ಭಗವಂತನೊಡನೆ ಸಂಸರ್ಗ ಹೊಂದಲು ಇತರ ಪ್ರಾಮಾಣಿಕ ಸತ್ಯಾನ್ವೇಷಕರ ಜೊತೆಗೂಡುವುದೆಂದರೆ ಆಧ್ಯಾತ್ಮಿಕ ಮಾರ್ಗದಲ್ಲಿ ಒಂದು ಅತ್ಯಮೂಲ್ಯ ಆಶೀರ್ವಾದವೇ ಸರಿ. ಗುರುದೇವರ ಆಶ್ರಮಗಳಲ್ಲಿ, ಭಕ್ತರು ನಡೆಸುವ ತಮ್ಮ ನಿತ್ಯ ದಿನಚರಿಯ ಜೀವಾಳವಾದ ಸಾಮೂಹಿಕ ಧ್ಯಾನಗಳಲ್ಲಿ, ನಾನು ಕಂಡುಕೊಂಡ ಆಂತರಿಕ ಸಹಾಯಕ್ಕಾಗಿ ಹಾಗೂ ಧ್ಯಾನದ ತಂತ್ರಗಳ ಅಭ್ಯಾಸ ಮಾಡಲು ಮತ್ತು ಭಗವಂತನನ್ನು ಆಳವಾಗಿ ಅರಸಲು, ಮಾಡುವ ಒಟ್ಟು ಪ್ರಯತ್ನಗಳಿಂದ ಲಭಿಸುವ ಆಧ್ಯಾತ್ಮಿಕ ಪ್ರೇರಣೆ ಹಾಗೂ ಪ್ರಗತಿಗಾಗಿ ನಾನು ಅತ್ಯಂತ ಕೃತಜ್ಞಳಾಗಿದ್ದೇನೆ.
ಭಕ್ತರು ಧ್ಯಾನಕ್ಕಾಗಿ ಒಟ್ಟಾಗಿ ಸೇರಿದಾಗ, ಅದು ನಿರ್ಧಾರಿತವಾದುದಾಗಿರಬಹುದು ಅಥವಾ ದೈವಿಕ ಮಿತ್ರರನ್ನು ಸುಮ್ಮನೆ ಒಟ್ಟುಗೂಡಲು ಕರೆದುದಾಗಿರಬಹುದು, ಗುರೂಜಿಯವರು ಅದೆಷ್ಟು ಸಂತಸ ಪಡುತ್ತಿದ್ದರು. ಅವರು ಯುವಕರಾಗಿದ್ದಾಗ ಅವರ ಗುರು ಸ್ವಾಮಿ ಶ್ರೀ ಯುಕ್ತೇಶ್ವರರು ಅವರಿಗೆ, ಒಳ್ಳೆಯ ಸಂಗಾತಿಗಳೊಂದಿಗೆ ಧ್ಯಾನ ಮಾಡುವ ಮೂಲಕ, ಆ “ಆಧ್ಯಾತ್ಮಿಕ ಅಂಗರಕ್ಷಕರನ್ನು” ಆಗಾಗ್ಗೆ ಅವರ ಸುತ್ತಲೂ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ಅವರು ಹೇಳಿದರು. ಅನುಪಯುಕ್ತ ಚಿತ್ತ ಚಾಂಚಲ್ಯಗಳು, ಅವಿಶ್ರಾಂತತೆ ಅಥವಾ ಆಂತರಿಕ ಅಸ್ಥಿರತೆಗಳು ನಮ್ಮನ್ನು ಭಗವದ್ ಅನ್ವೇಷಣೆಯಿಂದ ದೂರಕ್ಕೆ ಎಳೆಯುವ ಸಾಧ್ಯತೆಯಿದೆ, ಅದರಿಂದಾಗಿ ನಾವು ಅವನನ್ನು ಮರೆಯಬಹುದು. ಆದರೆ ನಾವು ಇತರರೊಡನೆ ಧ್ಯಾನ ಮಾಡಿದಲ್ಲಿ, ಭಕ್ತಿಯ ಅದ್ಭುತ ವಾತಾವರಣ ಸೃಷ್ಟಿಯಾಗಿ, ಪ್ರತಿಯೊಬ್ಬ ಭಕ್ತನೂ ಉಳಿದವರ ಉತ್ಸಾಹ ಹಾಗೂ ಏಕಾಗ್ರತೆಗಳ ಸಹಾಯದಿಂದ ಬಲವರ್ಧಿತನಾಗುವನು. ನಮ್ಮಲ್ಲಿ ಭಗವತ್ ಪ್ರೇಮ ವೃದ್ಧಿಯಾಗುವುದು ಮತ್ತು ಅವನು ನಮಗೆ ಜೀವನದ ಸದಾ ಬದಲಾಗುತ್ತಿರುವ ಬಾಹ್ಯ ನಾಟಕದ ತಾತ್ಕಾಲಿಕ ಆಕರ್ಷಣೆಗಳಿಗಿಂತ ಹೆಚ್ಚು ವಾಸ್ತವನೂ ಹೆಚ್ಚು ಸಂಪನ್ನನೂ ಆಗುವನು. ಗುರೂಜಿಯವರು ಹೇಳಿರುವರು, “ಸಾಮೂಹಿಕ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಹಾಗೂ ನುರಿತ ಧ್ಯಾನಿಗಳನ್ನು ರಕ್ಷಿಸುವ ಕೋಟೆಯಾಗಿದೆ. ಒಟ್ಟಾಗಿ ಮಾಡುವ ಧ್ಯಾನವು, ಸಾಮೂಹಿಕ ಕಾಂತತ್ವದ ಅದೃಶ್ಯ ಸ್ಪಂದನಗಳ ವಿನಿಮಯದ ನಿಯಮಾನುಸಾರ ಗುಂಪಿನ ಪ್ರತಿಯೊಬ್ಬ ಸದಸ್ಯನಲ್ಲಿಯೂ ಆತ್ಮಸಾಕ್ಷಾತ್ಕಾರದ ತೀವ್ರತೆಯನ್ನು ವೃದ್ಧಿಸುತ್ತದೆ.”
ನಿಮ್ಮಲ್ಲಿ ಅನೇಕರು ನಿಮ್ಮ ಮಂದಿರಗಳ, ಕೇಂದ್ರಗಳ ಮತ್ತು ಸಮೂಹಗಳ ಧ್ಯಾನಗಳಲ್ಲಿ ಭಾಗವಹಿಸುತ್ತಿರುವಿರಿ, ಎಂಬುದನ್ನು ತಿಳಿದು ಮತ್ತು ನೀವು ಪಡೆದಿರುವ ಶಾಶ್ವತ ಪ್ರಯೋಜನಗಳನ್ನು ವಿವರಿಸುವ ಪತ್ರಗಳನ್ನು ಓದಿ ನನಗೆ ಬಹಳ ಆನಂದ ಉಂಟಾಗುತ್ತಿದೆ. ನಿಮ್ಮ ಈ ಸಾಧನೆಯ ಪ್ರಮುಖ ಭಾಗವನ್ನು ಹೃತ್ಪೂರ್ವಕವಾಗಿ ಮುಂದುವರಿಸಿ. ನೆನಪಿಡಿ, ಇದರಿಂದಾಗಿ ನೀವು ನಿಮಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಆದರೆ ನೀವು ಭಗವಂತನನ್ನು ಪ್ರಾಮಾಣಿಕವಾಗಿ, ಪ್ರೇಮಪೂರ್ವಕವಾಗಿ, ಅನಿರ್ಬಂಧಿತವಾಗಿ ಅರಸಿದಾಗ, ಈ ಭೂಮಿಯ ಮೇಲೆ ಮತ್ತಷ್ಟು ಸನ್ಮಾರ್ಗ ಹಾಗೂ ಭಗವತ್ ಪ್ರಜ್ಞೆಗೆ ಕೊಡುಗೆಯನ್ನು ನೀಡುವಿರಿ. ಮತ್ತು ಒಟ್ಟಾಗಿ ಧ್ಯಾನ ಮಾಡುವುದರಿಂದ ನಿಮ್ಮೆಲ್ಲರಲ್ಲಿರುವ ಭಗವದ್ ಸಂಸರ್ಗದ ಮೂಲಕ ನೀವು ಎಂದೆಂದಿಗೂ ಆಳವಾಗುತ್ತಿರುವ ಸ್ನೇಹ ಮತ್ತು ಸಾಮರಸ್ಯದ ಭಾಂದವ್ಯವನ್ನು ರೂಪಿಸುವಿರಿ.
ಭಗವಂತನ ಪ್ರೇಮ ನಿಮ್ಮೊಂದಿಗಿರಲಿ,

ಶ್ರೀ ದಯಾ ಮಾತಾ