ಪರಮಹಂಸ ಯೋಗಾನಂದ ಅವರಿಂದ
ಸಮೂಹ ಧ್ಯಾನದ ಮೌಲ್ಯದ ಕುರಿತು ಅವರ ಉಪನ್ಯಾಸಗಳು ಮತ್ತು ಬರಹಗಳಿಂದ ಆಯ್ದ ಭಾಗಗಳು

ವೈಎಸ್ಎಸ್ ಧ್ಯಾನ ಕೇಂದ್ರ, ಮುಂಬಯಿ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಸಂಸ್ಥೆಯು ತಮ್ಮದೇ ಆತ್ಮ ಸಾಕ್ಷಾತ್ಕಾರದ ವಿಸ್ತರಣೆಯ ಮೂಲಕ ಆತ್ಮಗಳನ್ನು ದೇವರೆಡೆಗೆ ಸೆಳೆಯಲು ಈ ಪ್ರಪಂಚಕ್ಕೆ ಆಗಮಿಸಿದೆ. ವೈಎಸ್‌ಎಸ್/ಎಸ್‌ಆರ್‌ಎಫ್ ಸಂಸ್ಥೆಯು ಆತ್ಮ ಸಾಕ್ಷಾತ್ಕಾರಕ್ಕಾಗಿ ಹಂತ ಹಂತವಾದ ಏಣಿಯನ್ನು ಒದಗಿಸುತ್ತದೆ, ಇದು ಸಾರ್ವತ್ರಿಕವಾದ ಸತ್ಯ, ವೈಜ್ಞಾನಿಕ ಮತ್ತು ಶಾಶ್ವತ ಸಂತೋಷದ ಗುರಿಯ ಸಾಕಾರಕ್ಕೆ ಶೀಘ್ರವಾದ ಹಾದಿಯೂ ಆಗಿದೆ. ವೈಎಸ್‌ಎಸ್/ಎಸ್‌ಆರ್‌ಎಫ್‌ನ ಬೋಧನೆಗಳ ಅಭ್ಯಾಸವು ವ್ಯಕ್ತಿಯು ತನ್ನೊಳಗೆ, ಬೆನ್ನುಹುರಿಯ ಹೆದ್ದಾರಿಯ ಮೂಲಕ ಎಲ್ಲ ಧರ್ಮಗಳ ನಂಬಿಕೆಗಳ ದಾರಿಗಳು ಸೇರುವ ಆತ್ಮ ಸಾಕ್ಷಾತ್ಕಾರವನ್ನು ಪ್ರಕಟವಾಗುವಂತೆ ಮಾಡುತ್ತದೆ; ಇದು ಅನಂತ ಆನಂದದ ನಿವಾಸಕ್ಕೆ ನೇರವಾಗಿ ಸೇರುವ ರಾಜ ಯೋಗದ ಧ್ಯಾನವಾಗಿದೆ.
ದೇವರ ಜೊತೆ ಭಗವತ್-ಸಂಸರ್ಗವನ್ನು ಹೊಂದುವ ತಂತ್ರವನ್ನು ತಿಳಿದಿರುವವರು ಇತರೆ ಧಾರ್ಮಿಕ ಆಧ್ಯಾತ್ಮಿಕ ವ್ಯಕ್ತಿಗಳ ಜೊತೆಗಿನ ಸಾಹಚರ್ಯದಲ್ಲಿ ಧ್ಯಾನದ ರಹಸ್ಯವನ್ನು ತಿಳಿಯುವರು ಮತ್ತು ಆ ಮೂಲಕ ದೇವರನ್ನು ಕಾಣುವರು. ತಮ್ಮಷ್ಟಕ್ಕೇ ತಾವು ಧರ್ಮದ ಅನುಯಾಯಿಗಳು ಎಂದು ಭಾವಿಸುವ ಅನೇಕ ವ್ಯಕ್ತಿಗಳು ದೇವರೊಂದಿಗೆ ನಿಕಟ ಸಂವಹನವನ್ನು ಹೊಂದಲು ಸಾಧ್ಯವಾಗುವುದಿಲ್ಲ. ಅಂತಹ ಧಾರ್ಮಿಕ ವ್ಯಕ್ತಿಗಳ ಜೊತೆಗಿನ ಒಡನಾಟವು ದೇವರು ಮತ್ತು ಆಧ್ಯಾತ್ಮಿಕ ಜೀವನದ ಕುರಿತಂತೆ ಅವಾಸ್ತವಿಕ ನಂಬಿಕೆಗಳನ್ನು ಹೆಚ್ಚುವಂತೆ ಮಾಡುತ್ತದೆ; ಕೆಲವೊಮ್ಮೆ ಅದು ಮತಧರ್ಮಶಾಸ್ತ್ರಗಳ ಯುದ್ಧವಾಗಿ ಪರಿಣಮಿಸುತ್ತದೆ. ಆದರೆ ವ್ಯಕ್ತಿಯೊಬ್ಬ ಆಳವಾಗಿ ಧ್ಯಾನ ಮಾಡುವ ಇತರೆ ಭಕ್ತರ ಜೊತೆ ವೈಜ್ಞಾನಿಕ ಮತ್ತು ನಿರಂತರವಾದ ಪ್ರಗತಿದಾಯಕ ಧ್ಯಾನದ ಮಾರ್ಗಗಳ ಮೂಲಕ ದೇವರ ಜೊತೆಗಿನ ನಿಕಟ ಸಂವಹನವನ್ನು ಅನುಸರಿಸುವ ಸಾರ್ವತ್ರಿಕ ಮಾರ್ಗವನ್ನು ಕಂಡುಕೊಂಡಾಗ ಅವನು ಪರಸ್ಪರ ಸಹಾಯದ ಮೂಲಕ ಆತ್ಮ-ಸಾಕ್ಷಾತ್ಕಾರವನ್ನು ಬೆಳೆಸಿಕೊಳ್ಳುತ್ತಾನೆ.
ಆಧ್ಯಾತ್ಮಿಕ ಸಂಪರ್ಕದ ಮೌಲ್ಯ

ವೈಎಸ್‌ಎಸ್ ಧ್ಯಾನ ಕೇಂದ್ರ, ಚಂಡೀಗಡ
ತಮ್ಮ ಜೀವನದಲ್ಲಿ ನಿಜವಾದ ಧರ್ಮವನ್ನು ನೋಡಿದ, ಅನುಭವಿಸಿದ ಮತ್ತು ಅರಿತುಕೊಂಡ ವ್ಯಕ್ತಿಗಳೊಂದಿಗೆ ನಾವು ಸಂಪರ್ಕ ಮಾಡುವವರೆಗೂ, ಧರ್ಮ ಎಂದರೆ ಯಾವುದು ಮತ್ತು ಅದು ಯಾವ ರೀತಿಯಲ್ಲಿ ಸಾರ್ವತ್ರಿಕವಾಗಿದೆ ಮತ್ತು ನಮ್ಮೆಲ್ಲರಿಗೆ ಅಗತ್ಯವಾಗಿದೆ ಎಂದು ನಮಗೆ ಸಂಪೂರ್ಣವಾಗಿ ತಿಳಿಯುವುದಿಲ್ಲ.
ಭಾರತದಲ್ಲಿ ಅನಾದಿ ಕಾಲದಿಂದಲೂ ದೇವರನ್ನು ಅರಿತುಕೊಳ್ಳಲು ನಿಜವಾಗಿಯೂ ಉತ್ಸುಕರಾಗಿದ್ದ ಅನ್ವೇಷಕರು ಸಂತರೊಂದಿಗೆ ಸಹವಾಸವನ್ನು ಬಯಸುತ್ತಾರೆ ಅಥವಾ ಇತರ ಆಧ್ಯಾತ್ಮಿಕ ಆಕಾಂಕ್ಷಿಗಳ ಸಹವಾಸದಲ್ಲಿ ಅವರ ಚಿತ್ರಗಳನ್ನು ಕೇಂದ್ರೀಕರಿಸಿಕೊಂಡು ಧ್ಯಾನಿಸಿದ್ದಾರೆ. ಈ ಅಭ್ಯಾಸಕ್ಕೆ ಆಳವಾದ ಆಧ್ಯಾತ್ಮಿಕ ಕಾರಣವಿದೆ. ಇದನ್ನು ಶತಮಾನಗಳಿಂದ ಗುರುಗಳು ಅನುಮೋದಿಸಿದ್ದಾರೆ. ತಪ್ಪು ಅಭ್ಯಾಸಗಳು, ಅವ್ಯವಸ್ಥಿತ ಚಿಂತನೆ ಮತ್ತು ಚಡಪಡಿಕೆಗಳಿಗೆ ಹಿಂತಿರುಗಲು ಕಾರಣವಾಗುವ ಅನೇಕ ಪ್ರಲೋಭನೆಗಳು ಆರಂಭಿಕ-ಯೋಗಿಯನ್ನು ಸುತ್ತುವರೆದಿವೆ. ವಿಶೇಷವಾಗಿ ಆರಂಭದಲ್ಲಿ ಮಾಯೆಯ ಭ್ರಮೆಯ ಶಕ್ತಿಯು ಪ್ರಬಲವಾಗಿದ್ದು ಜಯಿಸಲು ಕಷ್ಟಕರವಾಗಿರುತ್ತದೆ, ಹೀಗಾಗಿ, ತಮ್ಮನ್ನು ತಾವು ಪರಿಪೂರ್ಣಗೊಳಿಸಿಕೊಳ್ಳಲು ಬಯಸುವವರು ತಮ್ಮ ಸರಿಯಾದ ಆಕಾಂಕ್ಷೆಗಳನ್ನು ಬಲಪಡಿಸುವ ಸಲುವಾಗಿ ಸಮಾನ ಸ್ವಭಾವದ ಇತರರೊಂದಿಗೆ ನಿಕಟ ಸಂಬಂಧವನ್ನು ಇರಿಸಿಕೊಳ್ಳಲು ಗುರುಗಳು ಒತ್ತಾಯಿಸುತ್ತಾರೆ.
ನಾವು ಎಂತಹ ವ್ಯಕ್ತಿಗಳ ಜೊತೆ ಬೆರೆಯುತ್ತೇವೆಯೋ ಅಂತಹ ವ್ಯಕ್ತಿಗಳಂತೆಯೇ ನಾವೂ ಆಗುತ್ತೇವೆ, ಅಂತಹ ವ್ಯಕ್ತಿಗಳೊಂದಿಗೆ ನಾವು ಮಾಡುವ ಮಾತುಕತೆಯ ಮೂಲಕ ಮಾತ್ರವಲ್ಲ, ಅವರಿಂದ ಹೊರಹೊಮ್ಮುವ ಮೌನ ಕಾಂತೀಯ ಕಂಪನಗಳ ಮೂಲಕವೂ ನಾವು ಅವರಂತೆಯೇ ಆಗುತ್ತೇವೆ. ನಾವು ಅವರ ಕಾಂತೀಯತೆಯ ವ್ಯಾಪ್ತಿಯೊಳಗೆ ಬಂದಾಗ ಅವರ ಕಾಂತೀಯತೆಯ ಪ್ರಭಾವಕ್ಕೊಳಗಾಗುತ್ತೇವೆ.
ಒಬ್ಬ ವ್ಯಕ್ತಿ ಕಲಾವಿದನಾಗಬೇಕೆಂದು ಬಯಸಿದಲ್ಲಿ ಅವನು ಕಲಾವಿದರ ಜೊತೆ ಬೆರೆಯಬೇಕು. ಆ ವ್ಯಕ್ತಿ ಒಬ್ಬ ಒಳ್ಳೆಯ ವ್ಯಾಪಾರಸ್ಥನಾಗಬೇಕೆಂದು ಇಚ್ಛಿಸಿದಲ್ಲಿ ಅವನು ವ್ಯವಹಾರ ಕ್ಷೇತ್ರದ ಯಶಸ್ವಿ ನಾಯಕರ ಸಹವಾಸ ಮಾಡಬೇಕು. ಅವನು ಆಧ್ಯಾತ್ಮಿಕ ಕ್ಷೇತ್ರದ ದಿಗ್ಗಜನಾಗಬೇಕೆಂದಲ್ಲಿ, ದೈವ ಭಕ್ತರ ಸಹವಾಸ ಮಾಡಬೇಕು.
ದೇವರನ್ನು ಕಂಡುಕೊಳ್ಳುವುದೇ ಗುರಿ

ವೈಎಸ್‌ಎಸ್ ಧ್ಯಾನ ಕೇಂದ್ರ, ಅಹಮದಾಬಾದ್
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಕೇಂದ್ರಗಳ ಗುರಿಯು ದೇವರೊಂದಿಗೆ ನಿಕಟ ಸಂವಹನ ಸಾಧಿಸುವುದೇ ಆಗಿದೆ. ತಂದೆಯ ಹೆಸರಿನಲ್ಲಿ ಭಕ್ತರು ಒಟ್ಟುಗೂಡಿದಾಗ ಅದು ತಂದೆಗೆ ಎಷ್ಟು ಸಂತೋಷವಾಗುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿಲ್ಲ. ಭಾರತದಲ್ಲಿ ಭಕ್ತರು ಯಾವುದೇ ಸೌಧವನ್ನು ಕಟ್ಟುವುದಿಲ್ಲ; ಬದಲಾಗಿ ಅವರು ಅವನನ್ನು ಧ್ಯಾನಿಸಲು ಯಾವುದೇ ಸ್ಥಳದಲ್ಲಾದರೂ ಒಟ್ಟಿಗೆ ಸೇರುತ್ತಾರೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಸಂಸ್ಥೆಯು ಭಾರತದ ಸಂತರಿಂದ ವೈಜ್ಞಾನಿಕವಾಗಿ ವಿಕಸನಗೊಂಡ ಆತ್ಮ-ಸಾಕ್ಷಾತ್ಕಾರದ ತಂತ್ರಗಳ ಅಭ್ಯಾಸವನ್ನು ಒತ್ತಿಹೇಳುತ್ತದೆ. ಅಷ್ಟೇ ಅಲ್ಲದೆ, ಇದು ಆತ್ಮಸಾಕ್ಷಾತ್ಕಾರದ ಆಂತರಿಕ ಹೆದ್ದಾರಿಯಲ್ಲಿ ಒಟ್ಟಿಗೆ ಪ್ರಯಾಣಿಸಲು ಧಾರ್ಮಿಕ ವ್ಯಕ್ತಿಗಳ ಸಹಭಾಗಿತ್ವವನ್ನು ಒತ್ತಿಹೇಳುತ್ತದೆ.
ಯಾವುದಾದರೂ ಒಂದು ಉದ್ದೇಶ ಅಥವಾ ನಾಯಕನ ವೈಭವೀಕರಣಕ್ಕಾಗಿ ಧ್ಯಾನ ಮಾಡಲು ಗುಂಪುಗಳನ್ನು ಸಂಘಟಿಸಬೇಕಾಗಿಲ್ಲ, ಆದರೆ ಏಕಾಗ್ರತೆ ಮತ್ತು ಧ್ಯಾನದ ಶಕ್ತಿಯಿಂದ ದೇವರನ್ನು ತಿಳಿದುಕೊಳ್ಳುವ ಸ್ಪಷ್ಟ ಮತ್ತು ಏಕೈಕ ಉದ್ದೇಶದಿಂದ ಧ್ಯಾನದ ಗುಂಪುಗಳನ್ನು ನಾವು ಸಂಘಟಿಸಬೇಕು.
ಪ್ರತಿ ಆತ್ಮವು ದೇವರ ಮಗುವಾಗಿದೆ ಮತ್ತು ದೇವರ ಇಚ್ಛೆಯ ಪ್ರತಿಬಿಂಬವಾಗಿದೆ, ಆದರೆ ಅಹಂಕಾರದಿಂದ ಮನುಷ್ಯನು ತನ್ನ ಇಚ್ಛೆಯನ್ನು ದೈವಿಕ ಇಚ್ಛೆಯಿಂದ ಪ್ರತ್ಯೇಕಿಸಿಕೊಳ್ಳುತ್ತಾನೆ ಮತ್ತು ಅದನ್ನು ಮಿತಿಗೊಳಿಸಿಕೊಳ್ಳುತ್ತಾನೆ. ಇತರ ಅನ್ವೇಷಕರೊಂದಿಗೆ ಆಳವಾದ ಏಕಾಗ್ರತೆಯಿಂದ, ಒಬ್ಬ ಭಕ್ತನು ತನ್ನ ಚಿತ್ತವನ್ನು ದೇವರ ಚಿತ್ತಕ್ಕೆ ಪರಿವರ್ತಿಸಿಕೊಳ್ಳುತ್ತಾನೆ. ದೇವರೊಂದಿಗಿನ ತನ್ನ ಗುರುತನ್ನು ನೆನಪಿಸಿಕೊಳ್ಳುತ್ತಾ, ಅವನು ತನ್ನ ದೈವಿಕ ಪರಂಪರೆಯ ದೇವರ-ಗ್ರಹಿಕೆಯನ್ನು ಚೇತರಿಸಿಕೊಳ್ಳುತ್ತಾನೆ. ಪ್ರತಿಯೊಬ್ಬ ಭಕ್ತನು ಪ್ರಾರ್ಥನೆಯ ಮೂಲಕ, ಧ್ಯಾನದಲ್ಲಿ ದೇವರ-ಸಂಬಂಧದ ಮೂಲಕ ಮತ್ತು ಆಧ್ಯಾತ್ಮಿಕ ಸಹವಾಸದ ಮೂಲಕ ದೈವಿಕ ಚಿತ್ತದ ಸಾಕ್ಷಾತ್ಕಾರವನ್ನು ಬಲಪಡಿಸಬೇಕು.
ಯೇಸು ಹೇಳಿದ್ದು: “ಎಲ್ಲಿ ಇಬ್ಬರು ಅಥವಾ ಮೂವರು ನನ್ನ ಹೆಸರಿನಲ್ಲಿ ಒಟ್ಟುಗೂಡುತ್ತಾರೆಯೋ, ಅವರ ಮಧ್ಯದಲ್ಲಿ ನಾನು ಇದ್ದೇನೆ” (ಮ್ಯಾಥ್ಯೂ 18:20, ಬೈಬಲ್). ಭಗವಂತನ ಮೇಲೆ ಏಕಾಗ್ರರಾಗಲು ಇಬ್ಬರು ಅಥವಾ ಮೂರು ಜನರು ಜೊತೆಗೂಡಿದಾಗ, ಒಬ್ಬ ವ್ಯಕ್ತಿಯ ಬಲವಾದ ದೈವಿಕ ಏಕಾಗ್ರತೆಯು ಇನ್ನೊಬ್ಬರ ದುರ್ಬಲ ಏಕಾಗ್ರತೆಯನ್ನು ಬಲಪಡಿಸುತ್ತದೆ. ಆದರೆ ಯಾವ ವ್ಯಕ್ತಿಗಳು ಭಗವಂತನ ಹೆಸರಿನಲ್ಲಿ ಒಟ್ಟುಸೇರಿ ನಂತರ ಹರಟೆ ಹೊಡೆಯಲು ಆರಂಭಿಸುತ್ತಾರೋ ಅಥವಾ ಬಾಹ್ಯದಲ್ಲಿ ಪ್ರಾರ್ಥಿಸುತ್ತಾ ಬೇರೊಂದರ ಬಗ್ಗೆ ಯೋಚಿಸಲಾರಂಭಿಸುತ್ತಾರೋ ಅಥವಾ ಆಂತರಿಕವಾಗಿ ಭಗವಂತನೊಡನೆ ಸಾಧಿಸದೆ ಯಾಂತ್ರಿಕವಾಗಿ ಪವಿತ್ರ ಆಚರಣೆಯನ್ನು ಮಾಡತೊಡಗುತ್ತಾರೋ, ಅಂತಹವರಿಗೆ ಸೃಷ್ಟಿಯನ್ನು ವ್ಯಾಪಿಸಿರುವ ಕ್ರಿಸ್ತನ ಪ್ರಜ್ಞೆಯನ್ನು [ಕೂಟಸ್ಥ ಚೈತನ್ಯ] ಅನುಭವಿಸಲು ಸಾಧ್ಯವಾಗುವುದಿಲ್ಲ.
ಇತರರೊಂದಿಗೆ ಧ್ಯಾನ ಮಾಡುವಾಗಿನ ಆಶೀರ್ವಾದಗಳು

ವೈಎಸ್‌ಎಸ್ ಧ್ಯಾನ ಕೇಂದ್ರ, ಧಾರವಾಡ
ಸಾಮೂಹಿಕ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಮತ್ತು ಅನುಭವಿ ಧ್ಯಾನಸ್ಥರನ್ನು ರಕ್ಷಿಸುವ ಕೋಟೆಯಾಗಿದೆ. ಸಾಮೂಹಿಕವಾಗಿ ಧ್ಯಾನ ಮಾಡುವುದರಿಂದ ಗುಂಪಿನ ಕಾಂತೀಯತೆಯ ಅದೃಶ್ಯ ಕಂಪನಗಳ ವಿನಿಮಯದ ನಿಯಮದ ಮೂಲಕ ಗುಂಪಿನ ಪ್ರತಿಯೊಬ್ಬ ಸದಸ್ಯರ ಆತ್ಮ-ಸಾಕ್ಷಾತ್ಕಾರದ ಮಟ್ಟವು ಹೆಚ್ಚುತ್ತದೆ.
ನಾನು ತರಬೇತಿಗಾಗಿ ಶ್ರೀ ಯುಕ್ತೇಶ್ವರರ ಬಳಿಗೆ ಹೋದಾಗ ಅವರು ನೀಡಿದ ಸಲಹೆ ನನಗೆ ಚೆನ್ನಾಗಿ ನೆನಪಿದೆ. ಅವರು ಹೇಳಿದರು: “ಒಳ್ಳೆಯ ಒಡನಾಡಿಗಳೊಂದಿಗೆ ಧ್ಯಾನ ಮಾಡು. ನಿನ್ನ ಮನಸ್ಸೆಂಬ ಹಾಲಿನಿಂದ ಆತ್ಮಸಾಕ್ಷಾತ್ಕಾರದ ಬೆಣ್ಣೆಯನ್ನು ಮಂಥನ ಮಾಡಲು ಅದು ನಿನಗೆ ಸಹಾಯ ಮಾಡುತ್ತದೆ. ಲೌಕಿಕ ಭ್ರಮೆಯ ನೀರಿನೊಂದಿಗೆ ಹಾಲು ಬೆರೆಯುತ್ತದೆ ಮತ್ತು ಅದು ಅವುಗಳ ಮೇಲೆ ತೇಲಲು ಸಾಧ್ಯವಿಲ್ಲ. ಬೆಣ್ಣೆಯು ಆ ವಿಶ್ವಾಸಘಾತುಕ ನೀರಿನ ಮೇಲೆ ಸುಲಭವಾಗಿ ತೇಲುತ್ತದೆ.”
ಗುರುಗಳ ಎಚ್ಚರಿಕೆ ಎಷ್ಟು ನಿಜವಾಗಿತ್ತು! ನಾನು ಪ್ರಾರಂಭಿಸಿದ ಗುಂಪಿನಿಂದ ದೂರ ಉಳಿದವರೆಲ್ಲರೂ, ಕ್ರಿಯಾ ಯೋಗದಲ್ಲಿ ಆಧ್ಯಾತ್ಮಿಕವಾಗಿ ಮುಂದುವರೆದಿದ್ದರೂ, ನಂತರ ಲೌಕಿಕ ಪ್ರಭಾವಗಳಿಗೆ ಮತ್ತು ಹಿಂದಿನ ಜನ್ಮಗಳ ತಮ್ಮ ಸುಪ್ತಪ್ರಜ್ಞೆಯ ವಿಷಯವಸ್ತುಗಳ ಪ್ರವೃತ್ತಿಗಳ ಪ್ರೇರಣೆಗಳಿಗೆ ಬಲಿಯಾದರು.
ದೌರ್ಬಲ್ಯ ಮತ್ತು ಉದಾಸೀನತೆಯ ಕ್ಷಣಗಳಲ್ಲಿ ನಾವು ಒಬ್ಬರಿಗೊಬ್ಬರು ಸಹಾಯ ಮಾಡಿದ್ದರಿಂದ ಗುಂಪಿನೊಂದಿಗೆ ಇದ್ದವರು ದೇವರ ಸಾಕ್ಷಾತ್ಕಾರದಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸಿದರು. ಆಧ್ಯಾತ್ಮಿಕ ಆಲಸ್ಯದ ಮೋಡಗಳು ಕೆಲವೊಮ್ಮೆ ಸ್ಪಷ್ಟವಾದ ಆಕಾಶದ ಮೇಲೆ ಮೋಡಗಳ ತ್ವರಿತ ಹರಡುವಿಕೆಯಂತೆ ಆತ್ಮದ ಬೆಳಕನ್ನು ಆವರಿಸುತ್ತದೆ. ಒಳ್ಳೆಯ ಸಾಹಚರ್ಯದ ಬಿಸಿಲಿನಿಂದ ನಾವು ಮೋಡಗಳನ್ನು ದೂರಸರಿಸಬೇಕು.
ಸ್ವಯಂ-ಸಾಕ್ಷಾತ್ಕಾರವನ್ನು ಬಯಸುವ ಜನರೊಂದಿಗಿನ ಸಹಭಾಗಿತ್ವದ ಮೂಲಕ ಮತ್ತು ಅವರೊಂದಿಗೆ ಸಾಮೂಹಿಕ ಧ್ಯಾನ ಮಾಡುವ ಮೂಲಕ ನಿಮ್ಮ ಸ್ವಂತ ಕಂಪನಗಳನ್ನು ನೀವು ಏಕೆ ಬಲಪಡಿಸಬಾರದು? ಈ ಅಭ್ಯಾಸವು ನಿಮ್ಮ ಸ್ವಂತ ಆಧ್ಯಾತ್ಮಿಕ ನಂಬಿಕೆಗಳನ್ನು ಬಲಪಡಿಸುತ್ತದೆ; ಇದರಿಂದ ನಿಮ್ಮ ಜೀವನದಲ್ಲಿ ತೋರಿಕೆಯಲ್ಲಿ ಎದುರಿಸಲಾಗದ ಅನೇಕ ಅಡೆತಡೆಗಳು ಕುಸಿಯುತ್ತವೆ ಮತ್ತು ಧ್ಯಾನದ ನೀರಿನಲ್ಲಿ ಕರಗುತ್ತವೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ದೇವರ ಮೇಲಿನ ನಿಮ್ಮ ಭಕ್ತಿ ಮತ್ತು ಪ್ರೀತಿ ಇತರರ ಭಕ್ತಿ ಮತ್ತು ಪ್ರೀತಿಯೊಂದಿಗೆ ಬೆರೆಯುತ್ತದೆ. ದೈವಿಕ ಆನಂದವು ನಿಮ್ಮಿಂದ ಹೊರಹೊಮ್ಮುತ್ತದೆ, ನೀವು ಭೇಟಿಯಾಗುವ ಎಲ್ಲ ವ್ಯಕ್ತಿಗಳಿಗೆ ಇದು ಸಹಾಯ ಮಾಡುತ್ತದೆ.
ನಿಮ್ಮ ಆಧ್ಯಾತ್ಮಿಕ ಪ್ರಗತಿಯು ಸ್ಥಗಿತಗೊಂಡಿದ್ದರೆ ಅಥವಾ ಕ್ಷೀಣಿಸುತ್ತಿದ್ದರೆ, ಇತರ ಭಕ್ತರ ಸಹವಾಸದಲ್ಲಿ ದೇವರ ಅಥವಾ ಯಾವುದೇ ಮಹಾನ್ ವ್ಯಕ್ತಿಗಳ ಧ್ಯಾನದ ಅಭ್ಯಾಸವು ನಿಮ್ಮ ಅನಿಶ್ಚಿತ ಸ್ಥಿತಿಯಿಂದ ನಿಮ್ಮನ್ನು ಮೇಲಕ್ಕೆತ್ತುತ್ತದೆ. ಇತರರ ಆಧ್ಯಾತ್ಮಿಕ ಕಂಪನಗಳ ಸಾಮೀಪ್ಯವು ನಿಮ್ಮ ಆಧ್ಯಾತ್ಮಿಕ ಕಂಪನಗಳನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಇತರ ಭಕ್ತರೊಂದಿಗೆ ಧ್ಯಾನ ಮಾಡುವುದು ನಿಮ್ಮ ವಿಕಸನವನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ. ಅವರು ನಿಮ್ಮನ್ನು ಆತ್ಮ-ಸಾಕ್ಷಾತ್ಕಾರದ ಏಣಿಯ ಮೇಲೆ ಏರಲು ಪ್ರೇರೇಪಿಸುತ್ತಾರೆ; ಮತ್ತು ನೀವು, ನಿಮ್ಮ ಉದಾಹರಣೆಯ ಮೂಲಕ, ಅವರಿಗೆ ಸಹಾಯಕವಾಗಬಹುದು.
ಜೇನುಗೂಡುಗಳನ್ನು ನಿರ್ಮಿಸುವುದು ಮತ್ತು ಅವುಗಳಲ್ಲಿ ದೇವರೆಂಬ ಜೇನನ್ನು ತುಂಬುವುದು

ವೈಎಸ್‌ಎಸ್ ಧ್ಯಾನ ಕೇಂದ್ರ, ಹೈದರಾಬಾದ್
ಜೇನುತುಪ್ಪ ಬೇಕೆಂದರೆ ಜೇನುಗೂಡು ಬೇಕು. ಜೇನುತುಪ್ಪವಿಲ್ಲದ ಜೇನುಗೂಡು ನಿಷ್ಪ್ರಯೋಜಕವಾದದ್ದು. ಪೂರ್ವವು ಆಧ್ಯಾತ್ಮಿಕ ಜೇನುತುಪ್ಪವನ್ನು ಸಂಗ್ರಹಿಸಲು ಇಷ್ಟಪಡುತ್ತದೆ; ಪಶ್ಚಿಮವು ಆಧ್ಯಾತ್ಮಿಕ ಸಂಘಟನೆಯ ದೊಡ್ಡ ಜೇನುಗೂಡುಗಳನ್ನು ನಿರ್ಮಿಸಲು ಇಷ್ಟಪಡುತ್ತದೆ. ವೈಯಕ್ತಿಕ ಧ್ಯಾನದ ಮೂಲಕ ಆಧ್ಯಾತ್ಮಿಕ ಜೇನುತುಪ್ಪವನ್ನು ಪಡೆದುಕೊಳ್ಳುವುದು ಸಂಘಟನೆಯ ದೊಡ್ಡ ಜೇನುಗೂಡುಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ. ಆದರೆ ದೇವರನ್ನು ಕಂಡುಕೊಳ್ಳಲು ಭಕ್ತರನ್ನು ಸೆಳೆಯಲು ಕೆಲವು ಸಂಘಟನೆಗಳು ಅವಶ್ಯಕವಾಗಿರುತ್ತದೆ. ವೈಎಸ್‌ಎಸ್/ಎಸ್‌ಆರ್‌ಎಫ್ ಸಂಘಟನೆ ಇಲ್ಲದಿದ್ದರೆ, ವೈಎಸ್‌ಎಸ್/ಎಸ್‌ಆರ್‌ಎಫ್ ಬೋಧನೆಗಳ ಪ್ರಯೋಜನವನ್ನು ನೀವಾಗಲಿ ಅಥವಾ ಇತರರೂ ಪಡೆಯಲಾಗುತ್ತಿರಲಿಲ್ಲ.
ಯಾವಾಗಲೂ ಮೊದಲು ನಿಮಗಾಗಿ ವೈಯಕ್ತಿಕ ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳಿ. ಆದರೆ ನಿಮ್ಮ ಆಧ್ಯಾತ್ಮಿಕ ಸಂಸ್ಥೆಯ ಕೆಲಸವನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಹಾಗೆ ಮಾಡುವುದು ತೀವ್ರ ಸ್ವಾರ್ಥಿಯಾದ ನಡೆಯಾಗುತ್ತದೆ ಮತ್ತು ಅಂತಹ ನಿರ್ಲಕ್ಷ್ಯವು ನಿಮ್ಮ ಆತ್ಮದ ಪ್ರಗತಿಗೆ ಹಾನಿಕಾರಕವಾಗಿದೆ. ಭವಿಷ್ಯದ ಕಾಲ ಮತ್ತು ಮುಂದಿನ ಪೀಳಿಗೆಯ ಆಧ್ಯಾತ್ಮಿಕ ಹಸಿವಿನ ಸಹೋದರ ಸಹೋದರಿಯರಿಗೆ ಸೇವೆ ಸಲ್ಲಿಸಲು ಸಾಮೂಹಿಕ ಸತ್ಯದ ಜೇನುತುಪ್ಪವನ್ನು ಸಂಗ್ರಹಿಸಬಹುದಾದ ಸಂಘಟನೆಯ ಜೇನುಗೂಡುಗಳ ಅಗತ್ಯವಿದೆ. ಆದರೆ ನೆನಪಿಡಿ, ವೈಯಕ್ತಿಕ ಅಥವಾ ಸಾಮೂಹಿಕ ಧ್ಯಾನ ಕ್ರಮವಿಲ್ಲದ ಧಾರ್ಮಿಕ ಸಂಘಟನೆಯು ಅರ್ಥಹೀನವಾಗಿದೆ. ನಿಮ್ಮ ಸ್ವಂತ ಆತ್ಮಸಾಕ್ಷಾತ್ಕಾರದ ಪೂಜಾಪೀಠದ ಮೇಲೆ ದೇವರನ್ನು ಸ್ಥಾಪಿಸುವುದು ನಿಮ್ಮ ಮೊದಲ ಬಯಕೆಯಾಗಿರಬೇಕು; ಮತ್ತು ಅದೇ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಸಂಸ್ಥೆಯಲ್ಲಿರುವ ಎಲ್ಲರ ಐಕ್ಯ ಹೃದಯಗಳಲ್ಲಿ ಆತನನ್ನು ಸ್ಥಾಪಿಸಬೇಕು.
ದೇವರ ಅಪರಿಮಿತ ಪ್ರೀತಿಗಾಗಿ ನಿಷ್ಠಾವಂತ ವ್ಯಕ್ತಿಗಳೂ ಸಹ ಹಸಿದಿರುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ಆತನ ಉದಾರವಾದ ಪ್ರೀತಿಯನ್ನು ಹೊಂದಲು ಮತ್ತು ನಿಸ್ವಾರ್ಥವಾಗಿ ಆತನ ಸೇವೆ ಮಾಡಲು ನಿಮ್ಮನ್ನು ಈ ಜೀವನದ ಮೇಲ್ಮೈ ಮೇಲೆ ಕಳುಹಿಸಲಾಗಿದೆ. ಇದೊಂದೇ ಮುಕ್ತಿಯ ದಾರಿಯಾಗಿದೆ, ನಿಜವಾದ ಸುಖಕ್ಕೆ ಇದೊಂದೇ ದಾರಿ. ದೇವರಿಗಾಗಿ ಕೆಲಸ ಮಾಡಿ ಮತ್ತು ಪ್ರತಿ ರಾತ್ರಿ ಆತನನ್ನು ಧ್ಯಾನಿಸಿ. ಸಾಮೂಹಿಕ ಸಭೆಗಳ ಸಮಯದಲ್ಲಿ, ಗುಂಪಿನ ಸದಸ್ಯರೊಂದಿಗೆ ಧ್ಯಾನ ಮಾಡಿ; ಮತ್ತು ಮನೆಯಲ್ಲಿದ್ದಾಗ, ಏಕಾಂಗಿಯಾಗಿ ಧ್ಯಾನ ಮಾಡಿ ಅಥವಾ ದೇವರನ್ನು ಕಂಡುಕೊಳ್ಳಲು ಇಚ್ಛಿಸುವ ಯಾವುದೇ ಇತರ ಭಕ್ತರೊಂದಿಗೆ ಧ್ಯಾನ ಮಾಡಿ.
ಧ್ಯಾನದ ಗುಂಪುಗಳ ಕಡೆಗೆ ಒಲವು

ವೈಎಸ್‌ಎಸ್ ಧ್ಯಾನ ಕೇಂದ್ರ, ಲಕ್ನೋ
ಯೋಗ ವಿಜ್ಞಾನವು ಈ ಯುಗದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಹಿಡಿತ ಸಾಧಿಸುತ್ತದೆ. ಇಡೀ ಧಾರ್ಮಿಕ ಪ್ರವೃತ್ತಿಯು ನಮಗೆ ತಿಳಿದಿರುವಂತೆ ಚರ್ಚ್‌ಗಳಿಂದ ದೂರವಿರುತ್ತದೆ ಮತ್ತು ಶಾಲೆಗಳು ಮತ್ತು ಶಾಂತ ಸ್ಥಳಗಳಿಗೆ ಜನರು ಹೋಗುತ್ತಾರೆ, ಅಲ್ಲಿ ಅವರು ಕೇವಲ ಧರ್ಮೋಪದೇಶವನ್ನು ಕೇಳಲು ಹೋಗುವುದಿಲ್ಲ, ನಿಜವಾಗಿಯೂ ಧ್ಯಾನದಲ್ಲಿ ದೇವರನ್ನು ಕಂಡುಕೊಳ್ಳಲು ಹೋಗುತ್ತಾರೆ.
ಹೆಚ್ಚು ಹೆಚ್ಚು ಧಾರ್ಮಿಕ “ಗ್ರಾಹಕರನ್ನು” ಸೆಳೆಯುವ ಉದ್ದೇಶದಿಂದ ಬೌದ್ಧಿಕವಾಗಿ ತರಬೇತಿ ಪಡೆದ ಪಾದ್ರಿಗಳನ್ನು ಹೊಂದಿರುವ ದೊಡ್ಡ ದುಬಾರಿ ಚರ್ಚ್‌ಗಳ ಬದಲಿಗೆ, ಶಾಂತ ಸ್ಥಳಗಳಲ್ಲಿ ಸಣ್ಣ ಸಣ್ಣ ಧ್ಯಾನ ಕೇಂದ್ರಗಳನ್ನು ಪ್ರಾರಂಭಿಸಬೇಕು, ಅಲ್ಲಿ ಕೆಲವು ಸತ್ಯಾನ್ವೇಷಕರು ಮತ್ತು ಆಳವಾದ ಶ್ರದ್ಧೆಯಿಂದ ಮತ್ತು ಆಳವಾಗಿ ಧ್ಯಾನಿಸುವ ಇನ್ನು ಕೆಲವು ವ್ಯಕ್ತಿಗಳು ಧ್ಯಾನ ಮಾಡಲು ಮತ್ತು ದೇವರೊಂದಿಗೆ ಸಂವಹನ ನಡೆಸುವ ಮಾರ್ಗವನ್ನು ಕಲಿಯಲು ಬರುತ್ತಾರೆ.
ಅಂತಹ ಗುಂಪುಗಳು ಸತ್ಯದ ಬಗ್ಗೆ ತಮ್ಮ ಆಲೋಚನೆ ಮತ್ತು ಕಲ್ಪನೆಗಳನ್ನು ಪರಸ್ಪರ ವ್ಯಕ್ತಪಡಿಸಲು ತಮ್ಮ ಸಮಯವನ್ನು ಕಳೆಯಬಾರದು, ಆದರೆ ಪ್ರಗತಿಪರ ವೈಎಸ್ಎಸ್/ಎಸ್ಆರ್‌ಎಫ್ ತಂತ್ರಗಳನ್ನು ಬಳಸಿಕೊಂಡು ಒಟ್ಟಿಗೆ ಧ್ಯಾನಿಸಬೇಕು, ಹೀಗೆ ದೇವರೊಂದಿಗೆ ಸಂವಹನ ನಡೆಸುತ್ತಾ ಅವರ ಶಾಂತಿ ಮತ್ತು ವಿವೇಕದ ಧರ್ಮೋಪದೇಶಗಳನ್ನು ಆಲಿಸಬೇಕು.
ಆಳವಾದ ಧ್ಯಾನದ ಮೌನವನ್ನು ಎಲ್ಲಾ ಧ್ಯಾನ ಕೇಂದ್ರಗಳಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು. ಎಲ್ಲರೂ ಕಡಿಮೆ ಮಾತನಾಡಬೇಕು. ಭಾರತದಲ್ಲಿ ನನ್ನ ಆಶ್ರಮ ತರಬೇತಿಯ ಸಮಯದಲ್ಲಿ ನನ್ನ ಗುರುಗಳಾದ ಶ್ರೀ ಯುಕ್ತೇಶ್ವರರು ನಮಗೆ ಆಗೊಮ್ಮೆ ಈಗೊಮ್ಮೆ ಮಾತ್ರ ಉಪನ್ಯಾಸ ನೀಡುತ್ತಿದ್ದರು. ಹೆಚ್ಚಿನ ಸಮಯ ನಾವು ಮಾತನಾಡದೆ ಅವರ ಸುತ್ತಲೂ ಕುಳಿತಿರುತ್ತಿದ್ದೆವು. ನಾವು ಸ್ವಲ್ಪ ಅಲುಗಾಡಿದರೂ ಸಾಕು, ಅವರು ನಮಗೆ ಛೀಮಾರಿ ಹಾಕುತ್ತಿದ್ದರು.
ಕೇವಲ ಒಳ್ಳೆಯ ಪುಸ್ತಕಗಳನ್ನು ಓದುವ ಮತ್ತು ಉಪನ್ಯಾಸಗಳು, ಸಂಗೀತದಂತಹ ಮನರಂಜನೆಗಳನ್ನು ಕೇಳುವ ಮೂಲಕ ಸಮಯವನ್ನು ಕಳೆಯುವ ಧಾರ್ಮಿಕ ಗುಂಪುಗಳು ದೈವಶಾಸ್ತ್ರದ ಸಾಮಾಜಿಕ ಕ್ಲಬ್‌ಗಳಾಗಿವೆ, ಜೀವನದ ಎಲ್ಲಾ ಕಾರ್ಯಕ್ರಮಗಳ ನಿರ್ವಾಹಕನಾದ ಪ್ರೀತಿಯ ಭಗವಂತನ ಉಪಸ್ಥಿತಿಯನ್ನು ಅವು ಹೊಂದಿರುವುದಿಲ್ಲ. ದೇವರ ಹೆಸರಿನಲ್ಲಿ ಭೇಟಿಯಾಗುವ ಮತ್ತು ಧ್ಯಾನದ ದೇವಾಲಯದಲ್ಲಿ ಅವನನ್ನು ಆಹ್ವಾನಿಸಲು ಪ್ರಯತ್ನಿಸುವ ಗುಂಪುಗಳು ಮಾತ್ರ ಆತನ ಉಪಸ್ಥಿತಿಯಿಂದ ನಿಜವಾಗಿಯೂ ಆಶೀರ್ವದಿಸಲ್ಪಡುತ್ತವೆ.
ಭಗವಂತನ ಸಾಕ್ಷಾತ್ಕಾರದ ಸುದ್ದಿಯು ತನ್ನಿಂದ ತಾನೇ ಹರಡಲ್ಪಡುತ್ತದೆ. ಅದಕ್ಕಾಗಿಯೇ ಧ್ಯಾನದ ತಂತ್ರಗಳನ್ನು ಅಭ್ಯಾಸ ಮಾಡಲು ಸಾಮೂಹಿಕ ಸಭೆಗಳು ಅತ್ಯಗತ್ಯ. ಸಾಮೂಹಿಕ ಸಭೆಗಳು ಮನೆಯಲ್ಲಿ ಖಾಸಗಿಯಾಗಿ ಗಳಿಸಲ್ಪಟ್ಟ ವೈಯಕ್ತಿಕ ಆತ್ಮ-ಸಾಕ್ಷಾತ್ಕಾರವನ್ನು ಬಲಪಡಿಸುತ್ತದೆ. ಸಾಮೂಹಿಕ ಸಭೆಗಳು ಸದಸ್ಯರಿಗೆ ಹೊಸ ಜಾಗೃತಿಯನ್ನು ನೀಡುತ್ತವೆ ಮತ್ತು ಗುಂಪು ಅವರನ್ನು ಹುಡುಕುವ ಬದಲು ಅವರು ಗುಂಪನ್ನು ಹುಡುಕುವಂತೆ ಪ್ರೇರೇಪಿಸುತ್ತವೆ.
ಸಾಮೂಹಿಕ ಧ್ಯಾನವು ಜನರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ, ನಾಯಕನ ವ್ಯಕ್ತಿತ್ವ, ಅಥವಾ ಸಂಗೀತ ಕಾರ್ಯಕ್ರಮಗಳು ಅಥವಾ ಹಬ್ಬಗಳ ಕಾರಣದಿಂದಾಗಿ ಅಲ್ಲ, ಬದಲಾಗಿ ಅವರ ಸ್ವಂತ ಆತ್ಮ-ಸಾಕ್ಷಾತ್ಕಾರದ ಕಾರಣದಿಂದಾಗಿ ಒಗ್ಗೂಡಿಸುತ್ತದೆ. ನಂತರ, ಅವರ ಸ್ವಂತ ಇಚ್ಛೆಯಿಂದ, ಅವರು ತಮ್ಮ ಸಂಮಿಶ್ರಿತವಾದ ಭಕ್ತಿಯ ಪೀಠದ ಮೇಲೆ ದೇವರನ್ನು ಪೂಜಿಸಲು ಆಗಾಗ್ಗೆ ಒಟ್ಟಿಗೆ ಸೇರಲು ಬಯಸುತ್ತಾರೆ. ಏಕೀಕೃತ ಮನಸ್ಸುಗಳು ದೊಡ್ಡ ವಾಹಿನಿಗಳಾಗಿದ್ದು, ಅದರ ಮೂಲಕ ದೇವರ ಶಕ್ತಿಯು ವೈಯಕ್ತಿಕ ಆತ್ಮಗಳಿಗೆ ಪ್ರಬಲವಾದ ರೀತಿಯಲ್ಲಿ ಹರಿಯುತ್ತದೆ.
ವೈಎಸ್‌ಎಸ್ ಗುಂಪಿನೊಂದಿಗೆ ದೇವರನ್ನು ಕಂಡುಕೊಳ್ಳಿ

ವೈಎಸ್‌ಎಸ್ ಧ್ಯಾನ ಕೇಂದ್ರ, ಬೆಂಗಳೂರು
ಧ್ಯಾನ ಮಾಡಲು ಎಲ್ಲೆಡೆ ವೈಎಸ್‌ಎಸ್/ಎಸ್ಆರ್‌ಎಫ್ ಕೇಂದ್ರಗಳು ಇರಬೇಕು.
ನನ್ನ ಪರಮಗುರು ಲಾಹಿರಿ ಮಹಾಶಯರು ಕೌಟುಂಬಿಕ ಜೀವನದ ಎಲ್ಲಾ ಹೊರೆ ಮತ್ತು ಜವಾಬ್ದಾರಿಗಳನ್ನು ಹೊತ್ತಿದ್ದರು. ಆದಾಗ್ಯೂ ಸರ್ವವ್ಯಾಪಿ ಆತ್ಮದೊಂದಿಗೆ ಸಂವಹನ ಮಾಡುವುದನ್ನು ಅವರು ನಿಲ್ಲಿಸಲಿಲ್ಲ. ಭಾರತದಲ್ಲಿ ಕ್ರಿಯಾ ಯೋಗವನ್ನು ಪರಿಚಯಿಸಿದರು ಮತ್ತು ಅದನ್ನು ಸ್ವೀಕರಿಸುವ ಎಲ್ಲಾ ಅನ್ವೇಷಕರಿಗೆ ಕ್ರಿಯಾ ಯೋಗವನ್ನು ಈ ಮಹಾನ್ ಯೋಗಾವತಾರರು ಕಲಿಸಿದರು. ಅವರು ಕ್ರಿಸ್ತನಂತಹ ಆತ್ಮದೊಂದಿಗೆ ಸಂಪರ್ಕ ಹೊಂದುವುದು ಅಥವಾ ಕ್ರಿಸ್ತನ ಮೇಲೆ ಧ್ಯಾನ ಮಾಡುವುದು, ಇತರ ಆಧ್ಯಾತ್ಮಿಕ ಆಕಾಂಕ್ಷಿಗಳೊಂದಿಗೆ ಸಹಭಾಗಿತ್ವ ಹೊಂದುವುದು ಮತ್ತು ನಿಷ್ಠೆಯಿಂದ ಧ್ಯಾನವನ್ನು ಅಭ್ಯಾಸ ಮಾಡುವುದು ಆಧ್ಯಾತ್ಮಿಕ ವಿಮೋಚನೆಗೆ ಅವಶ್ಯಕವಾದ ಅಂಶಗಳು ಎಂದು ಹೇಳಿದರು.
ನೀವು ವೈಎಸ್‌ಎಸ್/ಎಸ್ಆರ್‌ಎಫ್ ಮಂದಿರ ಅಥವಾ ಕೇಂದ್ರಗಳಿಗೆ ಹೋಗುವುದಕ್ಕೆ ಏಕಮಾತ್ರ ಉದ್ದೇಶವಿರಲಿ: ಅದೆಂದರೆ ದೇವರೊಂದಿಗೆ ಇರುವುದು. ಉಪನ್ಯಾಸಗಳಿಗಾಗಿ ಹೋಗಬೇಡಿ, ಹಾಡಲು ಹೋಗಬೇಡಿ. ಧ್ಯಾನದ ಮೂಲಕ ದೇವರ ಉಪಸ್ಥಿತಿಯನ್ನು ಅನುಭವಿಸಲು ಹೋಗಿ!
ಭಕ್ತನು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಮೊದಲು ಪ್ರಾರಂಭಿಸಿದಾಗ ಪರಿಸರವು ಇಚ್ಛಾಶಕ್ತಿಗಿಂತ ಪ್ರಬಲವಾದದ್ದು ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿ ನೆನಪಿಡಿ!
ನಿಮ್ಮ ಉಪಸ್ಥಿತಿ ಮತ್ತು ಪ್ರಯತ್ನಗಳ ಅಗತ್ಯವಿದೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನೀವು ಈಗ ಮತ್ತು ಎಲ್ಲಾ ಸಮಯದಲ್ಲೂ ನಿಮ್ಮ ಗುಂಪು ಅಥವಾ ಕೇಂದ್ರದ ಸೇವೆಗಳಿಗೆ ಹಾಜರಾಗುವಿರಲ್ಲವೇ? ಮತ್ತು ಕೇಂದ್ರದ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲಿ ನಿಮ್ಮ ನಿಷ್ಠಾವಂತ ಬೆಂಬಲವನ್ನು ನೀಡುವಿರಲ್ಲವೇ? ನಾನು ಆಲೋಚನೆ ಮತ್ತು ಉತ್ಸಾಹಗಳಲ್ಲಿ ನಿಮ್ಮೊಂದಿಗಿದ್ದೇನೆ, ಏಕೆಂದರೆ ನಿಮಗಾಗಿ ಹೀಗೆ ಬರೆಯಲು ಭಗವಂತ ನನ್ನನ್ನು ಪ್ರೇರೇಪಿಸಿದ್ದಾನೆ. ನಿಮ್ಮ ಮನಸ್ಸನ್ನು ನನ್ನೊಂದಿಗೆ ಮತ್ತು ಮಹಾನ್ ವ್ಯಕ್ತಿಗಳೊಂದಿಗೆ ಮಾನಸಿಕವಾಗಿ ಹೊಂದಿಸಿಕೊಳ್ಳಿ ಮತ್ತು ನಿಮ್ಮ ಜೀವನವು ಅದಕ್ಕೆ ಅನುಗುಣವಾಗಿ ಸುಧಾರಿಸುತ್ತದೆ.
ಸಾಮೂಹಿಕ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಮತ್ತು ಅನುಭವಿ ಧ್ಯಾನಸ್ಥರನ್ನು ರಕ್ಷಿಸುವ ಕೋಟೆಯಾಗಿದೆ. ಸಾಮೂಹಿಕವಾಗಿ ಧ್ಯಾನ ಮಾಡುವುದರಿಂದ ಗುಂಪಿನ ಕಾಂತೀಯತೆಯ ಅದೃಶ್ಯ ಕಂಪನಗಳ ವಿನಿಮಯದ ನಿಯಮದ ಮೂಲಕ ಗುಂಪಿನ ಪ್ರತಿಯೊಬ್ಬ ಸದಸ್ಯರ ಆತ್ಮ-ಸಾಕ್ಷಾತ್ಕಾರದ ಮಟ್ಟವು ಹೆಚ್ಚುತ್ತದೆ.
—Paramahansa Yogananda
ಇನ್ನಷ್ಟು ವೈಎಸ್‌ಎಸ್ ಧ್ಯಾನ ಕೇಂದ್ರಗಳು/ಮಂಡಳಿಗಳು:







