ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು
ಆ “ಯಾವುದೋ ಒಂದು” ತನಗೆ ಸಂಪೂರ್ಣ ಮತ್ತು ಕೊನೆಯಾಗದ ಆನಂದ ತರುತ್ತದೆ ಎಂದು ಮಾನವಕೋಟಿಯು ನಿರಂತರ ಅನ್ವೇಷಣೆಯಲ್ಲಿ ತೊಡಗಿದೆ. ಯಾರು ಭಗವಂತನನ್ನು ಅರಸಿ ಕಂಡುಕೊಂಡಿದ್ದಾರೋ ಅಂತಹ ವೈಯಕ್ತಿಕ ಆತ್ಮಗಳಿಗೆ ಅನ್ವೇಷಣೆ ಮುಗಿದಿದೆ: ಅವನೇ ಆ ಯಾವುದೋ ಒಂದು.

ಜೀವನದ ಉದ್ದೇಶವೇ ಭಗವಂತನನ್ನು ಪ್ರಾಪ್ತಿಸಿಕೊಳ್ಳುವುದು ಎಂಬ ಬಗ್ಗೆ ಅನೇಕ ಜನರಿಗೆ ಸಂದೇಹವಿದೆ; ಆದರೆ ಜೀವನದ ಉದ್ದೇಶ ಸಂತೋಷವನ್ನು ಕಂಡುಕೊಳ್ಳುವುದು ಎಂಬ ಅಭಿಪ್ರಾಯವನ್ನು ಪ್ರತಿಯೊಬ್ಬರೂ ಒಪ್ಪುತ್ತಾರೆ. ಭಗವಂತನೇ ಸಂತೋಷ ಎಂದು ನಾನು ಹೇಳುತ್ತೇನೆ. ಅವನು ಪರಮಾನಂದ. ಅವನು ಪ್ರೇಮ. ಅವನು ನಿಮ್ಮ ಆತ್ಮದಿಂದ ಎಂದಿಗೂ ದೂರ ಹೋಗದಂತಹ ಆನಂದ. ಆದ್ದರಿಂದ ನೀವು ಆ ಸಂತೋಷವನ್ನು ಹೊಂದಲು ಏಕೆ ಪ್ರಯತ್ನಿಸಬಾರದು? ಅದನ್ನು ನಿಮಗೆ ಬೇರಾರೂ ಕೊಡಲು ಸಾಧ್ಯವಿಲ್ಲ. ನೀವೇ ಅದನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬೇಕು.

ಒಂದು ಕಾಲಕ್ಕೆ ನೀವು ಬಯಸಿದಂತಹ — ಸಂಪತ್ತು, ಅಧಿಕಾರ, ಸ್ನೇಹಿತರು — ಮುಂತಾದ ಎಲ್ಲವನ್ನೂ ನಿಮ್ಮ ಜೀವನ ತಂದು ಕೊಟ್ಟಿದ್ದರೂ ಸ್ವಲ್ಪ ಸಮಯದ ನಂತರ ನೀವು ಪುನಃ ಅಸಂತುಷ್ಟರಾಗಿ ಇನ್ನೂ ಬೇಕೆಂದು ಬಯಸುತ್ತೀರಿ. ಆದರೆ ನಿಮ್ಮಲ್ಲಿ ಎಂದೆಂದಿಗೂ ನೀರಸವಾಗದಂತಹುದೊಂದಿದೆ — ಅದೇ ಆನಂದ. ಅದರ ಮೂಲಗುಣ ಬದಲಾಗುವಂಥದ್ದಲ್ಲದಿದ್ದರೂ, ಮುದಗೊಳಿಸುವಂತಹ ವೈವಿಧ್ಯತೆಯಿರುವ ಸಂತೋಷವೇ, ಎಲ್ಲರೂ ಅರಸುತ್ತಿರುವಂತಹ ಆಂತರಿಕ ಅನುಭವ. ಶಾಶ್ವತವಾದ, ನಿತ್ಯ ನೂತನ ಆನಂದವೇ ದೇವರು. ಈ ಆನಂದವನ್ನು ನೀವು ಆಂತರ್ಯದಲ್ಲಿ ಕಂಡುಕೊಂಡಾಗ, ಅದೇ ಆನಂದವನ್ನು ಬಾಹ್ಯದಲ್ಲಿರುವ ಎಲ್ಲದರಲ್ಲಿಯೂ ಕಾಣುತ್ತೀರಿ. ದೇವರಲ್ಲಿ ನೀವು ಚಿರಂತನವಾದ ಶಾಶ್ವತವಾದ ಆನಂದದ ನಿಧಿಯನ್ನು ಪಡೆದುಕೊಳ್ಳುವಿರಿ.

ನಿಮಗೆ ವಿಶ್ರಾಂತಿಯು ಅತ್ಯವಶ್ಯ ಎಂದೆನಿಸಿದಾಗ ನೀವು ನಿದ್ರಿಸುವಂತಿಲ್ಲ ಎಂಬ ಶಿಕ್ಷೆಗೊಳಗಾಗುವಿರಿ ಎಂದಿಟ್ಟುಕೊಳ್ಳೋಣ, ಮತ್ತು ಇದ್ದಕ್ಕಿದ್ದಂತೆ ಯಾರೋ: “ಸರಿ, ಈಗ ನೀನು ನಿದ್ರಿಸಬಹುದು,” ಎಂದು ಹೇಳಿದರೆ ನಿದ್ರಿಸುವ ಮೊದಲು ನಿಮಗಾಗುವ ಆನಂದವನ್ನು ಊಹಿಸಿಕೊಳ್ಳಿ. ಅದನ್ನು ಒಂದು ಕೋಟಿಯಿಂದ ಗುಣಿಸಿ! ಭಗವಂತನೊಂದಿಗಿನ ಸಂಸರ್ಗದ ಆನಂದವನ್ನು ಆಗಲೂ ಸಹ ಅದು ವರ್ಣಿಸಲಾಗದು.

ಭಗವದಾನಂದವು ಅಪರಿಮಿತ, ನಿರಂತರ ಹಾಗೂ ನಿತ್ಯ ನೂತನ. ನೀವು ಆ ಚೈತನ್ಯದಲ್ಲಿದ್ದಾಗ ಶರೀರ, ಮನಸ್ಸು ಯಾವುದೂ ಕೂಡ ನಿಮ್ಮನ್ನು ಅಡ್ಡಿಪಡಿಸಲಾರವು — ದೇವರ ಅನುಗ್ರಹ ಮತ್ತು ಮಹಿಮೆ ಅಂತಹುದು. ನಿಮಗೆ ಅರ್ಥವಾಗದೆ ಇರುವುದನ್ನು, ನೀವು ಅರಿತುಕೊಳ್ಳಬಯಸಿದುದೆಲ್ಲವನ್ನೂ ಅವನು ನಿಮಗೆ ವಿವರಿಸುತ್ತಾನೆ.

ನೀವು ಗಾಢಧ್ಯಾನದ ಮೌನದಲ್ಲಿ ಕುಳಿತಾಗ, ಹೊರಗಿನ ಯಾವುದೇ ಪ್ರಚೋದನೆಯಿಲ್ಲದೆ, ಆನಂದವು ಒಳಗಿನಿಂದ ಉಕ್ಕಿಬರುತ್ತದೆ. ಧ್ಯಾನದಲ್ಲಿರುವ ಆನಂದವು ಅಗಾಧವಾದುದು. ನಿಜವಾದ ಧ್ಯಾನದ ಮೌನದೊಳಗೆ ಪ್ರವೇಶಿಸದವರಿಗೆ ನಿಜ ಆನಂದವೆಂದರೇನೆಂದು ತಿಳಿದಿರುವುದಿಲ್ಲ.
ಮನಸ್ಸು ಮತ್ತು ಭಾವನೆಗಳು ಅಂತರ್ಮುಖವಾಗುತ್ತಿದ್ದಂತೆ, ನೀವು ದೇವರ ಆನಂದವನ್ನು ಅನುಭವಿಸಲಾರಂಭಿಸುವಿರಿ. ಇಂದ್ರಿಯ ಸುಖಗಳು ಕ್ಷಣಿಕ; ಆದರೆ ಭಗವದಾನಂದವು ಶಾಶ್ವತವಾದುದು. ಅದು ಅನುಪಮವಾದುದು!
ನಾವು ನಮ್ಮ ಬದುಕನ್ನು ಸರಿಯಾಗಿ, ವಿವೇಚನೆಯಿಂದ ಮತ್ತು ಮಿತವಾಗಿ ಬಳಸುವುದರಿಂದ ಬದುಕಿನಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ನಮ್ಮಲ್ಲಿ ಅತ್ಯಲ್ಪ ಜನರಿಗೆ ಮಾತ್ರ ತಿಳಿದಿದೆ. ನಮ್ಮ ಸಮಯವನ್ನು ಮಿತವ್ಯಯ ಮಾಡೋಣ — ನಾವು ಎಚ್ಚರಗೊಳ್ಳುವ ಮುನ್ನವೇ ಜನ್ಮಗಳು ಸರಿದುಹೋಗಿರುತ್ತವೆ, ಆದ್ದರಿಂದಲೇ ದೇವರು ನಮಗೆ ಕೊಟ್ಟ ಅವಿನಾಶೀ ಸಮಯದ ಮೌಲ್ಯದ ಅರಿವೇ ನಮಗಿಲ್ಲ.

ನಿಮ್ಮ ಸಮಯವನ್ನು ಸೋಮಾರಿತನದಲ್ಲಿ ವ್ಯರ್ಥಮಾಡಬೇಡಿ. ಹೆಚ್ಚಿನ ಜನರು ಹುರುಳಿಲ್ಲದ ಕೆಲಸಗಳಲ್ಲಿ ತೊಡಗಿರುತ್ತಾರೆ. ಅವರೇನು ಮಾಡುತ್ತಿದ್ದಾರೆಂದು ಅವರನ್ನು ಕೇಳಿದರೆ, ಸಾಮಾನ್ಯವಾಗಿ ಅವರ ಉತ್ತರ, “ಓ ನಾನು ಪ್ರತಿ ನಿಮಿಷವೂ ಕಾರ್ಯಮಗ್ನನಾಗಿದ್ದೇನೆ!” ಆದರೆ ಅವರಿಗೆ ತಾವು ಬಿಡುವಿಲ್ಲದೆ ಮಾಡುತ್ತಿರುವ ಕೆಲಸವೇನು ಎಂಬುದು ನೆನಪಿಗೆ ಬರುವುದಿಲ್ಲ!

ಒಂದೇ ಒಂದು ಕ್ಷಣದಲ್ಲಿ ನೀವು ಈ ಪ್ರಪಂಚವನ್ನು ಬಿಟ್ಟುಹೋಗಬೇಕಾಗಬಹುದು; ಆಗ ನೀವು ನಿಮ್ಮೆಲ್ಲ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾಗುತ್ತದೆ. ಅಂದಮೇಲೆ, ಯಾವುದೇ ಕೆಲಸಕ್ಕಾಗಲಿ ಪ್ರಥಮ ಆದ್ಯತೆಯನ್ನೇಕೆ ಕೊಡಬೇಕು, ಅದರಿಂದ ದೇವರಿಗಾಗಿ ಸಮಯವೇ ಇಲ್ಲದಂತಾಗುವುದಾದರೆ? ಅದು ಜಾಣತನವಲ್ಲ. ನಮ್ಮ ಮೇಲೆ ಬೀಸಿರುವ ಮಾಯಾಜಾಲದಿಂದಾಗಿ ನಾವು ನಮ್ಮನ್ನು ಪ್ರಾಪಂಚಿಕ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ದೇವರನ್ನೇ ಮರೆಯುತ್ತೇವೆ.

ನಾವು ದೇವರೊಡನೆ ಶ್ರುತಿಗೊಂಡಲ್ಲಿ, ನಮ್ಮ ಅನುಭವವು ಅಸೀಮಿತವಾಗಿರುತ್ತದೆ. ಅದು ದಿವ್ಯ ಸಾನ್ನಿಧ್ಯದ ಸಾಗರದಂತಹ ಪ್ರವಾಹದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುತ್ತದೆ. ಶುದ್ಧ ಚೇತನವನ್ನು ಅರಿತಾಗ, ನಾವೇ ಶುದ್ಧ ಚೇತನವೆಂಬ ಅರಿವುಂಟಾದಾಗ, ಯಾವುದೇ ನೆಲವಿಲ್ಲ ಅಥವಾ ಸಾಗರವೂ ಇಲ್ಲ, ಯಾವುದೇ ಭೂಮಿಯಿಲ್ಲ ಅಥವಾ ಆಕಾಶವಿಲ್ಲ — ಎಲ್ಲವೂ ಅವನೇ. ಎಲ್ಲವೂ ಶುದ್ಧ ಚೇತನದಲ್ಲಿ ವಿಲೀನವಾಗುವ ಸ್ಥಿತಿಯನ್ನು ಯಾರೂ ಬಣ್ಣಿಸಲಾರರು. ಒಂದು ಪರಮಾನಂದದ ಅನುಭವವಾಗುತ್ತದೆ — ಆನಂದ, ಜ್ಞಾನ ಮತ್ತು ಪ್ರೇಮಗಳ ಚಿರಂತನ ಪರಿಪೂರ್ಣತೆ.

ದೇವರ ಪ್ರೇಮವು, ಅಮೂರ್ತ ಚೇತನದ ಪ್ರೇಮವು ಎಲ್ಲವನ್ನೂ ಆವರಿಸುವಂತಹ ಪ್ರೇಮ. ಅದನ್ನು ನೀವು ಒಂದು ಬಾರಿ ಅನುಭವಿಸಿದಲ್ಲಿ, ಅದು ನಿಮ್ಮನ್ನು ಚಿರಂತನ ಸಾಮ್ರಾಜ್ಯದಲ್ಲಿ ನಡೆಸಿಕೊಂಡು ಹೋಗುತ್ತಲೇ ಇರುತ್ತದೆ. ಆ ಪ್ರೇಮವನ್ನು ನಿಮ್ಮ ಹೃದಯದಿಂದ ಎಂದಿಗೂ ದೂರ ಮಾಡಲಾಗುವುದಿಲ್ಲ. ಅದು ಅಲ್ಲಿಯೇ ಉರಿಯುತ್ತಿರುತ್ತದೆ, ಅದರ ಅಗ್ನಿಯಲ್ಲಿ ಇತರರನ್ನು ನಿಮ್ಮೆಡೆಗೆ ಸೆಳೆಯುವಂತಹ, ಮತ್ತು ನಿಮಗೆ ನಿಜವಾಗಿಯೂ ಅವಶ್ಯವಿರುವ ಅಥವಾ ನೀವು ಬಯಸುವ ಸಕಲವನ್ನೂ ಆಕರ್ಷಿಸುವಂತಹ ಶುದ್ಧ ಚೇತನದ ವಿಶೇಷ ಅಯಸ್ಕಾಂತವನ್ನು ಕಾಣುವಿರಿ.

ನಾನು ನಿಮಗೆ ನಿಜವಾಗಿಯೂ ಹೇಳುತ್ತಿದ್ದೇನೆ, ನನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿದೆ, ಮಾನವನ ಮುಖಾಂತರವಲ್ಲ, ದೇವರ ಮುಖಾಂತರ. ಅವನಿದ್ದಾನೆ. ಅವನಿದ್ದಾನೆ. ಅವನ ಚೇತನವೇ ನಿಮ್ಮೊಂದಿಗೆ ನನ್ನ ಮೂಲಕ ಮಾತನಾಡುತ್ತದೆ. ನಾನು ಮಾತನಾಡುತ್ತಿರುವುದು ಅವನ ಪ್ರೇಮದ ಬಗ್ಗೆಯೇ. ಪುಳಕದ ಮೇಲೆ ಪುಳಕ! ಶಾಂತ ಮಂದಮಾರುತದಂತೆ ಅವನ ಪ್ರೇಮವು ಆತ್ಮವನ್ನು ಆವರಿಸುತ್ತದೆ. ಹಗಲೂ ರಾತ್ರಿ, ವಾರದಿಂದ ವಾರಕ್ಕೆ, ವರ್ಷದಿಂದ ವರ್ಷಕ್ಕೆ ಅದು ಹೆಚ್ಚುತ್ತಲೇ ಹೋಗುತ್ತದೆ — ಕೊನೆಯೆಲ್ಲಿ ಎಂದು ನಿಮಗೆ ತಿಳಿಯುವುದೇ ಇಲ್ಲ. ಅದನ್ನೇ ನೀವು ಅರಸುತ್ತಿರುವುದು, ನಿಮ್ಮಲ್ಲಿ ಪ್ರತಿಯೊಬ್ಬರೂ. ನಿಮಗೆ ಮಾನವ ಪ್ರೇಮ ಮತ್ತು ಸಂಪತ್ತಿನ ಬಯಕೆಯಿದೆ ಎಂದಂದುಕೊಳ್ಳುತ್ತೀರಿ, ಆದರೆ ಅವುಗಳ ಹಿಂದೆ ನಿಮ್ಮನ್ನು ಕರೆಯುತ್ತಿರುವುದು ನಿಮ್ಮ ಪರಮಪಿತ. ಅವನ ಎಲ್ಲಾ ಕೊಡುಗೆಗಳಿಗಿಂತ ಅವನೇ ಶ್ರೇಷ್ಠ ಎಂದು ನೀವು ಅರ್ಥಮಾಡಿಕೊಂಡಾಗ, ಅವನನ್ನು ಕಾಣುವಿರಿ.

ಮಾನವನು ಭೂಮಿಯ ಮೇಲೆ ಬಂದುದು ದೇವರನ್ನು ಅರಿಯುವ ಬಗ್ಗೆ ಕಲಿಯುವುದಕ್ಕಾಗಿ ಮಾತ್ರ; ಅವನು ಇಲ್ಲಿರುವುದು ಬೇರೆ ಯಾವುದೇ ಕಾರಣಕ್ಕಲ್ಲ. ಇದೇ ಪ್ರಭುವಿನ ನಿಜವಾದ ಸಂದೇಶ. ಅವನನ್ನು ಅರಸುವ ಮತ್ತು ಪ್ರೇಮಿಸುವ ಎಲ್ಲರಿಗೂ, ಅವನು ನೋವಿಲ್ಲದ, ವೃದ್ಧಾಪ್ಯವಿಲ್ಲದ, ಕದನವಿಲ್ಲದ, ಸಾವಿಲ್ಲದ — ಕೇವಲ ಶಾಶ್ವತವಾದ ಅಭಯವಿರುವ — ಮಹೋನ್ನತ ಬದುಕಿನ ಬಗ್ಗೆ ಹೇಳುತ್ತಾನೆ. ಆ ಜೀವನದಲ್ಲಿ ಯಾವುದೂ ನಾಶವಾಗುವುದಿಲ್ಲ. ಅಲ್ಲಿರುವುದು ಅನಿರ್ವಚನೀಯ ಆನಂದ ಮಾತ್ರ. ಅದು ಎಂದಿಗೂ ಹಳೆಯದಾಗುವುದಿಲ್ಲ — ನಿತ್ಯ ನೂತನ ಆನಂದ.

ಆದ್ದರಿಂದಲೇ ದೇವರನ್ನು ಅರಸುವುದು ಫಲಕಾರಿಯಾಗಿರುತ್ತದೆ. ಅವನನ್ನು ಪ್ರಾಮಾಣಿಕವಾಗಿ ಅರಸುವ ಎಲ್ಲರೂ ಖಂಡಿತವಾಗಿ ಅವನನ್ನು ಕಂಡುಕೊಳ್ಳುತ್ತಾರೆ. ಯಾರು ದೇವರನ್ನು ಪ್ರೇಮಿಸಬಯಸುತ್ತಾರೋ ಹಾಗೂ ಅವನ ಸಾಮ್ರಾಜ್ಯವನ್ನು ಪ್ರವೇಶಿಸಬೇಕೆಂದು ಹಂಬಲಿಸುವರೋ, ಹಾಗೂ ತಮ್ಮ ಹೃದಯದಲ್ಲಿ ಅವನನ್ನು ಅರಿಯಬೇಕೆಂಬ ಪ್ರಾಮಾಣಿಕವಾದ ಆಸೆಯನ್ನು ಹೊಂದಿರುವರೋ, ಅವರು ಅವನನ್ನು ಕಂಡುಕೊಳ್ಳುತ್ತಾರೆ. ಅವನಿಗಾಗಿ ನಿಮಗೆ ಹಗಲೂ ರಾತ್ರಿ ಸದಾ ಹೆಚ್ಚುತ್ತಿರುವ ಹಂಬಲವಿರಬೇಕು. ಆಗ ಅವನು ನಿಮಗಿತ್ತ ವಾಗ್ದಾನವನ್ನು ಅನಂತತೆಯುದ್ದಕ್ಕೂ ಪೂರೈಸುತ್ತ ನಿಮ್ಮ ಪ್ರೇಮಕ್ಕೆ ಸಮ್ಮತಿ ನೀಡುತ್ತಾನೆ. ಆಗ ನಿಮ್ಮ ಆನಂದ ಮತ್ತು ಸಂತೋಷಕ್ಕೆ ಎಣೆಯೇ ಇರುವುದಿಲ್ಲ. ಎಲ್ಲವೂ ಬೆಳಕೇ, ಎಲ್ಲವೂ ಆನಂದವೇ, ಎಲ್ಲವೂ ಶಾಂತಿಯೇ, ಎಲ್ಲವೂ ಪ್ರೇಮವೇ. ಅವನೇ ಎಲ್ಲವೂ.