ಕ್ರಿಯಾಯೋಗದ 150 ಸಂವತ್ಸರಗಳು

ಕ್ರಿಯಾಯೋಗದ ಪುನರುಜ್ಜೀವನದ 150ನೆಯ ವಾರ್ಷಿಕೋತ್ಸವ

Mahavatar Babaji
ಮಹಾವತಾರ ಬಾಬಾಜಿ
Lahiri Mahasaya
ಲಾಹಿರಿ ಮಹಾಶಯ
Swami Sri Yukteswar
ಸ್ವಾಮಿ ಶ್ರೀ ಯುಕ್ತೇಶ್ವರ
Paramahansa Yogananda
ಪರಮಹಂಸ ಯೋಗಾನಂದ

“ಕ್ರಿಯಾ ಯೋಗವು ಭಗವತ್-ಸಾಕ್ಷಾತ್ಕಾರದ ವೈಜ್ಞಾನಿಕ ತಂತ್ರವಾಗಿದ್ದು, ಅಂತಿಮವಾಗಿ ಜಗತ್ತಿನಾದ್ಯಂತ ಹರಡಿ, ಜಗತ್ ಪಿತನನ್ನು ಮಾನವನ ವೈಯಕ್ತಿಕ ಹಾಗೂ ಅತೀಂದ್ರಿಯವಾಗಿ ಗ್ರಹಿಸುವುದರ ಮೂಲಕ ರಾಷ್ಟ್ರಗಳನ್ನು ಸಮನ್ವಯಗೊಳಿಸಲು ಸಹಕಾರಿಯಾಗುವುದು.”

—ಮಹಾವತಾರ ಬಾಬಾಜಿ

ಆಧುನಿಕ ಜಗತ್ತಿಗೆ ಒಂದು ಆಧ್ಯಾತ್ಮಿಕ ವಿಶೇಷ ಅನುಗ್ರಹ

2011ರ ವರ್ಷವು ಸಾವಿಲ್ಲದ ಗುರು ಮಹಾವತಾರ ಬಾಬಾಜಿಯವರನ್ನು ಲಾಹಿರಿ ಮಹಾಶಯರು ಮೊದಲ ಬಾರಿಗೆ ಹಿಮಾಲಯದ ರಾಣಿಖೇತ್ ಹತ್ತಿರ ಭೇಟಿ ಮಾಡಿದ, ಪವಿತ್ರ ವಿಜ್ಞಾನ ಕ್ರಿಯಾಯೋಗದ ದೀಕ್ಷೆ ಪಡೆದ 150ನೇ ವಾರ್ಷಿಕೋತ್ಸವದ ವರ್ಷವೆಂದು ಗುರುತಿಸಲ್ಪಟ್ಟಿದೆ.

ಸೆಲ್ಫ್- ರಿಯಲೈಝೇಷನ್ ಫೆಲೋಶಿಪ್‌ನ ಸಂಸ್ಥಾಪಕರಾದ ಪರಮಹಂಸ ಯೋಗಾನಂದರು, ಪ್ರಥಮ ಬಾರಿಗೆ ಈ ಸ್ವರ್ಗೀಯ ಅನುಗ್ರಹವನ್ನು, ತಮ್ಮ ‘ಯೋಗಿಯ ಆತ್ಮಕಥೆ’ಯ ಮೂಲಕ ಈ ಜಗತ್ತಿನ ಗಮನಕ್ಕೆ ತಂದಿದ್ದು, ಅದರಲ್ಲಿ ಹೀಗೆ ಹೇಳಿರುವರು:

“ಈ ಪವಿತ್ರ ಘಟನೆಯು ಕೇವಲ ಲಾಹಿರಿ ಮಹಾಶಯರಿಗೆ ಮಾತ್ರ ನಡೆದದ್ದಲ್ಲ. ಇಡೀ ಮಾನವ ಜನಾಂಗಕ್ಕೇ ಅದೊಂದು ಅದೃಷ್ಟದ ಗಳಿಗೆ. ಕಳೆದು ಹೋಗಿದ್ದ ಅಥವಾ ಬಹು ಕಾಲದಿಂದ ಮರೆಯಾಗಿದ್ದ ಅತ್ಯಂತ ಶ್ರೇಷ್ಟವಾದ ಯೋಗಕಲೆಯು ಮತ್ತೆ ಬೆಳಕು ಕಾಣುವಂತಾಯಿತು.”

“ಈ ಹತ್ತೊಂಬತ್ತನೆಯ ಶತಮಾನದಲ್ಲಿ ನಿನ್ನ ಮೂಲಕ ನಾನು ಪ್ರಪಂಚಕ್ಕೆ ಕೊಡುತ್ತಿರುವ ಈ ಕ್ರಿಯಾಯೋಗವೆಂಬುದು ಸಹಸ್ರಾರು ವರ್ಷಗಳ ಹಿಂದೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ವಿಜ್ಞಾನದ ಪುರುಜ್ಜೀವನವಷ್ಟೆ; ಅದೇ ಅನಂತರ ಪತಂಜಲಿ, ಕ್ರಿಸ್ತರ ತಿಳಿವಳಿಕೆಗೆ ಬಂದುದು.” ಎಂದು ಬಾಬಾಜಿಯವರು ಲಾಹಿರಿ ಮಹಾಶಯರಿಗೆ ಹೇಳಿದರು.

“ಜನಸಮಾನ್ಯರಿಗೆ ಅರಿವಾಗದಂತೆ,” ಪರಮಹಂಸ ಯೋಗಾನಂದರು ಬರೆಯುತ್ತಾರೆ, “ವಾರಣಾಸಿಯ ಅಭುಕ್ತ ಮೂಲೆಯೊಂದರಲ್ಲಿ 1861 ರಲ್ಲಿ, ಒಂದು ಮಹತ್ತಾದ ಆಧ್ಯಾತ್ಮಿಕ ಪುನುರುಜ್ಜೀವನ ಕಾರ್ಯ ಪ್ರಾರಂಭವಾಯಿತು. ಹೂಗಳ ಪರಿಮಳವನ್ನು ಹೇಗೆ ಅದುಮಿಡಲು ಸಾಧ್ಯವಿಲ್ಲವೋ ಹಾಗೆ ಶಾಂತತೆಯಿಂದ ಆದರ್ಶ ಗೃಹಸ್ಥನಂತೆ ಜೀವಿಸುತ್ತಿದ್ದ ಲಾಹಿರಿ ಮಹಾಶಯರು ತಮ್ಮ ಸಹಜವಾದ ಭವ್ಯತೆಯನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆ ಮುಕ್ತಾತ್ಮನಾದ ಗುರುವಿನ ಬಳಿ ದಿವ್ಯ ಮಕರಂದವನ್ನರಸಿಕೊಂಡು ಶಿಷ್ಯ ಮಧುಕರಗಳು ಭಾರತದ ಎಲ್ಲ ಭಾಗಗಳಿಂದಲೂ ಬರತೊಡಗಿದರು.”

“ಪುರಾಣದ ಕಥೆಯಲ್ಲಿ, ಗಂಗೆ ಸ್ವರ್ಗದಿಂದ ಭೂಮಿಗಿಳಿದು ಬಾಯಾರಿ ಬತ್ತಿದ್ದ ಭಕ್ತ ಭಗೀರಥನಿಗೆ ಹೇಗೆ ದೈವೀ ಗುಟುಕು ಕೊಟ್ಟಳೋ, ಹಾಗೆಯೇ 1861ರಲ್ಲಿ, ಕ್ರಿಯಾಯೋಗವೆಂಬ ದಿವ್ಯ ನದಿಯು, ಹಿಮಾಲಯದ ರಹಸ್ಯದುರ್ಗದಿಂದ ಮಾನವನ ಧೂಳು ಹಿಡಿದ ನೆಲೆಗೆ ಹರಿಯತೊಡಗಿತು.”

ಈ ಸ್ವರ್ಗೀಯ ಗಂಗೆಯು ಇಂದಿಗೂ ಹರಿಯುತ್ತಲಿದೆ ಪರಮಹಂಸ ಯೋಗಾನಂದರ ಪರಿಶ್ರಮದಿಂದ ಹಾಗೂ ಅವರು ಮಹಾವತಾರ ಬಾಬಾಜಿ ಮತ್ತು ಸ್ವಾಮಿ ಶ್ರೀಯುಕ್ತೇಶ್ವರರ ಅಪ್ಪಣೆಯ ಮೇರೆಗೆ ಸ್ಥಾಪಿಸಿದ ಸಂಸ್ಥೆಯ ಮೂಲಕ. ಪರಮಹಂಸ ಯೋಗಾನಂದರು ಸ್ವತಃ 100,000 ಶಿಷ್ಯರಿಗೆ ಪವಿತ್ರ ವಿಜ್ಞಾನವಾದ ಕ್ರಿಯಾಯೋಗದ ದೀಕ್ಷೆ ನೀಡಿದರು. ಮತ್ತು ಅನೇಕ ಸಾವಿರಾರು ಜನರು ಅಂದಿನಿಂದ ಕ್ರಿಯಾಯೋಗದ ಸಂದೇಶವನ್ನು ಪ್ರಸಾರ ಮಾಡಲು ಅವರು ಸಂಸ್ಥಾಪಿಸಿದ (ವೈಎಸ್ಎಸ್/ಎಸ್‌ಆರ್‌ಎಫ್) ಸಂಸ್ಥೆಯ ಮುಖಾಂತರ ದೀಕ್ಷೆ ಸ್ವೀಕರಿಸಿರುವರು. ಮಹಾವತಾರ ಬಾಬಾಜಿಯವರು ಅವರಿಗೆ ವಹಿಸಿದ ಧರ್ಮ ಪ್ರಚಾರ ಕಾರ್ಯವು ಕ್ರಿಯಾಯೋಗದ ಅಭ್ಯಾಸದಿಂದ ಎಲ್ಲಾ ಅನ್ವೇಷಕರಿಗೂ ಎಲ್ಲಾ ಧರ್ಮಗಳಿಗೂ ಆಧಾರವಾಗಿರುವ, ಒಬ್ಬನೇ ಪರಮಾತ್ಮನ ನೇರವಾದ ವೈಯಕ್ತಿಕ ಅನುಭವವನ್ನು ಸಾಧಿಸಲು ಸಹಾಯ ಮಾಡುವುದಾಗಿತ್ತು. ಹಾಗೆ ವಿಶ್ವ ಕುಟುಂಬವನ್ನು ಏಕತೆಯ ಆಧ್ಯಾತ್ಮಿಕ ಬಂಧನಗಳಿಂದ ಹಾಗೂ ದೈವೀ ಬಾಂಧವ್ಯದಿಂದ ಒಂದುಗೂಡಿಸುವುದಾಗಿತ್ತು.

ಆ ಅನುಗ್ರಹಿತ ಕ್ಷಣವು 1861ರಲ್ಲಿ ಮಾನವ ಜನಾಂಗದಲ್ಲಿ, ಆತ್ಮದ ಅನಂತ ಸಾಮರ್ಥ್ಯದ ದರ್ಶನವನ್ನು ಜಾಗೃತಗೊಳಿಸಲು, ಒಂದು ಆಧ್ಯಾತ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿತು. ಇಂದು ವಿಶ್ವದಾದ್ಯಂತ ಸತ್ಯಾನ್ವೇಷಕರು ಭಗವತ್ ಸಂಯೋಗದ ಮತ್ತು ಬ್ರಹ್ಮಾನಂದದ ದೈವಿಕ ಅಮೃತವನ್ನು ಕ್ರಿಯಾಯೋಗದ ಶ್ರದ್ಧಾಪೂರ್ವಕ ಅಭ್ಯಾಸದಿಂದಾಗಿ ಪಾನ ಮಾಡುತ್ತಿರುವರು. ಬಾಬಾಜಿಯವರು ಬಹಳ ಹಿಂದೆಯೇ ಕಂಡಂತೆ, ಕ್ರಿಯಾಯೋಗವು ವೈಎಸ್‌ಎಸ್/ಎಸ್‌ಆರ್‌ಎಫ್ ಮುಖಾಂತರ ಎಲ್ಲಾ ರಾಷ್ಟ್ರಗಳಲ್ಲೂ ಹರಡುತ್ತಿದೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್ ರಿಯಲೈಝೇಷನ್ ಫೆಲೋಶಿಪ್ ಈ ವಿಶೇಷ ಕಾರ್ಯಕ್ರಮವನ್ನು ಸನ್ಯಾಸಿಗಳ ಪ್ರವಾಸಗಳು, ಕ್ರಿಯಾ ಯೋಗ ದೀಕ್ಷೆಗಳು, ಘಟಿಕೋತ್ಸವ(ಯುಎಸ್ಎ), ಶರದ್ ಸಂಗಮ(ಭಾರತ), ಇನ್ನಿತರ ವಿಶೇಷ ಕಾರ್ಯಕ್ರಮಗಳು, ಮತ್ತು ವಿಶ್ವಾದ್ಯಂತ ನಮ್ಮ ಅನೇಕ ಕೇಂದ್ರಗಳಲ್ಲಿ ಮತ್ತು ಮಂದಿರಗಳಲ್ಲಿ ವಿಶೇಷ ಕಾರ್ಯಚಟುವಟಿಕೆಗಳ ಮೂಲಕ ಆಚರಿಸುವರು. ಹೆಚ್ಚಿನ ಮಾಹಿತಿಗಾಗಿ ದಯಮಾಡಿ ನಿಮ್ಮ ಸ್ಥಳೀಯ ಕೇಂದ್ರ ಅಥವಾ ಮಂದಿರವನ್ನು ಸಂಪರ್ಕಿಸಿ.

ಪರಮಹಂಸ ಯೋಗಾನಂದರು ತಮ್ಮ ಆತ್ಮಕಥೆಯನ್ನು, ಭವಿಷ್ಯಸೂಚಕ ಆಶೀರ್ವಾದದ ಈ ಭರವಸೆಯ ನುಡಿಗಳಿಂದ ಮುಕ್ತಾಯಗೊಳಿಸಿದ್ದಾರೆ. “ಪೂರ್ವದಲ್ಲಿಯೂ ಪಶ್ಚಿಮದಲ್ಲಿಯೂ ಕ್ರಿಯಾಯೋಗದ ಮಂಗಳಕರ ಪಾತ್ರ ಈಗ ತಾನೇ ಪ್ರಾರಂಭಗೊಂಡಿದೆ. ಮಾನವನು ಎಲ್ಲ ಸಂಕಷ್ಟಗಳಿಂದಲೂ ಪಾರಾಗಲು ಆತ್ಮ ಸಾಕ್ಷಾತ್ಕಾರದ ಒಂದು ಸ್ಪಷ್ಟ ವೈಜ್ಞಾನಿಕ ತಂತ್ರ ಅಸ್ತಿತ್ವದಲ್ಲಿದೆ ಎಂಬುದನ್ನು ಎಲ್ಲ ಮಾನವರೂ ತಿಳಿಯಲಿ!”

ಯೋಗಿಯ ಆತ್ಮಕಥೆ ಕ್ರಿಯಾಯೋಗವನ್ನು ವಿಶ್ವದಾದ್ಯಂತ ಹರಡುತ್ತಿರುವ ಈ ಪುಸ್ತಕವನ್ನು ಓದಿ

Autobiography of a Yogi book cover

ಈಗ ಕೊಂಡುಕೊಳ್ಳಿ

ಹಲವಾರು ಭಾಷೆಗಳಲ್ಲಿ ಲಭ್ಯ

ಇದನ್ನು ಹಂಚಿಕೊಳ್ಳಿ