ಪರಮಹಂಸ ಯೋಗಾನಂದರು 1940ರಲ್ಲಿ ಎನ್ಸಿನಿಟಾಸ್, ಕ್ಯಾಲಿಫೋರ್ನಿಯಾದಲ್ಲಿ ನೀಡಿದ ಉಪನ್ಯಾಸ “ಯಶಸ್ಸಿಗಾಗಿ ಪ್ರಜ್ಞೆಯುಳ್ಳ ಹಾಗೂ ಸುಪ್ತ-ಪ್ರಜ್ಞೆಯುಳ್ಳ ಮನಸ್ಸನ್ನು ತರಬೇತುಗೊಳಿಸುವುದು”ರ ಒಂದು ಆಯ್ದ ಭಾಗವನ್ನು ಕೆಳಗೆ ನೀಡಲಾಗಿದೆ. ಸಂಪೂರ್ಣ ಉಪನ್ಯಾಸವನ್ನು ಎರಡು ಭಾಗಗಳಲ್ಲಿ, ಯೋಗದಾ ಸತ್ಸಂಗ ಮ್ಯಾಗಜಿನ್‌ನ ಜುಲೈ-ಸೆಪ್ಟೆಂಬರ್ ಮತ್ತು ಅಕ್ಟೋಬರ್-ಡಿಸೆಂಬರ್ 2015ರ ಸಂಚಿಕೆಗಳಲ್ಲಿ ಪ್ರಕಟಿಸಲಾಯಿತು ಮತ್ತು ಯೋಗದಾ ಸತ್ಸಂಗ ಆನ್‌ಲೈನ್ ಗ್ರಂಥಭಂಡಾರದಲ್ಲಿ ಇದನ್ನು ಸಂಪೂರ್ಣವಾಗಿ ಓದಬಹುದು — ಇದು ಮ್ಯಾಗಜಿನ್‌ನ ಚಂದಾದಾರರಿಗೆ ಲಭ್ಯವಿರುವ ವಿಸ್ತೃತ ಜ್ಞಾನದ ಸಂಪನ್ಮೂಲ.
ಈ ಸಶಕ್ತಗೊಳಿಸುವ ಮತ್ತು ಉತ್ತೇಜಿಸುವ ವಿಷಯದ ಆ ಸಂಪೂರ್ಣ ನಿರೂಪಣೆಯಲ್ಲಿ ಮತ್ತು ತಮ್ಮ ಯೋಗದಾ ಸತ್ಸಂಗ ಪಾಠಮಾಲಿಕೆಗಳಲ್ಲಿ, ಒಬ್ಬರು ತಮ್ಮ ಪ್ರಜ್ಞೆಯುಳ್ಳ ಮತ್ತು ಸುಪ್ತ-ಪ್ರಜ್ಞೆಯುಳ್ಳ ಮನಸ್ಸನ್ನು ಹೇಗೆ ಉತ್ತಮವಾಗಿ ಉಪಯೋಗಿಸಿಕೊಳ್ಳಬಹುದು ಎಂಬುದನ್ನಷ್ಟೇ ಅಲ್ಲದೆ, ಅತೀತಪ್ರಜ್ಞೆಯುಳ್ಳ ಮನಸ್ಸನ್ನು — ಅಂತರ್ಬೋಧೆಯ ಮೂಲಕ ನೇರವಾಗಿ ಸತ್ಯವನ್ನು ಗ್ರಹಿಸುವ ಆತ್ಮದ ಸರ್ವಜ್ಞ ಶಕ್ತಿಯನ್ನು — ಯಶಸ್ಸಿಗಾಗಿ ಹೇಗೆ ಸಂಪರ್ಕಿಸಲು ಸಾಧ್ಯ ಎಂಬುದನ್ನು ಕೂಡ ಬಹಳ ಗಹನವಾಗಿ ಚರ್ಚಿಸಿದ್ದಾರೆ

ಸುಪ್ತ ಪ್ರಜ್ಞೆಯಲ್ಲಿ ದೃಢತೆ ಮತ್ತು ಯುಕ್ತ ಆಲೋಚನೆಯನ್ನು ಊರಿಸಲು, ದೃಢೀಕರಣದ ಅಭ್ಯಾಸದಿಂದ ನಿಮ್ಮ ಮನಸ್ಸಿಗೆ ಧನಾತ್ಮಕ ಚಿಂತನೆಗಳು ಮತ್ತು ಸುಧಾರಣೆಗಳನ್ನು ಸೂಚಿಸಿ. ಅರೆ-ನಿದ್ರೆಯಲ್ಲಿರುವ ಸ್ಥಿತಿಯು ಬಹಳ ಉತ್ತಮವಾದದ್ದು. ನಿದ್ದೆಯ ಸ್ವಲ್ಪ ಮುಂಚಿನ ಹಾಗೂ ನಂತರದ ಅವಧಿಯಲ್ಲಿ ಸಾಕಷ್ಟನ್ನು ಅಂತರ್ಗತ ಮಾಡಿಕೊಳ್ಳಬಹುದು; ಆದ್ದರಿಂದಲೇ ಕೆಲವರು “ನಿದ್ರಾ ಕಲಿಕೆ” ಅಥವಾ ನಿದ್ರೆ ಮಾಡುವಾಗಿನ ಸುಪ್ತಮನಸ್ಸಿನ ತರಬೇತಿಯನ್ನು ಸೂಚಿಸುತ್ತಾರೆ.
ಒಬ್ಬ ಹೆಂಗಸು ತನ್ನ ಗಂಡನ ಧೂಮಪಾನದ ಚಟವನ್ನು ಬಿಡಿಸಲು ಬಯಸುತ್ತಿದ್ದಳು. ಪ್ರತಿದಿನ ಆಕೆ ಅವನ ಹಾಸಿಗೆಯ ಬಳಿ ನಿಂತು ಹೇಳುತ್ತಿದ್ದಳು: “ದಿನದಿಂದ ದಿನಕ್ಕೆ, ಎಲ್ಲ ರೀತಿಯಲ್ಲೂ, ನೀನು ಧೂಮಪಾನದ ಚಟವನ್ನು ಬಿಡುತ್ತಿದ್ದೀಯ.” ಆದರೆ ಆಕೆಯ ಗಂಡ ಇನ್ನೂ ನಿದ್ರಿಸಿರಲಿಲ್ಲ. ಅವನು ತನ್ನ ಹೆಂಡತಿ ಅವನನ್ನು ಉಪಶಮನಗೊಳಿಸಲು ಪ್ರಯತ್ನಿಸುತ್ತಿದ್ದುದನ್ನು ತಡೆಯಲಾಗುವವರೆಗೂ ತಡೆದುಕೊಂಡ. ನಂತರ ಜೋರಾಗಿ ಕೂಗಿಕೊಂಡ, “ಹಾಳಾಗಿ ಹೋಗಲಿ, ನನಗೆ ಅದರಿಂದ ಮುಕ್ತನಾಗುವುದು ಬೇಕಿಲ್ಲ!” ಆದ್ದರಿಂದ ನೀವು ಯಾರಿಗಾದರೂ ಒಂದು ಒಳ್ಳೆಯ ಅಭ್ಯಾಸವನ್ನು ಸೂಚಿಸುತ್ತಿದ್ದರೆ, ಅದಕ್ಕೆ ಅವರ ಒಪ್ಪಿಗೆ ಇದೆ ಅಥವಾ ಅವರು ಗಾಢ ನಿದ್ರೆಯಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವಿಷಯ ಹೀಗಿದೆ: ನೀವು ದೃಢೀಕರಿಸುವಾಗ ನಿಮ್ಮ ಸುಪ್ತಪ್ರಜ್ಞಾ ಮನಸ್ಸು ವಿರೋಧಾತ್ಮಕ ಭಾವನೆಗಳನ್ನು ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳಬೇಕು. ನೀವು ಏನನ್ನೇ ದೃಢೀಕರಿಸುತ್ತಿರಲಿ, ಎಲ್ಲ ಋಣಾತ್ಮಕ ಭಾವನೆಗಳನ್ನು ಗುಡಿಸಿ ಆಚೆಗೆ ಹಾಕುವವರೆಗೂ ನಿಮ್ಮ ಮಾನಸಿಕ ಪುನರುಚ್ಚಾರಣೆಗಳನ್ನು ಮುಂದುವರೆಸುತ್ತಲೇ ಇರಬೇಕು. ನಿಮ್ಮ ದೃಢೀಕರಣವನ್ನು ಆಯ್ದುಕೊಳ್ಳಿ ಮತ್ತು ನಿಮ್ಮ ಪ್ರಜ್ಞೆಯು ಆ ಒಂದು ಚಿಂತನೆಯಲ್ಲಿ ಸಂಪೂರ್ಣವಾಗಿ ನೆನೆಯುವವರಗೆ ಅದನ್ನು ಮತ್ತೆ ಮತ್ತೆ ಪುನರುಚ್ಚರಿಸಿ.
ಉದಾಹರಣೆಗೆ, ನಿಮಗೆ ಅನಾರೋಗ್ಯವಾಗಿ ನೀವು ಗುಣಹೊಂದಲು ಬಯಸುತ್ತಿದ್ದರೆ, ನೀವು ಹೀಗೆ ದೃಢೀಕರಿಸಬಹುದು, “ಪರಿಪೂರ್ಣ ಆರೋಗ್ಯ ನನ್ನ ಶರೀರದ ಕಣ ಕಣಗಳನ್ನೂ ವ್ಯಾಪಿಸುತ್ತಿದೆ.” ಅದೇ ಸಮಯದಲ್ಲಿ “ನಿನ್ನ ಕಥೆ ಮುಗಿಯಿತು. ನೀನು ಇನ್ನು ಆರೋಗ್ಯವಂತನಾಗಿರಲು ಸಾಧ್ಯವಿಲ್ಲ!” ಎಂದು ಹೇಳುತ್ತಿರುವ ಒಂದು ವಿರೋಧಿ ಭಾವದ ಅಂತಃಪ್ರವೃತ್ತಿ ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನೊಳಗಿರುತ್ತದೆ. ನಿಮ್ಮ ಸುಪ್ತಪ್ರಜ್ಞಾ ಮನಸ್ಸು ನಿಮ್ಮನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಿದ್ದರೂ ನೀವು ಒಳ್ಳೆಯ ಆರೋಗ್ಯವನ್ನು ದೃಢೀಕರಿಸುತ್ತಿದ್ದರೆ, ಅಂತಿಮವಾಗಿ ನೀವು ಋಣಾತ್ಮಕ ಚಿಂತನೆಯ ಆ ಸುಪ್ತಪ್ರಜ್ಞೆಯ ಅಭ್ಯಾಸವನ್ನು ಹೊಡೆದೋಡಿಸುತ್ತೀರಿ ಮತ್ತು ಒಳ್ಳೆಯ ಆರೋಗ್ಯದ ಒಂದು ಹೊಸ ಮಾನಸಿಕ ಚಿಂತನೆಯ ಮಾದರಿಯನ್ನು ಆರಂಭಿಸುತ್ತೀರಿ. ಆಗ ನೀವು ಗುಣವಾಗಬಹುದು, ಏಕೆಂದರೆ ಶರೀರವನ್ನು ಪೋಷಿಸುವ ಮತ್ತು ಸುಸ್ಥಿತಿಯಲ್ಲಿಡುವ ಎಲ್ಲ ಆಂತರಿಕ ಪ್ರಾಣ ಪ್ರಕ್ರಿಯೆಗಳನ್ನೂ ಬಲಶಾಲಿಯಾದ ಸುಪ್ತಪ್ರಜ್ಞಾ ಮನಸ್ಸು ನಿಯಂತ್ರಿಸುತ್ತದೆ.
ಪ್ರತಿ ರಾತ್ರಿ ನಿದ್ರೆಗೆ ಜಾರುವ ಮುನ್ನ, ನಿಮಗೆ ಬೇಕಾದದ್ದನ್ನು ಸಿದ್ಧಿಸಿಕೊಳ್ಳಲು ಬಹಳ ಗಾಢವಾಗಿ ದೃಢೀಕರಿಸಿ. ನಿಮಗೆ ಭಗವಂತನು ಬೇಕಿದ್ದಲ್ಲಿ, ಪ್ರತಿ ರಾತ್ರಿ ಕೇವಲ ಅದನ್ನು ಮಾತ್ರವೇ ದೃಢೀಕರಿಸಿ: “ನಾನು ಮತ್ತು ನನ್ನ ತಂದೆ ಒಂದೇ.” ನೀವು ಭಗವಂತ ಬೇಕೆಂದು ಪ್ರಾರ್ಥಿಸಿದಾಗ, ನೀವು ಬೇರೆಲ್ಲದಕ್ಕೂ ಪ್ರಾರ್ಥಿಸಿದಂತಾಗುತ್ತದೆ. ನಿಮಗೇನು ಬೇಕೆಂದು ಭಗವಂತನಿಗೆ ತಿಳಿದಿದೆ. ನೀವು ಕಿವಿಯನ್ನು ಎಳೆದರೆ, ಅದರೊಂದಿಗೆ ತಲೆಯೂ ಬರುತ್ತದೆ. ಭಗವಂತನನ್ನು ಕಾಣುವುದರಲ್ಲಿ, ಎಲ್ಲ ನ್ಯಾಯಸಮ್ಮತ ಬಯಕೆಗಳೂ ಸಂಪೂರ್ಣವಾಗಿ ಪೂರೈಕೆಯಾಗುವುದನ್ನು ನೀವು ನೋಡುತ್ತೀರಿ.
ಸುಪ್ತಪ್ರಜ್ಞೆಯಲ್ಲಿ ಸಂದೇಹ ಪಡುವ ನಿಮ್ಮ ಮನಸ್ಸು ಹೇಳಬಹುದು, “ಓಹ್, ಧ್ಯಾನ ಮಾಡುವುದರಿಂದ ಏನು ಪ್ರಯೋಜನ? ನಾನು ಧ್ಯಾನ ಮಾಡಿದೆ, ಆದರೆ ಭಗವಂತ ನನ್ನ ಬಳಿ ಬಂದಿಲ್ಲ!” ಅದೇ ನಾನು ಎದುರಿಸಬೇಕಾಗಿದ್ದ ಅತ್ಯಂತ ಕೆಟ್ಟ ಆಲೋಚನೆಯ-ತಡೆ. ಆದರೆ ನಾನು ಧ್ಯಾನವನ್ನು ಬಿಡದೇ ಮುಂದುವರಿಸಿದಾಗ ಹಾಗೂ ಇಚ್ಛೆ ಮತ್ತು ದೃಢೀಕರಣದ ಪ್ರಜ್ಞಾಪೂರ್ವಕ ಕ್ರಿಯೆಗಳಿಂದ ಮತ್ತೆ ಮತ್ತೆ ಆ ಸೋಲಿನ ಚಿಂತನೆ ದೂರವಾಗುವವರೆಗೂ ನನ್ನ ಸುಪ್ತಪ್ರಜ್ಞಾ ಮನಸ್ಸನ್ನು ನಿರೋಧಿಸಿದಾಗ, ಭಗವಂತ ನನಗೆ ಸಮಾಧಿ-ಆನಂದದ ಭವ್ಯತೆಯಲ್ಲಿ ತನ್ನನ್ನು ತಾನು ತೋರ್ಪಡಿಸಿಕೊಂಡ.