ಪರಮಹಂಸ ಯೋಗಾನಂದರ ಹೊಸ ಒಡಂಬಡಿಕೆಯ ಎರಡು ಸಂಪುಟಗಳ ವ್ಯಾಖ್ಯಾನದಿಂದ ಆಯ್ದ ಭಾಗಗಳು:
ಯೇಸು ಹೇಳಿದ ಮಾತುಗಳನ್ನು ನಾನು ಅಂತರ್ಬೋಧೆಯಿಂದ ಗ್ರಹಿಸಿ, ಈ ಪುಟಗಳಲ್ಲಿ ಅವುಗಳ ಆಧ್ಯಾತ್ಮಿಕ ವ್ಯಾಖ್ಯಾನವನ್ನು ಜಗತ್ತಿಗೆ ನೀಡುತ್ತಿದ್ದೇನೆ, ಕ್ರಿಸ್ತ ಪ್ರಜ್ಞೆಯೊಂದಿಗೆ ನೈಜ ಸಂಸರ್ಗದ ಮೂಲಕ ಪಡೆದುಕೊಂಡ ಸತ್ಯಗಳು.… ಅವು ಕ್ರಿಶ್ಚಿಯನ್ ಬೈಬಲ್, ಭಾರತದ ಭಗವದ್ಗೀತೆ ಹಾಗೂ ಅನಾದಿ ಕಾಲದಿಂದಲೂ ಪ್ರಭಾವವನ್ನುಳಿಸಿಕೊಂಡ ಇತರ ಎಲ್ಲಾ ನಿಜವಾದ ಧರ್ಮಗ್ರಂಥಗಳ ನಡುವೆ ಇರುವ ಪರಿಪೂರ್ಣ ಏಕತೆಯನ್ನು ಬಹಿರಂಗಪಡಿಸುತ್ತವೆ.
ಜಗತ್ತಿನ ಸಂರಕ್ಷಕರು ವೈಷಮ್ಯ ಸಿದ್ಧಾಂತದ ವಿಭಜನೆಗಳನ್ನು ಬೆಳೆಸಲು ಬರುವುದಿಲ್ಲ; ಅವರ ಬೋಧನೆಗಳನ್ನು ಆ ನಿಟ್ಟಿನಲ್ಲಿ ಬಳಸಬಾರದು. ಹೊಸ ಒಡಂಬಡಿಕೆಯನ್ನು “ಕ್ರಿಶ್ಚಿಯನ್” ಬೈಬಲ್ ಎಂದು ಹೇಳುವುದೂ ತಪ್ಪೇ, ಏಕೆಂದರೆ ಅದು ಯಾವುದೇ ಒಂದು ಪಂಗಡಕ್ಕೆ ಮಾತ್ರ ಸೇರಿದುದಲ್ಲ. ಸತ್ಯವು ಇಡೀ ಮಾನವ ಜನಾಂಗದ ಅನುಗ್ರಹಕ್ಕಾಗಿ ಮತ್ತು ಉನ್ನತಿಗಾಗಿ ಉದ್ದೇಶಿಸಲಾಗಿರುತ್ತದೆ. ಕ್ರಿಸ್ತ ಪ್ರಜ್ಞೆಯು ಸರ್ವವ್ಯಾಪಿಯಾಗಿರುವಂತೆ, ಯೇಸು ಕ್ರಿಸ್ತನು ಎಲ್ಲರಿಗೂ ಸೇರಿದವನು….
ಈ ಕೃತಿಗೆ ದಿ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್ ಎಂಬ ಶೀರ್ಷಿಕೆ ನೀಡುವಲ್ಲಿ, ನಾನು, ಯೇಸುವು ಅಕ್ಷರಶಃ ಭೂಮಿಗೆ ಹಿಂದಿರುಗುವ ಬಗ್ಗೆ ಹೇಳುತ್ತಿಲ್ಲ …. ಸಾವಿರ ಕ್ರಿಸ್ತರನ್ನು ಭೂಮಿಗೆ ಕಳಿಸಿದರೂ, ಜನರು ಯೇಸುವಿನಲ್ಲಿ ಪ್ರಕಟವಾಗಿದ್ದಂತಹ ಕ್ರಿಸ್ತ ಪ್ರಜ್ಞೆಯ ಎರಡನೇ ಆಗಮನವನ್ನು ಸ್ವೀಕರಿಸಲು ತಮ್ಮ ವೈಯಕ್ತಿಕ ಪ್ರಜ್ಞೆಯನ್ನು ಶುದ್ಧೀಕರಿಸುವ ಮತ್ತು ವಿಸ್ತರಿಸುವ ಮೂಲಕ, ಕ್ರಿಸ್ತನಂತೆ ಆಗದ ಹೊರತು, ಈ ಭೂಮಿಯ ಜನರನ್ನು ಅವರು ಉದ್ಧರಿಸಲು ಸಾಧ್ಯವಿಲ್ಲ…. ಧ್ಯಾನದ ನಿತ್ಯ ನೂತನ ಆನಂದದಲ್ಲಿ ಅನುಭವಿಸಲಾಗುವ ಈ ಪ್ರಜ್ಞೆಯ ಸಂಪರ್ಕವೇ, ಕ್ರಿಸ್ತನ ನಿಜವಾದ ಎರಡನೇ ಆಗಮನ — ಹಾಗೂ ಅದು ಭಕ್ತನ ಪ್ರಜ್ಞೆಯಲ್ಲಿಯೇ ನಡೆಯುವಂಥದ್ದು.
"ಜನಿಸಿದ ಏಕೈಕ ಪುತ್ರ": ಕ್ರಿಸ್ತ ಪ್ರಜ್ಞೆ
ಯೇಸು ಮತ್ತು ಕ್ರಿಸ್ತ ಶಬ್ದಗಳ ಅರ್ಥದ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಅವನಿಗೆ ಇಟ್ಟ ಹೆಸರು ಯೇಸು; ಅವನ ಗೌರವಾರ್ಥವಾಗಿ ಬಂದ ಬಿರುದು “ಕ್ರಿಸ್ತ.” ಯೇಸು ಎಂದು ಕರೆಯಲ್ಪಡುವ ಅವನ ಪುಟ್ಟ ಮಾನವ ದೇಹದಲ್ಲಿ ವಿಶಾಲವಾದ ಕ್ರಿಸ್ತ ಪ್ರಜ್ಞೆ ಹುಟ್ಟಿಕೊಂಡಿತು, ಅದು ಸೃಷ್ಟಿಯ ಪ್ರತಿಯೊಂದು ಭಾಗದಲ್ಲೂ ಕಣದಲ್ಲೂ ಸರ್ವವ್ಯಾಪಿಯಾಗಿರುವ ಭಗವಂತನ ಎಲ್ಲವನ್ನೂ ಬಲ್ಲ ಪರಿಜ್ಞಾನ. ಈ ಪ್ರಜ್ಞೆಯೇ “ಭಗವಂತನಿಂದ ಜನಿಸಿದ ಏಕೈಕ ಪುತ್ರ,” ಈ ಹೆಸರಿಗೆ ಕಾರಣವೇನೆಂದರೆ ಇದು ಸೃಷ್ಟಿಯಲ್ಲಿ ವಿಶ್ವಾತೀತ ಬ್ರಹ್ಮ, ಪರಮಾತ್ಮ ಅಥವಾ ಪರಮ ಪಿತನ ಏಕೈಕ ಪರಿಪೂರ್ಣ ಪ್ರತಿಬಿಂಬವಾಗಿದೆ.
ಭಗವಂತನ ಪ್ರೀತಿ ಮತ್ತು ಆನಂದದಿಂದ ತುಂಬಿರುವ ಆ ಅನಂತ ಪ್ರಜ್ಞೆಯನ್ನು ಕುರಿತೇ ಸಂತ ಜಾನ್ ಹೀಗೆ ಹೇಳಿದ್ದು: “ಅವನನ್ನು (ಕ್ರಿಸ್ತ ಪ್ರಜ್ಞೆಯನ್ನು) ಸ್ವೀಕರಿಸಿದವರೆಲ್ಲರಿಗೂ ಅವನು ದೇವರ ಮಕ್ಕಳಾಗಲು ಶಕ್ತಿಯನ್ನು ನೀಡಿದನು.”…
ಸಹಸ್ರಾರು ವರ್ಷಗಳಿಂದ ಭಾರತದ ಯೋಗಿಗಳಿಗೆ ಮತ್ತು ಋಷಿಗಳಿಗೆ, ಹಾಗೂ ಯೇಸುವಿಗೆ ತಿಳಿದಿದ್ದ ನಿರ್ದಿಷ್ಟ ಧ್ಯಾನ ವಿಜ್ಞಾನದ ಮೂಲಕ, ಭಗವಂತನ ಯಾವುದೇ ಅನ್ವೇಷಕನು ತನ್ನ ಪ್ರಜ್ಞೆಯ ಸಾಮರ್ಥ್ಯವನ್ನು ಸರ್ವಜ್ಞಾನಕ್ಕೆ ವಿಸ್ತರಿಸಬಹುದು — ತನ್ನೊಳಗೆ ಭಗವಂತನ ಸರ್ವವ್ಯಾಪಿ ಪ್ರಜ್ಞಾನವನ್ನು ಸ್ವೀಕರಿಸಲು.
ವಿಡಿಯೋ: "ಕ್ರಿಸ್ತ ಪ್ರಜ್ಞೆ: ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರಬೇಕಾದ ಗುರಿ"
ಈಸ್ಟರ್ ಸ್ಮರಣಾರ್ಥ ಧ್ಯಾನದಿಂದ ಆಯ್ದ ಈ ಚಿಕ್ಕ ವೀಡಿಯೊದಲ್ಲಿ, ಸಂತ ಜಾನ್ ನೀಡಿದ ಮೇಲಿನ ಹೇಳಿಕೆಗೆ ಪರಮಹಂಸ ಯೋಗಾನಂದರು ನೀಡಿದ್ದ ಆಳವಾದ ಪ್ರಾಮುಖ್ಯತೆಯನ್ನು ಕುರಿತು ವೈಎಸ್‌ಎಸ್ /ಎಸ್‌ಆರ್‌ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿಯವರು ಚರ್ಚಿಸಿದ್ದಾರೆ; ಮತ್ತು ಯೋಗದಾ ಸತ್ಸಂಗ ಪಾಠಮಾಲಿಕೆಯಲ್ಲಿನ ಬೋಧನೆಗಳು ಮತ್ತು ತಂತ್ರಗಳನ್ನು ಆಚರಣೆಗೆ ತರುವ ಮೂಲಕ ಯೇಸುವಿನಲ್ಲಿ ಪ್ರಕಟವಾದ ಅನಂತ ಪ್ರಜ್ಞೆಯನ್ನು ನಮ್ಮೊಳಗೆ ಮನಗಾಣುವುದು ನಿಜವಾಗಿಯೂ ಸಾಧ್ಯ ಎಂದು ಪರಮಹಂಸಜಿ ಹೇಗೆ ಕಲಿಸಿದರು ಎಂಬುದರ ಬಗ್ಗೆಯೂ ಹೇಳಿದ್ದಾರೆ. .
ಯೇಸುವಿನ ನೀತಿಕಥೆಗಳಲ್ಲಿ ಅಡಗಿರುವ ಸತ್ಯ
ಆಗ ಶಿಷ್ಯರು ಬಂದು ಅವನಿಗೆ ಹೇಳುತ್ತಾರೆ, “ನೀವು ಅವರಿಗೆ ನೀತಿಕಥೆಗಳ ಮೂಲಕ ಏಕೆ ಹೇಳುತ್ತೀರಿ?” ಅದಕ್ಕೆ ಅವನು ಉತ್ತರಿಸಿದ, “ಏಕೆಂದರೆ, ಬ್ರಹ್ಮಾಂಡದ ನಿಗೂಢ ರಹಸ್ಯಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಿಮಗೆ ಕೊಡಲಾಗಿದೆ, ಆದರೆ ಅವರಿಗೆ ಕೊಟ್ಟಿಲ್ಲ…. ಆದ್ದರಿಂದ ಅವರಿಗೆ ನೀತಿಕಥೆಗಳ ಮೂಲಕ ಹೇಳುತ್ತೇನೆ: ಏಕೆಂದರೆ, ಅವರಿಗೆ ಕಂಡರೂ ಕಾಣುವುದಿಲ್ಲ, ಆಲಿಸಿದರೂ ಕೇಳುವುದಿಲ್ಲ ಮತ್ತು ಅವರಿಗೆ ಅರ್ಥವಾಗುವುದೂ ಇಲ್ಲ.”
ನೀತಿಕಥೆಗಳ ಸೂಕ್ಷ್ಮ ವಿವರಣೆಗಳಿಂದ ಜನರಿಗೆ ಏಕೆ ಕಲಿಸುತ್ತೀರಿ ಎಂದು ಯೇಸುವನ್ನು ಅವನ ಶಿಷ್ಯರು ಕೇಳಿದಾಗ, ಅವನು ಉತ್ತರಿಸಿದ: “ನನ್ನ ನಿಜವಾದ ಶಿಷ್ಯರಾದ ನೀವು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತ, ನನ್ನ ಬೋಧನೆಗಳ ಪ್ರಕಾರ ನಿಮ್ಮ ಕಾರ್ಯಗಳನ್ನು ಶಿಸ್ತುಬದ್ಧಗೊಳಿಸುತ್ತಿರುವುದರಿಂದ, ನಿಮ್ಮ ಧ್ಯಾನದಲ್ಲಿ ನಿಮಗಾದ ಆಂತರಿಕ ಜಾಗೃತಿಯಿಂದಾಗಿ ಸ್ವರ್ಗದ ನಿಗೂಢ ರಹಸ್ಯಗಳ ಸತ್ಯವನ್ನು ಮತ್ತು ಭಗವಂತನ ಸಾಮ್ರಾಜ್ಯವನ್ನು ಅಂದರೆ ಬ್ರಹ್ಮಾಂಡ ಭ್ರಮೆಯ ಸ್ಪಂದನಾತ್ಮಕ ಸೃಷ್ಟಿಯ ಹಿಂದೆ ಅಡಗಿರುವ ವಿಶ್ವ ಪ್ರಜ್ಞೆಯನ್ನು ಹೇಗೆ ಹೊಂದುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಅರ್ಹರಾಗಿರುವಿರಿ. ಆದರೆ ತಮ್ಮ ಗ್ರಹಣಶೀಲತೆಯಲ್ಲಿ ಇನ್ನೂ ಸಿದ್ಧರಾಗಿರದ ಸಾಮಾನ್ಯ ಜನತೆಗೆ, ಆಳವಾದ ಜ್ಞಾನ-ಸತ್ಯಗಳನ್ನು ಗ್ರಹಿಸಲಾಗಲಿ ಅಥವಾ ಅಭ್ಯಾಸ ಮಾಡಲಾಗಲಿ ಸಾಧ್ಯವಾಗುವುದಿಲ್ಲ. ನೀತಿಕಥೆಗಳಿಂದ, ಅವರು ತಮ್ಮ ತಿಳುವಳಿಕೆಗೆ ಅನುಗುಣವಾಗಿ ನಾನು ಅವರಿಗೆ ತೋರಿಸಿಕೊಟ್ಟ ಸರಳ ಸತ್ಯಗಳನ್ನು ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸುತ್ತಾರೆ. ತಾವು ಗ್ರಹಿಸಲು ಸಾಧ್ಯವಾದುದನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಮೂಲಕ, ಅವರು ವಿಮೋಚನೆಯ ಕಡೆಗೆ ಸ್ವಲ್ಪ ಮಟ್ಟಿನ ಪ್ರಗತಿಯನ್ನು ಹೊಂದುತ್ತಾರೆ.”….
ಗ್ರಹಣಶೀಲರು ಸತ್ಯವನ್ನು ಗ್ರಹಿಸುತ್ತಾರೆ, ಆದರೆ ಗ್ರಹಣಶೀಲತೆಯಿಲ್ಲದವರು “ಕಂಡರೂ ಕಾಣುವುದಿಲ್ಲ; ಮತ್ತು ಆಲಿಸಿದರೂ ಕೇಳುವುದಿಲ್ಲ, ಅಥವಾ ಅವರು ಅರ್ಥಮಾಡಿಕೊಳ್ಳುವುದೂ ಇಲ್ಲ, ಅದು ಹೇಗೆ”? ಸ್ವರ್ಗದ ಮತ್ತು ಭಗವಂತನ ಸಾಮ್ರಾಜ್ಯದ ಅಂತಿಮ ಸತ್ಯಗಳನ್ನು, ಅಂದರೆ ಸಂವೇದನಾ ಗ್ರಹಿಕೆಯ ಹಿಂದೆ ಇರುವ ಮತ್ತು ತರ್ಕಬದ್ಧ ಮನಸ್ಸಿನ ಚಿಂತನೆಗಳನ್ನು ಮೀರಿದ ವಾಸ್ತವವನ್ನು ಅಂತರ್ಬೋಧೆಯಿಂದ ಮಾತ್ರ ಗ್ರಹಿಸಬಹುದು — ಆತ್ಮದ ಅಂತರ್ಬೋಧಿತ ತಿಳಿವಳಿಕೆ, ಅಂದರೆ ಶುದ್ಧ ಗ್ರಹಿಕೆಯನ್ನು ಜಾಗೃತಗೊಳಿಸುವ ಮೂಲಕ.
ಯೇಸು, ಪೌರಸ್ತ್ಯ ಕ್ರಿಸ್ತ — ಒಬ್ಬ ಅತ್ಯುತ್ಕೃಷ್ಟ ಯೋಗಿ
ಜಗತ್ತು ಕ್ರಿಸ್ತನನ್ನು ಬಹಳ ತಪ್ಪಾಗಿ ಅರ್ಥೈಸಿಕೊಂಡಿದೆ. ಅವನ ಬೋಧನೆಗಳ ಅತ್ಯಂತ ಸರಳ ತತ್ವಗಳನ್ನೂ ಅಪವಿತ್ರಗೊಳಿಸಲಾಗಿದೆ ಮತ್ತು ಅವುಗಳ ನಿಗೂಢ ಆಳವನ್ನು ಮರೆತುಬಿಡಲಾಗಿದೆ. ಅವುಗಳನ್ನು ಸಿದ್ಧಾಂತ, ಪೂರ್ವಾಗ್ರಹ ಮತ್ತು ನಿರ್ಬಂಧಿತ ತಿಳುವಳಿಕೆಯ ಕೈಗಳಲ್ಲಿ ಶಿಲುಬೆಗೇರಿಸಲಾಗಿದೆ. ನರಮೇಧದ ಯುದ್ಧಗಳು ನಡೆದಿವೆ, ಕ್ರಿಶ್ಚಿಯನ್ ಧರ್ಮದ ಮಾನವ ನಿರ್ಮಿತ ಸಿದ್ಧಾಂತಗಳನ್ನು, ದುರುಪಯೋಗಪಡಿಸಿಕೊಂಡ ಅಧಿಕಾರದಿಂದ ಜನರನ್ನು ಮಾಟಗಾತಿಯರು ಮತ್ತು ಸಂಪ್ರದಾಯ ವಿರೋಧಿಗಳು ಎಂದು ಸುಟ್ಟುಹಾಕಲಾಗಿದೆ. ಅಜ್ಞಾನಿಗಳ ಕೈಯಿಂದ ಅಮರ ಬೋಧನೆಗಳನ್ನು ಹೇಗೆ ಸಂರಕ್ಷಿಸುವುದು? ನಾವು ಯೇಸುವನ್ನು ಪೌರಸ್ತ್ಯ ಕ್ರಿಸ್ತ, ಒಬ್ಬ ಅತ್ಯುತ್ಕೃಷ್ಟ ಯೋಗಿ ಎಂದು ತಿಳಿದುಕೊಳ್ಳಬೇಕು, ಅವನು ಭಗವಂತನ ಐಕ್ಯತೆಯ ಸಾರ್ವತ್ರಿಕ ವಿಜ್ಞಾನದ ಮೇಲೆ ಸಂಪೂರ್ಣ ಪಾಂಡಿತ್ಯವನ್ನು ವ್ಯಕ್ತಪಡಿಸಿದ್ದ, ಅದರಿಂದಾಗಿ ಅವನಿಗೆ ಭಗವಂತನ ಧ್ವನಿ ಮತ್ತು ಅಧಿಕಾರದೊಂದಿಗೆ ಮಾತನಾಡಲು ಮತ್ತು ಸಂರಕ್ಷಕನಾಗಿ ವರ್ತಿಸಲು ಸಾಧ್ಯವಾಗಿತ್ತು. ಅವನನ್ನು ಅತಿಯಾಗಿ ಪಾಶ್ಚಾತ್ಯೀರಿಸಲಾಗಿದೆ.
ನಿಗೂಢ ಸತ್ಯವು ಭಗವತ್-ಸಂಸರ್ಗದ ಸಾರ್ವತ್ರಿಕ ಧರ್ಮವನ್ನು ಬಹಿರಂಗಪಡಿಸುತ್ತದೆ
ಧರ್ಮಗ್ರಂಥದ ಸಾಧಾರಣ ವಾಚನವು ಧರ್ಮದ ಸಾರ್ವತ್ರಿಕತೆಯನ್ನು ಸಿದ್ಧಾಂತದಲ್ಲಿ ಮುಳುಗಿಸುತ್ತದೆ. ನಿಗೂಢ ಸತ್ಯವನ್ನು ಅರ್ಥಮಾಡಿಕೊಂಡಾಗ ಏಕತೆಯ ವಿಶಾಲ ದೃಶ್ಯ ತೆರೆದುಕೊಳ್ಳುತ್ತದೆ……ದಿವ್ಯ ಅವತಾರಗಳು ಹೊಸ ಅಥವಾ ವಿಶೇಷವಾದ ಧರ್ಮವನ್ನು ತರಲು ಬರುವುದಿಲ್ಲ, ಆದರೆ ಏಕೈಕ ಧರ್ಮವಾದ ಭಗವತ್-ಸಾಕ್ಷಾತ್ಕಾರವನ್ನು ಪುನಃಸ್ಥಾಪಿಸಲು ಬರುತ್ತಾರೆ.

ಅವನ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಅನೇಕ ಚರ್ಚ್‌ಗಳು ಮತ್ತು ದೇವಾಲಯಗಳಿವೆ, ಅವು ಹೆಚ್ಚಾಗಿ ಸಮೃದ್ಧವೂ ಶಕ್ತಿಯುತವೂ ಆಗಿವೆ. ಆದರೆ ಅವನು ಒತ್ತಿಹೇಳಿದ್ದ ಸಂಸರ್ಗ- ಭಗವಂತನೊಂದಿಗಿನ ನೈಜ ಸಂಪರ್ಕ ಎಲ್ಲಿದೆ? ಮೊಟ್ಟ ಮೊದಲನೆಯದಾಗಿ ಯೇಸುವಿಗೆ ಬೇಕಾಗಿರುವುದು ಮಾನವ ಆತ್ಮಗಳಲ್ಲಿ ದೇವಾಲಯಗಳನ್ನು ಸ್ಥಾಪಿಸುವುದು; ನಂತರ ಭೌತಿಕ ಪೂಜಾ ಸ್ಥಳಗಳಲ್ಲಿ ಬಾಹ್ಯವಾಗಿ ಸ್ಥಾಪಿಸುವುದು. ಆದರೆ ಅದರ ಬದಲು, ಅಪಾರ ಜನಸ್ತೋಮಕ್ಕೆ ಚರ್ಚಿನ ಧರ್ಮವನ್ನು (ಕ್ರೈಸ್ತ ಧರ್ಮವನ್ನಲ್ಲ!) ಬೋಧಿಸಲಾಗುವ ಲೆಕ್ಕವಿಲ್ಲದಷ್ಟು ಬೃಹತ್ ಕಟ್ಟಡಗಳಿವೆ, ಆದರೆ ಆಳವಾದ ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಕ್ರಿಸ್ತನೊಂದಿಗೆ ನಿಜವಾಗಿಯೂ ಸಂಪರ್ಕದಲ್ಲಿರುವವರು ಕೆಲವೇ ಆತ್ಮಗಳು.
ಯೇಸುವಿನ ಸಂದೇಶದ ಅಂತರಂಗವನ್ನು ಮರುಶೋಧಿಸುವುದು
ವೈಯಕ್ತಿಕ ಪ್ರಾರ್ಥನೆ ಮತ್ತು ಭಗವಂತನೊಂದಿಗಿನ ಸಂಸರ್ಗದ ಕೊರತೆಯು ಆಧುನಿಕ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಪಂಥಗಳನ್ನು ಭಗವಂತನ ನೈಜ ಗ್ರಹಿಕೆಯುಳ್ಳ ಯೇಸುವಿನ ಬೋಧನೆಯಿಂದ ಬೇರ್ಪಡಿಸಿದೆ, ಭಗವಂತನು ಕಳುಹಿಸಿದ ಪ್ರವಾದಿಗಳು ಆರಂಭಿಸಿದ ಎಲ್ಲಾ ಧಾರ್ಮಿಕ ಮಾರ್ಗಗಳಲ್ಲಿಯೂ ಇದು ಸತ್ಯವಾಗಿದೆ, ಅಂದರೆ, ಅವರ ಅನುಯಾಯಿಗಳು ನಿಜವಾದ ಭಗವತ್ ಸಂಸರ್ಗವನ್ನು ಬಿಟ್ಟು, ಸಿದ್ಧಾಂತ ಮತ್ತು ಆಚರಣೆಗಳ ಅಡ್ಡಹಾದಿಗಳಲ್ಲಿ ದಿಕ್ಕುತಪ್ಪಿ ಹೋಗುತ್ತಾರೆ. ಯಾವುದೇ ಆತ್ಮೋದ್ಧಾರಕ ತರಬೇತಿಯ ಗೂಢ ತತ್ತ್ವವನ್ನು ಹೊಂದಿರದ ಮಾರ್ಗಗಳು ಸಿದ್ಧಾಂತದಲ್ಲಿ ಮತ್ತು ವಿಭಿನ್ನ ವಿಚಾರಗಳನ್ನು ಹೊಂದಿರುವ ಜನರನ್ನು ಹೊರಗಿಡಲು ಗೋಡೆಗಳನ್ನು ನಿರ್ಮಿಸುವುದರಲ್ಲಿ ನಿರತವಾಗಿರುತ್ತವೆ. ಭಗವಂತನನ್ನು ನಿಜವಾಗಿಯೂ ಗ್ರಹಿಸುವ ದಿವ್ಯ ಪುರುಷರು ತಮ್ಮ ಪ್ರೀತಿಯ ಹಾದಿಯಲ್ಲಿ ಪ್ರತಿಯೊಬ್ಬರನ್ನೂ ಒಳಗೊಳ್ಳುತ್ತಾರೆ, ವಿಶಾಲ ಸಭೆಯ ಪರಿಕಲ್ಪನೆಯಲ್ಲಲ್ಲ, ಆದರೆ ಭಗವಂತನ ಎಲ್ಲ ನೈಜ ಪ್ರೇಮಿಗಳು ಮತ್ತು ಎಲ್ಲಾ ಧರ್ಮಗಳ ಸಂತರೆಡೆಗಿನ ಗೌರವಾನ್ವಿತ ದಿವ್ಯ ಸ್ನೇಹದಲ್ಲಿ.

ಆತ್ಮಗಳ ಯೇಸು ಕ್ರಿಸ್ತನು ಎಲ್ಲರಿಗೂ ತನ್ನ ತೋಳುಗಳನ್ನು ತೆರೆದಿದ್ದಾನೆ, ಯಾರನ್ನೂ ತಿರಸ್ಕರಿಸಿಲ್ಲ, ಮತ್ತು ತನ್ನ ತ್ಯಾಗದ ಮನೋಭಾವ, ವೈರಾಗ್ಯ, ಕ್ಷಮೆ, ಸ್ನೇಹಿತ ಮತ್ತು ಶತ್ರುವಿನೆಡೆಗೆ ಸಮಾನ ಪ್ರೀತಿ, ಎಲ್ಲಕ್ಕಿಂತ ಹೆಚ್ಚಾಗಿ ದೇವರ ಮೇಲಿನ ಪ್ರೀತಿಯ ಉದಾಹರಣೆಯ ಮೂಲಕ ವಿಮೋಚನೆಯ ಹಾದಿಯಲ್ಲಿ ತನ್ನನ್ನು ಅನುಸರಿಸಲು ಸಾರ್ವತ್ರಿಕ ಪ್ರೀತಿಯಿಂದ ಜಗತ್ತನ್ನು ಪ್ರೇರೇಪಿಸಿದನು. ಬೆತ್ಲೆಹೆಮ್‌ನ ಕೊಟ್ಟಿಗೆಯಲ್ಲಿದ್ದ ಪುಟ್ಟ ಹಸುಳೆಯಾಗಿ, ಹಾಗೂ ರೋಗಿಗಳನ್ನು ವಾಸಿಮಾಡಿದ, ಸತ್ತವರನ್ನು ಬದುಕಿಸಿದ ಮತ್ತು ತಪ್ಪುಗಳ ಗಾಯಗಳ ಮೇಲೆ ಪ್ರೀತಿಯ ಲೇಪವನ್ನು ಹಚ್ಚಿದ ಸಂರಕ್ಷಕನಾಗಿ, ಯೇಸುವಿನಲ್ಲಿರುವ ಕ್ರಿಸ್ತನು ಮನುಷ್ಯರಲ್ಲಿ ಒಬ್ಬನಾಗಿ ಜೀವಿಸಿದನು, ಅವರೂ ದೇವತೆಗಳಂತೆ ಬದುಕಲು ಕಲಿಯಲೆಂದು.
ಭಗವಂತನ ವರ್ಣನಾತೀತ ಪ್ರೀತಿ
“ನೀವು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನನ್ನ ಮಾತುಗಳು ನಿಮ್ಮಲ್ಲಿ ನೆಲೆಗೊಂಡಿದ್ದರೆ, ನೀವು ಏನು ಕೇಳಿದರೂ ಅದನ್ನು ನಿಮಗಾಗಿ ನಡೆಸಿಕೊಡಲಾಗುತ್ತದೆ….
“ತಂದೆಯು ನನ್ನನ್ನು ಪ್ರೀತಿಸಿದಂತೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ: ನೀವು ನನ್ನ ಪ್ರೀತಿಯಲ್ಲಿ ಮುಂದುವರಿಯಿರಿ. ನೀವು ನನ್ನ ಅನುಶಾಸನಗಳನ್ನು ಪಾಲಿಸಿದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುತ್ತೀರಿ; ನಾನು ನನ್ನ ತಂದೆಯ ಅನುಶಾಸನಗಳನ್ನು ಪಾಲಿಸಿ, ಅವನ ಪ್ರೀತಿಯಲ್ಲಿ ನೆಲೆಸಿದಂತೆ. ನನ್ನ ಆನಂದವು ನಿಮ್ಮಲ್ಲಿ ಉಳಿಯುವಂತಾಗಲಿ ಮತ್ತು ನಿಮ್ಮ ಆನಂದವು ಪೂರ್ಣವಾಗಿರಲಿ ಎಂದು ನಾನು ಈ ವಿಷಯಗಳನ್ನು ನಿಮಗೆ ಹೇಳಿದ್ದೇನೆ.”
“ನೀವು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನನ್ನ ಮಾತುಗಳು ನಿಮ್ಮಲ್ಲಿ ನೆಲೆಗೊಂಡಿದ್ದರೆ,” — ಅಂದರೆ ಅವರ ಪ್ರಜ್ಞೆಯು ಕ್ರಿಸ್ತ ಪ್ರಜ್ಞೆಯೊಂದಿಗೆ ಮತ್ತು ಅದರ ವಿಶ್ವ ಸ್ಪಂದನದ ಹೊರಹೊಮ್ಮುವಿಕೆಗಳೊಂದಿಗೆ ಪರಿಪೂರ್ಣವಾಗಿ ಶ್ರುತಿಗೂಡಿದ್ದರೆ, ಅವರು ಸರ್ವವ್ಯಾಪಿ ಸೃಜನಾತ್ಮಕ ತತ್ವವನ್ನು ನಿರ್ವಹಿಸುವ ಮೂಲಕ ಅಗಣಿತ ಅದ್ಭುತಗಳನ್ನು ಪ್ರದರ್ಶಿಸಬಹುದು ಎಂದು ಯೇಸು ತನ್ನ ಶಿಷ್ಯರಿಗೆ ಭರವಸೆ ನೀಡಿದ….
ನಂತರ ಯೇಸುವು ಅವರಿಗೆ, ಭಕ್ತನ ಹೃದಯಕ್ಕೆ ಅದಕ್ಕಿಂತ ಪ್ರಿಯವಾದ ಯಾವ ಮಾತೂ ಇಲ್ಲದಂತಹ ಅಮೂಲ್ಯವಾದ ಮಾತುಗಳನ್ನು ಹೇಳಿದನು, ಅದೇನೆಂದರೆ, ಪರಮ ಪಿತನು ತನ್ನನ್ನು ಪ್ರೀತಿಸಿದ ಅದೇ ದಿವ್ಯ, ನಿಷ್ಪಕ್ಷಪಾತ, ಚಿರಂತನ ಪ್ರೀತಿಯಿಂದ ಅವರನ್ನು ಪ್ರೀತಿಸಿದನೆಂದು…. ಈ ಶ್ಲೋಕಗಳಲ್ಲಿ ಯೇಸು ಹೇಳಿದ ಪ್ರೀತಿಯನ್ನು ಊಹಿಸಲು ಪ್ರಯತ್ನಿಸಿ….
ಎಲ್ಲ ಶುದ್ಧ ಹೃದಯಗಳ ಆತ್ಮ-ಪ್ರೀತಿಯನ್ನು ಅನುಭವಿಸುವುದೆಂದರೆ, ಅಪಾರ ಆನಂದದ ಭಾವಪರವಶತೆಯಲ್ಲಿ ಮೈಮರೆಯುವುದು, ಅದನ್ನು ತಡೆದುಕೊಳ್ಳಲು ಸಾಧ್ಯವಾಗದಷ್ಟು ಅದು ಅಗಾಧವಾಗಿರುತ್ತದೆ—ಒಬ್ಬರ ಅಸ್ತಿತ್ವದ ಮೂಲಕ ಹಾದುಹೋಗುವ ಆನಂದದ ಆವೇಶ, ಸಾವಿರ ಮಿಲಿಯನ್ ವೋಲ್ಟ್‌ಗಳ ಆನಂದಪರವಶ ಶಕ್ತಿ. ಈ ದಿವ್ಯ ಭಾವನೆಯು ವಿವರಣಾತೀತವಾಗಿದೆ — ಅನಂತ ಅನುಗ್ರಹ, ವರ್ಣನಾತೀತ ಮಹಿಮೆ, ಶಾಶ್ವತ ರಕ್ಷಣೆಯೊಂದಿಗೆ ಅನಿರ್ವಚನೀಯ ಮಾಧುರ್ಯದ ಸಂಸರ್ಗ. ಅದೇ ಯೇಸು ಅನುಭವಿಸಿದ ಭಗವತ್‌ಪ್ರೇಮ ಮತ್ತು ಅದರಲ್ಲಿ ಅವನು ತನ್ನ ಶಿಷ್ಯರಿಗೆ ಆಶ್ರಯ ನೀಡಿದನು: “ತಂದೆಯು ನನ್ನನ್ನು ಪ್ರೀತಿಸಿದಂತೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ: ನೀವು ನನ್ನ ಪ್ರೀತಿಯಲ್ಲಿ ಮುಂದುವರಿಯಿರಿ.”

ಈ ಪವಿತ್ರ ಸಂದರ್ಭದಲ್ಲಿ ಯೇಸುವು ಆಡಿದ ಮಾತುಗಳ ದಾಖಲೆಯನ್ನು ಸುವಾರ್ತೆ ಉಳಿಸಿಕೊಂಡು ಬಂದಿದೆ; ಆದರೆ ಓದುಗರು ಆ ನುಡಿಗಳ ಹಿಂದೆ ಭಗವಂತನ ಸ್ಪಷ್ಟವಾದ ಸ್ಪಂದನದ ಉಪಸ್ಥಿತಿಯಿದೆ ಎಂದು ಅರಿತುಕೊಳ್ಳಬೇಕು ಮತ್ತು ತಾವೂ ಸಹ ಅಲ್ಲಿಯೇ ಇದ್ದಂತೆ ತಮ್ಮೊಳಗೆ ಅನುಭವಿಸಲು ಪ್ರಯತ್ನಿಸಬೇಕು. ತನ್ನ ಶಿಷ್ಯರೊಂದಿಗೆ ಯೇಸುವಿನ ಕೊನೆಯ ಭೋಜನದಂತಹ ಸತ್ಸಂಗದ ಸಮಯಗಳಲ್ಲಿ, ಗ್ರಹಣಶೀಲರಾಗಿರುವ ಜನರು, ಗುರುವು ಮಾತನಾಡುವಾಗ, ತಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಸುರಿಯುತ್ತಿರುವ ಭಗವಂತನ ಗ್ರಹಿಕೆಯ ಉನ್ನತ ಪ್ರಜ್ಞೆಗೆ ರವಾನೆಯಾಗುತ್ತಾರೆ. ಆಳವಾದ, ಆರಾಧನಾ ಧ್ಯಾನದ ಆಂತರಿಕ ಮಂದಿರದಲ್ಲಿ ಭಕ್ತನು ಗುರುಕೃಪೆಯನ್ನು ಕರೆದಾಗಲೆಲ್ಲ ಈ ಶ್ರುತಿಗೂಡುವಿಕೆಯು ಅವನ ಪ್ರಜ್ಞೆಯನ್ನು ಅತ್ಯುನ್ನತ ರೀತಿಯಲ್ಲಿ ಆವರಿಸುತ್ತದೆ.
ಯೇಸುವಿನ ಪುನರುತ್ಥಾನ, ಮತ್ತು ಅವನ ನಿತ್ಯ-ಜೀವಂತ ಉಪಸ್ಥಿತಿ
ಅತ್ಯುನ್ನತ ಯುಗಗಳ ಉದಯಕಾಲದಿಂದಲೂ ಭಾರತದ ತಜ್ಞ ಯೋಗಿಗಳಿಂದ ಪುನರುತ್ಥಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಸ್ವತಃ ಯೇಸುವೇ ಅನುಭಾವಿ ಯೋಗಿಯಾಗಿದ್ದ: ಯೋಗಿಯೆಂದರೆ, ಜೀವನ್ಮರಣದ ಆಧ್ಯಾತ್ಮಿಕ ವಿಜ್ಞಾನವನ್ನು ಭಗವತ್-ಸಂಸರ್ಗವನ್ನು ಮತ್ತು ಭಗವಂತನ ಸಂಯೋಗವನ್ನು ತಿಳಿದವರು ಮತ್ತು ಕರಗತ ಮಾಡಿಕೊಂಡವರು, ಮಾಯೆಯಿಂದ ವಿಮೋಚನೆ ಪಡೆದು ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸುವ ವಿಧಾನವನ್ನು ತಿಳಿದಿದ್ದವರು. ಯೇಸುವು ತನ್ನ ಜೀವನ ಮತ್ತು ಮರಣದುದ್ದಕ್ಕೂ ತನ್ನ ದೇಹ ಮತ್ತು ಮನಸ್ಸಿನ ಮೇಲೆ ಮತ್ತು ಅವಿಧೇಯ ಪ್ರಕೃತಿಯ ಶಕ್ತಿಗಳ ಮೇಲೆ ಸಂಪೂರ್ಣ ಪ್ರಭುತ್ವದ ಶಕ್ತಿಯನ್ನು ತೋರಿಸಿದ. ಯೇಸುವು ಶಿಲುಬೆಗೇರಿಸಿದ ತನ್ನ ದೇಹವನ್ನು ಮುಕ್ತಿ ಹಾಗೂ ಭಗವಂತನ ಬೆಳಕಿನಲ್ಲಿ ಪುನರುತ್ಥಾನಗೊಳಿಸಿರುವ ಹಿಂದೆ ಅಡಗಿರುವ ತತ್ತ್ವಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಯೋಗ ವಿಜ್ಞಾನವನ್ನು ನಾವು ಗ್ರಹಿಸಿದಾಗ ಪುನರುತ್ಥಾನವನ್ನು ಅದರ ನಿಜವಾದ ಅರ್ಥದಲ್ಲಿ ಅರ್ಥಮಾಡಿಕೊಳ್ಳುತ್ತೇವೆ….
ಬೇರೆ ಯಾವುದೇ ವಿಜ್ಞಾನವು ಭಗವಂತನ ವೈಯಕ್ತಿಕ ಪ್ರಜ್ಞೆಯು ಆತ್ಮವಾಗಿ ಮನುಷ್ಯನೊಳಗೆ ಅವರೋಹಿಸಿದುದನ್ನು ಮತ್ತು ಪುನಃ ಪರಮಾತ್ಮನಲ್ಲಿ ಅದರ ವಿಕಸನೀಯ ಮತ್ತು ಆಧ್ಯಾತ್ಮಿಕ ಆರೋಹಣವನ್ನು ವಿವರಿಸಿಲ್ಲ. ಅಂಧಕಾರದ ಯುಗಗಳಲ್ಲಿ ಕಳೆದುಹೋದ ನಂತರ, ಕ್ರಿಯಾ ಯೋಗವನ್ನು ಈ ಆಧುನಿಕ ಯುಗದಲ್ಲಿ, ಬೆಳಕಿಗೆ ತರಲಾಯಿತು, ಇದು ಮಾನವ ಪ್ರಜ್ಞೆಯ ಆಧ್ಯಾತ್ಮಿಕ ವಿಕಸನವನ್ನು ತ್ವರಿತಗೊಳಿಸುವ ಮತ್ತು ಆರೋಹಣದ ಆಂತರಿಕ ಮಿದುಳು- ಮೇರುದಂಡದ ಮಾರ್ಗವನ್ನು ತೆರೆದು, ಆತ್ಮವನ್ನು ಆಧ್ಯಾತ್ಮಿಕ ಚಕ್ಷುವಿನ ಮೂಲಕ ಹೋಲಿ ಘೋಸ್ಟ್, ಅಂದರೆ ಕ್ರಿಸ್ತ ಪ್ರಜ್ಞೆ, ಮತ್ತು ಪರಮಪಿತನ ವಿಶ್ವಪ್ರಜ್ಞೆಯ ಸಾಮ್ರಾಜ್ಯಕ್ಕೆ ಬಿಡುಗಡೆಗೊಳಿಸುವ ಒಂದು ನಿರ್ದಿಷ್ಟ ವಿಧಾನವಾಗಿದೆ.
ಭಗವಂತನ ಸಾಮ್ರಾಜ್ಯ ನಿಮ್ಮೊಳಗಿದೆ
“ನಿಮ್ಮೊಳಗಿರುವ ಭಗವಂತನ ಸಾಮ್ರಾಜ್ಯ” ವನ್ನು ಪ್ರವೇಶಿಸಲು ಯೇಸುಕ್ರಿಸ್ತನ ಬೋಧನೆಗಳು ಮತ್ತು ಮಾನವನಲ್ಲಿ ಭಗವಂತನ ಪ್ರತಿಬಿಂಬವಾದ ರಾಜ-ಆತ್ಮವನ್ನು ಅದರ ಶಾರೀರಿಕ ಸಾಮ್ರಾಜ್ಯದ ನ್ಯಾಯಯುತ ಆಳ್ವಿಕೆಯನ್ನು ಆತ್ಮದ ಪ್ರಜ್ಞೆಯ ದಿವ್ಯ ಸ್ಥಿತಿಗಳ ಪೂರ್ಣ ಅರಿವಿನೊಂದಿಗೆ ಪುನಃಸ್ಥಾಪಿಸಲು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಪ್ರತಿಪಾದಿಸಿರುವ ಯೋಗದ ಬೋಧನೆಗಳ ನಡುವೆ ಒಂದು ಸುಂದರವಾದ ಸಾಮರಸ್ಯವಿದೆ. ಮಾನವನು ದಿವ್ಯ ಪ್ರಜ್ಞೆಯ ಆಂತರಿಕ ಸಾಮ್ರಾಜ್ಯದಲ್ಲಿ ನೆಲೆಗೊಂಡಾಗ, ಜಾಗೃತವಾದ ಆತ್ಮದ ಅಂತರ್ಬೋಧಿತ ಗ್ರಹಿಕೆಯು ಭೌತ ದ್ರವ್ಯ, ಪ್ರಾಣ ಶಕ್ತಿ ಮತ್ತು ಪ್ರಜ್ಞೆಯ ಮುಸುಕುಗಳನ್ನು ಭೇದಿಸುತ್ತದೆ ಮತ್ತು ಎಲ್ಲಾ ವಸ್ತುಗಳ ಹೃದಯದಲ್ಲಿ ಭಗವಂತನ ಸಾರವನ್ನು ತೆರೆದು ತೋರಿಸುತ್ತದೆ….
ರಾಜಯೋಗ, ಅಂದರೆ ಭಗವತ್-ಸಂಯೋಗದ ರಾಜೋಚಿತ ಮಾರ್ಗವು ಒಬ್ಬರ ಒಳಗೆ ಇರುವ ಭಗವಂತನ ಸಾಮ್ರಾಜ್ಯದ ನೈಜ ಸಾಕ್ಷಾತ್ಕಾರದ ವಿಜ್ಞಾನವಾಗಿದೆ. ನಿಜವಾದ ಗುರುವಿನಿಂದ ದೀಕ್ಷೆಯ ಸಮಯದಲ್ಲಿ ಪಡೆದ ಆಂತರೀಕರಣದ ಪವಿತ್ರ ಯೋಗ ತಂತ್ರಗಳ ಅಭ್ಯಾಸದ ಮೂಲಕ, ಅತೀಂದ್ರಿಯ ಪ್ರಜ್ಞೆಯ ಸ್ವರ್ಗೀಯ ಪ್ರದೇಶಗಳಿಗೆ ಹೆಬ್ಬಾಗಿಲುಗಳಾದ ಬೆನ್ನುಹುರಿ ಮತ್ತು ಮಿದುಳಿನಲ್ಲಿರುವ ಪ್ರಾಣಶಕ್ತಿ ಮತ್ತು ಪ್ರಜ್ಞೆಯ ಸೂಕ್ಷ್ಮ ಮತ್ತು ಕಾರಣ ಕೇಂದ್ರಗಳನ್ನು ಜಾಗೃತಗೊಳಿಸುವ ಮೂಲಕ ಆ ಸಾಮ್ರಾಜ್ಯವನ್ನು ಕಂಡುಕೊಳ್ಳಬಹುದು. ಅಂತಹ ಜಾಗೃತಿಯನ್ನು ಸಾಧಿಸುವವನು ಸರ್ವವ್ಯಾಪಿ ಭಗವಂತನನ್ನು ಅವನ ಅನಂತ ಪ್ರಕೃತಿಯಲ್ಲಿ ಮತ್ತು ಒಬ್ಬರ ಆತ್ಮದ ಪರಿಶುದ್ಧತೆಯಲ್ಲಿ ಹಾಗೂ ಪರಿವರ್ತನಶೀಲ ಭೌತ ರೂಪಗಳು ಮತ್ತು ಶಕ್ತಿಗಳ ಭ್ರಮಾತ್ಮಕ ಹೊದಿಕೆಗಳಲ್ಲೂ ಕಾಣುತ್ತಾನೆ.

ಯೇಸುವು ಬೋಧನೆಗಳಲ್ಲಿ ಬಹಳ ಆಳಕ್ಕೆ ಹೋಗಿದ್ದಾನೆ, ಅವು ಮೇಲ್ನೋಟಕ್ಕೆ ಮಾತ್ರ ಸರಳವೆಂದು ಕಂಡುಬರುತ್ತವೆ—ಹೆಚ್ಚಿನ ಜನರು ಅರ್ಥಮಾಡಿಕೊಳ್ಳುವುದಕ್ಕಿಂತ ಬಹಳ ಆಳ….[ಅವನ ಬೋಧನೆಗಳಲ್ಲಿ] ಯೋಗದ, ಧ್ಯಾನದ ಮೂಲಕ ದೈವೀ ಐಕ್ಯತೆಯ ಅತೀಂದ್ರಿಯ ಮಾರ್ಗದ ಸಮಸ್ತ ವಿಜ್ಞಾನವಿದೆ.