ಯೋಗದಾ ಸತ್ಸಂಗ ಸನ್ಯಾಸ ಶ್ರೇಣಿ

ಭಗವಂತನ ಅನ್ವೇಷಣೆ ಮತ್ತು ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಿಗಾಗಿ ಮುಡಿಪಾಗಿರುವ ಸನ್ಯಾಸಿಗಳ ಒಂದು ವೃಂದ

YSS_Monastics_Ranchi

ಪೀಠಿಕೆ

ಯಾರು ಭಗವಂತನನ್ನು ಕಾಣಲು ಬಯಸುತ್ತಾರೋ ಹಾಗೂ ಭಗವಂತನನ್ನಲ್ಲದೇ ಬೇರೇನನ್ನೂ ಬಯಸುವುದಿಲ್ಲವೋ, ಅಂತಹವರು ಸಂಪೂರ್ಣ ತ್ಯಾಗದ ಹಾದಿಯನ್ನು ಬಹಳ ಸಂತೋಷದಿಂದ ಅಪ್ಪಿಕೊಳ್ಳುತ್ತಾರೆ. ಯಾರು, ‘ಭಗವಂತನೇ ನನ್ನ ಜೀವ, ಭಗವಂತನೇ ನನ್ನ ಪ್ರೇಮ, ನಿರಂತರವಾಗಿ ಆರಾಧಿಸಬೇಕೆಂಬ ಹಂಬಲವನ್ನು ನನ್ನ ಹೃದಯದಲ್ಲಿ ಮೂಡಿಸುತ್ತಿರುವ ಆ ಮಂದಿರವೇ ಭಗವಂತ. ಭಗವಂತನೇ ನನ್ನ ಗುರಿ. ಆ ದೈವಶಕ್ತಿಯ ಸಹಾಯವಿಲ್ಲದೆ ನಾನು ಯಾವುದೇ ಕೆಲಸವನ್ನು ಮಾಡಲಾರೆ, ಆದ್ದರಿಂದ ಅವನನ್ನು ಅರಸುವುದೇ ನನ್ನ ಆದ್ಯ ಕರ್ತವ್ಯವಾಗಿದೆ,’ ಎಂಬಂಥ ಪರಿತ್ಯಾಗಿಯ ಸಿದ್ಧಾಂತದಿಂದ ಜೀವಿಸುತ್ತಾರೋ ಅವರಿಗೆ ಆ ಭಗವಂತನು ತನ್ನ ಇರುವಿಕೆಯನ್ನು ತಿಳಿಯಪಡಿಸುತ್ತಾನೆ.

— ಪರಮಹಂಸ ಯೋಗಾನಂದ

ಯೋಗದಾ ಸತ್ಸಂಗ ಸಂಸ್ಥೆಯ (ವೈಎಸ್‌ಎಸ್)‌ ಪ್ರಮುಖ ಭಾಗವೇ ಪರಮಹಂಸ ಯೋಗಾನಂದರಿಂದ ಸಂಸ್ಥಾಪಿಸಲ್ಪಟ್ಟ ಒಂದು ಸಮರ್ಪಿತ ಸನ್ಯಾಸ ಶ್ರೇಣಿಯಾಗಿದೆ.

ವೈಎಸ್‌ಎಸ್ ಸನ್ಯಾಸಿಗಳ ತಂಡವು, ಭಾರತ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಆಧ್ಯಾತ್ಮಿಕ ಹಾಗೂ ಮಾನವೀಯತೆಯ ಸೇವಾಕಾರ್ಯಗಳನ್ನು ವಿವಿಧ ಸ್ತರಗಳಲ್ಲಿ ಕೈಗೆತ್ತಿಕೊಂಡಿದೆ. ಅವರ ಕಾರ್ಯವು, ಪರಮಹಂಸ ಯೋಗಾನಂದರ ಹಾಗೂ ಅವರ ನೇರ ಶಿಷ್ಯರ ಬರಹಗಳು ಮತ್ತು ಧ್ವನಿಮುದ್ರಿಕೆಗಳ ಪ್ರಕಟಣೆ, ಆಧ್ಯಾತ್ಮಿಕ ಸಮಾಲೋಚನೆ ಮತ್ತು ಸತ್ಸಂಗಗಳನ್ನು ಏರ್ಪಡಿಸುವಿಕೆ, ಧ್ಯಾನ ಶಿಬಿರಗಳು ಮತ್ತು ಉಪನ್ಯಾಸ ಪ್ರವಾಸಗಳನ್ನು ಕೈಗೊಳ್ಳುವಿಕೆ, ಕಟ್ಟಡಗಳು, ಧ್ಯಾನದ ಉದ್ಯಾನವನಗಳು ಮತ್ತು ಆಶ್ರಮಗಳ ನಿರ್ವಹಣೆ, ವೈಎಸ್‌ಎಸ್ ಪಾಠಮಾಲಿಕೆಗಳ ಮತ್ತು ಪುಸ್ತಕಗಳ ವಿತರಣೆಯ ಮೇಲ್ವಿಚಾರಣೆ, ಕಛೇರಿಯ ಆಡಳಿತಾತ್ಮಕ ಕೆಲಸಗಳು ಮತ್ತು ಆಧ್ಯಾತ್ಮಿಕ ಹಾಗು ದತ್ತಿ ಸಂಸ್ಥೆಗಳನ್ನು ನಡೆಸಲು ಬೇಕಾದ ಇತರ ಕರ್ತವ್ಯಗಳನ್ನು ಒಳಗೊಂಡಿವೆ.

ಇವುಗಳನ್ನು ಹೊರತುಪಡಿಸಿ, ಯೋಗದಾ ಸತ್ಸಂಗ ಸಂಸ್ಥೆಯ ಪ್ರತಿಯೊಬ್ಬ ಸನ್ಯಾಸಿಯ ಪ್ರಥಮ ಆದ್ಯತೆಯು ಭಗವಂತನಿಗಾಗಿ ಶುದ್ಧ ಪ್ರೇಮ ಹಾಗೂ ಅವನನ್ನು ಕಾಣುವ ಹಂಬಲವೇ ಆಗಿರುತ್ತದೆ — ಪರಮಾತ್ಮನಲ್ಲಿ ಮೋಕ್ಷವನ್ನು ಸಾಧಿಸುವವರೆಗೂ, ಪ್ರತಿ ಕ್ಷಣ, ಪ್ರತಿದಿನ ಭಗವಂತನೇ ತಮ್ಮ ಅಸ್ತಿತ್ವದ ಸಂಪೂರ್ಣ ವಾಸ್ತವತೆ ಎಂದು ತಮ್ಮ ಅಹಂ ನ ಎಲ್ಲ ಅಲ್ಪ ಆಸೆಗಳನ್ನು ಬಿಟ್ಟುಕೊಡುತ್ತಾರೆ.

Paramahansa Yoganandaji with Daya Mataji

ಶ್ರೀ ಪರಮಹಂಸ ಯೋಗಾನಂದರು ಶ್ರೀ ದಯಾಮಾತಾರವರೊಂದಿಗೆ, ಶ್ರೀ ದಯಾಮಾತಾರವರು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ ಮೊದಲ ಶಿಷ್ಯವೃಂದದಲ್ಲಿ ಒಬ್ಬರು. 1931ರಲ್ಲಿ ಅವರು ಎಸ್‌ಆರ್‌ಎಫ್‌ ಆಶ್ರಮವನ್ನು ಸೇರಿದ ಸ್ವಲ್ಪ ಸಮಯದಲ್ಲೇ ಗುರುಗಳು ಅವರಿಗೆ ಹೇಳಿದರು: “ನೀನು ನನ್ನ ಗೂಡು ಮೊಟ್ಟೆ. ನೀನು ನನ್ನ ಬಳಿ ಬಂದಾಗಲೇ ನನಗೆ ತಿಳಿಯಿತು, ಇದೇ ರೀತಿ ಅನೇಕ ನಿಜ ಭಕ್ತರು ಈ ದಾರಿಗೆ ಸೆಳೆಯಲ್ಪಡುತ್ತಾರೆ ಎಂದು.”

ಶತ-ಶತಮಾನಗಳ ಒಂದು ಪರಂಪರೆ

ಅನಾದಿಕಾಲದಿಂದಲೂ, ಮಾನವನ ಅಂತರಾತ್ಮವನ್ನು ಆಳವಾಗಿ ಪ್ರಚೋದಿಸುತ್ತಿರುವ ಸಂಗತಿಗಳೆಂದರೆ ಪರಿಶುದ್ಧ ಪ್ರೇಮ, ಆನಂದ, ಭಗವಂತನ ಅರಿವು ಹಾಗೂ ಸಂಪೂರ್ಣತಾ ಭಾವದ ಹಂಬಲ — ಸತ್ಯಕ್ಕಾಗಿಯೇ ಹಂಬಲ. ವಿಶ್ವದ ಎಲ್ಲಾ ಶ್ರೇಷ್ಠ ಧರ್ಮಗಳಲ್ಲೂ ತಮ್ಮ ಸಾಂಸಾರಿಕ ಜೀವನವನ್ನು ಮತ್ತು ಎಲ್ಲಾ ಪ್ರಾಪಂಚಿಕ ಆಸೆಗಳನ್ನು ತೊರೆದು, ಹೃತ್ಪೂರ್ವಕವಾಗಿ ಆ ದಿವ್ಯಾನ್ವೇಷಣೆಯ ಹಾದಿಯಲ್ಲಿ ಸಾಗಿರುವವರನ್ನು ಕಾಣಬಹುದು.

ಶತ-ಶತಮಾನಗಳ ಈ ಪರಂಪರೆಯನ್ನು ಅನುಸರಿಸಿ ಯೋಗದಾ ಸತ್ಸಂಗದ ಸಂನ್ಯಾಸಿಗಳು ವೈರಾಗ್ಯದ ನಾಲ್ಕು ಪ್ರತಿಜ್ಞೆಗಳನ್ನು ಅಂಗೀಕರಿಸಿದ್ದಾರೆ: ಸರಳತೆ, ಬ್ರಹ್ಮಚರ್ಯ, ವಿಧೇಯತೆ ಹಾಗು ನಿಷ್ಠೆ. ಪೌರ್ವಾತ್ಯ ಹಾಗು ಪಾಶ್ಚಿಮಾತ್ಯ ದೇಶಗಳ ಧಾರ್ಮಿಕ ವಿಧಿ-ವಿಧಾನಗಳಂತೆ, ಈ ಸಂಕಲ್ಪಗಳು ಸನ್ಯಾಸ ಜೀವನದ ಬುನಾದಿಗಳಾಗಿವೆ.

ಪ್ರಾಚೀನ ಭಾರತದ ಸನ್ಯಾಸ ಶ್ರೇಣಿ

ಪರಮಹಂಸ ಯೋಗಾನಂದ ಮತ್ತು ಅವರ ಗುರುಗಳಾದ ಶ್ರೀ ಯುಕ್ತೇಶ್ವರರು ಭಾರತದ ಈ ಪ್ರಾಚೀನ ಶ್ರೇಣಿಯಲ್ಲಿಯೇ ಬರುತ್ತಾರೆ. ಶತಮಾನಗಳ ಹಿಂದೆ ಆದಿ ಶಂಕರಾಚಾರ್ಯರಿಂದ ಪುನರ್‌ ಸ್ಥಾಪಿಸಲ್ಪಟ್ಟ, ಇಂದಿಗೂ ಚಾಲ್ತಿಯಲ್ಲಿರುವ ಈ ಶ್ರೇಣಿಯನ್ನು, ಅದೇ ಕ್ರಮದಲ್ಲಿ ಆದರಣೀಯ ಗುರು ಪರಂಪರೆಯಲ್ಲಿ ಮುಂದುವರೆಸಲಾಗುತ್ತಿದೆ. ಸ್ವಾಮಿ ಶ್ರೇಣಿಯ ಎಲ್ಲಾ ಸನ್ಯಾಸಿಗಳು ತಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಆದಿ ಶಂಕರಾಚಾರ್ಯರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅವರು ರಿಕ್ತತೆ (ಭೌತಿಕ ವಸ್ತುಗಳ ಸಂಬಂಧವನ್ನು ತ್ಯಜಿಸುವಿಕೆ), ಪರಿಶುದ್ಧತೆ ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರು ಅಥವಾ ಪ್ರಮುಖರೆಡೆಗೆ ವಿಧೇಯತೆಯಿಂದಿರುವ ಪ್ರತಿಜ್ಞೆಯನ್ನು ಮಾಡುತ್ತಾರೆ. ಸ್ವಾಮಿ ಶ್ರೇಣಿಯಲ್ಲಿ ಹತ್ತು ಉಪಶ್ರೇಣಿಗಳಿರುತ್ತವೆ. ಅದರಲ್ಲಿ ಗಿರಿ (“ಪರ್ವತ”) ಒಂದು ಉಪಶ್ರೇಣಿಯಾಗಿದ್ದು, ಸ್ವಾಮಿ ಶ್ರೀ ಯುಕ್ತೇಶ್ವರರು ಮತ್ತು ಪರಮಹಂಸ ಯೋಗಾನಂದರು ಈ ಉಪಶ್ರೇಣಿಗೆ ಸೇರಿದವರಾಗಿದ್ದಾರೆ.

ಸನ್ಯಾಸ ದೀಕ್ಷೆಯನ್ನು ಸ್ವೀಕರಿಸುವ ಎಲ್ಲಾ ವೈಎಸ್‌ಎಸ್ ಸನ್ಯಾಸಿಗಳು ಸ್ವಾಮಿ ಶ್ರೇಣಿಗೆ ಸೇರಿದವರಾಗುತ್ತಾರೆ.

ಶ್ರೀ ದಯಾ ಮಾತಾ (1914-2010) ಮತ್ತು ಪ್ರಾಪಂಚಿಕ ಜೀವನವನ್ನು ತ್ಯಜಿಸಲು ಮತ್ತು ತಮ್ಮ ಜೀವನವನ್ನು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಲು ಬಯಸಿದ ಇತರ ಸಮರ್ಪಿತ ಶಿಷ್ಯರ ಆಗಮನದೊಂದಿಗೆ ಪರಮಹಂಸ ಯೋಗಾನಂದರು 1930 ರ ದಶಕದ ಆರಂಭದಲ್ಲಿ ಮೊದಲ ಎಸ್‌ಆರ್‌ಎಫ್‌/ವೈಎಸ್‌ಎಸ್ ಸನ್ಯಾಸಿಗಳ ಸಮುದಾಯವನ್ನು ಸ್ಥಾಪಿಸಿದರು. 1952ರಲ್ಲಿ ಶ್ರೀ ಪರಮಹಂಸ ಯೋಗಾನಂದರ ಮರಣದ ನಂತರ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅವರ ಶಿಷ್ಯರ ನಾಯಕತ್ವದಲ್ಲಿ ಎಸ್‌ಆರ್‌ಎಫ್‌/ವೈಎಸ್‌ಎಸ್ ಸನ್ಯಾಸಿ ಬಳಗವು ನಿರಂತರವಾಗಿ ಬೆಳೆಯುತ್ತಿದೆ.

ಶ್ರೀ ದಯಾ ಮಾತಾರವರು ತಮ್ಮ ಧೀರ್ಘಕಾಲೀನ ಆಡಳಿತಾವಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಭಾರತ, ಅಮೇರಿಕ ಮತ್ತು ಯೂರೋಪ್‌ ದೇಶಗಳಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್‌ ಆಶ್ರಮಗಳಲ್ಲಿ ಸನ್ಯಾಸ ತರಬೇತಿ ಕಾರ್ಯಕ್ರಮಗಳನ್ನು ಅತ್ಯಂತ ಆಸಕ್ತಿ ವಹಿಸಿ ಅಭಿವೃದ್ಧಿಪಡಿಸಿದರು. ಅವರ ಈ ಪ್ರಯತ್ನಗಳಲ್ಲಿ, ಶ್ರೀ ಮೃಣಾಲಿನಿ ಮಾತಾರವರು (1931-2017) ಅನೇಕ ದಶಕಗಳ ಕಾಲ ಅವರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಶ್ರೀ ಮೃಣಾಲಿನಿ ಮಾತಾರವರು ಎಸ್‌ಆರ್‌ಎಫ್‌ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು ಹಾಗೂ 2011 ರಲ್ಲಿ ದಯಾ ಮಾತಾರವರಿಗೆ ಉತ್ತರಾಧಿಕಾರಿಯಾಗಿ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್‌ ಸಂಸ್ಥೆಯ ಅಧ್ಯಕ್ಷರಾದರು. 2017ರಲ್ಲಿ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಅಧ್ಯಕ್ಷರಾಗಿ ನೇಮಕಗೊಂಡು, ಎಸ್‌ಆರ್‌ಎಫ್‌/ವೈಎಸ್‌ಎಸ್ ಸನ್ಯಾಸ ಬಳಗವನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ತಮ್ಮ ಜೀವನವನ್ನು ಭಗವಂತನ ಅನ್ವೇಷಣೆಗಾಗಿ ಹಾಗೂ ಮನುಕುಲದ ಸೇವೆಗಾಗಿ ಮುಡಿಪಾಗಿಡಲು ಬಯಸುವ ನೂರಾರು ಸಂನ್ಯಾಸಿಗಳಿಂದ ತುಂಬಿದ ಈ ಸಮುದಾಯಗಳು ಅಭಿವೃದ್ಧಿಯಾಗುತ್ತಿವೆ.

ಆಶ್ರಮದ ದಿನಚರಿ

ಸನ್ಯಾಸಿಯಾಗಿ ನನ್ನ ಜೀವನವು ಭಗವಂತನ ಅಮಿತ ಸೇವೆಗಾಗಿ ಮತ್ತು ಆತನ ಸಂದೇಶವನ್ನು ಸಾರುವುದರ ಮೂಲಕ ಎಲ್ಲರ ಹೃದಯದಲ್ಲಿ ಆಧ್ಯಾತ್ಮಿಕ ಜ್ಯೋತಿಯನ್ನು ಬೆಳಗಿಸುವುದಕ್ಕಾಗಿ ಮೀಸಲಾಗಿದೆ….ಭಗವಂತ, ನನ್ನ ಗುರು ಹಾಗೂ ಪರಮಗುರುಗಳು ನನ್ನ ಮುಖಾಂತರ ಪ್ರಾರಂಭಿಸಿದ ಈ ಸಂಸ್ಥೆಯ ಕಾರ್ಯಗಳನ್ನು ತ್ಯಾಗ ಮತ್ತು ಭಗವತ್‌ಪ್ರೇಮದ ಉನ್ನತ ಧ್ಯೇಯಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಂದ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

— ಪರಮಹಂಸ ಯೋಗಾನಂದ

ವೈವಿಧ್ಯಮಯ ಹಿನ್ನೆಲೆಗಳ ಒಗ್ಗೂಡಿಕೆ

ಯಾವುದೇ ಸನ್ಯಾಸಿಗೆ ಸರ್ವ ಕಾಲದಲ್ಲಿಯೂ ಸಮ್ಮತವಾದ ಆದರ್ಶವೆಂದರೆ, ಹೃತ್ಪೂರ್ವಕವಾಗಿ ಭಗವಂತನನ್ನು ಪ್ರೀತಿಸುವುದು; ಮತ್ತು ತನ್ನ ಒಡನಾಡಿಗಳನ್ನು ಭಾವನಾತ್ಮಕವಾಗಿ ಮಾತ್ರವಲ್ಲದೆ, ದೈನಂದಿನ ಬದುಕಿನ ಎಲ್ಲಾ ಸಂದರ್ಭಗಳಲ್ಲೂ — ಮತ್ತು ಪ್ರತಿಯೊಬ್ಬರಲ್ಲೂ ಭಗವಂತನ ರೂಪವನ್ನೇ ಕಾಣುತ್ತಾ, ಪ್ರತಿಯೊಬ್ಬರ ಅವಶ್ಯಕತೆಗಳನ್ನೂ ನಮ್ಮದೆಂದೇ ಭಾವಿಸುತ್ತ ಪ್ರೀತಿಸುವುದು. “ಒಮ್ಮೆ ನಾವು ಅಪರಿಚಿತರಾಗಿದ್ದೆವು,” ಪರಮಹಂಸರು ಹೇಳಿದರು, “ಆದರೆ ನಾವು ಭಗವಂತನನ್ನು ಪ್ರೀತಿಸಲಾರಂಭಿಸಿದ ಮೇಲೆ ನಾವೆಲ್ಲರೂ ಸೋದರ-ಸೋದರಿಯರಾಗುತ್ತೇವೆ.”

ವೈಎಸ್‌ಎಸ್ ಸನ್ಯಾಸಿಗಳು ವಿವಿಧ ಹಿನ್ನೆಲೆಗಳಿಂದ ಬಂದವರಾಗಿದ್ದು — ವಿಭಿನ್ನ ಸಂಸ್ಕೃತಿ, ಧಾರ್ಮಿಕ ಆಚರಣೆಗಳು, ಶೈಕ್ಷಣಿಕ ಬೆಳವಣಿಗೆ ಹಾಗೂ ವೃತ್ತಿಯ ಅನುಭವಗಳನ್ನು ಹೊಂದಿರುವವರಾದರೂ, ಈ ಎಲ್ಲಾ ಸನ್ಯಾಸಿಗಳಲ್ಲೂ ಸಾಮಾನ್ಯವಾಗಿ ಕಾಣಸಿಗುವ ಉತ್ಕಟವಾದ ಬಯಕೆಯೆಂದರೆ ಕೇವಲ ಭಗವಂತನಿಗಾಗಿ ಜೀವಿಸುವುದೊಂದೇ.

ಯಾವುದೇ ಸನ್ಯಾಸಿಯು, ಶಿಸ್ತುಬದ್ಧ ಜೀವನ, ಆತ್ಮಾವಲೋಕನ, ಶ್ರದ್ಧಾಪೂರ್ವಕ ಧ್ಯಾನ ಹಾಗೂ ನಿಸ್ವಾರ್ಥ ಸೇವೆ ಇವುಗಳ ಮೂಲಕ ಆತ್ಮದ ಆಳವಾದ ಆನಂದ ಮತ್ತು ಭಗವಂತನು ಮಾತ್ರ ನೀಡಬಲ್ಲ ಅತೀವವಾದ ಪ್ರೀತಿಯನ್ನು ಅನುಭವಿಸುತ್ತಾನೆ.

ಆಶ್ರಮದಲ್ಲಿ_ವೈಎಸ್ಎಸ್_ಸನ್ಯಾಸಿಗಳು_ದೈನಂದಿನ_ಜೀವನ

ಆಶ್ರಮದ ದಿನಚರಿ

ಆಶ್ರಮದಲ್ಲಿ ವೈಎಸ್ಎಸ್ ಸನ್ಯಾಸಿಗಳ ದೈನಂದಿನ ಜೀವನ

‘‘ಆಶ್ರಮವಾಸವು ಅತ್ಯಂತ ಸರಳವೂ ಹಾಗೂ ಸೌಹಾರ್ದಯುತವೂ ಆಗಿದ್ದು, ಅತ್ಯಂತ ಫಲಪ್ರದವೂ ಆಗಿದೆ. ಶಾಶ್ವತವಾದ ನೈಜ ಆನಂದವನ್ನೂ, ತೃಪ್ತಿಯನ್ನೂ ಮತ್ತು ಆಳವಾದ ಸುರಕ್ಷತಾ ಭಾವವನ್ನೂ ಹಾಗೂ ಆತ್ಮೋನ್ನತಿಗೆ ಬೇಕಾದ ಪೋಷಣೆಯನ್ನು ನೀಡುತ್ತದೆ.’’

— ಆಶ್ರಮದಲ್ಲಿ ಒಂಭತ್ತು ವರ್ಷಗಳಿಂದ ನೆಲೆಸಿರುವ ಓರ್ವ ಸನ್ಯಾಸಿ

ಸನ್ಯಾಸಿಯ ದಿನಚರಿಯು ನಿರ್ದಿಷ್ಟ ಆಶ್ರಮ ಹಾಗೂ ಆತನಿಗೆ ವಹಿಸಿರುವ ಜವಾಬ್ದಾರಿಗಳನ್ನವಲಂಬಿಸಿ ವಿಭಿನ್ನವಾಗಿರುತ್ತಿದ್ದರೂ, ಅದು, ಪರಮಹಂಸರು ಒತ್ತುಕೊಡುತ್ತಿದ್ದ ಸಮತೋಲಿತ ಆಧ್ಯಾತ್ಮಿಕ ಜೀವನದ ಮೂಲಭೂತ ಅಂಶಗಳನ್ನು ಸದಾ ಒಳಗೊಂಡಿರುತ್ತಿತ್ತು: ಧ್ಯಾನ ಮತ್ತು ಪ್ರಾರ್ಥನೆ, ಸೇವಾಕಾರ್ಯಗಳು, ಆಧ್ಯಾತ್ಮಿಕ ಅಧ್ಯಯನ ಮತ್ತು ಆತ್ಮಾವಲೋಕನ, ವ್ಯಾಯಾಮ ಮತ್ತು ಮನೋರಂಜನೆ, ಏಕಾಂತ ಮತ್ತು ಮೌನ.

ಗುರುವಿನ ಯೋಗ ಪ್ರಚಾರಕ್ಕೆ ಸೇವೆ ಸಲ್ಲಿಸುವುದು

ವೈಎಸ್‌ಎಸ್ ಸನ್ಯಾಸಿಗಳು ಸಂಸ್ಥೆಯ ಆಧ್ಯಾತ್ಮಿಕ ಮತ್ತು ಮಾನವೀಯ ಸೇವಾ ಕಾರ್ಯಗಳನ್ನು ವಿವಿಧ ಸ್ತರಗಳಲ್ಲಿ ಕೈಗೊಳ್ಳುತ್ತಾರೆ:

  • ಪರಮಹಂಸರ ಮತ್ತು ಅವರ ನೇರ ಶಿಷ್ಯರ ಬರಹಗಳು ಮತ್ತು ಧ್ವನಿಮುದ್ರಿಕೆಗಳ ಪ್ರಕಟಣೆ (ಎಲ್ಲಾ ಮಾಧ್ಯಮಗಳಲ್ಲಿ)
  • ಆಧ್ಯಾತ್ಮಿಕ ಸಲಹೆಗಳನ್ನು ನೀಡುವುದು
  • ಸತ್ಸಂಗಗಳು, ಧ್ಯಾನ ಶಿಬಿರಗಳು ಮತ್ತು ಉಪನ್ಯಾಸ ಪ್ರವಾಸಗಳನ್ನು ಏರ್ಪಡಿಸುವುದು
  • ಭಾರತದ ಉಪಖಂಡದಲ್ಲಿ 200 ಕ್ಕೂ ಹೆಚ್ಚು ಕೇಂದ್ರ ಹಾಗೂ ಮಂಡಳಿಗಳನ್ನು ಮಾರ್ಗದರ್ಶಿಸುವುದು
  • ವೈಎಸ್‌ಎಸ್ ಗೆ ಸೇರಿರುವ ಕಟ್ಟಡಗಳು, ಧ್ಯಾನದ ಉದ್ಯಾನವನಗಳು ಮತ್ತು ಆಶ್ರಮಗಳ ನಿರ್ವಹಣೆ
  • ವೈಎಸ್‌ಎಸ್ ಪಾಠಮಾಲಿಕೆ, ಪುಸ್ತಕಗಳು, ಇ-ಪುಸ್ತಕಗಳು ಮತ್ತು ಧ್ವನಿಮುದ್ರಿಕೆಗಳ ವಿತರಣೆಯ ಮೇಲ್ವಿಚಾರಣೆ
  • ಆಧ್ಯಾತ್ಮಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯವನ್ನು ನಡೆಸಿಕೊಂಡು ಹೋಗಲು ಅಗತ್ಯವಿರುವ ಅನೇಕ ಆಡಳಿತಾತ್ಮಕ, ಕಛೇರಿಯ ಮತ್ತು ಇತರ ವ್ಯವಹಾರಗಳನ್ನು ನಿರ್ವಹಿಸುವುದು
ವೈಎಸ್ಎಸ್ ಸನ್ಯಾಸಿ ಭಕ್ತರಿಗೆ ಆಧ್ಯಾತ್ಮಿಕ ಸಲಹೆಯನ್ನು ನೀಡುತ್ತಿದ್ದಾರೆ

ಈ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಆಧುನಿಕ ವಿಧಾನಗಳನ್ನು ಬಳಸುತ್ತಿದ್ದರೂ ಸಹ, ಇದರ ಮೂಲ ಉದ್ದೇಶವು, ಸದಾ ವಿಶೇಷ ಆಧ್ಯಾತ್ಮಿಕ ವ್ಯವಸ್ಥೆಯ ಶುದ್ಧತೆ ಮತ್ತು ಚೈತನ್ಯವನ್ನು ಕಾಪಾಡುವುದೇ ಆಗಿದೆ, ಇದನ್ನು ಜಗತ್ತಿಗೆ ತರುವ ಕಾರ್ಯವನ್ನು ವೈಎಸ್‌ಎಸ್/ಎಸ್‌ಆರ್‌ಎಫ್ ಗುರು ಪರಂಪರೆಯು ಪರಮಹಂಸ ಯೋಗಾನಂದರನ್ನು ನೇಮಿಸಿದರು. ಪ್ರತಿಯೊಬ್ಬ ವೈಎಸ್‌ಎಸ್ ಸನ್ಯಾಸಿಯ ಅತ್ಯುನ್ನತ ಅಂತಃಪ್ರೇರಣೆಯೆಂದರೆ ಎಲ್ಲರೆಡೆಗೂ ಸಹಾನುಭೂತಿ ಹಾಗೂ ವಿವೇಚನೆಯಿಂದ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಪ್ರತಿದಿನ ಭಗವಂತನೊಂದಿಗೆ ಹೆಚ್ಚು ಹೆಚ್ಚು ಶ್ರುತಿಗೂಡುವುದು.

‘‘ನನ್ನ ಗುರುಗಳ ಆಶ್ರಮಗಳಲ್ಲಿ ಪ್ರಾಮಾಣಿಕ ಮತ್ತು ಸಮರ್ಪಿತ ಆತ್ಮಗಳಿಂದ ಸುತ್ತುವರೆದುಕೊಂಡು ಬದುಕುವುದು, ಸೇವೆ ಮಾಡುವುದು ಮತ್ತು ಭಗವಂತನನ್ನು ಅರಸಲು ಸ್ವತಂತ್ರರಾಗಿರುವುದು ಎಂತಹ ಅನುಗ್ರಹ ಎಂದು ನಾನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದೇನೆ.’’

— ಆಶ್ರಮದಲ್ಲಿ ಏಳು ವರ್ಷಗಳಿಂದ ನೆಲೆಸಿರುವ ಓರ್ವ ಸನ್ಯಾಸಿ

ಸನ್ಯಾಸ ಜೀವನದ ನಾಲ್ಕು ಹಂತಗಳು

ಸಮರ್ಪಿಸುವೆ ನಿನ್ನ ಚರಣಗಳಿಗೆ ನಾನು
ನನ್ನ ಜೀವ, ನನ್ನ ಅಂಗಗಳು, ನನ್ನ ಚಿಂತನೆ ಹಾಗೂ ನುಡಿಗಳನು.
ಏಕೆಂದರೆ ಅವುಗಳೆಲ್ಲ ನಿನ್ನವೇ; ಅವುಗಳೆಲ್ಲ ನಿನ್ನವೇ.

— ಪರಮಹಂಸ ಯೋಗಾನಂದ

ವೈಎಸ್‌ಎಸ್ ಆಶ್ರಮಗಳಲ್ಲಿ ಸನ್ಯಾಸಿ ಜೀವನದ ನಾಲ್ಕು ಹಂತಗಳಿವೆ, ಇವು ವಿರಾಗಿಯ ಜೀವನ ಮತ್ತು ಸನ್ಯಾಸತ್ವದ ಪ್ರತಿಜ್ಞೆಗಳಿಗೆ ಒಬ್ಬರ ಬದ್ಧತೆಯ ಕ್ರಮೇಣವಾದ ಆಳವನ್ನು ಸೂಚಿಸುತ್ತದೆ. ಈ ಹಂತಗಳಿಗೆ ಯಾವುದೇ ನಿರ್ದಿಷ್ಟ ಕಾಲಮಾನವಿಲ್ಲ. ಬದಲಾಗಿ, ಪ್ರತಿ ಸನ್ಯಾಸಿಯ ಆಧ್ಯಾತ್ಮಿಕ ಪ್ರಗತಿ ಹಾಗೂ ಈ ಜೀವನಕ್ಕೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಆತನ ಸಿದ್ಧತೆಯನ್ನು ಸದಾ ವೈಯಕ್ತಿಕ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಆ ದೈವೀ ಕರೆಯನ್ನು ನೀವು ಆಲಿಸಿದಿರೇ?

ಸನ್ಯಾಸ ವೃತ್ತಿ

ನಿನ್ನ ಮನಸ್ಸನ್ನು ನನ್ನಲ್ಲಿ ನೆಡು; ನನ್ನ ಭಕ್ತನಾಗು; ಎಲ್ಲವನ್ನೂ ನನಗಾಗಿ ತ್ಯಾಗ ಮಾಡು; ನನ್ನಲ್ಲಿ ಶರಣಾಗು. ನೀನು ನನಗೆ ಪ್ರಿಯನು, ನಿನಗೆ ವಚನವನ್ನು ನೀಡುತ್ತೇನೆ: ನೀನು ನನ್ನನ್ನು ಹೊಂದುತ್ತೀಯೆ! ನನಗಾಗಿ ಎಲ್ಲಾ ಧರ್ಮಗಳನ್ನು (ಕರ್ತವ್ಯಗಳನ್ನು) ತ್ಯಜಿಸು, ಕೇವಲ ನನ್ನನ್ನೇ ಧ್ಯಾನಿಸು!

— ಪರಮಹಂಸ ಯೋಗಾನಂದ

ನಿಮ್ಮ ಜೀವನವನ್ನು ಸಂಪೂರ್ಣವಾಗಿ ಭಗವಂತ ಮತ್ತು ಗುರುವಿನ ಸೇವೆಗಾಗಿ ಮುಡಿಪಾಗಿಡಲು ಮತ್ತು ಅವರ ದಿವ್ಯ ಗುರಿಯೆಡೆಗೆ ಸಾಗಲು ನಿಮ್ಮ ಹೃದಯ ಸೆಳೆಯುತ್ತಿದೆಯೇ?

ಅಂತಿಮ ಗುರಿಯನ್ನು (ಭಗವಂತನನ್ನು) ಸಾಧಿಸಲು ಒಟ್ಟಾಗಿ ಶ್ರಮಿಸುತ್ತಿರುವ, ಭಗವಂತನನ್ನು ಅರಸುತ್ತಿರುವ ಆತ್ಮಗಳ ತಂಡದ ಭಾಗವಾಗಲು ನೀವು ಹಂಬಲಿಸಿರುವಿರೆ?

ಹಾಗಾದಲ್ಲಿ, ನಿಮ್ಮ ಅಂತರಾತ್ಮದ ಕರೆಗೆ ಉತ್ತರವಾಗಿ ನೀವು ಸನ್ಯಾಸ ಜೀವನವನ್ನು ಸ್ವೀಕರಿಸಲು ಪರಿಗಣಿಸಬಹುದು.

ಸಾಮಾನ್ಯ ಅವಶ್ಯಕತೆಗಳು (ಪ್ರತಿ ಅಭ್ಯರ್ಥಿಯ ಪರಿಸ್ಥಿತಿಗಳು ಹಾಗೂ ಅರ್ಹತೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು):

  • ಅವಿವಾಹಿತರು
  • ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ
  • ಸಾಂಸಾರಿಕ ಮತ್ತು ಇತರ ಜವಾಬ್ದಾರಿಗಳಿಂದ ಮುಕ್ತರು
  • ಯೋಗದಾ ಸತ್ಸಂಗ ಪಾಠಮಾಲಿಕೆಯ ವಿದ್ಯಾರ್ಥಿ
  • 18 ಮತ್ತು 40 ವರ್ಷಗಳ ವಯೋಮಿತಿಯಲ್ಲಿರುವವರು
  • ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸುವ ಸಾಮರ್ಥ್ಯ

ವೈಎಸ್‌ಎಸ್ ಆಶ್ರಮ ವಾಸವು ದೇವರೊಂದಿಗಿನ ನಿಮ್ಮ ವೈಯಕ್ತಿಕ ಬಾಂಧವ್ಯವನ್ನು ಇನ್ನೂ ಹೆಚ್ಚು ಗಾಢವಾಗಿಸುತ್ತ, ಪರಮಹಂಸ ಯೋಗಾನಂದರ ಮಾನವೀಯ ಸೇವಾಕಾರ್ಯಗಳನ್ನು ಆಧ್ಯಾತ್ಮಿಕವಾಗಿ ಬೆಂಬಲಿಸುವ ಗುಂಪಿನೊಡನೆ ಸೇರಿ ಸೇವೆ ಮಾಡುವ ಒಂದು ಪವಿತ್ರ ಅವಕಾಶವನ್ನು ಕೊಡುತ್ತದೆ.

ನಮ್ಮನ್ನು ಸಂಪರ್ಕಿಸಲು ಆಹ್ವಾನ

ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿ, ಆತ್ಮೋನ್ನತಿ, ಧ್ಯಾನ ಹಾಗೂ ಮಾನವೀಯ ಸೇವಾಕಾರ್ಯಗಳಿಗೆ ಮೀಸಲಾದ ಜೀವನವನ್ನು ನಡೆಸುವ ಅವಕಾಶಗಳ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿಯಿದ್ದಲ್ಲಿ, ನಮ್ಮನ್ನು ಸಂಪರ್ಕಿಸಲು ಆಹ್ವಾನಿಸುತ್ತೇವೆ.

ಸನ್ಯಾಸ: ಸನ್ಯಾಸತ್ವದ ಆದರ್ಶಗಳೆಡೆಗೆ ಸಮರ್ಪಣೆ ಮತ್ತು ನಿಷ್ಠೆಯ ಜೀವನ

YSS/SRF ಅಧ್ಯಕ್ಷ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು 2019 ರಲ್ಲಿ YSS ರಾಂಚಿ ಆಶ್ರಮದಲ್ಲಿ ಸ್ಮೃತಿ ಮಂದಿರದಲ್ಲಿ ಸ್ವಾಮಿ ಆದೇಶಕ್ಕೆ ಹೊಸ ದೀಕ್ಷೆಗಳೊಂದಿಗೆ
ವೈಎಸ್‌ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು, ಹೊಸದಾಗಿ ಸನ್ಯಾಸ ದೀಕ್ಷೆ ಪಡೆದವರೊಂದಿಗೆ, ವೈಎಸ್‌ಎಸ್ ರಾಂಚಿ ಆಶ್ರಮದ ಸ್ಮೃತಿ ಮಂದಿರದಲ್ಲಿ 2019 ರಲ್ಲಿ.

ನೂರು ವರ್ಷಗಳಿಗೂ ಹಿಂದೆ, ಜುಲೈ 1915 ರಲ್ಲಿ, ಪರಮಹಂಸ ಯೋಗಾನಂದರು ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರಿಂದ ಭಾರತದ ಪ್ರಾಚೀನ ಸನ್ಯಾಸ ಪರಂಪರೆಯಂತೆ ಸನ್ಯಾಸ ದೀಕ್ಷೆಯನ್ನು ಸಿರಾಂಪುರ, ಭಾರತದಲ್ಲಿ ಸ್ವೀಕರಿಸಿದರು. ಈ ಘಟನೆಯು 22 ವರ್ಷದ ಮುಕುಂದ ಲಾಲ್‌ ಘೋಷ್‌ — ಆಗ ಅವರಿಗೆ ಸ್ವಾಮಿ ಯೋಗಾನಂದ ಗಿರಿ ಎಂದು ಮರು ನಾಮಕರಣ ಮಾಡಲಾಯಿತು — ಅವರ ಜೀವನದಲ್ಲಿ ದೊಡ್ಡ ತಿರುವನ್ನು ತಂದುಕೊಟ್ಟಿದ್ದಲ್ಲದೆ, 20 ನೇ ಶತಮಾನ ಮತ್ತು ಅದರ ನಂತರವೂ ಜಾಗತಿಕವಾಗಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವಲ್ಲಿ ಅವರ ಪ್ರಭಾವದ ಭವಿಷ್ಯವನ್ನು ನುಡಿಯಿತು. ಅವರು ಸ್ಥಾಪಿಸಿದ ಸನ್ಯಾಸ ಸಂಪ್ರದಾಯವು ಅವರ ಶಾಶ್ವತ ಪರಂಪರೆಯ ಭಾಗವಾಗಿ, ಪ್ರಾಮುಖ್ಯತೆಯನ್ನು ಪಡೆಯಿತು.

ಪರಮಹಂಸ ಯೋಗಾನಂದರು ಸೇರಿರುವ ಪ್ರಾಚೀನ ಸ್ವಾಮಿ ಶ್ರೇಣಿಯು ಯೋಗದಾ ಸತ್ಸಂಗ ಸಂಸ್ಥೆಯ ಸನ್ಯಾಸಿ ಬಳಗದಲ್ಲಿ ದಿನದಿನವೂ ವೃದ್ಧಿಸುತ್ತಿದೆ, ಇದು ಭಾರತದ ವಿವಿಧ ಭಾಗಗಳಿಂದ ಬಂದ ಸನ್ಯಾಸಿಗಳನ್ನು ಒಳಗೊಂಡಿದೆ. ಈ ಸ್ವಾಮಿ ಶ್ರೇಣಿಯು ವೈಎಸ್‌ಎಸ್‌ನ ಬೆಳವಣಿಗೆಗೆ ಆಧಾರಸ್ಥಂಭವಾಗಿದ್ದು, ಭಾರತದ ಉಪಖಂಡದಲ್ಲಿ ಯೋಗ ಪ್ರಸಾರದ ವಿಸ್ತರಣೆಗೆ ಸಹಾಯಕವಾಗಿದೆ.

ಆಹ್ವಾನ

ಅವಿವಾಹಿತ ಪುರುಷರು, 18 ಮತ್ತು 40 ವರ್ಷಗಳ ವಯೋಮಿತಿಯಲ್ಲಿರುವವರು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವವರು, ಸಾಂಸಾರಿಕ ಜವಾಬ್ದಾರಿಗಳಿಂದ ಬಿಡುಗಡೆ ಹೊಂದಿರುವವರು ಮತ್ತು ಪ್ರಾಮಾಣಿಕವಾಗಿ ಭಗವದನ್ವೇಷಣೆಗೆ ಮತ್ತು ಸನ್ಯಾಸ ಬಳಗದಲ್ಲಿ ಸನ್ಯಾಸಿಯಾಗಿ ಅವನ ಸೇವೆಗೆ ತಮ್ಮನ್ನು ಮುಡಿಪಾಗಿಡಲು ಬಯಸುವವರು, ಹೆಚ್ಚಿನ ಮಾಹಿತಿಗಾಗಿ ಯೋಗದಾ ಸತ್ಸಂಗ ಶಾಖಾ ಆಶ್ರಮ, ರಾಂಚಿಯನ್ನು ಸಂಪರ್ಕಿಸಲು ಕೋರಲಾಗಿದೆ.