ಒಮರ್ ಖಯ್ಯಾಮ್‌ನ ರುಬಾಯತ್‌ನಲ್ಲಿ ಅಡಗಿರುವ ಸತ್ಯಗಳು

ಒಮರ್ ಖಯ್ಯಾಮ್‌ನ ರುಬಾಯತ್ ಕುರಿತು ಪರಮಹಂಸ ಯೋಗಾನಂದರ ಸಂಪೂರ್ಣ ವ್ಯಾಖ್ಯಾನಗಳನ್ನು ಪ್ರಸ್ತುತಪಡಿಸುವ ಈ ಸಂಪುಟವು ಒಂಬೈನೂರು ವರ್ಷಗಳಿಗೂ ಹೆಚ್ಚು ಕಾಲವನ್ನು ವ್ಯಾಪಿಸಿದ್ದ ಮೂರು ಮಹಾನ್ ಪ್ರಮುಖ ವ್ಯಕ್ತಿಗಳ ಕಾವ್ಯಾತ್ಮಕ ಮತ್ತು ಆಧ್ಯಾತ್ಮಿಕ ಒಳನೋಟಗಳನ್ನು ಒಂದುಗೂಡಿಸುತ್ತದೆ. ಒಮರ್ ಖಯ್ಯಾಮ್‌ನ ಹನ್ನೊಂದನೇ ಶತಮಾನದ ಪದ್ಯಗಳು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಎಡ್ವರ್ಡ್ ಫಿಟ್ಜ್‌ಜೆರಾಲ್ಡ್‌ನಿಂದಾದ ಅವುಗಳ ಅನುವಾದವು ಓದುಗರನ್ನು ದೀರ್ಘಕಾಲದಿಂದ ಸಂತೋಷಪಡಿಸಿದೆ. ಆದರೂ, ಕವಿತೆಯ ನೈಜ ಅರ್ಥವು ಹೆಚ್ಚು ಚರ್ಚೆಯ ವಿಷಯವಾಗಿದೆ. ವಿಶದಪಡಿಸುವ ತಮ್ಮ ವ್ಯಾಖ್ಯಾನದಲ್ಲಿ, ಪರಮಹಂಸ ಯೋಗಾನಂದರು ಈ ಸಾಹಿತ್ಯಕ ಶ್ರೇಷ್ಠ ಕೃತಿಯ ರೂಪಕದ ಒಗಟಿನಂತಹ ಮುಸುಕಿನ ಹಿಂದಿರುವ ಆಧ್ಯಾತ್ಮಿಕ ಸಾರವನ್ನು ಬಹಿರಂಗಪಡಿಸುತ್ತಾರೆ.

ಪರಮಹಂಸ ಯೋಗಾನಂದರ ರುಬಾಯತ್‌ನ ವ್ಯಾಖ್ಯಾನವು ಪೂರ್ವ ಮತ್ತು ಪಶ್ಚಿಮಗಳೆರಡರ ಜನರನ್ನು ಪ್ರತಿ ಮಾನವನಲ್ಲೂ ಸುಪ್ತವಾಗಿರುವ ಸಹಜವಾದ ದೈವತ್ವದ ಆಳವಾದ ಅರಿವಿಗೆ ಜಾಗೃತಗೊಳಿಸುವ ಆಜೀವ ಪ್ರಯತ್ನದ ಒಂದು ಅಂಶವಾಗಿದೆ. ಎಲ್ಲ ಆಧ್ಯಾತ್ಮಿಕ ಸಂಪ್ರದಾಯಗಳ ಅನುಭಾವಿ ಋಷಿಗಳಂತೆ, ಶ್ರೀ ಯೋಗಾನಂದರು, ವಿವಿಧ ಧರ್ಮಗಳ ಸಿದ್ಧಾಂತಗಳು ಮತ್ತು ಆಚರಣೆಗಳ ಮೂಲವಾಗಿರುವುದು ಒಂದೇ ಸತ್ಯ, ಒಂದೇ ಅತೀಂದ್ರಿಯ ವಾಸ್ತವವೆಂದು ಗ್ರಹಿಸಿದರು. ಈ ಸಾರ್ವತ್ರಿಕ ದೃಷ್ಟಿಕೋನ ಮತ್ತು ದೃಷ್ಟಿಯ ವೈಶಾಲ್ಯವು ಭಾರತದ ಪ್ರಾಚೀನ ಯೋಗ ವಿಜ್ಞಾನದ ಬೋಧನೆಗಳು ಮತ್ತು ಇಸ್ಲಾಮಿಕ್ ಪ್ರಪಂಚದ ಶ್ರೇಷ್ಠ ಮತ್ತು ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಅನುಭಾವಿ ಕವಿಗಳಲ್ಲಿ ಒಬ್ಬನಾದ ಒಮರ್ ಖಯ್ಯಾಮ್‌ನ ಬರಹಗಳ ನಡುವಿನ ಆಳವಾದ ಬಾಂಧವ್ಯವನ್ನು ಸ್ಪಷ್ಟಪಡಿಸಲು ಅವರಿಗೆ ಅನುವು ಮಾಡಿಕೊಟ್ಟಿತು.

ವೈನ್ ದಟ್ ಮಿಸ್ಟಿಕ್ ಬುಕ್ ಕವರ್.

ಕೇವಲ ವ್ಯಾಖ್ಯಾನಕ್ಕಿಂತ ಹೆಚ್ಚಾಗಿ, ಈ ಪುಸ್ತಕವು ಜೀವನದ ನಡವಳಿಕೆಗಾಗಿ ಆಧ್ಯಾತ್ಮಿಕ ಬೋಧನೆಯನ್ನು ಪ್ರಸ್ತುತಪಡಿಸುತ್ತದೆ. ಒಮರ್ ಖಯ್ಯಾಮ್‌ನ ಬಾಹ್ಯ ಚಿತ್ರಣದ ಹಿಂದೆ ಮಾನವ ಅಸ್ತಿತ್ವದ ಆನಂದ ಮತ್ತು ಭವ್ಯವಾದ ಉದ್ದೇಶದ ಆಳವಾದ ಸುಂದರ ತಿಳುವಳಿಕೆಯನ್ನು ಮರೆಮಾಡಲಾಗಿದೆ ಎಂದು ಪರಮಹಂಸ ಯೋಗಾನಂದರು ಹೇಳುತ್ತಾರೆ.

“ಒಮರ್‌ ಖಯ್ಯಾಮ್‌ನ ದಿವ್ಯಜ್ಞಾನ”
“ದಿ ವೈನ್ ಆಫ್ ದಿ ಮಿಸ್ಟಿಕ್”ಗೆ ಪರಮಹಂಸ ಯೋಗಾನಂದರು ಬರೆದಿರುವ ಪರಿಚಯದಿಂದ:

“ಬಹಳ ಹಿಂದೆ ಭಾರತದಲ್ಲಿ ನಾನು ಒಬ್ಬ ಪೂಜನೀಯ ಪರ್ಷಿಯನ್ ಕವಿಯನ್ನು ಭೇಟಿಯಾದೆ, ಅವರು, ಪರ್ಷಿಯಾದ ಕಾವ್ಯವು ಸಾಮಾನ್ಯವಾಗಿ ಎರಡು ಅರ್ಥಗಳನ್ನು ಹೊಂದಿರುತ್ತದೆ, ಒಂದು ಒಳಗಿನದು ಮತ್ತು ಇನ್ನೊಂದು ಹೊರಗಿನದು ಎಂದು ನನಗೆ ಹೇಳಿದರು. ಹಲವಾರು ಪರ್ಷಿಯನ್ ಕವಿತೆಗಳ ದ್ವಿಗುಣ ಪ್ರಾಮುಖ್ಯತೆಯ ಅವರ ವಿವರಣೆಯಿಂದ ನನಗೆ ಅತ್ಯಂತ ತೃಪ್ತಿಯುಂಟಾಯಿತೆಂದು ನಾನು ನೆನಪಿಸಿಕೊಳ್ಳುತ್ತೇನೆ.

“ಒಂದು ದಿನ ನಾನು ಒಮರ್ ಖಯ್ಯಾಮ್‌ನ ರುಬಾಯತ್‌ನ ಪುಟಗಳ ಮೇಲೆ ಆಳವಾಗಿ ಗಮನ ಹರಿಸಿದಾಗ, ಇದ್ದಕ್ಕಿದ್ದಂತೆ ಅದರ ಹೊರಗಿನ ಅರ್ಥಗಳ ಗೋಡೆಗಳು ಕುಸಿಯುವುದನ್ನು ನೋಡಿದೆ ಮತ್ತು ಚಿನ್ನದ ಆಧ್ಯಾತ್ಮಿಕ ನಿಧಿಗಳ ವಿಶಾಲವಾದ ಆಂತರಿಕ ಕೋಟೆಯು ನನ್ನ ನೋಟಕ್ಕೆ ತೆರೆದುಕೊಂಡಿತು.

“ಅಂದಿನಿಂದಲೂ ರುಬಾಯತ್‌ನಲ್ಲಿನ ಈ ಮೊದಲು ಅದೃಶ್ಯವಾಗಿದ್ದ ಆಂತರಿಕ ಜ್ಞಾನದ ಕೋಟೆಯ ಸೌಂದರ್ಯವನ್ನು ನಾನು ಮೆಚ್ಚಿಕೊಂಡಿದ್ದೇನೆ. ಯಾವುದೇ ತೀಕ್ಷ್ಣ ಕಣ್ಣಿಗೆ ಕಾಣುವ ಈ ಸತ್ಯದ ಕನಸಿನ ಕೋಟೆಯು, ಅಜ್ಞಾನವೆಂಬ ಶತ್ರು ಸೇನೆಯಿಂದ ಆಕ್ರಮಣಕ್ಕೊಳಗಾದ, ಆಶ್ರಯ ಅರಸುತ್ತಿರುವ ಅನೇಕ ಆತ್ಮಗಳಿಗೆ ಆಶ್ರಯಧಾಮವಾಗಿದೆ ಎಂದು ನಾನು ಭಾವಿಸಿದ್ದೇನೆ….

“ನಾನು ರುಬಾಯತ್‌ನ ಆಧ್ಯಾತ್ಮಿಕ ವ್ಯಾಖ್ಯಾನದ ಮೇಲೆ ಕೆಲಸ ಮಾಡುತ್ತಿದ್ದಾಗ, ಅದು ನನ್ನನ್ನು ಸತ್ಯದ ಅಂತ್ಯವಿಲ್ಲದ ಚಕ್ರವ್ಯೂಹದೊಳಕ್ಕೆ ಕರೆದೊಯ್ದಿತು, ಅದರಿಂದ ನಾನು ವಿಸ್ಮಯದಲ್ಲಿ ಭಾವಾವೇಶದಿಂದ ಕಳೆದುಹೋಗಿದ್ದೆ. ಈ ಪದ್ಯಗಳಲ್ಲಿ ಖಯ್ಯಾಮ್‌ನ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ತತ್ತ್ವಶಾಸ್ತ್ರದ ಪರೋಕ್ಷ ನುಡಿಗಳು ನನಗೆ ‘ದಿ ರಿವಿಲೇಷನ್‌ ಆಫ್‌ ಸೇಂಟ್ ಜಾನ್ ದಿ ಡಿವೈನ್‌’ ಅನ್ನು ನೆನಪಿಸುತ್ತದೆ. ರುಬಾಯತ್ ಅನ್ನು ನ್ಯಾಯವಾಗಿ ‘ಒಮರ್ ಖಯ್ಯಾಮ್‌ನ ದಿವ್ಯ ಜ್ಞಾನ’ ಎಂದು ಕರೆಯಬಹುದು.”

ಪರಮಹಂಸ ಯೋಗಾನಂದರ ವೈನ್‌ ಆಫ್‌ ದಿ ಮಿಸ್ಟಿಕ್ ನಿಂದ ಆಯ್ದ ಭಾಗಗಳು

ಧ್ಯಾನ ಮತ್ತು ಭಗವಂತನ-ಸಂಸರ್ಗವನ್ನು ಕುರಿತು…

Here with a Loaf of Bread beneath the Bough,
A Flask of Wine, a Book of Verse—and Thou
Beside me singing in the Wilderness—
And Wilderness is Paradise enow.

“ಧ್ಯಾನದ ಆಳವಾದ ಮೌನದಲ್ಲಿ ಕುಳಿತು, ನನ್ನ ಮನಸ್ಸನ್ನು ಜೀವನ-ವೃಕ್ಷವಾದ ಮಿದುಳು-ಮೇರುದಂಡದ ಮೇಲೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಮೇಲೆ ಕೇಂದ್ರೀಕರಿಸಿಕೊಂಡು, ನಾನು ಶಾಂತಿಯ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಪ್ರಾಣದ [ಪ್ರಾಣ ಶಕ್ತಿಯ] ಜೀವಾಧಾರಕ ‘ರೊಟ್ಟಿ’ಯಿಂದ ಪೋಷಿಸಲ್ಪಟ್ಟ ನಾನು, ನನ್ನ ಆತ್ಮದ ಪೀಪಾಯಿಯನ್ನು ತುಂಬುವ ದಿವ್ಯ ಪರವಶತೆಯ ಮಾಗಿದ ದ್ರಾಕ್ಷಾರಸವನ್ನು ಒಂದೇ ಗುಟುಕಿನಲ್ಲಿ ಕುಡಿದುಬಿಡುತ್ತೇನೆ. ನನ್ನ ಹೃದಯವು ಚಿರಂತನ ದಿವ್ಯ ಪ್ರೀತಿಯ ಕಾವ್ಯಾತ್ಮಕ ಸ್ಫೂರ್ತಿಗಳನ್ನು ನಿರಂತರವಾಗಿ ಪಠಿಸುತ್ತದೆ. ಆಳವಾದ ಅಂತರಂಗದ ಮೌನದ ಈ ಮರುಭೂಮಿಯಲ್ಲಿ — ಎಲ್ಲಿ ನುಗ್ಗಿ ಬರುವ ಆಸೆಗಳ ಎಲ್ಲ ತುಮುಲಗಳು ಸತ್ತುಹೋದವೋ — ಅಲ್ಲಿ ನಾನು ನಿನ್ನೊಂದಿಗೆ, ನನ್ನ ಪರಮ ಪ್ರಿಯನೊಂದಿಗೆ, ಹಾಡುವ ಪರಮಸುಖದೊಂದಿಗೆ (ಭಗವಂತನೊಂದಿಗೆ) ಸಂಸರ್ಗ ನಡೆಸುತ್ತೇನೆ. ಎಲ್ಲಾ ಆಸೆಗಳನ್ನು ಪೂರೈಸುವ ಜ್ಞಾನದ ಸಂಗೀತವನ್ನು ನೀನು ನನಗಾಗಿ ಮಧುರವಾಗಿ ಹಾಡುವೆ. ಆಹ್, ಭೌತಿಕ ಆಸೆಗಳು ಮತ್ತು ಭಾವೋದ್ರೇಕಗಳ ಹುಯಿಲಿನಿಂದ ಮುಕ್ತವಾದ ಮರುಭೂಮಿ! ಈ ಒಂಟಿತನದಲ್ಲಿ ನಾನು ಏಕಾಂಗಿಯಲ್ಲ. ನನ್ನ ಆಂತರಿಕ ಮೌನದ ಏಕಾಂತದಲ್ಲಿ ನಾನು ಅಂತ್ಯವಿಲ್ಲದ ಆನಂದದ ಸ್ವರ್ಗವನ್ನು ಕಂಡುಕೊಂಡಿದ್ದೇನೆ.”

ಆಂತರಿಕ ಶಾಂತಿ ಮತ್ತು ಸಾರ್ಥಕತೆಯನ್ನು ಕುರಿತು…

 A man behind woman (depicting worldly desires).

The Worldly Hope men set their Hearts upon
Turns Ashes—or it prospers; and anon,
Like Snow upon the Desert’s dusty Face
Lighting a little Hour or two—is gone.

ಅಜ್ಞಾನಿಯಾದವನು ಮಾತ್ರ ಈ ಭೂಮಿಯಿಂದ ಪರಿಪೂರ್ಣತೆ ಮತ್ತು ಶಾಶ್ವತ ಸಾರ್ಥಕತೆಯನ್ನು ನಿರೀಕ್ಷಿಸುತ್ತಾನೆ; ಮತ್ತು ಭಗ್ನಹೃದಯಿಯಾಗಿ ಅವನು ಗೋರಿಯ ದ್ವಾರಗಳನ್ನು ಪ್ರವೇಶಿಸುತ್ತಾನೆ. ಜ್ಞಾನಿಯಾದವನು, ಪ್ರಪಂಚದ ಮಾಯಾ ಸ್ವರೂಪವನ್ನು ತಿಳಿದಿರುತ್ತಾನೆ, ಅವನು ತನ್ನ ಆಶಾಗೋಪುರವನ್ನು ಇಲ್ಲಿ ಕಟ್ಟುವುದಿಲ್ಲ. ಜ್ಞಾನಿಗಳು ಐಹಿಕ ಆಸೆಗಳಿಗೆ ವಿಚಲಿತರಾಗದೆ, ಶಾಶ್ವತವಾದ ಸತ್ಯವನ್ನು (ಭಗವಂತನನ್ನು) ಅರಸುತ್ತಾರೆ; ಅವರು ಶಾಶ್ವತ ಸಾರ್ಥಕತೆಯ ವಿಶಾಲತೆಯನ್ನು ಪ್ರವೇಶಿಸುತ್ತಾರೆ.

Ah, my Beloved, fill the Cup that clears
TO-DAY of past Regrets and future Fears—
To-morrow? —Why, To-morrow I may be
Myself with Yesterday’s Sev’n Thousand Years.

ಓ ನನ್ನ ಆತ್ಮವೇ! ಭಾವಪರವಶತೆಯ ಪೀಪಾಯಿಯಿಂದ ಹರಿಯುವ ಆನಂದದ ಅಮೃತದಿಂದ ನನ್ನ ಪ್ರಜ್ಞೆಯನ್ನು ತುಂಬು. ಕೇವಲ ಆ ದಿವ್ಯ ಸಂಸರ್ಗವೊಂದೇ, ಕಾಡುವ ಹಿಂದಿನ ತಪ್ಪುಗಳ ನೆನಪುಗಳನ್ನು ಮತ್ತು ಭವಿಷ್ಯದ ತಪ್ಪುಗಳ ಭಯವನ್ನು ಹಾಗೂ ಅವುಗಳೊಂದಿಗೆ ಬರುವ ದುಷ್ಪರಿಣಾಮಗಳ ಫಸಲನ್ನು ಹೋಗಲಾಡಿಸಲು ಸಾಧ್ಯ.

ಧ್ಯಾನದ ಮೂಲಕ ಒಬ್ಬರು ಸ್ಥಿರವಾದ, ಮೌನವಾದ ಆಂತರಿಕ ಶಾಂತಿಯನ್ನು ಅನುಭವಿಸಬಹುದು, ಅದು ಜೀವನದ ಜವಾಬ್ದಾರಿಗಳು ಬೇಡುವ ಎಲ್ಲಾ ಸಾಮರಸ್ಯಕರ ಅಥವಾ ಕಷ್ಟಕರ ಚಟುವಟಿಕೆಗಳಿಗೆ ಶಾಶ್ವತವಾಗಿ ಹಿತವಾದ ಹಿನ್ನೆಲೆಯಾಗುತ್ತದೆ….ಮರಳಿನ ಒಂದು ಹಿಡಿಯು ಸಮುದ್ರದ ಅಲೆಗಳ ಸವೆತದ ಪರಿಣಾಮವನ್ನು ತಡೆದುಕೊಳ್ಳಲಾರದು; ಅನುದ್ವಿಗ್ನ ಆಂತರಿಕ ಶಾಂತಿಯನ್ನು ಹೊಂದಿರದ ವ್ಯಕ್ತಿಯು ಮಾನಸಿಕ ಸಂಘರ್ಷದ ಸಮಯದಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ. ಆದರೆ ವಜ್ರವು ಅದರ ಸುತ್ತಲೂ ಎಷ್ಟೇ ಅಲೆಗಳು ಸುತ್ತಿದರೂ ಬದಲಾಗದೆ ಉಳಿಯುತ್ತದೆ, ಅಂತೆಯೇ ಸದೃಢ ಶಾಂತಿಯಿರುವ ವ್ಯಕ್ತಿಯು ಎಲ್ಲ ಕಡೆಯಿಂದ ಕಷ್ಟಗಳು ಅವನನ್ನು ಸುತ್ತುವರಿದರೂ ಪ್ರಕಾಶಮಾನವಾಗಿ ಪ್ರಶಾಂತನಾಗಿರುತ್ತಾನೆ. ನಾವು ಧ್ಯಾನದ ಮೂಲಕ ಪರಮಾತ್ಮನ ಶಾಶ್ವತ ಸಂತೋಷದಿಂದ ಹೊಳೆಯುವ, ಬದಲಾಗದ ಆತ್ಮ-ಪ್ರಜ್ಞೆಯ ವಜ್ರವನ್ನು, ಜೀವನದ ಬದಲಾಗುತ್ತಿರುವ ಜಲಗಳಿಂದ ಉಳಿಸಿಕೊಳ್ಳೋಣ.

ಆಧ್ಯಾತ್ಮಿಕ ಅನ್ವೇಷಣೆಯನ್ನು ಕುರಿತು…

With them the Seed of Wisdom did I sow,
And with my own hand labour’d it to grow:
And this was all the Harvest that I reap’d—
“I came like Water, and like Wind I go.”

ಜ್ಞಾನದ ಬೀಜವನ್ನು ಗುರು ಅಥವಾ ಆತ್ಮ-ಸಾಕ್ಷಾತ್ಕಾರ ಹೊಂದಿದವರು ನೀಡುತ್ತಾರೆ; ಆದರೆ ಮಣ್ಣು ಅಥವಾ ಗ್ರಹಣಶೀಲತೆ, ಮತ್ತು ಆ ಬೀಜದ ಸಾಗುವಳಿಯನ್ನು ಭಕ್ತನೇ ಪೂರೈಸಬೇಕು….ಸ್ವಯಂ-ಶಿಸ್ತು ಅಂದರೆ ಸ್ವಯಂ-ಹಿಂಸೆಯಲ್ಲ; ಅದು, ನಮಗೆ ನಿಜವಾದ ಸಂತೋಷವನ್ನು ತರಬಲ್ಲ ನಿರ್ದಿಷ್ಟ ಜೀವನ ಪದ್ಧತಿಗಳ ಮೇಲೆ ಮನಸ್ಸಿನ ಅಶಿಸ್ತಿನ ಶಕ್ತಿಗಳನ್ನು ಸಂಘಟಿಸುವ ಮತ್ತು ಕೇಂದ್ರೀಕರಿಸುವ ಮಾರ್ಗವಾಗಿದೆ. ಸ್ವಯಂ-ಶಿಸ್ತಿನ ವಿಧಾನಗಳನ್ನು ಪಟ್ಟುಬಿಡದೆ ಅನುಸರಿಸುವ ಮೂಲಕ ನಾವು ಚಡಪಡಿಕೆ, ದುರಭ್ಯಾಸಗಳು ಮತ್ತು ದುಃಖವನ್ನು ಉಂಟುಮಾಡುವ ಆಸೆಗಳನ್ನು ತೊಡೆದುಹಾಕಿ ನಿಜವಾಗಿಯೂ ಸಂತೋಷವಾಗಿರಲು ಸಾಧ್ಯ. ನಾವು ದುರ್ಬಲರು, ಅಶಾಂತರು ಮತ್ತು ಮಾನಸಿಕವಾಗಿ ಅಸ್ಥಿರರಾಗಿರುವಾಗ, ನಾವು ನೀರಿನಂತೆ ಭೂಮಿಗೆ ಅಂಟಿಕೊಂಡಿರುತ್ತೇವೆ. ಆದರೆ ಸ್ವಯಂ-ಶಿಸ್ತು ಮತ್ತು ಆಳವಾದ ಧ್ಯಾನದಿಂದ ಆಧ್ಯಾತ್ಮಿಕರಾದಾಗ, ನಾವು ಗಾಳಿಯಂತೆ ನಮ್ಮ ನೈಜ ಆತ್ಮ ಪ್ರಕೃತಿಯ ಸರ್ವವ್ಯಾಪಿತ್ವದಲ್ಲಿ ಮೇಲಕ್ಕೆ ಹಾರುತ್ತೇವೆ.

ತನ್ನ ನಿಜವಾದ ಆತ್ಮ ಸ್ವಭಾವದ ಸರ್ವವ್ಯಾಪಿಯಲ್ಲಿ ಗಾಳಿಯಂತೆ ಹಾರುತ್ತಿರುವ ಮಹಿಳೆ.

ಕರ್ಮದ ನಿಯಮವನ್ನು ಮೀರುವುದನ್ನು ಕುರಿತು…

ಚೆಕರ್‌ಬೋರ್ಡ್‌ನಲ್ಲಿರುವ ಮಾನವರು ಹಿಂದಿನ, ವರ್ತಮಾನ ಮತ್ತು ಭವಿಷ್ಯದ ಜೈಲು ಗೋಡೆಗಳ ಹಿಂದೆ ಮಿತಿಗಳನ್ನು ಪ್ರತಿನಿಧಿಸುತ್ತಾರೆ.

‘Tis all a Chequer-board of Nights and Days
Where Destiny with Men for Pieces plays:
Hither and thither moves, and mates, and slays,
And one by one back in the Closet lays.

ಚೆಸ್‌ಬೋರ್ಡ್‌ (ಚದುರಂಗ) ನಲ್ಲಿ ಬಿಳಿ ಮತ್ತು ಕಪ್ಪು ಚೌಕಗಳು ಪಕ್ಕಪಕ್ಕದಲ್ಲಿರುತ್ತವೆ, ಅದರ ಮೇಲೆ, ಆಳರಸರು ಮತ್ತು ಅವರ ಕೆಳವರ್ಗದವರನ್ನು ಪ್ರತಿನಿಧಿಸುವ ಚೆಸ್‌ ಕಾಯಿಗಳನ್ನು ನಡೆಸಲಾಗುತ್ತದೆ, ಅಂತೆಯೇ ತಿರುಗುತ್ತಿರುವ ಭೂಮಿಯು ತನ್ನ ಹಗಲು ರಾತ್ರಿಗಳೊಂದಿಗೆ ಬೃಹತ್‌ ಚೆಸ್‌ಬೋರ್ಡ್‌ ಅನ್ನು ಸೃಷ್ಟಿಸುತ್ತದೆ, ಅದರ ಮೇಲೆ ಮಾನವ ಚೆಸ್‌-ಕಾಯಿಗಳ ಜೀವನವನ್ನು ಆಡಿಸಲಾಗುತ್ತದೆ….ಜನಗಳ ಜೀವನದುದ್ದಕ್ಕೂ ಅವರನ್ನು ಒಂದು ಅವಸ್ಥೆ ಅಥವಾ ಸ್ಥಿತಿಯಿಂದ ಮತ್ತೊಂದಕ್ಕೆ ಸ್ಥಳಾಂತರಿಸಲಾಗುತ್ತಿರುತ್ತದೆ ಮತ್ತು ಅವರ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗದಂತೆ ಅವರನ್ನು ಆಗಾಗ್ಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲಾಗುತ್ತದೆ. ಅಂತಿಮವಾಗಿ, ಸಾವು ಎಂಬ ಪರಿವರ್ತನೆಯಿಂದ ಅವರ ಬಾಳನ್ನು ಕೊನೆಗೊಳಿಸಲಾಗುತ್ತದೆ….

ವಿಧಿಯು ನಿಮ್ಮ ಜೀವನದ ಆಟವನ್ನು ಮುನ್ನಡೆಗಳು, ಕಾಯಿ ಕಟ್ಟುವಿಕೆಗಳು (stalemates) ಮತ್ತು ಹಿಮ್ಮೆಟ್ಟುವಿಕೆಗಳ ಮೂಲಕ ನಿರ್ವಹಿಸಿದಾಗ, ಈ ಪರಿಣಾಮಗಳು ಹಿಂದಿನ ಜನ್ಮಗಳಲ್ಲಿ ನೀವೇ ಸೃಷ್ಟಿಸಿದ ಕಾರಣಗಳಿಂದ ಉಂಟಾಗುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ದುಃಖಗಳಿಗೆ ನೀವು ವಿಧಿಯನ್ನು ಶಪಿಸಲೂ ಬಾರದು ಅಥವಾ ಭಾಗ್ಯಕ್ಕೆ ನಿಮ್ಮ ಅದೃಷ್ಟವೇ ಕಾರಣ ಎಂದು ಶ್ಲಾಘಿಸಲೂ ಬಾರದು, ಬದಲಿಗೆ ನಿಮ್ಮ ಜೀವನದಲ್ಲಿನ ಘಟನೆಗಳ ತಿರುವುಗಳಿಗೆ ನೀವೇ ಕಾರಣರು ಎಂದು ಗುರುತಿಸಿ. ನಿಮ್ಮ ಸ್ವಯಂಕೃತ ವಿಧಿಯಿಂದ ನೀವು ಅತೃಪ್ತರಾಗಿದ್ದರೆ, ಆ ವಿಧಿಯನ್ನು ಬದಲಿಸಲು, ಭಗವಂತನು ನಿಮಗೆ ಮುಕ್ತ ಆಯ್ಕೆಯ ಶಕ್ತಿಯನ್ನು ನೀಡಿದ್ದಾನೆ ಎಂದು ನೆನಪಿಸಿಕೊಳ್ಳಿ. ಸರಿಯಾದ ದಿಕ್ಕಿನಲ್ಲಿ ದೀರ್ಘಾವಧಿಯ ಪ್ರಯತ್ನಗಳು ಹಂತ ಹಂತವಾಗಿ ಫಲಗಳನ್ನು ಕೊಡುತ್ತವೆ; ಆದರೆ ಅದರ ಜೊತೆಗೆ ನೀವು ಆಳವಾದ ಧ್ಯಾನದ ಮೂಲಕ ನಿಮ್ಮ ಇಚ್ಛೆಯನ್ನು ಭಗವಂತನ ಪ್ರಜ್ಞಾನದೊಂದಿಗೆ ಒಂದುಗೂಡಿಸಿದಾಗ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ನೀವು ಆ ಕೂಡಲೇ ತಿಳಿಯುವಿರಿ.

ಒಂದರ ನಂತರ ಒಂದು ಜನ್ಮಗಳ ಹುರುಪನ್ನು ತುಳಿದು ಹಾಕುವ ಸಮಯ ಮತ್ತು ವಿಧಿಗಳು ನಮ್ಮ ಹಣೆಬರಹವನ್ನು ಆಳಲು ಬಿಡುವ ಬದಲು, ಭಗವಂತನು ತನ್ನ ಸ್ವರ್ಗೀಯ ಸ್ಪರ್ಶದಿಂದ ನಮ್ಮನ್ನು ಅಮರಗೊಳಿಸಲು ನಾವು ಏಕೆ ಬಿಡಬಾರದು? ಆಗ ಮುಂದೆಂದೂ, ನಾವು ವಿರಮಿಸುವುದಕ್ಕಾಗಿ ಮರಣಾನಂತರದ ಜೀವನದ ಮಡಿಲೊಳಕ್ಕೆ ನುಸುಳುವ ಅಗತ್ಯವಿರುವುದಿಲ್ಲ. ಭಗವಂತನೊಂದಿಗೆ ಇರುವುದರಿಂದ, ನಾವು ನಿತ್ಯಜೀವನವೇ (ಭಗವಂತನೇ) ಆಗಿರುತ್ತೇವೆ, ಮತ್ತೆಂದೂ ಭೂತ, ವರ್ತಮಾನ ಮತ್ತು ಭವಿಷ್ಯದ ಜೈಲು ಗೋಡೆಗಳ ಹಿಂದಿರುವ ಮಿತಿಗಳ ದಾಸ್ಯಕ್ಕೊಳಗಾಗುವುದಿಲ್ಲ.

ಬ್ರಹ್ಮಾಂಡ ನಾಟಕದ ಅರ್ಥವನ್ನು ಕುರಿತು…

ದೇವರು ನಿರ್ದೇಶಿಸಿದ ಕಾಸ್ಮಿಕ್ ನಾಟಕದ ಅಂತ್ಯವನ್ನು ಮನುಷ್ಯ ನೋಡುತ್ತಾನೆ.

Ah, Love! could thou and I with Fate conspire
To grasp this sorry Scheme of Things entire,
Would not we shatter it to bits—and then
Re-mould it nearer to the Heart’s Desire!

ಹೀಗೆ ಪ್ರತಿಯೊಬ್ಬ ಜೀವಿಯೂ ಕೆಲವೊಮ್ಮೆ ತಾನು ಸೃಷ್ಟಿಕರ್ತನ ಪಾತ್ರವನ್ನು ನಿರ್ವಹಿಸಿ, ಈ ಜಗತ್ತನ್ನು ತನ್ನ ಹೃದಯದ ಬಯಕೆಯಂತೆ ಮಾಡಬೇಕೆಂದು ಬಯಸುತ್ತಾನೆ. ಪರಿಶುದ್ಧ ಸಂತೋಷಕ್ಕಾಗಿರುವ ಈ ಹಂಬಲವು ಆತ್ಮದ ಅಂತರಾಳದಿಂದ ಹೊರಹೊಮ್ಮುತ್ತದೆ, ಅದರಲ್ಲಿ ದೈವಿಕವಾಗಿ ಅಂತರ್ಗತವಾಗಿರುವ ಒಬ್ಬರ ನೈಜ ಅಸ್ತಿತ್ವದ ಪರಿಪೂರ್ಣತೆ ಮತ್ತು ಶಾಶ್ವತ ಆನಂದಗಳು ಮುಚ್ಚಿಡಲ್ಪಟ್ಟಿರುತ್ತವೆ.

ಜಗತ್ತು ಒಂದು ದಿವ್ಯ ಒಗಟಾಗಿದೆ — ಒಳ್ಳೆಯದರ ಜೊತೆಗೆ ಕೆಟ್ಟದ್ದು, ಸುಖದೊಂದಿಗೆ ದುಃಖ, ಜೀವನದೊಂದಿಗೆ ಸಾವು….ಪ್ರಕೃತಿಯಲ್ಲಿನ ಒಳ್ಳೆಯ ಮತ್ತು ಕೆಟ್ಟದ್ದರ, ಸುಖದುಃಖದ, ಸಿರಿತನ ಬಡತನದ, ಆರೋಗ್ಯ ಅನಾರೋಗ್ಯದ, ಜಾಣತನ ಮತ್ತು ದಡ್ಡತನದ, ಶಾಂತಿ ಮತ್ತು ಯುದ್ಧಗಳ, ಹಾಗೂ ದಯೆ ಮತ್ತು ಕ್ರೌರ್ಯಗಳ ಎಲ್ಲ ವಿರೋಧಾಭಾಸದ ನಾಟಕಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ನಾವು ನಮ್ಮ ತಲೆ ಕೆಡಿಸಿಕೊಳ್ಳಬಾರದು ಅಥವಾ ಸೃಷ್ಟಿಯ ದಿವ್ಯ ಯೋಜನೆಯ ಬಗ್ಗೆ ನಂಬಿಕೆಯಿಲ್ಲದವರೂ ಆಗಬಾರದು. ಒಂದು ಯಶಸ್ವೀ ನಾಟಕದಲ್ಲಿ ಸಸ್ಪೆನ್ಸ್ (ಅನಿಶ್ಚಯತೆ) ಇರುತ್ತದೆ, ಅದು ಆಸಕ್ತಿಯನ್ನು ಹಿಡಿದಿಡುತ್ತದೆ, ದಿಗ್ಭ್ರಮೆಗೊಳಿಸುತ್ತದೆ ಅಥವಾ ಗೊಂದಲಗೊಳಿಸುತ್ತದೆ, ಮತ್ತು ತೃಪ್ತಿದಾಯಕ ನಾಟಕೀಯ ವೈಖರಿಯೊಂದಿಗೆ ಮುಕ್ತಾಯವಾಗುತ್ತದೆ. ಅಂತೆಯೇ, ಭಗವಂತನು ಸಕಾಲದಲ್ಲಿ ಇದ್ದಕ್ಕಿದ್ದಂತೆ, ಆರೋಹಣಗೊಳ್ಳುತ್ತಿರುವ ಪ್ರತಿಯೊಂದು ಆತ್ಮಕ್ಕಾಗಿ, ದೀರ್ಘ ಕಾಲದಿಂದ ದುಃಖಾಂತಗಳು ಮತ್ತು ಸುಖಾಂತಗಳ ಅನೇಕ ಕ್ರಿಯೆಗಳ ಹಿಂದೆ ಗೋಪ್ಯವಾಗಿರಿಸಿದ್ದ ಬ್ರಹ್ಮಾಂಡ ನಾಟಕದ ಅಂತಿಮ ಭಾಗವನ್ನು, ಅದರ ಪ್ರಬಲ ಉದಾತ್ತ ಅಂತ್ಯವನ್ನು ಬಹಿರಂಗಪಡಿಸಲು ಅನಾವರಣಗೊಳಿಸುತ್ತ ಮುಸುಕನ್ನು ಸರಿಸುತ್ತಾನೆ.

ಭಗವತ್ಪ್ರೇಮವನ್ನು ಕುರಿತು…

Said one—“Folks of a surly Tapster tell,
And daub his Visage with the Smoke of Hell;
They talk of some strict Testing of us—Pish!
He’s a Good Fellow, and ’twill all be well.”

ತಮ್ಮ ಸೃಷ್ಟಿಕರ್ತನು ಅಜ್ಞಾನದ ಹೊಗೆ ಮತ್ತು ಶಿಕ್ಷೆಯ ಅಗ್ನಿಯಿಂದ ಮನುಷ್ಯನನ್ನು ದರ್ಪದಿಂದ ಪರೀಕ್ಷಿಸುತ್ತಾನೆ ಮತ್ತು ಹೃದಯಹೀನ ಪರಿಶೀಲನೆಯಿಂದ ಮನುಷ್ಯನ ಕಾರ್ಯಗಳನ್ನು ನಿರ್ಣಯಿಸುತ್ತಾನೆ ಎಂದು ಚಿತ್ರಿಸುವ ಜನರಿದ್ದಾರೆ. ಹೀಗೆ ಅವರು, ಪ್ರೀತಿಸುವ, ಸಹಾನುಭೂತಿಯುಳ್ಳ ಪರಮಪಿತನಾದ ಭಗವಂತನ ನಿಜವಾದ ಪರಿಕಲ್ಪನೆಯನ್ನು ಒಬ್ಬ ಕಟ್ಟುನಿಟ್ಟಾದ, ನಿಷ್ಕರುಣೆಯ ಮತ್ತು ಪ್ರತೀಕಾರವುಳ್ಳ ನಿರಂಕುಶಾಧಿಕಾರಿ ಎಂಬಂತೆ ಹುಸಿ ಚಿತ್ರಣದಿಂದ ವಿರೂಪಗೊಳಿಸುತ್ತಾರೆ. ಆದರೆ ಭಗವಂತನೊಂದಿಗೆ ಸಂಸರ್ಗ ನಡೆಸುವ ಭಕ್ತರಿಗೆ, ಅವನನ್ನು ಸರ್ವ ಪ್ರೀತಿ ಮತ್ತು ಒಳ್ಳೆಯತನದ ಅನಂತ ಕೋಶವಾಗಿರುವ ಕರುಣಾಮಯಿ ಎಂಬುದನ್ನು ಬಿಟ್ಟು ಅನ್ಯಥಾ ಭಾವಿಸುವುದು ಮೂರ್ಖತನ ಎಂದು ತಿಳಿದಿರುತ್ತದೆ. ಬ್ರಹ್ಮಾಂಡದ ತಂದೆಯಾದ ಭಗವಂತನು ಒಳ್ಳೆಯವನಾಗಿರುವುದರಿಂದ, ಅವನ ಮಕ್ಕಳ ವಿಷಯದಲ್ಲೂ ಎಲ್ಲವೂ ಒಳ್ಳೆಯದಾಗಿ ಕೊನೆಗೊಳ್ಳಲೇಬೇಕು; ಅವರು ಮತ್ತು ಇಡೀ ಸೃಷ್ಟಿ, ಅವನಲ್ಲಿ ಅದ್ಭುತ ಪರಾಕಾಷ್ಠೆ ಮತ್ತು ಪುನರ್‌ ಐಕ್ಯತೆಯತ್ತ ಪಯಣಿಸುತ್ತಿದ್ದಾರೆ.

ಪರಮಹಂಸ ಯೋಗಾನಂದರ ವ್ಯಾಖ್ಯಾನವಾದ ವೈನ್‌ ಆಫ್‌ ದ ಮಿಸ್ಟಿಕ್: ದಿ ರುಬಾಯತ್‌ ಆಫ್‌ ಒಮರ್‌ ಖಯ್ಯಾಮ್ ನಲ್ಲಿ ಇನ್ನಷ್ಟು ಓದಿ

ಇದನ್ನು ಹಂಚಿಕೊಳ್ಳಿ