ಪರಿಚಯ

ಕೇವಲ ಶೈಕ್ಷಣಿಕ ವಿದ್ಯಾಭ್ಯಾಸ ಮಾತ್ರ ಜನರನ್ನು ಸಂತೋಷಪಡಿಸುವುದಿಲ್ಲ. ‘ಬದುಕುವುದು-ಹೇಗೆ’ ಎಂಬ — ಒಂದು ಸಾಮರಸ್ಯವಾದ, ನೈತಿಕ ಬದುಕು, ದೃಢ ಸಂಕಲ್ಪ ಶಕ್ತಿ ಮತ್ತು ಆಧ್ಯಾತ್ಮಿಕ ಅರಿವುಳ್ಳ — ಶಿಕ್ಷಣವೇ ಸಂತೋಷವನ್ನು ಉಂಟು ಮಾಡುವುದು.

ಶ್ರೀ ಶ್ರೀ ಪರಮಹಂಸ ಯೋಗಾನಂದ

ಯುವಜನರ ಹಿತದ ಬಗ್ಗೆ ಪರಮಹಂಸ ಯೋಗಾನಂದರಿಗೆ ಬಹಳ ಕಳಕಳಿ ಇತ್ತು ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಜೀವನಪರ್ಯಂತದ ಬಾಧ್ಯತೆಯನ್ನು ತೆಗೆದುಕೊಂಡರು. ಅವರ ಹೆಜ್ಜೆಯಲ್ಲಿಯೇ ಸಾಗುತ್ತಿರುವ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವು (ವೈಎಸ್‌ಎಸ್‌), ಯುವ ಜನತೆಗೆ ಧ್ಯಾನ ಹಾಗೂ ಯುಕ್ತ ಚಟುವಟಿಕೆಗಳ ಒಂದು ಸಮತೋಲಿತ ಜೀವನವನ್ನು ಹೇಗೆ ನಡೆಸುವುದು ಎಂಬುದರ ಬಗ್ಗೆ ವೈವಿಧ್ಯಮಯವಾದ ಹೇಗೆ-ಬದುಕುವುದು ಎಂಬ ಕಾರ್ಯಕ್ರಮಗಳನ್ನು ನಡೆಸುತ್ತದೆ.

ಯೋಗಿಯ ಆತ್ಮಕಥೆಯಲ್ಲಿ ಯೋಗಾನಂದಜಿ ಠಾಕೂರರನ್ನು ಉಲ್ಲೇಖಿಸುತ್ತ ಹೇಳುತ್ತಾರೆ:
“ನಿಜವಾದ ಶಿಕ್ಷಣವನ್ನು ಹೊರಗಿನ ಸಾಧನಗಳಿಂದ ಬಲಾತ್ಕಾರವಾಗಿ ಒಳಕ್ಕೆ ತೂರಿಸಲು ಸಾಧ್ಯವಾಗದು. ಆದರೆ ಅಂತರಂಗದಲ್ಲಿ ಅಡಗಿರುವ ಜ್ಞಾನದ ಅನಂತ ಸಂಗ್ರಹವನ್ನು ಹೊರಕ್ಕೆ ತರಲು ನಿಜವಾದ ಶಿಕ್ಷಣ ಸಹಾಯಮಾಡುತ್ತದೆ.”

ಈ ತತ್ವಕ್ಕನುಗುಣವಾಗಿ, ವೈಎಸ್‌ಎಸ್‌ ಯುವಜನರ ಕಾರ್ಯಕ್ರಮಗಳು, ಯುವ ಜನತೆ ಹೊಸ ಚಟುವಟಿಕೆಗಳ ಕೌಶಲ್ಯಗಳನ್ನು ಕಲಿಯುತ್ತಾ, ಮುಕ್ತವಾಗಿ ತಮ್ಮನ್ನು ತಾವು ಅಭಿವ್ಯಕ್ತಿಸುವುದಕ್ಕೆ, ಅವರ ಅಂತಸ್ಥ ಕೌಶಲ್ಯಗಳನ್ನು ಮತ್ತು ನೈತಿಕ ಗುಣಗಳನ್ನು ಹೊರ ಸೂಸುವಂತಹ ಪೋಷಣೆಯನ್ನು ಮತ್ತು ವಿನೋದಪೂರಿತ ವಾತಾವರಣವನ್ನು ಸೃಷ್ಟಿಸುತ್ತವೆ.

ಎರಡು ವಯೋಮಿತಿಯ ತಂಡಗಳಿಗೆ ಎರಡು ರೀತಿಯ ತರಬೇತಿ

ಎರಡು ವಯೋಮಿತಿಯ ತಂಡಗಳಿಗೆಂದು ಉದ್ದೇಶಿಸಲಾಗಿರುವ ಯುವಜನರ ತರಬೇತಿಯನ್ನು ವೈಎಸ್‌ಎಸ್‌ ಯುವಜನ ಸೇವಾ ಇಲಾಖೆ ಸಂಯೋಜಿಸುತ್ತದೆ:

  1. ಮಕ್ಕಳ ಸತ್ಸಂಗ (ವಯೋಮಾನ 8-12)
  2. ಹದಿಹರೆಯದವರ ಕಾರ್ಯಕ್ರಮ (ವಯೋಮಾನ 13-17), ಮತ್ತು

ಈ ಎರಡೂ ತಂಡಗಳಿಗೆ ಕಾರ್ಯಕ್ರಮಗಳನ್ನು ಎರಡು ರೀತಿಯಲ್ಲಿ ನಡೆಸಲಾಗುತ್ತದೆ–ವ್ಯಕ್ತಿಗತವಾಗಿ ಹಾಗೂ ಆನ್‌ಲೈನ್‌ನಲ್ಲಿ.

ಪ್ರಸ್ತುತ ನಡೆಯುತ್ತಿರುವ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ನಮ್ಮ ವೈಎಸ್ಎಸ್ ಆಶ್ರಮಗಳು ಮತ್ತು ಕೇಂದ್ರಗಳಲ್ಲಿ ಪ್ರತಿ ಭಾನುವಾರ ನಡೆಸುವ ಮಕ್ಕಳ ಸತ್ಸಂಗಗಳು ಮತ್ತು ನೋಯ್ಡಾ ಮತ್ತು ಚೆನ್ನೈ ಆಶ್ರಮಗಳಲ್ಲಿ ಮೇ-ಜೂನ್ ನಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಸೇರಿವೆ.

ನಮ್ಮ ಆನ್‌ಲೈನ್‌ ಕಾರ್ಯಕ್ರಮಗಳಲ್ಲಿ ಮಕ್ಕಳ ಸತ್ಸಂಗ ಹಾಗೂ ಹದಿಹರೆಯದವರ ಕಾರ್ಯಕ್ರಮಗಳು ಸೇರಿವೆ, ಎರಡನ್ನೂ ಸದ್ಯದಲ್ಲೇ ಆರಂಭಿಸಲಾಗುವುದು. ಅಷ್ಟೇ ಅಲ್ಲದೆ, ಪ್ರತಿ ವರ್ಷ ಒಂದು ವಾರದ ಯುವಜನರ ಆನ್‌ಲೈನ್‌ ಬೇಸಿಗೆಯ ಕಾರ್ಯಕ್ರಮವನ್ನು (ಎಸ್‌ಆರ್‌ಎಫ್‌ನ ಸಹಯೋಗದೊಂದಿಗೆ) ನಡೆಸಲಾಗುವುದು. ಇದು ಮಕ್ಕಳು ಮತ್ತು ಹದಿಹರೆಯದವರಿಗೆ, ತಮ್ಮ ಇಡೀ ಜೀವನ ನಡೆಸಲು ಒಂದು ದೃಢವಾದ ಆಧ್ಯಾತ್ಮಿಕ ಹಾಗೂ ನೈತಿಕ ತಳಹದಿಯನ್ನು ಕಟ್ಟಿಕೊಡುತ್ತದೆ. ಎಸ್‌ಆರ್‌ಎಫ್‌ [ವೈಎಸ್‌ಎಸ್‌]ನ 2023ರ ಆನ್‌ಲೈನ್‌ ಬೇಸಿಗೆಯ ಯುವಜನರ ಕಾರ್ಯಕ್ರಮದಲ್ಲಿ 21 ದೇಶಗಳಿಂದ ನೂರಾರು ಮಕ್ಕಳು ಭಾಗವಹಿಸಿದ್ದರು! ಇತರ ಕಾರ್ಯಕ್ರಮಗಳು ಅಭಿವೃದ್ಧಿಯ ಹಂತದಲ್ಲಿವೆ.

ಪ್ರಯೋಜನಗಳು

ಯುವಜನರ ಕಾರ್ಯಕ್ರಮಗಳಿಂದ ಮಕ್ಕಳು ಮತ್ತು ಹದಿಹರೆಯದವರು ಎಷ್ಟು ಲಾಭ ಪಡೆದಿದ್ದಾರೆ ಎಂದು ವರ್ಷಾನುವರ್ಷ ನಮಗೆ ಬರೆದಿದ್ದಾರೆ. ಕೆಲವು ಪ್ರಯೋಜನಗಳೆಂದರೆ:

  • ಭಗವಂತನನ್ನು ಕಂಡುಕೊಳ್ಳಲು ಯೋಗ ಧ್ಯಾನದ ತಂತ್ರಗಳನ್ನು ಕಲಿಯುವುದು
  • ಹೊಸ, ಆಜೀವ ಆಧ್ಯಾತ್ಮಿಕ ಸ್ನೇಹಿತರನ್ನು ಕಂಡುಕೊಳ್ಳುವುದು
  • ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ
  • ಭಯ ಹಾಗೂ ತಳಮಳವನ್ನು ಧೈರ್ಯ ಹಾಗೂ ಶಾಂತಚಿತ್ತದಿಂದ ಎದುರಿಸುವ ಸಾಮರ್ಥ್ಯ
  • ಚೈತನ್ಯದಾಯಕ ವ್ಯಾಯಾಮಗಳು, ಆಸನಗಳು ಮತ್ತು ಪ್ರಾಣಾಯಾಮದ ಮೂಲಕ ಉತ್ತಮ ಆರೋಗ್ಯ
  • ಪರೀಕ್ಷೆಗಳಲ್ಲಿ ಉತ್ತಮವಾಗಿ ಮಾಡುವ ಸಾಮರ್ಥ್ಯ

ಪ್ರಶಂಸಾ ಪತ್ರ

ಎನ್‌.ಬಿ., ಒಬ್ಬ 17 ವರ್ಷದ ಯುವಕ ಬರೆದಿದ್ದಾನೆ: “ನಾನು ಹತ್ತು ವರ್ಷದವನಾಗಿದ್ದಾಗ, ಯುವಜನರ ಕಾರ್ಯಕ್ರಮದಲ್ಲಿ ಏಕಾಗ್ರತೆಯ ಹಾಂಗ್‌-ಸಾ ತಂತ್ರವನ್ನು ಕಲಿತೆ. ನಾನು 15 ವರ್ಷದ ನಂತರವೇ ನಿಜವಾಗಿಯೂ ಧ್ಯಾನವನ್ನು ಪ್ರಯೋಗಾತ್ಮಕವಾಗಿ ಮಾಡಲು ಆರಂಭಿಸಿದೆ. ನಮ್ಮ ಪರೀಕ್ಷೆಯ ಫಲಿತಾಂಶಗಳು ಬಂದಾಗಲೆಲ್ಲ, ಅವುಗಳನ್ನು ನಾನು ವಿಶ್ಲೇಷಿಸುತ್ತಿದ್ದೆ ಮತ್ತು ನಾನು ಇನ್ನೂ ಹೆಚ್ಚು ಗಮನ ಕೊಟ್ಟಿದ್ದಲ್ಲಿ ನಾನು ಮಾಡುತ್ತಿದ್ದ ಹಲವು ತಪ್ಪುಗಳನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತು ಎಂಬುದನ್ನು ಕಂಡುಕೊಂಡೆ. ವರ್ಷದ ಅಂತಿಮ ಪರೀಕ್ಷೆ ಸನ್ನಿಹಿತವಾಗಿತ್ತು. ನನ್ನ ಗುಣಾಂಕ 88% ನ ಸಮೀಪದಲ್ಲೇ ಓಡಾಡುತ್ತಿತ್ತು. ನನಗೆ ಕ್ಯಾಲ್‌ಕ್ಯುಲಸ್‌ ತರಗತಿಯಲ್ಲಿ 100% ಪಡೆಯಬೇಕೆಂದಿತ್ತು.

“ನನ್ನ ಅಂತಿಮ ಪರೀಕ್ಷೆಯ ಹಿಂದಿನ ರಾತ್ರಿ, ಹಾಂಗ್‌-ಸಾ ದ ಶಾಂತಿಯು ನನಗೆ ಅನುಭವವಾಗುವರೆಗೂ ಗಾಢವಾಗಿ ಧ್ಯಾನ ಮಾಡಿದೆ. ಮಾರನೆಯ ದಿನ ನಾನು ಪರೀಕ್ಷೆಯ ಕೊಠಡಿಯನ್ನು ಪ್ರವೇಶಿಸಿದಾಗ, ನಾನು ಶಾಂತವಾಗಿದ್ದೆ ಮತ್ತು ಏಕಾಗ್ರತೆಯನ್ನು ಹೊಂದಿದ್ದೆ. ನಮ್ಮ ಫಲಿತಾಂಶಗಳು ಬಂದಾಗ, ನಾನು ಆನಂದದಿಂದ ಕೇಕೆ ಹಾಕಿದೆ. ನಮ್ಮ ಇಡೀ ತರಗತಿಯಲ್ಲಿ ನಾನೊಬ್ಬನೇ 100% ಅಂಕವನ್ನು ಗಳಿಸಿದ್ದು. ಆಗ ನನಗೆ ಅರಿವಾಯಿತು, ಪ್ರತಿಯೊಬ್ಬರಿಗೂ ಸಾಮಾನ್ಯ-ಜ್ಞಾನ ಹಾಗೂ ಸೂತ್ರಗಳು ತಿಳಿದಿರುತ್ತದೆ. ಆದರೆ ಅದನ್ನು ಪರೀಕ್ಷೆಯಂತಹ ಸಂದರ್ಭದಲ್ಲಿಯ ಒತ್ತಡದ ಸಮಯದಲ್ಲಿ ನೆನಪಿಗೆ ತಂದುಕೊಳ್ಳುವುದೇ ನಿಜವಾಗಿಯೂ ಕಷ್ಟದ ಕೆಲಸ. ಧ್ಯಾನವು ನಾನು ಶಾಂತವಾಗಿರಲು ಮತ್ತು ಕೇಂದ್ರಿತವಾಗಿರಲು ಸಹಾಯ ಮಾಡಿತು, ಮತ್ತು ಅದೇ ನಿಜವಾಗಿಯೂ ನನಗೆ ಶಾಲೆಯಲ್ಲಿ ಸಹಾಯ ಮಾಡಿತು.”

 

ಮಕ್ಕಳ ಸತ್ಸಂಗ

ಯುವಕರಿಗೆ ಯುಕ್ತ ಶಿಕ್ಷಣವನ್ನು ಕೊಡುವ ಉದ್ದೇಶವು ಯಾವಾಗಲೂ ನನ್ನ ಹೃದಯಕ್ಕೆ ಬಹಳ ಹತ್ತಿರವಾದದ್ದಾಗಿತ್ತು….ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು, ಇವುಗಳನ್ನು ಹೆಚ್ಚಿಸದೇ ಇದ್ದಲ್ಲಿ, ಯಾವ ಮನುಷ್ಯನೂ ಕೂಡ ಸಂತೋಷವನ್ನು ಸಮೀಪಿಸಲಾರ, ಅದರೂ ಅವು ವಿಧ್ಯುಕ್ತ ಪಠ್ಯಕ್ರಮದಲ್ಲಿ ಕಡಿಮೆಯಾಗಿದ್ದವು.

ಶ್ರೀ ಶ್ರೀ ಪರಮಹಂಸ ಯೋಗಾನಂದ

ದಕ್ಷಿಣೇಶ್ವರ್‌
ರಾಂಚಿ

ಬಂಗಾಳದ ಒಂದು ಹಳ್ಳಿ ಪ್ರದೇಶದಲ್ಲಿ ಮಹಾನ್‌ ಗುರುಗಳು 1917ರಲ್ಲಿ ಏಳು ಮಕ್ಕಳಿರುವ ಒಂದು ಪುಟ್ಟ ಶಾಲೆಯನ್ನು ತೆರೆಯುವ ಮೂಲಕ ತಮ್ಮ ಕಾರ್ಯವನ್ನು ಆರಂಭಿಸಿದರು. ನಂತರ, ಅವರ ಮಾರ್ಗದರ್ಶನದಲ್ಲಿ ಅಮೆರಿಕೆಯಲ್ಲಿರುವ ಎಸ್‌ಆರ್‌ಎಫ್‌ ಮಂದಿರಗಳು ಮತ್ತು ಕೇಂದ್ರಗಳಲ್ಲಿ ಮೊದಲ ಭಾನುವಾರದ ಶಾಲೆಗಳು ಆರಂಭವಾದವು. ಇಂದು, ವೈಎಸ್‌ಎಸ್‌ ಯುವಜನ ಸೇವೆಗಳ ವಿಭಾಗವು, ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದೆ.

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಜಾಗತಿಕ ಆಧ್ಯಾತ್ಮಿಕ ಕುಟುಂಬದ ನಿರಂತರ ಬೆಳವಣಿಗೆಯೊಂದಿಗೆ, ವೈಎಸ್‌ಎಸ್‌ ಕೇಂದ್ರಗಳು ಮತ್ತು ಮಂಡಳಿಗಳು ನೀಡುತ್ತಿರುವ ಮಕ್ಕಳ ಸತ್ಸಂಗದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯು ಕಂಡುಬರುತ್ತಿದೆ.

ಪ್ರತಿ ವಾರದ ಮಕ್ಕಳ ಸತ್ಸಂಗದ ಉದ್ದೇಶವೇನೆಂದರೆ, ಮಕ್ಕಳಿಗೆ ಇತರ ಆಧ್ಯಾತ್ಮಿಕ ಮಕ್ಕಳ ಸಹವಾಸದಲ್ಲಿ, ಸಮಾನ ಮನಸ್ಕರ ಜೊತೆಯಲ್ಲಿ ಕಲಿಯುವ ಸಾಧ್ಯತೆಯನ್ನು ಒಂದು ಆನಂದಮಯ ಕಲಿಕೆಯ ವಾತಾವರಣವದಲ್ಲಿ ನಿರಂತರವಾಗಿ ನೀಡುವುದೇ ಆಗಿದೆ. ಭಗವಂತನೊಡನೆ ಒಂದು ಪ್ರೇಮಪೂರ್ಣ ಬಾಂಧವ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಮತ್ತು ಹೇಗೆ ಒಂದು ಯುಕ್ತ ನಡುವಳಿಕೆ ಒಂದು ಸಂತೋಷ ತುಂಬಿದ, ಸಮತೋಲಿತ ಜೀವನಕ್ಕೆ ಎಡೆಮಾಡಿಕೊಡುತ್ತದೆ ಎಂಬುದರ ಬಗ್ಗೆ ಅವರನ್ನು ಹುರಿದುಂಬಿಸುವಂತೆ ತರಗತಿಗಳನ್ನು ಆಯೋಜಿಸಲಾಗಿದೆ. ಗೀತ ಗಾಯನದ ಅವಧಿಗಳು ಮತ್ತು ಧ್ಯಾನವು ಪ್ರಜ್ಞಾಪೂರ್ವಕವಾಗಿ ಗಮನ ಕೊಡುವುದನ್ನು ಬೇರೂರಿಸುತ್ತವೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಗುರೂಜಿಯವರ ಬರಹಗಳಿಂದ ಆಯ್ದ ಕಥೆಗಳು ಅವರ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸಾಂಘಿಕ ಚಟುವಟಿಕೆಗಳು ಸಾಂಘಿಕ ಭಾವನೆ, ಸಹಕಾರ, ಮತ್ತು ಸಮರಸವಾದ ಸಂವಹನ ಕೌಶಲಗಳನ್ನು ಉತ್ತೇಜಿಸುತ್ತವೆ.

ಸೃಜನಶೀಲತೆ, ಏಕನಿಷ್ಠ ಸಾಧನೆ, ಮೊದಲ ಹೆಜ್ಜೆ ಇಡುವ ಪ್ರವೃತ್ತಿ ಮತ್ತು ಸಹನೆಯಂತಹ ಒಳ್ಳೆಯ ಗುಣಗಳ ಸ್ವಭಾವಗಳನ್ನು ಕಲಿಸಲು ಆಟಗಳು ಅಥವಾ ಕಲಾ ಕೌಶಲಗಳನ್ನು ಬಹಳಷ್ಟು ಸಲ ಸೇರಿಸಲಾಗುತ್ತದೆ. ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನಗಳಲ್ಲಿ ಮಕ್ಕಳ ವಯೋಮಾನಕ್ಕನುಗುಣವಾದ ಸೂಚನೆಗಳನ್ನು ಕೊಡಲಾಗುತ್ತದೆ. ಇವೆಲ್ಲವುಗಳ ಮುಖ್ಯ ಉದ್ದೇಶವೇನೆಂದರೆ, ಬಹಳಷ್ಟು ಮಾಹಿತಿಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಕಷ್ಟು ಒತ್ತಡವಿರುವಂತಹ ಪಾಠಶಾಲೆಯ ಶಿಕ್ಷಣವನ್ನು ಆದಷ್ಟೂ ದೂರವಿಡಲು ಮತ್ತು ವೈಎಸ್‌ಎಸ್‌ ಬೋಧನೆಗಳನ್ನು ಒಂದು ಆರಾಮವಾದ ಮತ್ತು ಆಕರ್ಷಣೀಯ ರೀತಿಯಲ್ಲಿ ಪ್ರಸ್ತುತಪಡಿಸುವುದೇ ಆಗಿದೆ — ಅಂದರೆ ಮಕ್ಕಳು ಮತ್ತೆ ಮತ್ತೆ ಬೇಕೆಂದು ಬಯಸುವ ರೀತಿಯಲ್ಲಿ ಮಕ್ಕಳ ಸತ್ಸಂಗವನ್ನು ಒಂದು ಸಂತೋಷಕರ ಅನುಭವವನ್ನಾಗಿ ಮಾಡುವುದು.

ಪೋಷಕರು ಹಾಗೂ ಶಿಕ್ಷಕರ ಪಾತ್ರಗಳು

ಪರಮಹಂಸ ಯೋಗಾನಂದರು ಹೇಳಿದ್ದಾರೆ: “ಸ್ವಹಿತಾಸಕ್ತಿಯ ಮಿತಿಯಿಂದಾಚೆಗಿನ ಪ್ರೇಮದ ವಿಸ್ತರಣೆ ಕುಟುಂಬದಿಂದ ಆರಂಭವಾಗುತ್ತದೆ – ಒಬ್ಬನು ತನ್ನಿಂದ ಆಚೆಗೆ ತಲುಪುವುದಕ್ಕೆ ಪೋಷಕರ ಪಾತ್ರವು ಪ್ರಾರಂಭದ ಸಹಜ ಪ್ರೇರಣೆಯನ್ನು ನೀಡುತ್ತದೆ.”

ಪೋಷಕರು ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವನ್ನು ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಮಕ್ಕಳ ಅರಳುತ್ತಿರುವ ಆಧ್ಯಾತ್ಮಿಕ ಜೀವನವನ್ನು ಉತ್ತೇಜಿಸಿದಲ್ಲಿ, ಅದು ಒಂದು ಯಶಸ್ವಿ ಹಾಗೂ ಆನಂದಮಯ ಜೀವನವಾಗಬಹುದು.

ಶಿಕ್ಷಕರು ವಹಿಸುವ ಪಾತ್ರದ ಬಗ್ಗೆ ಶ್ರೀ ದಯಾ ಮಾತಾ, “ನಮ್ಮ ಭಾನುವಾರದ ಶಾಲೆಯ [ಮಕ್ಕಳ ಸತ್ಸಂಗ] ಶಿಕ್ಷಕರು ಜಗತ್ತನ್ನು ಬದಲಿಸಲು ಸಹಾಯ ಮಾಡಬಲ್ಲವರಾದ್ದರಿಂದ, ಅವರು ಒಂದು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದಾರೆ. ಇಂದಿನ ಮಕ್ಕಳಿಗೆ ಅವರ ಜೀವನಗಳಲ್ಲಿ ಭಗವಂತನನ್ನು ಮೊದಲ ಸ್ಥಾನದಲ್ಲಿಡಿ ಎಂಬುದನ್ನು ಕಲಿಸುವುದರಿಂದ, ಯೋಗದಾ ಮಕ್ಕಳ ಸತ್ಸಂಗದ ಶಿಕ್ಷಕರು ನಾಳೆಗಾಗಿ ಒಂದು ಹೊಸ ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತಾರೆ,” ಎಂದು ಹೇಳಿದ್ದಾರೆ.

ಗುರುಗಳ ಮುಂದಿನ ಪೀಳಿಗೆಯ ಭಕ್ತಾದಿಗಳನ್ನು ಬೆಳೆಸಲು, ವೈಎಸ್‌ಎಸ್‌ ಯುವಜನರ ಸೇವಾ ವಿಭಾಗಕ್ಕೆ ಪೋಷಕರ ಮತ್ತು ಶಿಕ್ಷಕರ ಹಾಗೂ ಸ್ವಯಂಸೇವಕ ಕಾರ್ಯನಿರ್ವಾಹಕರ ಸಕ್ರಿಯ ಸಹಯೋಗದ ಅವಶ್ಯಕತೆಯಿದೆ. ಸ್ಥಳೀಯ ಕೇಂದ್ರ ಅಥವಾ ಮಂಡಳಿಯಲ್ಲಿ ಮಕ್ಕಳ ಸತ್ಸಂಗವನ್ನು ಪ್ರಾರಂಭ ಮಾಡಲು ಬಯಸುವವರು, ಮತ್ತು ಪ್ರಸ್ತುತ ಮಕ್ಕಳ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಯಾಗಿ ಸೇವೆ ಸಲ್ಲಿಸ ಬಯಸುವವರು ದಯಮಾಡಿ [email protected] ಯನ್ನು ಸಂಪರ್ಕಿಸಿ.

ಬೇಸಿಗೆಯ ಶಿಬಿರಗಳು

ನೊಯ್ಡಾದಲ್ಲಿ ಬಾಲಕಿಯರಿಗಾಗಿ ಬೇಸಿಗೆಯ ಶಿಬಿರ

ಪರಮಹಂಸ ಯೋಗಾನಂದರ ಆದರ್ಶವಾದ ಸರಳ, ಆರೋಗ್ಯಕರ ಜೀವನವನ್ನು ಪ್ರೇರಣೆಯನ್ನಾಗಿಟ್ಟುಕೊಂಡು, ಯೋಗದಾ ಸತ್ಸಂಗ ಶಾಖಾ ಆಶ್ರಮ, ನೊಯ್ಡಾದಲ್ಲಿ ಮೇ ತಿಂಗಳಿನಲ್ಲಿ ವಾರ್ಷಿಕ ಬಾಲಕಿಯರ ಶಿಬಿರವನ್ನು ನಡೆಸಲಾಯಿತು. ಶಿಬಿರವು, ಭಾಗವಹಿಸುವ ಯುವ ಜನತೆಯಲ್ಲಿ ಆಧ್ಯಾತ್ಮಿಕ ಸಹಭಾಗಿತ್ವದ ಭಾವನೆಯನ್ನು ಬೆಳೆಸುವುದರ ಜೊತೆಗೆ ದೈಹಿಕ, ಮಾನಸಿಕ ಹಾಗು ಆಧ್ಯಾತ್ಮಿಕ ಬೆಳವಣಿಗೆಯನ್ನು ಕಲಿಯುವ ಒಂದು ಸಮಗ್ರ ಕಲಿಕೆಯ ವಾತಾವರಣವನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಬಾಲಕಿಯರು ಸಮೂಹ ಧ್ಯಾನದ ಮುನ್ನ ಪ್ರಾರಂಭಿಕ ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವುದು
ಪರಿಸರದ ಜಾಗೃತಿಯನ್ನು ಮೂಡಿಸಲು ಹದಿಹರೆಯದ ಮಕ್ಕಳ ಒಂದು ತಂಡ ಒಂದು ಕುಶಲಕರ್ಮದ ಕಾರ್ಯದಲ್ಲಿ ತೊಡಗಿದ್ದಾರೆ

ಶಿಬಿರದ ಮುಖ್ಯಾಂಶಗಳು

  • ಪ್ರತಿದಿನ ಸಮೂಹ ಧ್ಯಾನ
  • ಗೀತಗಾಯನದ ತರಗತಿಗಳು
  • ಪ್ರಥಮ ಚಿಕಿತ್ಸೆ, ತುರ್ತು ಸೇವೆಗಳು ಮತ್ತು ಅಗ್ನಿರಹಿತ ಅಡಿಗೆ, ಇತ್ಯಾದಿಯಂತಹವುಗಳ ಬಗ್ಗೆ ವಾಸ್ತವಿಕ ಜ್ಞಾನ
  • ಟೇಕ್‌ವೊಂಡೊ ತರಗತಿಗಳು ಮತ್ತು ಆಟದ ತರಗತಿಯಂತಹ ಶಾರೀರಿಕ ಚಟುವಟಿಕೆಗಳು
  • ಕುಶಲಕರ್ಮದ ಕಾರ್ಯಗಳು
  • ಸಮಯದ ನಿರ್ವಹಣೆ
  • ಇಮೇಲ್‌ನ ಶಿಷ್ಟಾಚಾರ ಹಾಗೂ ಆನ್‌ಲೈನ್‌ ಸುರಕ್ಷೆ
ನೊಯ್ಡಾದಲ್ಲಿ ನಡೆದ 2023ರ ಬಾಲಕಿಯರ ಶಿಬಿರದಲ್ಲಿ ಭಕ್ತ ಸ್ವಯಂಸೇವಕರು ಮತ್ತು ಬಾಲಕಿಯರು
ಗೀತಗಾಯನದ ತರಗತಿ ನಡೆಯುತ್ತಿರುವುದು

ಬದುಕುವುದು-ಹೇಗೆ ತರಗತಿಗಳು

ಏಕಾಗ್ರತೆ, ಚಾರಿತ್ರ್ಯದ ಬೆಳವಣಿಗೆ, ಸಂಕಲ್ಪ ಶಕ್ತಿ, ಆತ್ಮವಿಮರ್ಶೆ ಮತ್ತು ಯಶಸ್ಸಿನ ನಿಯಮದಂತಹ ವಿಷಯಗಳ ಬಗ್ಗೆ ಅನುಭವಿ ಶಿಕ್ಷಕರಿಂದ “ಬದುಕುವುದು-ಹೇಗೆ” ಸರಣಿಯ ತರಗತಿಗಳನ್ನು ನಡೆಸಲಾಗುತ್ತದೆ. ಶಿಬಿರದ ಕಲಾಪದಲ್ಲಿ ಪ್ರತಿ ದಿನ ಚೈತನ್ಯದಾಯಕ ವ್ಯಾಯಾಮಗಳು ಹಾಗೂ ಯೋಗಾಸನಗಳ ಜೊತೆಗೆ ಮೂರು ಬಾರಿಯ ಧ್ಯಾನದ ಅವಧಿಯನ್ನು ಆಯೋಜಿಸಲಾಗುತ್ತದೆ.

ಆಡಿಯೊ-ವೀಡಿಯೊ ಮತ್ತು ನೇರ ಪ್ರದರ್ಶನಗಳು

ಸಂಜೆಯ ಕಾರ್ಯಕ್ರಮಗಳ ಒಂದು ಸರಣಿಯು ಭಾಗವಹಿಸುವವರಲ್ಲಿ ಆಧ್ಯಾತ್ಮಿಕ ಹುರುಪನ್ನು ಬೇರೂರಿಸುತ್ತದೆ ಮತ್ತು ಅವರ ಆಧ್ಯಾತ್ಮಿಕ ಜ್ಞಾನ ಹಾಗೂ ತಿಳಿವನ್ನು ಗಾಢವಾಗಿಸುತ್ತದೆ. ಇವುಗಳಲ್ಲಿ ಗುರೂಜಿಯವರ ಮೇಲಿನ ವೀಡಿಯೋ ಪ್ರದರ್ಶನಗಳು, ಭಾರತದ ಸಂತರ ಬಗ್ಗೆ ಪ್ರದರ್ಶನಗಳು ಮತ್ತು ಭಜನೆ ಗಾಯನದ ಅವಧಿಗಳು ಸೇರಿವೆ.

ಸಾಮಾನ್ಯವಾಗಿ ಐದು ದಿನದ ಶಿಬಿರ, ಒಂದು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಯುಕ್ತವಾಗಿ ಬಾಳುವ ಕಲೆಯನ್ನು ಕಲಿಯಿರಿ. ನಿಮ್ಮಲ್ಲಿ ಸಂತೋಷವಿದ್ದಲ್ಲಿ, ನಿಮ್ಮ ಬಳಿ ಎಲ್ಲವೂ ಇದ್ದಂತೆ.

ಶ್ರೀ ಶ್ರೀ ಪರಮಹಂಸ ಯೋಗಾನಂದ

ನೊಯ್ಡಾ ಆಶ್ರಮದಲ್ಲಿ ಬಾಲಕರಿಗಾಗಿ ಬೇಸಿಗೆಯ ಶಿಬಿರ

ಬಾಲಕರ ಬೇಸಿಗೆಯ ಶಿಬಿರವು ಆನಂದಮಯ, ಯುಕ್ತವಾಗಿ ಬಾಳುವ ಆದರ್ಶದ ಮೇಲೆ ಗಮನ ಹರಿಸುತ್ತದೆ. ಇದು ಯೋಗದಾ ಸತ್ಸಂಗ ಶಾಖಾ ಆಶ್ರಮ, ನೊಯ್ಡಾದಲ್ಲಿ ಪ್ರತಿ ವರ್ಷ ಜೂನ್‌ನಲ್ಲಿ ನಡೆಸುವ ಐದು ದಿನದ ಶಿಬಿರ. ಕಾರ್ಯಕ್ರಮವು, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಬಾಲಕರ ಸರ್ವಾಂಗೀಣ ಬೆಳವಣಿಗೆಗೆ ಇಂಬುಕೊಡುತ್ತದೆ.

ಸ್ವಾಮಿ ಅಲೋಕಾನಂದರು ಬಾಲಕರಿಗಾಗಿ ಒಂದು ಪರಿಚಯಾತ್ಮಕ ತರಬೇತಿಯನ್ನು ನಡೆಸುತ್ತಿದ್ದಾರೆ
ಕ್ರೀಡೆಗಳು ಮತ್ತು ಪಂದ್ಯಗಳು ಮಕ್ಕಳಲ್ಲಿ ಒಂದು ಒಟ್ಟಾಗಿ ಕೆಲಸ ಮಾಡುವ ಹಾಗೂ ಭ್ರಾತೃಭಾವವನ್ನು ಬೇರೂರಿಸುತ್ತವೆ.

ಪರಿಚಯ

ವೈಎಸ್‌ಎಸ್‌ ಸನ್ಯಾಸಿಗಳು ನಡೆಸಿಕೊಡುವ ಮೊದಲ ದಿನದ ಕಾರ್ಯಕ್ರಮವು ಪರಿಚಯದ ತರಗತಿಯೊಂದಿಗೆ ಆರಂಭವಾಗುತ್ತದೆ. ಭಾಗವಹಿಸುವವರು ಶಿಬಿರದ ಒಂದು ಸುರಕ್ಷಿತ ಹಾಗೂ ಅನಂದಮಯ ವಾತಾವರಣದಿಂದ ಗರಿಷ್ಠ ಲಾಭ ಪಡೆಯುವುದಕ್ಕೆ ಸಹಾಯ ಮಾಡಲು ಯುಕ್ತ ನಡುವಳಿಕೆಯ ಸಿದ್ಧಾಂತಗಳ ವ್ಯವಸ್ಥೆಯನ್ನು ಸ್ಪಷ್ಟವಾಗಿ ನಿರೂಪಿಲಾಗುತ್ತದೆ — “ಮಾಡುವಂತದ್ದು ಮತ್ತು ಮಾಡಬಾರದಂತದ್ದು.”

ಕಾರ್ಯಾಗಾರಗಳು ಮತ್ತು ಬದುಕುವುದು-ಹೇಗೆ ತರಗತಿಗಳು

ಭಾಗವಹಿಸುವ ಯುವಜನತೆಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನುವು ಮಾಡಿಕೊಡಲು ಶಿಬಿರದ ಅವಧಿಯಲ್ಲಿ ಕಾರ್ಯಗಾರಗಳ ಒಂದು ಸರಣಿ ಹಾಗೂ ಆಟಪಾಟಗಳಿರುತ್ತವೆ. ಕಲಾಕೌಶಲಗಳು, ವೇದಿಕ್‌ ಗಣಿತ, ಇಮೇಲ್‌ ಶಿಷ್ಟಾಚಾರ, ಸಮಯದ ನಿರ್ವಹಣೆ, ಸಂಗೀತ, ಸಾರ್ವಜನಿಕ ಭಾಷಣ ಹಾಗೂ ಪರಿಸರ ಜಾಗೃತಿಯಂತಹ ವಿವಿಧ ವಿಷಯಗಳ ಮೇಲೆ ಕಾರ್ಯಗಾರಗಳನ್ನು ನಡೆಸಲಾಗುತ್ತದೆ. ಪ್ರಥಮ ಚಿಕಿತ್ಸೆ ಹಾಗೂ ತುರ್ತು ನಿರ್ವಹಣೆಯ ಮೇಲೂ ತರಗತಿಗಳನ್ನು ನಡೆಸಲಾಗುತ್ತದೆ. ಆಟದ ಸಮಯದಲ್ಲಿ, ಬಾಲಕರು ಕಾಲ್ಚೆಂಡು, ಹ್ಯಾಂಡ್‌ ಬಾಲ್‌, ನಾಯಿ-ಮತ್ತು-ಮೂಳೆ ಮತ್ತು ಕಬಡ್ಡಿಯಂತಹ ಹಲವಾರು ಆಟಗಳನ್ನು ಆಡುತ್ತಾರೆ. ‘ಯಶಸ್ಸಿನ ನಿಯಮ’ ಮತ್ತು ‘ಆರೋಗ್ಯ ಮತ್ತು ನೈರ್ಮಲ್ಯ’ ದಂತಹ ವೈಯಕ್ತಿಕ ಬೆಳವಣಿಗೆಯ ವಿಷಯಗಳನ್ನು ಕೂಡ ಕೂಲಂಕುಷವಾಗಿ ಅಧ್ಯಯನ ಮಾಡಲಾಗುತ್ತದೆ.

ಪ್ರತಿದಿನ ಮುಂಜಾನೆ ಬಾಲಕರು ಯೋಗಾಸನಗಳ ಅವಧಿಗಾಗಿ ಬೇಗನೆ ಏಳುತ್ತಾರೆ.
2023ರ ನೊಯ್ಡಾ ಬಾಲಕರ ಶಿಬಿರದಲ್ಲಿ ಸನ್ಯಾಸಿಗಳು, ಭಕ್ತ ಸ್ವಯಂಸೇವಕರು ಮತ್ತು ಬಾಲಕರು

ಆಧ್ಯಾತ್ಮಿಕ ಬೋಧನೆ

ಶಿಬಿರದ ಚಟುವಟಿಕೆಗಳ ತಿರುಳೆಂದರೆ ಬಾಲಕರಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಯೋಗಾಸನಗಳ ಅಭ್ಯಾಸದ ನಂತರ ಚೈತನ್ಯದಾಯಕ ವ್ಯಾಯಾಮಗಳು ಹಾಗೂ ಧ್ಯಾನದ ಸಾಮೂಹಿಕ ಅಭ್ಯಾಸವಿರುತ್ತದೆ. ಇವನ್ನು ಸನ್ಯಾಸಿಗಳು ಮತ್ತು ಸ್ವಯಂಸೇವಕ ಭಕ್ತಾದಿಗಳು ಇಬ್ಬರೂ ನಡೆಸಿಕೊಡುತ್ತಾರೆ. ವೈಎಸ್‌ಎಸ್‌ ಬೋಧನೆಗಳು ಮತ್ತು ಭಾರತೀಯ ಆಧ್ಯಾತ್ಮಿಕ ಸಾಹಿತ್ಯದ ಬಗ್ಗೆ ಸನ್ಯಾಸಿಗಳಿಂದ ವಿಶೇಷ ಕಥಾ ನಿರೂಪಣೆಯ ಅವಧಿಗಳಿರುತ್ತವೆ. ಭಗವಂತ ಹಾಗೂ ಗುರುಗಳೊಡನೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಬಾಲಕರನ್ನು ಉತ್ತೇಜಿಸುವುದಕ್ಕೆ ಹಿರಿಯ ಸನ್ಯಾಸಿಗಳಿಂದ ವಿಶೇಷ ತರಗತಿಗಳನ್ನು ಏರ್ಪಡಿಸಲಾಗುತ್ತದೆ.

ಮುಕ್ತಾಯದ ಕಾರ್ಮಕ್ರಮವನ್ನು ಒಂದು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬೆಸೆಯಲಾಗಿರುತ್ತದೆ. ಶಿಬಿರದಲ್ಲಿ ಭಾಗವಹಿಸಿದವರು ಅವರ ಅಪೂರ್ವ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಸ್ಲೈಡ್‌ಶೋ ಪ್ರದರ್ಶನ ಹಾಗೂ ಸನ್ಯಾಸಿಯೊಬ್ಬರು ಮಾಡುವ ಉತ್ತೇಜಕ ಪ್ರವಚನವನ್ನು ಕೇಳುವ ಮೂಲಕ ಪೋಷಕರು ಶಿಬಿರದ ಚಟುವಟಿಕೆಗಳ ಇಣುಕು ನೋಟಗಳನ್ನು ಕಾಣುವ ಅವಕಾಶವನ್ನು ಹೊಂದುತ್ತಾರೆ.

ಚೆನ್ನೈ ಆಶ್ರಮದಲ್ಲಿ ನಡೆದ ಬಾಲಕ ಬಾಲಕಿಯರ ಬೇಸಿಗೆ ಶಿಬಿರ

ಇಂತಹದೇ ಒಂದು ಬೇಸಿಗೆಯ ಶಿಬಿರವು ಮೇ ಮತ್ತು ಜೂನ್‌ ತಿಂಗಳುಗಳಲ್ಲಿ ಚೆನ್ನೈ ಆಶ್ರಮದ ಶ್ರೀಪೆರಂಬುದೂರಿನಲ್ಲಿ ಕೂಡ ನಡೆಯಿತು.

ಹದಿಹರೆಯದವರ ಕಾರ್ಯಕ್ರಮ

“ಆತ್ಮಗಳು ಒಟ್ಟುಗೂಡಿ ಭಗವಂತನಲ್ಲಿ ಪ್ರಗತಿಯನ್ನು ಅನ್ವೇಷಿಸಿದಾಗ, ದಿವ್ಯ ಮಿತ್ರತ್ವವು ಅರಳುತ್ತದೆ. ನಿಜವಾದ ಸ್ನೇಹಿತರೊಡನೆ ಹೃದಯದ ಸದ್ಗುಣಗಳನ್ನು ಆಧ್ಯಾತ್ಮಿಕಗೊಳಿಸಿದಾಗ ಮತ್ತು ಪರಿಪೂರ್ಣಗೊಳಿಸಿದಾಗ, ಮತ್ತು ಆ ಪ್ರೇಮದ ವರ್ತುಲವನ್ನು ಅದು ಸರ್ವವ್ಯಾಪಕವಾಗುವವರೆಗೂ ವಿಸ್ತರಿಸಿದಾಗ, ಒಬ್ಬರು ಎಲ್ಲ ಸ್ನೇಹಿತರ ಸ್ನೇಹಿತನನ್ನು ಕಾಣುತ್ತಾರೆ.”

ಶ್ರೀ ಶ್ರೀ ಪರಮಹಂಸ ಯೋಗಾನಂದ

ವೈಎಸ್‌ಎಸ್‌ ಯುವ ಕಾರ್ಯಕ್ರಮವು 13ರಿಂದ 19ವರ್ಷದ ಮಕ್ಕಳಿಗಾಗಿರುತ್ತದೆ. ಇದರ ಉದ್ದೇಶ, ಪರಮಹಂಸ ಯೋಗಾನಂದರ ಬದುಕುವುದು-ಹೇಗೆ ಬೋಧನೆಗಳ ಅಭ್ಯಾಸದಿಂದ ಮಕ್ಕಳಿಗೆ ಅವರ ಬದುಕಿಗೆ ಒಂದು ಆಧ್ಯಾತ್ಮಿಕ ತಳಹದಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದಾಗಿದೆ—ಇದರಲ್ಲಿ ವೈಜ್ಞಾನಿಕ ಧ್ಯಾನದ ಜೊತೆಗೂಡಿದ ಸೃಜನಾತ್ಮಕ ಕ್ರಿಯೆಗಳ ಒಂದು ಸಮತೋಲಿತ ವ್ಯವಸ್ಥೆ ಸೇರಿದೆ. 

ಯೌವ್ವನದ ಕಾಲವು ಬಾಲ್ಯಾವಸ್ಥೆ ಮತ್ತು ಪ್ರೌಢವಯಸ್ಸಿನ ನಡುವೆಯ ಸಂಕ್ರಮಣದ ಕಾಲವಾಗಿದೆ. ಯುವ ವಯಸ್ಕನು ಈ ಅವಧಿಯಲ್ಲಿ ಬೃಹತ್‌ ಶಾರೀರಿಕ ಮತ್ತು ಮಾನಸಿಕ ಬದಲಾವಣೆಯನ್ನು ಹಾದುಹೋಗುತ್ತಾನೆ. ಅದೇ ಸಮಯದಲ್ಲಿ, ಅವರು ತಮ್ಮ ಉದ್ಯೋಗ ಹಾಗೂ ಬದುಕಿನ ಆಯ್ಕೆಗಳ ಒತ್ತಡದ ಬಗ್ಗೆ ನೋಡಿಕೊಳ್ಳಬೇಕಾಗುತ್ತದೆ. ಅಂತಹ ಒಂದು ನಿರ್ಧಾರಕ ಹಂತದಲ್ಲಿ, ಮಕ್ಕಳು ಆಧ್ಯಾತ್ಮಿಕ ಸ್ನೇಹಿತರ ಒಂದು ಸಮಾನ ದರ್ಜೆಯ ವಿಶ್ವಸನೀಯ ತಂಡದ ಮತ್ತು ಸಲಹೆಗಾರರ ಬೆಂಬಲದಿಂದ ಬಹಳವಾಗಿ ಪ್ರಯೋಜನವನ್ನು ಪಡೆಯುತ್ತಾರೆ. 

ಯೋಗದಾ ಯುವ ಕಾರ್ಯಕ್ರಮದಲ್ಲಿ, ಯುವಜನರು ಅಂತಹದೇ ಒಂದು ವಿಶ್ವಸನೀಯ ತಂಡವನ್ನು ಕಂಡುಕೊಳ್ಳುತ್ತಾರೆ. ವಾರಾಂತ್ಯದ ಕಾರ್ಯಕ್ರಮಗಳು, ಬೇಸಿಗೆಯ ಶಿಬಿರಗಳು ಮತ್ತು ಆಧ್ಯಾತ್ಮಿಕ ಧ್ಯಾನ ಶಿಬಿರಗಳ ಜೊತೆಗೂಡಿದ ವ್ಯಕ್ತಿತ್ವ ವಿಕಸನದ ಅಂತರ್‌ದೃಷ್ಟಿಯ ಚರ್ಚೆಗಳು, ಸ್ವ-ಅರಿವಿನ ಆನ್‌ಲೈನ್‌ ಮತ್ತು ವೈಯಕ್ತಿಕ ಕಾರ್ಯಗಾರಗಳು ಮತ್ತು ಘೋಷ್ಠಿಗಳ ಮೂಲಕ ಈ ಯುವಕರನ್ನು ಬೆಂಬಲಿಸಲು ವೈಎಸ್‌ಎಸ್‌ ಬಯಸುತ್ತದೆ.

ಇತ್ತೀಚಿನ ಕಾರ್ಯಕ್ರಮಗಳು

2024ರ ಬೇಸಿಗೆಯಲ್ಲಿ ವೈಎಸ್‌ಎಸ್‌ ಒಂದು ಪ್ರಾರಂಭಿಕ ಆನ್‌ಲೈನ್‌ ಯುವ ಪ್ರಾಯೋಗಿಕ ಕಾರ್ಯಕ್ರಮವನ್ನು ನಡೆಸಿತು—2024ರ ಜುಲೈ-ಸೆಪ್ಟಂಬರ್‌ನಲ್ಲಿ ಹತ್ತು ವಾರಗಳ ಕಾಲ ಯುವಕರಿಗಾಗಿ ನಡೆದ ಪ್ರತಿ ವಾರದ ಸತ್ಸಂಗ. ಈ ಆನ್‌ಲೈನ್‌ ಕಾರ್ಯಕ್ರಮವನ್ನು ಹೆಚ್ಚಿಸಿ ಭಾರತದಾದ್ಯಂತದ ಎಲ್ಲ ಯುವಕರೂ ಇದರಲ್ಲಿ ಭಾಗವಹಿಸುವಂತೆ ಮಾಡುತ್ತೇವೆಂದು ನಮಗೆ ಭರವಸೆಯಿದೆ. 2024ರ ಶರತ್ಕಾಲದಲ್ಲಿ ವೈಎಸ್‌ಎಸ್‌ ರಾಂಚಿಯಲ್ಲಿ ಉತ್ತೇಜಕರ ಫಲಿತವನ್ನು ನೀಡಿದ ಒಂದು ವೈಯಕ್ತಿಕ ಭಾನುವಾರದ ಯುವ ಸತ್ಸಂಗವನ್ನು ಆರಂಭಿಸಲಾಯಿತು. ಇಲ್ಲಿ ಮತ್ತಷ್ಟು ಓದಿ. ಇತರ ಸ್ಥಳಗಳಲ್ಲೂ ಇಂತಹದೇ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಾವು ಉದ್ದೇಶಿಸಿದ್ದೇವೆ. 

ವೈಎಸ್‌ಎಸ್‌ ಯುವಜನ ಸೇವೆಗಳ ವಿಭಾಗದಲ್ಲಿ ಲಭ್ಯವಿರುವ ಸೇವೆಯ ಅವಕಾಶಗಳಿಗಾಗಿ ಹಾಗೂ ಸಾಮಾನ್ಯ ವಿಚಾರಣೆಗಳಿಗಾಗಿ, ದಯಮಾಡಿ [email protected] ಗೆ ಭೇಟಿ ನೀಡಿ.

ಆನ್‌ಲೈನ್‌ ಎಸ್‌ಆರ್‌ಎಫ್‌ ಕಾರ್ಯಕ್ರಮಗಳು

ಅಮೆರಿಕದಲ್ಲಿ ಸ್ಥಿತವಾಗಿರುವ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಯುವಜನ ಸೇವಾ ವಿಭಾಗವು, ಎಸ್‌ಆರ್‌ಎಫ್‌ ಮಂದಿರಗಳು ಹಾಗೂ ಕೇಂದ್ರಗಳಲ್ಲಿ ಹಲವಾರು ದಶಕಗಳಿಂದ “ಬದುಕುವುದು-ಹೇಗೆ” (ಭಾನುವಾರದ ಶಾಲೆ) ತರಗತಿಗಳನ್ನು ನಡೆಸುತ್ತಿದೆ. ಹಿಂದಿನ ಕೆಲವು ವರ್ಷಗಳಲ್ಲಿ, ಎಸ್‌ಆರ್‌ಎಫ್‌ ಯುವಜನ ಸೇವಾ ವಿಭಾಗವು ಜಗದಾದ್ಯಂತದ ಮಕ್ಕಳಿಗಾಗಿ ಆನ್‌ಲೈನ್‌ ತರಗತಿಗಳನ್ನು ನಡೆಸಲು ಪ್ರಾರಂಭಿಸಿದೆ. ಭಾರತದಲ್ಲಿರುವ ಮಕ್ಕಳು ಕೂಡ ಈ ತರಗತಿಗಳಿಗೆ ಅವರಿಗೆ ಅನುಕೂಲವಾಗುವಂತಹ ಸಮಯದಲ್ಲಿ ನೋಂದಣಿ ಮಾಡಿಕೊಳ್ಳಲು ಅವರನ್ನು ಸ್ವಾಗತಿಸುತ್ತಿದ್ದೇವೆ.

ಮಕ್ಕಳು ಹಾಗೂ ಹದಿಹರೆಯದವರಿಗೆ ಸದ್ಯದಲ್ಲಿರುವ ಎಲ್ಲ ಕಾರ್ಯಕ್ರಮಗಳನ್ನು ನೋಡಲು ಮತ್ತು ಆ ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಕೊಳ್ಳಲು ದಯಮಾಡಿ ಎಸ್‌ಆರ್‌ಎಫ್‌ ಯುವಜನ ಸೇವೆಗಳ ಕಾರ್ಯಕ್ರಮಗಳ ಪುಟಕ್ಕೆ ಭೇಟಿ ನೀಡಿ.

ಇದನ್ನು ಹಂಚಿಕೊಳ್ಳಿ