ಕರ್ಮ ಯೋಗ ಮತ್ತು ಕ್ರಿಯಾ ಯೋಗ: ಆಧ್ಯಾತ್ಮಿಕ ಯಶಸ್ಸಿಗಾಗಿ ಬಾಹ್ಯ ಮತ್ತು ಆಂತರಿಕ ಕ್ರಿಯೆಯ ಶಕ್ತಿಯನ್ನು ಚಾಲಕ ಶಕ್ತಿಯಾಗಿ ಬಳಸುವುದು

ಪರಮಹಂಸ ಯೋಗಾನಂದರ ಜ್ಞಾನ-ಸಂಪತ್ತಿನಿಂದ ಆಯ್ದ ಭಾಗಗಳು

ಯೋಗವು ಯುಕ್ತ ಕ್ರಿಯೆಯ ಕಲೆ

ಯೋಗವು ಎಲ್ಲವನ್ನೂ ಭಗವತ್‌ಪ್ರಜ್ಞೆಯಲ್ಲಿ ಮಾಡುವ ಕಲೆ. ಕೇವಲ ನೀವು ಧ್ಯಾನ ಮಾಡುತ್ತಿರುವಾಗ ಮಾತ್ರವಲ್ಲ, ನೀವು ಕಾರ್ಯನಿರತರಾಗಿದ್ದಾಗಲೂ, ನಿಮ್ಮ ಆಲೋಚನೆಗಳು ಸದಾ ಅವನಲ್ಲಿ ನೆಲೆಗೊಂಡಿರಬೇಕು.

ಪ್ರತಿದಿನ ಗಾಢವಾದ ಧ್ಯಾನದಲ್ಲಿ ಅವನೊಡನೆ ಸಂಸರ್ಗ ಹೊಂದುವುದು ಮತ್ತು ನಿಮ್ಮ ಎಲ್ಲ ಕರ್ತವ್ಯಪೂರ್ಣ ಚಟುವಟಿಕೆಗಳಲ್ಲಿ ಅವನ ಪ್ರೇಮ ಮತ್ತು ಮಾರ್ಗದರ್ಶನವನ್ನು ನಿಮ್ಮೊಡನೆ ತೆಗೆದುಕೊಂಡು ಹೋಗುವುದೇ ನಿತ್ಯ ಶಾಂತಿ ಹಾಗೂ ಆನಂದದೆಡೆಗೆ ಕರೆದೊಯ್ಯುವ ಮಾರ್ಗ.

ಭಗವಂತನನ್ನು ಸಂತೃಪ್ತಿಗೊಳಿಸಲು ನೀವು ಎಲ್ಲವನ್ನೂ ಮಾಡುತ್ತಿದ್ದೀರಿ ಎಂಬ ಪ್ರಜ್ಞೆಯಲ್ಲಿ ನೀವು ಕೆಲಸ ಮಾಡಿದರೆ, ಆ ಕಾರ್ಯವು ನಿಮ್ಮನ್ನು ಅವನೊಡನೆ ಒಂದುಗೂಡಿಸುತ್ತದೆ. ಆದ್ದರಿಂದ, ಕೇವಲ ಧ್ಯಾನದಲ್ಲಿ ಮಾತ್ರ ನೀವು ಭಗವಂತನನ್ನು ಕಂಡುಕೊಳ್ಳಬಹುದು ಎಂದು ಕಲ್ಪಿಸಿಕೊಳ್ಳಬೇಡಿ. ಭಗವದ್ಗೀತೆಯು ಬೋಧಿಸುವ ಹಾಗೆ ಧ್ಯಾನ ಹಾಗೂ ಯುಕ್ತ ಚಟುವಟಿಕೆ ಎರಡೂ ಬಹಳ ಅವಶ್ಯಕವಾದಂಥವು. ಈ ಪ್ರಪಂಚದಲ್ಲಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ನೀವು ಭಗವಂತನ ಬಗ್ಗೆ ಯೋಚಿಸಿದರೆ, ನೀವು ಮಾನಸಿಕವಾಗಿ ಅವನೊಂದಿಗೆ ಒಂದಾಗಿರುತ್ತೀರಿ.

ಭಗವಂತನೊಡನೆ ಒಂದಾಗಿ ಕೆಲಸ ಮಾಡುವುದು ಈ ಜಗತ್ತಿನಲ್ಲಿ ಸಿದ್ಧಿಸಿಕೊಳ್ಳಬಹುದಾದಂಥ ಮಹತ್ತರ ಕಲೆ. ಎಲ್ಲ ಕಾರ್ಯಗಳನ್ನೂ ಭಗವತ್‌-ಪ್ರಜ್ಞೆಯಲ್ಲಿ ನಿರ್ವಹಿಸುವುದೇ ಅತ್ಯುಚ್ಛವಾದ ಯೋಗ.

ಕರ್ಮ ಯೋಗ: ಆಧ್ಯಾತ್ಮಿಕ ಕ್ರಿಯೆಯ ಮಾರ್ಗ…

ಕರ್ಮ ಯೋಗದ ಮಾರ್ಗವು ಸ್ವಾರ್ಥರಹಿತ ಚಟುವಟಿಕೆಯೊಂದಿಗೆ ಆತ್ಮವು ಭಗವಂತನೊಡನೆ ಒಂದಾಗುವ ಮಾರ್ಗವಾಗಿದೆ.

ಧ್ಯಾನ ಹಾಗೂ ನೀವು ಮಾಡುವುದೆಲ್ಲವೂ ಭಗವಂತನಿಗೋಸ್ಕರವೇ ಎಂಬ ಚಿಂತನೆಯಲ್ಲಿ ಕೆಲಸ ಮಾಡುವುದು, ಈ ಎರಡೂ ಇರುವ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು–ಅದೇ ಕರ್ಮ ಯೋಗ. ಧ್ಯಾನದಲ್ಲಿ ನೀವು ಭಗವಂತನ ನಿತ್ಯ ಆನಂದವನ್ನು ಮನಗಂಡಾಗ, ನೀವು ಎಂದೂ ಶರೀರಕ್ಕೆ ಬಂಧಿತನಾಗಿದ್ದೇನೆ ಎಂದು ಭಾವಿಸುವುದಿಲ್ಲ, ಮತ್ತು ನೀವು ಅವನಿಗಾಗಿ ಕಾರ್ಯ ನಿರ್ವಹಿಸಲು ಸ್ಫೂರ್ತಿಯಿಂದ ತುಂಬಿಕೊಂಡಿರುತ್ತೀರಿ. ನೀವು ಭಗವಂತನ ಪ್ರೇಮಿಯಾಗಿ ಆಲಸಿಗಳಾಗಿರಲು ಸಾಧ್ಯವಿಲ್ಲ. ಯಾರು ಧ್ಯಾನ ಮಾಡುತ್ತಾ ಭಗವಂತನನ್ನು ಪ್ರೇಮಿಸುತ್ತಾರೋ ಅವರು ಅವನಿಗಾಗಿ ಹಾಗೂ ಇತರರಿಗಾಗಿ ಸದಾ ಚಟುವಟಿಕೆಯಿಂದಿರುತ್ತಾರೆ.

…ಲಾಭ ಗಳಿಸುವ ಪರಿ ಸ್ವಾರ್ಥದ ಹಂಬಲವಿಲ್ಲದೆ
ಯಾವಾಗ ನಿಮ್ಮ ಕಾರ್ಯವು, ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರರ ಭೌತಿಕ ಅನುಕೂಲಗಳಿಗಾಗಿ ಕೇವಲ ಹಣ ಸಂಪಾದನೆಯ ಅಥವಾ ಸ್ವಾರ್ಥಸಾಧನೆಯ ಯಾವುದಾದರೂ ಚಟುವಟಿಕೆಯ ಮೇಲೆ ಮಾತ್ರ ಕೇಂದ್ರಿತವಾಗಿರುತ್ತದೆಯೋ, ಆಗ ನೀವು ಭಗವಂತನಿಂದ ದೂರ ಹೋಗುತ್ತಿರುತ್ತೀರಿ. ಹೀಗೆ ಬಹಳಷ್ಟು ಜನರು ಅವರ ಶಕ್ತಿಯನ್ನು ಅವರ ಆಸಕ್ತಿಗಳ ಮೇಲೆ ಮತ್ತು ಹೆಚ್ಚು ಹೆಚ್ಚು ಭೌತಿಕ ಸಂಪತ್ತನ್ನು ಹೊಂದಬೇಕೆಂಬ ಆಸೆಗಳ ಮೇಲೆ ತೊಡಗಿಸಿಕೊಂಡಿರುತ್ತಾರೆ. ಆದರೆ ನಿಮ್ಮ ಸಕ್ರಿಯ ಶಕ್ತಿಯನ್ನು ಭಗವಂತನನ್ನು ಅರಸಲು ಬಳಸಿದ ತಕ್ಷಣ, ನೀವು ಅವನ ಕಡೆಗೆ ಚಲಿಸುತ್ತೀರಿ.

…ಆದರೆ ಆತ್ಮಸಾಕ್ಷಿಯೊಂದಿಗೆ ಮತ್ತು ಸ್ಫೂರ್ತಿಯೊಂದಿಗೆ
ಯಾರು ತನ್ನ ಕರ್ತವ್ಯಗಳನ್ನು ಅಸ್ತವ್ಯಸ್ತವಾಗಿ ಅಥವಾ ವಿವೇಚನೆಯಿಲ್ಲದೇ ಮಾಡುತ್ತಾನೋ, ಅಥವಾ ಯಾರು ಧ್ಯಾನವನ್ನು ನಿರಾಸಕ್ತಿಯಿಂದ ಮಾಡುತ್ತಾನೋ, ಅವನು ಭಗವಂತನನ್ನು ಸಂತೃಪ್ತಿಗೊಳಿಸಲೂ ಸಾಧ್ಯವಿಲ್ಲ ಅಥವಾ ವಿಮೋಚನೆ ಹೊಂದಲೂ ಸಾಧ್ಯವಿಲ್ಲ. ಯಾವುದೇ ಕ್ರಿಯೆ — ದೈಹಿಕ, ಮಾನಸಿಕ ಅಥವಾ ಆಧ್ಯಾತ್ಮಿಕ — ಭಗವಂತನೊಂದಿಗೆ ಒಂದಾಗುವುದೇ ಅದರ ಫಲವಾಗಿರಲಿ ಎಂಬ ಅಪೇಕ್ಷೆಯೊಂದಿಗೆ ಮಾಡಿದಾಗ ಅದು “ಸ್ವಾರ್ಥಪರ” ಕ್ರಿಯೆಯಾಗಿರುವುದಿಲ್ಲ. ಬದಲಾಗಿ, ಅದು ಒಂದು ಪರಿಪೂರ್ಣ ಕ್ರಿಯೆ, ಅಂದರೆ, ಅದು ಸೃಷ್ಟಿಯಲ್ಲಿ ದಿವ್ಯ ಸಂಕಲ್ಪವನ್ನು ನೆರವೇರಿಸಿದಂತಾಗುತ್ತದೆ.

ಕ್ರಿಯಾ ಯೋಗ: ಕ್ರಿಯೆಯ ಅತ್ಯುನ್ನತ ಮಾರ್ಗ

ಗಾಢವಾದ ಧ್ಯಾನವು ತೀಕ್ಷ್ಣ ಮಾನಸಿಕ ಚಟುವಟಿಕೆಯಾಗಿದೆ–ಕ್ರಿಯೆಯ ಅತ್ಯುನ್ನತ ಸ್ವರೂಪ. ಕ್ರಿಯಾ ಯೋಗದ ದಿವ್ಯ ವಿಜ್ಞಾನದ ಮೂಲಕ, ಮುಂದುವರಿದ ಯೋಗಿಯು, ಅವನ ಮನಸ್ಸನ್ನು ಶಾರೀರಿಕ ಇಂದ್ರಿಯಗಳಿಂದ ಹಿಂತೆಗೆದುಕೊಂಡು ಅದನ್ನು ಆತ್ಮವನ್ನು-ಮುಕ್ತಮಾಡುವ ಕಾರ್ಯದ ಆಂತರಿಕ ಚಟುವಟಿಕೆಗಳ ಸೂಕ್ಷ್ಮಾತಿ ಸೂಕ್ಷ್ಮ ಶಕ್ತಿಗಳೆಡೆಗೆ ನಿರ್ದೇಶಿಸುವಂತೆ ಮಾಡುತ್ತಾನೆ. ಇಂತಹ ಆಧ್ಯಾತ್ಮಿಕ ಪರಿಣಿತನು, ನೈಜ ಭಗವತ್‌-ಸಂಸರ್ಗದ ಕ್ರಿಯೆಯನ್ನು ಮಾಡುತ್ತಾನೆ (ಕರ್ಮ ಯೋಗ).

ಇದು ಕರ್ಮ ಅಥವಾ ಕ್ರಿಯೆಯ ಅತ್ಯುನ್ನತ ಮಾರ್ಗವಾಗಿದೆ.

ಆಂತರಿಕ ಹಾಗೂ ಬಾಹ್ಯ ಎರಡು ಕ್ರಿಯೆಗಳೂ ಅತ್ಯಾವಶ್ಯಕ

ಧ್ಯಾನದ ಮಾರ್ಗದಲ್ಲಿ ಪರಮಾತ್ಮನೊಡನೆಯ ಪ್ರಾರಂಭಿಕ ಪ್ರೇಮಲೀಲೆಯು ಪ್ರಾಯಶಃ ಭಕ್ತನನ್ನು ಏಕಮುಖನನ್ನಾಗಿ ಮಾಡಬಹುದು; ಅವನು ಕರ್ಮ ಮಾರ್ಗವನ್ನು ತೊರೆಯುವುದರ ಕಡೆ ಒಲವುಳ್ಳವನಾಗಿರುತ್ತಾನೆ. ಆದರೆ ಬ್ರಹ್ಮಾಂಡ ನಿಯಮವು ಮನುಷ್ಯನನ್ನು, ಅವನ ಬದುಕಿನ ನಿರ್ವಹಣೆಗೆ ಸಂಬಂಧಪಟ್ಟಂತೆ ಅವನು ಯಾವುದೇ ಮಾನಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದರೂ ಸಹ, ಅವನು ಕ್ರಿಯಾಶೀಲನಾಗಿರುವಂತೆ ಒತ್ತಾಯಿಸುತ್ತದೆ. ಯಾರು ಸೃಷ್ಟಿಯ ಭಾಗವಾಗಿದ್ದಾನೋ ಅವನು ಸೃಷ್ಟಿ ನಿಯಮದ ಕಟ್ಟುಪಾಡುಗಳಿಗೆ ಬಾಧ್ಯನಾಗಿರುತ್ತಾನೆ.

ಸದ್ಗ್ರಂಥಗಳು, ಪ್ರಗತಿ ಹೊಂದಿದ ಭಕ್ತಾದಿಗಳೂ ಕೂಡ ಅವರು ಕೆಲಸ ಮಾಡದಿದ್ದರೆ ಮೇಲಿನಿಂದ ಕೆಳಕ್ಕೆ ಬೀಳುತ್ತಾರೆ ಎಂಬ ಹಲವಾರು ದೃಷ್ಟಾಂತಗಳನ್ನು ಹೊಂದಿವೆ… ಅಂತಿಮ ಮುಕ್ತಿಯನ್ನು ಸಿದ್ಧಿಸಿಕೊಳ್ಳುವವರೆಗೂ, ನಿಷ್ಕ್ರಿಯೆಯು ಮಾನಸಿಕ ಆಲಸ್ಯ, ಐಂದ್ರಿಯ ದಾಸ್ಯ ಮತ್ತು ಭಗವತ್‌-ಪ್ರಜ್ಞೆಯ ನಷ್ಟದೆಡೆಗೆ ಕರೆದೊಯ್ಯುತ್ತದೆ.

ಸಮತೋಲಿತ ಜೀವನ: ಸಾಕ್ಷಾತ್ಕಾರಕ್ಕೆ ಖಚಿತ ಮಾರ್ಗ

ಧ್ಯಾನ ಹಾಗೂ ಚಟುವಟಿಕೆಯ ನಡುವಿನ ಸಮತೋಲನವನ್ನು ನಿರ್ವಹಿಸುವ ಕಷ್ಟಮಯ ಹೆಣಗಾಟದಲ್ಲಿ, ಭಗವಂತನ ಪ್ರಜ್ಞೆಯಲ್ಲಿರುವುದರಲ್ಲಿ ಮಹತ್ತರ ಸುರಕ್ಷತೆ ಅಡಗಿದೆ.

ಮನುಷ್ಯನು ನಿರಂತರ ಧ್ಯಾನದಿಂದ ತನ್ನ ಮನಸ್ಸನ್ನು ಎಷ್ಟು ತರಬೇತಿಗೊಳಿಸಿಕೊಳ್ಳಬೇಕೆಂದರೆ, ಅವನು ತನ್ನ ದೈನಂದಿನ ಜೀವನದಲ್ಲಿ ಅಗತ್ಯ ಸೇವಾಮನೋಭಾವದ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಂತೆಯೇ ಆಂತರ್ಯದಲ್ಲಿ ಭಗವತ್ಪ್ರಜ್ಞೆಯನ್ನೂ ಕಾಪಾಡಿಕೊಳ್ಳುವಂತಿರಬೇಕು. ಎಲ್ಲ ಸ್ತ್ರೀ-ಪುರುಷರೂ ತಮ್ಮ ಬದುಕಿನ ದಿನನಿತ್ಯದ ದಿನಚರಿಯಲ್ಲಿ ಗಾಢವಾದ ಧ್ಯಾನವನ್ನು ಸೇರಿಸಿಕೊಂಡರೆ, ಅವರ ಪ್ರಾಪಂಚಿಕ ಜೀವನವನ್ನು ಕೊನೆಗಾಣದ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಗಳಿಂದ ಮುಕ್ತಗೊಳಿಸಿಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನು ಹಂಚಿಕೊಳ್ಳಿ