“ದೇವರನ್ನು ಅರಿಯಲು ಭಕ್ತಿಯ ಮಾರ್ಗ” ಎಂಬ ಪ್ರವಚನದ ಆಯ್ದ ಭಾಗವನ್ನು ಈ ಕೆಳಗೆ ನೀಡಲಾಗಿದೆ. ಈ ಸಂಪೂರ್ಣ ಪ್ರವಚನವು ಪರಮಹಂಸ ಯೋಗಾನಂದರ ಸಂಗ್ರಹಿತ ಪ್ರವಚನಗಳು ಮತ್ತು ಪ್ರಬಂಧಗಳು, ಸಂಪುಟ IV ರಿಂದ ಆಯ್ದ ಸಾಲ್ವಿಂಗ್ ದಿ ಮಿಸ್ಟರಿ ಆಫ್ ಲೈಫ್,ಕೃತಿಯಲ್ಲಿ ಲಭ್ಯವಿದೆ. ಈ ಕೃತಿಯು ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಿಂದ ಶೀಘ್ರದಲ್ಲೇ ಹಾರ್ಡ್‌ಬ್ಯಾಕ್, ಪೇಪರ್‌ಬ್ಯಾಕ್ ಮತ್ತು ಇ-ಪುಸ್ತಕ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.

ಬ್ರಹ್ಮಾಂಡವನ್ನು ಅಲಂಕರಿಸಲು ಮತ್ತು ಭೂಮಿಯನ್ನು ಜನಭರಿತಗೊಳಿಸಲು ಅನಂತ ರೂಪಗಳನ್ನು ಸೃಷ್ಟಿಸಿ, ಈ ಬ್ರಹ್ಮಾಂಡದ ಸಮೃದ್ಧಿಯನ್ನು ಯಾರು ಸೃಷ್ಟಿಸಿದ್ದಾರೆ?
ನಾವು ಗಡಿಯಾರದ ಕಾರ್ಯವೈಖರಿಯನ್ನು ನೋಡಿದಾಗ, ಅದರ ಸೂಕ್ಷ್ಮ ಭಾಗಗಳನ್ನು ಮನುಷ್ಯನೇ ತಯಾರಿಸಿ ಒಟ್ಟುಗೂಡಿಸಿದ್ದಾನೆ ಎಂದು ಅರ್ಥವಾಗುತ್ತದೆ. ಆದರೆ ಹುಲ್ಲುಹಾಸನ್ನು ನೋಡಿದಾಗ, “ಮಣ್ಣನ್ನು ಹಸಿರು ಹುಲ್ಲಿನಿಂದ ಆವರಿಸಿದ ಬೀಜದಲ್ಲಿ ಶಕ್ತಿಯನ್ನು ಸೃಷ್ಟಿಸಿದವರು ಯಾರು?” ಎಂದು ನಾವು ಕೇಳಲೇಬೇಕು. ಮತ್ತು ಸೃಷ್ಟಿಯ ಅದ್ಭುತ ರಹಸ್ಯಗಳನ್ನು ನೋಡಲು ನಮ್ಮನ್ನು ಸೃಷ್ಟಿಸಿದವರು ಯಾರು? ಸೃಷ್ಟಿಕರ್ತನು ತನ್ನನ್ನು ತಾನು ಮರೆಮಾಡಿಕೊಂಡಿದ್ದಾನೆ, ಬಹುಶಃ ಒಂದು ದಿನ ನಾವು ಅವನನ್ನು ಹುಡುಕಿ ಕಂಡುಕೊಳ್ಳಬಹುದು….
ದೇವರ ಅಸ್ತಿತ್ವವನ್ನು ಕಂಡುಕೊಳ್ಳಲು, ನೀವು ಆತನನ್ನು ಪ್ರೀತಿಸಬೇಕು; ಆದರೆ ನನ್ನ ಮನಸ್ಸಿಗೆ ಒಂದು ಪ್ರಶ್ನೆ ಬಂತು, ಆತನನ್ನು ತಿಳಿಯದೆ ದೇವರನ್ನು ಹೇಗೆ ಪ್ರೀತಿಸಲು ಸಾಧ್ಯ? ನಿಮಗೆ ತಿಳಿಯದ ಯಾವುದನ್ನೂ ನೀವು ಪ್ರೀತಿಸಲು ಸಾಧ್ಯವಿಲ್ಲ. ನೀವು ಎಂದಿಗೂ ನೋಡದ ಹೂವನ್ನು ಪ್ರೀತಿಸಲು ಸಾಧ್ಯವೇ? ಸಮುದ್ರ ಎಂಬುದು ನಿಮಗೆ ಕೇವಲ ಒಂದು ಪದವಾಗಿದ್ದರೆ ನೀವು ಪ್ರೀತಿಸಲು ಸಾಧ್ಯವೇ? ನೀವು ಎಂದಿಗೂ ತಿಳಿದಿರದ ಅಥವಾ ಕೇಳಿರದ ಯಾರನ್ನಾದರೂ ಪ್ರೀತಿಸಲು ಸಾಧ್ಯವೇ? ನೀವು ಎಂದಿಗೂ ಭೇಟಿಯಾಗದವರನ್ನು ಸ್ನೇಹಿತರಾಗಿ ಪ್ರೀತಿಸಲು ಸಾಧ್ಯವೇ? ನಿಮಗೆ ಏನೂ ತಿಳಿದಿಲ್ಲದ ಯಾವುದನ್ನಾದರೂ ನೀವು ಪ್ರೀತಿಸಲು ಸಾಧ್ಯವೇ? ಹಾಗಾದರೆ, ಆತನನ್ನು ಎಂದಿಗೂ ನೋಡದೆ ದೇವರನ್ನು ಪ್ರೀತಿಸುವುದು ಹೇಗೆ ಸಾಧ್ಯ? ನಾನೀಗ ಹಾಗೆ ಹೇಳಲಾರೆ. ನಾನು ಆತನನ್ನು ಸದಾ ನೋಡುತ್ತೇನೆ. ನೀವು ಈಗ ಯೋಚಿಸುತ್ತಿರುವ ಪ್ರತಿಯೊಂದು ಆಲೋಚನೆಯೂ ಆ ಬೆಳಕಿನಿಂದಲೇ ಬರುತ್ತಿದೆ ಎಂದು ನಾನು ನೋಡುತ್ತೇನೆ.
ಒಂದು ಬೆಟ್ಟದ ತುದಿಯಿಂದ ನಗರದ ಮಿನುಗುವ ದೀಪಗಳು ಎಷ್ಟು ಸುಂದರವಾಗಿವೆ ಎಂದು ನೀವು ನೋಡಿದಾಗ, ಬಲ್ಬ್‌ಗಳಿಗೆ ವಿದ್ಯುತ್ ಒದಗಿಸುತ್ತಿರುವುದು ವಿದ್ಯುತ್ ಉತ್ಪಾದಿಸುವ ಯಂತ್ರ ಎಂಬುದನ್ನು ನೀವು ಮರೆತುಬಿಡುತ್ತೀರಿ. ಹಾಗೆಯೇ ಮನುಷ್ಯರ ಮಿನುಗುವ ಚೈತನ್ಯವನ್ನು ನೀವು ನೋಡಿದಾಗ, ಅವರಿಗೆ ಜೀವ ತುಂಬುತ್ತಿರುವುದು ಯಾವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಆಧ್ಯಾತ್ಮಿಕವಾಗಿ ಅಂಧರಾಗಿದ್ದೀರಿ. ಆ ಶಕ್ತಿ, ಅದೃಶ್ಯವಾಗಿದ್ದರೂ, ಬಹಳ ಸ್ಪಷ್ಟವಾಗಿದೆ. ಅದು ನಮ್ಮ ಆಲೋಚನೆಗಳ ಹಿಂದೆ ಸದಾ ಕಣ್ಣಾಮುಚ್ಚಾಲೆ ಆಡುತ್ತಿರುತ್ತದೆ. ದೇವರು ಮರೆಯಲ್ಲಿರಲು ಆರಿಸಿಕೊಳ್ಳುವುದರಿಂದ, ಆತನ ಬಗ್ಗೆ ಯೋಚಿಸುವುದು ಮತ್ತು ಆತನನ್ನು ಪ್ರೀತಿಸುವುದು ಕಷ್ಟ.
ದೇವರನ್ನು ತಿಳಿಯುವ ಅತ್ಯಂತ ಸರಳ ಮಾರ್ಗವೇ ಪ್ರೀತಿಯ ಮಾರ್ಗ ಎಂಬುದು ಒಂದು ವಿರೋಧಾಭಾಸ. ಆತನನ್ನು ತಿಳಿದುಕೊಳ್ಳಲು ಜ್ಞಾನಯೋಗ (ತಿಳುವಳಿಕೆಯ ಮಾರ್ಗ) ಎಂಬ ಮಾರ್ಗವಿದೆ: ವಿಶ್ಲೇಷಣಾತ್ಮಕ ವಿಭಜನೆಯ ಮಾರ್ಗ, ದೇವರಲ್ಲದ ಎಲ್ಲವನ್ನೂ ತ್ಯಜಿಸುವುದು — “ನೇತಿ, ನೇತಿ,” ಇದಲ್ಲ; ಅದಲ್ಲ. ಇನ್ನೊಂದು ಮಾರ್ಗವೆಂದರೆ ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿ ಮತ್ತು ಅವುಗಳ ಫಲಗಳನ್ನು ತ್ಯಜಿಸುವ ಮೂಲಕ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವುದು (ಕರ್ಮ ಯೋಗ).
ಮತ್ತು ಭಕ್ತಿಯ ಮಾರ್ಗವೂ ಇದೆ (ಭಕ್ತಿ ಯೋಗ), ಅಂದರೆ ದೇವರನ್ನು ಎಲ್ಲದರಲ್ಲೂ ಕಾಣುವವರೆಗೂ ನಿರಂತರವಾಗಿ ಆತನ ಬಗ್ಗೆ ಯೋಚಿಸುವುದು. ಭಕ್ತಿಯ ಕಣ್ಣುಗಳಿಂದ ನಾವು ಆತನನ್ನು ಹುಡುಕಿದರೆ ಆತನು ಬಹಳ ಸ್ಪಷ್ಟವಾಗಿ ಕಾಣಿಸುವನು. ನಾವು ಆತನನ್ನು ಬಯಸುತ್ತಿದ್ದೇವೆ, ಆತನು ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆತನಿಗೆ ತಿಳಿಯುವಂತೆ ಮಾಡಬೇಕು. ನಮ್ಮ ಆಲೋಚನೆಗಳಿಂದ, ಆತನ ಮೇಲಿನ ನಮ್ಮ ಹಂಬಲದಿಂದ ನಾವು ಆತನನ್ನು ಒತ್ತಾಯಿಸಿದರೆ, ಆತನು ತನ್ನನ್ನು ತಾನು ವ್ಯಕ್ತಪಡಿಸುವುದು ಖಚಿತ; ಆತನು ಪ್ರತಿಕ್ರಿಯಿಸುವುದು ಖಚಿತ.
ದೇವರ ಸನ್ನಿಧಿ ಎಷ್ಟು ಹತ್ತಿರದಲ್ಲಿದೆ ಎಂದರೆ, ಕತ್ತಲ ಕೋಣೆಯಲ್ಲಿ ಯಾರೋ ನಿಮ್ಮೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ. ನೀವು ಆ ವ್ಯಕ್ತಿಯನ್ನು ನೋಡದಿದ್ದರೂ, ಅವನು ಅಲ್ಲಿದ್ದಾನೆಂದು ನಿಮಗೆ ಅನಿಸುತ್ತದೆ. ದೇವರು ಹಾಗೆಯೇ ಇದ್ದಾನೆ, ನಿಮ್ಮ ಕಾಣದ ಕಣ್ಣುಗಳ ಕತ್ತಲೆಯ ಹಿಂದೆಯೇ. ಆತನು ಜ್ಞಾನಿಗಳ ಮೂಲಕ ನಮ್ಮೊಂದಿಗೆ ಮಾತನಾಡುತ್ತಿದ್ದಾನೆ. ಮತ್ತು ಕ್ರಿಸ್ತ, ಕೃಷ್ಣ ಹಾಗೂ ಮಹಾಗುರುಗಳಂತಹ ಶ್ರೇಷ್ಠ ವ್ಯಕ್ತಿಗಳ ಮೂಲಕ ಆತನು ನಮ್ಮನ್ನು ಪ್ರೇರೇಪಿಸುತ್ತಿದ್ದಾನೆ.
ಆತನು ಇದ್ದಾನೆ, ಆದರೆ ಎಲ್ಲಿದ್ದಾನೆ? ಇದಕ್ಕೆ ಭಕ್ತಿಯೇ ಉತ್ತರಿಸುತ್ತದೆ: ಆತನಿಗೆ ಸಮರ್ಪಿತರಾಗಲು ನೀವು ಆತನನ್ನು ನೋಡಬೇಕಾಗಿಲ್ಲ. ಭಕ್ತಿ ಎಂದರೆ, ಬ್ರಹ್ಮಾಂಡದ ಕಗ್ಗತ್ತಲಲ್ಲಿ ಆತನು ನಿಮ್ಮ ಸುತ್ತ ಸರ್ವವ್ಯಾಪಿಯಾಗಿ, ನಿಮ್ಮೊಂದಿಗೆ ದೈವಿಕ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ ಎಂದು ನೀವು ತಿಳಿದುಕೊಳ್ಳುವುದು. ಎಲೆಗಳ ಹಿಂದೆ, ಗಾಳಿಯ ಹಿಂದೆ, ಸೂರ್ಯನ ಬೆಚ್ಚಗಿನ ಕಿರಣಗಳ ಹಿಂದೆ — ಆತನು ಅಡಗಿದ್ದಾನೆ, ಆದರೆ ಆತನು ಅಲ್ಲಿದ್ದಾನೆ. ಆತನು ದೂರವಿಲ್ಲ; ಅದಕ್ಕಾಗಿಯೇ ಆತನನ್ನು ಪ್ರೀತಿಸುವುದು ಸುಲಭವಾಗುತ್ತದೆ.
ದೇವರು ನಮ್ಮ ಹೃದಯಗಳು ಅರಿಯಬಹುದಾದ ಅತಿ ದೊಡ್ಡ ಪ್ರೇಮಿ. ಆತನು ತನ್ನ ಮಕ್ಕಳ ಪ್ರೀತಿಯನ್ನು ಮಾತ್ರ ಬಯಸುವುದರಿಂದ, ತನ್ನನ್ನು ಹುಡುಕುವುದನ್ನು ಆತನು ಪ್ರೀತಿಸುತ್ತಾನೆ. ಅವರ ಪ್ರೀತಿಯನ್ನು ಪಡೆಯುವುದೇ ಆತನು ಸೃಷ್ಟಿಯನ್ನು ಕಳುಹಿಸಿದ ಏಕೈಕ ಉದ್ದೇಶ. ನಮ್ಮ ಪ್ರೀತಿಯ ಹೊರತಾಗಿ, ಆತನು ತನ್ನೊಳಗೆ ಎಲ್ಲವನ್ನೂ ಹೊಂದಿದ್ದಾನೆ. ಆತನನ್ನು ಪ್ರೀತಿಸಲು ಅಥವಾ ಪ್ರೀತಿಸದಿರಲು ಆತನು ನಮಗೆ ಸ್ವತಂತ್ರ ಇಚ್ಛೆಯನ್ನು ನೀಡಿದ್ದಾನೆ. ಆತನು ನಮ್ಮನ್ನು ಬಹಳವಾಗಿ ಬಯಸುತ್ತಾನೆ. ಅದಕ್ಕಾಗಿಯೇ ಆತನು ನಮಗೆ ತನ್ನೆಡೆಗೆ ಮರಳುವ ಮಾರ್ಗವನ್ನು ತೋರಿಸಲು ತನ್ನ ಸಂತರನ್ನು ಕಳುಹಿಸುತ್ತಾನೆ.