ಒಂದು ಪರಿಚಯ:
ದೃಢೀಕರಣಗಳು ಎಂದರೇನು? ಇದೊಂದು ಮೂರ್ಖ ಪ್ರಶ್ನೆ ಎನಿಸಬಹುದು, ಏಕೆಂದರೆ ದೃಢೀಕರಣಗಳು, ಒಬ್ಬನು ತನ್ನನ್ನು ಸಕಾರಾತ್ಮಕ ಮನಸ್ಥಿತಿಯಲ್ಲಿ ಇರಿಸಿಕೊಳ್ಳುವ ಮತ್ತು ಯೋಗಕ್ಷೇಮದ ಆರೋಗ್ಯಕರ ಪ್ರಜ್ಞೆಯನ್ನು ಸ್ಥಾಪಿಸಿಕೊಳ್ಳುವ ಸಾಧನವಾಗಿ ಬಹಳ ವ್ಯಾಪಕವಾಗಿ-ಬಳಸಲ್ಪಟ್ಟು ಮೆಚ್ಚುಗೆ ಪಡೆದಿವೆ.
ಆದರೆ 1924 ರಲ್ಲಿ ತಮ್ಮ ಉಪನ್ಯಾಸಗಳು ಮತ್ತು ತರಗತಿಗಳಲ್ಲಿ ಪ್ರಪ್ರಥಮವಾಗಿ ದೃಢೀಕರಣಗಳನ್ನು ಪರಿಚಯಿಸಿದ ಪರಮಹಂಸ ಯೋಗಾನಂದರು ದೃಢೀಕರಣಗಳ ವಿಷಯದ ಬಗ್ಗೆ ಬಹಳ ಆಳವಾದ ಜ್ಞಾನವನ್ನು ನೀಡಿರುವುದರಿಂದ, ಆಗಿಂದಾಗ್ಗೆ, “ನಿಜವಾಗಿಯೂ ದೃಢೀಕರಣಗಳು ಎಂದರೇನು? ಅವುಗಳಿಗೆ ಅಂತಹ ಶಕ್ತಿ ಎಲ್ಲಿಂದ ಬರುತ್ತದೆ? ನನ್ನ ದೇಹ, ಮನಸ್ಸು ಮತ್ತು ಆತ್ಮದಲ್ಲಿ ನನ್ನ ಉನ್ನತ ಚೈತನ್ಯವನ್ನು ಹಾಗೂ ಸಂಪೂರ್ಣತೆಯನ್ನು ಅನುಭವಿಸಲು ಅವು ಎಷ್ಟರ ಮಟ್ಟಿಗೆ ನೆರವಾಗುತ್ತವೆ?” ಎಂದು ಕೇಳುವುದರಿಂದ ಅವುಗಳ ಬಗ್ಗೆ ತಿಳಿದುಕೊಂಡಂತಾಗುತ್ತದೆ. ಮತ್ತು ಬಹುಶಃ ಅತ್ಯಂತ ಮುಖ್ಯವಾಗಿ: “ನನ್ನ ಆಧ್ಯಾತ್ಮಿಕ ಅಭ್ಯಾಸದಲ್ಲಿ ನಾನು ಅವುಗಳನ್ನು ಹೆಚ್ಚು ಹೆಚ್ಚಾಗಿ ಹೇಗೆ ಸೇರಿಸಿಕೊಳ್ಳಬಹುದು?”
ಪರಮಹಂಸಜಿ ಹೇಳಿದ್ದಾರೆ: ದೃಢೀಕರಣಗಳು ಸಾಂಪ್ರದಾಯಿಕ ಪ್ರಾರ್ಥನೆಗಿಂತ ಶ್ರೇಷ್ಠವಾದವು. ಅವು, ಆತ್ಮವು ಈಗಾಗಲೇ ಏನನ್ನು ಹೊಂದಿದೆ; ಮತ್ತು ಮರೆವಿನಿಂದಾಗಿ ತಾತ್ಕಾಲಿಕವಾಗಿ ಏನನ್ನು ಕಳೆದುಕೊಂಡಿದೆ ಎಂಬುದನ್ನು ಅದಕ್ಕೆ ನೆನಪಿಸುತ್ತವೆ. ದೃಢೀಕರಣಗಳು ಸರ್ವಶಕ್ತ ಸತ್ಯದ ಹೇಳಿಕೆಗಳಾಗಿವೆ ಮತ್ತು ಬೇಡುವ ಪ್ರಾರ್ಥನೆಗಳಿಗಿಂತ ಬಹಳ ಭಿನ್ನವಾಗಿವೆ. ಭಿಕ್ಷುಕರಿಗೆ ಭಗವಂತನಿಂದ ತಾವು ಬಯಸಿದ್ದು ದೊರೆಯುವುದು ಅಪರೂಪ. ಆದರೆ ಭಗವತ್-ಸಂಸರ್ಗದ ಮೂಲಕ ತನ್ನನ್ನು ತಾನು ತಿದ್ದಿಕೊಂಡವನು ‘ಭಗವಂತನ ಪುತ್ರ’ನಾಗಿ ಹೊಸ ಅರಿವಿನಿಂದ ವರ್ತಿಸುತ್ತಾನೆ; ದೃಢೀಕರಣಗಳ ಮೂಲಕ, ಅವನು ತಾನು ಬಯಸುವ ಯಾವುದನ್ನಾದರೂ ಪಡೆಯಲು ಸೃಜನಶೀಲ ಸ್ಪಂದನದ ಸಾರ್ವತ್ರಿಕ ನಿಯಮಗಳನ್ನು ಅನ್ವಯಿಸಬಹುದು.”
ನಮ್ಮಲ್ಲಿ ಪ್ರತಿಯೊಬ್ಬರೂ ನಾವೆಷ್ಟೇ ಒಂಟಿ ಎಂದು ಭಾವಿಸಿದರೂ ಅಥವಾ ತಿಳಿದುಕೊಂಡಿದ್ದರೂ, ವಾಸ್ತವದಲ್ಲಿ “ಭಗವಂತನೊಂದಿಗೆ, ಅಗಲಿಸಲಾಗದ ಐಕ್ಯತೆಯನ್ನು” ಹೊಂದಿದ್ದೇವೆ ಎಂಬ ಸತ್ಯದಿಂದ ದೃಢೀಕರಣಗಳ ಹಿಂದಿನ ಶಕ್ತಿ ಬರುತ್ತದೆ ಎಂದು ಪರಮಹಂಸಜಿ ಹೇಳಿದ್ದಾರೆ.
ದೃಢೀಕರಣಗಳ ಮೂಲಕ ನಾವು ಆ ಏಕತೆಯನ್ನು ಹೆಚ್ಚು ಹೆಚ್ಚು ಅನುಭವಿಸಬಹುದು, ನಾವು ಕ್ರಮೇಣ ಆತ್ಮದ ಅಂತರ್ಬೋಧೆಯ, ನಿತ್ಯ-ಆನಂದದಾಯಕ ಪ್ರಜ್ಞೆಯಾದ ಅತೀತಪ್ರಜ್ಞೆಯೊಂದಿಗೆ ಸಂಪರ್ಕಕ್ಕೆ ಬರುತ್ತೇವೆ ಮತ್ತು ನಮ್ಮ ಜೀವನದಲ್ಲಿ ಆ ದಿವ್ಯ ಅರಿವು ಮತ್ತು ಭರವಸೆಯನ್ನು ಅಭಿವ್ಯಕ್ತಿಸುತ್ತೇವೆ. ನೀವು ಈ ತಿಂಗಳ ವಾರ್ತಾಪತ್ರವನ್ನಿಟ್ಟುಕೊಂಡು, ಪರಮಹಂಸಜಿಯವರ ಜ್ಞಾನವನ್ನು ಅನುಷ್ಠಾನಕ್ಕೆ ತರಬಹುದು ಎಂದು ನಾವು ಭಾವಿಸುತ್ತೇವೆ.
ಹಾಗೆ ಮಾಡಲು ನೀವು ಕೆಳಗೆ ಕೊಟ್ಟಿರುವ ಮತ್ತು ನಮ್ಮ “ದೃಢೀಕರಣಗಳು” ಪುಟದಲ್ಲಿ ಇರುವ ಪರಮಹಂಸಜಿಯವರ ಜ್ಞಾನವನ್ನು ಅನುಷ್ಠಾನಕ್ಕೆ ತರಬಹುದು ಎಂದು ನಾವು ಭಾವಿಸುತ್ತೇವೆ.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ಭಗವಂತನ ಪರಿಪೂರ್ಣ ಆಲೋಚನೆಗಳು ಬ್ರಹ್ಮಾಂಡವನ್ನು ಸೃಷ್ಟಿಸಿ ಅದನ್ನು ಸಮತೋಲನದಲ್ಲಿ ಮತ್ತು ಲಯಬದ್ಧವಾಗಿ ಇರಿಸಿಕೊಂಡಂತೆ, ಅವನ ಮಕ್ಕಳ ಸೂಕ್ತ ಆಲೋಚನೆಗಳನ್ನು, ಸರಿಯಾಗಿ ಉಚ್ಚರಿಸಲಾದ ಪದಗಳಲ್ಲಿ ಅಥವಾ ದೃಢೀಕರಣಗಳಲ್ಲಿ ವ್ಯಕ್ತಪಡಿಸಿದಾಗ, ಬ್ರಹ್ಮಾಂಡದಲ್ಲಿ ಮತ್ತು ಅವುಗಳನ್ನು ಹೇಳುವ ವ್ಯಕ್ತಿಯಲ್ಲಿ ಅವುಗಳಿಗೆ ಅನುಗುಣವಾದ ಲಯಬದ್ಧ, ಅಲೌಕಿಕ ಸ್ಪಂದನಗಳನ್ನು ಉಂಟುಮಾಡುತ್ತವೆ. ಈ ಸೃಜನಶೀಲ ಸ್ಪಂದನಗಳು, ಅನುಕ್ರಮವಾಗಿ, ಎಲ್ಲ ಪರಿಸ್ಥಿತಿಗಳನ್ನು ಸಮನ್ವಯಗೊಳಿಸುತ್ತವೆ ಮತ್ತು ಅಪೇಕ್ಷಿತ ಫಲಿತಾಂಶವನ್ನು ಅಭಿವ್ಯಕ್ತಿಗೆ ತರಲು ಅಗತ್ಯವಾದ ಶಕ್ತಿಗಳನ್ನು ಸಕ್ರಿಯಗೊಳಿಸುತ್ತವೆ.
ಪ್ರಾಮಾಣಿಕತೆ, ದೃಢನಂಬಿಕೆ, ಶ್ರದ್ಧೆ ಮತ್ತು ಅಂತರ್ಬೋಧೆಯಿಂದ ಸಂಪೂರಿತವಾದ ಪದಗಳು ಅತ್ಯಂತ ಸ್ಫೋಟಕ ಸ್ಪಂದನಾ ಬಾಂಬ್‌ಗಳಂತೆ, ಸ್ಫೋಟಿಸಿದಾಗ, ಕಷ್ಟಗಳ ಬಂಡೆಗಳನ್ನು ಛಿದ್ರ ಮಾಡಿ ಬಯಸಿದ ಬದಲಾವಣೆಯನ್ನುಂಟುಮಾಡುತ್ತವೆ.
ಆದ್ದರಿಂದಲೇ ಜಾಗೃತ ಮನಸ್ಸಿನ ಎಲ್ಲ ದೃಢೀಕರಣಗಳು ಸುಪ್ತಪ್ರಜ್ಞೆಯನ್ನು ವ್ಯಾಪಿಸುವಷ್ಟು ಪರಿಣಾಮಕಾರಿಯಾಗಿರಬೇಕು. ಹಾಗಿದ್ದಲ್ಲಿ, ಅವು ತಿರುಗಿ ಜಾಗೃತ ಮನಸ್ಸಿನ ಮೇಲೆ ತಾವಾಗಿಯೇ ಪ್ರಭಾವ ಬೀರುತ್ತವೆ. ಶಕ್ತಿಯುತವಾದ ಪ್ರಜ್ಞಾಪೂರ್ವಕ ದೃಢೀಕರಣಗಳು ಹೀಗೆ ಮನಸ್ಸು ಮತ್ತು ದೇಹದ ಮೇಲೆ ಸುಪ್ತಪ್ರಜ್ಞೆಯ ಮಾಧ್ಯಮದ ಮೂಲಕ ಪ್ರತಿಕ್ರಿಯಿಸುತ್ತವೆ. ಇನ್ನೂ ಹೆಚ್ಚು ಪ್ರಬಲವಾದ ದೃಢೀಕರಣಗಳು ಸುಪ್ತಪ್ರಜ್ಞೆಯನ್ನಷ್ಟೇ ಅಲ್ಲದೆ ಅಲೌಕಿಕ ಶಕ್ತಿಗಳ ಐಂದ್ರಜಾಲಿಕ ಭಂಡಾರವಾದ ಅತೀತ ಮನಸ್ಸನ್ನೂ ತಲುಪುತ್ತವೆ.
ಸ್ಪಷ್ಟವಾದ ಮನವರಿಕೆ ಮತ್ತು ಆಳವಾದ ಏಕಾಗ್ರತೆಯಿಂದ ಆಡಿದ ಮಾತು ವಾಸ್ತವವಾಗುವ ಮೌಲ್ಯವನ್ನು ಹೊಂದಿದೆ ….ಎಲ್ಲ ಪರಮಾಣು ಶಕ್ತಿಗಳ ಹಿಂದಿರುವ ವಿಶ್ವಾತ್ಮಕ ಸ್ಪಂದನ ಶಕ್ತಿಯಾದ, ಸೃಷ್ಟ್ಯಾತ್ಮಕ ಶಬ್ದವಾದ ಓಂ ನಿಂದ ಶಬ್ದದ ಅನಂತ ಸಾಮರ್ಥ್ಯಗಳು ಉದ್ಭವಿಸುತ್ತವೆ. ಧ್ಯಾನ ಮತ್ತು ಅತೀತಪ್ರಜ್ಞಾಪೂರ್ವಕ ಗ್ರಹಿಕೆಯಲ್ಲಿನ ಆ ಪರಮಸೂಕ್ಷ್ಮ ಓಂ ಸ್ಪಂದನದೊಂದಿಗೆ ಮನಸ್ಸು ಶ್ರುತಿಗೂಡಿಕೊಂಡಾಗ ಈ ತತ್ವದ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರಾಮಾಣಿಕ ನುಡಿಗಳು ಅಥವಾ ದೃಢೀಕರಣಗಳನ್ನು ಅರ್ಥಮಾಡಿಕೊಂಡು, ಭಾವಪೂರ್ಣವಾಗಿ ಮತ್ತು ಮನಃಪೂರ್ವಕವಾಗಿ ಪುನರಾವರ್ತಿಸಿದಾಗ ಅವು ನಿಮ್ಮ ಕಷ್ಟದಲ್ಲಿ ಸಹಾಯ ಮಾಡಲು ಸರ್ವವ್ಯಾಪಿ ಬ್ರಹ್ಮಾಂಡೀಯ ಬಲವನ್ನು ಖಂಡಿತವಾಗಿ ಪ್ರೇರಿಸುತ್ತವೆ. ಎಲ್ಲಾ ಸಂದೇಹಗಳನ್ನು ಹೊರಹಾಕಿ, ಅನಂತ ವಿಶ್ವಾಸದಿಂದ ಆ ಶಕ್ತಿಗೆ ಮನವಿ ಮಾಡಿಕೊಳ್ಳಿ; ಇಲ್ಲದಿದ್ದರೆ ನಿಮ್ಮ ಗಮನದ ಬಾಣವು ತನ್ನ ಗುರಿಯಿಂದ ಪಕ್ಕಕ್ಕೆ ಸರಿದುಹೋಗುತ್ತದೆ.
ಆಲೋಚನೆಗಳು ಪರಿಣಾಮಕಾರಿಯಾಗಬೇಕಾದರೆ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು. ಕಲ್ಪನೆಗಳು ಮನುಷ್ಯನ ಮನಸ್ಸನ್ನು ಮೊದಲು ಪರಿಷ್ಕರಿಸದ ರೂಪದಲ್ಲಿ ಅಥವಾ ಅವ್ಯವಸ್ಥಿತ ರೂಪದಲ್ಲಿ ಪ್ರವೇಶಿಸುತ್ತವೆ; ಅವುಗಳನ್ನು ಆಳವಾದ ಚಿಂತನೆಯಿಂದ ಅರಗಿಸಿಕೊಳ್ಳಬೇಕಾಗುತ್ತದೆ. ಆತ್ಮದ ದೃಢನಿಶ್ಚಿತಾಭಿಪ್ರಾಯವಿಲ್ಲದ ಆಲೋಚನೆಗೆ ಯಾವುದೇ ಬೆಲೆಯಿಲ್ಲ. ಅದಕ್ಕಾಗಿಯೇ ದೃಢೀಕರಣಗಳನ್ನು ಅವು ಆಧರಿಸಿರುವ ಸತ್ಯವನ್ನು- ಅಂದರೆ ಭಗವಂತನೊಂದಿಗೆ ಮನುಷ್ಯನಿಗಿರುವ ಅವಿನಾಭಾವ ಐಕ್ಯತೆಯನ್ನು ಗ್ರಹಿಸದೆ ಬಳಸುವ ಜನರು ಕಳಪೆ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಆಲೋಚನೆಗಳಿಗೆ ಗುಣಪಡಿಸುವ ಶಕ್ತಿಯಿಲ್ಲ ಎಂದು ದೂರುತ್ತಾರೆ.
ಗಟ್ಟಿಯಾಗಿ, ನಂತರ ಪಿಸುನುಡಿಯಲ್ಲಿ, ಮತ್ತು ಅಂತಿಮವಾಗಿ ಕೇವಲ ಮಾನಸಿಕವಾಗಿ ದೃಢೀಕರಿಸಿ: “ತಂದೆಯೇ, ನೀನು ಮತ್ತು ನಾನು ಒಂದೇ.” ಜಾಗೃತ ಮನಸ್ಸಿನ ಮತ್ತು ಸುಪ್ತಪ್ರಜ್ಞಾ ಕಲ್ಪನೆಯ ಜಾಣ್ಮೆಯ ಗ್ರಹಿಕೆಯಾಗಿ ಮಾತ್ರವಲ್ಲದೆ, ಅತೀತಪ್ರಜ್ಞೆಯ ದೃಢನಿಶ್ಚಿತಾಭಿಪ್ರಾಯವಾಗಿ ನೀವು ಅವನೊಂದಿಗೆ ನಿಮ್ಮ ಏಕತೆಯನ್ನು ಅನುಭವಿಸುವವರೆಗೆ ದೃಢೀಕರಣವನ್ನು ಪುನರಾವರ್ತಿಸಿ. ದೃಢೀಕರಣದ ಶಬ್ದಗಳನ್ನು ಅಂತರ್ಬೋಧಿತ ಗ್ರಹಿಕೆಯ ಬುದ್ಧಿವಂತ ಜ್ವಾಲೆಗಳಾಗಿ ಕರಗಿಸಿ. ನಂತರ ಆ ಉರಿಯುತ್ತಿರುವ, ಭಾವಪೂರ್ಣ ದೃಢೀಕರಣಗಳನ್ನು ನಿಮ್ಮ ಶಾಂತ, ನೆಮ್ಮದಿ ನೀಡುವ, ದೃಢ ವಿಶ್ವಾಸದ ಅಚ್ಚಿನಲ್ಲಿ ಸುರಿಯಿರಿ. ಅಲ್ಲಿ ನಿಮ್ಮ ಪರಿಷ್ಕರಿಸದ ನುಡಿಗಳು ಬ್ರಹ್ಮಾಂಡ ಭಗವಂತನ ಪಾದಗಳಲ್ಲಿರಿಸಲು ಹೊಳೆಯುವ ಚಿನ್ನದ ಹಾರದ ಅರ್ಪಣೆಯಾಗಿ ಬದಲಾಗುತ್ತವೆ.
ವೈಎಸ್‌ಎಸ್ ಬ್ಲಾಗ್‌ನಲ್ಲಿ ನೀವು ಪರಮಹಂಸ ಯೋಗಾನಂದರ “ಎಸ್ಟಾಬ್ಲಿಷಿಂಗ್ ಪಾಸಿಟಿವ್ ಥಾಟ್ಸ್ ಇನ್ ಯುವರ್ ಸಬ್‌ಕಾನ್ಷಿಯಸ್ ಮೈಂಡ್ ವಿತ್ ಅಫರ್ಮೇಷನ್ಸ್” ಅನ್ನು ಸಹ ಓದಬಹುದು, ಇದು 1940 ರಲ್ಲಿ ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್‌ನಲ್ಲಿ ಅವರು ನೀಡಿದ ಭಾಷಣದ ಆಯ್ದ ಭಾಗವಾಗಿದೆ. ಸಂದೇಹ ಮತ್ತು ಕಷ್ಟಗಳನ್ನು ನಿವಾರಿಸಲು ದೃಢೀಕರಣಗಳು ಹೇಗೆ ಪ್ರಬಲ ಸಾಧನವಾಗಬಹುದು ಎಂಬುದರ ಕುರಿತು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಿ — ಮತ್ತು ಅಂತಿಮವಾಗಿ ದಿವ್ಯಾನಂದವನ್ನು ಸಾಧಿಸಿಕೊಳ್ಳಿ.