ಶ್ರೀ ದಯಾ ಮಾತೆಯ 100ನೇ ಜನ್ಮ ವಾರ್ಷಿಕೋತ್ಸವದ ಸಂದೇಶ ಶ್ರೀ ಶ್ರೀ ಮೃಣಾಲಿನಿ ಮಾತಾರವರಿಂದ

ದಯಾ ಮಾತಾ ನಗುತ್ತಾ

ಆತ್ಮೀಯರೇ,

ನಮ್ಮ ಪ್ರಿಯ ಶ್ರೀ ಶ್ರೀ ದಯಾ ಮಾತೆಯ 100ನೇ ಜನ್ಮ ದಿನದ ಈ ಹರ್ಷದ ಸಂದರ್ಭವನ್ನು ಅವರು ಈಗ ವಾಸಿಸುತ್ತಿರುವ ಪರಲೋಕದಲ್ಲಿ ಖಂಡಿತವಾಗಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ, ಮತ್ತು ಅವರ ದೇವರ ಭಕ್ತಿ ಹಾಗೂ ದೇವರ ಮಕ್ಕಳಿಗಾಗಿರುವ ಅವರ ಅನಂತ ಕರುಣೆಯಿಂದ ಕೂಡಿದ ದಿವ್ಯ ಜೀವನದಿಂದ ಆಳವಾಗಿ ಪ್ರೇರಿತವಾಗಿರುವ ನಮ್ಮೆಲರ ಹೃದಯದಲ್ಲೂ ಕೂಡಾ. ಭಗವಂತನೊಂದಿಗೆ ಶ್ರುತಿಗೂಡಿದ ಆಕೆಯ ಪ್ರಜ್ಞೆಯಿಂದ ಧಾರಾಳವಾಗಿ ಹರಿಯುತ್ತಿದ್ದ ಪ್ರೀತಿ ಮತ್ತು ತಿಳುವಳಿಕೆಗಳಿಗೆ ಎಲ್ಲ ದೇಶಗಳ ಮತ್ತು ಎಲ್ಲ ಧರ್ಮಗಳ ಆತ್ಮಗಳು ಪ್ರತಿಸ್ಪಂದಿಸಿದವು, ಅದರಿಂದಾಗಿ ಅವರೆಲ್ಲರು ಅವನೆಡೆಗೆ ಸೆಳೆಯಲ್ಪಟ್ಟರು.

ಶೈಶವದಿಂದಲೇ ದಯಾ ಮಾತಾಜಿಯವರು ಧರ್ಮಗ್ರಂಥಗಳಲ್ಲಿ ವರ್ಣಿಸಲಾದ ಮಹಾನ್ ಆತ್ಮಗಳಂತೆಯೇ ದೇವರನ್ನು ಅರಿತು ಅವನನ್ನು ಸಂಪರ್ಕಿಸಲು ಹಾತೊರೆಯುತ್ತಿದ್ದರು. ಅವರು ನಮ್ಮ ಗುರು ಶ್ರೀ ಶ್ರೀ ಪರಮಹಂಸ ಯೋಗಾನಂದರನ್ನು ಮೊದಲ ಬಾರಿಗೆ ನೋಡಿದಾಗ, ಮತ್ತು ಅವರ ಮಾತನ್ನು ಕೇಳಿದಾಗ, ಅವರು ಯೋಚಿಸಿದರು, “ನಾನು ಭಗವಂತನನ್ನು ಪ್ರೀತಿಸಲು ಸದಾ ಬಯಸಿದಂತೆಯೇ ಈ ಮನುಷ್ಯ ಭಗವಂತನನ್ನು ಪ್ರೀತಿಸುತ್ತಾರೆ. ಇವರು ಭಗವಂತನನ್ನು ಅರಿತಿದ್ದಾರೆ. ನಾನು ಅವರ ಅನುಯಾಯಿಯಾಗಿ ಹೋಗುತ್ತೇನೆ!” ಆ ಪ್ರೀತಿಯನ್ನು ಪರಿಪೂರ್ಣಗೊಳಿಸಿಕೊಳ್ಳುವುದೇ ಅವರ ಜೀವನದ ಪರಮ ಗುರಿಯಾಗಿತ್ತು; ಹಾಗೂ ಯಾವುದೂ ಆ ಗುರಿಯಿಂದ ಅವರನ್ನು ಬೇರೆಡೆಗೆ ಸೆಳೆಯಲು ಎಂದಿಗೂ ಬಿಡದ ಕಾರಣ, ಅವರಿಗೆ ಗುರುದೇವರ ಆಧ್ಯಾತ್ಮಿಕ ಅನುಗ್ರಹವನ್ನು ಸಂಪೂರ್ಣವಾಗಿ ಸ್ವೀಕರಿಸಲು ಮತ್ತು ಈ ಜಗತ್ತಿನಲ್ಲಿ ಭಗವಂತನ ಬೆಳಕು ಮತ್ತು ಆಶೀರ್ವಾದಗಳ ಶುದ್ಧ ಸಂಪರ್ಕ ಸಾಧನವಾಗಲು ಸಾಧ್ಯವಾಯಿತು. ತಮ್ಮ ವಿನಮ್ರತೆ, ಗುರೂಜಿಯ ತರಬೇತಿಯೆಡೆಗೆ ಅವರ ಗ್ರಹಣಶೀಲತೆ ಮತ್ತು ಅಖಂಡ ಭಗವತ್‌-ಚಿಂತನೆಯ ಬದುಕಿನಿಂದಾಗಿ ಅವರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದರು. ದಿನನಿತ್ಯದ ಸವಾಲುಗಳು ಮತ್ತು ಗುರುದೇವರು ವಹಿಸಿದ ಹೆಚ್ಚುತ್ತಿರುವ ಜವಾಬ್ದಾರಿಗಳ ನಡುವೆಯೂ, ಅವರು ದೇವರ ಮೇಲಿನ ಸಂಪೂರ್ಣ ನಂಬಿಕೆ ಮತ್ತು ಶರಣಾಗತಿಯಿಂದಾಗಿ ಉದ್ಭವಿಸಿದ ಆಂತರಿಕ ಆನಂದವನ್ನು ಹೊರಸೂಸುತ್ತಿದ್ದರು.

“ನಿನ್ನಿಚ್ಛೆಯಂತಾಗಲಿ, ನನ್ನದಂತಲ್ಲ” ಎಂಬುದೇ ಅವರ ಜೀವನದ ಎಲ್ಲಾ ಸಂದರ್ಭಗಳ ಧ್ಯೇಯವಾಕ್ಯವಾಗಿತ್ತು. ಅವರು ವೈಯಕ್ತಿಕ ಪ್ರಸಿದ್ಧಿಯನ್ನು ಅರಸಲಿಲ್ಲ, ಏಕೆಂದರೆ ಅವರು ತಮ್ಮ ಗುರುವಿನ ಪ್ರಾಮಾಣಿಕ ಶಿಷ್ಯೆಯಾಗಿರಬೇಕೆಂದು ಮಾತ್ರ ಬಯಸುತ್ತಿದ್ದರು; ಅವರ ನಾಯಕತ್ವದ ವರ್ಷಗಳಲ್ಲಿ ಅವರ ಪ್ರತಿ ನಿರ್ಧಾರದ ನಿರ್ಣಾಯಕ ಅಂಶವು “ಗುರುಗಳು ಏನು ಬಯಸುತ್ತಿದ್ದರು?” ಎಂಬುದಾಗಿರುತ್ತಿತ್ತು. ತಮ್ಮ ಇಡೀ ಅಸ್ತಿತ್ವದಿಂದ ಗುರುಗಳ ಮಾರ್ಗದರ್ಶನವನ್ನು ತಮ್ಮೊಳಗೆ ಹೀರಿಕೊಂಡರು ಮತ್ತು ಗುರುಗಳ ಸ್ವಭಾವಗಳಾದ ಶಕ್ತಿಯನ್ನೂ ಅನಂತ ಕೋಮಲತೆಯನ್ನೂ ಹೆಚ್ಚು ಹೆಚ್ಚು ಪ್ರತಿಬಿಂಬಿಸಿದರು. ಗುರುಗಳ ಆದರ್ಶಗಳನ್ನು ನಿರ್ಭೀತಿಯಿಂದ ಎತ್ತಿ ಹಿಡಿದರೂ ಎಲ್ಲರಿಗೂ ದಯೆ ಮತ್ತು ತಿಳುವಳಿಕೆಯನ್ನು ನೀಡಿದರು. ಗುರೂಜಿ ಇಹಲೋಕ ತ್ಯಜಿಸುವ ಸ್ವಲ್ಪ ಮುನ್ನ, ಅವರ ಶಿಷ್ಯಂದಿರು ಅವರಿಲ್ಲದೆ ಹೇಗೆ ನಡೆಸಿಕೊಂಡು ಹೋಗಲು ಸಾಧ್ಯ ಎಂಬ ತಮ್ಮ ಚಿಂತೆಯನ್ನು ಆಕೆ ವ್ಯಕ್ತಪಡಿಸಿದಾಗ, ಗುರೂಜಿ ಉತ್ತರಿಸಿದರು, “ನಾನು ಹೋದ ಮೇಲೆ, ಪ್ರೀತಿಯೊಂದೇ ನನ್ನ ಸ್ಥಾನವನ್ನು ತುಂಬಬಲ್ಲುದು.” ಆ ನುಡಿಗಳು ಆಕೆಯ ಹೃದಯದಲ್ಲಿ ಸದಾ ಅಚ್ಚಾಗಿದ್ದವು, ಮತ್ತು ತಾನು ಆ ಪ್ರೀತಿಯೇ ಆಗುವವರೆಗೆ ಆಕೆ ಅದರಂತೆಯೇ ಬದುಕಿದರು. ಅವರ ಆ ಪ್ರೀತಿಯು ಗುರುದೇವನ ಆಧ್ಯಾತ್ಮಿಕ ಕುಟುಂಬವನ್ನು ಅವರ ನಿರ್ಗಮನದ ನಂತರ ಪೋಷಿಸಿತು, ಮತ್ತು ಅದು ಅಸಂಖ್ಯಾತ ಭಕ್ತರಿಗೆ ಗುರುವಿನ ಆಶ್ರಯದ ಸನ್ನಿಧಿಯ ಸ್ಪಷ್ಟ ಭರವಸೆ ನೀಡಿದೆ.

ಗುರುದೇವನ ಜಾಗತಿಕ ಕುಟುಂಬದ ತಾಯಿಯಾಗಿ, ದಯಾ ಮಾತಾಜಿಯವರು ನಮ್ಮೆಲ್ಲರ ಬಗೆಗೂ ತೀವ್ರವಾದ ಕಾಳಜಿಯನ್ನು ಹೊಂದಿದ್ದರು. ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ನಾವು ಗುರೂಜಿಯವರ ಕಾರ್ಯದಲ್ಲಿ ಒಟ್ಟಿಗೆ ಸೇವೆ ಸಲ್ಲಿಸುತ್ತಿರುವಾಗ ನಾವು ಹಂಚಿಕೊಂಡ ದಿವ್ಯ ಸ್ನೇಹವನ್ನು ದೇವರ ಅತ್ಯಂತ ಅಮೂಲ್ಯವಾದ ಆಶೀರ್ವಾದವೆಂದು ನಾನು ನನ್ನ ಹೃದಯದಲ್ಲಿ ಹಿಡಿದಿಟ್ಟುಕೊಂಡಿದ್ದೇನೆ ಮತ್ತು ಗುರುಗಳೊಂದಿಗೆ ಆಕೆಯ ಆಂತರಿಕ ಶ್ರುತಿಗೂಡುವಿಕೆಯಿಂದ ಆಕೆ ನೀಡಿದ ಜ್ಞಾನ ಮತ್ತು ಪ್ರೀತಿಯನ್ನು ಸಂತೋಷದಿಂದ ಅನುಭವಿಸುತ್ತಿದ್ದೇನೆ. ದೇವರ ಮೇಲಿನ ಭಕ್ತಿ ಮತ್ತು ಆತನ ಸೇವೆ ಮಾಡುವ ಬಯಕೆಯಿಂದ ಸದಾ ಉತ್ಸಾಹದಿಂದಿರುತ್ತಿದ್ದ ಆಕೆ ಇತರರಲ್ಲಿ ಆ ಉತ್ಸಾಹವನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು; ಮತ್ತು ಅವರಿಗೆ ನಮ್ಮ ಗೌರವವನ್ನು ತೋರುವ ಅತ್ಯುತ್ತಮ ಮಾರ್ಗವೆಂದರೆ ಗುರೂಜಿಯವರು ನೀಡಿದ ಸಾಧನೆಯನ್ನು ನವೋತ್ಸಾಹದಿಂದ ಅನುಸರಿಸುವುದಾಗಿದೆ. ನಿಮ್ಮ ಪ್ರಯತ್ನಗಳು ಮತ್ತು ಗುರುಗಳ ಆಶೀರ್ವಾದಗಳ ಮೂಲಕ, ನೀವೂ ಕೂಡ ಆಕೆಯ ಜೀವನದಲ್ಲಿ ವ್ಯಾಪಿಸಿದ್ದ ದಿವ್ಯಾನಂದ ಮತ್ತು ಪರಿಪೂರ್ಣ ಪ್ರೀತಿಯನ್ನು ಅನುಭವಿಸುವಂತಾಗಲು, ಆಕೆಯ ಮಾದರಿ ನಿಮಗೆ ಪ್ರೇರಣೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜೈ ಗುರು, ಜೈ ಮಾತಾ!

ದೇವರ ಮತ್ತು ಗುರುದೇವನ ಅಪಾರ ಪ್ರೀತಿಯಲ್ಲಿ,

ಶ್ರೀ ಶ್ರೀ ಮೃಣಾಲಿನಿ ಮಾತಾ

ಕಾಪಿರೈಟ್ © 2014 ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್. ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ