ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು
ಕೋಪವಿಲ್ಲದಿರುವುದು ಮನಃಶಾಂತಿಯೆಡೆಗೆ ಶೀಘ್ರವಾದ ದಾರಿ. ಒಬ್ಬರ ಆಸೆಗಳಿಗೆ ಅಡ್ಡಿಯುಂಟಾದರೆ ಅದು ಕೋಪಕ್ಕೆ ಎಡೆಮಾಡಿಕೊಡುತ್ತದೆ…ಯಾರು ಇನ್ನೊಬ್ಬರಿಂದ ಏನನ್ನೂ ಅಪೇಕ್ಷಿಸುವುದಿಲ್ಲವೋ, ಆದರೆ ತನ್ನ ಎಲ್ಲ ಈಡೇರಿಕೆಗಳಿಗೆ ಭಗವಂತನ ಕಡೆ ನೋಡುತ್ತಾನೋ ಅವನು ತನ್ನ ಸಹಚರರ ಮೇಲೆ ಕೋಪಗೊಳ್ಳುವುದಿಲ್ಲ ಅಥವಾ ಅವರೆಡೆಗೆ ನಿರಾಶಾಭಾವವನ್ನು ಹೊಂದುವುದಿಲ್ಲ. ಭಗವಂತನು ಜಗತ್ತನ್ನು ನಡೆಸುತ್ತಿದ್ದಾನೆ ಎಂಬ ಅರಿವಿನಿಂದಲೇ ಒಬ್ಬ ಜ್ಞಾನಿಯು ಸಮಾಧಾನದಿಂದಿರುತ್ತಾನೆ….ಅವನು ಕೋಪ, ಹಗೆತನ ಹಾಗೂ ಅಸಮಾಧಾನದಿಂದ ಮುಕ್ತನಾಗಿರುತ್ತಾನೆ.
ಯಾವುದಕ್ಕಾಗಿ ಕೋಪವುಂಟಾಗಿದೆಯೋ ಆ ಉದ್ದೇಶವನ್ನೇ ಕೋಪವು ನಿರರ್ಥಕಗೊಳಿಸುತ್ತದೆ. ಕೋಪವು ಕೋಪಕ್ಕೆ ಮದ್ದಲ್ಲ. ಕಡು ಕೋಪವು ಇನ್ನೊಬ್ಬರು ತಮ್ಮ ಮಂದ ಕೋಪವನ್ನು ನಿಗ್ರಹಿಸುವಂತೆ ಮಾಡಬಹುದು, ಆದರೆ ಅದು ಎಂದೂ ಮಂದಕೋಪವನ್ನು ಕೊನೆಗಾಣಿಸುವುದಿಲ್ಲ. ನೀವು ಕೋಪಗೊಂಡಾಗ ಏನೂ ಮಾತನಾಡಬೇಡಿ. ಅದು ಶೀತ-ನೆಗಡಿಯಂತಹ ಒಂದು ವ್ಯಾಧಿಯೆಂದು ತಿಳಿದು, ನಿಮಗೆ ಬೇಕಾದವರೊಂದಿಗೆ, ಅವರು ಹೇಗೇ ವರ್ತಿಸಿದರೂ ನೀವು ಅವರ ಮೇಲೆ ಎಂದೂ ಕೋಪಗೊಳ್ಳಲು ಸಾಧ್ಯವಿಲ್ಲವೋ ಅಂಥವರ ಬಗ್ಗೆ ಯೋಚಿಸುವ ಮೂಲಕ ಮಾನಸಿಕ ಬೆಚ್ಚನೆಯ ಸ್ನಾನದಿಂದ ಕೋಪವನ್ನು ಕೊನೆಗಾಣಿಸಿ. ನಿಮ್ಮ ಉದ್ವೇಗವು ಬಹಳ ಜೋರಾಗಿದ್ದಲ್ಲಿ, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ, ಅಥವಾ ಹಿಮ್ಮೆದುಳಿನ ಮೇಲೆ (ಮೆಡುಲ್ಲಾ ಅಬ್ಲಾಂಗೇಟಾ) ಮತ್ತು ಕಿವಿಗಳಿಂದ ಸ್ವಲ್ಪ ಮೇಲಿರುವ ಗಂಡಸ್ಥಳಗಳ (ಟೆಂಪಲ್ಸ್) ಮೇಲೆ, ಮತ್ತು ಹಣೆಯ ಮೇಲೆ, ವಿಶೇಷವಾಗಿ ಭ್ರೂಮಧ್ಯದಲ್ಲಿ ಹಾಗೂ ತಲೆಯ ಮೇಲ್ಭಾಗದಲ್ಲಿ ಸಣ್ಣ ಮಂಜುಗಡ್ಡೆಯನ್ನಿರಿಸಿ.

ಕೋಪವು ಈರ್ಷ್ಯೆ, ದ್ವೇಷ, ಮತ್ಸರ, ಪ್ರತೀಕಾರ ಭಾವನೆ, ವಿಧ್ವಂಸಕ ಪ್ರವೃತ್ತಿ, ಉದ್ರಿಕ್ತ ಆಲೋಚನೆಗಳು, ಮಿದುಳಿನ ನಿಷ್ಕ್ರಿಯ ಸ್ಥಿತಿ ಹಾಗೂ ತಾತ್ಕಾಲಿಕ ಬುದ್ಧಿವಿಕಲ್ಪಕ್ಕೆ ಎಡೆಮಾಡಿಕೊಡುತ್ತದೆ – ಇವುಗಳಲ್ಲಿ ಯಾವುದೇ ಆದರೂ ಕೂಡ ಅದು ಭಯಾನಕ ದುಷ್ಕೃತ್ಯಗಳಿಗೆ ಎಡೆಮಾಡಿಕೊಡಬಹುದು. ಇದು ಶಾಂತಿ ಮತ್ತು ಸಮಾಧಾನಕ್ಕೆ ವಿಷಕಾರಿಯಾಗಿದೆ. ಇದು ವಿವೇಚನೆಗೆ ವಿಷಕಾರಿಯಾಗಿದೆ. ಕೋಪವು ತಪ್ಪುತಿಳುವಳಿಕೆಯ ವರ್ತನೆಯಾಗಿದೆ. ಕೋಪದಿಂದ ಇತರರನ್ನು ಜಯಿಸಲು ಬಯಸುವುದು ಅವಿವೇಕಿಗಳ ವಿಧಾನ, ಏಕೆಂದರೆ, ಕೋಪವು ಶತ್ರುವಿನಲ್ಲಿ ಹೆಚ್ಚು ಕ್ರೋಧವನ್ನು ಉಂಟುಮಾಡುತ್ತದೆ ಮತ್ತು ಅದು ಅವನನ್ನು ಹೆಚ್ಚು ಬಲಶಾಲಿ ಮತ್ತು ಶಕ್ತಿಶಾಲಿಯನ್ನಾಗಿಸುತ್ತದೆ. ಹಾನಿಮಾಡದೆ ಕೇಡಾಗುವುದನ್ನು ತಪ್ಪಿಸಿಕೊಳ್ಳಲು ತೋರುವ ಯುಕ್ತ ಕೋಪವು ಕೆಲವೊಮ್ಮೆ ಒಳ್ಳೆಯದನ್ನು ಉಂಟುಮಾಡುತ್ತದೆ. ವಿವೇಚನೆ ಇಲ್ಲದ, ಅನಿಯಂತ್ರಿತ ಕೋಪವು ಪ್ರತೀಕಾರದ ಭಾವನೆಯಿಂದ ಕೂಡಿರುತ್ತದೆ ಮತ್ತು ದ್ವೇಷದಿಂದ ಕೂಡಿರುತ್ತದೆ; ಇದು ನೀವು ಕೊನೆಗಾಣಿಸಬೇಕೆಂದಿರುವ ದುಷ್ಕೃತ್ಯವನ್ನು ಇನ್ನೂ ಹೆಚ್ಚಿಸುತ್ತದೆ. ಯಾರು ನಿಮಗೆ ಕೋಪವನ್ನು ಉಂಟುಮಾಡಿ ಆನಂದಿಸುತ್ತಾರೆಂದು ಕಾಣುತ್ತದೆಯೋ ಅವರನ್ನು ನಿರ್ಲಕ್ಷಿಸಿ.
ಕೋಪ ಬಂದಾಗ, ಕೋಪವನ್ನು ಆಚೆ ದೂಡುವ ಶಾಂತಿ, ಪ್ರೇಮ ಹಾಗೂ ಕ್ಷಮಾಗುಣದ ಪ್ರತ್ಯೌಷಧವನ್ನು ಉತ್ಪಾದಿಸುವ ನಿಮ್ಮ ಪ್ರಶಾಂತತೆಯ ಯಂತ್ರೋಪಕರಣವನ್ನು ಚಾಲನೆಗೊಳಿಸಿ. ಪ್ರೇಮದ ಬಗ್ಗೆ ಚಿಂತಿಸಿ, ಮತ್ತು ಹೇಗೆ ನೀವು ಇತರರು ನಿಮ್ಮ ಮೇಲೆ ಕೋಪಗೊಳ್ಳಬಾರದು ಎಂದು ಬಯಸುತ್ತೀರೋ ಹಾಗೆ ಇತರರೂ ಕೂಡ ನಿಮ್ಮ ಕೆಟ್ಟ ಕೋಪವನ್ನು ಅನುಭವಿಸಬಾರದು ಎಂದು ನೀವು ಕೂಡ ಬಯಸುತ್ತೀರಿ ಎಂಬುದರ ಬಗ್ಗೆ ಚಿಂತನೆ ಮಾಡಿ. ನೀವು ಏಸುವಿನ ಹಾಗೆ ಆದಾಗ ಮತ್ತು ಎಲ್ಲ ಮಾನವರೂ ಒಬ್ಬರಿನ್ನೊಬ್ಬರಿಗೆ ನೋವುಂಟು ಮಾಡಬಯಸುವ ಕಿರಿಯ ಸಹೋದರರು ಎಂದು ನೋಡಿದಾಗ (“ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ”), ನೀವು ಯಾರ ಮೇಲೆಯೂ ಕೋಪಗೊಳ್ಳಲಾರಿರಿ. ಅಜ್ಞಾನವೇ ಎಲ್ಲ ಕೋಪಗಳ ಜನನಿ.
ಕೋಪವನ್ನು ನಿರ್ಮೂಲ ಮಾಡಲು ತತ್ತ್ವ ಜಿಜ್ಞಾಸೆಯನ್ನು ಬೆಳೆಸಿಕೊಳ್ಳಿ. ಕೋಪವನ್ನುಂಟು ಮಾಡುವವನನ್ನು ಭಗವಂತನ ಮಗು ಎಂಬಂತೆ ನೋಡಿ; ಪ್ರಾಯಶಃ ತಿಳಿಯದೇ ನಿಮ್ಮನ್ನು ತಿವಿದ ಒಬ್ಬ ಐದು ವರ್ಷದ ಚಿಕ್ಕ ತಮ್ಮನಂತೆ ಅವನನ್ನು ನೋಡಿ. ಇದಕ್ಕೆ ಪ್ರತಿಯಾಗಿ ನೀವು ಚಿಕ್ಕ ತಮ್ಮನಿಗೆ ತಿವಿಯುವಂತಹ ಅಪೇಕ್ಷೆಯನ್ನು ಹೊಂದಬಾರದು. “ಕೋಪದಿಂದ ನಾನು ನನ್ನ ಶಾಂತಿಯನ್ನು ಹಾಳು ಮಾಡಿಕೊಳ್ಳುವುದಿಲ್ಲ; ಕಡುಕೋಪದಿಂದ ನಾನು ನನ್ನ ಸಹಜ ಸಂತೋಷ-ನೀಡುವ ಪ್ರಶಾಂತತೆಯನ್ನು ಭಂಗ ಮಾಡಿಕೊಳ್ಳುವುದಿಲ್ಲ.” ಎಂದು ಹೇಳಿಕೊಂಡು ಮಾನಸಿಕವಾಗಿ ಕೋಪವನ್ನು ನಿರ್ಮೂಲ ಮಾಡಿ.

ಸರಿಸುಮಾರಾಗಿ ಎರಡು ರೀತಿಯ ಜನರಿದ್ದಾರೆ: ಭೂಮಿಯ ಮೇಲೆ ಏನೋ ತಪ್ಪಿದೆ ಎಂದು ಸದಾ ಗೊಣಗಾಡುವವರು, ಮತ್ತು ಜೀವನದ ಸಮಸ್ಯೆಗಳನ್ನು ಮುಗುಳ್ನಗುತ್ತಾ ಹಿಂದೆ ಸರಿಸಿ ಸದಾ ತಮ್ಮ ಆಲೋಚನೆಯಲ್ಲಿ ಧನಾತ್ಮಕವಾಗಿರುವವರು. ಎಲ್ಲವನ್ನೂ ಏಕೆ ಗಂಭೀರವಾಗಿ ತೆಗೆದುಕೊಳ್ಳಬೇಕು? ಪ್ರತಿಯೊಬ್ಬರೂ ಹೆಚ್ಚು ಧನಾತ್ಮಕ ಹಾಗೂ ಹೆಚ್ಚು ಸಾಮರಸ್ಯದಿಂದ ಕೂಡಿದವರಾಗಿದ್ದಲ್ಲಿ ಈ ಜಗತ್ತು ಎಷ್ಟು ಸುಂದರವಾಗಿರಬಹುದು!
ನಾಗರೀಕತೆಯ ಕಾಡಿನಲ್ಲಿ, ಆಧುನಿಕತೆಯ ಜೀವನದ ಒತ್ತಡದಲ್ಲಿಯೇ, ಪರೀಕ್ಷೆ ಇರುವುದು. ನೀವು ಏನನ್ನು ಕೊಡುವಿರೊ ಅದು ನಿಮಗೆ ಹಿಂತಿರುಗಿ ಬರುತ್ತದೆ. ದ್ವೇಷಿಸಿ, ಪ್ರತಿಫಲವಾಗಿ ನಿಮಗೆ ದ್ವೇಷ ಸಿಗುತ್ತದೆ. ನೀವು ನಿಮ್ಮಲ್ಲಿ ಅಸಾಮರಸ್ಯದ ವಿಚಾರಗಳನ್ನು ಮತ್ತು ಭಾವನೆಗಳನ್ನು ತುಂಬಿಕೊಂಡರೆ ನಿಮ್ಮನ್ನು ನೀವೇ ನಾಶಪಡಿಸಿಕೊಳ್ಳುತ್ತೀರಿ. ಯಾರೊಂದಿಗೇ ಆಗಲಿ ಏಕೆ ಹಗೆ ಸಾಧಿಸುವುದು ಅಥವಾ ಕೋಪಿಸಿಕೊಳ್ಳುವುದು? ನಿಮ್ಮ ಶತ್ರುಗಳನ್ನು ಪ್ರೀತಿಸಿ. ಕೋಪದ ತಾಪದಲ್ಲಿ ಏಕೆ ಬೇಯುವಿರಿ? ನಿಮಗೆ ಕೋಪ ಬಂದಾಗ ಅದನ್ನು ಆಗಿಂದಾಗಲೇ ಕೊನೆಗಾಣಿಸಿಬಿಡಿ. ಹೊರಗೆ ತಿರುಗಾಡಲು ಹೋಗಿ, ಹತ್ತು ಅಥವಾ ಹದಿನೈದರವರೆಗೆ ಎಣಿಸಿ, ಅಥವಾ ನಿಮ್ಮ ಮನಸ್ಸನ್ನು ಯಾವುದಾದರೂ ಸಂತೋಷದ ವಿಷಯದತ್ತ ಹೊರಳಿಸಿ. ಪ್ರತೀಕಾರದ ಆಸೆಯನ್ನು ಬಿಟ್ಟುಬಿಡಿ. ನೀವು ಕೋಪಗೊಂಡಾಗ ನಿಮ್ಮ ಮಿದುಳು ಅತಿಯಾಗಿ ಕಾದಿರುತ್ತದೆ, ನಿಮ್ಮ ಹೃದಯದಲ್ಲಿ ಕವಾಟದ ತೊಂದರೆ ಕಾಣಿಸಿಕೊಳ್ಳುತ್ತದೆ, ಇಡೀ ಶರೀರವು ನಿತ್ರಾಣಗೊಳ್ಳುತ್ತದೆ. ಶಾಂತಿ ಮತ್ತು ಒಳ್ಳೆಯತನವನ್ನು ಹೊರಹೊಮ್ಮಿಸಿ; ಏಕೆಂದರೆ ಅದು ನಿಮ್ಮೊಳಗಿರುವ ಭಗವಂತನ ಪ್ರತಿಬಿಂಬದ ಸ್ವಭಾವ — ನಿಮ್ಮ ಸಹಜ ಸ್ವಭಾವ. ಆಗ ಯಾರೂ ನಿಮ್ಮನ್ನು ತೊಂದರೆಪಡಿಸಲು ಸಾಧ್ಯವಿಲ್ಲ.
ನಿಮಗೆ ಒಳ್ಳೆಯ ಹವ್ಯಾಸವೊಂದನ್ನು ಹುಟ್ಟುಹಾಕಬೇಕೆಂದಿದ್ದರೆ ಅಥವಾ ಒಂದು ದುರಭ್ಯಾಸವನ್ನು ಹೋಗಲಾಡಿಸಬೇಕೆಂದಿದ್ದರೆ, ಹವ್ಯಾಸಗಳ ರಚನೆಯ ಉಗ್ರಾಣವಾದ ಮೆದುಳಿನ ಜೀವಕೋಶಗಳತ್ತ ಮನಸ್ಸನ್ನು ಏಕಾಗ್ರಗೊಳಿಸಬೇಕು. ಒಳ್ಳೆಯ ಹವ್ಯಾಸವನ್ನು ಬೆಳೆಸಲು ಧ್ಯಾನ ಮಾಡಿ; ನಂತರ ಗಮನವನ್ನು ಹುಬ್ಬುಗಳ ನಡುವೆ ಇರುವ ಇಚ್ಛಾಶಕ್ತಿಯ ಕೇಂದ್ರವಾದ ಕೂಟಸ್ಥದಲ್ಲಿರಿಸಿ, ನೀವು ಹುಟ್ಟುಹಾಕಬೇಕೆಂದಿರುವ ಒಳ್ಳೆಯ ಹವ್ಯಾಸವನ್ನು ಆಳವಾಗಿ ಹೇಳಿಕೊಳ್ಳಿ. ನಿಮಗೆ ದುರಭ್ಯಾಸಗಳನ್ನು ಹೋಗಲಾಡಿಸಬೇಕೆಂದಿದ್ದರೆ, ಕೂಟಸ್ಥ ಕೇಂದ್ರದಲ್ಲಿ ಗಮನವಿರಿಸಿ, ದುರಭ್ಯಾಸಗಳ ಎಲ್ಲ ಕೊರಕಲುಗಳು ಅಳಿಸಿಹೋಗುತ್ತಿವೆ ಎಂದು ದೃಢವಾಗಿ ಹೇಳಿಕೊಳ್ಳಿ.

ಈ ತಂತ್ರದ ಪರಿಣಾಮಕಾರಿತ್ವದ ಬಗ್ಗೆ ನಾನು ನಿಮಗೊಂದು ನಡೆದ ಸತ್ಯ ಕಥೆಯನ್ನು ಹೇಳುತ್ತೇನೆ. ಭಾರತದಲ್ಲಿ, ಒಬ್ಬ ಕೋಪಿಷ್ಠ ವ್ಯಕ್ತಿ ನನ್ನ ಬಳಿ ಬಂದ. ಅವನಿಗೆ ಕೋಪ ಬಂದಾಗ ತನ್ನ ಮೇಲಧಿಕಾರಿಗಳು ಎಂದೂ ಕೂಡ ನೋಡದೆ ಮುಖಕ್ಕೆ ಬಾರಿಸುವುದರಲ್ಲಿ ನಿಷ್ಣಾತನಾಗಿದ್ದ. ಹೀಗಾಗಿ, ಅವನು ಒಂದರ ನಂತರ ಒಂದು ಕೆಲಸವನ್ನು ಕಳೆದುಕೊಳ್ಳುತ್ತಿದ್ದ. ಅವನು ಎಷ್ಟು ಅನಿಯಂತ್ರಿತವಾಗಿ ಸಿಟ್ಟುಗೇಳುತ್ತಿದ್ದನೆಂದರೆ, ಅವನಿಗೆ ತೊಂದರೆ ಕೊಟ್ಟವರ ಕಡೆಗೆ ತನ್ನ ಕೈಗೆ ಸಿಕ್ಕ ಯಾವುದೇ ವಸ್ತುವನ್ನು ಎಸೆಯುತ್ತಿದ್ದ. ಅವನು ನನ್ನ ಸಹಾಯ ಕೇಳಿದ. ನಾನು ಅವನಿಗೆ ಹೇಳಿದೆ, “ಮುಂದಿನ ಸಲ ನಿನಗೆ ಕೋಪ ಬಂದಾಗ, ನೀನು ಪ್ರತಿಕ್ರಿಯಿಸುವ ಮುನ್ನ ಒಂದರಿಂದ ನೂರರವರೆಗೆ ಎಣಿಸು.” ಅವನು ಅದನ್ನು ಪ್ರಯತ್ನ ಮಾಡಿದ. ಆದರೆ ಹಿಂತಿರುಗಿ ಬಂದು ನನಗೆ ಹೇಳಿದ, “ನಾನು ಹಾಗೆ ಎಣಿಸುವಾಗ ಇನ್ನೂ ಹೆಚ್ಚು ಕೋಪಗೊಳ್ಳುತ್ತೇನೆ. ನಾನು ಎಣಿಸುವಾಗ, ಇನ್ನೂ ಅಷ್ಟು ಕಾಲ ಕಾಯಬೇಕಲ್ಲ ಎಂದು ಕೋಪದಿಂದ ಕುರುಡನಾಗುತ್ತೇನೆ.” ಅವನ ಪರಿಸ್ಥಿತಿ ನಿರಾಶಾದಾಯಕವಾಗಿದ್ದಂತೆ ಕಂಡಿತು.
ಆಗ ನಾನು ಅವನಿಗೆ ಕ್ರಿಯಾ ಯೋಗದ ಅಭ್ಯಾಸ ಮಾಡಲು ಹೇಳಿದೆ, ಈ ಮುಂದಿನ ಸೂಚನೆಯ ಜೊತೆಗೆ: “ನಿನ್ನ ಕ್ರಿಯಾದ ಅಭ್ಯಾಸದ ನಂತರ, ದಿವ್ಯ ಪ್ರಕಾಶ ನಿನ್ನ ಮಿದುಳಿನೊಳಗೆ ಹೋಗುತ್ತಿದೆ, ಅದನ್ನು ಸಾಂತ್ವನಗೊಳಿಸುತ್ತಿದೆ, ನಿನ್ನ ನರಗಳನ್ನು ಶಾಂತಗೊಳಿಸುತ್ತಿದೆ, ನಿನ್ನ ಉದ್ವೇಗಗಳನ್ನು ಶಾಂತಗೊಳಿಸುತ್ತಿದೆ, ನಿನ್ನ ಎಲ್ಲ ಕೋಪವನ್ನು ಅಳಿಸಿ ಹಾಕುತ್ತಿದೆ ಎಂದು ಆಲೋಚಿಸು.” ಎಂದು ಹೇಳಿದೆ. ಅದಾದ ನಂತರ ಕೆಲವೇ ದಿನಗಳ ಬಳಿಕ ಅವನು ಮತ್ತೆ ನನ್ನ ಬಳಿಗೆ ಬಂದ, ಮತ್ತು ಈ ಸಲ ಅವನು ಹೇಳಿದ, “ನಾನು ಕೋಪದ ಪ್ರವೃತ್ತಿಯಿಂದ ಮುಕ್ತನಾಗಿದ್ದೇನೆ. ನಾನು ತಮಗೆ ಬಹಳ ಆಭಾರಿಯಾಗಿದ್ದೇನೆ.”
“ಇದುವರೆಗೆ ನನ್ನ ಮನಸ್ಸನ್ನು ನೋಯಿಸಿದ ಎಲ್ಲರನ್ನೂ ನಾನು ಈ ದಿನ ಕ್ಷಮಿಸುತ್ತೇನೆ. ಬಾಯಾರಿದ ಎಲ್ಲ ಹೃದಯಗಳಿಗೆ, ನನ್ನನ್ನು ಪ್ರೀತಿಸುವವರಿಗೂ, ಪ್ರೀತಿಸದವರಿಗೂ ನಾನು ನನ್ನ ಪ್ರೀತಿಯನ್ನು ಹಂಚುತ್ತೇನೆ.”
ನಾನು ಅವನನ್ನು ಪರೀಕ್ಷಿಸಲು ನಿರ್ಧರಿಸಿದೆ. ಕೆಲವು ಹುಡುಗರಿಗೆ ಅವನೊಂದಿಗೆ ಜಗಳವಾಡುವಂತೆ ಹೇಳಿದೆ. ಆಗುವುದನ್ನು ನೋಡಲು ನಾನು, ಅವನು ದಿನ ನಿತ್ಯ ಅಡ್ಡಾಡುತ್ತಿದ್ದ ಉದ್ಯಾನದ ಹಾದಿಯಲ್ಲಿ ಒಂದು ಕಡೆ ಅವಿತು ನಿಂತೆ. ಅವನನ್ನು ಜಗಳವಾಡುವಂತೆ ಪ್ರಚೋದಿಸಲು ಹುಡುಗರು ಮತ್ತೆ ಮತ್ತೆ ಪ್ರಯತ್ನಿಸಿದರು. ಆದರೆ ಅವನು ಪ್ರತಿಕ್ರಿಯಿಸಲೇ ಇಲ್ಲ. ಅವನು ತನ್ನ ಶಾಂತತೆಯನ್ನು ಹಾಗೇ ಕಾಪಾಡಿಕೊಂಡಿದ್ದ.
ಧೃಢೀಕರಣ
ಧೃಢೀಕರಣದ ಸಿದ್ಧಾಂತ ಮತ್ತು ಸೂಚನೆಗಳು
“ನನ್ನಲ್ಲಿರುವ ಕೋಪದ ಬಾಧೆಗಳನ್ನು ಆತ್ಮ-ಗೌರವದ ಲೇಪನದಿಂದ ಹಾಗೂ ಇತರಲ್ಲಿರುವ ಕೋಪದ ಬಾಧೆಯನ್ನು ದಯೆಯ ಮುಲಾಮಿನಿಂದ ಉಪಶಮನಗೊಳಿಸುವಂತೆ ನನ್ನನ್ನು ಆಶೀರ್ವದಿಸು.”
ಹೆಚ್ಚಿನ ಅನ್ವೇಷಣೆಗಾಗಿ
- ಬೆಳಕಿರುವೆಡೆ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- ಇನ್ನರ್ ಪೀಸ್: ಹೌ ಟು ಬಿ ಕಾಮ್ಲಿ ಆಕ್ಟಿವ್ ಅಂಡ್ ಆಕ್ಟಿವ್ಲಿ ಕಾಮ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- “ದಿ ಸೈಕಾಲಜಿ ಆಫ್ ಟಚಿನೆಸ್,” ಜರ್ನಿ ಟು ಸೆಲ್ಫ್-ರಿಯಲೈಝೇಷನ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- ಡಿಸ್ಕೋರ್ಸ್ 27 “ದಿ ಸ್ಪಿರಿಚ್ಯುಯಲ್ ಡೇಂಜರ್ಸ್ ಆಫ್ ವಯಲೆನ್ಸ್ ಅಂಡ್ ಆಂಗರ್,” ದಿ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್: ದಿ ರಿಸರೆಕ್ಷನ್ ಆಫ್ ದಿ ಕ್ರೈಸ್ಟ್ ವಿದಿನ್ ಯು ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- “ಅಂಡರ್ಸ್ಟ್ಯಾಂಡಿಂಗ್ ಅದರ್ಸ್” ಅಂಡ್ “ಲೆಸನ್ಸ್ ವಿ ಕ್ಯಾನ್ ಲರ್ನ್ ಫ್ರಂ ಅದರ್ಸ್,” ಓನ್ಲಿ ಲವ್ ಶ್ರೀ ಶ್ರೀ ದಯಾ ಮಾತಾರಿಂದ