್ಯಗಳನ್ನು ಅನ್ವೇಷಿಸಲು, ನಮಗೆ ನವೀಕೃತ ಶೌರ್ಯವನ್ನು ನೀಡಲಿ. ಆಗ, ನಾವು ಈ ಜಗತ್ತಿನಲ್ಲಿ ದುರ್ಬಲ ಮನುಷ್ಯರಾಗಿ ಅಲ್ಲ, ಆದರೆ ದೈವೀ ಪ್ರೀತಿ ಮತ್ತು ಆನಂದವನ್ನು ಎಲ್ಲರಿಗೂ ಹರಡುತ್ತ, ಪರಮಾತ್ಮನ ಜ್ಞಾನ-ಗೀತೆಯ ಪ್ರಕಾಶಮಾನ ಸಾಧನಗಳಾಗಿ ಬದುಕಬಹುದು.

ನಿಮಗೆ ಮತ್ತು ನಿಮ್ಮ ಪ್ರಿಯ ಜನರಿಗೆ ಅತ್ಯಂತ ಶುಭಕರವಾದ ಜನ್ಮಾಷ್ಟಮಿಯ ಶುಭಾಶಯಗಳು.

ಜೈ ಶ್ರೀ ಕೃಷ್ಣ! ಜೈ ಗುರು!

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ