“ನಿಮ್ಮ ಆಲೋಚನೆಗಳು ನಿಮಗೆ ಎಷ್ಟು ಹತ್ತಿರವಾಗಲು ಅನುವು ಮಾಡಿಕೊಡುತ್ತವೆಯೋ ಅಷ್ಟು ಹತ್ತಿರ ಗುರು ಇದ್ದಾರೆ… . ಅದು ಅವರೊಂದಿಗೆ ತಾದಾತ್ಮ್ಯ ಹೊಂದುವುದರಿಂದ ಬರುತ್ತದೆ — ಅವರ ದೈವಿಕ ಪ್ರಜ್ಞೆ ದೇವರಿಂದ ಬಂದುದಾಗಿದೆ. ಧ್ಯಾನದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ಅವರ ಸಹಾಯ ಮತ್ತು ಆಶೀರ್ವಾದಗಳು ಸಿಗುತ್ತವೆ.”
— ಶ್ರೀ ಶ್ರೀ ದಯಾ ಮಾತಾ, ವೈಎಸ್ಎಸ್/ಎಸ್‌ಆರ್‌ಎಫ್ ನ ಮೂರನೇ ಅಧ್ಯಕ್ಷರು
ಜನ್ಮೋತ್ಸವದಲ್ಲಿ ವಿಶೇಷ ಕೊಡುಗೆ ನೀಡುವ ಮೂಲಕ ಹೊಸ ವರ್ಷವನ್ನು ಆರಂಭಿಸಿ
ಪ್ರಿಯ ದೈವಿಕ ಆತ್ಮನೇ,
ನಮ್ಮ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರವರ ಜನ್ಮೋತ್ಸವ ಎಂಬ ಈ ಪವಿತ್ರ ದಿನದಂದು ನಿಮಗೆ ಪ್ರೀತಿಪೂರ್ಣ ಶುಭಾಶಯಗಳು. ಈ ಪವಿತ್ರ ಸಂದರ್ಭದಲ್ಲಿ, ನಮ್ಮ ಗುರುಗಳ ಉದಾತ್ತ ಜೀವನ ಮತ್ತು ದೈವಿಕ ಧ್ಯೇಯವನ್ನು ಆಳವಾದ ಪ್ರೀತಿ ಹಾಗೂ ಕೃತಜ್ಞತೆಯಿಂದ ಸ್ಮರಿಸಲು ನಾವು ಎಲ್ಲರೂ ಒಂದಾಗಿದ್ದೇವೆ. ಅವರ ದೈವಿಕ ಪ್ರಕಾಶವು ಅವರ ಶಿಷ್ಯರಾದ ನಮಗೆ ಮಾತ್ರವಲ್ಲ, ಸಮಸ್ತ ಮಾನವತೆಗೆ ನಿರಂತರವಾಗಿ ಆಶೀರ್ವಾದವನ್ನು ಸುರಿಸುತ್ತಿದೆ. ಕ್ರಿಯಾ ಯೋಗದ ಪ್ರಾಚೀನ ಜ್ಞಾನವನ್ನು ಪ್ರಕಾಶಗೊಳಿಸುವ ಮೂಲಕ, ಗುರುದೇವರು ಶ್ರದ್ಧಾವಂತ ಭಕ್ತರನ್ನು ಆತ್ಮದ ಅನಂತ ಆನಂದದತ್ತ ಹಿಂತಿರುಗಿಸುವ ಸ್ಪಷ್ಟ ಹಾಗೂ ನೇರ ಮಾರ್ಗವನ್ನು ತೋರಿಸಿದ್ದಾರೆ.
ರಾಂಚಿಯಲ್ಲಿ ಗುರುದೇವರ ಪವಿತ್ರ ಪರಂಪರೆಯನ್ನು ಸಂರಕ್ಷಿಸಲು ಒಂದು ಅವಕಾಶ
ಈ ವರ್ಷದ ಪವಿತ್ರ ಜನ್ಮೋತ್ಸವವು ನಮ್ಮಲ್ಲಿ ಪ್ರತಿಯೊಬ್ಬರಿಗೂ ಗುರುದೇವರ ದೈವಿಕ ಧ್ಯೇಯಕ್ಕೆ ಸೇವೆ ಸಲ್ಲಿಸುವ ಅಪೂರ್ವ ಅವಕಾಶವನ್ನು ನೀಡುತ್ತದೆ. ಅವರ ಪ್ರೀತಿಯ ರಾಂಚಿ ಆಶ್ರಮವು ಮುಂದಿನ ಪೀಳಿಗೆಗಳಿಗೂ ಶಾಂತಿ, ಸಾಂತ್ವನ ಮತ್ತು ಭಗವದ್‌ಸಂಪರ್ಕದ ಪವಿತ್ರ ಆಶ್ರಯಸ್ಥಾನವಾಗಿ ಗುರುದೇವರ ಉಪಸ್ಥಿತಿಯನ್ನು ನಿರಂತರವಾಗಿ ಪ್ರಕಾಶಿಸುವಂತೆ ಮಾಡುವಲ್ಲಿ ನಾವು ಸಹಕಾರ ನೀಡಬಹುದು.
ಇತ್ತೀಚಿನ ದಿನಗಳಲ್ಲಿ, ನಮ್ಮ ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ಅತಿಥಿ ಸೌಲಭ್ಯಗಳ ಮೇಲ್ದರ್ಜೆಗೇರಿಕೆ ಹಾಗೂ ಸಭಾಂಗಣದ ನವೀಕರಣಕ್ಕೆ ಸಂಬಂಧಿಸಿದ ಸಂತೋಷಕರ ಸುದ್ದಿಯನ್ನು ನಾವು ಹಂಚಿಕೊಂಡಿದ್ದೇವೆ. ಅದಾದ ಬಳಿಕ ಆಶ್ರಮಕ್ಕೆ ಭೇಟಿ ನೀಡಿದ ಭಕ್ತರು, ನಡೆದಿರುವ ಸುಧಾರಣೆಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಆ ಬದಲಾವಣೆಗಳು ತಮ್ಮ ಆಶ್ರಮದ ಅನುಭವವನ್ನು ಎಷ್ಟು ಮಹತ್ತರವಾಗಿ ಪರಿವರ್ತಿಸಿವೆ ಎಂಬುದನ್ನು ನಮಗೆ ತಿಳಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ, ಅತ್ಯಂತ ಅಗತ್ಯವಿರುವ ಈ ಉಪಕ್ರಮಗಳ ಮುಂದಿನ ಹಂತವನ್ನು ಬೆಂಬಲಿಸಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ. ಇದರ ಮೂಲಕ, ಮುಂದಿನ ಪೀಳಿಗೆಗಳ ಭಕ್ತರು ಇನ್ನೂ ಹೆಚ್ಚು ಉನ್ನತ, ಉದಾತ್ತ ಹಾಗೂ ಆತ್ಮೋನ್ನತಿಯನ್ನು ನೀಡುವ ತೀರ್ಥಯಾತ್ರೆಯ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ:
ಒಟ್ಟು ಅಂದಾಜು ವೆಚ್ಚ: ₹12 ಕೋಟಿ
ನಿಮ್ಮ ಉದಾರ ಕೊಡುಗೆಯು ಗುರುದೇವರ ಪ್ರೀತಿಯ ರಾಂಚಿ ಆಶ್ರಮವನ್ನು ಅದರ ಪವಿತ್ರ ಪರಿಸರದಲ್ಲಿ ಆಶ್ರಯವನ್ನು ಅನ್ವೇಷಿಸುವ ಎಲ್ಲರಿಗೂ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಯ ಧಾಮವಾಗಿ ಸಂರಕ್ಷಿಸಲು ನಮಗೆ ಸಹಾಯ ಮಾಡುತ್ತದೆ.
ಗುರೂಜಿಯವರ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸನ್ಯಾಸಿ ಸಮುದಾಯ ಹಾಗೂ ಸೇವಕರು, ನಿಮ್ಮೆಲ್ಲರ ಕ್ಷೇಮಾಭಿವೃದ್ಧಿಗಾಗಿ ನಮ್ಮ ಹೃದಯಪೂರ್ವಕ ಕೃತಜ್ಞತೆಯನ್ನೂ ಹಾಗೂ ದೈನಂದಿನ ಪ್ರಾರ್ಥನೆಗಳನ್ನೂ ಅರ್ಪಿಸುತ್ತೇವೆ.
ಗುರುದೇವ ಮತ್ತು ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
ದಿವ್ಯ ಸ್ನೇಹದಲ್ಲಿ,
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ
ರಾಂಚಿ — ಮುಂದಿನ ಪೀಳಿಗೆಗಳಿಗೂ ಪವಿತ್ರ ಆಶ್ರಯಸ್ಥಾನ
“ನನ್ನ ಆಧ್ಯಾತ್ಮಿಕ ಸಾಧನೆಯ ಅದೃಶ್ಯ ಅಮೃತವನ್ನು ನಾನು ಹೆಚ್ಚಾಗಿ ಮೌಂಟ್ ವಾಷಿಂಗ್ಟನ್ ಮತ್ತು ರಾಂಚಿಯಲ್ಲಿ ಹರಿಸಿದ್ದೇನೆ…”
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಒಂದು ಶತಮಾನಕ್ಕೂ ಹೆಚ್ಚು ಕಾಲ, ವೈಎಸ್ಎಸ್ ರಾಂಚಿ ಆಶ್ರಮವು ಭಕ್ತರು ಗುರುದೇವರ ಸಾನಿಧ್ಯದಿಂದ ಪವಿತ್ರವಾದ ಸ್ಥಳಗಳಲ್ಲಿ ಭಕ್ತಿಯಿಂದ ನಡೆದಾಡಿ, ಅದರ ಉದ್ಯಾನಗಳಲ್ಲಿ ಧ್ಯಾನ ಮಾಡಿ, ಪ್ರತಿಯೊಂದು ಮೂಲೆಯಲ್ಲೂ ದೇವರು ಮತ್ತು ಗುರೂಜಿಯ ಪ್ರೀತಿಯ ಉಪಸ್ಥಿತಿಯನ್ನು ಅನುಭವಿಸಿದ ಆಶೀರ್ವಾದಿತ ಆಶ್ರಯವಾಗಿಯೇ ಉಳಿದಿದೆ. ಗುರೂಜಿ ಚಿಕ್ಕ ಬಾಲಕರಿಗೆ ತರಗತಿಗಳನ್ನು ಕಲಿಸುತ್ತಿದ್ದ ಲಿಚಿ ವೇದಿಕೆ; ಅವರು ವಾಸಿಸುತ್ತಿದ್ದ ಅವರ ಪೂಜಾ ಕೊಠಡಿ; ಮತ್ತು ಅಮೆರಿಕಕ್ಕೆ ಹೋಗಲು ಅವರು ದೈವಿಕ ದರ್ಶನವನ್ನು ಕಂಡ ಸ್ಮೃತಿ ಮಂದಿರದಂತಹ ಪವಿತ್ರ ಸ್ಥಳಗಳು ಅವರ ಪವಿತ್ರ ಕಂಪನಗಳನ್ನು ಹೊರಸೂಸುತ್ತಲೇ ಇವೆ.
ಅಸಂಖ್ಯಾತ ಭಕ್ತರು ರಾಂಚಿ ಆಶ್ರಮವನ್ನು ಆಂತರಿಕ ನಿಶ್ಚಲತೆಯ ಆಶ್ರಯವೆಂದು ಮಮತೆಯಿಂದ ಆರಾಧಿಸಿದ್ದಾರೆ; ಇಲ್ಲಿ ಅವರು ಶಾಂತಿ, ಗುಣಮುಖತೆ, ವಿವೇಕ ಮತ್ತು ದೈವಿಕ ಸಂಗಮವನ್ನು ಅನುಭವಿಸಿದ್ದಾರೆ. ಗುರುದೇವರ ಕಾರ್ಯವು ನಿರಂತರವಾಗಿ ವೃದ್ಧಿಸುತ್ತಿರುವುದರಿಂದ, ಆಶ್ರಮದ ಪಾವಿತ್ರ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು ನಮ್ಮ ಪವಿತ್ರ ಜವಾಬ್ದಾರಿ — ಇಂದಿನ ಯಾತ್ರಿಕರಿಗಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬರುವ ಸಾಧಕರಿಗೂ.
ಮಾರ್ಗಗಳು ಮತ್ತು ಆಶ್ರಮ ಆವರಣದ ಪರಿಸರದ ಸುಧಾರಣೆ
ಆರಂಭದಿಂದಲೂ ಆಶ್ರಮದ ರಸ್ತೆಗಳು ಮತ್ತು ನಡಿಗೆಮಾರ್ಗಗಳು ಬಹುತೇಕ ಪಕ್ಕಾ ರಸ್ತೆ ಮಾಡದೆ ಉಳಿದು, ಕಾಲಕ್ರಮೇಣ ಸ್ವಾಭಾವಿಕವಾಗಿ ರೂಪುಗೊಂಡಿವೆ. ಇದು ಆಶ್ರಮದ ಸರಳತೆಯನ್ನು ಪ್ರತಿಬಿಂಬಿಸಿದರೂ, ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆಗಾಲದಲ್ಲಿ ನೀರು ನಿಲ್ಲುವುದು, ಅಸಮ ಭೂಪ್ರದೇಶ, ಹಾಗೂ ಮಣ್ಣಿನ ರಸ್ತೆಯಿಂದ ಏಳುವ ಧೂಳು — ಇವುಗಳಿಂದ ಸಂದರ್ಶಕರಿಗೆ, ವಿಶೇಷವಾಗಿ ಹಿರಿಯ ಭಕ್ತರಿಗೆ, ಸಾಕಷ್ಟು ಅನಾನುಕೂಲ ಉಂಟಾಗಿದೆ; ಜೊತೆಗೆ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಇದಲ್ಲದೆ, ಆಶ್ರಮ ಆವರಣದ ಭೂದೃಶ್ಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ರಸ್ತೆಯ ಹೊಂದಾಣಿಕೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಷ್ಕರಿಸುವ ಅಗತ್ಯವಿದೆ. ನಿರಂತರವಾಗಿ ಹೆಚ್ಚುತ್ತಿರುವ ಅತಿಥಿಗಳ ಆಗಮನವು, ಪರಿಸರದ ಪ್ರಶಾಂತತೆಯನ್ನು ಕಾಪಾಡುತ್ತಾ ಸುರಕ್ಷತೆ ಮತ್ತು ಬಾಳಿಕೆಯನ್ನು ಖಚಿತಪಡಿಸುವಂತೆ, ಈ ಮಾರ್ಗಗಳನ್ನು ಎಚ್ಚರಿಕೆಯಿಂದ ಮರುನಿರ್ಮಿಸಿ/ನವೀಕರಿಸಬೇಕಾದ ತುರ್ತು ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸುತ್ತಿದೆ.
ನಮ್ಮ ಯೋಜಿತ ಸುಧಾರಣೆಗಳು ಇವು:
- ಸೇವಾ ಹಾಗೂ ತುರ್ತು ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ 16 ಅಡಿ ಅಗಲದ ಕಾಂಕ್ರೀಟ್ ಬಾಹ್ಯ ಪ್ರವೇಶ ರಸ್ತೆಯನ್ನು ನಿರ್ಮಿಸುವುದು; ಜೊತೆಗೆ ಭಕ್ತರಿಗಾಗಿ ಸ್ಪಷ್ಟವಾಗಿ ಗುರುತಿಸಲಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು
- ಸ್ಮೃತಿ ಮಂದಿರ, ಶಿವ ಮಂದಿರ ಮತ್ತು ಸೇವಾಲಯದಂತಹ ಪವಿತ್ರ ಪ್ರದೇಶಗಳ ಸುತ್ತಲೂ ಕಲ್ಲು ಹಾಸಿದ ನಡಿಗೆಮಾರ್ಗಗಳು — ಭಕ್ತಿಭಾವವನ್ನು ಕಾಪಾಡುತ್ತಾ, ಆರಾಮದಾಯಕ ಸಂಚಾರವನ್ನು ಒದಗಿಸುವಂತೆ
- ಪ್ರಮುಖ ಸ್ಥಳಗಳು ಮತ್ತು ಛೇದಕಗಳ ಸುಂದರೀಕರಣ – ಅತಿಥಿ ಗೃಹ ಪ್ರದೇಶದ ಬಳಿ, ಕರ್ಪೂರ ಮರದ ವೇದಿಕೆ (ಶ್ರೀ ದಯಾ ಮಾತಾಜಿ ಭಕ್ತರನ್ನು ಸ್ವಾಗತಿಸಿ ಭೇಟಿಯಾದ ಸ್ಥಳ), ಶಿವ ಮಂದಿರ ಮತ್ತು ಸ್ಮೃತಿ ಮಂದಿರ
- ಸಂದರ್ಶಕರಿಗೆ ಮಾರ್ಗದರ್ಶನ ನೀಡಲು ಹಾಗೂ ನೈಸರ್ಗಿಕ ಸುತ್ತಮುತ್ತಲಿನ ಪರಿಸರದೊಂದಿಗೆ ದೃಶ್ಯ ಸಾಮರಸ್ಯವನ್ನು ಕಾಪಾಡಲು ಚಿಂತನಶೀಲ ಉದ್ಯಾನ ಭೂದೃಶ್ಯ ವಿನ್ಯಾಸ ಮತ್ತು ಸ್ಪಷ್ಟ ಸೂಚನಾ ಫಲಕಗಳು
- ಮೈದಾನ ಹಾಗೂ ಕೇಂದ್ರ ಅಡುಗೆಮನೆ ಸಮೀಪ ಸೌಂದರ್ಯಪೂರ್ಣವಾಗಿ ವಿನ್ಯಾಸಗೊಳಿಸಲಾದ ಪ್ರವೇಶ ದ್ವಾರಗಳ ನಿರ್ಮಾಣ. ಹೊಸ ದ್ವಾರಗಳನ್ನು ಗುರೂಜಿ ಸ್ವತಃ ರೂಪಿಸಿದ ವಿನ್ಯಾಸದಂತೆ ನಿರ್ಮಿಸಲಾಗುವುದು; ಇದರಿಂದ ಅವು ವೈಎಸ್ಎಸ್ ಆಶ್ರಮದ ವಿಶಿಷ್ಟ, ಪ್ರಾತಿನಿಧಿಕ ಸಂಕೇತಗಳೆಂದು ಸುಲಭವಾಗಿ ಗುರುತಿಸಬಹುದಾಗಿರುತ್ತವೆ
- ಸುಸ್ಥಿರತೆಯನ್ನು ಬೆಂಬಲಿಸುವ ಉದ್ದೇಶದಿಂದ ಸೌರಶಕ್ತಿ ಚಾಲಿತ ದೀಪಾಲಂಕಾರ, ಮಳೆನೀರು ಹರಿವಿನ ವ್ಯವಸ್ಥೆ, ಕೇಂದ್ರೀಕೃತ ಒಳಚರಂಡಿ ವ್ಯವಸ್ಥೆ, ಹಾಗೂ ವಿದ್ಯುತ್ ಮತ್ತು ಕೊಳಾಯಿ ವ್ಯವಸ್ಥೆಗಳ ಬಲವರ್ಧನೆ—ಇವೆಲ್ಲವನ್ನೂ ಒಳಗೊಂಡ ಅಗತ್ಯ ಮೂಲಸೌಕರ್ಯ
ಮಕ್ಕಳು, ಹದಿಹರೆಯದವರು ಮತ್ತು ಯುವಜನ ಕಾರ್ಯಕ್ರಮಗಳಿಗೆ ಸೌಲಭ್ಯಗಳು
ಕಳೆದ ಹಲವಾರು ದಶಕಗಳಲ್ಲಿ, ಮಕ್ಕಳು, ಹದಿಹರೆಯದವರು ಮತ್ತು ಯುವ ಸಾಧಕರಲ್ಲಿ ವೈಎಸ್ಎಸ್ ಬೋಧನೆಗಳಲ್ಲಿ ಆಸಕ್ತಿ ಸ್ಥಿರ ಮತ್ತು ಹೃದಯಸ್ಪರ್ಶಿಯಾಗಿ ಹೆಚ್ಚುತ್ತಿದೆ. ಈ ಹೆಚ್ಚುತ್ತಿರುವ ಪ್ರತಿಕ್ರಿಯೆಯು ಕಳೆದ ವರ್ಷ ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ನಡೆಯುತ್ತಿರುವ ಮಕ್ಕಳ ಸತ್ಸಂಗ ಚಟುವಟಿಕೆಗಳ ಜೊತೆಗೆ, ವಾರದ ಹದಿಹರೆಯದ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ಈಗಾಗಲೇ ಫಲ ನೀಡಿದೆ.
ಪ್ರಸ್ತುತ, ಈ ಕಾರ್ಯಕ್ರಮಗಳನ್ನು ತಾತ್ಕಾಲಿಕ ವ್ಯವಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಜೊತೆಗೆ, ಕೊಠಡಿಗಳ ಕೊರತೆಯಿಂದಾಗಿ ಹಲವು ವಯೋವರ್ಗದವರನ್ನು ಒಂದೇ ತರಗತಿಗೆ ಸೇರಿಸಬೇಕಾಗಿರುವುದು ಸಂಭವಿಸುತ್ತಿದೆ; ಇದು ಆದರ್ಶಕರವಲ್ಲ.
17 ವರ್ಷದ ಬಾಲಕನೊಬ್ಬ ಇತ್ತೀಚೆಗೆ ಬರೆದದ್ದು:
“ನಾನು ಹತ್ತು ವರ್ಷದವನಾಗಿದ್ದಾಗ, ಮಕ್ಕಳ ಸತ್ಸಂಗ ಕಾರ್ಯಕ್ರಮದಲ್ಲಿ ಏಕಾಗ್ರತೆಯ ಹಾಂಗ್-ಸೌ ತಂತ್ರವನ್ನು ಕಲಿತೆ. ನನಗೆ 15 ವರ್ಷವಾಗುವವರೆಗೂ ಧ್ಯಾನವನ್ನು ನಿಜವಾಗಿಯೂ ಪ್ರಯೋಗಾತ್ಮಕವಾಗಿ ಮಾಡತೊಡಗಿರಲಿಲ್ಲ…. ಈ ವರ್ಷದ ಅಂತಿಮ ಪರೀಕ್ಷೆ ಸಮೀಪಿಸುತ್ತಿತ್ತು. ನನ್ನ ಅಂಕ 88% ರಷ್ಟು ಕುಸಿಯುತ್ತಿತ್ತು, ಮತ್ತು ಕ್ಯಾಲ್ಕುಲಸ್ ತರಗತಿಯಲ್ಲಿ ಪರಿಪೂರ್ಣ ಅಂಕಗಳನ್ನು ಪಡೆಯಬೇಕೆಂದು ನಾನು ಬಯಸಿದ್ದೆ.
ನನ್ನ ಅಂತಿಮ ಪರೀಕ್ಷೆಗೆ ಹಿಂದಿನ ರಾತ್ರಿ, ಹಾಂಗ್-ಸೌನಿಂದ ದೊರಕುವ ಶಾಂತಿಯನ್ನು ಅನುಭವಿಸುವವರೆಗೆ ನಾನು ಆಳವಾಗಿ ಧ್ಯಾನ ಮಾಡಿದೆ. ಮರುದಿನ ನಾನು ಪರೀಕ್ಷಾ ಕೊಠಡಿಗೆ ಕಾಲಿಟ್ಟಾಗ ಶಾಂತವಾಗಿಯೂ ಸಮಚಿತ್ತವಾಗಿಯೂ ಇದ್ದೆ. ಫಲಿತಾಂಶಗಳು ಬಂದಾಗ ನಾನು ಆನಂದದಿಂದ ಕೂಗಿಬಿಟ್ಟೆ—ಇಡೀ ತರಗತಿಯಲ್ಲಿ 100% ಅಂಕಗಳನ್ನು ಪಡೆದ ಏಕೈಕ ನಾನಾಗಿದ್ದೆ. ಆಗ ನನಗೆ ಅರಿವಾಯಿತು: ಎಲ್ಲರಿಗೂ ಪರಿಕಲ್ಪನೆಗಳು ಮತ್ತು ಸೂತ್ರಗಳು ಗೊತ್ತೇ ಇರುತ್ತವೆ; ಆದರೆ ಪರೀಕ್ಷೆಯಂತಹ ಒತ್ತಡದ ಕ್ಷಣದಲ್ಲಿ ಅವನ್ನು ಮನಸ್ಸಿಗೆ ನೆನಪಿಸಿ ತರುವುದು—ಅದೇ ಕಷ್ಟ. ಧ್ಯಾನವು ನನಗೆ ಶಾಂತವಾಗಿಯೂ ಏಕಾಗ್ರವಾಗಿಯೂ ಇರಲು ನೆರವಾಯಿತು; ಶಾಲೆಯಲ್ಲಿ ನನಗೆ ನಿಜಕ್ಕೂ ನೆರವಾದುದು ಅದೇ ಆಗಿತ್ತು.”
ಹೆಚ್ಚುತ್ತಿರುವ ಆಸಕ್ತಿ ಮತ್ತು ಪ್ರಭಾವವನ್ನು ಬೆಂಬಲಿಸಲು, ನಾವು ದೇಶಾದ್ಯಂತ ಯುವ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಬಲಿಷ್ಠ ಯುವ ಸೇವಾ ಇಲಾಖೆಯನ್ನು ಸ್ಥಾಪಿಸಿದ್ದೇವೆ — ನಮ್ಮ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಆನ್‌ಲೈನ್ ಮತ್ತು ವೈಯಕ್ತಿಕವಾಗಿ ಸೇರಿದಂತೆ. ಭವಿಷ್ಯದಲ್ಲಿ, ಭಾಗವಹಿಸುವಿಕೆಯು ಹಲವು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಈ ಕಾರ್ಯಕ್ರಮಗಳನ್ನು ಬಲಪಡಿಸಲು ಮತ್ತು ಯುವಕರ ಆಧ್ಯಾತ್ಮಿಕ ಅಗತ್ಯಗಳನ್ನು ಸಮರ್ಪಕವಾಗಿ ಪೋಷಿಸಲು ಮೀಸಲಾದ ಸೌಲಭ್ಯಗಳು ಅತ್ಯಗತ್ಯ.
ಈ ಅಗತ್ಯವನ್ನು ಪೂರೈಸಲು, ಶ್ರವಣಾಲಯ (ನವೀಕರಿಸಿದ ಸಭಾಂಗಣ) ಬಳಿ ಇರುವ ಅಸ್ತಿತ್ವದಲ್ಲಿರುವ ರಚನೆಯನ್ನು (ಹಳೆಯ ಪ್ರಾಂಶುಪಾಲರ ವಸತಿಗೃಹ ಎಂದು ಕರೆಯಲಾಗುತ್ತದೆ) ಕೆಡವಿ, ಮಕ್ಕಳು, ಹದಿಹರೆಯದವರು ಮತ್ತು ಯುವಜನರ ಚಟುವಟಿಕೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಕಟ್ಟಡವನ್ನು ನಿರ್ಮಿಸಲು ನಾವು ಯೋಜಿಸಿದ್ದೇವೆ. ಪ್ರಸ್ತಾವಿತ ಎರಡು ಅಂತಸ್ತಿನ ಸೌಲಭ್ಯವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ಸಂಗ್ರಹಣೆಗೆ ಸಾಕಷ್ಟು ಜಾಗವಿರುವ ಬಹು ಕೊಠಡಿಗಳು
- ಶ್ರವ್ಯ–ದೃಶ್ಯ ಸಜ್ಜಿತ ಕಲಿಕಾ ಸ್ಥಳಗಳು
- ಯುವ ವಿಚಾರ ಸಂಕಿರಣಗಳು ಮತ್ತು ಸಭೆಗಳಿಗೆ ದೊಡ್ಡ ಬಹೂಪಯೋಗಿ ಸಭಾಂಗಣ
- ಸ್ವಾಗತ ಕೊಠಡಿ ಮತ್ತು ಕಛೇರಿ ಸ್ಥಳಗಳು
ವೈಎಸ್ಎಸ್ ಪಾಠಗಳ ಮುದ್ರಣ ಮತ್ತು ಸಂಗ್ರಹಣಾ ಸೌಲಭ್ಯದ ನಿರ್ಮಾಣ
ಯೋಗೋದ ಸತ್ಸಂಗ ಪಾಠಗಳು ಮತ್ತು ಇತರ ಆಧ್ಯಾತ್ಮಿಕ ಪ್ರಕಟಣೆಗಳ ಮುದ್ರಣ ಮತ್ತು ಪ್ರಸಾರವು ಗುರುದೇವರ ಪವಿತ್ರ ಧ್ಯೇಯದ ಪ್ರಮುಖ ಭಾಗವಾಗಿದೆ. ರಾಂಚಿ ಆಶ್ರಮದಲ್ಲಿ, ಎರಡು ಮುದ್ರಣ ಯಂತ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಇಂಗ್ಲಿಷ್ ಮತ್ತು ಹಲವಾರು ಭಾರತೀಯ ಭಾಷೆಗಳಲ್ಲಿ ಪಾಠಗಳು, ಸುದ್ದಿಗಳು ಮತ್ತು ಪ್ರಕಟಣೆಗಳನ್ನು ಮುದ್ರಿಸುತ್ತಿವೆ.
ಗುರುದೇವರ ಕ್ರಿಯಾ ಯೋಗ ಬೋಧನೆಗಳಲ್ಲಿ ಆಸಕ್ತಿ ಹೆಚ್ಚುತ್ತಿರುವಂತೆ, ವೈಎಸ್ಎಸ್ ಪಾಠಗಳನ್ನು ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ನೀಡಲು ಯೋಜಿಸುತ್ತಿದೆ, ಇದರಿಂದಾಗಿ ಅನ್ವೇಷಕರು ತಮ್ಮ ಮಾತೃಭಾಷೆಯಲ್ಲಿ ಅವುಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಈ ನೈಸರ್ಗಿಕ ವಿಸ್ತರಣೆಗೆ ಹೆಚ್ಚಿದ ಮುದ್ರಣ ಮತ್ತು, ಮುಖ್ಯವಾಗಿ, ಪಾಠಗಳು ಮತ್ತು ಪೂರಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಹೆಚ್ಚಿನ ಸಾಮರ್ಥ್ಯದ ಅಗತ್ಯವಿದೆ.
ಆದಾಗ್ಯೂ, ಪ್ರಸ್ತುತ ಮುದ್ರಣಾಲಯದಲ್ಲಿ ಸಾಕಷ್ಟು ಶೇಖರಣಾ ಸ್ಥಳ ಲಭ್ಯವಿಲ್ಲ. ಆದ್ದರಿಂದ ಕಾಗದ ಮತ್ತು ಇತರ ಅಗತ್ಯ ಮುದ್ರಣ ಉಪಭೋಗ್ಯ ವಸ್ತುಗಳು — ಶಾಯಿ, ತಟ್ಟೆಗಳು ಮತ್ತು ಸಂಬಂಧಿತ ಸಾಮಗ್ರಿಗಳು — ತಾತ್ಕಾಲಿಕ ವ್ಯವಸ್ಥೆಗಳಲ್ಲಿ ಇಡಲಾಗುತ್ತಿದ್ದು, ಅದು ಇನ್ನು ಮುಂದೆ ಸಾಕಾಗುವುದಿಲ್ಲ.
ಭಕ್ತರು ಈಗ ಪತ್ರಗಳಿಗಿಂತ ಹೆಚ್ಚಾಗಿ ಇಮೇಲ್ ಮತ್ತು ದೂರವಾಣಿ ಮೂಲಕ ಸಂಪರ್ಕ ಸಾಧಿಸುತ್ತಿರುವುದರಿಂದ, ಶೇಖರಣಾ ವಿಭಾಗಕ್ಕೆ ಮೀಸಲಿರಿಸಿದ್ದ ಭೌತಿಕ ಸ್ಥಳವನ್ನು ಪಾಠಗಳು ಹಾಗೂ ಮುದ್ರಣಾಲಯಕ್ಕಾಗಿ ವಿಶೇಷ ಸಂಗ್ರಹಣಾ ಸೌಲಭ್ಯವಾಗಿ ಮರುಉಪಯೋಗಿಸಲಾಗುತ್ತಿದೆ.
ಆದಾಗ್ಯೂ, ಶೇಖರಣಾ ವಿಭಾಗದ ಕಟ್ಟಡವು ಸುಮಾರು 70 ವರ್ಷಗಳಷ್ಟು ಹಳೆಯದಾಗಿದ್ದು, ತೀವ್ರವಾಗಿ ಹದಗೆಟ್ಟ ಸ್ಥಿತಿಯಲ್ಲಿದೆ. ಈ ರಚನಾತ್ಮಕ ಹಾಗೂ ಸುರಕ್ಷತಾ ಕಾಳಜಿಗಳನ್ನು ಪರಿಗಣಿಸಿ, ಕಟ್ಟಡಕ್ಕೆ ಅಡಿಪಾಯ ಮಟ್ಟದಿಂದ ಸಂಪೂರ್ಣ ಪುನರ್‌ನಿರ್ಮಾಣ ಅಗತ್ಯವಾಗಿದೆ.
ಯೋಗೋದ ಸತ್ಸಂಗ ಸೇವಾಶ್ರಮದಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವುದು — ಉಚಿತ ದತ್ತಿ ಆಸ್ಪತ್ರೆ
1958ರಿಂದ ವೈಎಸ್ಎಸ್ ರಾಂಚಿ ಆಶ್ರಮದಲ್ಲಿರುವ ದತ್ತಿ ವೈದ್ಯಕೀಯ ಚಿಕಿತ್ಸಾಲಯವಾದ ಯೋಗೋದ ಸತ್ಸಂಗ ಸೇವಾಶ್ರಮವು ಬಡವರು ಹಾಗೂ ನಿರ್ಗತಿಕರಿಗೆ ಪ್ರೀತಿ ಮತ್ತು ಸಹಾನುಭೂತಿಯೊಂದಿಗೆ ಸೇವೆ ಸಲ್ಲಿಸುತ್ತಿದೆ. ಸೇವಾಶ್ರಮದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಕಣ್ಣಿನ ಆಸ್ಪತ್ರೆಯ ಜೊತೆಗೆ, ತಜ್ಞ ವೈದ್ಯರು ಸಮಾಲೋಚನೆ ನೀಡುವ ಬಹುವಿಶೇಷ ಹೊರರೋಗಿ ವಿಭಾಗ(ಒಪಿಡಿ)ವೂ ಇದೆ. ಈ ಸೇವೆಯ ಉನ್ನತ ಗುಣಮಟ್ಟ ಮತ್ತು ನಿಸ್ವಾರ್ಥ ಸ್ವಭಾವದ ಕಾರಣದಿಂದ, ಸೇವಾಶ್ರಮವು ರಾಂಚಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ವಿಶ್ವಾಸಾರ್ಹ ವೈದ್ಯಕೀಯ ಆರೈಕೆಯ ಕೇಂದ್ರವಾಗಿ ರೂಪುಗೊಂಡಿದೆ.
2023ರಲ್ಲಿ ನಾವು ಕಣ್ಣಿನ ಆಸ್ಪತ್ರೆಯ ಪ್ರಮುಖ ನವೀಕರಣವನ್ನು ಕೈಗೊಂಡಿದ್ದು, ಅದರಲ್ಲಿ ಹೊಸ ಶಸ್ತ್ರಚಿಕಿತ್ಸಾ ಕೊಠಡಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಧುನಿಕ ಉಪಕರಣಗಳು, ಕಟ್ಟಡದ ಪುನರ್‌ನವೀಕರಣ ಹಾಗೂ ದೈಹಿಕವಾಗಿ ಅಶಕ್ತರಿಗೆ ನೆರವಾಗುವ ಮೆಟ್ಟಿಲುರಹಿತ ದಾರಿಯ ಸೇರ್ಪಡೆ ಸೇರಿವೆ.
ನಾವು ಈಗ ಇದೇ ಕಾಳಜಿ ಮತ್ತು ದೂರದೃಷ್ಟಿಯನ್ನು ಓಪಿಡಿ ವಿಭಾಗಕ್ಕೂ ವಿಸ್ತರಿಸಲು ಉದ್ದೇಶಿಸಿದ್ದೇವೆ. ಅಸ್ತಿತ್ವದಲ್ಲಿರುವ ಕಟ್ಟಡವು 60 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದ್ದು, ಕಾಲಕ್ರಮೇಣ ದುರ್ಬಲಗೊಂಡಿದೆ. ಆಶ್ರಮದ ಹೊರಗಿನ ಸಾರ್ವಜನಿಕ ರಸ್ತೆಗಳ ಮಟ್ಟ ಹೆಚ್ಚಾದ ಪರಿಣಾಮವಾಗಿ, ಓಪಿಡಿ ವಿಭಾಗದ ಮಹಡಿಗಳು ಈಗ ರಸ್ತೆ ಮಟ್ಟಕ್ಕಿಂತ ಕೆಳಗೆ ಇರುವ ಸ್ಥಿತಿಗೆ ಬಂದಿದ್ದು, ಭಾರೀ ಮಳೆಯ ಸಮಯದಲ್ಲಿ ನೀರು ಪದೇ ಪದೇ ಒಳನುಗ್ಗುವ ಸಮಸ್ಯೆ ಉಂಟಾಗುತ್ತಿದೆ.
ಸೇವಾಶ್ರಮವು ಸ್ಥಳೀಯ ಸಮುದಾಯಕ್ಕೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು, ಓಪಿಡಿ ವಿಭಾಗವನ್ನು ಸಂಪೂರ್ಣವಾಗಿ ಪುನರ್‌ನಿರ್ಮಿಸಬೇಕಾಗಿದೆ. ಹೊಸ ಕಟ್ಟಡವು ಪ್ರವಾಹ ತಡೆಯಲು ಎತ್ತರದ ಪೀಠಮಟ್ಟ, ರೋಗಿಗಳಿಗೆ ಸುಗಮವಾಗಿ ಸೇವೆ ಸಲ್ಲಿಸಲು ಉತ್ತಮ ವಿನ್ಯಾಸ ಹಾಗೂ ಹೊಸ ದಂತ ವಿಭಾಗಕ್ಕೆ ಅವಕಾಶವನ್ನು ಹೊಂದಿರುತ್ತದೆ.
ಸೇವಾಶ್ರಮವು ಸಲ್ಲಿಸಿದ ಕರುಣಾಮಯ ಸೇವೆಯು ಸ್ಥಳೀಯ ಸಮುದಾಯ ಮತ್ತು ಅಧಿಕಾರಿಗಳಿಂದ ಹೆಚ್ಚಿನ ಸದ್ಭಾವನೆ ಮತ್ತು ಮನ್ನಣೆಯನ್ನು ಗಳಿಸಿದೆ. ಈ ನವೀಕರಣಗಳು ಗುರುದೇವರ ಮಾನವಕುಲಕ್ಕೆ ಸೇವೆ ಸಲ್ಲಿಸುವುದರ ವಿಶಾಲ ವ್ಯಕ್ತಿತ್ವದ ಪವಿತ್ರ ಆದರ್ಶವನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ.
ಹಣಕಾಸಿನ ಅವಲೋಕನ ಮತ್ತು ಕಾಲಾನುಕ್ರಮ
- ಒಟ್ಟು ವೆಚ್ಚ: ₹12 ಕೋಟಿ
- ನಿರೀಕ್ಷಿತ ಪೂರ್ಣಗೊಳ್ಳುವ ದಿನಾಂಕ: ಡಿಸೆಂಬರ್ 2026
ಈ ಯೋಜಿತ ಸುಧಾರಣೆಗಳು ರಾಂಚಿಯನ್ನು ವಿಶ್ವಮಟ್ಟದ ಆಧ್ಯಾತ್ಮಿಕ ಯಾತ್ರಾ ಕೇಂದ್ರವಾಗಿ ಸಂರಕ್ಷಿಸುವಂತಿವೆ ಮತ್ತು ಗುರುದೇವರ ದೃಷ್ಟಿಕೋನಕ್ಕೆ ಅನುಗುಣವಾಗಿ, ನಿರ್ಗತಿಕರಿಗೆ ಕರುಣಾಮಯ ಸೇವೆಯ ದೀರ್ಘ ಸಂಪ್ರದಾಯವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ.
ನಿಮ್ಮ ಬೆಂಬಲವನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇವೆ
ಗುರುಜಿ ವೈಎಸ್ಎಸ್ ಆಶ್ರಮಗಳನ್ನು ಸಾಧಕರು ಆಳವಾಗಿ ಧ್ಯಾನ ಮಾಡಲು, ಆತ್ಮಕ್ಕೆ ಶಾಂತಿಯನ್ನು ಅನುಭವಿಸಲು ಮತ್ತು ದೇವರೊಂದಿಗೆ ಸಂಯೋಗದಲ್ಲಿ ಬೆಳೆಯಲು ಪವಿತ್ರ ನೆಲೆಗಳಾಗಿ ಕಲ್ಪಿಸಿದ್ದರು. ನಿಮ್ಮ ಕೊಡುಗೆಗಳು — ಪ್ರಾರ್ಥನೆ, ಸೇವೆ ಅಥವಾ ಆರ್ಥಿಕ ಸಹಾಯದ ಮೂಲಕ — ಸತ್ಯಾನ್ವೇಷಕರ ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ರಾಂಚಿ ಆಶ್ರಮದ ಪವಿತ್ರ ಅನುಭವವನ್ನು ಸುರಕ್ಷಿತವಾಗಿಟ್ಟುಕೊಳ್ಳುತ್ತವೆ.

































