ಯೋಗದಾ ಸತ್ಸಂಗ ಶಾಖಾ ಮಠ

ರಾಂಚಿ, ಜಾರ್ಖಂಡ್

ನೂರಕ್ಕೂ ಹೆಚ್ಚು ವರ್ಷಗಳಿಂದ, ವೈಎಸ್ಎಸ್ ತನ್ನ ಸಂಸ್ಥಾಪಕರಾದ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಮತ್ತು ಮಾನವೀಯ ಕೆಲಸಗಳನ್ನು ನಡೆಸಿಕೊಂಡು ಬಂದಿದೆ. 1918 ರಲ್ಲಿ ರಾಂಚಿಯಲ್ಲಿ ಯೋಗಾನಂದಜಿಯವರು ಒಂದು ಆಶ್ರಮವನ್ನು ಮತ್ತು ಹುಡುಗರಿಗಾಗಿ ಬದುಕುವುದು-ಹೇಗೆ ಶಾಲೆಯನ್ನು ಸ್ಥಾಪಿಸುವ ಮೂಲಕ ಕ್ರಿಯಾ ಯೋಗದ ಸಾರ್ವತ್ರಿಕ ಬೋಧನೆಗಳನ್ನು ಲಭ್ಯವಾಗುವಂತೆ ಮಾಡುವ ತಮ್ಮ ಜೀವಿತಾವಧಿಯ ಕಾರ್ಯವನ್ನು ಪ್ರಾರಂಭಿಸಿದರು.

ಈ ಆಶ್ರಮದ ಪವಿತ್ರ ಆವರಣಕ್ಕೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ, ಇದು ಹಸಿರು ಉದ್ಯಾನವನಗಳಿಂದ ಕಂಗೊಳಿಸುತ್ತಿದೆ ಮತ್ತು ಅವರ ಪವಿತ್ರ ಸ್ಪಂದನಗಳಿಂದ ತುಂಬಿದೆ. ಆಶ್ರಮದಲ್ಲಿ ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ದೈನಂದಿನ ಸಮೂಹ ಧ್ಯಾನಗಳು, ವೈಯಕ್ತಿಕ ಅಥವಾ ಸಮೂಹ ಧ್ಯಾನ ಶಿಬಿರಗಳು, ಸಾಧನ ಸಂಗಮಗಳು, ವಿಶೇಷ ಕಾರ್ಯಕ್ರಮಗಳು ಅಥವಾ ಸಾಪ್ತಾಹಿಕ ಸತ್ಸಂಗಗಳಿಗೆ ಸೇರಿಕೊಳ್ಳಿ. ನೈಸರ್ಗಿಕ ಸೌಂದರ್ಯ ಮತ್ತು ಶಾಂತಿಯುತ ವಾತಾವರಣದಲ್ಲಿ ನಿಮ್ಮನ್ನು ತಲ್ಲೀನಗೊಳಿಸಿಕೊಳ್ಳಿ, ಅದು ಖಂಡಿತವಾಗಿ ನಿಮ್ಮ ಮನಸ್ಸು ಮತ್ತು ಚೈತನ್ಯವನ್ನು ಉಲ್ಲಾಸಗೊಳಿಸುತ್ತದೆ. ಇಲ್ಲಿ ನೀವು ನಮ್ಮ ಸನ್ಯಾಸಿಗಳಿಂದ ವೈಎಸ್‌ಎಸ್‌ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ವೈಎಸ್‌ಎಸ್‌ಗೆ ಹೊಸಬರೇ? ವೈಎಸ್‌ಎಸ್ ಪಾಠಗಳು ಹೇಗೆ ನಿಮ್ಮ ಜೀವನವನ್ನು ಪರಿವರ್ತಿಸುತ್ತವೆ ಮತ್ತು ಸಮತೋಲನವನ್ನು ತರುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಆಶ್ರಮದೊಳಗಿರುವ ಪ್ರಮುಖ ಪವಿತ್ರ ಸ್ಥಳಗಳು

ಪರಮಹಂಸ ಯೋಗಾನಂದರ ಕೋಣೆ

ಮಹಾನ್ ಗುರುಗಳು ರಾಂಚಿಯಲ್ಲಿದ್ದ (1918 ರಿಂದ 1920) ವರ್ಷಗಳಲ್ಲಿ ತಂಗಿದ್ದ ಕೋಣೆಯನ್ನು ಮಂದಿರವಾಗಿ ಸಂರಕ್ಷಿಸಲಾಗಿದೆ. ಇದು ಆಶ್ರಮದ ಹಳೆಯ ಆಡಳಿತ ಕಟ್ಟಡದಲ್ಲಿದೆ. ಪ್ರತಿ ದಿನ ಕೆಲವು ಗಂಟೆಗಳ ಕಾಲ ಇದನ್ನು ಸರ್ವರ ಖಾಸಗಿ ಧ್ಯಾನಕ್ಕಾಗಿ ತೆರೆದಿಡಲಾಗುತ್ತದೆ. ಭಕ್ತಾದಿಗಳು ಮತ್ತು ಸಂದರ್ಶಕರು ಇಲ್ಲಿ ಧ್ಯಾನ ಮಾಡುವಾಗ ಬಹಳ ಉನ್ನತಿಯನ್ನು ಅನುಭವಿಸುತ್ತಾರೆ. ಪರಮಹಂಸ ಯೋಗಾನಂದಜಿಯವರು ಬಳಸುತ್ತಿದ್ದ ಮರದ ಮಂಚ ಮಾತ್ರವಲ್ಲದೆ, ಕೋಣೆಯಲ್ಲಿ ಗುರುಗಳ ಕೈ ಮತ್ತು ಕಾಲುಗಳ ಗುರುತುಗಳನ್ನು ಸಹ ಇಡಲಾಗಿದೆ. ಜೊತೆಗೆ, ಗುರುಗಳ ಕೆಲವು ವೈಯಕ್ತಿಕ ವಸ್ತುಗಳನ್ನು ಈ ಕೋಣೆಯ ಹೊರಗೆ ಇಡಲಾಗಿದೆ. ಇನ್ನಷ್ಟು ತಿಳಿಯಿರಿ

ಲಿಚಿ ವೇದಿ

ಲಿಚಿ ವೇದಿಯು ರಾಂಚಿ ಆಶ್ರಮದಲ್ಲಿ ಪರಮಹಂಸ ಯೋಗಾನಂದರಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೊಡ್ಡ ಲಿಚಿ ಮರದ ನೆರಳಿನಡಿಯಲ್ಲಿಯೇ ಮಹಾನ್ ಗುರುಗಳು ತಾವು ಸ್ಥಾಪಿಸಿದ ಶಾಲೆಯ ಹುಡುಗರಿಗೆ ಆಗಾಗ್ಗೆ ಹೊರಾಂಗಣ ತರಗತಿಗಳು ಮತ್ತು ಸತ್ಸಂಗಗಳನ್ನು ನಡೆಸುತ್ತಿದ್ದರು. ಈ ಸ್ಥಳವು ಪರಮಹಂಸಜಿಯವರ ಆಧ್ಯಾತ್ಮಿಕ ಸ್ಪಂದನಗಳಿಂದ ಪವಿತ್ರವಾಗಿರುವುದರಿಂದ, ಮರದ ಕೊಂಬೆಗಳ ಕೆಳಗೆ ಪ್ರತಿಷ್ಠಾಪಿಸಲಾದ ಪರಮಹಂಸಜಿಯ ದೊಡ್ಡ ಛಾಯಾಚಿತ್ರವನ್ನು ಹೊಂದಿರುವ ಇದು ಭಕ್ತರು ಮತ್ತು ಸಂದರ್ಶಕರಿಗೆ ತೀರ್ಥಯಾತ್ರೆಯ ಮತ್ತು ಧ್ಯಾನದ ನೆಚ್ಚಿನ ಸ್ಥಳವಾಗಿದೆ.  ಇನ್ನಷ್ಟು ತಿಳಿಯಿರಿ

ಸ್ಮೃತಿ ಮಂದಿರ

1920 ರಲ್ಲಿ, ಒಂದು ದಿನ ಧ್ಯಾನ ಮಾಡುತ್ತಿದ್ದಾಗ, ಪರಮಹಂಸಜಿಯವರಿಗೆ ಅಲೌಕಿಕ ದರ್ಶನವಾಯಿತು, ಅದರಲ್ಲಿ ಅವರಿಗೆ ಅಮೇರಿಕಕ್ಕೆ ಹೋಗಬೇಕೆಂಬ ದೈವಿಕ ಆಜ್ಞೆಯಾಯಿತು. ಈ ಅತ್ಯದ್ಭುತ ಅನುಭವವನ್ನು ವಿವರಿಸುತ್ತಾ ಅವರು ತಮ್ಮ ಪುಸ್ತಕ, ಯೋಗಿಯ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ: “ʼಅಮೆರಿಕ! ನಿಜವಾಗಿಯೂ ಈ ಜನರು ಅಮೆರಿಕನ್ನರು!ʼ ನನ್ನ ಅಂತರ್ದೃಷ್ಟಿಗೆ ಗೋಚರವಾದ ಪಾಶ್ಚಾತ್ಯ ಮುಖಗಳ ದೃಶ್ಯಾವಳಿಯನ್ನು ಕಂಡಾಗ ನನ್ನಲ್ಲುದಿಸಿದ ಭಾವನೆ ಇದು. ರಾಂಚಿ ಶಾಲೆಯ ಉಗ್ರಾಣದಲ್ಲಿ ಧೂಳು ಹಿಡಿದ ಪೆಟ್ಟಿಗೆಗಳ ಹಿಂದೆ ಧ್ಯಾನಮಗ್ನನಾಗಿ ಕುಳಿತಿದ್ದೆ…. ಅಂತರ್ದೃಷ್ಟಿಯ ದರ್ಶನ ಮುಂದುವರೆಯಿತು; ದೊಡ್ಡ ಸಮೂಹ, ನನ್ನನ್ನೇ ಆಸಕ್ತಿಯಿಂದ ದಿಟ್ಟಿಸಿ ನೋಡುತ್ತಾ ನನ್ನ ಅಂತಃಪ್ರಜ್ಞೆಯ ರಂಗಭೂಮಿಯ ಮೇಲೆ ಪಾತ್ರಧಾರಿಗಳಂತೆ ಹಾದುಹೋದರು.”

ಒಮ್ಮೆ ಅಸ್ತಿತ್ವದಲ್ಲಿದ್ದ, ಮೇಲೆ ತಿಳಿಸಿದ ಉಗ್ರಾಣವಿದ್ದ ಸ್ಥಳದಲ್ಲಿಯೇ, 1995 ರಲ್ಲಿ ವಿಶ್ವಾದ್ಯಂತದ ಪ್ರಚಾರವು ಇಟ್ಟ ಮೊದಲ ಹೆಜ್ಜೆಯ ಸ್ಮರಣಾರ್ಥ ಸ್ಮೃತಿ ಮಂದಿರವನ್ನು ನಿರ್ಮಿಸಲಾಯಿತು. ಈ ಮಂದಿರವು ದಿನವಿಡೀ ತೆರೆದಿರುತ್ತದೆ ಮತ್ತು ಇದನ್ನು ಭಕ್ತರು ಮತ್ತು ಸಂದರ್ಶಕರು ಖಾಸಗಿ ಧ್ಯಾನಕ್ಕಾಗಿ ಬಳಸುತ್ತಾರೆ. ಇನ್ನಷ್ಟು ತಿಳಿಯಿರಿ

ಧ್ಯಾನ ಮಂದಿರ

ವೈಎಸ್ಎಸ್ ಸನ್ಯಾಸಿಗಳು ಧ್ಯಾನ ಮಂದಿರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಮೂಹ ಧ್ಯಾನಗಳನ್ನು ನಡೆಸುತ್ತಾರೆ. 2007 ರಲ್ಲಿ ನಿರ್ಮಿಸಲಾದ ಜೋಧ್‌ಪುರ ಕಲ್ಲಿನಿಂದಾದ ಈ ವಿಶಾಲವಾದ ಸಭಾಂಗಣದಲ್ಲಿ ಏಕಕಾಲಕ್ಕೆ 300 ಕ್ಕೂ ಹೆಚ್ಚು ಭಕ್ತರು ಆರಾಮವಾಗಿ ಕುಳಿತುಕೊಳ್ಳಬಹುದು. ಸಮೂಹ ಧ್ಯಾನದ ಸಮಯಗಳು ಮತ್ತು ದಿನದ ವೇಳೆಯಲ್ಲಿ ಈ ಮಂದಿರವನ್ನು ತೆರೆದಿರುವ ಸಮಯಗಳನ್ನು ಇಲ್ಲಿ ಕೊಡಲಾಗಿದೆ. ಇನ್ನಷ್ಟು ತಿಳಿಯಿರಿ

ಧ್ಯಾನದ ಉದ್ಯಾನಗಳು

ಆಶ್ರಮದ ಮೈದಾನದಲ್ಲಿ ಅಲ್ಲಲ್ಲಿ ಸುಂದರವಾಗಿ ವಿನ್ಯಾಸ ಮಾಡಲಾದ ಹಲವಾರು ಉದ್ಯಾನಗಳಿವೆ, ಅವು ಬಹು ವಿಧದ ಸಸ್ಯಗಳು ಮತ್ತು ಮರಗಳಿಗೆ ನೆಲೆಯಾಗಿವೆ. ನೆರಳು ನೀಡುವ ಮಾವಿನ ತೋಪುಗಳು, ಹಲಸಿನ ಮರಗಳ ಮಾರ್ಗಗಳು, ನಿತ್ಯಹರಿದ್ವರ್ಣ ಲಿಚಿ ಮರಗಳು ಮತ್ತು ಸದಭಿರುಚಿಯಿಂದ ಅಲ್ಲಲ್ಲಿ ನೆಟ್ಟ ಅಲಂಕಾರಿಕ ಬಿದಿರಿನ ಗಿಡಗಳೆಲ್ಲವೂ ಸೇರಿ ಒಂದು ಆಧ್ಯಾತ್ಮಿಕ ಓಯಸಿಸ್ ಅನ್ನು ಸೃಷ್ಟಿಸುತ್ತವೆ, ಅದು, ಪ್ರಪಂಚದಿಂದ ಬೇಸತ್ತು, ದಣಿದ ಆತ್ಮಗಳು ಬಂದು ಶಾಂತಿ ಮತ್ತು ಸಂತೋಷದ ಅಮೃತವನ್ನು ಸೇವಿಸುವಂತೆ ಆಹ್ವಾನಿಸುತ್ತದೆ. ಇಲ್ಲಿ ಪ್ರಪಂಚದ ಕಾಳಜಿಯನ್ನು ಕಿತ್ತೊಗೆದು, ದೇಹ, ಮನಸ್ಸು ಮತ್ತು ಆತ್ಮಗಳಿಗೆ ವಿಶ್ರಾಂತಿ ಕೊಡುವುದು ಸುಲಭ ಎಂದು ಒಬ್ಬರು ಕಂಡುಕೊಳ್ಳುತ್ತಾರೆ. ಹಲವಾರು ಬೆಂಚುಗಳನ್ನು ಹಾಕಲಾಗಿದೆ, ಅಲ್ಲಿ ಒಬ್ಬರು ಧ್ಯಾನ ಮಾಡುತ್ತ ಆಂತರ್ಯಕ್ಕೆ ಹೋಗಬಹುದು ಅಥವಾ ಶಾಂತವಾಗಿ ಕುಳಿತುಕೊಂಡು ಈ ಪವಿತ್ರ ಪರಿಸರದಲ್ಲಿನ ಶಾಂತಿ ಮತ್ತು ಪ್ರಶಾಂತತೆಯನ್ನು ಯಥೇಷ್ಟವಾಗಿ ಹೀರಿಕೊಳ್ಳಬಹುದು.  ಇನ್ನಷ್ಟು ತಿಳಿಯಿರಿ

ರಾಜರ್ಷಿ ಜನಕಾನಂದರಿಗೆ ಬರೆದ ಪತ್ರದಲ್ಲಿ ಪರಮಹಂಸ ಯೋಗಾನಂದರು ಹೀಗೆ ಬರೆದಿದ್ದಾರೆ,

ನನ್ನ ಆಧ್ಯಾತ್ಮಿಕ ಸಾಧನೆಯ ಅದೃಶ್ಯ ಅಮೃತವನ್ನು ನಾನು ಹೆಚ್ಚಾಗಿ ಮೌಂಟ್ ವಾಷಿಂಗ್ಟನ್ [ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿರುವ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಅಂತರರಾಷ್ಟ್ರೀಯ ಕೇಂದ್ರ ಕಾರ್ಯಾಲಯ] ಮತ್ತು ರಾಂಚಿಯಲ್ಲಿ ಸಿಂಪಡಿಸಿದ್ದೇನೆ…

ಸಾಪ್ತಾಹಿಕ ಕಾರ್ಯಕ್ರಮಗಳು

ಸಮೂಹ ಧ್ಯಾನಗಳು

ರಾಂಚಿ ಆಶ್ರಮದ ನಿಯತ ಧ್ಯಾನ ಮತ್ತು ಸತ್ಸಂಗಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಈ ಅವಧಿಗಳಲ್ಲಿ ಮೌನ ಧ್ಯಾನ, ಭಕ್ತಿಗೀತೆಗಳ ಗಾಯನ ಮತ್ತು ಸ್ಫೂರ್ತಿದಾಯಕ ವಾಚನಗಳಿರುತ್ತವೆ.

ಮಕ್ಕಳ ಸತ್ಸಂಗ

ಪ್ರತಿ ಭಾನುವಾರ ರಾಂಚಿ ಆಶ್ರಮದಲ್ಲಿ ಮಕ್ಕಳಿಗಾಗಿ ಸತ್ಸಂಗವನ್ನು ನಡೆಸಲಾಗುತ್ತದೆ, ಇದರಲ್ಲಿ 5 ರಿಂದ 12 ವರ್ಷ ವಯಸ್ಸಿನ ಮಕ್ಕಳು, ಕಥೆ ಹೇಳುವುದು, ಸಂಕ್ಷಿಪ್ತ ಮಾರ್ಗದರ್ಶಿತ ಧ್ಯಾನಗಳು ಮತ್ತು ಇತರ ಸಂವಾದಾತ್ಮಕ ಕಲಿಕೆಯ ವಿಧಾನಗಳಂತಹ ಆಸಕ್ತಿದಾಯಕ ಕಾರ್ಯಕ್ರಮಗಳ ಮೂಲಕ ವೈಎಸ್‌ಎಸ್‌ ಬೋಧನೆಗಳು ಮತ್ತು ಜೀವನ ವಿಧಾನದ ಬಗ್ಗೆ ಕಲಿಯುತ್ತಾರೆ. ಇನ್ನಷ್ಟು ತಿಳಿಯಿರಿ

ವೈಎಸ್‌ಎಸ್‌ ಸಾಧನ ಸಂಗಮಗಳು

ಯೋಗದಾ ಸತ್ಸಂಗ ಬೋಧನೆಗಳ ವಿದ್ಯಾರ್ಥಿಗಳಿಗೆ ಪರಮಹಂಸ ಯೋಗಾನಂದರ ಬೋಧನೆಗಳಲ್ಲಿ ಮುಳುಗಲು ಒಂದು ಅನನ್ಯ ಅವಕಾಶವನ್ನು ನೀಡುವ ನಾಲ್ಕು ದಿನಗಳ ಕಾರ್ಯಕ್ರಮ, ಇದರಲ್ಲಿ ವೈಎಸ್ಎಸ್ ಧ್ಯಾನ ತಂತ್ರಗಳು, ಸಮೂಹ ಧ್ಯಾನಗಳು, ಕೀರ್ತನೆಗಳ ಅವಧಿಗಳು ಮತ್ತು ಸನ್ಯಾಸಿಗಳ ಸ್ಫೂರ್ತಿದಾಯಕ ಪ್ರವಚನಗಳ ತರಗತಿಗಳಿರುತ್ತವೆ.

ಜನವರಿ-ಡಿಸೆಂಬರ್‌, 2024 • ವಿವಿಧ ಕಾರ್ಯಕ್ರಮಗಳು • ಐದು ಸ್ಥಳಗಳಲ್ಲಿ

ಹೊಸ ವಿಷಯಗಳು ಮತ್ತು ಕಾರ್ಯಕ್ರಮದ ಪ್ರಕಟಣೆಗಳನ್ನು ಪಡೆಯಲು ವೈಎಸ್‌ಎಸ್‌ ಇ-ನ್ಯೂಸ್‌ಗೆ ನೋಂದಾಯಿಸಿಕೊಳ್ಳಿ

ಮುಂಬರುವ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘಾವಧಿಯ ಧ್ಯಾನಗಳು

ಜನ್ಮಾಷ್ಠಮಿ
ಜನ್ಮಾಷ್ಠಮಿಯ ದೀರ್ಘಾವಧಿ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ

ಸಮಾಚಾರ ಮತ್ತು ಫೋಟೋ ಗ್ಯಾಲರಿ

ನಿಮ್ಮ ಭೇಟಿಯನ್ನು ಯೋಜಿಸಿಕೊಳ್ಳಿ

ನೀವು ಆಶ್ರಮಕ್ಕೆ ಹಗಲಿನಲ್ಲಿ ಭೇಟಿ ನೀಡಲು ಬಯಸುವಿರೇ?

ಸಮೂಹ ಧ್ಯಾನದಲ್ಲಿ ಭಾಗವಹಿಸಲು ಅಥವಾ ಆಶ್ರಮದ ಉದ್ಯಾನಗಳ ಪ್ರಶಾಂತತೆಯನ್ನು ಆನಂದಿಸಲು ಅಥವಾ ಯೋಗಾನಂದಜಿಯವರಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಮಾಡಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಆಶ್ರಮ ಮೈದಾನದ ಮಾರ್ಗದರ್ಶಿ ಪ್ರವಾಸದಲ್ಲಿ ನಿಮಗೆ ಆಸಕ್ತಿಯಿದ್ದರೆ, ಭೇಟಿಯ ವ್ಯವಸ್ಥೆಗಾಗಿ ದಯವಿಟ್ಟು ನಮ್ಮ ಸ್ವಾಗತ ಕಕ್ಷೆಯನ್ನು ಸಂಪರ್ಕಿಸಿ.

ದಯವಿಟ್ಟು ಗಮನಿಸಿ: ಆಶ್ರಮ ಮೈದಾನಗಳು ಎಲ್ಲ ಸಂದರ್ಶಕರಿಗೆ ಪ್ರತಿದಿನ ಬೆಳಗ್ಗೆ 9:00 ರಿಂದ ಸಂಜೆ 4:30 ರವರೆಗೆ ತೆರೆದಿರುತ್ತವೆ.

ವೈಯಕ್ತಿಕ ಧ್ಯಾನ ಶಿಬಿರವನ್ನು ಯೋಜಿಸಿ ಅಥವಾ ಆಶ್ರಮದಲ್ಲಿ ನಡೆಸಲಾಗುವ ಧ್ಯಾನ ಶಿಬಿರಕ್ಕೆ ಸೇರಿಕೊಳ್ಳಿ.

ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳು ಐದು ದಿನಗಳವರೆಗೆ ಆಶ್ರಮದಲ್ಲಿ ಉಳಿಯಲು ಸ್ವಾಗತ. ರೀಚಾರ್ಜ್ ಮಾಡಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ವೈಯಕ್ತಿಕ ಧ್ಯಾನ ಶಿಬಿರವನ್ನು ಕೈಗೊಳ್ಳಲು ಅಥವಾ ಆಶ್ರಮವು ನಡೆಸಿಕೊಡುವ ಯಾವುದಾದರೂ ಒಂದು ಧ್ಯಾನ ಶಿಬಿರದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ಭಕ್ತರನ್ನು ಪ್ರೋತ್ಸಾಹಿಸುತ್ತೇವೆ. ಈ ಧ್ಯಾನ ಶಿಬಿರಗಳ ಸಮಯದಲ್ಲಿ, ವೈಎಸ್‌ಎಸ್‌ ಸನ್ಯಾಸಿಗಳು ದಿನಕ್ಕೆ ಎರಡು ಬಾರಿ ನಡೆಸಿಕೊಡುವ ಸಮೂಹ ಧ್ಯಾನಗಳಲ್ಲಿ ನೀವು ಭಾಗವಹಿಸಬಹುದು ಮತ್ತು ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ನೀವು ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳಲ್ಲದಿದ್ದರೆ ಅಥವಾ ಆಶ್ರಮದೊಳಗೆ ಇರುವುದಕ್ಕಿಂತ ಹತ್ತಿರದ ಹೋಟೆಲ್‌ನಲ್ಲಿ ಉಳಿಯ ಬಯಸಿದರೆ, ಸುತ್ತಮುತ್ತಲಿನ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.

ನಮ್ಮನ್ನು ಸಂಪರ್ಕಿಸಿ

ಯೋಗದಾ ಸತ್ಸಂಗ ಶಾಖಾ ಮಠ - ರಾಂಚಿ
Paramahansa Yogananda Path
Ranchi - 834001
Jharkhand

ಇದನ್ನು ಹಂಚಿಕೊಳ್ಳಿ