ಅನಿಶ್ಚಿತ ಜಗತ್ತಿನಲ್ಲಿ ಆಂತರಿಕ ಸುರಕ್ಷತೆ

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

 

ಏಕೆ ಇಷ್ಟೊಂದು ಯುದ್ಧಗಳು ಮತ್ತು ನೈಸರ್ಗಿಕ ವಿಪತ್ತುಗಳು?

ಪ್ರಕೃತಿಯಲ್ಲಿ ಹಠಾತ್ತಾಗಿ ಸಂಭವಿಸಿ ವ್ಯಾಪಕ ಹಾನಿ ಮತ್ತು ಸಾಮೂಹಿಕ ನಷ್ಟವನ್ನುಂಟುಮಾಡುವ ಪ್ರಳಯಗಳು “ದೈವಘಟನೆಗಳಲ್ಲ.” ಅಂತಹ ಅನಾಹುತಗಳು ಮಾನವನ ಯೋಚನೆಗಳು ಮತ್ತು ಅವನು ಮಾಡುವ ಕಾರ್ಯಗಳಿಂದ ಉಂಟಾಗುತ್ತವೆ. ಜಗತ್ತಿನ ಒಳಿತು ಮತ್ತು ಕೆಡಕುಗಳ ಸ್ಪಂದನಾತ್ಮಕ ಸಮತೋಲನವು, ಮಾನವನ ತಪ್ಪು ಯೋಚನೆಗಳು ಮತ್ತು ತಪ್ಪು ಕಾರ್ಯಗಳ ಫಲವಾಗಿ ಉಂಟಾದ ಅಪಾಯಕಾರಿ ಸ್ಪಂದನಗಳ ಸಂಚಯನದಿಂದ ಭಂಗಗೊಂಡಾಗ, ನೀವು ವಿನಾಶವನ್ನು ಕಾಣುವಿರಿ….

ಯುದ್ಧಗಳು ಅನಿವಾರ್ಯ ದೈವೀ ಕೃತ್ಯದಿಂದ ಸಂಭವಿಸುವುದಿಲ್ಲ, ವ್ಯಾಪಕವಾದ ಐಹಿಕ ಸ್ವಾರ್ಥಪರತೆಯಿಂದ ಸಂಭವಿಸುತ್ತವೆ. ವೈಯಕ್ತಿಕ, ಔದ್ಯೋಗಿಕ, ರಾಜಕೀಯ, ರಾಷ್ಟ್ರೀಯ ಸ್ವಾರ್ಥಪರತೆಯನ್ನು ತೊಲಗಿಸಿ. ಆಗ ಯುದ್ಧಗಳೇ ಇರುವುದಿಲ್ಲ.

ಜಗತ್ತಿನೆಲ್ಲೆಡೆಯಿರುವ ಆಧುನಿಕ ಅವ್ಯವಸ್ಥೆಗಳಿಗೆ ಕಾರಣ ಅಧಾರ್ಮಿಕ ಆದರ್ಶಗಳಡಿಯ ಬದುಕು. ಜನರು ಮತ್ತು ದೇಶಗಳು ಭ್ರಾತೃತ್ವ, ಔದ್ಯೋಗಿಕ ಸಹಕಾರ, ಹಾಗೂ ಐಹಿಕ ಸರಕುಗಳು ಮತ್ತು ಅನುಭವಗಳ ವಿನಿಮಯ ಮುಂತಾದ ದಿವ್ಯ ಆದರ್ಶಗಳಡಿಯಲ್ಲಿ ಬದುಕಿದರೆ ಅವರನ್ನು ಸಂಪೂರ್ಣ ವಿನಾಶದಿಂದ ರಕ್ಷಿಸಬಹುದು.

ಹೆಚ್ಚಿದ ತಿಳುವಳಿಕೆಯಿಂದಾಗಿ ಮುಂದೊಂದು ದಿನ ಸರಹದ್ದುಗಳೇ ಇಲ್ಲದ ಕಾಲ ಬರುತ್ತದೆ ಎಂದು ನಾನು ನಂಬಿದ್ದೇನೆ. ನಾವು ಈ ಭೂಮಿಯನ್ನು ನಮ್ಮ ದೇಶವೆಂದು ಕರೆಯೋಣ; ಹಾಗೂ ನಿಷ್ಪಕ್ಷಪಾತತೆ ಮತ್ತು ಅಂತರರಾಷ್ಟ್ರೀಯ ಶಾಸನ ಸಭೆಯ ಪ್ರಕ್ರಿಯೆಯ ಮೂಲಕ ನಿಸ್ವಾರ್ಥತೆಯಿಂದ ಜಗತ್ತಿನ ಸರಕುಗಳನ್ನು ಜನಗಳ ಅವಶ್ಯಕತೆಗೆ ತಕ್ಕಂತೆ ವಿತರಿಸೋಣ. ಆದರೆ ಬಲವಂತವಾಗಿ ಸಮಾನತೆಯನ್ನು ತರಲು ಸಾಧ್ಯವಿಲ್ಲ; ಅದು ಹೃದಯದಿಂದ ಬರಬೇಕು…. ಅದನ್ನು ನಾವೀಗ ನಮ್ಮಿಂದಲೇ ಆರಂಭಿಸಬೇಕು. ನಮಗೆ ದಾರಿ ತೋರಲೆಂದು ಈ ಭೂಮಿಗೆ ಮತ್ತೆ ಮತ್ತೆ ಬರುವ ಮಹಾತ್ಮರಂತಿರಲು ನಾವು ಪ್ರಯತ್ನಿಸಬೇಕು. ಅವರು ಹೇಳಿಕೊಟ್ಟಂತೆ ಹಾಗೂ ಅವರ ಉದಾಹರಣೆಯಿಂದ, ನಾವು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ಮತ್ತು ನಮ್ಮ ತಿಳುವಳಿಕೆಯನ್ನು ಸ್ಪಷ್ಟವಾಗಿಟ್ಟುಕೊಳ್ಳುವುದರಿಂದ ಶಾಂತಿಯುಂಟಾಗಲು ಸಾಧ್ಯವಾಗುತ್ತದೆ.

ಜಗತ್ತಿನ ಸಂಕಷ್ಟಗಳನ್ನು ದೂರಮಾಡಬಲ್ಲ ಏಕೈಕ ವಿಷಯವೆಂದರೆ, ಹಣಕ್ಕಿಂತ, ಮನೆಗಿಂತ ಅಥವಾ ಇತರ ಯಾವುದೇ ಲೌಕಿಕ ನೆರವಿಗಿಂತಲೂ ಹೆಚ್ಚಾದುದು — ಧ್ಯಾನ ಮಾಡುವುದು ಹಾಗೂ ನಾವು ಅನುಭವಿಸುವ ಭಗವತ್ಪ್ರಜ್ಞೆಯನ್ನು ಇತರರಿಗೆ ಹರಡುವುದು. ಸಾವಿರ ಸರ್ವಾಧಿಕಾರಿಗಳು ಬಂದರೂ ನನ್ನೊಳಗಿರುವುದನ್ನು ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ. ಪ್ರತಿದಿನವೂ ಅವನ ಪ್ರಜ್ಞೆಯನ್ನು ಇತರರಿಗೆ ಹರಡಿ. ಮಾನವನಿಗಾಗಿ ಭಗವಂತನು ಹಾಕಿಕೊಂಡಿರುವ ಯೋಜನೆಯೇನೆಂದರೆ — ಎಲ್ಲ ಆತ್ಮಗಳನ್ನೂ ಮರಳಿ ತನ್ನೆಡೆಗೆ ಸೆಳೆದುಕೊಳ್ಳುವುದು — ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಹಾಗೂ ಅವನಿಚ್ಛೆಗನುಸಾರವಾಗಿ ಕೆಲಸ ಮಾಡಿ.

ಭಗವಂತ ಪ್ರೇಮಮಯೀ; ಆತನ ಸೃಷ್ಟಿಯ ಯೋಜನೆ ಪ್ರೇಮಮೂಲವಾದುದೇ ಆಗಿರಬೇಕು. ಪಾಂಡಿತ್ಯದ ವಿವೇಚನೆಗಿಂತ, ಈ ಬಗೆಯ ಸರಳ ಭಾವನೆ ಮಾನವ ಹೃದಯಕ್ಕೆ ನೆಮ್ಮದಿಯನ್ನು ತರಲಾರದೇನು? ಸತ್ಯದ ಹೃದಯವನ್ನು ಭೇದಿಸಿದ ಪ್ರತಿಯೊಬ್ಬ ಸಂತನೂ ವಿಶ್ವಾದ್ಯಂತ ದಿವ್ಯಯೋಜನೆ ಕೆಲಸ ಮಾಡುತ್ತಿದೆಯೆಂದೂ ಹಾಗೂ ಅದು ಸುಂದರವೂ, ಆನಂದಮಯವೂ ಆದುದೆಂದೂ ಪ್ರಮಾಣಪೂರ್ವಕವಾಗಿ ಕಂಡಿದ್ದಾನೆ.

ಭಗವಂತನಲ್ಲಿ ವಿಶ್ವಾಸವಿಡುವ ಮೂಲಕ ನಿರ್ಭೀತರಾಗಿರಿ ಮತ್ತು ಸುರಕ್ಷಿತವಾಗಿರಿ

Sun rays piercing in gardenಭಗವಂತನೇ ಈ ಜಗತ್ತಿನ ಪ್ರಕ್ಷುಬ್ಧ ಸ್ಥಿತಿಗಳಿಂದ ಇರುವ ಏಕೈಕ ಸುರಕ್ಷಿತ ಆಶ್ರಯ. “ನಿನ್ನ ಹೃದಯದ ಅತ್ಯುತ್ಸಕತೆಯಿಂದ ಅವನಲ್ಲಿ ಆಶ್ರಯ ಪಡೆ. ಅವನ ಕೃಪೆಯಿಂದ ನಿನಗೆ ಅತ್ಯುನ್ನತ ಶಾಂತಿ ಹಾಗೂ ಶಾಶ್ವತ ಆಶ್ರಯ ದೊರಕುತ್ತದೆ.” ಅವನಲ್ಲಿ ನಾನು ನನ್ನ ಜೀವನದ ಆನಂದವನ್ನು, ನನ್ನ ಅಸ್ತಿತ್ವದ ಅನಿರ್ವಚನೀಯ ಸ್ವರ್ಗಸುಖವನ್ನು, ನನ್ನೊಳಗೇ ಅವನ ಸರ್ವವ್ಯಾಪಿತ್ವದ ಅದ್ಭುತ ಸಾಕ್ಷಾತ್ಕಾರವನ್ನು ಕಂಡುಕೊಂಡಿದ್ದೇನೆ. ನೀವೆಲ್ಲರೂ ಅದನ್ನು ಹೊಂದಬೇಕೆಂದು ನಾನು ಬಯಸುತ್ತೇನೆ.

ಭಗವಂತನಿದ್ದಲ್ಲಿ ಭಯವಿಲ್ಲ, ದುಃಖವಿಲ್ಲ ಎಂದು ಯೋಗ ಬೋಧಿಸುತ್ತದೆ. ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಯಶಸ್ವೀ ಯೋಗಿಯು ಅಚಲನಾಗಿ ನಿಲ್ಲಬಲ್ಲ: “ಪ್ರಭು, ನಾನೆಲ್ಲಿರುವೆನೋ ಅಲ್ಲಿಗೆ ನೀನು ಬರಲೇಬೇಕು,” ಎಂಬ ಮನವರಿಕೆಯಲ್ಲಿ ಅವನು ಸುರಕ್ಷಿತನು.

ನಿರ್ಭೀತಿಯೆಂದರೆ ಭಗವಂತನಲ್ಲಿಟ್ಟಿರುವ ವಿಶ್ವಾಸ: ಅವನ ರಕ್ಷಣೆಯಲ್ಲಿ, ಅವನ ನ್ಯಾಯದಲ್ಲಿ, ಅವನ ವಿವೇಕದಲ್ಲಿ, ಅವನ ಕರುಣೆಯಲ್ಲಿ, ಅವನ ಪ್ರೇಮದಲ್ಲಿ, ಅವನ ಸರ್ವವ್ಯಾಪಿತ್ವದಲ್ಲಿ….

ಭಯವು ಮನುಜನ ಆತ್ಮದ ಅದಮ್ಯತೆಯನ್ನು ಅಪಹರಿಸುತ್ತದೆ. ಒಳಗಿನ ದಿವ್ಯ ಶಕ್ತಿಯ ಮೂಲದಿಂದ ಹೊರಹೊಮ್ಮುವ ಪ್ರಕೃತಿಯ ಸಾಮರಸ್ಯದ ಕಾರ್ಯಗಳಿಗೆ ಅಡ್ಡಿಯುಂಟುಮಾಡುವ ಭಯವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೋಭೆಗಳಿಗೆ ಕಾರಣವಾಗುತ್ತದೆ…. ಆತಂಕಗೊಳ್ಳುವ ಬದಲು ಅವನು, “ನಾನು ನಿನ್ನ ಪ್ರೇಮಪೂರ್ವಕ ರಕ್ಷಣೆಯ ಕೋಟೆಯಲ್ಲಿ ಸದಾ ಸುರಕ್ಷಿತನಾಗಿದ್ದೇನೆ,” ಎಂದು ಹೇಳಿಕೊಳ್ಳಬೇಕು.

ನೀವು ಆಫ್ರಿಕಾದ ಕಾಡಿನಲ್ಲಿರಲಿ ಅಥವಾ ಯುದ್ಧ ಮಾಡುತ್ತಿರಲಿ ಅಥವಾ ರೋಗ ಮತ್ತು ಬಡತನದಿಂದ ನರಳುತ್ತಿರಲಿ, ಭಗವಂತನಿಗೆ ಹೀಗೆ ಹೇಳಿ ಮತ್ತು ವಿಶ್ವಾಸವಿಡಿ: “ನಾನು ನಿನ್ನ ಸಾನ್ನಿಧ್ಯವೆಂಬ ಶಸ್ತ್ರಸಜ್ಜಿತ ಕಾರಿನಲ್ಲಿ ಕುಳಿತು ಜೀವನದ ರಣರಂಗವನ್ನು ದಾಟಿಹೋಗುತ್ತಿದ್ದೇನೆ. ನಾನು ಸುರಕ್ಷಿತ.” ಸುರಕ್ಷಿತವಾಗಿರಲು ಬೇರಾವುದೇ ಮಾರ್ಗವಿಲ್ಲ. ವ್ಯವಹಾರ ಜ್ಞಾನವನ್ನು ಉಪಯೋಗಿಸಿ ಹಾಗೂ ಭಗವಂತನಲ್ಲಿ ಸಂಪೂರ್ಣ ವಿಶ್ವಾಸವಿಡಿ. ನಾನು ವಿಲಕ್ಷಣವಾದುದೇನನ್ನೂ ಸೂಚಿಸುತ್ತಿಲ್ಲ; ಏನೇ ಆದರೂ, “ಪ್ರಭೂ, ನೀನೊಬ್ಬನೇ ನನಗೆ ಸಹಾಯ ಮಾಡಲು ಸಾಧ್ಯ,” ಎಂಬ ಈ ಸತ್ಯದಲ್ಲಿ ದೃಢೀಕರಿಸಲು ಮತ್ತು ಶ್ರದ್ಧೆಯನ್ನಿಡಲು ನಾನು ನಿಮಗೆ ಒತ್ತಾಯಿಸುತ್ತಿದ್ದೇನೆ.

ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಭಗವಂತನನ್ನು ಅವಲಂಬಿಸಿ. ಸಹಿಸಲಾಗದ ಕಷ್ಟಗಳು ಹಠಾತ್ತಾಗಿ ಹಿಮಪಾತದಂತೆ ಬಂದಾಗ ನಿಮ್ಮ ಧೈರ್ಯ ಮತ್ತು ಚುರುಕು ಬುದ್ಧಿಗಳು ನಿಷ್ಕ್ರಿಯಗೊಳ್ಳಲು ಅವಕಾಶ ಕೊಡಬೇಡಿ. ನಿಮ್ಮ ಅಂತರ್ಬೋಧಿತ ಸಾಮಾನ್ಯ ಜ್ಞಾನವನ್ನು ಮತ್ತು ಭಗವಂತನಲ್ಲಿ ನಿಮ್ಮ ವಿಶ್ವಾಸವನ್ನು ಜಾಗೃತವಾಗಿರಿಸಿಕೊಂಡು, ತಪ್ಪಿಸಿಕೊಳ್ಳುವ ಅತ್ಯಂತ ಕಿರಿದಾದ ಮಾರ್ಗವನ್ನಾದರೂ ಹುಡುಕಲು ಪ್ರಯತ್ನಿಸಿ, ಆಗ ನಿಮಗೆ ಆ ಮಾರ್ಗ ಸಿಗುವುದು ಖಂಡಿತ. ಕೊನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ, ಏಕೆಂದರೆ ಭಗವಂತ ತನ್ನ ಸದ್ಗುಣವನ್ನು ಮರ್ತ್ಯ ಅನುಭವಗಳ ವಿರೋಧಾಭಾಸಗಳ ತೋರ್ಕೆಗಳ ಹಿಂದೆ ಮರೆಮಾಡಿದ್ದಾನೆ.

ಕಷ್ಟಗಳು ಬಂದಾಗ, ಭಗವಂತನ ಪ್ರೀತಿಯ ಮಾರ್ಗದರ್ಶನಕ್ಕೆ ಶರಣಾಗಿರಿ

ಭಗವಂತನನ್ನು ನಿಮ್ಮ ಆತ್ಮದ ಮಾರ್ಗದರ್ಶಕನನ್ನಾಗಿ ಮಾಡಿಕೊಳ್ಳಿ. ನೀವು ಜೀವನದ ಅಸ್ಪಷ್ಟ ಹಾದಿಯಲ್ಲಿ ನಡೆಯುವಾಗ ಅವನನ್ನು ನಿಮ್ಮ ಶೋಧಕದೀಪವನ್ನಾಗಿಸಿಕೊಳ್ಳಿ. ಅಜ್ಞಾನದ ರಾತ್ರಿಯಲ್ಲಿ ಅವನು ನಿಮ್ಮ ಚಂದ್ರ. ಜಾಗ್ರತ ಸಮಯದಲ್ಲಿ ಅವನು ನಿಮ್ಮ ಸೂರ್ಯ, ಹಾಗೂ ಮರ್ತ್ಯ ಅಸ್ತಿತ್ವದ ಕರಾಳ ಸಮುದ್ರದ ಮೇಲೆ ಅವನು ನಿಮ್ಮ ಧ್ರುವತಾರೆ. ಅವನ ಮಾರ್ಗದರ್ಶನವನ್ನು ಅರಸಿ. ಜಗತ್ತು ತನ್ನ ಏರಿಳಿತಗಳಲ್ಲಿ ಹೀಗೆಯೇ ಮುಂದುವರಿಯುತ್ತಿರುತ್ತದೆ. ಮಾರ್ಗದರ್ಶನಕ್ಕಾಗಿ ನಾವು ಎತ್ತ ನೋಡಬೇಕು? ನಮ್ಮ ಅಭ್ಯಾಸಗಳು ಮತ್ತು ನಮ್ಮ ಕುಟುಂಬಗಳು, ನಮ್ಮ ದೇಶ ಅಥವಾ ಪ್ರಪಂಚದ ಪರಿಸರದ ಪ್ರಭಾವಗಳಿಂದ ನಮ್ಮೊಳಗೆ ಹುಟ್ಟಿಕೊಂಡಿರುವ ಪೂರ್ವಗ್ರಹಗಳತ್ತ ಅಲ್ಲ; ಆದರೆ ಆಂತರ್ಯದಲ್ಲಿರುವ ಸತ್ಯದ ಮಾರ್ಗದರ್ಶಕ ವಾಣಿಯತ್ತ.

ಪ್ರತಿ ಕ್ಷಣವೂ ನಾನು ಭಗವಂತನ ಬಗ್ಗೆ ಮಾತ್ರ ಯೋಚಿಸುತ್ತಿರುತ್ತೇನೆ. ನಾನು ನನ್ನ ಹೃದಯವನ್ನು ಭಗವಂತನ ಆಶ್ರಯದಲ್ಲಿರಿಸಿದ್ದೇನೆ. ನಾನು ನನ್ನ ಆತ್ಮವನ್ನು ಅವನ ಉಸ್ತುವಾರಿಗೆ ಕೊಟ್ಟಿದ್ದೇನೆ. ನನ್ನ ಪ್ರೀತಿ ಮತ್ತು ನನ್ನ ಭಕ್ತಿಗಳನ್ನು ನಾನು ಅವನ ಚಿರಂತನತೆಯ ಪಾದಗಳಲ್ಲಿ ಇರಿಸಿದ್ದೇನೆ. ಭಗವಂತನ ಸಮಕ್ಷಮದಲ್ಲಿ ಬೇರಾವುದನ್ನೂ ನಂಬಬೇಡಿ. ನಂತರ, ಭಗವಂತನ ಆಂತರಿಕ ನಿರ್ದೇಶನದ ಮೂಲಕ, ಅವನ ಬೆಳಕನ್ನು ವ್ಯಕ್ತಪಡಿಸುವವರನ್ನು ನಂಬಿರಿ. ಆ ಬೆಳಕೇ ನನ್ನ ಮಾರ್ಗದರ್ಶಿ. ಆ ಬೆಳಕು ನನ್ನ ಪ್ರೀತಿ. ಆ ಬೆಳಕು ನನ್ನ ಜ್ಞಾನ. ಮತ್ತು ಅವನ ಸದ್ಗುಣವು ಹೇಗೆ ಗೆಲ್ಲುತ್ತಿದೆ ಮತ್ತು ಎಂದಿಗೂ ಗೆಲ್ಲುತ್ತದೆ ಎಂದು ಅವನು ನನಗೆ ಹೇಳುತ್ತಾನೆ.

ನಾನು ಈ ಯುದ್ಧದ ಬಗ್ಗೆ ಚಿಂತಿಸುತ್ತಿದ್ದೆ. ಆದರೆ, “ನಾನು ತೀರ್ಪ ಕೊಡುವವನಲ್ಲ. ನೀನು ಮನುಕುಲ ಮತ್ತು ದೇಶಗಳ ನ್ಯಾಯಾಧೀಶ. ನೀನು ಎಲ್ಲರ ಕರ್ಮವನ್ನು ಬಲ್ಲೆ. ಮತ್ತು ಯಾವುದು ನಿನ್ನ ತೀರ್ಪೋ, ಅದೇ ನನ್ನ ಅಪೇಕ್ಷೆ,” ಎಂದು ನಾನು ಪ್ರಾರ್ಥಿಸಿದಾಗ ನನಗೆ ಮಹತ್ತರ ಸಾಂತ್ವನ ದೊರಕಿತು. ಈ ಆಲೋಚನೆಯು ಭಾರತದ ಬಗ್ಗೆಯೂ ನನ್ನ ಕಾಳಜಿಯನ್ನು ದೂರ ಮಾಡಿತು, ಏಕೆಂದರೆ ಭಗವಂತ ಅವಳನ್ನು ರಕ್ಷಿಸುತ್ತಾನೆ ಎಂದು ನನಗೆ ತಿಳಿದಿದೆ. ನಾವು ಪ್ರಭುವಿನ ತೀರ್ಪಿನ ಮೇಲೆ ಹೆಚ್ಚು ಅವಲಂಬಿತರಾಗಲು ಕಲಿಯಬೇಕು. ಮತ್ತು ಅದು ಪ್ರಪಂಚದ ನಾಟಕದ ಪ್ರತಿಯೊಂದು ಅಂಕ ಮುಗಿದ ನಂತರವೇ ತಿಳಿಯುತ್ತದೆ. ಯುದ್ಧದ ಸಮಯದಲ್ಲಿ ಅವನ ತೀರ್ಪು ಅರ್ಥವಾಗದಿರಬಹುದು; ಆದರೆ ಕಾಲಾನಂತರದಲ್ಲಿ ಈ ಸಂಘರ್ಷದಲ್ಲಿ ಅವನ ಕೈ ಇತ್ತು ಎಂದು ನಮಗೆ ಅರ್ಥವಾಗುತ್ತದೆ. ತಕ್ಷಣದ ಫಲಿತಾಂಶ ಮತ್ತು ಅದರ ನಂತರ ಏನಾಗುತ್ತದೆ ಎಂಬುದು ಅವನ ತೀರ್ಪಿನ ಪ್ರಕಾರ ಹಾಗೂ ಪ್ರತಿ ರಾಷ್ಟ್ರ ಮತ್ತು ಆ ರಾಷ್ಟ್ರದೊಳಗಿನ ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಪ್ರಕಾರ ಇರುತ್ತದೆ. ಈ ಯುದ್ಧದ ದಳ್ಳುರಿಯಿಂದ ಇನ್ನೂ ದೊಡ್ಡದಾದ ಪ್ರಪಂಚವು ಬರುತ್ತದೆ. ಇದನ್ನು ನೆನಪಿಡಿ: ಪಾಶವೀ ಶಕ್ತಿಯು ಎಂದಿಗೂ ಅಂತಿಮ ವಿಜಯಿಯಲ್ಲ. ಈ ಯುದ್ಧದಲ್ಲಿ ನೀವು ಅದನ್ನು ನೋಡುವಿರಿ. ಭಗವಂತನ ಸದ್ಗುಣವು ಜಯಶಾಲಿಯಾಗಿ ಹೊರಹೊಮ್ಮುತ್ತದೆ.

ಪ್ರಸ್ತುತ ಪ್ರಪಂಚದ ಪರಿಸ್ಥಿತಿಗೆ ಆಧ್ಯಾತ್ಮಿಕ ಪರಿಹಾರವೇನು?

ಪ್ರಪಂಚದ ಪ್ರಸ್ತುತ ಬಿಕ್ಕಟ್ಟಿಗೆ ಕಾರಣ ದ್ವಾಪರ ಯುಗವು ಮೇಲ್ಮುಖವಾಗಿ ಚಲಿಸುತ್ತಿರುವುದು; ಜಗತ್ತು ಉತ್ತಮವಾಗಬೇಕಾದರೆ, ಕೆಟ್ಟದ್ದನ್ನು ಹೊರಹಾಕಬೇಕು. ದುಷ್ಟ ಶಕ್ತಿಗಳು ತಮ್ಮ ವಿನಾಶಕ್ಕೆ ತಾವೇ ಕಾರಣವಾಗುತ್ತವೆ, ಹೀಗೆ ನೀತಿವಂತ ರಾಷ್ಟ್ರಗಳ ಉಳಿವಿಗೆ ಭರವಸೆ ಮೂಡುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷವು ಇತಿಹಾಸದ ಉದಯದಿಂದಲೂ ನಡೆದುಕೊಂಡೇ ಬಂದಿದೆ. ಆದರೆ ವಿದ್ಯುತ್ ಅಥವಾ ಪರಮಾಣು ಯುಗದ, ಅಂದರೆ ದ್ವಾಪರ ಯುಗದ ಮೂಲಕ ಜಗತ್ತು ಮೇಲ್ಮುಖವಾಗಿ ಚಲಿಸುತ್ತಿರುವಾಗ, ಒಳ್ಳೆಯದಕ್ಕೆ ಮಾತ್ರವಲ್ಲದೆ, ದುರಾಸೆ ಮತ್ತು ಅಧಿಕಾರದ ಆಸೆಯುಳ್ಳವರು ಮಾಡುವ ತಂತ್ರಜ್ಞಾನದ ದುರುಪಯೋಗದಿಂದಾಗಿ ವಿನಾಶದ ಸಂಭಾವ್ಯವೂ ಹೆಚ್ಚಿದೆ. ದ್ವಾಪರ ಯುಗದ ಪ್ರಭಾವದಿಂದಾಗಿ, ತಂತ್ರಜ್ಞಾನವು ಸಾಮಾನ್ಯ ಜನತೆಯನ್ನು ಉನ್ನತ ಮಟ್ಟದ ಸಾಧನೆಯತ್ತ ವೇಗವಾಗಿ ಕರೆದೊಯ್ಯುತ್ತಿದೆ. ಆದರೆ ಈ ಪ್ರಗತಿಯು ಸಾಧಕರು ಮತ್ತು ಸಾಧಿಸದವರ ನಡುವೆ ಹೆಚ್ಚಿನ ಅಂತರವನ್ನು ಸೃಷ್ಟಿಸುತ್ತದೆ. ಇದು ಅಸೂಯೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ತೊಂದರೆಗಳನ್ನು ಕೆರಳಿಸುತ್ತದೆ.

ಪರಸ್ಪರ ಪ್ರೀತಿ, ತಿಳುವಳಿಕೆ ಮತ್ತು ಸಹಕಾರದಿಂದ ಸೃಷ್ಟಿಯಾದ ಮಾನವನ ಭ್ರಾತೃತ್ವದಲ್ಲಿ ನನಗೆ ನಂಬಿಕೆಯಿದೆ. ಎಲ್ಲ ಯೋಗ್ಯ ಗುರಿಗಳು ಮತ್ತು ಉದಾತ್ತ ಆದರ್ಶಗಳನ್ನು ಆಧ್ಯಾತ್ಮಿಕ ಉದಾಹರಣೆ ಮತ್ತು ಉತ್ತಮ ವಿಧಾನಗಳಿಂದ ಜಗತ್ತಿಗೆ ಪರಿಚಯಿಸಬೇಕು, ಪಾಶವೀ ಶಕ್ತಿ ಮತ್ತು ಯುದ್ಧದಿಂದ ಅಲ್ಲ. ಆಧ್ಯಾತ್ಮಿಕ ತತ್ವಗಳಿಲ್ಲದ ರಾಜಕೀಯ ಶಕ್ತಿ ಅಪಾಯಕಾರಿ. ಆಧ್ಯಾತ್ಮಿಕ ತತ್ತ್ವಗಳೆಂದರೆ, ನಾನು ನಿರ್ದಿಷ್ಟ ಧರ್ಮಗಳ ಸಿದ್ಧಾಂತಗಳ ಬಗ್ಗೆ ಹೇಳುತ್ತಿಲ್ಲ — ಅವು ಕೂಡ ಒಡಕುಂಟು ಮಾಡಬಹುದು — ಬದಲಿಗೆ ಇಡೀ ಮನುಕುಲದ ಯೋಗಕ್ಷೇಮಕ್ಕೆ ಅನ್ವಯವಾಗುವ ಧರ್ಮ ಅಥವಾ ಸದಾಚಾರದ ಸಾರ್ವತ್ರಿಕ ತತ್ವಗಳ ಬಗ್ಗೆ ಹೇಳುತ್ತಿದ್ದೇನೆ. ದುಷ್ಟತೆಯು ಹರಡುವುದನ್ನು ತಪ್ಪಿಸಲು, ಕೆಲವೊಮ್ಮೆ ನ್ಯಾಯಯುತ ಯುದ್ಧವೂ ಬೇಕಾಗುತ್ತದೆ. ನೀವು ಕಾಡಿನ ಹುಲಿಗೆ ಅಹಿಂಸೆ ಮತ್ತು ಸಹಕಾರವನ್ನು ಬೋಧಿಸಲು ಸಾಧ್ಯವಿಲ್ಲ, ಏಕೆಂದರೆ ನೀವು ನಿಮ್ಮ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುವ ಮೊದಲೇ ಅದು ನಿಮ್ಮನ್ನು ತಿಂದುಬಿಡುತ್ತದೆ. ಅಂತೆಯೇ ಕೆಲವು ದುಷ್ಕರ್ಮಿಗಳು ತರ್ಕಕ್ಕೆ ಬಗ್ಗುವುದಿಲ್ಲ. ಹಿಟ್ಲರ್‌ನಂತೆ ಆಕ್ರಮಣಕಾರಿ ಯುದ್ಧ ಮಾಡುವವರು ಸೋಲುತ್ತಾರೆ. ಯಾರಿಗೆ ದುಷ್ಟರ ವಿರುದ್ಧ ನೀತಿಯುತ ಯುದ್ಧವನ್ನು ಮಾಡಲೇಬೇಕಾಗಿ ಬರುವುದೋ ಅವರು ಗೆಲ್ಲುತ್ತಾರೆ. ಯುದ್ಧವು ನ್ಯಾಯಯುತವೋ ಅಲ್ಲವೋ ಎಂಬುದನ್ನು ದೇವರು ನಿರ್ಣಯಿಸುತ್ತಾನೆ.

ನಾನು ಈಗ ಒಂದು ಭವಿಷ್ಯವಾಣಿಯನ್ನು ನುಡಿಯುತ್ತೇನೆ: ಪ್ರಪಂಚವು ವಿನಾಶದತ್ತ ಹೋಗುತ್ತಿಲ್ಲ. ಆದ್ದರಿಂದ ಭಯಪಡಬೇಡಿ. ಭಗವಂತನನ್ನು ನಂಬಿರಿ. ಅವನ ಆದರ್ಶಗಳನ್ನು ಸ್ಮರಿಸಿದರೆ, ಅವನಲ್ಲಿ ನಂಬಿಕೆ ಇಟ್ಟರೆ, ಅವನು ನಿಮ್ಮನ್ನು ರಕ್ಷಿಸುತ್ತಾನೆ. ನಾವು ಮೇಲ್ಮುಖವಾಗಿ ಚಲಿಸುತ್ತಿದ್ದೇವೆ. ಲೌಕಿಕ ಚಕ್ರದ ಸಾವಿರದ ಇನ್ನೂರು ವರ್ಷಗಳು ಕಳೆದಿವೆ ಮತ್ತು ಪರಮಾಣು ಯುಗದ ಎರಡು ಸಾವಿರದ ನಾನ್ನೂರು ವರ್ಷಗಳಲ್ಲಿ ಮುನ್ನೂರು ವರ್ಷಗಳು ಕಳೆದಿವೆ. ನಂತರ ಮಾನಸಿಕ ಮತ್ತು ಆಧ್ಯಾತ್ಮಿಕ ಯುಗಗಳು ಬರುತ್ತವೆ. ನಾವು ಕೆಳಮುಖವಾಗಿ ಹೋಗುತ್ತಿಲ್ಲ. ಏನೇ ಆದರೂ, ಅಮೂರ್ತ ಚೇತನವೇ ಗೆಲ್ಲುತ್ತದೆ. ನಾನು ಈ ಭವಿಷ್ಯವನ್ನು ನುಡಿಯುತ್ತಿದ್ದೇನೆ….ಅಪ್ರಚೋದಿತ ಆಕ್ರಮಣದಲ್ಲಿ ಆಸಕ್ತಿ ಇರುವ ಯಾರೇ ಆದರೂ ಬಾಂಬ್ ಅನ್ನು ಬಳಸಿದರೆ ಬಾಂಬ್‌ನಿಂದಲೇ ಪತನ ಹೊಂದುತ್ತಾರೆ; ಆದರೆ ಅಮೇರಿಕಾ ಮತ್ತು ಭಾರತದ ಹೃದಯಗಳಲ್ಲಿ ಹಿಂಸಾಚಾರದೆಡೆಗೆ ಒಲವಿಲ್ಲ ಎಂದು ನನಗೆ ತಿಳಿದಿದೆ. ಹಿಟ್ಲರ್ ಅಷ್ಟೆಲ್ಲಾ ಸಾಮರ್ಥ್ಯವಿದ್ದರೂ ಪತನಗೊಂಡಂತೆ, ಯಾವುದೇ ಸರ್ವಾಧಿಕಾರಿ, ಅವನು ಎಲ್ಲೇ ಇದ್ದರೂ, ಅವನತಿ ಹೊಂದುತ್ತಾನೆ. ಇದು ನನ್ನ ಭವಿಷ್ಯವಾಣಿ.

ಜಗತ್ತಿನೆಲ್ಲೆಡೆಯ ನನ್ನ ಸೋದರ ಮತ್ತು ಸೋದರಿಯರೇ: ಭಗವಂತ ನಮ್ಮ ತಂದೆ ಮತ್ತು ಅವನು ಒಬ್ಬನೇ ಇರುವುದು ಎಂಬುದನ್ನು ದಯವಿಟ್ಟು ನೆನಪಿಡಿ. ನಾವೆಲ್ಲರೂ ಅವನ ಮಕ್ಕಳು ಮತ್ತು ನಾವು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜಾಗತಿಕ ಸಂಯುಕ್ತ ಸಂಸ್ಥಾನದ ಆದರ್ಶ ನಾಗರಿಕರಾಗಲು ಪರಸ್ಪರ ಸಹಾಯ ಮಾಡುವಂತಹ ರಚನಾತ್ಮಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು….

ಪ್ರತಿಯೊಂದು ಜೀವಿಯೂ ನೈಜ ಆಧ್ಯಾತ್ಮಿಕ ತಿಳುವಳಿಕೆಯಲ್ಲಿ, ಕ್ಷುಲ್ಲಕ ಮತಭೇದಗಳನ್ನು ಮೀರಿದಾಗ, ಪ್ರಪಂಚದ ಕ್ಲೇಶವು, ಭಗವಂತನ ಸರ್ವವ್ಯಾಪಕತೆ ಮತ್ತು ಮಾನವನ ಭ್ರಾತೃತ್ವದ ಅರಿವಿನ ಅಗ್ನಿಯಲ್ಲಿ ದಹಿಸಿಹೋಗುತ್ತದೆ.

ರೇಡಿಯೋ ಮತ್ತು ದೂರದರ್ಶನದಂತಹ ಮಾಧ್ಯಮಗಳು ಮತ್ತು ವಿಮಾನಯಾನಗಳು ನಮ್ಮೆಲ್ಲರನ್ನೂ ಹಿಂದೆಂದಿಗಿಂತಲೂ ಹತ್ತಿರ ತಂದಿವೆ. ಇನ್ನು ಮುಂದೆ ಏಷಿಯನ್ನರಿಗೆ ಏಷ್ಯಾ, ಯುರೋಪಿಯನ್ನರಿಗೆ ಯುರೋಪ್, ಅಮೆರಿಕನ್ನರಿಗೆ ಅಮೇರಿಕಾ ಇತ್ಯಾದಿಯಾಗಿ ಇರಲು ಸಾಧ್ಯವಿಲ್ಲ, ಬದಲಿಗೆ, ಭಗವಂತನ ಅಧೀನದಲ್ಲಿ ಜಾಗತಿಕ ಸಂಯುಕ್ತ ಸಂಸ್ಥಾನವಿರುತ್ತದೆ, ಅದರಲ್ಲಿ ಪ್ರತಿಯೊಬ್ಬ ಮಾನವನು ಜಗತ್ತಿನ ಆದರ್ಶ ನಾಗರಿಕನಾಗಿರುತ್ತಾನೆ ಮತ್ತು ಅವನಿಗೆ ದೇಹ, ಮನಸ್ಸು ಮತ್ತು ಆತ್ಮದ ಪೂರ್ಣವಿಕಾಸದ ಪ್ರತಿಯೊಂದು ಅವಕಾಶವೂ ಇರುತ್ತದೆ ಎಂಬುದನ್ನು ನಾವು ಕಲಿಯಬೇಕು.

ಭೂಮಿಯ ಅಸ್ಥಿರ ಛಾಯೆಗಳ ಹಿಂದೆ ಭಗವಂತನ ಶಾಶ್ವತ ಪ್ರೀತಿಯನ್ನು ಅರಸಿ

ಈ ಭೂಮಿಯ ಮೇಲಿನ ಎಲ್ಲಾ ಅಸಮಾನತೆಗಳನ್ನು ಮತ್ತು ವಿಭಜನೆಗಳನ್ನು ತೊಡೆದುಹಾಕಲು ಯಾವುದೇ ವ್ಯಕ್ತಿಗೆ, ಯಾವುದೇ ಪ್ರವಾದಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಆದರೆ ನೀವು ನಿಮ್ಮನ್ನು ಭಗವತ್ಪ್ರಜ್ಞೆಯಲ್ಲಿ ಕಂಡುಕೊಂಡಾಗ, ಈ ಅಸಮಾನತೆಗಳು ಮಾಯವಾಗುತ್ತವೆ ಮತ್ತು ನೀವು ಹೇಳುವಿರಿ:

ಓ ಜೀವನ ಎಷ್ಟು ಸೊಗಸು, ಸಾವು ಕೇವಲ ಕನಸು, ನಿನ್ನ ಗಾನವು ಹರಿಯಲು ಎನ್ನಲ್ಲಿ. ಆಗ ಸುಖ ಸೊಗಸು, ದುಃಖ ಕನಸು, ನಿನ್ನ ಗಾನವು ಹರಿಯಲು ಎನ್ನಲ್ಲಿ. ಆಗ ಸ್ವಾಸ್ಥ್ಯ ಸೊಗಸು, ರೋಗ ಕನಸು, ನಿನ್ನ ಗಾನವು ಹರಿಯಲು ಎನ್ನಲ್ಲಿ. ಆಗ ಸ್ತುತಿ ಸೊಗಸು, ನಿಂದೆ ಕನಸು, ನಿನ್ನ ಗಾನವು ಹರಿಯಲು ಎನ್ನಲ್ಲಿ.

ಇದೇ ಅತ್ಯುನ್ನತ ತತ್ವ. ಯಾವುದಕ್ಕೂ ಹೆದರದಿರಿ. ಚಂಡಮಾರುತದಲ್ಲಿ ಅಲೆಯ ಮೇಲೆ ಅತ್ತಿತ್ತ ಹೊಯ್ದಾಡುತ್ತಿರುವಾಗಲೂ, ನೀವು ಸಾಗರದ ವಕ್ಷಸ್ಥಳದ ಮೇಲೇ ಇರುತ್ತೀರಿ. ದೇವರ ಅಂತರ್ನಿಹಿತ ಸಾನ್ನಿಧ್ಯದ ಪ್ರಜ್ಞೆಯನ್ನು ಯಾವಾಗಲೂ ಹಿಡಿದುಕೊಂಡಿರಿ. ಸಮಚಿತ್ತದಿಂದಿರಿ ಹಾಗೂ ಹೀಗೆ ಹೇಳಿಕೊಳ್ಳಿ: “ನಾನು ನಿರ್ಭೀತ; ನಾನು ದೇವರ ಅಂಶದಿಂದ ಸೃಷ್ಟಿಸಲ್ಪಟ್ಟಿದ್ದೇನೆ. ನಾನು ಚೇತನದ ಅಗ್ನಿಯ ಒಂದು ಕಿಡಿ. ನಾನು ಬ್ರಹ್ಮಾಂಡ ಜ್ವಾಲೆಯ ಒಂದು ಅಣು. ನಾನು ದೇವರ ಅಗಾಧ ವಿಶ್ವವ್ಯಾಪಿ ಶರೀರದ ಒಂದು ಜೀವಕೋಶ. ‘ನಾನು ಮತ್ತು ನನ್ನ ತಂದೆ ಒಂದೇ.ʼ”

ನಿಮ್ಮನ್ನು ನೀವು ಭಗವಂತನ ಅಡಿಗಳಲ್ಲಿರಿಸಿ. ಅವನಿಗೆ ಶರಣಾಗಲು ವರ್ತಮಾನದಷ್ಟು ಒಳ್ಳೆಯ ಸಮಯ ಬೇರಾವುದೂ ಇಲ್ಲ…. ದೇವರನ್ನು ಕಂಡುಕೊಳ್ಳಲು ನಿಮ್ಮ ಆತ್ಮದ ಸರ್ವ ಶಕ್ತಿಯನ್ನು ಬಳಸಿ….ನಮ್ಮ ಹಾಗೂ ದೇವರ ನಡುವೆ ಮಾಯೆಯೆಂಬ ಹೊಗೆ-ತೆರೆಯು ಅಡ್ಡ ಬಂದಿದೆ, ನಾವು ಅವನ ದರ್ಶನವನ್ನು ಕಳೆದುಕೊಂಡಿರುವುದು ಅವನಿಗೆ ದುಃಖವನ್ನುಂಟುಮಾಡಿದೆ. ಬೀಳುವ ಬಾಂಬ್‌ಗಳಿಂದ, ಭೀಕರ ರೋಗಗಳಿಂದ ಹಾಗೂ ದುರ್ವ್ಯಸನಗಳಿಂದ ತನ್ನ ಮಕ್ಕಳು ಸಾಯುವುದನ್ನು ನೋಡುವುದು ಅವನಿಗೆ ಇಷ್ಟವಿಲ್ಲ. ಅದರ ಬಗ್ಗೆ ಅವನಿಗೆ ವಿಷಾದವಿದೆ, ಏಕೆಂದರೆ ಅವನು ನಮ್ಮನ್ನು ಪ್ರೀತಿಸುತ್ತಾನೆ ಹಾಗೂ ನಾವು ಅವನಲ್ಲಿಗೆ ಹಿಂತಿರುಗಬೇಕೆಂದು ಅವನು ಬಯಸುತ್ತಾನೆ. ಆ ಕಾರಣಕ್ಕಾಗಿಯಾದರೂ ರಾತ್ರಿಯ ಹೊತ್ತಿನಲ್ಲಿ ನೀವು ಧ್ಯಾನ ಮಾಡಿ ಅವನೊಂದಿಗಿರುವ ಪ್ರಯತ್ನ ಮಾಡಬಾರದೆ! ನಿಮ್ಮ ಬಗ್ಗೆ ಅವನು ಎಷ್ಟೊಂದು ಯೋಚಿಸುತ್ತಾನೆ. ನೀವು ತ್ಯಜಿಸಲ್ಪಟ್ಟಿಲ್ಲ, ನಿಮ್ಮ ಆತ್ಮವನ್ನು ಪರಿತ್ಯಾಗ ಮಾಡಿದವರು ನೀವೇ…. ದೇವರು ನಿಮ್ಮ ಬಗ್ಗೆ ಎಂದೂ ಉದಾಸೀನ ತಾಳಿಲ್ಲ….

Beautiful scenic landscape with mountains

ಸೃಷ್ಟಿಯ ಏಕೈಕ ಉದ್ದೇಶವೆಂದರೆ ಅದರ ರಹಸ್ಯವನ್ನು ಭೇದಿಸುವಂತೆ ಮತ್ತು ಎಲ್ಲದರ ಹಿಂದೆ ದೇವರನ್ನು ಗ್ರಹಿಸುವಂತೆ ನಿಮ್ಮನ್ನು ಒತ್ತಾಯಿಸುವುದು. ನೀವು ಎಲ್ಲವನ್ನು ಮರೆತು ಅವನನ್ನು ಮಾತ್ರ ಅರಸಬೇಕೆಂದು ಅವನು ಬಯಸುತ್ತಾನೆ. ಒಮ್ಮೆ ನೀವು ಪ್ರಭುವಿನಲ್ಲಿ ಆಶ್ರಯವನ್ನು ಕಂಡುಕೊಂಡರೆ, ಜೀವನ್ಮರಣಗಳು ವಾಸ್ತವಗಳೆಂಬ ಅರಿವೇ ಇರುವುದಿಲ್ಲ. ಆಗ ದೇವರ ಚಿರಂತನ ಅಸ್ತಿತ್ವದಲ್ಲಿ ಬಂದು ಹೋಗುವ ಎಲ್ಲ ದ್ವಂದ್ವಗಳನ್ನೂ ನೀವು ನಿದ್ರೆಯಲ್ಲಿನ ಕನಸುಗಳಂತೆ ಕಾಣುವಿರಿ. ಈ ಉಪದೇಶವನ್ನು ಮರೆಯಬೇಡಿ, ನನ್ನ ಧ್ವನಿಯ ಮೂಲಕ ಅವನು ನಿಮಗೆ ವ್ಯಕ್ತಪಡಿಸುತ್ತಿರುವ ಉಪದೇಶ. ಮರೆಯಬೇಡಿ! ಅವನು ಹೇಳುತ್ತಿದ್ದಾನೆ:

“ನಾನು ನಿಮ್ಮಂತೆಯೇ ಅಸಹಾಯಕ, ಏಕೆಂದರೆ ನಾನು, ನಿಮ್ಮ ಆತ್ಮದಂತೆಯೇ ನಿಮ್ಮೊಂದಿಗೆ ದೇಹದಲ್ಲಿ ಬಂಧಿಸಲ್ಪಟ್ಟಿದ್ದೇನೆ. ನಿಮ್ಮ ಆತ್ಮವನ್ನು ನೀವು ಉದ್ಧರಿಸದ ಹೊರತು, ನಾನು ನಿಮ್ಮೊಂದಿಗೆ ಪಂಜರದಲ್ಲಿರುತ್ತೇನೆ. ಸಂಕಷ್ಟ ಮತ್ತು ಅಜ್ಞಾನದ ಕೆಸರಿನಲ್ಲಿ ತೊಳಲಾಡುತ್ತ ಕಾಲಹರಣ ಮಾಡಬೇಡಿ. ಬನ್ನಿ! ನನ್ನ ಬೆಳಕಿನಲ್ಲಿ ಸ್ನಾನ ಮಾಡಿ.”

ನಾವು ಈ ಭ್ರಮಾಲೋಕದಿಂದ ಪಾರಾಗಬೇಕೆಂದು ಭಗವಂತ ಬಯಸುತ್ತಾನೆ. ಅವನು ನಮಗಾಗಿ ಕಣ್ಣೀರಿಡುತ್ತಾನೆ, ಏಕೆಂದರೆ ಅವನಲ್ಲಿ ವಿಮೋಚನೆಯನ್ನು ಪಡೆಯುವುದು ನಮಗೆ ಎಷ್ಟು ಕಷ್ಟ ಎಂದು ಅವನಿಗೆ ತಿಳಿದಿದೆ. ಆದರೆ ನೀವು ಅವನ ಮಗು ಎಂದಷ್ಟೇ ನೀವು ನೆನಪಿಟ್ಟುಕೊಳ್ಳಬೇಕಾದುದು. ನಿಮ್ಮ ಬಗ್ಗೆ ಕನಿಕರಿಸದಿರಿ. ನೀವು ಕೃಷ್ಣ ಮತ್ತು ಯೇಸುವಿನಷ್ಟೇ ದೇವರಿಂದ ಪ್ರೀತಿಸಲ್ಪಟ್ಟಿದ್ದೀರಿ. ನೀವು ಅವನ ಪ್ರೀತಿಯನ್ನು ಅರಸಬೇಕು, ಏಕೆಂದರೆ ಅದು ಶಾಶ್ವತ ಸ್ವಾತಂತ್ರ್ಯ, ಅನಂತ ಆನಂದ ಮತ್ತು ಅಮರತ್ವವನ್ನು ಒಳಗೊಂಡಿರುತ್ತದೆ.

ಈ ಪ್ರಪಂಚದ ಭಯ ಹುಟ್ಟಿಸುವ ಕನಸುಗಳಿಗೆ ಹೆದರಿಕೊಳ್ಳಬೇಡಿ. ಭಗವಂತನ ಅಮರ ಜ್ಯೋತಿಯಲ್ಲಿ ಎಚ್ಚರಗೊಳ್ಳಿ! ಒಂದು ಕಾಲವಿತ್ತು, ನನಗೆ ಆಗ ಜೀವನವೆಂದರೆ ನಿಸ್ಸಹಾಯಕತೆಯಿಂದ ನೋಡುವ ಒಂದು ಭಯಾನಕ ಚಲನಚಿತ್ರವಾಗಿತ್ತು. ಅಲ್ಲಿ ನಡೆಯುತ್ತಿರುವ ದುರಂತಗಳಿಗೆ ನಾನು ಅತಿಯಾದ ಪ್ರಾಮುಖ್ಯತೆ ಕೊಡುತ್ತಿದ್ದೆ. ಆಗ ಒಂದು ದಿನ ನಾನು ಧ್ಯಾನ ಮಾಡುತ್ತಿದ್ದಾಗ, ನನ್ನ ಕೋಣೆಯಲ್ಲಿ ದೊಡ್ಡ ಬೆಳಕೊಂದು ಕಾಣಿಸಿಕೊಂಡು, ಭಗವಂತನ ಧ್ವನಿ ನನಗೆ ಹೇಳಿತು: “ನೀನಾವ ಕನಸು ಕಾಣುತ್ತಿರುವೆ? ನನ್ನ ಚಿರಂತನ ಜ್ಯೋತಿಯನ್ನು ನೋಡು, ಅದರಲ್ಲಿ ಜಗತ್ತಿನ ಹಲವಾರು ದುಃಸ್ವಪ್ನಗಳು ಬಂದು ಹೋಗುತ್ತವೆ. ಅವು ನಿಜವಲ್ಲ.” ಅದು ಎಂತಹ ದೊಡ್ಡ ಸಮಾಧಾನವಾಗಿತ್ತು! ದುಃಸ್ವಪ್ನಗಳು ಎಷ್ಟೇ ಭಯಾನಕವಾಗಿದ್ದರೂ ಅವು ದುಃಸ್ವಪ್ನಗಳಷ್ಟೇ. ಚಲನಚಿತ್ರಗಳು ಮನೋರಂಜಕವಾಗಿರಲಿ ಅಥವಾ ಮನ ಕಲಕುವಂತಿರಲಿ ಅವು ಚಲನಚಿತ್ರಗಳಷ್ಟೇ. ನಾವು ಈ ಜೀವನದ ದುಃಖಕರ ಮತ್ತು ಭಯಾನಕ ನಾಟಕಗಳಲ್ಲಿ ನಮ್ಮ ಮನಸ್ಸನ್ನು ಅಷ್ಟು ತಲ್ಲೀನಗೊಳಿಸಬಾರದು. ನಮ್ಮ ಮನವನ್ನು ಅವಿನಾಶಿ ಹಾಗೂ ವ್ಯತ್ಯಾಸವಾಗದ ಆ ಶಕ್ತಿಯ ಮೇಲಿಡುವುದು ಜಾಣತನವಲ್ಲವೆ? ಈ ಜಗದ ಚಲನಚಿತ್ರದ ಕಥಾವಸ್ತುವಿನಲ್ಲಿ ಬರುವ ಅಹಿತಕರ ಅನಿರೀಕ್ಷಿತವಾದವುಗಳ ಬಗ್ಗೆ ಚಿಂತೆಯೇಕೆ! ನಾವು ಇಲ್ಲಿರುವುದು ಅಲ್ಪಕಾಲ ಮಾತ್ರ. ಜೀವನ ನಾಟಕದ ಪಾಠವನ್ನು ಕಲಿತು ನಿಮ್ಮ ಸ್ವಾತಂತ್ರ್ಯವನ್ನು ಕಂಡುಕೊಳ್ಳಿ.

ಈ ಜೀವನದ ನೆರಳುಗಳ ಅಡಿಯಲ್ಲೇ ಭಗವಂತನ ಅದ್ಭುತ ಬೆಳಕಿದೆ. ಈ ವಿಶ್ವವು ಅವನಿರುವ ಬೃಹತ್ ಮಂದಿರ. ನೀವು ಧ್ಯಾನ ಮಾಡುವಾಗ, ಅವನೆಡೆಗೆ ಎಲ್ಲೆಲ್ಲೂ ಬಾಗಿಲುಗಳು ತೆರೆಯುತ್ತಿರುವುದನ್ನು ಕಾಣುವಿರಿ. ನೀವು ಅವನ ಸಂಸರ್ಗವನ್ನು ಹೊಂದಿದಾಗ, ಆ ಆನಂದ ಮತ್ತು ಶಾಂತಿಯನ್ನು ಪ್ರಪಂಚದ ಯಾವುದೇ ವಿನಾಶಗಳು ದೂರಮಾಡಲಾರವು. ದೃಢೀಕರಣ: “ಬದುಕಿನಲ್ಲಿ, ಸಾವಿನಲ್ಲಿ, ಅನಾರೋಗ್ಯದಲ್ಲಿ, ಬರಗಾಲದಲ್ಲಿ, ಮಾರಕ ಬೇನೆಯಲ್ಲಿ ಅಥವಾ ಬಡತನದಲ್ಲಿ ನಾನು ಸದಾ ನಿನ್ನನ್ನೇ ನಂಬಿರುವಂತೆ ಮಾಡು. ನಾನು ಬಾಲ್ಯ, ಯೌವ್ವನ, ವೃದ್ಧಾಪ್ಯ, ಹಾಗೂ ಪ್ರಾಪಂಚಿಕ ವಿಪ್ಲವಗಳಿಂದ ಪ್ರಭಾವಿತವಾಗದ ಅಮರ ಆತ್ಮವೆಂದು ಅರಿಯಲು ನೆರವಾಗು.”

ಹೆಚ್ಚಿನ ಅನ್ವೇಷಣೆಗಾಗಿ:

ಇದನ್ನು ಹಂಚಿಕೊಳ್ಳಿ