ಭಗವದ್ಗೀತೆಯಲ್ಲಿ ಅಡಗಿರುವ ಸತ್ಯಗಳು

ಭಗವದ್ಗೀತೆಯ ಮೇಲಿನ ಪರಮಹಂಸ ಯೋಗಾನಂದರ ಎರಡು ಸಂಪುಟಗಳ ವ್ಯಾಖ್ಯಾನದಿಂದ ಆಯ್ದ ಭಾಗಗಳು: (ಅರ್ಜುನನೊಂದಿಗೆ ಭಗವಂತನ ಸಂವಾದ – ಶ್ರೀಮದ್ಭಗವದ್ಗೀತೆ) ಗಾಡ್‌ ಟಾಕ್ಸ್‌ ವಿತ್‌ ಅರ್ಜುನ — ದಿ ಭಗವದ್‌ ಗೀತಾ

ಭಗವದ್ಗೀತೆ: ಒಂದು ಸಾರ್ವತ್ರಿಕ ಗ್ರಂಥ

ಗೀತೆಯ ಕಾಲಾತೀತ ಮತ್ತು ಸಾರ್ವತ್ರಿಕ ಸಂದೇಶವು ಅದರ ಸತ್ಯದ ಸಮಗ್ರ ಅಭಿವ್ಯಕ್ತಿಯಾಗಿದೆ.

ಭಗವದ್ಗೀತೆ ಎಂದರೆ “ಭಗವಂತನ ಗಾನ”, ಮನುಷ್ಯ ಮತ್ತು ಅವನ ಸೃಷ್ಠಿಕರ್ತನ ನಡುವಿನ ಸತ್ಯ-ಸಾಕ್ಷಾತ್ಕಾರದ ದೈವೀ ಸಂವಹನ. ಆತ್ಮದ ಮೂಲಕ ಆಧ್ಯಾತ್ಮ ಬೋಧೆ, ಅದು ನಿರಂತರ ಜಪಿಸಬೇಕಾದದ್ದು. ಸತ್ಯ ಮತ್ತು ಅಸೀಮ ವಿದ್ವತ್ತಿನ ಆಗರವಾಗಿರುವ ಗೀತೆಯ ಕೇವಲ 7೦೦ ಸಂಕ್ಷಿಪ್ತ ಶ್ಲೋಕಗಳಲ್ಲಿ, ಜಗತ್ತಿನ ಎಲ್ಲಾ ಮಹಾನ್ ಗ್ರಂಥಗಳೂ ಸಮಾನವಾದ ಸೌಹಾರ್ದತೆಯನ್ನು ಕಾಣಬಹುದು.

ಬ್ರಹ್ಮಾಂಡದ ಸಂಪೂರ್ಣ ಜ್ಞಾನವು ಗೀತೆಯಲ್ಲಿ ತುಂಬಿದೆ. ಅತ್ಯಂತ ಆಳವಾದ ಆದರೂ ಸರಳವಾದ ಭಾಷೆಯ ಮುಖಾಂತರ ಇದರ ಸೌಂದರ್ಯ ಹಾಗೂ ಸರಳತೆ ಪ್ರತಿಬಿಂಬಿತವಾಗಿದೆ. ಹಾಗೂ ಮಾನವ ಪ್ರಯತ್ನ ಮತ್ತು ಆಧ್ಯಾತ್ಮಿಕ ಸಾಧನೆಯ ಎಲ್ಲಾ ಸ್ಥರಗಳಲ್ಲೂ ಬಂದೊದಗುವ ಮನುಷ್ಯರ ಹತಾಶ ಸ್ವಭಾವಗಳು ಮತ್ತು ಅಗತ್ಯಗಳಿಗೆ ಪೂರಕವಾಗಿ, ಅರ್ಥೈಸಿ ಅನ್ವಯಿಸಬಹುದಾವಾದ ವಿಶಾಲ ವ್ಯಾಪ್ತಿ ಮತ್ತು ಆಶ್ರಯವನ್ನು ಕರುಣಿಸಿದೆ. ಯಾರೇ ಆಗಲಿ, ಭಗವಂತನಲ್ಲಿಗೆ ಮರಳುವ ಪ್ರಯತ್ನ ಆರಂಭಿಸಿದಾಗ, ಪ್ರಯಾಣದ ಆ ಭಾಗಕ್ಕೆ ಗೀತೆಯು ಬೆಳಕು ಚೆಲ್ಲುತ್ತದೆ.

ಗೀತೆಯಲ್ಲಿನ ಯೋಗದ ಸಾಂಕೇತಿಕ ಹಾಗೂ ರೂಪಕದ ಒಗಟಿನ ಭೇದನೆ

Krishna and Arjuna on chariot (Rath)ಪ್ರಾಚೀನ ಪವಿತ್ರ ಬರಹಗಳು ಇತಿಹಾಸವನ್ನು ಸಂಕೇತಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸುವುದಿಲ್ಲ; ಬದಲಾಗಿ ಅವು ಧರ್ಮಗ್ರಂಥಗಳನ್ನು ಪ್ರಚುರ ಪಡಿಸುವಲ್ಲಿ ಹೆಚ್ಚಾಗಿ ಇವೆರಡನ್ನೂ ಬೆರೆಸುತ್ತಾರೆ. ಪ್ರವಾದಿಗಳು ಅವರ ಕಾಲದ ದೈನಂದಿನ ಜೀವನದ ಘಟನೆಗಳು ಮತ್ತು ನಿದರ್ಶನಗಳ ಮೂಲಕ, ಸೂಕ್ಷ್ಮ ಆಧ್ಯಾತ್ಮಿಕ ಸತ್ಯಗಳನ್ನು ಸಾದೃಶ್ಯವಾಗಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸದ ಹೊರತು, ದೈವಿಕ ಅಗಾಧತೆಗಳು ಸಾಮಾನ್ಯ ಜನರಿಗೆ ಮನವರಿಕೆಯಾಗಿವುದಿಲ್ಲ. ಇನ್ನೂ ಆಧ್ಯಾತ್ಮಿಕವಾಗಿ ಪಕ್ವಗೊಳ್ಳದ ಹಾಗೂ ಮೌಢ್ಯದಿಂದ ತುಂಬಿದ ಮನಸ್ಥಿತಿಗಳಿಂದ ರಕ್ಷಿಸುವ ಸಲುವಾಗಿ, ಆಗಾಗ್ಗೆ ಧರ್ಮಗ್ರಂಥಗಳ ಪ್ರವರ್ತಕರು ಸಾಂಕೇತಿಕ ಹಾಗೂ ಒಗಟುಗಳ ರೂಪದಲ್ಲಿ ಆತ್ಮದ ಆಳವಾದ ಸತ್ಯವನ್ನು ಮರೆಮಾಚಿದರು.

ಉಪಮೆ, ರೂಪಕ ಮತ್ತು ಸಾಂಕೇತಿಕ ಭಾಷೆಯಲ್ಲಿ ಭಗವದ್ಗೀತೆಯನ್ನು ಅತ್ಯುತ್ಕೃಷ್ಟ ವಿವೇಕದಿಂದ ವ್ಯಾಸ ಮಹರ್ಷಿಯು ವಿರಚಿಸಿದ್ದಾರೆ. ಮಾನಸಿಕ ಮತ್ತು ಆಧ್ಯಾತ್ಮಿಕ ಸತ್ಯಗಳೊಂದಿಗೆ, ಐತಿಹಾಸಿಕ ಸಂಗತಿಗಳನ್ನು ಹೆಣೆದು, ಪ್ರಕ್ಷುಬ್ಧ ಆಂತರಿಕ ಕದನಗಳ ವರ್ಣಚಿತ್ರವನ್ನು ಶಬ್ದಗಳಲ್ಲಿ ಚಿತ್ರಿಸಿದ್ದಾರೆ. ಭೂಮಿಯ ಮೇಲೆ ಶ್ರೀ ಕೃಷ್ಣನ ಅವತಾರದ ಅಂತ್ಯದೊಂದಿಗೆ, ನಾಗರಿಕತೆಯು ಅವರೋಹಣ, ಯುಗಗಳ ಅಂಧಕಾರ, ಅಜ್ಞಾನ ಮತ್ತು ವಿನಾಶದಿಂದ ಆಧ್ಯಾತ್ಮಿಕ ಸತ್ಯಗಳನ್ನು ರಕ್ಷಿಸುವ ಸಲುವಾಗಿ, ಅವರು ಸಾಂಕೇತಿಕತೆಯ ಕಠಿಣವಾದ ಚಿಪ್ಪಿನ ಮೇಲೆ ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಮೂಡಿಸಿದರು.

para-ornament

ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು ಅರ್ಜುನನಿಗೆ ಹೇಳಿದ ಮಾತುಗಳು ಏಕಕಾಲದಲ್ಲಿ ಯೋಗ ವಿಜ್ಞಾನದ ಮೇಲಿನ ಮಹಾನ್ ಗ್ರಂಥ, ಭಗವಂತನೊಡನೆ ಸಂಯೋಗ ಮತ್ತು ನಿತ್ಯ ಜೀವನಕ್ಕೆ ಪಠ್ಯಪುಸ್ತಕ ಹೀಗೆ ಎಲ್ಲವೂ ಆಗಿದೆ. ಪ್ರತೀ ಶಿಷ್ಯನೂ ಅರ್ಜುನನೊಂದಿಗೆ ಹಂತ ಹಂತವಾಗಿ ಮುನ್ನಡೆದು, ಆಧ್ಯಾತ್ಮಿಕ ಸಂದೇಹ ಮತ್ತು ಭಯದ ಮರ್ತ್ಯ ಪ್ರಜ್ಞೆಯಿಂದ ಹೊರಬಂದು, ಆಂತರಿಕ ಹೊಂದಾಣಿಕೆ ಮತ್ತು ದೈವೀ ಸಂಕಲ್ಪಕ್ಕೆ ಪಾತ್ರನಾಗುತ್ತಾನೆ.

ಶ್ರೀಮದ್ಭಗವದ್ಗೀತೆ – ವಿಮೋಚನೆಯ ಹಾದಿಯಲ್ಲಿ ಆಧ್ಯಾತ್ಮಿಕ ಪ್ರಯಾಣಿಕನು ಮುನ್ನಡೆಯುವಾಗ ಬಂದೊದಗುವ ಸಕಾರಾತ್ಮಕ ಮನಸ್ಥಿತಿ ಮತ್ತು ತನ್ನ ಗುರಿಯನ್ನು ಭಂಗ ಪಡಿಸುವ ನಕಾರಾತ್ಮಕ ಯೋಚನೆಗಳು ಹೀಗೆ ಸಮಗ್ರ ಭೌತಿಕ ಮತ್ತು ಮಾನಸಿಕ ಒಪ್ಪಂದಗಳ ಎಲ್ಲಾ ಅನುಭವಗಳನ್ನೂ ವಿವರಿಸುತ್ತದೆ. “ಮುನ್ನೆಚ್ಚರಿಕೆಯು ಶಸ್ತ್ರದಂತೆ!” ಭಕ್ತನು ತಾನು ಪ್ರಯಾಣಿಸಬೇಕಾಗಿರುವ ಹಾದಿಯನ್ನು ಅರ್ಥ ಮಾಡಿಕೊಂಡಾಗ ಅದರ ಅನಿಖರತೆಯಿಂದಾಗಲಿ ಅಥವಾ ಅನಿವಾರ್ಯ ವಿರೋಧದಿಂದಾಗಲೀ, ನಿರಾಶೆಗೊಳ್ಳುವುದಿಲ್ಲ.

ಆಧ್ಯಾತ್ಮಿಕ ಹೋರಾಟ ಮತ್ತು ದೈನಂದಿನ ಜೀವನದಲ್ಲಿ ಅಂತಿಮ ಗೆಲುವು

ಭಗವದ್ಗೀತೆಯ ಕಾಲಾತೀತ ಸಂದೇಶವು ಕೇವಲ ಒಂದು ಐತಿಹಾಸಿಕ ಯುದ್ಧವನ್ನು ಉಲ್ಲೇಖಿಸುವುದಿಲ್ಲ, ಬದಲಾಗಿ ಒಳ್ಳೆಯ ಹಾಗೂ ಕೆಟ್ಟದ್ದರ ನಡುವಿನ ವಿಶ್ವ ಸಂಘರ್ಷವನ್ನು ಸೂಚಿಸುತ್ತದೆ: ಜೀವನವು, ಚೇತನ ಮತ್ತು ಐಹಿಕ ವಸ್ತು, ಆತ್ಮ ಮತ್ತು ದೇಹ, ಜೀವ ಮತ್ತು ಮರಣ, ಜ್ಞಾನ ಹಾಗೂ ಮೌಢ್ಯ, ಆರೋಗ್ಯ ಮತ್ತು ಅನಾರೋಗ್ಯ, ಸ್ಥಿರ ಹಾಗೂ ಅಸ್ಥಿರತೆ, ಸಂಯಮ ಮತ್ತು ಪ್ರಲೋಭನೆ, ವಿವೇಕ ಮತ್ತು ಇಂದ್ರಿಯಗ್ರಾಹೀ ಮೂಢ ಮನಗಳ ನಡುವಿನ ಸುದೀರ್ಘ ಹೋರಾಟ.

ಭಕ್ತನು ತನ್ನ ದೈನಂದಿನ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳ ವಿಶ್ಲೇಷಣೆಯ ಮೂಲಕ, ತನ್ನ ಅಹಂಕಾರದ ಅಜ್ಞಾನ (ಭ್ರಮೆ) ಮತ್ತು ಶರೀರ ಪ್ರಜ್ಞೆಯು ಅವನ ಜೀವನವನ್ನು ಎಷ್ಟು ಆಳುತ್ತಿದೆ ಮತ್ತು ಆತನ ಆತ್ಮಜ್ಞಾನ ಹಾಗೂ ದೈವೀ ಸ್ವಭಾವವನ್ನು ಅವನು ವ್ಯಕ್ತಪಡಿಸಲು ಎಷ್ಟು ಸಮರ್ಥ ಎಂಬುದನ್ನು ಅರಿಯಬೇಕು.

ಧ್ಯಾನಯೋಗವು ಮಾನವಪ್ರಜ್ಞೆಯನ್ನು ಆತ್ಮದ ಅರಿವಿನಿಂದ ದೂರವಾಗಿಸುವ ಸ್ಥಾಯಿಯಾದ ಅಹಂ ಮತ್ತು ದೋಷಯುಕ್ತ ಅನುವಂಶಿಕ ಪ್ರಜ್ಞೆಯಿಂದ ದೂರವಾಗಿಸಿ, ನಿರ್ದಿಷ್ಟ ಆಧ್ಯಾತ್ಮಿಕ ಮತ್ತು ಮಾನಸಿಕ ವಿಧಾನಗಳು ಮತ್ತು ನಿಯಮಗಳ ಮೂಲಕ ವ್ಯಕ್ತಿಗೆ ನೈಜ ಸ್ವಭಾವದ ಅರಿವನ್ನು ಮೂಡಿಸುವ ಮತ್ತು ಅದನ್ನು ಸ್ಥಿರಗೊಳಿಸುವ ಪ್ರಕ್ರಿಯೆಯಾಗಿದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಬೇಕಿದೆ. ಇದು ಕೇವಲ ಗೆಲ್ಲಲು ಯೋಗ್ಯವಷ್ಟೇ ಅಲ್ಲದೆ, ವಿಶ್ವದ ದೈವೀ ವ್ಯವಸ್ಥೆಯಲ್ಲಿ, ಆತ್ಮ ಮತ್ತು ಭಗವಂತನ ನಡುವಿನ ಶಾಶ್ವತ ಬೆಸುಗೆಗೆ ಇಂದೋ ನಾಳೆಯೋ ಗೆಲ್ಲಲೇಬೇಕಾದ ಯುದ್ಧವಾಗಿದೆ.

ಪವಿತ್ರ ಭಗವದ್ಗೀತೆಯ ಪ್ರಕಾರ, ಒಬ್ಬ ಭಕ್ತನಾದವನಿಗೆ ಧ್ಯಾನಯೋಗದ ಧೃತಿಗೆಡದ ಅಭ್ಯಾಸದ ಮೂಲಕ, ಅರ್ಜುನನಂತೆ ಬ್ರಹ್ಮನ ಅಂತರ್‌ ಜ್ಞಾನ-ಗೀತೆಗೆ ತನ್ನ ಹೃದಯ ತೆರೆದಾಗ ನಿಶ್ಚಯವಾಗಿ ಶೀಘ್ರವಾಗಿ ವಿಜಯ ಪ್ರಾಪ್ತವಾಗುವುದು.

ಗೀತೆಯ ಸಂತುಲಿತ ಮಾರ್ಗ: ಧ್ಯಾನ ಮತ್ತು ಸೂಕ್ತ ಚಟುವಟಿಕೆ

ಕೃಷ್ಣ ಪರಮಾತ್ಮನ ಜೀವನವು ತನ್ನ ಕಾರ್ಯಗಳನ್ನು ತ್ಯಜಿಸದ ಆದರ್ಶವನ್ನು ಪ್ರದರ್ಶಿಸುತ್ತದೆ. ಚಟುವಟಿಕೆಯೇ ಜೀವನದುಸಿರಾಗಿರುವ ಪ್ರಪಂಚದಿಂದ ಸುತ್ತುವರೆದ ಮಾನವನಿಗೆ ಇದು ಸಂಘರ್ಷದ ಸಿದ್ಧಾಂತವಾಗಿದೆ. ಬದಲಿಗೆ ಭೂಮಿಯ ಬಂಧನಕ್ಕೆ ಸಿಲುಕಿಸುವ ಯಾವುದೇ ಫಲಾಪೇಕ್ಷೆಯಿಲ್ಲದೇ ಕ್ರಿಯೆಯಲ್ಲಿ ತೊಡಗಿದಾಗ…ನಿರಂತರ ಧ್ಯಾನದ ಮೂಲಕ ತನ್ನ ಮನಸ್ಸನ್ನು ತರಬೇತುಗೊಳಿಸಿಕೊಂಡಾಗ, ವ್ಯಕ್ತಿಯು ತನ್ನ ದೈನಂದಿನ ಕಾರ್ಯಗಳ ಜೊತೆಗೆ, ತನ್ನ ದೈವೀ ಪ್ರಜ್ಞೆಯನ್ನೂ ಕಾಪಾಡಿಕೊಳ್ಳಬಲ್ಲ.

ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಸಂದೇಶವು ಆಧುನಿಕ ಯುಗ ಮತ್ತು ಯಾವುದೇ ಕಾಲಕ್ಕೂ ಪರಿಪೂರ್ಣ ಉತ್ತರವಾಗಿದೆ: ಭಗವದ್‌-ಸಾಕ್ಷಾತ್ಕಾರಕ್ಕಾಗಿ ಕರ್ತವ್ಯನಿಷ್ಠ ಕೆಲಸಗಳು, ವೈರಾಗ್ಯ ಮತ್ತು ಧ್ಯಾನ ಅಗತ್ಯ. ಭಗವಂತನ ಆಂತರಿಕ ಶಾಂತಿಯಿಲ್ಲದೇ ಕೆಲಸದಲ್ಲಿ ತೊಡಗುವುದು ನರಕ; ಮತ್ತು ಆತನಿಂದ ಉಕ್ಕಿ ಹರಿಯುವ ಆನಂದದಿಂದ ಕ್ರಿಯೆಯಲ್ಲಿ ತೊಡಗಿದಾಗ, ವ್ಯಕ್ತಿಯು ತನ್ನಲ್ಲಿ ಸದಾ ಒಯ್ಯಬಹುದಾದ ಸ್ವರ್ಗವನ್ನೇ ಗಿಟ್ಟಿಸುತ್ತಾನೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಪ್ರತಿಪಾದಿಸಿದ ಮಾರ್ಗವು ಪ್ರಪಂಚದ ಸದಾ ಕಾರ್ಯನಿರತ ವ್ಯಕ್ತಿ ಮತ್ತು ಆಧ್ಯಾತ್ಮಿಕ ಮಹತ್ವಾಕಾಂಕ್ಷಿಗೆ ಸಮನ್ವಯ, ಮಧ್ಯಂತರ ಸುವರ್ಣ ಮಾರ್ಗವಾಗಿದೆ. ಭಗವದ್ಗೀತೆಯು ಪ್ರತಿಪಾದಿಸಿದ ಮಾರ್ಗವನ್ನು ಅನುಸರಿಸುವುದು ಅವರ ಮೋಕ್ಷಕ್ಕೆ ಹಾದಿ ಏಕೆಂದರೆ ಅದು ಸಾರ್ವತ್ರಿಕ ಸ್ವಯಂ ಸಾಕ್ಷಾತ್ಕಾರದ ಗ್ರಂಥವಾಗಿದೆ. ಅದು ಮನುಷ್ಯನನ್ನು ಆತನ ನಿಜವಾದ ಆತ್ಮಕ್ಕೆ ಪರಿಚಯಿಸುತ್ತದೆ-ಅವನು ಹೇಗೆ ಆತ್ಮ ಚೈತನ್ಯದಿಂದ ವಿಕಾಸ ಹೊಂದಿದ್ದಾನೆ, ಅವನು ತನ್ನ ನ್ಯಾಯಯುತ ಕರ್ತವ್ಯಗಳನ್ನು ಹೇಗೆ ಪೂರೈಸಬೇಕು ಮತ್ತು ಭಗವಂತನೆಡೆಗೆ ಹೇಗೆ ಹಿಂತಿರುಗಬಹುದು ಎಂಬುದನ್ನು ತೋರಿಸುತ್ತದೆ. ಗೀತೆಯ ವಿವೇಕವು ಶುಷ್ಕ ಬುದ್ದಿಜೀವಿಗಳಿಗೆ ಸೈದ್ಧಾಂತಿಕ ಮನೋರಂಜನೆಗಾಗಿ ಅದರ ಹೇಳಿಕೆಗಳೊಂದಿಗೆ ಮನದಲ್ಲಿ ಉಯ್ಯಾಲೆಯಾಡಲೇನೂ ಅಲ್ಲ; ಬದಲಾಗಿ, ಜಗದ ಸ್ತ್ರೀಯರು, ಪುರುಷರು, ಸಂಸಾರಸ್ಥರು, ವಿರಾಗಿಗಳೆಲ್ಲರಿಗೂ ಹಂತ ಹಂತವಾದ ವಿಧಾನಗಳ ಮೂಲಕ ಭಗವಂತನೊಡನೆ ನೈಜ ಸಂಪರ್ಕವನ್ನು ಹೊಂದಿ ಸಮತೋಲಿತ ಜೀವನವನ್ನು ನಡೆಸುವ ಬಗೆಯನ್ನು ತಿಳಿಸುತ್ತದೆ.

ರಾಜ ಯೋಗದ ಅನಂತ ಜ್ಞಾನ

ಸೃಷ್ಟಿಯ ಆರಂಭದಲ್ಲಿ ಮತ್ತು ಮನುಷ್ಯನ ಆಗಮನದಲ್ಲಿ, ಅನಂತವು ತನ್ನ ಪ್ರಜ್ಞಾವಂತ ಸೃಜನಶೀಲ ಬ್ರಹ್ಮಾಂಡ ಶಕ್ತಿಯನ್ನು (ಮಹಾ ಪ್ರಕೃತಿ ಅಥವಾ ಪವಿತ್ರಾತ್ಮ) ಕೇವಲ ವಿಕರ್ಷಣೆಯ ಶಕ್ತಿಯಿಂದ ಬೇರ್ಪಡಿಸದೇ, ಆತ್ಮವನ್ನು ಪ್ರಾಪಂಚಿಕ ಸೆಳೆತಗಳ ಅಲೆದಾಟದಿಂದ ವಿಮುಖಗೊಳಿಸಿ ತನ್ನ ಚೈತನ್ಯದೊಂದಿಗೆ ಐಕ್ಯವಾಗಲು ಸ್ವಾಗತಿಸುತ್ತದೆ. ಎಲ್ಲಾ ಚರಾಚರ ವಸ್ತುಗಳೂ ಅಂತಿಮವಾಗಿ ಈ ಬ್ರಹ್ಮಾನಂದಪ್ರಜ್ಞೆಗೆ ಮರಳಿ ವಿಶ್ವಚೈತನ್ಯದಲ್ಲಿ ಲೀನವಾಗುತ್ತವೆ. ಆರೋಹಣವು ಅವರೋಹಣದ ನಿಖರವಾದ ಹಾದಿಯನ್ನು ಹಿಮ್ಮುಖವಾಗಿ ಅನುಸರಿಸುತ್ತದೆ. ಮನುಷ್ಯನಲ್ಲಿ ಅದು ಅನಂತದ ಕಡೆಗಿನ ಹೆದ್ದಾರಿಯಾಗಿದ್ದು, ಎಲ್ಲಾ ವಯಸ್ಸಿನ, ಎಲ್ಲಾ ಧರ್ಮಗಳ ಅನುಯಾಯಿಗಳನ್ನೂ ಒಗ್ಗೂಡಿಸಿ ವ್ಯಾಖ್ಯಾನಿಸುವ ಏಕೈಕ ಮಾರ್ಗವಾಗಿದೆ.

ಯಾವುದೇ ನಂಬಿಕೆಗಳು ಅಥವಾ ಆಚರಣೆಗಳ ಉಪದಾರಿಯನ್ನು ಹಿಡಿದರೂ, ದೇಹಪ್ರಜ್ಞೆಯಿಂದ ಉನ್ನತ ಚೇತನಕ್ಕೆ ಅಂತಿಮ ಆರೋಹಣವು ಎಲ್ಲರಿಗೂ ಒಂದೇ ಆಗಿರುತ್ತದೆ. ಇಂದ್ರಿಯಗಳಿಂದ ಪ್ರಾಣ ಹಾಗೂ ಪ್ರಜ್ಞೆಯನ್ನು ಹಿಂತೆಗೆದುಕೊಂಡು, ಕಶೇರು ರಜ್ಜುವಿನ ಕೇಂದ್ರಗಳಲ್ಲಿನ ಬೆಳಕಿನ ದ್ವಾರಗಳ ಮೂಲಕ ಮೇಲಕ್ಕೇರಿ, ವಸ್ತುವಿನ ಪ್ರಜ್ಞೆಯನ್ನು ಪ್ರಾಣಶಕ್ತಿಯಲ್ಲಿ, ಪ್ರಾಣ ಶಕ್ತಿಯನ್ನು ಮನಸ್ಸಿನಲ್ಲಿ, ಮನಸ್ಸನ್ನು ಆತ್ಮದಲ್ಲಿ ಮತ್ತು ಆತ್ಮವನ್ನು ಬ್ರಹ್ಮನಲ್ಲಿ ಅದು ವಿಲೀನಗೊಳಿಸುತ್ತದೆ. ಆರೋಹಣ ವಿಧಾನವು ರಾಜಯೋಗವಾಗಿದೆ, ಇದು ಆದಿಯಿಂದಲೂ ಸೃಷ್ಟಿಯಲ್ಲಿ ಅವಿಭಾಜ್ಯವಾಗಿರುವ ಚಿರಂತನ ವಿಜ್ಞಾನವಾಗಿದೆ.

ಗೀತೆಯ ಅಧ್ಯಾಯ IV:29 ಮತ್ತು V:27-28ಗಳಲ್ಲಿ ಉಲ್ಲೇಖಿಸಿರುವ, ಕೃಷ್ಣನು ಅರ್ಜುನನಿಗೆ ಕಲಿಸಿದ ಕ್ರಿಯಾಯೋಗ ತಂತ್ರವು ಧ್ಯಾನಯೋಗದಲ್ಲೇ ಅತ್ಯುತ್ಕೃಷ್ಟ ಆಧ್ಯಾತ್ಮಿಕ ವಿಜ್ಞಾನವಾಗಿದೆ. ಅಂಧಕಾರದ ಯುಗಗಳಲ್ಲಿ ಅಡಗಿಹೋಗಿದ್ದ ಅದನ್ನು ಆಧುನಿಕ ಮಾನವನಿಗಾಗಿ ಮಹಾವತಾರ ಬಾಬಾಜಿಯವರಿಂದ ಪುನಸ್ಸಂಶೋಧಿಸಲ್ಪಟ್ಟು ಸೆಲ್ಫ್ ರಿಯಲೈಸೇಶನ್ ಫೆಲೋಶಿಪ್/ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಗುರು ಪರಂಪರೆಯಿಂದ ಕಲಿಸಲ್ಪಡುತ್ತಿದೆ. ಈ ಪವಿತ್ರವಾದ ದೈವೀ ವಿಜ್ಞಾನವನ್ನು ಹರಡಲು ಸ್ವಯಂ ಬಾಬಾಜಿಯವರೇ ನನ್ನನ್ನು (ಪರಮಹಂಸ ಯೋಗಾನಂದ) ನೇಮಿಸಿದರು.

ಆದರ್ಶ ಶಿಷ್ಯನ ಪ್ರತಿರೂಪವಾದ ಅರ್ಜುನನನ್ನು ಅನುಕರಿಸಿ, ತನ್ನ ನ್ಯಾಯಯುತ ಕರ್ತವ್ಯವನ್ನು ವೈರಾಗ್ಯದಿಂದ ನಿರ್ವಹಿಸುವ ಮತ್ತು ಕ್ರಿಯಾಯೋಗ ತಂತ್ರದ ಮೂಲಕ ಯೋಗ ಧ್ಯಾನದ ಅಭ್ಯಾಸವನ್ನು ಪರಿಪೂರ್ಣಗೊಳಿಸುವ ಯಾವುದೇ ಭಕ್ತನು ದೇವಾನುದೇವತೆಗಳ ಮಾರ್ಗದರ್ಶನ ಮತ್ತು ಆಶೀರ್ವಾದಕ್ಕೆ ಪಾತ್ರನಾಗುತ್ತಾನೆ.

ಭಗವಂತನು ಅರ್ಜುನನೊಂದಿಗೆ ಮಾತನಾಡಿದಂತೆಯೇ, ನಿಮ್ಮೊಂದಿಗೂ ಮಾತನಾಡುತ್ತಾನೆ. ಅವನು ಅರ್ಜುನನ ಚೈತನ್ಯ ಮತ್ತು ಪ್ರಜ್ಞೆಯನ್ನು ಎತ್ತಿಹಿಡಿದಂತೆಯೇ ನಿಮ್ಮನ್ನೂ ಮೇಲಕ್ಕೆತ್ತುತ್ತಾನೆ. ಅವನು ಅರ್ಜುನನಿಗೆ ಅತ್ಯುನ್ನತ ಆಧ್ಯಾತ್ಮಿಕ ದೃಷ್ಟಿಯನ್ನು ನೀಡಿದಂತೆಯೇ, ನಿಮಗೂ ಆತ ಜ್ಞಾನೋದಯವನ್ನು ನೀಡುತ್ತಾನೆ.

ನಾವು ಭಗವದ್ಗೀತೆಯಲ್ಲಿ ಭಗವಂತನೆಡೆಗೆ ಹಿಂದಿರುಗುವ ಆತ್ಮಪಯಣದ ಕಥೆಯನ್ನು ನೋಡಿದ್ದೇವೆ – ಪ್ರತಿಯೊಬ್ಬರೂ ಮಾಡಲೇಬೇಕಾದ ಪ್ರಯಾಣ. ಓ ದೈವೀ ಆತ್ಮನೇ! ಅರ್ಜುನನಂತೆ ಈ ಮರ್ತ್ಯ ಪ್ರಜ್ಞೆಯ ದುರ್ಬಲತೆಯನ್ನು ತೊರೆದುಬಿಡು. ಎದ್ದೇಳು! ನಿನ್ನ ಮುಂದೆ ರಾಜಮಾರ್ಗವಿದೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರ “ಗಾಡ್‌ ಟಾಕ್ಸ್‌ ವಿತ್‌ ಅರ್ಜುನಾ” ಕೃತಿಯ ವ್ಯಾಖ್ಯಾನವನ್ನು ಆಧರಿಸಿ, ಭಗದ್ಗೀತೆಯಲ್ಲಿನ ವಿವೇಕದ ಕುರಿತ ವೈಎಸ್ಎಸ್ ನ ಹಿರಿಯ ಸನ್ಯಾಸಿಗಳ ಉಪನ್ಯಾಸವನ್ನು ಕೇಳಲು ಕೆಳಗಿನ ಬಟನ್‌ ಅನ್ನು ಒತ್ತಿ:

ಈ ಕಾಲಾತೀತವಾದ ಗ್ರಂಥದ ನಿಮ್ಮ ಪ್ರತಿಯನ್ನು ತೆಗೆದುಕೊಳ್ಳಿ:

ಇದನ್ನು ಹಂಚಿಕೊಳ್ಳಿ