- ಯೋಗ ಎಂದರೇನು?
- ನೀವು ಯಾವ ವಿಧವಾದ ಯೋಗವನ್ನು ಕಲಿಸುತ್ತೀರಿ?
- ವೈಎಸ್ಎಸ್ ಬೋಧನೆಗಳು ಹಠ ಯೋಗ ಭಂಗಿಗಳ ಅಭ್ಯಾಸವನ್ನು ಒಳಗೊಂಡಿರುತ್ತವೆಯೇ?
- ಕ್ರಿಯಾ ಯೋಗದ ಬಗ್ಗೆ ನಾನು ಹೇಗೆ ಹೆಚ್ಚಿನದನ್ನು ಕಲಿಯಬಹುದು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಹೇಗೆ ಅಧ್ಯಯನ ಮಾಡಬಹುದು?
- ಯೋಗದಾ ಸತ್ಸಂಗ ಪಾಠಗಳಲ್ಲಿ ಏನೇನಿರುತ್ತದೆ?
- ಪ್ರಪಂಚದಲ್ಲಿನ ನನ್ನ ಜವಾಬ್ದಾರಿಗಳು ನನ್ನ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿರುವಾಗ ನನ್ನ ಆಧ್ಯಾತ್ಮಿಕ ಗುರಿಗಳನ್ನು ನಾನು ಹೇಗೆ ಸಾಧಿಸಿಕೊಳ್ಳಲು ಸಾಧ್ಯ?
- ನಾನು ಆಧ್ಯಾತ್ಮಿಕ ಪ್ರಗತಿಯನ್ನು ಹೊಂದುತ್ತಿದ್ದೇನೆ ಎಂದು ನಾನು ತಿಳಿದುಕೊಳ್ಳುವುದು ಹೇಗೆ?
- ವೈಎಸ್ಎಸ್ನ ಆಧ್ಯಾತ್ಮಿಕ ಅಧ್ಯಯನಗಳು ಮತ್ತು ತಂತ್ರಗಳನ್ನು ಅಭ್ಯಾಸ ಮಾಡುವಾಗ ನಾನು ಇತರ ಆಧ್ಯಾತ್ಮಿಕ ಅಧ್ಯಯನಗಳು ಮತ್ತು ತಂತ್ರಗಳನ್ನು ಮುಂದುವರಿಸಬಹುದೇ?
- ನೀವು ಧ್ಯಾನದ ತರಗತಿಗಳನ್ನು ನೀಡುವಿರೇ?
- ನಾನು ಕ್ರಿಯಾ ಯೋಗವನ್ನು ಯಾವಾಗ ಪಡೆಯಬಹುದು?
- ಒಬ್ಬರು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಜೀವಂತ ಗುರುವನ್ನು ಹೊಂದಿರಬೇಕೇ?
- ವೈಎಸ್ಎಸ್ ಗುರುಗಳ ಸಾಲಿನಲ್ಲಿ ಪರಮಹಂಸ ಯೋಗಾನಂದರ ಉತ್ತರಾಧಿಕಾರಿಯಾದವರು ಯಾರಾದರೂ ಇದ್ದಾರೆಯೇ?
- ವೈಎಸ್ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಮುಖ್ಯಸ್ಥರು ಯಾರು?
- ವೈಎಸ್‌ಎಸ್/ಎಸ್‌ಆರ್‌ಎಫ್‌ನ ಕಮಲವಿರುವ ಲಾಂಛನದ ಅರ್ಥವೇನು?
ಯೋಗ ಎಂದರೇನು?
ಯೋಗ ಎಂದರೆ, ಸರ್ವವ್ಯಾಪಿ ಪ್ರಜ್ಞೆಯೊಂದಿಗೆ ಅಥವಾ ಪರಮಾತ್ಮನೊಂದಿಗೆ ವೈಯಕ್ತಿಕ ಪ್ರಜ್ಞೆಯ ಅಥವಾ ಆತ್ಮದ “ಸಂಯೋಗ”. ಇಂದು ಯೋಗದಲ್ಲಿ ಅನೇಕ ವಿಭಿನ್ನ ಶಾಖೆಗಳಿದ್ದರೂ ಮತ್ತು ಹೆಚ್ಚಾಗಿ ಅದರ ಅತ್ಯಂತ ಸರಳವಾದ ಭೌತಿಕ ರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದ್ದರೂ, ಯೋಗದ ಆಳವಾದ ಅಭ್ಯಾಸವು ವೈಯಕ್ತಿಕ ಆತ್ಮವನ್ನು ಅನಂತದೊಂದಿಗೆ ಒಂದುಗೂಡಿಸುವ ಗುರಿಯನ್ನು ಹೊಂದಿದೆ.
ನೀವು ಯಾವ ವಿಧವಾದ ಯೋಗವನ್ನು ಕಲಿಸುತ್ತೀರಿ?
ಪರಮಹಂಸ ಯೋಗಾನಂದರು ರಾಜಯೋಗದ ಮಾರ್ಗವನ್ನು ಕಲಿಸಿದರು, ಇದು ಧ್ಯಾನದ ನಿಶ್ಚಿತ, ವೈಜ್ಞಾನಿಕ ವಿಧಾನಗಳ ಅಭ್ಯಾಸವನ್ನು ಒಳಗೊಂಡಿರುತ್ತದೆ — ಕ್ರಿಯಾ ಯೋಗ ಎಂದು ಕರೆಯಲಾಗುವ ಇದು ಒಬ್ಬರ ಸ್ವಪ್ರಯತ್ನಗಳ ಆರಂಭದಿಂದಲೇ ಒಬ್ಬರಿಗೆ ಅಂತಿಮ ಗುರಿಯ — ಪರಮಾತ್ಮನೊಂದಿಗೆ ಆತ್ಮದ ಸಂಯೋಗದ ನಸುನೋಟಗಳನ್ನು ಗ್ರಹಿಸಲು ಸಾಧ್ಯವಾಗಿಸುತ್ತದೆ. ಕ್ರಿಯಾ ಯೋಗ ಮಾರ್ಗವು ಸಂಪೂರ್ಣ ತತ್ವಶಾಸ್ತ್ರ ಮತ್ತು ಜೀವನ ವಿಧಾನವನ್ನೂ ಒಳಗೊಂಡಿರುತ್ತದೆ. ಕ್ರಿಯಾ ಯೋಗದ ಅಭ್ಯಾಸದಿಂದ ಒಬ್ಬರಿಗೆ ಮಾನಸಿಕ ಮತ್ತು ದೈಹಿಕ ಪ್ರಕ್ರಿಯೆಗಳನ್ನು ಶಾಂತಗೊಳಿಸಲು ಸಾಧ್ಯವಾಗುತ್ತದೆ, ಇದರಿಂದಾಗಿ ಒಬ್ಬರ ಪ್ರಜ್ಞೆಯು ಮಿತಿಗಳಿಂದ ಮುಕ್ತವಾಗಿ, ಅವರು ಭಗವದಾನಂದ ಮತ್ತು ಅವನ ಸರ್ವವ್ಯಾಪಿತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ.
ವೈಎಸ್‌ಎಸ್ ಬೋಧನೆಗಳು ಹಠ ಯೋಗ ಭಂಗಿಗಳ ಅಭ್ಯಾಸವನ್ನು ಒಳಗೊಂಡಿರುತ್ತವೆಯೇ?
ವೈಎಸ್‌ಎಸ್ ಪಾಠಗಳಲ್ಲಿ ಆಸನಗಳ ಬಗ್ಗೆ ಅಥವಾ ಹಠಯೋಗದ ಭಂಗಿಗಳ ಬಗ್ಗೆ ಬೋಧನೆಗಳಿಲ್ಲವಾದರೂ, ಪರಮಹಂಸ ಯೋಗಾನಂದರು ಅವುಗಳ ಅಭ್ಯಾಸವು ಬಹಳ ಪ್ರಯೋಜನಕಾರಿ ಎಂದು ಪ್ರೋತ್ಸಾಹಿಸಿದ್ದಾರೆ.
ಕ್ರಿಯಾ ಯೋಗದ ಬಗ್ಗೆ ನಾನು ಹೇಗೆ ಹೆಚ್ಚಿನದನ್ನು ಕಲಿಯಬಹುದು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಹೇಗೆ ಅಧ್ಯಯನ ಮಾಡಬಹುದು?
ನಮ್ಮ ಉಚಿತ ಪ್ರಕಟಣೆಯ ನಮೂನೆಯಾದ ಹೈಯೆಸ್ಟ್ ಅಛೀವ್‌ಮೆಂಟ್ಸ್ ಥ್ರೂ ಸೆಲ್ಫ್-ರಿಯಲೈಝೇಷನ್ (ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು) ಮತ್ತು ನೀವು ಈಗಾಗಲೇ ಓದಿರದಿದ್ದರೆ, ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಮೇರುಕೃತಿ, ಯೋಗಿಯ ಆತ್ಮಕಥೆಯನ್ನು ಓದಲು ನಾವು ನಿಮಗೆ ಹೇಳುತ್ತೇವೆ. ನಿಮಗೆ ಶ್ರೀ ಯೋಗಾನಂದರ ಬೋಧನೆಗಳನ್ನು ಅಧ್ಯಯನ ಮಾಡುವ ಆಸಕ್ತಿಯಿದ್ದರೆ, ನೀವು ಯೋಗದಾ ಸತ್ಸಂಗ ಲೆಸನ್ಸ್ (ಯೋಗದಾ ಸತ್ಸಂಗ ಪಾಠಮಾಲಿಕೆ) ಗೆ ಅರ್ಜಿ ಸಲ್ಲಿಸಬಹುದು.
ಯೋಗದಾ ಸತ್ಸಂಗ ಸೊಸೈಟಿಯ ಪಾಠಗಳಲ್ಲಿ ಏನೇನಿರುತ್ತದೆ?
ವೈಎಸ್‌ಎಸ್ ಪಾಠಗಳು ಆಳವಾದ ಗೃಹ-ಅಧ್ಯಯನ ಸರಣಿಯಾಗಿದ್ದು, ಇವು ಧ್ಯಾನದ ಕ್ರಿಯಾ ಯೋಗ ವಿಜ್ಞಾನವನ್ನು ಒಳಗೊಂಡಂತೆ ಪರಮಹಂಸ ಯೋಗಾನಂದರ ಯೋಗ ವಿಧಾನಗಳಲ್ಲಿ ಹಂತ-ಹಂತದ ಸೂಚನೆಯನ್ನೂ ಒದಗಿಸುತ್ತವೆ, ಹಾಗೂ ಅವರ “ಬದುಕುವುದು-ಹೇಗೆ” ಬೋಧನೆಗಳನ್ನು ತಿಳಿಸುವ ವಿಷಯಗಳ ಸಂಪೂರ್ಣ ಶ್ರೇಣಿಯನ್ನೂ ಒಳಗೊಂಡಿರುತ್ತವೆ.
ಪ್ರಪಂಚದಲ್ಲಿನ ನನ್ನ ಜವಾಬ್ದಾರಿಗಳು ನನ್ನ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿರುವಾಗ ನನ್ನ ಆಧ್ಯಾತ್ಮಿಕ ಗುರಿಗಳನ್ನು ನಾನು ಹೇಗೆ ಸಾಧಿಸಿಕೊಳ್ಳಲು ಸಾಧ್ಯ?
ಸಮಯ ತೆಗೆದುಕೊಳ್ಳುವ ಹಲವಾರು ಜವಾಬ್ದಾರಿಗಳನ್ನು ಹೊಂದಿರುವವರ ಸವಾಲುಗಳನ್ನು ಪರಮಹಂಸ ಯೋಗಾನಂದರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಅವರು ಧ್ಯಾನ ಮತ್ತು ಯುಕ್ತ ಚಟುವಟಿಕೆಗಳೆರಡನ್ನೂ ಒಳಗೊಂಡ ಸಮತೋಲಿತ ಜೀವನ ಮಾರ್ಗವನ್ನು ಕಲಿಸಿದರು. ಅವರ ಬೋಧನೆಗಳು ಅತ್ಯದ್ಭುತವಾಗಿ ಕಾರ್ಯೋಪಯೋಗಿಯಾಗಿವೆ, ಮತ್ತು ಕುಟುಂಬ ಹಾಗೂ ಕೆಲಸದ ಜವಾಬ್ದಾರಿಗಳನ್ನೂ ಒಳಗೊಂಡಂತೆ ನಿಮ್ಮ ದೈನಂದಿನ ವೃತ್ತಿಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಮಾರ್ಗದರ್ಶನ ನೀಡುವುದನ್ನು ನೀವು ಕಂಡುಕೊಳ್ಳುತ್ತೀರಿ. ಎಲ್ಲಕ್ಕಿಂತ ಹೆಚ್ಚಾಗಿ, ಅವು ನೀವು ನಿಮ್ಮ ಎಲ್ಲ ಚಟುವಟಿಕೆಗಳಲ್ಲಿ ಭಗವಂತನನ್ನು ಹೇಗೆ ಕರೆತರಬಹುದು — ಮತ್ತು ಅವನೊಂದಿಗೆ ಸರ್ವ-ತೃಪ್ತಿದಾಯಕ ಆನಂದಮಯ ಸಂಪರ್ಕವನ್ನು ಹೇಗೆ ಹೊಂದಬಹುದು ಎಂಬುದನ್ನು ಬೋಧಿಸುತ್ತವೆ. ವೈಎಸ್ಎಸ್‌ನ ಆಧ್ಯಾತ್ಮಿಕ ವಿಧಾನಗಳನ್ನು ಅಭ್ಯಾಸ ಮಾಡಲು ಪ್ರತಿದಿನ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ವೇಳಾಪಟ್ಟಿಯನ್ನು ಇಟ್ಟುಕೊಂಡರೆ ಒಳ್ಳೆಯದು. ಸಮಯದ ಅವಧಿ ಮಾತ್ರವಲ್ಲ, ಬದಲಿಗೆ ನಿಮ್ಮ ಅಭ್ಯಾಸದಲ್ಲಿರುವ ನಿಷ್ಠೆ ಮತ್ತು ಪ್ರಯತ್ನದ ಆಳವು ಭಗವಂತನೊಡನೆಯ ಆಂತರಿಕ ಸಂಪರ್ಕದ ಒಂದು ಅನುಭವವನ್ನು ತರುತ್ತದೆ.
ನಾನು ಆಧ್ಯಾತ್ಮಿಕ ಪ್ರಗತಿಯನ್ನು ಹೊಂದುತ್ತಿದ್ದೇನೆ ಎಂದು ನಾನು ತಿಳಿದುಕೊಳ್ಳುವುದು ಹೇಗೆ?
ಆಧ್ಯಾತ್ಮಿಕ ಪ್ರಗತಿ ಒಂದು ಹಂತ ಹಂತವಾದ ಪ್ರಕ್ರಿಯೆ. ಖಚಿತವಾದ ಸೂಚನೆಗಳೆಂದರೆ ನಮ್ಮೊಳಗೆ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳು: ಯೋಗಕ್ಷೇಮ ಮತ್ತು ಸುರಕ್ಷಾ ಭಾವನೆಯ ಹೆಚ್ಚಳ, ಪ್ರಶಾಂತತೆ, ಆನಂದ, ಆಳವಾದ ತಿಳುವಳಿಕೆ, ದುರಭ್ಯಾಸಗಳಿಂದ ಮುಕ್ತಿ, ಮತ್ತು ಭಗವಂತನೆಡೆಗೆ ವೃದ್ಧಿಸುತ್ತಿರುವ ಪ್ರೇಮ ಮತ್ತು ಹಂಬಲ. ದೃಢ ಹಾಗೂ ಅವಿರತ ಪ್ರಯತ್ನವು ಆಧ್ಯಾತ್ಮಿಕ ಯಶಸ್ಸಿನ ಮೂಲಮಂತ್ರ ಎಂದು ಪರಮಹಂಸ ಯೋಗಾನಂದರು ಹೇಳಿದ್ದಾರೆ. ಕೆಲವೊಮ್ಮೆ ಅಸಾಧಾರಣ ಪ್ರಗತಿಯನ್ನು ಸಾಧಿಸುತ್ತಿರುವವರಿಗೆ “ಸಾಕ್ಷಿಯೆಂಬಂತೆ” ಕೆಲವೊಂದು ಅನುಭವಗಳಾಗಿರುತ್ತವೆ ಅಥವಾ ಯಾವುದೇ ಆಧ್ಯಾತ್ಮಿಕ ಅನುಭವಗಳಾಗಿರುವುದಿಲ್ಲ. ನಿಜ ಹೇಳಬೇಕೆಂದರೆ, ನಾವು ದೃಢವಾಗಿ ಆಧ್ಯಾತ್ಮಿಕ ಪ್ರಯತ್ನಗಳನ್ನು ಮಾಡುತ್ತಿರುವಾಗ ಮತ್ತು ಜೀವನದ ದೈನಂದಿನ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಿರುವಾಗ ನಾವು ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿರುತ್ತೇವೆ — ಭಗವಂತನ ಪ್ರತ್ಯಕ್ಷ ಪ್ರತಿಕ್ರಿಯೆಯ ಅರಿವಿಲ್ಲದಿದ್ದರೂ ಸಹ. ನಿಜವಾದ ಪ್ರಗತಿಯು ನಮ್ಮ ದಿನನಿತ್ಯದ ನಡವಳಿಕೆ, ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ ಹೆಚ್ಚು ಪ್ರಕಟಗೊಳ್ಳುತ್ತದೆಯೇ ಹೊರತು ದರ್ಶನಗಳು ಅಥವಾ ಇತರ ಅನುಭವಗಳಲ್ಲಲ್ಲ.
ವೈಎಸ್‌ಎಸ್‌ನ ಆಧ್ಯಾತ್ಮಿಕ ಅಧ್ಯಯನಗಳು ಮತ್ತು ತಂತ್ರಗಳನ್ನು ಅಭ್ಯಾಸ ಮಾಡುವಾಗ ನಾನು ಇತರ ಆಧ್ಯಾತ್ಮಿಕ ಅಧ್ಯಯನಗಳು ಮತ್ತು ತಂತ್ರಗಳನ್ನು ಮುಂದುವರಿಸಬಹುದೇ?
ಪರಮಹಂಸ ಯೋಗಾನಂದರು ಪ್ರತಿ ಧರ್ಮದವರನ್ನೂ ತಮ್ಮ ಬೋಧನೆಗಳ ವಿದ್ಯಾರ್ಥಿಗಳೆಂದು ಸ್ವಾಗತಿಸಿದರು. ತಾವು ಕಲಿಸುವ ಯೋಗದ ವೈಜ್ಞಾನಿಕ ವಿಧಾನಗಳನ್ನು ಅಭ್ಯಾಸ ಮಾಡುವುದರಿಂದ ಬರುವ ಫಲಿತಾಂಶಗಳು ಒಂದು ನಿರ್ದಿಷ್ಟ ನಂಬಿಕೆಯ ಸಂಪ್ರದಾಯವನ್ನು ಒಪ್ಪಿಕೊಳ್ಳುವುದರಿಂದ ಬರುವುದಿಲ್ಲ. ಆದರೆ ಭಗವಂತನ ನೇರ ವೈಯಕ್ತಿಕ ಅನುಭವದಿಂದ ಬರುತ್ತದೆ, ಎಂದು ಅವರು ವಿವರಿಸಿದರು. ಆದರೂ, ವಿಭಿನ್ನ ಮಾರ್ಗಗಳ ಆಧ್ಯಾತ್ಮಿಕ ತಂತ್ರಗಳನ್ನು ಬೆರೆಸುವುದು ನಿಸ್ಸಾರ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ಎಚ್ಚರಿಸಿದರು. ಒಂದೇ ಮಾರ್ಗವನ್ನು ದೃಢವಾಗಿ ಅನುಸರಿಸುವುದರಿಂದ ಮತ್ತು ಅದರ ನಿಗದಿತ ವಿಧಾನಗಳನ್ನು ಅನ್ವಯಿಸುವುದರಿಂದ ಅದು ನಿಮ್ಮನ್ನು ನಿಮ್ಮ ಆಧ್ಯಾತ್ಮಿಕ ಗುರಿಯತ್ತ ಅತ್ಯಂತ ಶೀಘ್ರವಾಗಿ ಕೊಂಡೊಯ್ಯುತ್ತದೆ.
ನೀವು ಧ್ಯಾನದ ತರಗತಿಗಳನ್ನು ನೀಡುವಿರೆ?
ಧ್ಯಾನವನ್ನು ಕಲಿಯಬೇಕೆಂದರೆ ಯೋಗದಾ ಸತ್ಸಂಗ ಪಾಠಗಳಿಗೆ ನೋಂದಣಿ ಮಾಡಿಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ. ಈ ಆಳವಾದ ಗೃಹ-ಅಧ್ಯಯನ ಸರಣಿಯನ್ನು ಪರಮಹಂಸ ಯೋಗಾನಂದರು ತಮ್ಮ ಜೀವಿತಾವಧಿಯಲ್ಲಿ ನೀಡಿದ ತರಗತಿಗಳಿಂದ ಸಂಗ್ರಹಿಸಲಾಗಿದೆ. ವೈಎಸ್‌ಎಸ್ ಪಾಠಗಳು ಧ್ಯಾನದ ಕ್ರಿಯಾ ಯೋಗ ವಿಜ್ಞಾನದಲ್ಲಿ ಅವರ ವಿವರವಾದ, ಹಂತ-ಹಂತದ ಸೂಚನೆಯನ್ನು ಒದಗಿಸುತ್ತವೆ, ಜೊತೆಗೆ ಅವರ “ಬದುಕುವುದು-ಹೇಗೆ” ಬೋಧನೆಗಳನ್ನು ತಿಳಿಸುವ ವಿಷಯಗಳ ಸಂಪೂರ್ಣ ಶ್ರೇಣಿಯನ್ನೂ ಒಳಗೊಂಡಿರುತ್ತವೆ.
ನಾನು ಕ್ರಿಯಾ ಯೋಗವನ್ನು ಯಾವಾಗ ಪಡೆಯಬಹುದು?
ಯೋಗದಾ ಸತ್ಸಂಗ ಪಾಠಮಾಲಿಕೆಯ ಮೂಲ ಸರಣಿಯ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವರದಿಯನ್ನು (ಪಾಠ 17 ರಲ್ಲಿ ಸೇರಿಸಲಾಗಿದೆ) ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠಕ್ಕೆ ಸಲ್ಲಿಸುವ ಮೂಲಕ ಕ್ರಿಯಾ ಯೋಗವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. (ಹಿಂದಿನ ಆವೃತ್ತಿಯ ಪಾಠಗಳ ವಿದ್ಯಾರ್ಥಿಗಳು ಆ ಸರಣಿಯಲ್ಲಿನ ಪಾಠ ಸಂಖ್ಯೆ 52 ನ್ನು ಮುಗಿಸಿ ಹಂತ ಒಂದು ಮತ್ತು ಹಂತ ಎರಡನ್ನು ಪೂರ್ಣಗೊಳಿಸಿದವರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.)
ಒಬ್ಬರು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಜೀವಂತ ಗುರುವನ್ನು ಹೊಂದಿರಬೇಕೇ?
ಎಲ್ಲ ನೈಜ ಗುರುಗಳು, ಭೌತ ಶರೀರದಲ್ಲಿರಲಿ ಅಥವಾ ಇಲ್ಲದಿರಲಿ ಅವರು ಜೀವಂತವಾಗಿಯೇ ಇರುತ್ತಾರೆ, ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ. “ಎಲ್ಲರೂ (ಗುರು ಮತ್ತು ಶಿಷ್ಯರು) ಒಂದೇ ಲೋಕದಲ್ಲಿ ವಾಸಿಸುತ್ತಿರಲಿ ಅಥವಾ ಇಲ್ಲದಿರಲಿ ಗುರುಗಳ ಪ್ರಜ್ಞೆಯು ಅವರ ಶಿಷ್ಯರೊಂದಿಗೆ ಶ್ರುತಿಗೂಡಿಕೊಂಡಿರುತ್ತದೆ. ಒಬ್ಬ ನೈಜ ಗುರುವಿನ ಬಹು ಮುಖ್ಯ ಗುಣ ಮತ್ತು ಅಭಿವ್ಯಕ್ತಿ ಎಂದರೆ ಸರ್ವವ್ಯಾಪಿತ್ವ.” ಎಂದು ಅವರು ಹೇಳಿದ್ದಾರೆ. ಪರಮಹಂಸ ಯೋಗಾನಂದರೂ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ತಮ್ಮೆಡೆಗೆ ಬರುವ ಎಲ್ಲರಿಗೂ ನೆರವು ನೀಡುವುದನ್ನು ಮತ್ತು ಆಶೀರ್ವದಿಸುವುದನ್ನು ಮುಂದುವರೆಸುತ್ತಾರೆ.
ವೈಎಸ್ಎಸ್ ಗುರುಗಳ ಸಾಲಿನಲ್ಲಿ ಪರಮಹಂಸ ಯೋಗಾನಂದರ ಉತ್ತರಾಧಿಕಾರಿಯಾದವರು ಯಾರಾದರೂ ಇದ್ದಾರೆಯೇ?
ತಮ್ಮ ನಿಧನದ ಮುನ್ನ, ಪರಮಹಂಸಜಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಗುರುಗಳ ಸಾಲಿನಲ್ಲಿ ಅವರೇ ಕೊನೆಯವರಾಗಿರಬೇಕೆಂಬುದು ಭಗವಂತನ ಆಶಯವಾಗಿತ್ತು ಎಂದು ಹೇಳಿದರು. “ನಾನು ಹೋದ ಮೇಲೆ ಬೋಧನೆಗಳೇ ಗುರುವಾಗುತ್ತವೆ; ಬೋಧನೆಗಳ ಮೂಲಕ ನೀವು ನನ್ನೊಂದಿಗೆ ಮತ್ತು ನನ್ನನ್ನು ಕಳುಹಿಸಿದ ಮಹಾನ್ ಗುರುಗಳೊಂದಿಗೆ ಶ್ರುತಿಗೂಡಿಕೊಂಡಿರುತ್ತೀರಿ.” ಎಂದು ಅವರು ಹೇಳಿದರು. ಆದ್ದರಿಂದ ಪರಮಹಂಸ ಯೋಗಾನಂದರ ಪ್ರಕಾರ, ನಂತರ ಬರುವ ಯಾವ ಶಿಷ್ಯರೂ ಎಂದಿಗೂ ಗುರುವಿನ ಪಾತ್ರ ಅಥವಾ ಉಪಾಧಿಯನ್ನು ಹೊಂದುವುದಿಲ್ಲ. ಈ ದಿವ್ಯ ಆದೇಶವು ಧಾರ್ಮಿಕ ಇತಿಹಾಸದಲ್ಲಿ ಅನನ್ಯವಾದುದೇನಲ್ಲ. ಭಾರತದಲ್ಲಿ ಸಿಖ್ ಧರ್ಮವನ್ನು ಸಂಸ್ಥಾಪಿಸಿದ ಮಹಾನ್ ಸಂತ ಗುರುನಾನಕರ ಕಾಲಾನಂತರ, ಗುರುಗಳ ಸಾಮಾನ್ಯ ಪರಂಪರೆ ಇತ್ತು. ಪರಂಪರೆಯಲ್ಲಿ ಹತ್ತನೆಯವರಾದ ಒಬ್ಬ ಗುರುಗಳು, ತಾವು ಆ ಸಾಲಿನ ಗುರುಗಳಲ್ಲಿ ಕೊನೆಯವರೆಂದೂ ಮತ್ತು ನಂತರ ಬೋಧನೆಗಳನ್ನೇ ಗುರು ಎಂದು ಪರಿಗಣಿಸಬೇಕೆಂದೂ ಘೋಷಿಸಿದರು. ತಮ್ಮ ಕಾಲಾನಂತರ, ತಮ್ಮಿಂದ ಸಂಸ್ಥಾಪಿಸಲ್ಪಟ್ಟ ಸಂಸ್ಥೆಗಳಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗಳ ಮೂಲಕ ತಮ್ಮ ಕಾರ್ಯವನ್ನು ಮುಂದುವರಿಸುವುದಾಗಿ ಪರಮಹಂಸಜಿಯವರು ಭರವಸೆ ನೀಡಿದ್ದಾರೆ.
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಮುಖ್ಯಸ್ಥರು ಯಾರು?
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ, ಅವರು ಯೋಗದಾ ಸತ್ಸಂಗ ಸೊಸೈಟಿ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನಲ್ಲಿ ನಲವತ್ತು ವರ್ಷಗಳಿಂದ ಸನ್ಯಾಸಿಯಾಗಿದ್ದಾರೆ. ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿದ್ದ ದಿವಂಗತ ಶ್ರೀ ದಯಾ ಮಾತಾರವರು 2010 ರಲ್ಲಿ ನಿಧನರಾಗುವ ಮುನ್ನ, ಮೃಣಾಲಿನಿ ಮಾತಾರವರಿಗೆ, ಸ್ವಾಮಿ ಚಿದಾನಂದರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿ ಮೃಣಾಲಿನಿ ಮಾತಾರ ಉತ್ತರಾಧಿಕಾರಿಯಾಗಬೇಕೆಂದು ತಮ್ಮ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೃಣಾಲಿನಿ ಮಾತಾರವರು ಆಗಸ್ಟ್ 3, 2017 ರಂದು ತಾವು ನಿಧನರಾಗುವ ಕೆಲವು ತಿಂಗಳುಗಳ ಮೊದಲು ಇದನ್ನು ದೃಢಪಡಿಸಿದರು ಮತ್ತು ದಯಾ ಮಾತಾರ ಶಿಫಾರಸ್ಸಿಗೆ ತಮ್ಮ ಒಪ್ಪಿಗೆಯನ್ನು ನಿರ್ದೇಶಕರ ಮಂಡಳಿಗೆ ದೃಢಪಡಿಸಿದರು. ಸ್ವಾಮಿ ಚಿದಾನಂದರವರನ್ನು ಅಗಸ್ಟ್ 30, 2017 ರಂದು ನಿರ್ದೇಶಕ ಮಂಡಳಿಯು ಈ ಸ್ಥಾನಕ್ಕೆ ಆಯ್ಕೆ ಮಾಡಿತು.
ವೈಎಸ್‌ಎಸ್/ಎಸ್‌ಆರ್‌ಎಫ್ ಕಮಲದ ಲಾಂಛನದ ಅರ್ಥವೇನು?
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಗುರುತಿನ ಲಾಂಛನವು ಆಧ್ಯಾತ್ಮಿಕ ಚಕ್ಷುವನ್ನು ನಿರೂಪಿಸುತ್ತದೆ. ಇದು, ಸುವರ್ಣ ಪದ್ಮ ಪುಷ್ಪದೊಳಗೆ ನೆಲೆಗೊಂಡಿರುವ ಎರಡು ಹುಬ್ಬುಗಳ ನಡುವಿನ ಬಿಂದುವಿನಲ್ಲಿ ಶ್ವೇತ ನಕ್ಷತ್ರವನ್ನು ಮತ್ತು ಅದನ್ನು ಸುತ್ತುವರೆದಿರುವ ನೀಲಿ ಮತ್ತು ಹೊನ್ನ ಬೆಳಕಿನ ಉಂಗುರಗಳನ್ನು ತೋರಿಸುತ್ತದೆ. ಅರಳಿದ ಕಮಲವು ಜಾಗೃತ ಆಧ್ಯಾತ್ಮಿಕ ಪ್ರಜ್ಞೆಯ ಪುರಾತನ ಸಂಕೇತವಾಗಿರುವಂತೆಯೇ, ಧ್ಯಾನಸ್ಥ ಭಕ್ತನ ದಿವ್ಯ ಗ್ರಹಿಕೆಯ ಚಕ್ಷುವನ್ನು ತೆರೆಯುವ ಗುರಿಯನ್ನು ಇದು ಸೂಚಿಸುತ್ತದೆ.