ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು
ಗುರುವಿನ ಪಾತ್ರ
ಗುರು ಗೀತೆಯು (ಶ್ಲೋಕ 17), ಗುರುವನ್ನು “ಅಂಧಕಾರವನ್ನು ದೂರ ಮಾಡುವವನು” (ಗು ಎಂದರೆ “ಅಂಧಕಾರ” ಮತ್ತು ರು ಎಂದರೆ “ಹೋಗಲಾಡಿಸುವವನು”) ಎಂದು ಸರಿಯಾಗಿಯೇ ವ್ಯಾಖ್ಯಾನಿಸುತ್ತದೆ. ಭಗವಂತನನ್ನು ಅರಿತ ಒಬ್ಬ ನೈಜ ಗುರು ಎಂದರೆ, ತನ್ನ ಸ್ವಯಂ-ಪ್ರಭುತ್ವವನ್ನು ಹೊಂದುವಲ್ಲಿ, ಸರ್ವವ್ಯಾಪಿಯಾದ ಪರಮಾತ್ಮನೊಂದಿಗೆ ತನ್ನ ಗುರುತನ್ನು ಅರಿತವನು. ಅಂಥವನು ಅನ್ವೇಷಕನನ್ನು ಅವನ ಆಂತರಿಕ ಪಯಣದಲ್ಲಿ ಪರಿಪೂರ್ಣತೆಯೆಡೆಗೆ ಕರೆದೊಯ್ಯಲು ಅನನ್ಯವಾಗಿ ಅರ್ಹನಾಗಿರುತ್ತಾನೆ.
“ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ಮಾರ್ಗದರ್ಶನ ನೀಡಲಾರ,” ಪರಮಹಂಸಜಿ ಹೇಳಿದರು, “ಭಗವಂತನನ್ನು ಅರಿತ ಒಬ್ಬ ಗುರು ಮಾತ್ರ ಭಗವಂತನ ಬಗ್ಗೆ ಬೇರೆಯವರಿಗೆ ಸರಿಯಾಗಿ ಬೋಧಿಸಬಲ್ಲ. ಒಬ್ಬನು ತನ್ನ ದೈವತ್ವವನ್ನು ಪುನರ್‌ಪ್ರಾಪ್ತಿ ಮಾಡಿಕೊಳ್ಳಬೇಕಾದರೆ, ಅವನಿಗೆ ಅಂತಹ ಗುರುವಿರಲೇಬೇಕು. ಒಬ್ಬ ಸದ್ಗುರುವನ್ನು ನಿಷ್ಠೆಯಿಂದ ಅನುಸರಿಸುವವನು ಅವನಂತೆಯೇ ಆಗುತ್ತಾನೆ. ಏಕೆಂದರೆ, ಗುರುವು ತನ್ನ ಶಿಷ್ಯನನ್ನು ತನ್ನದೇ ಸಾಕ್ಷಾತ್ಕಾರದ ಮಟ್ಟಕ್ಕೇರಲು ಸಹಾಯ ಮಾಡುತ್ತಾನೆ.”
ಗುರು-ಶಿಷ್ಯ ಸಂಬಂಧವು ಸ್ನೇಹದ ಅತ್ಯುನ್ನತ ಅಭಿವ್ಯಕ್ತಿ, ಏಕೆಂದರೆ ಇದು ಅನಿರ್ಬಂಧಿತ ದಿವ್ಯ ಪ್ರೇಮ ಮತ್ತು ವಿವೇಕವನ್ನು ಆಧರಿಸಿದೆ. ಇದು ಎಲ್ಲಾ ಸಂಬಂಧಗಳಲ್ಲಿ ಅತ್ಯಂತ ಉನ್ನತ ಮತ್ತು ಪವಿತ್ರವಾದುದು. ಭಗವಂತನ ದಿವ್ಯ ಪ್ರೇಮದ ಸಾಮಾನ್ಯ ಬಂಧದಿಂದಾಗಿ ನನ್ನ ಗುರುಗಳು [ಸ್ವಾಮಿ ಶ್ರೀ ಯುಕ್ತೇಶ್ವರ] ಮತ್ತು ನಾನು ಹಾಗೂ ನನ್ನೊಂದಿಗೆ ಶ್ರುತಿಗೂಡಿರುವವರಂತೆಯೇ ಕ್ರಿಸ್ತ ಮತ್ತು ಅವನ ಶಿಷ್ಯರೆಲ್ಲರೂ ಚೇತನದಲ್ಲಿ ಒಂದಾಗಿದ್ದರು….ಈ ಸಂಬಂಧದಲ್ಲಿ ಭಾಗಿಯಾಗುವವರು ಜ್ಞಾನ ಮತ್ತು ಮುಕ್ತಿಯ ಹಾದಿಯಲ್ಲಿರುತ್ತಾರೆ.

ಜೀವನದ ಪ್ರತಿಯೊಂದು ಅಂಶಗಳಂತೆಯೇ ಭಗವದನ್ವೇಷಣೆಯಲ್ಲಿ ಯಶಸ್ಸನ್ನು ಸಾಧಿಸಲು, ಅವನ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಶಾಲೆಯಲ್ಲಿ ಲಭ್ಯವಿರುವ ಲೌಕಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು, ಅದನ್ನು ತಿಳಿದಿರುವ ಶಿಕ್ಷಕರಿಂದ ನೀವು ಕಲಿಯಬೇಕು. ಅಂತೆಯೇ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಒಬ್ಬ ಆಧ್ಯಾತ್ಮಿಕ ಗುರು ಅಥವಾ ಭಗವಂತನನ್ನು ಅರಿತಿರುವ ಗುರುವನ್ನು ಹೊಂದಿರುವುದು ಅವಶ್ಯಕ.

ಜೀವನದ ಕಣಿವೆಯಲ್ಲಿ ನೀವು ಕತ್ತಲಲ್ಲಿ ಎಡವುತ್ತ, ಕುರುಡರಂತೆ ಸಾಗುತ್ತಿರುವಾಗ, ನಿಮಗೆ ಕಣ್ಣಿರುವವರ ಸಹಾಯ ಬೇಕಾಗುತ್ತದೆ. ನಿಮಗೆ ಒಬ್ಬ ಗುರು ಬೇಕು. ಜಗತ್ತಿನಲ್ಲಿ ಸೃಷ್ಟಿಯಾದ ದೊಡ್ಡ ಅವ್ಯವಸ್ಥೆಯಿಂದ ಪಾರಾಗುವ ಏಕೈಕ ಮಾರ್ಗವೆಂದರೆ ಜ್ಞಾನೋದಯ ಹೊಂದಿದವರನ್ನು ಅನುಸರಿಸುವುದು. ನನ್ನ ಗುರುವನ್ನು ಭೇಟಿಯಾಗುವವರೆಗೂ ನಾನು ನೈಜ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಕಂಡಿರಲೇ ಇಲ್ಲ, ಅವರು ನನ್ನಲ್ಲಿ ಆಧ್ಯಾತ್ಮಿಕವಾಗಿ ಆಸಕ್ತಿ ಹೊಂದಿದ್ದರು ಮತ್ತು ನನಗೆ ಮಾರ್ಗದರ್ಶನ ನೀಡುವ ಜ್ಞಾನವನ್ನು ಹೊಂದಿದ್ದರು.
ನಿಮ್ಮ ಹೃದಯದಲ್ಲಿ ಭಗವಂತನಿಗಾಗಿ ನಿರಂತರವಾಗಿ ರೋದಿಸಿ. ನೀವು ಭಗವಂತನಿಗೆ ನಿಮ್ಮ ಆಕಾಂಕ್ಷೆಯನ್ನು ಮನವರಿಕೆ ಮಾಡಿದಾಗ, ಅವನನ್ನು ಅರಿಯುವುದು ಹೇಗೆಂದು ನಿಮಗೆ ಕಲಿಸಲು ಅವನು ಯಾರನ್ನಾದರೂ ಕಳುಹಿಸುತ್ತಾನೆ — ಅವರೇ ನಿಮ್ಮ ಗುರು. ಭಗವಂತನನ್ನು ಅರಿತಿರುವವನು ಮಾತ್ರ ಅವನನ್ನು ಹೇಗೆ ಅರಿಯುವುದೆಂದು ಇತರರಿಗೆ ತೋರಿಸಬಲ್ಲನು. ಅಂಥವರಾದ ನನ್ನ ಗುರು ಸ್ವಾಮಿ ಶ್ರೀ ಯುಕ್ತೇಶ್ವರಜಿಯವರನ್ನು ನಾನು ಕಂಡುಕೊಂಡಾಗ, ಭಗವಂತನು ನಿಗೂಢ ತತ್ತ್ವದ ಮೂಲಕ ಕಲಿಸುವುದಿಲ್ಲ, ಆದರೆ ಜ್ಞಾನೋದಯ ಹೊಂದಿದ ಆತ್ಮಗಳ ಮೂಲಕ ಕಲಿಸುತ್ತಾನೆ ಎಂದು ಅರಿತುಕೊಂಡೆ. ಭಗವಂತ ಅಗೋಚರನು, ಆದರೆ ಅವನೊಂದಿಗೆ ನಿರಂತರ ಸಂಸರ್ಗದಲ್ಲಿರುವ ವ್ಯಕ್ತಿಯ ಬುದ್ಧಿಶಕ್ತಿ ಮತ್ತು ಆಧ್ಯಾತ್ಮಿಕ ಗ್ರಹಣಶೀಲತೆಯ ಮೂಲಕ ಅವನು ಗೋಚರವಾಗುತ್ತಾನೆ. ಒಬ್ಬನ ಜೀವನದಲ್ಲಿ ಅನೇಕ ಶಿಕ್ಷಕರಿರಬಹುದು, ಆದರೆ ಗುರು ಮಾತ್ರ ಒಬ್ಬನೇ. ಗುರು-ಶಿಷ್ಯರ ಸಂಬಂಧದಲ್ಲಿ ಒಂದು ದಿವ್ಯ ನಿಯಮವು ನೆರವೇರಲ್ಪಡುತ್ತದೆ, ಯೇಸುವು ಜಾನ್ ದ ಬ್ಯಾಪ್ಟಿಸ್ಟ್‌ನನ್ನು ತನ್ನ ಗುರು ಎಂದು ಒಪ್ಪಿಕೊಂಡಾಗ, ಅವನ ಜೀವನದಲ್ಲಿಯೂ ಸಮರ್ಥಿಸಲ್ಪಟ್ಟಂತೆ.
ಯಾರು ಭಗವತ್‌ಸಾಕ್ಷಾತ್ಕಾರ ಹೊಂದಿರುವನೋ ಮತ್ತು ಯಾರು ಆತ್ಮಗಳನ್ನು ಉದ್ಧಾರ ಮಾಡುವಂತೆ ಭಗವಂತನಿಂದ ಆಜ್ಞಾಪಿಸಲ್ಪಟ್ಟಿರುವನೋ ಅವನೇ ಗುರು. ಒಬ್ಬನು ತಾನು ಗುರು ಎಂದು ಭಾವಿಸಿದ ಮಾತ್ರಕ್ಕೆ ಗುರುವಾಗಲು ಸಾಧ್ಯವಿಲ್ಲ. “ಯಾರೂ ನನ್ನ ಬಳಿಗೆ ಬರಲು ಸಾಧ್ಯವಿಲ್ಲ, ನನ್ನನ್ನು ಕಳುಹಿಸಿದ ತಂದೆಯು ಅವನನ್ನು ಸೆಳೆಯದ ಹೊರತು,” ಎಂದು ಯೇಸು ಹೇಳಿದಾಗ, ನಿಜವಾದ ಗುರುವು ಭಗವಂತನ ಆಜ್ಞೆಯ ಮೇರೆಗೆ ಮಾತ್ರ ಕಾರ್ಯನಿರ್ವಹಿಸುತ್ತಾನೆ ಎಂದು ಅವನು ತೋರಿಸಿದ. ಅವನು ಭಗವಂತನ ಶಕ್ತಿಗೇ ಸಂಪೂರ್ಣ ಮನ್ನಣೆ ನೀಡಿದ್ದ. ಒಬ್ಬ ಗುರುವು ಅಹಂ ಇಲ್ಲದವನಾಗಿದ್ದರೆ, ಅವನ ದೇಹ ಮಂದಿರದಲ್ಲಿ ಭಗವಂತ ಮಾತ್ರ ನೆಲೆಸಿದ್ದಾನೆ ಎಂದು ನೀವು ಅರಿಯಬಹುದು; ಮತ್ತು ನೀವು ಅವನೊಂದಿಗೆ ಶ್ರುತಿಗೂಡಿದಾಗ ಭಗವಂತನೊಂದಿಗೆ ಶ್ರುತಿಗೂಡಿರುತ್ತೀರಿ. ಯೇಸು ತನ್ನ ಶಿಷ್ಯರಿಗೆ ನೆನಪಿಸಿದ: “ನನ್ನನ್ನು ಅಂಗೀಕರಿಸುವವನು ನನ್ನನ್ನಲ್ಲ, ಆದರೆ ನನ್ನನ್ನು ಕಳುಹಿಸಿದಾತನನ್ನೇ ಅಂಗೀಕರಿಸುತ್ತಾನೆ.”
ಇತರರ ಹೊಗಳಿಕೆಯನ್ನು ವೈಯಕ್ತಿಕವಾಗಿ ಸ್ವೀಕರಿಸುವ ಶಿಕ್ಷಕನು ಕೇವಲ ತನ್ನ ಸ್ವಂತ ಅಹಂನ ಆರಾಧಕನಾಗಿರುತ್ತಾನೆ. ಒಂದು ಮಾರ್ಗವು ವಿಶ್ವಸನೀಯವೇ ಎಂದು ಕಂಡುಹಿಡಿಯಲು, ಅದರ ಹಿಂದೆ ಎಂತಹ ಶಿಕ್ಷಕನಿದ್ದಾನೆ, ಅವನ ಕಾರ್ಯಗಳು, ಅವನು ಭಗವಂತನಿಂದ ಮುನ್ನಡೆಸಲ್ಪಡುತ್ತಿದ್ದಾನೆ ಎಂದು ತೋರಿಸುತ್ತವೆಯೇ ಅಥವಾ ಅವನ ಅಹಂನಿಂದಲೇ ಎಂದು ವಿವೇಚಿಸಿ. ಜ್ಞಾನೋದಯ ಹೊಂದಿರದ ಮಾರ್ಗದರ್ಶಕನು, ಅವನ ಶಿಷ್ಯಂದಿರ ಸಂಖ್ಯೆ ಎಷ್ಟೇ ದೊಡ್ಡದಾಗಿದ್ದರೂ, ಅವನು ನಿಮಗೆ ಭಗವಂತನ ಸಾಮ್ರಾಜ್ಯವನ್ನು ತೋರಿಸಲಾರ. ಎಲ್ಲಾ ಚರ್ಚುಗಳೂ ಒಳ್ಳೆಯದನ್ನೇ ಮಾಡಿವೆ, ಆದರೆ ಧಾರ್ಮಿಕ ಸಿದ್ಧಾಂತದಲ್ಲಿನ ಅಂಧ ವಿಶ್ವಾಸವು ಜನರನ್ನು ಆಧ್ಯಾತ್ಮಿಕವಾಗಿ ಅಜ್ಞಾನಿಗಳನ್ನಾಗಿಯೂ ಜಡಮತಿಗಳನ್ನಾಗಿಯೂ ಮಾಡುತ್ತದೆ. ಭಗವನ್ನಾಮವನ್ನು ಹಾಡುವ ದೊಡ್ಡ ದೊಡ್ಡ ಸಭೆಗಳನ್ನು ನಾನು ಅನೇಕ ಬಾರಿ ನೋಡಿದ್ದೇನೆ, ಆದರೆ ಭಗವಂತ ಮಾತ್ರ ದೂರದ ನಕ್ಷತ್ರಗಳಂತೆ ಅವರ ಪ್ರಜ್ಞೆಯಿಂದ ಬಹು ದೂರವಿದ್ದ. ಕೇವಲ ಚರ್ಚ್‌ಗೆ ಹಾಜರಿ ಹಾಕುವುದರಿಂದ ಯಾರೂ ರಕ್ಷಿಸಲ್ಪಡುವುದಿಲ್ಲ. ಮುಕ್ತಿಯ ನಿಜವಾದ ಮಾರ್ಗವು ಯೋಗದಲ್ಲಿದೆ, ವೈಜ್ಞಾನಿಕ ಆತ್ಮಾವಲೋಕನದಲ್ಲಿದೆ ಮತ್ತು ವೇದಾಂತದ ಕಾಡನ್ನು ಸಾಗಿ ಬಂದ ಮತ್ತು ನಿಮ್ಮನ್ನು ಸುರಕ್ಷಿತವಾಗಿ ಭಗವಂತನ ಬಳಿಗೆ ಕೊಂಡೊಯ್ಯಲು ಸಾಧ್ಯವಿರುವ ಒಬ್ಬನನ್ನು ಅನುಸರಿಸುವುದರಲ್ಲಿದೆ.
ಸತ್ಯದ ಜೀವಂತ ಸಾಕಾರರೂಪ
ಜನಗಳ ಆಳವಾದ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಾಗಿ ಸಹಾಯ ಮಾಡಲು ಭಗವಂತನಿಂದ ನೇಮಿಸಲ್ಪಟ್ಟಂತಹ ಗುರುವು ಸಾಮಾನ್ಯ ಶಿಕ್ಷಕನಲ್ಲ; ಅವನು ಒಂದು ಮಾನವ ವಾಹನ, ಭಗವಂತನು, ದಾರಿ ತಪ್ಪಿದ ಆತ್ಮಗಳನ್ನು ಅವರ ಅಮರ ಧಾಮಕ್ಕೆ ಪುನಃ ಆಕರ್ಷಿಸಲು ಹಾಗೂ ಮಾರ್ಗದರ್ಶಿಸಲು, ಗುರುವಿನ ಶರೀರ, ವಾಣಿ, ಮನಸ್ಸು ಹಾಗೂ ಆಧ್ಯಾತ್ಮಿಕತೆಯನ್ನು ಉಪಯೋಗಿಸುತ್ತಾನೆ. ನಾವು ಆರಂಭದಲ್ಲಿ ಸತ್ಯವನ್ನು ಅರಿಯುವ ಅಸ್ಪಷ್ಟ ಬಯಕೆಯಿಂದ ವಿವಿಧ ಶಿಕ್ಷಕರನ್ನು ಹೋಗಿ ಕಾಣುತ್ತೇವೆ. ಆದರೆ ಒಬ್ಬ ಗುರುವು ಆಧ್ಯಾತ್ಮಿಕ ಸತ್ಯದ ಜೀವಂತ ಸಾಕಾರರೂಪನಾಗಿದ್ದಾನೆ ಹಾಗೂ ಅವನು, ಲೌಕಿಕ ಬಂಧನದಿಂದ ಬಿಡಿಸು ಎಂದು ಒಬ್ಬ ಭಕ್ತ ಮಾಡುವ ಎಡೆಬಿಡದ ಬೇಡಿಕೆಗೆ ಪ್ರತ್ಯುತ್ತರವಾಗಿ ಭಗವಂತನು ನಿಯೋಜಿಸಿದ ಮುಕ್ತಿಯ ಮಧ್ಯವರ್ತಿಯಾಗಿದ್ದಾನೆ.

ಸತ್ಸಂಗದಿಂದ, ಸಂತರ ಸಹವಾಸದಿಂದ ಮತ್ತು ಭಗವಂತನ ಸಂದೇಶವಾಹಕರೆಡೆಗಿನ ಭಕ್ತಿಯಿಂದ ಭ್ರಮೆಯು ತೊಲಗುತ್ತದೆ. ಸಂತರ ಚಿಂತನೆಯೂ ಕೂಡ ಭ್ರಮೆಯನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಭಗವಂತನ ಸಂದೇಶವಾಹಕನ ಚಿಂತನೆಯೊಂದಿಗೆ ಶ್ರುತಿಗೂಡಿಕೊಂಡಿರುವುದರಿಂದ ಭ್ರಮೆಯು ನಾಶವಾಗುವುದೇ ಹೊರತು ಅವನೊಂದಿಗಿನ ವೈಯಕ್ತಿಕ ಸಹವಾಸದಿಂದಲ್ಲ. ನಿಜವಾದ ಗುರುವಿಗೆ ತನ್ನನ್ನು ಇತರರ ಹೃದಯಗಳಲ್ಲಿ ಸ್ಥಾಪಿಸುವ ಬಯಕೆ ಇರದೆ, ಅವರ ಪ್ರಜ್ಞೆಯಲ್ಲಿ ಭಗವತ್‌ಪ್ರಜ್ಞೆಯನ್ನು ಜಾಗೃತಗೊಳಿಸುವ ಆಸೆ ಇರುತ್ತದೆ. ಗುರುಗಳು [ಸ್ವಾಮಿ ಶ್ರೀ ಯುಕ್ತೇಶ್ವರ್] ಹಾಗಿದ್ದರು: ಅವರು ನಮ್ಮೊಂದಿಗೆ ಒಂದಾಗಿದ್ದರು — ಎಂದಿಗೂ ತಮ್ಮ ಹಿರಿಮೆಯನ್ನು ಪ್ರದರ್ಶಿಸಲಿಲ್ಲ. ಆಶ್ರಮದಲ್ಲಿ ಯಾರಾದರೂ ಮಾನ್ಯತೆ ಅಥವಾ ಉನ್ನತ ಸ್ಥಾನವನ್ನು ಬಯಸಿದರೆ, ಗುರುಗಳು ಅವರಿಗೆ ಆ ಸ್ಥಾನವನ್ನು ನೀಡುತ್ತಿದ್ದರು. ಆದರೆ ನಾನು ಗುರುವಿನ ಹೃದಯವನ್ನು ಬಯಸಿದ್ದೆ, ಅವರೊಳಗಿದ್ದ ದಿವ್ಯ ಪ್ರಜ್ಞೆಯನ್ನು; ಮತ್ತು ಅದರಿಂದಾಗಿ, ಅವರು ಸದಾ ನನ್ನ ಹೃದಯದಲ್ಲಿದ್ದಾರೆ. ನಮ್ಮೆಲ್ಲ ಗುರುಗಳೊಂದಿಗೆ ನೀವು ಅಂತಹ ಶ್ರುತಿಗೂಡುವಿಕೆಯಿಂದಿರಬೇಕು.

ನನ್ನ ಗುರುಗಳು ನನಗೆ ಹೇಳಿದರು: “ನೀನು ಅತ್ಯಂತ ಕೀಳು ಮಾನಸಿಕ ಸ್ತರದಲ್ಲಿಯೇ ಇರು ಅಥವಾ ಅತ್ಯುತ್ಕೃಷ್ಟ ಜ್ಞಾನದ ಸ್ತರದಲ್ಲಾದರೂ ಇರು, ನಾನು ಇಂದಿನಿಂದ ಅನಂತ ಕಾಲದವರೆಗೂ ನಿನ್ನ ಮಿತ್ರನಾಗಿಯೇ ಇರುತ್ತೇನೆ. ನೀನು ತಪ್ಪು ಮಾಡಿದರೂ ನಾನು ನಿನ್ನ ಮಿತ್ರನೇ ಆಗಿರುತ್ತೇನೆ, ಏಕೆಂದರೆ ಮಿಕ್ಕೆಲ್ಲ ಸಮಯಕ್ಕಿಂತಲೂ ಆಗ ನಿನಗೆ ನನ್ನ ಸ್ನೇಹದ ಅವಶ್ಯಕತೆ ಅಧಿಕವಾಗಿರುತ್ತದೆ.”
ನನ್ನ ಗುರುವಿನ ಅನಿರ್ಬಂಧಿತ ಸ್ನೇಹವನ್ನು ನಾನು ಒಪ್ಪಿಕೊಂಡಾಗ, ಅವರು ಕೇಳಿದರು: “ನೀನೂ ನನಗೆ ಅದೇ ಬಗೆಯ ಅನಿರ್ಬಂಧಿತವಾದ ಪ್ರೇಮವನ್ನು ಕೊಡುವೆಯಾ?” ಅವರು ಶಿಶು ಸಹಜವಾದ ಭರವಸೆಯಿಂದ ಕೂಡಿದ ನಿರೀಕ್ಷೆಯೊಂದಿಗೆ ನನ್ನತ್ತ ನೋಡಿದರು.
“ನಾನು ತಮ್ಮನ್ನು ಅನಂತಕಾಲದವರೆಗೂ ಪ್ರೇಮಿಸುವೆ, ಗುರುದೇವ!”
“ಸಾಮಾನ್ಯ ಪ್ರೇಮವು ಸ್ವಾರ್ಥಮೂಲವಾದುದು, ಆಸೆಗಳಲ್ಲಿ ಮತ್ತು ತೃಪ್ತಿಗಳಲ್ಲಿ ಕರಾಳವಾಗಿ ಬೇರು ಬಿಟ್ಟಿರುವುದು. ದಿವ್ಯ ಪ್ರೇಮಕ್ಕೆ ನಿರ್ಬಂಧಗಳಿಲ್ಲ, ಮೇರೆಗಳಿಲ್ಲ, ವ್ಯತ್ಯಾಸವೆಂಬುವುದಿಲ್ಲ. ಸ್ತಂಭಿತಗೊಳಿಸುವಂತಹ ಪವಿತ್ರ ಪ್ರೇಮದ ಸ್ಪರ್ಶವಾಯಿತೆಂದರೆ, ಮಾನವ ಹೃದಯದ ಬದಲಾವಣೆಗಳ ನಿರಂತರ ಪ್ರವಾಹ ಸದಾ ಕಾಲಕ್ಕೆ ಸ್ತಬ್ಧವಾಗಿಬಿಡುತ್ತದೆ.” ಹೀಗೆಂದು ಮತ್ತೆ ಅವರು ನಮ್ರತೆಯಿಂದ, “ದೈವಸಾಕ್ಷಾತ್ಕಾರದ ಹಂತದಿಂದ ನಾನೇನಾದರೂ ಬಿದ್ದುದನ್ನು ನೀನೆಂದಾದರೂ ಕಂಡರೆ, ನಿನ್ನ ತೊಡೆಯ ಮೇಲೆ ನನ್ನ ತಲೆಯನ್ನಿಟ್ಟುಕೊಂಡು ನಾವಿಬ್ಬರೂ ಆರಾಧಿಸುವ ಆ ವಿಶ್ವಪ್ರೇಮಿಯ ಬಳಿಗೆ ನನ್ನನ್ನು ಮತ್ತೆ ಕರೆತರಲು ನೆರವು ನೀಡುವುದಾಗಿ ದಯಮಾಡಿ ಭಾಷೆ ಕೊಡು” ಎಂದರು.
ನಾವು ಈ ಆಧ್ಯಾತ್ಮಿಕ ಒಪ್ಪಂದವನ್ನು ಮಾಡಿಕೊಂಡ ನಂತರವೇ, ಶಿಷ್ಯನಿಗೆ ಗುರುವಿನ ಮಹತ್ವವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾರಂಭಿಸಿದೆನು. ನಾನು ನನ್ನ ಗುರುವಿನ ದಿವ್ಯ ಪ್ರಜ್ಞೆಗೆ, ಅನಿರ್ಬಂಧಿತ ನಿಷ್ಠೆ ಮತ್ತು ಭಕ್ತಿಯೊಂದಿಗೆ ಶ್ರುತಿಗೂಡುವವರೆಗೂ, ಸಂಪೂರ್ಣ ಸಂತೃಪ್ತಿ, ಸುಖ ಮತ್ತು ಭಗವಂತನ ಸಂಪರ್ಕಗಳನ್ನು ಕಂಡುಕೊಳ್ಳಲಿಲ್ಲ.
ದಾತರಲ್ಲೇ ಶ್ರೇಷ್ಠರು
ಜ್ಞಾನೋದಯ ಹೊಂದಿದ ತನ್ನ ಭಕ್ತರ ಮೂಲಕ ಮಾತ್ರ ಭಗವಂತನು ಜಗತ್ತಿನೊಂದಿಗೆ ಮಾತನಾಡುತ್ತಾನೆ. ಆದ್ದರಿಂದ, ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಜಾಣ್ಮೆಯದೆಂದರೆ, ನಿಮ್ಮ ಆತ್ಮದ ಆಕಾಂಕ್ಷೆಗೆ ಪ್ರತ್ಯುತ್ತರವಾಗಿ ಭಗವಂತನು ನಿಮ್ಮಲ್ಲಿಗೆ ಕಳುಹಿಸಲ್ಪಟ್ಟ ಗುರುವಿನ ಇಚ್ಛೆಯೊಂದಿಗೆ ಶ್ರುತಿಗೂಡುವುದು. ಸ್ವಯಂ-ಘೋಷಿತ ಗುರುವು ಗುರುವಲ್ಲ; ಗುರುವೆಂದರೆ, ಇತರರನ್ನು ತನ್ನೆಡೆಗೆ ಮರಳಿ ಕರೆತರುವಂತೆ ಭಗವಂತನು ಯಾರನ್ನು ಕೇಳಿಕೊಂಡಿರುವನೋ ಅವನು. ಅಲ್ಪ ಆಧ್ಯಾತ್ಮಿಕ ಬಯಕೆ ಇದ್ದಾಗ, ಪ್ರಭುವು ನಿಮ್ಮನ್ನು ಮತ್ತಷ್ಟು ಪ್ರೇರೇಪಿಸಲು ನಿಮಗೆ ಪುಸ್ತಕಗಳು ಮತ್ತು ಶಿಕ್ಷಕರನ್ನು ಕಳಿಸುತ್ತಾನೆ; ಮತ್ತು ನಿಮ್ಮ ಬಯಕೆ ಹೆಚ್ಚಾದಾಗ, ಅವನು ಒಬ್ಬ ನೈಜ ಗುರುವನ್ನು ಕಳಿಸುತ್ತಾನೆ….
ತಮ್ಮ ಶಿಷ್ಯಂದಿರು ಸದಾ, ಹೇಳಿದಂತೆ ಕೇಳುವ ಆಜ್ಞಾನುವರ್ತಿಗಳಾಗಿರಬೇಕೆಂದು ನಿರೀಕ್ಷಿಸುವ ಶಿಕ್ಷಕರಿದ್ದಾರೆ; ಮತ್ತು ಶಿಷ್ಯಂದಿರು ಹಾಗೆ ಮಾಡದಿದ್ದರೆ, ಶಿಕ್ಷಕರು ಕೋಪಗೊಳ್ಳುತ್ತಾರೆ. ಆದರೆ ಭಗವಂತನನ್ನು ಅರಿತಿರುವವನು ಮತ್ತು ನಿಜವಾಗಿಯೂ ಗುರುವಾಗಿರುವ ಆಧ್ಯಾತ್ಮಿಕ ಶಿಕ್ಷಕನು ತನ್ನನ್ನು ಎಂದಿಗೂ ಶಿಕ್ಷಕ ಎಂದು ಭಾವಿಸುವುದಿಲ್ಲ. ಅವನು ಪ್ರತಿಯೊಬ್ಬರಲ್ಲೂ ಭಗವಂತನ ಉಪಸ್ಥಿತಿಯನ್ನು ಕಾಣುತ್ತಾನೆ ಮತ್ತು ಕೆಲವು ವಿದ್ಯಾರ್ಥಿಗಳು ಅವನ ಇಚ್ಛೆಯನ್ನು ಕಡೆಗಣಿಸಿದರೆ ಅವನಿಗೆ ಅಸಮಾಧಾನ ಆಗುವುದಿಲ್ಲ. ನೈಜ ಗುರುವಿನ ಜ್ಞಾನದೊಂದಿಗೆ ಶ್ರುತಿಗೂಡಿರುವವರು, ಗುರುವು ತಮಗೆ ನೆರವಾಗುವುದನ್ನು ಸಾಧ್ಯವಾಗಿಸುತ್ತಾರೆ ಎಂದು ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. “ಅದನ್ನು (ಗುರುವಿನ ಜ್ಞಾನವನ್ನು) ಗ್ರಹಿಸಿದಾಗ, ಓ ಅರ್ಜುನ! ನೀನು ಮತ್ತೆ ಭ್ರಮೆಯಲ್ಲಿ ಬೀಳುವುದಿಲ್ಲ.”
ಗುರು ಶಿಷ್ಯರ ನಡುವೆ ಇರುವ ಸ್ನೇಹವು ಶಾಶ್ವತವಾದುದು. ಒಬ್ಬ ಶಿಷ್ಯನು ಗುರುವಿನ ತರಬೇತಿಯನ್ನು ಒಪ್ಪಿಕೊಂಡಾಗ, ಅಲ್ಲಿ ಸಂಪೂರ್ಣ ಶರಣಾಗತಿ ಇರುತ್ತದೆ, ಯಾವುದೇ ನಿರ್ಬಂಧ ಇರುವುದಿಲ್ಲ.


ನನ್ನ ಗುರುವಿನೊಂದಿಗೆ ನನಗೆ ಇದ್ದುದಕ್ಕಿಂತ ಹೆಚ್ಚು ಶ್ರೇಷ್ಠವಾದ ಸಂಬಂಧವನ್ನು ನಾನು ಈ ಜಗತ್ತಿನಲ್ಲಿ ಕಲ್ಪಿಸಿಕೊಳ್ಳಲಾರೆ. ಗುರು-ಶಿಷ್ಯರ ಸಂಬಂಧವು ಪ್ರೀತಿಯ ಅತ್ಯುನ್ನತ ರೂಪವಾಗಿದೆ. ಭಗವಂತನನ್ನು ಹಿಮಾಲಯದಲ್ಲಿ ಹೆಚ್ಚು ಯಶಸ್ವಿಯಾಗಿ ಅರಸಬಹುದೆಂದು ಭಾವಿಸಿ ನಾನು ಒಮ್ಮೆ ಅವರ ಆಶ್ರಮವನ್ನು ತೊರೆದೆ. ನನ್ನ ಅಭಿಪ್ರಾಯ ತಪ್ಪಾಗಿತ್ತು; ಮತ್ತು ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ಶೀಘ್ರದಲ್ಲೇ ತಿಳಿಯಿತು. ಆದರೂ ನಾನು ಹಿಂತಿರುಗಿ ಬಂದಾಗ, ನಾನು ಎಂದೂ ಹೋಗಿರಲೇ ಇಲ್ಲವೇನೋ ಎಂಬಂತೆ ನಡೆಸಿಕೊಂಡರು. ಅವರ ಸ್ವಾಗತವು ಬಹಳ ಅನೌಪಚಾರಿಕವಾಗಿತ್ತು; ನನ್ನನ್ನು ಖಂಡಿಸುವ ಬದಲು, ಅವರು ಶಾಂತವಾಗಿ ಹೇಳಿದರು, “ಈ ಬೆಳಗ್ಗೆ ತಿನ್ನುವುದಕ್ಕೆ ಏನಾದರೂ ಇದೆಯೇ ನೋಡೋಣ.”
“ಆದರೆ ಗುರುಗಳೇ,” ನಾನು ಹೇಳಿದೆ, “ಬಿಟ್ಟುಹೋಗಿದ್ದಕ್ಕೆ ನಿಮಗೆ ನನ್ನ ಮೇಲೆ ಕೋಪವಿಲ್ಲವೆ?”
“ಯಾತಕ್ಕಾಗಿ?” ಅವರು ಉತ್ತರಿಸಿದರು. “ನಾನು ಇತರರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದ್ದರಿಂದ ಅವರ ಕಾರ್ಯಗಳು ನನ್ನ ಅಪೇಕ್ಷೆಗಳಿಗೆ ವಿರುದ್ಧವಾಗಿರಲು ಸಾಧ್ಯವಿಲ್ಲ. ನನ್ನ ಪ್ರಯೋಜನಕ್ಕಾಗಿ ನಾನು ನಿನ್ನನ್ನು ಬಳಸಿಕೊಳ್ಳುವುದಿಲ್ಲ. ನಿನ್ನ ನಿಜವಾದ ಸಂತೋಷದಲ್ಲಿಯೇ ನನ್ನ ಸಂತೋಷ.”
ಅವರು ಹಾಗೆ ಹೇಳಿದಾಗ, ನಾನು ಅವರ ಕಾಲಿಗೆ ಬಿದ್ದು ಅಳತೊಡಗಿದೆ, “ಮೊಟ್ಟ ಮೊದಲ ಬಾರಿಗೆ ನನ್ನನ್ನು ನಿಜವಾಗಿಯೂ ಪ್ರೀತಿಸುವವರೊಬ್ಬರಿದ್ದಾರೆ!”…
ಭಗವಂತನ ಅನ್ವೇಷಣೆಗಾಗಿ ನಾನು ಆಶ್ರಮ ಬಿಟ್ಟು ಹೋದರೂ, ನನ್ನ ಮೇಲಿನ ಅವರ ಪ್ರೀತಿ ಬದಲಾಗದೆ ಉಳಿದಿತ್ತು. ಅವರು ನನ್ನನ್ನು ಆಕ್ಷೇಪಿಸಲೂ ಇಲ್ಲ….ಯಾರಿಗೇ ಆದರೂ ನನ್ನ ಬಗ್ಗೆ ಇಷ್ಟೊಂದು ಆಸಕ್ತಿ ಇರಬಹುದೆಂದು ನಾನು ಊಹಿಸಿರಲಿಲ್ಲ. ಅವರು ನನ್ನನ್ನು ನನಗಾಗಿ ಪ್ರೀತಿಸಿದರು. ಅವರು ನನಗಾಗಿ ಪರಿಪೂರ್ಣತೆಯನ್ನು ಬಯಸಿದ್ದರು. ನಾನು ಅತ್ಯಂತ ಸಂತೋಷದಿಂದ ಇರಬೇಕೆಂದು ಅವರು ಬಯಸಿದರು. ಅದೇ ಅವರ ಸಂತೋಷವಾಗಿತ್ತು. ನಾನು ಭಗವಂತನನ್ನು ಅರಿಯಬೇಕೆಂದು; ನನ್ನ ಹೃದಯವು ಹಾತೊರೆಯುತ್ತಿರುವ ಜಗನ್ಮಾತೆಯೊಂದಿಗೆ ನಾನು ಇರಬೇಕೆಂದು ಅವರು ಬಯಸಿದರು.
ಅವರು ವ್ಯಕ್ತಪಡಿಸಿದ್ದು ದಿವ್ಯ ಪ್ರೇಮವಲ್ಲವೆ? ಸದ್ಗುಣ ಮತ್ತು ಪ್ರೀತಿಯ ಮಾರ್ಗದಲ್ಲಿ ನನ್ನನ್ನು ನಿರಂತರವಾಗಿ ಮಾರ್ಗದರ್ಶನ ಮಾಡಲು ಬಯಸುವುದು? ಗುರು ಮತ್ತು ಶಿಷ್ಯರ ನಡುವೆ ಆ ಪ್ರೀತಿ ವಿಕಾಸವಾದಾಗ, ಶಿಷ್ಯನಿಗೆ ಗುರುವಿನ ಪ್ರಭಾವವನ್ನು ದುರುಪಯೋಗ ಪಡಿಸಿಕೊಳ್ಳುವ ಯಾವ ಇಚ್ಛೆಯೂ ಇರುವುದಿಲ್ಲ, ಅಥವಾ ಗುರುವೂ ಶಿಷ್ಯನನ್ನು ನಿಯಂತ್ರಿಸಬಯಸುವುದಿಲ್ಲ. ಅವರ ಸಂಬಂಧವನ್ನು ಅತ್ಯುನ್ನತ ವಿವೇಚನೆ ಮತ್ತು ಭಾವನೆಗಳು ನಿಯಂತ್ರಿಸುತ್ತವೆ; ಇಂತಹ ಪ್ರೀತಿಯು ಇನ್ನೊಂದಿಲ್ಲ. ಮತ್ತು ನಾನು ನನ್ನ ಗುರುವಿನಿಂದ ಆ ಪ್ರೀತಿಯ ರುಚಿಯನ್ನು ಅನುಭವಿಸಿದ್ದೇನೆ.

ಗುರುವು ಜಾಗೃತಗೊಂಡಿರುವ ಭಗವಂತನೇ ಆಗಿದ್ದಾನೆ, ಶಿಷ್ಯನಲ್ಲಿ ನಿದ್ರಿಸುತ್ತಿರುವ ಭಗವಂತನನ್ನು ಎಚ್ಚರಗೊಳಿಸುತ್ತಾನೆ. ಅನುಕಂಪ ಮತ್ತು ಆಳವಾದ ದೃಷ್ಟಿಕೋನಗಳಿಂದ ಒಬ್ಬ ನೈಜ ಗುರುವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕೊರತೆ ಇರುವವರಲ್ಲಿ ಭಗವಂತನು ನರಳುತ್ತಿರುವುದನ್ನು ಕಾಣುತ್ತಾನೆ, ಆದ್ದರಿಂದಲೇ ಅವರಿಗೆ ಸಹಾಯ ಮಾಡುವುದು ತನ್ನ ಆನಂದದಾಯಕ ಕರ್ತವ್ಯವೆಂದು ಭಾವಿಸುತ್ತಾನೆ. ಪರಿತ್ಯಕ್ತರಲ್ಲಿ ಹಸಿವಿನಿಂದ ನರಳುತ್ತಿರುವ ಭಗವಂತನಿಗೆ ಆಹಾರ ಕೊಡಲು ಪ್ರಯತ್ನಿಸುತ್ತಾನೆ, ಅಜ್ಞಾನಿಗಳಲ್ಲಿ ನಿದ್ರಿಸುತ್ತಿರುವ ಭಗವಂತನನ್ನು ಅಲುಗಾಡಿಸುತ್ತಾನೆ, ಶತ್ರುಗಳಲ್ಲಿ ಪ್ರಜ್ಞೆತಪ್ಪಿದ ಭಗವಂತನನ್ನು ಪ್ರೀತಿಸುತ್ತಾನೆ, ಹಾಗೂ ಭಗವಂತನಿಗಾಗಿ ಹಂಬಲಿಸುತ್ತಿರುವ ಭಕ್ತನಲ್ಲಿ ಅರ್ಧ ಜಾಗೃತಿಗೊಂಡಿರುವ ಭಗವಂತನನ್ನು ಉತ್ತೇಜಿಸುತ್ತಾನೆ. ಬಹಳವಾಗಿ ಮುಂದುವರೆದಿರುವ ಸಾಧಕರಲ್ಲಿ ಹೆಚ್ಚೂ ಕಡಿಮೆ ಪೂರ್ತಿ ಎಚ್ಚರಗೊಂಡೇ ಇರುವ ಭಗವಂತನನ್ನು ತನ್ನ ಮೃದುವಾದ ಪ್ರೀತಿಪೂರ್ವಕವಾದ ಸೋಕುವಿಕೆಯಿಂದಲೇ ತತ್‌ಕ್ಷಣವೇ ಸಂಪೂರ್ಣವಾಗಿ ಎಚ್ಚರಿಸಿಬಿಡುತ್ತಾನೆ. ಮಾನವರೆಲ್ಲರ ಪೈಕಿ, ಗುರುವೇ ಶ್ರೇಷ್ಠನಾದ ದಾತನು. ಭಗವಂತನಂತೆಯೇ ಅವನ ಕೊಡುಗೆಗಳಿಗೆ ಮಿತಿಯೇ ಇಲ್ಲ.
ಗುರುವಿನ ವಾಗ್ದಾನ
ನಿಜಕ್ಕೂ ಆಂತರಿಕ ಆಧ್ಯಾತ್ಮಿಕ ನೆರವನ್ನು ಕೋರಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಕ್ಕೆ ಬಂದವರು ಭಗವಂತನಿಂದ ಏನನ್ನು ಅರಸುತ್ತಾರೋ ಅದನ್ನು ಪಡೆಯುತ್ತಾರೆ. ಅವರು, ನಾನು ದೇಹದಲ್ಲಿರುವಾಗ ಬಂದರೂ ಅಥವಾ ನಂತರ ಬಂದರೂ, ವೈಎಸ್ಎಸ್ ಗುರುಗಳೆಲ್ಲರ ಸಂಪರ್ಕದ ಮೂಲಕ ಭಗವಂತನ ಶಕ್ತಿಯು ಭಕ್ತರಲ್ಲಿ ಒಂದೇ ಸಮನಾಗಿ ಹರಿಯುತ್ತದೆ ಹಾಗೂ ಅದು ಅವರ ಮೋಕ್ಷಕ್ಕೆ ಕಾರಣವಾಗುತ್ತದೆ….
ವೈಎಸ್‍ಎಸ್ ಬೋಧನೆಗಳ ತಮ್ಮ ಅಭ್ಯಾಸದಲ್ಲಿ ನಿಯತವಾಗಿರುವ ಮತ್ತು ನಿಷ್ಠಾವಂತರಾಗಿರುವ ಎಲ್ಲ ಭಕ್ತರೂ ತಮ್ಮ ಜೀವನಗಳು ಶುದ್ಧೀಕರಿಸಲ್ಪಟ್ಟಿರುವುದನ್ನು ಮತ್ತು ಪರಿವರ್ತಿಸಲ್ಪಟ್ಟಿರುವುದನ್ನು ಕಂಡುಕೊಳ್ಳುತ್ತಾರೆ. ಅವರ ದೃಢತೆ ಮತ್ತು ಸ್ಥಿರತೆಗಳಿಂದ ಈ ಮಾರ್ಗದ ನಿಜವಾದ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ. ವೈಎಸ್‍ಎಸ್ ಪರಂಪರೆಯ ಗುರುಗಳ ಸಹಾಯ ಹಾಗೂ ಆಶೀರ್ವಾದಗಳು, ವೈಎಸ್‍ಎಸ್ ತಂತ್ರಗಳು ಮತ್ತು ಬೋಧನೆಗಳಲ್ಲಿ ಅಂತರ್ಗತವಾಗಿವೆ. ವೈಎಸ್‍ಎಸ್ ತತ್ತ್ವಗಳಿಗನುಗುಣವಾಗಿ ತಮ್ಮ ಜೀವನವನ್ನು ನಡೆಸುವಂತಹ ಭಕ್ತರು ವೈಎಸ್‍ಎಸ್ ಗುರುಪರಂಪರೆಯಿಂದ ಗೋಪ್ಯ ಮತ್ತು ಬಹಿರಂಗ ನಿರ್ದೇಶನಗಳೊಂದಿಗೆ ಅನುಗ್ರಹಿಸಲ್ಪಡುತ್ತಾರೆ. ಎಂದೆಂದಿಗೂ ಜೀವಿಸಿರುವ ಬಾಬಾಜಿಯವರು ಎಲ್ಲ ಪ್ರಾಮಾಣಿಕ ವೈಎಸ್‍ಎಸ್/ಎಸ್‍ಆರ್‍ಎಫ್ ಭಕ್ತರ ಪ್ರಗತಿಯನ್ನು ರಕ್ಷಿಸುವ ಮತ್ತು ಮಾರ್ಗದರ್ಶನ ನೀಡುವ ವಚನವಿತ್ತಿದ್ದಾರೆ. ತಮ್ಮ ದೇಹವನ್ನು ತ್ಯಜಿಸಿರುವ ಲಾಹಿರಿ ಮಹಾಶಯ ಮತ್ತು ಶ್ರೀ ಯುಕ್ತೇಶ್ವರಜೀಯವರು — ಮತ್ತು ಸ್ವಯಂ ನಾನು ದೇಹವನ್ನು ತ್ಯಜಿಸಿದ ನಂತರವೂ — ನಾವೆಲ್ಲರೂ ವೈಎಸ್‍ಎಸ್/ಎಸ್‍ಆರ್‍ಎಫ್‍ನ ಪ್ರಾಮಾಣಿಕ ಸದಸ್ಯರನ್ನು ಯಾವಾಗಲೂ ರಕ್ಷಿಸುವೆವು ಮತ್ತು ನಿರ್ದೇಶಿಸುವೆವು.


ಭಗವಂತ ನಿಮ್ಮನ್ನು ನನ್ನ ಬಳಿಗೆ ಕಳಿಸಿದ್ದಾನೆ, ಹಾಗೂ ನಾನು ಎಂದಿಗೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ….ವಿಶ್ವಾದ್ಯಂತ ಭಕ್ತರು ಶ್ರುತಿಗೂಡಿಕೊಂಡಿದ್ದಲ್ಲಿ ನಾನು ನಿರ್ಗಮಿಸಿದ ನಂತರವೂ ನನ್ನ ಸಹಾಯವನ್ನು ಅವರಿಗೆ ಸದಾಕಾಲ ಕೊಡಲಾಗುತ್ತದೆ. ನಾನು ದೈಹಿಕವಾಗಿ ನಿಮ್ಮೆಲ್ಲರಿಂದ ಅನುಪಸ್ಥಿತನಾದಾಗ ಒಂದು ಕ್ಷಣವೂ ಚಿಂತಿಸಬೇಡಿ. ನಾನು ನಿಮ್ಮೊಂದಿಗೆ ಇದ್ದೇ ಇರುತ್ತೇನೆ. ನಾನು ಈಗಿರುವಷ್ಟೇ, ಈ ದೇಹದಲ್ಲಿ ಇಲ್ಲದಿದ್ದಾಗಲೂ ನಿಮ್ಮ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಆಳವಾಗಿ ಆಸಕ್ತನಾಗಿರುತ್ತೇನೆ. ನಾನು ಯಾವಾಗಲೂ ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಗಮನಿಸುತ್ತಿರುತ್ತೇನೆ. ಮತ್ತು ಯಾವಾಗ ಒಬ್ಬ ನಿಜವಾದ ಭಕ್ತನು ತನ್ನ ಆತ್ಮದ ಆಳವಾದ ಮೌನದಲ್ಲಿ ನನ್ನನ್ನು ಕುರಿತು ಯೋಚಿಸುವನೋ, ಆಗ ನಾನು ಸಮೀಪದಲ್ಲಿಯೇ ಇರುವೆನೆಂಬುದನ್ನು ಅವನು ಅರಿಯುತ್ತಾನೆ.
ಹೆಚ್ಚಿನ ಅನ್ವೇಷಣೆಗಾಗಿ:
- "ದ ಗುರು: ಗೈಡ್ ಟು ಸ್ಪಿರಿಚುವಲ್ ಫ್ರೀಡಮ್," ಫೈಂಡಿಂಗ್ ದಿ ಜಾಯ್ ವಿದಿನ್ ಯು ಶ್ರೀ ಶ್ರೀ ದಯಾ ಮಾತಾರಿಂದ
- ದ ಗುರು: ಮೆಸೆಂಜರ್ ಆಫ್ ಟ್ರುತ್, ಧ್ವನಿ ಮುದ್ರಣ ಶ್ರೀ ಶ್ರೀ ಮೃಣಾಲಿನಿ ಮಾತಾರದು
- ದ ಇಂಪಾರ್ಟನ್ಸ್ ಆಫ್ ಎ ಟ್ರೂ ಗುರು, ಧ್ವನಿ ಮುದ್ರಣ ಬ್ರದರ್ ಆನಂದಮೊಯಿಯವರದು
- "ಲೆಟರ್ಸ್ ಆನ್ ದ ಗುರು-ಡಿಸೈಪಲ್ ರಿಲೇಷನ್ಶಿಪ್," ಗಾಡ್ ಅಲೋನ್: ದ ಲೈಫ್ ಅಂಡ್ ಲೆಟರ್ಸ್ ಆಫ್ ಅ ಸೇಂಟ್, ಶ್ರೀ ಜ್ಞಾನ ಮಾತಾರಿಂದ