ಪ್ರಪಂಚದ ಎಲ್ಲಾ ನೈಜ ಧರ್ಮಗಳ ಹಿಂದಿರುವ ಏಕಮಾತ್ರ ವಾಸ್ತವವನ್ನು ಪ್ರಚಾರ ಮಾಡುವುದು ಹಾಗೂ ಪೂರ್ವ ಮತ್ತು ಪಶ್ಚಿಮದ ಸತ್ಯಾನ್ವೇಷಕರಿಗೆ ಭಗವತ್ ಸಾಕ್ಷಾತ್ಕಾರ ಎಂಬ ಸಾರ್ವತ್ರಿಕ ವಿಜ್ಞಾನವನ್ನು ಒದಗಿಸುವುದು ಪರಮಹಂಸ ಯೋಗಾನಂದರ ಜೀವಿತಾವಧಿಯ ಧ್ಯೇಯಗಳಲ್ಲಿ ಒಂದಾಗಿತ್ತು. ಪ್ರತಿಯೊಬ್ಬ ಮಾನವನಲ್ಲಿಯೂ ಸುಪ್ತವಾಗಿರುವ ಸಹಜವಾದ ದೈವತ್ವದ ಆಳವಾದ ಅರಿವನ್ನು ಜಾಗೃತಗೊಳಿಸುವ ಸಾಧನವಾಗಿದೆ ಈ ವಿಜ್ಞಾನ ಮಾರ್ಗ.
ಪರಮಹಂಸಜಿಯವರು ಜಗತ್ತಿನ ಧರ್ಮಗಳ ಏಕತ್ವವನ್ನು ತಮ್ಮ ಉಪನ್ಯಾಸಗಳು ಮತ್ತು ಬರಹಗಳ ಮೂಲಕವೂ ಪ್ರಚಾರ ಮಾಡಿದರು. ಇವುಗಳಲ್ಲಿ, ಅವರು ಪೂರ್ವ ಮತ್ತು ಪಶ್ಚಿಮದ ಮಹಾನ್ ಧರ್ಮಗ್ರಂಥಗಳ ಗುಪ್ತ ಆಧ್ಯಾತ್ಮಿಕ ಸತ್ಯಗಳನ್ನು ತಿಳಿಯಪಡಿಸಿದ್ದಾರೆ, ಹಾಗೂ ಈ ಪವಿತ್ರ ಗ್ರಂಥಗಳು ದೇವರೊಂದಿಗಿನ ಏಕತೆಯೆಡೆಗೆ ಅನ್ವೇಷಕನನ್ನು ಎಲ್ಲರಿಗೂ ಒಂದೇ ಆದ ಜಾಗತಿಕ ಮಾರ್ಗದಲ್ಲಿ ಹೇಗೆ ಮುನ್ನೆಡೆಸುತ್ತವೆ ಎಂಬುದನ್ನು ತೋರಿಸಿದ್ದಾರೆ.
ಈ ಪುಟಗಳಲ್ಲಿ, ನಾವು ಯೋಗಾನಂದರ ಅತ್ಯಂತ ಮೆಚ್ಚುಗೆ ಪಡೆದ ವ್ಯಾಖ್ಯಾನಗಳಾದ ಹೊಸ ಒಡಂಬಡಿಕೆಯ ನಾಲ್ಕು ಸುವಾರ್ತೆಗಳು, ಭಾರತದ ಭಗವದ್ಗೀತೆ, ಮತ್ತು ರುಬಾಯತ್ ಆಫ್ ಒಮರ್ ಖಯ್ಯಾಮ್ ನ (ಇದು “ಶಾಸ್ತ್ರ” ಎಂದು ಪರಿಗಣಿಸಲ್ಪಡುವುದಿಲ್ಲವಾದರೂ ವಸ್ತುತಃ ರುಬಾಯತ್ ಇಸ್ಲಾಮಿಕ್ ಸಂಪ್ರದಾಯದಡಿಯಲ್ಲಿ ಬರುವ ಸೂಫಿಗಳ ದೈವಿಕ ಗುಪ್ತ ಸತ್ಯಗಳನ್ನು ಪ್ರತಿಪಾದಿಸುವ ಪ್ರೀತಿಪಾತ್ರವಾದ ಒಂದು ನಿಗೂಢ ಕಾವ್ಯ.) ಕೆಲವು ಆಯ್ದ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಪರಮಹಂಸ ಯೋಗಾನಂದರ ಬರಹಗಳಿಂದ ಇಲ್ಲಿ ಹೆಚ್ಚಿನ ವಿಷಯಗಳನ್ನು ಸೇರಿಸುವುದನ್ನು ಮುಂದುವರಿಸುವುದರಿಂದ ಈ ವಿಭಾಗಕ್ಕೆ ಹಿಂತಿರುಗಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಜೊತೆಗೆ, ಪೂರ್ವ ಮತ್ತು ಪಶ್ಚಿಮದ ಶಾಸ್ತ್ರಗಳಲ್ಲಿನ ಅಂತರ್ನಿಹಿತ ಏಕತೆಯ ವಿಷಯದಲ್ಲಿ ಯೋಗಾನಂದರ ಗುರು ಸ್ವಾಮಿ ಶ್ರೀ ಯುಕ್ತೇಶ್ವರರ ಆಳವಾದ ಗ್ರಂಥವನ್ನು ನಾವು ಎತ್ತಿ ತೋರಿಸುತ್ತೇವೆ.
“ಬ್ರಹ್ಮಾಂಡದ ಸಂಪೂರ್ಣ ಜ್ಞಾನವು ಗೀತೆಯಲ್ಲಿ ತುಂಬಿಕೊಂಡಿದೆ. ಅತ್ಯಂತ ಗಹನವಾದುದಾದರೂ ಆರ್ಥವಾಗುವ ಭಾಷೆಯಲ್ಲಿ ಹೇಳಲಾಗಿದೆ… ಗೀತೆಯನ್ನು ಮಾನುಷ ಹೋರಾಟದ ಮತ್ತು ಆಧ್ಯಾತ್ಮಿಕ ಪ್ರಯತ್ನದ ಎಲ್ಲಾ ಮಟ್ಟಗಳಲ್ಲಿ ಅರ್ಥಮಾಡಿಕೊಳ್ಳಲಾಗಿದೆ ಮತ್ತು ಅನ್ವಯಿಸಲಾಗಿದೆ…ದೇವರ ಬಳಿಗೆ ಹಿಂತಿರುಗುವ ಹಾದಿಯಲ್ಲಿ ಒಬ್ಬರು ಎಲ್ಲಿದ್ದರೂ…. ಗೀತೆಯು ಪ್ರಯಾಣದ ಆ ಭಾಗದ ಮೇಲೆ ತನ್ನ ಬೆಳಕನ್ನು ಚೆಲ್ಲುತ್ತದೆ.”
— ಪರಮಹಂಸ ಯೋಗಾನಂದ

“ಎಲ್ಲಾ ದೇಶಗಳ ಮತ್ತು ಕಾಲದ ಪ್ರವಾದಿಗಳು ತಮ್ಮ ದೇವರ ಅನ್ವೇಷಣೆಯಲ್ಲಿ ಯಶಸ್ವಿಯಾಗಿದ್ದಾರೆ. ನಿಜವಾದ ಜ್ಞಾನೋದಯದ ಸ್ಥಿತಿಯಾದ ನಿರ್ವಿಕಲ್ಪ ಸಮಾಧಿಗೆ ಪ್ರವೇಶಿಸಿದ ಈ ಸಂತರು ಎಲ್ಲಾ ಹೆಸರುಗಳು ಮತ್ತು ರೂಪಗಳ ಹಿಂದಿರುವ ಪರಮ ಸತ್ಯವನ್ನು (ಭಗವಂತನನ್ನು) ಅರಿತುಕೊಂಡಿದ್ದಾರೆ. ಅವರ ಜ್ಞಾನ ಮತ್ತು ಆಧ್ಯಾತ್ಮಿಕ ಸಲಹೆಗಳು ಜಗತ್ತಿನ ಶಾಸ್ತ್ರಗಳಾಗಿವೆ. ಇವು, ಪದಗಳ ವರ್ಣವೈವಿಧ್ಯದ ಆವರಣಗಳ ಕಾರಣದಿಂದ ಹೊರನೋಟಕ್ಕೆ ಭಿನ್ನವಾಗಿದ್ದರೂ, ಎಲ್ಲವೂ ಆತ್ಮದ ಅದೇ ಮೂಲಭೂತ ಸತ್ಯಗಳ ಅಭಿವ್ಯಕ್ತಿಗಳಾಗಿವೆ — ಕೆಲವು ಮುಕ್ತ ಮತ್ತು ಸ್ಪಷ್ಟ, ಉಳಿದವು ಗುಪ್ತ ಅಥವಾ ಸಾಂಕೇತಿಕ.
“ನನ್ನ ಗುರುದೇವ, ಸಿರಾಂಪುರದ ಜ್ಞಾನಾವತಾರ ಸ್ವಾಮಿ ಶ್ರೀಯುಕ್ತೇಶ್ವರ (1855–1936)ರು ಕ್ರಿಶ್ಚಿಯನ್ ಧರ್ಮ ಮತ್ತು ಸನಾತನ ಧರ್ಮದ ಧರ್ಮಗ್ರಂಥಗಳ ಅಂತರ್ನಿಹಿತ ಏಕತೆಯನ್ನು ಗುರುತಿಸಲು ಅತ್ಯಂತ ಯೋಗ್ಯರಾಗಿದ್ದರು. ತಮ್ಮ ಮನಸ್ಸಿನ ನಿರ್ಮಲ ಮೇಜಿನ ಮೇಲೆ ಪವಿತ್ರ ಗ್ರಂಥಗಳನ್ನಿಟ್ಟು, ಅವುಗಳನ್ನು ಅಂತರ್ಬೋಧಿತ ತಾರ್ಕಿಕ ವಿಧಾನವೆಂಬ ಕಿರುಚಾಕುವಿನಿಂದ (scalpel) ವಿಶ್ಲೇಷಿಸಲು, ಮತ್ತು ಧರ್ಮೋಪದೇಶಕರು ಮೂಲತಃ ನೀಡಿದ ಸತ್ಯಗಳಿಂದ, ವಿದ್ವಾಂಸರ ತಪ್ಪು ಅಭಿಪ್ರಾಯಗಳನ್ನು ಮತ್ತು ವ್ಯಾಖ್ಯಾನಗಳನ್ನು ಪ್ರತ್ಯೇಕಿಸಲು ಅವರಿಗೆ ಸಾಧ್ಯವಾಯಿತು.”
— ಪರಮಹಂಸ ಯೋಗಾನಂದ

“ನಾನು ರುಬಾಯತ್‌ನ ಆಧ್ಯಾತ್ಮಿಕ ಅರ್ಥ ವಿವರಣೆಯ ಮೇಲೆ ಕೆಲಸ ಮಾಡುತ್ತಿರುವಂತೆ, ಅದು ನನ್ನನ್ನು ಸತ್ಯದ ಅಂತ್ಯವಿಲ್ಲದ ಚಕ್ರವ್ಯೂಹದೊಳಗೆ ಕರೆದೊಯ್ಯಿತು, ನನಗೆ ವಿಸ್ಮಯದಲ್ಲಿ ಮೈಮರೆತಂತಾಯಿತು. ಈ ಶ್ಲೋಕಗಳಲ್ಲಿ ಖಯ್ಯಾಮ್‌ನ ಆಧ್ಯಾತ್ಮಿಕ ಮತ್ತು ವ್ಯಾವಹಾರಿಕ ತತ್ತ್ವದ ಮೇಲಿನ ಮುಸುಕು ನನಗೆ ‘ದಿವ್ಯ ಸಂತ ಜಾನ್ ರ ರಿವಿಲೇಷನ್’ ಅನ್ನು ನೆನಪಿಸುತ್ತದೆ.“
— ಪರಮಹಂಸ ಯೋಗಾನಂದ