ಅಂತರ್ಬೋಧೆ. ಇಂದ್ರಿಯಗಳ ಮಧ್ಯಸ್ಥಿಕೆಯಿಲ್ಲದೆ ಸತ್ಯದ ನೇರಗ್ರಹಿಕೆಯನ್ನು ಅನುಭವಿಸಲು ಮನುಷ್ಯನಿಗೆ ಅನುವು ಮಾಡಿಕೊಡುವ ಆತ್ಮದ ಎಲ್ಲ ಬಲ್ಲ ಸಾಮರ್ಥ್ಯ.
ಅತೀತಪ್ರಜ್ಞೆ. ಪರಿಶುದ್ಧ, ಅಂತರ್ಬೋಧಿತ, ಸರ್ವವೀಕ್ಷಕ, ನಿತ್ಯಾನಂದಮಯ ಆತ್ಮದ ಪ್ರಜ್ಞೆ. ಧ್ಯಾನದಲ್ಲಿ ಅನುಭವಿಸುವ ಸಮಾಧಿ (ಸಮಾಧಿ ನೋಡಿ)ಯ ಎಲ್ಲಾ ವಿವಿಧ ಸ್ಥಿತಿಗಳನ್ನು ಸೂಚಿಸಲು ಈ ಪದವನ್ನು ಕೆಲವೊಮ್ಮೆ ಸಾಮಾನ್ಯವಾಗಿ ಬಳಸಲಾಗುತ್ತದೆ, ಆದರೆ ನಿರ್ದಿಷ್ಟವಾಗಿ ಸಮಾಧಿಯ ಮೊದಲ ಸ್ಥಿತಿ, ಇದರಲ್ಲಿ ಒಬ್ಬ ವ್ಯಕ್ತಿಯು ಅಹಂ ಪ್ರಜ್ಞೆಯನ್ನು ಅತಿಶಯಿಸಿರುತ್ತಾನೆ ಹಾಗೂ ತನ್ನನ್ನು ತಾನು ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿರುವಂತಹ ಆತ್ಮ ಎಂದು ಅರಿತಿರುತ್ತಾನೆ. ಅಲ್ಲಿಂದ ಮುಂದಕ್ಕೆ ಸಾಕ್ಷಾತ್ಕಾರದ ಉನ್ನತ ಸ್ಥಿತಿಗಳು ಬರುತ್ತವೆ: ಕೂಟಸ್ಥ ಚೈತನ್ಯ ಅಥವಾ ಕ್ರಿಸ್ತ ಪ್ರಜ್ಞೆ ಹಾಗೂ ಬ್ರಹ್ಮಾಂಡ ಪ್ರಜ್ಞೆ (ಬ್ರಹ್ಮಾಂಡ ಪ್ರಜ್ಞೆ ನೋಡಿ).
ಅತೀತಪ್ರಜ್ಞೆಯ ಮನಸ್ಸು. ಸತ್ಯವನ್ನು ನೇರವಾಗಿ ಗ್ರಹಿಸುವ ಆತ್ಮದ ಸರ್ವವನ್ನೂ ಅರಿಯುವ ಶಕ್ತಿ; ಅಂತರ್ಬೋಧೆ.
ಅರ್ಜುನ. ಭಗವಾನ್ ಕೃಷ್ಣನು ಭಗವದ್ಗೀತೆಯ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ) ಅಮರ ಸಂದೇಶವನ್ನು ಈ ಶಿಷ್ಯನಿಗೆ ಉಪದೇಶಿಸುತ್ತಾನೆ; ಹಿಂದೂ ಮಹಾಕಾವ್ಯವಾದ ಮಹಾಭಾರತದ ಪಂಚಪಾಂಡವ ರಾಜಕುಮಾರರಲ್ಲಿ ಒಬ್ಬನು, ಅದರಲ್ಲಿ ಅವನು ಪ್ರಮುಖ ವ್ಯಕ್ತಿಯಾಗಿದ್ದಾನೆ.
ಅವತಾರ. ಇದು ಸಂಸ್ಕೃತದ ಅವತಾರದ ಮೂಲ ಧಾತು ಶಬ್ದ ಅವ ಎಂದರೆ “ಕೆಳಕ್ಕೆ” ಮತ್ತು ತೃ ಎಂದರೆ “ಚಲಿಸುವಿಕೆ.” ಯಾರು ಪರಮಾತ್ಮನಲ್ಲಿ ಐಕ್ಯತೆ ಸಾಧಿಸಿರುತ್ತಾರೋ ಮತ್ತು ನಂತರ ಮಾನವ ಜನಾಂಗ ಕಲ್ಯಾಣಕ್ಕಾಗಿ ಮರಳಿ ಈ ಧರೆಗೆ ಬರುತ್ತಾರೋ ಅವರನ್ನು ಅವತಾರ ಎನ್ನುತ್ತಾರೆ. ದಿವ್ಯ ದೇಹ ಧಾರಣೆ.
ಅವಿದ್ಯೆ. ಅಕ್ಷರಶಃ “ಜ್ಞಾನವಿಲ್ಲದಿರುವುದು,” ಅಜ್ಞಾನ; ಮಾನವನಲ್ಲಿ ಮಾಯೆ ಅಥವಾ ಬ್ರಹ್ಮಾಂಡ ಭ್ರಮೆಯ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ) ಅಭಿವ್ಯಕ್ತಿ. ಸಾರಭೂತವಾಗಿ ಅವಿದ್ಯೆ ಎಂದರೆ ತನ್ನ ದಿವ್ಯ ಸ್ವರೂಪದ ಬಗ್ಗೆ ಹಾಗೂ ಪರಮಾತ್ಮ ಎಂಬ ಏಕೈಕ ಸತ್ಯದ ಬಗ್ಗೆ ಮಾನವನಿಗಿರುವ ಅಜ್ಞಾನ.
ಅಹಂ. ದ್ವೈತ ಅಥವಾ ಮಾನವ ಹಾಗೂ ಸೃಷ್ಟಿಕರ್ತನ ನಡುವೆ ತೋರಿಕೆಯ ಪ್ರತ್ಯೇಕತೆಗೆ ಮೂಲ ಕಾರಣ ಅಹಂಕಾರ (ಅಕ್ಷರಶಃ “ನಾನು ಮಾಡುತ್ತೇನೆ”)—ತತ್ತ್ವ. ಅಹಂಕಾರವು ಮಾನವರನ್ನು ಮಾಯೆಯ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ) ಪ್ರಭಾವಕ್ಕೊಳಪಡಿಸುತ್ತದೆ, ಅದರಿಂದಾಗಿ ವಿಷಯವಾದ (subject) ಅಹಂ ವಸ್ತುವಿನಂತೆ (object) ತಪ್ಪಾಗಿ ಕಂಡುಬರುತ್ತದೆ; ಸೃಷ್ಟಿಸಲ್ಪಟ್ಟವರು ತಮ್ಮನ್ನು ತಾವೇ ಸೃಷ್ಟಿಕರ್ತರು ಎಂದುಕೊಳ್ಳುತ್ತಾರೆ. ಅಹಂ ಪ್ರಜ್ಞೆಯನ್ನು ಹೋಗಲಾಡಿಸುವ ಮೂಲಕ ಮಾನವನು ತನ್ನ ದಿವ್ಯ ಸ್ವಸ್ವರೂಪಕ್ಕೆ, ಅಂದರೆ, ಏಕೈಕ ಪ್ರಾಣವಾದ ಭಗವಂತನೊಂದಿಗಿನ ಐಕ್ಯತೆಯನ್ನು ಅರಿಯುತ್ತಾನೆ.
ಆಕಾಶ. ಸಂಸ್ಕೃತ ಶಬ್ದ ಆಕಾಶ, ನಿರ್ದಿಷ್ಟವಾಗಿ ಭೌತ ಪ್ರಪಂಚದಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಸ್ಪಂದನಾತ್ಮಕ ಅಂಶವನ್ನು ಸೂಚಿಸುತ್ತದೆ. (ಪಂಚತತ್ವಗಳು ನೋಡಿ). ಇದು ಆ, “ಅಭಿಮುಖವಾಗಿ” ಮತ್ತು ಕಾಶ, “ಗೋಚರಿಸಲು, ಪ್ರಕಟವಾಗಲು” ಶಬ್ದಗಳಿಂದ ಜನ್ಯವಾಗಿದೆ. ಆಕಾಶವು ಅದರ ಎದುರಿನಲ್ಲಿ ಭೌತಿಕ ಪ್ರಪಂಚದಲ್ಲಿರುವ ಎಲ್ಲವನ್ನೂ ಕಾಣಬಹುದಾದಂತಹ ಒಂದು ಸೂಕ್ಷ್ಮ “ಹಿನ್ನೆಲೆಯಾಗಿದೆ.” “ಖಾಲಿ ಜಾಗವು ವಸ್ತುಗಳಿಗೆ ಆಯಾಮವನ್ನು ನೀಡುತ್ತದೆ; ಆಕಾಶವು ಆಕೃತಿಗಳನ್ನು ಬೇರ್ಪಡಿಸುತ್ತದೆ,” ಎಂದು ಪರಮಹಂಸ ಯೋಗಾನಂದರು ಹೇಳಿದ್ದಾರೆ. “ಆಕಾಶ-ವ್ಯಾಪಿತ ಖಾಲಿ ಜಾಗವು ಸ್ವರ್ಗ ಅಥವಾ ಸೂಕ್ಷ್ಮ ಲೋಕ ಮತ್ತು ಭೂಮಿಗಳ ನಡುವಿನ ಗಡಿರೇಖೆ” ಎಂದು ಅವರು ವಿವರಿಸಿದರು. “ಭಗವಂತನು ಸೃಷ್ಟಿಸಿರುವ ಎಲ್ಲ ಸೂಕ್ಷ್ಮ ಶಕ್ತಿಗಳು ಬೆಳಕಿನಿಂದ ಅಥವಾ ಆಲೋಚನಾ-ರೂಪಗಳಿಂದ ರಚಿತವಾಗಿವೆ ಮತ್ತು ಅವು ಆಕಾಶವೆಂದು ಅಭಿವ್ಯಕ್ತಿಗೊಳ್ಳುವ ಒಂದು ನಿರ್ದಿಷ್ಟ ಸ್ಪಂದನದ ಹಿಂದೆ ಸುಮ್ಮನೆ ಅಡಗಿವೆ.”
ಆತ್ಮ. ವ್ಯಕ್ತೀಕರಿಸಿದ ಚೇತನ. ಆತ್ಮವು ಮಾನವನ ಹಾಗೂ ಜೀವಿಗಳ ಎಲ್ಲ ಜೀವಂತ ಸ್ವರೂಪಗಳ ನೈಜ ಹಾಗೂ ಅಮರ ಪ್ರಕೃತಿ. ತಾತ್ಕಾಲಿಕವಾಗಿ ಅದು ಕಾರಣ ಸಂಬಂಧಿ, ಸೂಕ್ಷ್ಮ ಹಾಗೂ ದೈಹಿಕ ಶರೀರಗಳ ಹೊದಿಕೆಯನ್ನು ಹೊದ್ದಿದೆ. ಆತ್ಮದ ಪ್ರಕೃತಿಯೇ ಚೇತನ; ನಿತ್ಯ-ಸಂಭವ, ನಿತ್ಯ-ಪ್ರಜ್ಞ, ನಿತ್ಯ-ನೂತನ-ಆನಂದ.
ಆತ್ಮನ್ ಅಥವಾ ಆತ್ಮವು, ವ್ಯಕ್ತಿತ್ವ ಅಥವಾ ಅಹಂ (ಅಹಂ ನೋಡಿ) ಆದ ಸಾಮಾನ್ಯ ವ್ಯಕ್ತಿತ್ವಕ್ಕಿಂತ ಬೇರೆಯಾದುದು ಎಂದು ಸೂಚಿಸಲು ಪದವನ್ನು ದೊಡ್ಡಕ್ಷರದಿಂದ (ಇಂಗ್ಲಿಷ್‌ನಲ್ಲಿ) ಪ್ರಾರಂಭಿಸಲಾಗಿದೆ. ಆತ್ಮವು ವ್ಯಕ್ತೀಕರಿಸಿದ ಚೇತನವಾಗಿದೆ, ಅದರ ಪ್ರಕೃತಿಯು ನಿತ್ಯ ಪ್ರಸ್ತುತ, ನಿತ್ಯ-ಪ್ರಜ್ಞ ಮತ್ತು ನಿತ್ಯ ನೂತನ ಆನಂದವಾಗಿದೆ. ಧ್ಯಾನದ ಮೂಲಕ ಆತ್ಮದ ಸ್ವಭಾವದ ದಿವ್ಯ ಗುಣಗಳನ್ನು ಮನಗಾಣಬಹುದು.
ಆತ್ಮ-ಸಾಕ್ಷಾತ್ಕಾರ. ಪರಮಹಂಸ ಯೋಗಾನಂದರು ಆತ್ಮ-ಸಾಕ್ಷಾತ್ಕಾರವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಿದ್ದಾರೆ: “ಆತ್ಮ-ಸಾಕ್ಷಾತ್ಕಾರವೆಂದರೆ ಭಗವಂತನ ವ್ಯಾಪಕತೆಯೊಂದಿಗೆ ನಾವು ಒಂದಾಗಿದ್ದೇವೆಂದು, ಶರೀರ, ಮನಸ್ಸು ಮತ್ತು ಆತ್ಮಗಳಲ್ಲಿ ಅರಿಯುವುದು; ಅದು ನಮಗೆ ಬರಲೆಂದು ನಾವು ಪ್ರಾರ್ಥಿಸಬೇಕಾಗಿಲ್ಲ, ಸದಾಕಾಲ ನಾವು ಅದರ ಹತ್ತಿರ ಇರುವುದಷ್ಟೇ ಅಲ್ಲ, ಭಗವಂತನ ಸರ್ವವ್ಯಾಪಿತ್ವವೇ ನಮ್ಮ ಸರ್ವವ್ಯಾಪಿತ್ವ; ನಾವು ಇಂದಿಗೂ ಎಂದೆಂದಿಗೂ ಅವನ ಭಾಗವಾಗಿರುತ್ತೇವೆ. ನಮ್ಮ ಅರಿವನ್ನು ವೃದ್ಧಿಸಿಕೊಳ್ಳುವುದಷ್ಟೇ ನಾವು ಮಾಡಬೇಕಾಗಿರುವುದು.”
ಆಧ್ಯಾತ್ಮಿಕ ಚಕ್ಷು. ಭ್ರೂಮಧ್ಯದಲ್ಲಿ ಕ್ರಿಸ್ತ (ಕೂಟಸ್ಥ) ಕೇಂದ್ರ (ಆಜ್ಞಾ ಚಕ್ರ)ದಲ್ಲಿರುವ ಅಂತರ್ಬೋಧೆ ಹಾಗೂ ಸರ್ವವ್ಯಾಪಿ ಗ್ರಹಣಶೀಲತೆಯ ಏಕ ಚಕ್ಷು. ಆಳವಾಗಿ ಧ್ಯಾನ ಮಾಡುತ್ತಿರುವ ಭಕ್ತನು ಆಧ್ಯಾತ್ಮಿಕ ಚಕ್ಷುವನ್ನು ಕ್ಷೀರಸ್ಫಟಿಕ ನೀಲಿ ಗೋಳವನ್ನು ಸುತ್ತುವರೆದಿರುವ ಹೊಂಬಣ್ಣದ ಬೆಳಕಿನ ಉಂಗುರದ ಮಧ್ಯದಲ್ಲಿ ಪಂಚಭುಜಾಕೃತಿಯ ಶ್ವೇತ ನಕ್ಷತ್ರವಿರುವಂತೆ ಕಾಣುತ್ತಾನೆ. ಪಿಂಡಾಂಡ ಜಗತ್ತಿಗೆ ಸಂಬಂಧಿಸಿದಂತೆ, ಈ ರೂಪಗಳು ಹಾಗೂ ವರ್ಣಗಳು ಅನುಕ್ರಮವಾಗಿ, ಸೃಷ್ಟಿಯ ಸ್ಪಂದನಾತ್ಮಕ ಜಗತ್ತು (ಬ್ರಹ್ಮಾಂಡೀಯ ಪ್ರಕೃತಿ, ಪವಿತ್ರಾತ್ಮ); ಸೃಷ್ಟಿಯಲ್ಲಿರುವ ಭಗವಂತನ ಪುತ್ರ ಅಥವಾ ಪ್ರಜ್ಞಾನ (ಕ್ರಿಸ್ತ ಪ್ರಜ್ಞೆ); ಹಾಗೂ ಇಡೀ ಸೃಷ್ಟಿಯಿಂದಾಚೆ ಇರುವ ಸ್ಪಂದನರಹಿತ ಪರಮಾತ್ಮ (ಪರಮ ಪಿತ), ಇವುಗಳನ್ನು ಸಂಕೇತಿಸುತ್ತವೆ. ಆಧ್ಯಾತ್ಮಿಕ ಚಕ್ಷುವು ದಿವ್ಯ ಪ್ರಜ್ಞೆಯಲ್ಲಿ ಅಂತಿಮ ಸ್ಥಿತಿಯನ್ನು ತಲುಪುವ ಪ್ರವೇಶಮಾರ್ಗವಾಗಿದೆ.
ಆಶ್ರಮ. ಒಂದು ಆಧ್ಯಾತ್ಮಿಕ ಆಶ್ರಮ; ಒಂದು ಮಠ.
ಉಪನಿಷತ್ತುಗಳು. ನಾಲ್ಕು ವೇದಗಳ ಕೆಲವು ಭಾಗಗಳಲ್ಲಿ ಬರುವ ಉಪನಿಷತ್ತುಗಳು ಅಥವಾ ವೇದಾಂತವು (ಅಕ್ಷರಶಃ “ವೇದಗಳ ಅಂತಿಮ ಭಾಗ”) ಹಿಂದೂ ಧರ್ಮದ ಸೈದ್ಧಾಂತಿಕ ಮೂಲವನ್ನು ರೂಪಿಸುವ ಮೂಲಭೂತ ಸಂಗ್ರಹಗಳು.
ಉಸಿರು. “ಉಸಿರಿನ ಮೂಲಕ ಮನುಷ್ಯನೊಳಗೆ ಬ್ರಹ್ಮಾಂಡೀಯ ಪ್ರವಾಹಗಳ ಅಸಂಖ್ಯಾತ ಒಳಹರಿವು ಅವನ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡುತ್ತದೆ,” ಎಂದು ಪರಮಹಂಸ ಯೋಗಾನಂದರು ಬರೆದಿದ್ದಾರೆ. “ಹೀಗೆ ಉಸಿರು ಅವನನ್ನು ಕ್ಷಣಿಕವಾದ ಇಂದ್ರಿಯಗೋಚರ ಪ್ರಪಂಚಗಳೊಂದಿಗೆ ತಳಕುಹಾಕುತ್ತದೆ. ಅನಿತ್ಯತೆಯುಳ್ಳ ದುಃಖಗಳಿಂದ ಪಾರಾಗಲು ಹಾಗೂ ವಾಸ್ತವಿಕತೆಯ (ಭಗವಂತನ) ಆನಂದದಾಯಕ ಸಾಮ್ರಾಜ್ಯವನ್ನು ಪ್ರವೇಶಿಸಲು, ಒಬ್ಬ ಯೋಗಿಯು ವೈಜ್ಞಾನಿಕ ಧ್ಯಾನದ ಮೂಲಕ ಉಸಿರನ್ನು ಶಾಂತಗೊಳಿಸಲು ಕಲಿಯುತ್ತಾನೆ.”
ಋಷಿಗಳು. ದಾರ್ಶನಿಕರು, ದಿವ್ಯ ಜ್ಞಾನವನ್ನು ಅಭಿವ್ಯಕ್ತಿಸುವ ಉನ್ನತ ಜೀವಿಗಳು; ವಿಶೇಷವಾಗಿ, ವೇದಗಳು ಅಂತರ್ಬೋಧಿತವಾಗಿ ಪ್ರಕಾಶಗೊಂಡಂತಹ ಪ್ರಾಚೀನ ಭಾರತದ, ಜ್ಞಾನೋದಯ ಹೊಂದಿದ ಋಷಿಗಳು.
ಏಕಾಗ್ರತೆಯ ತಂತ್ರ. ಯೋಗದಾ ಸತ್ಸಂಗ ಪಾಠಗಳಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಏಕಾಗ್ರತೆಯ ತಂತ್ರವನ್ನು (ಅಥವಾ ಹಾಂಗ್-ಸಾ ತಂತ್ರ) ಕಲಿಸಲಾಗುತ್ತದೆ. ಈ ತಂತ್ರವು ವಿಚಲಿತಗೊಳಿಸುವ ಎಲ್ಲಾ ವಸ್ತುಗಳಿಂದ ಗಮನವನ್ನು ಹಿಂಪಡೆದು, ಅದನ್ನು ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಇರಿಸಲು ನೆರವಾಗುವ ವೈಜ್ಞಾನಿಕ ತಂತ್ರವಾಗಿದೆ. ಆದ್ದರಿಂದ ಇದು ಧ್ಯಾನಕ್ಕೆ, ಭಗವಂತನ ಮೇಲಿನ ಏಕಾಗ್ರತೆಗೆ ಬಹಳ ಮಹತ್ವವಾದುದಾಗಿದೆ. ಹಾಂಗ್-ಸಾ ತಂತ್ರವು ಕ್ರಿಯಾ ಯೋಗ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ) ವಿಜ್ಞಾನದ ಅವಿಭಾಜ್ಯ ಅಂಗವಾಗಿದೆ.
ಏಸುವೂ ಕೂಡ ಆಧ್ಯಾತ್ಮ ಚಕ್ಷುವಿನ ಬಗ್ಗೆ ಹೇಳಿದ್ದಾನೆ: “ನಿನ್ನ ಕಣ್ಣು ಒಂದಾದಾಗ, ನಿನ್ನ ಇಡೀ ಶರೀರ ಕೂಡ ಬೆಳಕಿನಿಂದ ಆವೃತವಾಗಿರುತ್ತದೆ. ಆದ್ದರಿಂದ ನಿನ್ನೊಳಗಿರುವ ಬೆಳಕು ಅಂಧಕಾರವಲ್ಲ ಎಂಬುದನ್ನು ಗಮನಿಸು” (ಲೂಕ್ 11:34-35 ಬೈಬಲ್).
ಓಂ. ಸಂಸ್ಕೃತದ ಮೂಲ ಪದ ಅಥವಾ ಬೀಜಾಕ್ಷರ, ದೇವತ್ವದ ಯಾವ ಅಂಶವು ಎಲ್ಲವನ್ನೂ ಸೃಷ್ಟಿಸಿ ನಿರ್ವಹಿಸುವುದೋ ಅದನ್ನು ಸಂಕೇತಿಸುತ್ತದೆ; ಬ್ರಹ್ಮಾಂಡೀಯ ಸ್ಪಂದನ. ವೇದಗಳ ʼಓಂʼ ಟಿಬೆಟನ್ನರ ಪವಿತ್ರ ಶಬ್ದ ʼಹುಮ್ʼ ಆಯಿತು; ಮುಸಲ್ಮಾನರ ಆಮಿನ್; ಹಾಗೂ ಈಜಿಪ್ಟಿನವರು, ಗ್ರೀಕರು, ರೋಮನ್ನರು, ಯಹೂದಿಗಳು ಮತ್ತು ಕ್ರೈಸ್ತಮತದವರ ಆಮೆನ್. ಸೃಷ್ಟಿಯ ಎಲ್ಲ ವಸ್ತುಗಳೂ ಓಂ ಅಥವಾ ಆಮೆನ್, ಶಬ್ದ ಅಥವಾ ಪವಿತ್ರಾತ್ಮದ ಬ್ರಹ್ಮಾಂಡೀಯ ಸ್ಪಂದನ ಶಕ್ತಿಯಲ್ಲಿ ಉದ್ಭವಿಸುತ್ತವೆ ಎಂದು ಪ್ರಪಂಚದ ಎಲ್ಲ ಶ್ರೇಷ್ಠ ಧರ್ಮಗಳು ಹೇಳುತ್ತವೆ. “ಆರಂಭದಲ್ಲಿ ಶಬ್ದವಿತ್ತು, ಶಬ್ದವು ದೇವರೊಂದಿಗಿತ್ತು, ಶಬ್ದವೇ ದೇವರಾಗಿತ್ತು…. ಎಲ್ಲವೂ ಅವನಿಂದ [ಶಬ್ದ ಅಥವಾ ಓಂನಿಂದ] ಮಾಡಲ್ಪಟ್ಟವು; ಮತ್ತು ಸೃಷ್ಟಿಯಾದ ಯಾವುದೂ ಅವನಿಲ್ಲದೆ ಮಾಡಲ್ಪಟ್ಟಿಲ್ಲ” (ಜಾನ್. 1:1, 3). ಹಿಬ್ರೂ ಭಾಷೆಯಲ್ಲಿ ಆಮೆನ್ ಎಂದರೆ ಖಚಿತ, ನಿಷ್ಠಾವಂತ. “ಇದು ಭಗವಂತನ ಸೃಷ್ಟಿಯ ಮೂಲವಾದ, ನಿಷ್ಠಾವಂತ ಹಾಗೂ ಸತ್ಯವಾದ ಸಾಕ್ಷಿಯಾದ ಆಮೆನ್‌ನ ಸಂದೇಶ” (ರಿವಿಲೇಷನ್ 3:14, ಬೈಬಲ್). ಚಲಿಸುವ ಮೋಟಾರಿನ ಕಂಪನದಿಂದ ಶಬ್ದ ಉಂಟಾಗುವಂತೆ, ಸರ್ವವ್ಯಾಪಿ ಓಂ ಶಬ್ದವು “ವಿಶ್ವ ಮೋಟಾರ್”ನ ಚಲನೆಗೆ ಸರಿಯಾಗಿ ಸಾಕ್ಷಿಯಾಗಿರುತ್ತದೆ, ಅದು ಸೃಷ್ಟಿಯ ಎಲ್ಲ ಜೀವಿಗಳನ್ನೂ, ಪ್ರತಿಯೊಂದು ಕಣವನ್ನೂ ಸ್ಪಂದನದ ಬಲದಿಂದ ಎತ್ತಿಹಿಡಿಯುತ್ತದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪಾಠಗಳಲ್ಲಿ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ) ಪರಮಹಂಸ ಯೋಗಾನಂದರು ಧ್ಯಾನದ ತಂತ್ರಗಳನ್ನು ಹೇಳಿಕೊಡುತ್ತಾರೆ, ಅವುಗಳ ಅಭ್ಯಾಸದಿಂದ ಭಗವಂತನನ್ನು ನೇರವಾಗಿ ಓಂ ಅಥವಾ ಹೋಲಿ ಘೋಸ್ಟ್ (ಪವಿತ್ರಾತ್ಮನ) ರೂಪದಲ್ಲಿ ಮನಗಾಣಬಹುದು. ಅಗೋಚರವಾದ ದಿವ್ಯ ಶಕ್ತಿಯೊಂದಿಗೆ (“ಪವಿತ್ರಾತ್ಮ, ಅಂದರೆ ಹೋಲಿ ಘೋಸ್ಟ್” —ಜಾನ್ 14:26) ಉಂಟಾಗುವ ಆ ಆನಂದ ಭರಿತ ಸಂಪರ್ಕವೇ ಪ್ರಾರ್ಥನೆಯ ನಿಜವಾದ ವೈಜ್ಞಾನಿಕ ತಳಹದಿ.