ಎಲ್ಲೆಡೆಯೂ ಇರುವ ಕ್ರಿಸ್ತನಿಗಾಗಿ ತೊಟ್ಟಿಲು

ಪರಮಹಂಸ ಯೋಗಾನಂದರಿಂದ

ಬರಲಿರುವ ಈ ಕ್ರಿಸ್ಮಸ್‌ ಸಂದರ್ಭದಲ್ಲಿ, ಕ್ರಿಸ್ಮಸ್‌ನ ಸರ್ವವ್ಯಾಪಕತ್ವವು ನಿಮ್ಮ ಪ್ರಜ್ಞೆಯಲ್ಲಿ ಮತ್ತೊಮ್ಮೆ ಹೊರಹೊಮ್ಮಲು ಸಾಧ್ಯವಾಗಲು ಮಹೋನ್ನತ ಭಕ್ತಿಯ ಒಂದು ಹೊಸ ದ್ವಾರವನ್ನು ತೆರೆಯಿರಿ. ಪ್ರತಿ ದಿನ, ಪ್ರತಿ ಘಂಟೆ, ಪ್ರತಿ ಸುವರ್ಣ ಕ್ಷಣವೂ, ಕ್ರಿಸ್ತನು ನಿಮ್ಮ ಅಜ್ಞಾನದ ಕತ್ತಲಿನ ಬಾಗಿಲನ್ನು ಬಡಿಯುತ್ತಿದ್ದಾನೆ. ಈಗ, ಈ ಪೂಜನೀಯ ಪವಿತ್ರ ಉದಯದಲ್ಲಿ, ಕ್ರಿಸ್ತನು ವಿಶೇಷವಾಗಿ ನಿಮ್ಮೊಳಗೆ ಕ್ರಿಸ್ತ ಪ್ರಜ್ಞೆಯ ಸರ್ವವ್ಯಾಪಿತ್ವವನ್ನು ಜಾಗೃತಗೊಳಿಸಲು ನಿಮ್ಮ ಆಂತರ್ಯದ ಬೇಡಿಕೆಗೆ ಉತ್ತರವಾಗಿ ಬರುತ್ತಿದ್ದಾನೆ.

ಎಣೆಯಿಲ್ಲದ ಕಂದನನ್ನು ಅದರ ಸ್ವಾಗತದ ವೈಶಾಲ್ಯದಲ್ಲಿ ಇರಿಸಿಕೊಳ್ಳಲು ಎಡೆಯಿರುವಷ್ಟಂತಾಗಲು ನಿಮ್ಮ ಧ್ಯಾನದ ನೂಲುಗಳಿಂದ ಮಮತೆಯ ಅನುಭವವನ್ನೀಯುವ ಒಂದು ತೊಟ್ಟಿಲನ್ನು ಹೆಣೆಯಿರಿ. ಕ್ರಿಸ್ತನು ಹರಿದ್ವರ್ಣದ ದಳಗಳಲ್ಲಿ ಜನ್ಮವೆತ್ತಿದ್ದಾನೆ; ಅವನ ಕೋಮಲತೆಯು ಎಲ್ಲ ಪರಿಮಳಗಳಲ್ಲಿ ತೊಟ್ಟಿಲಿಗೇರಿದೆ. ಕ್ಷೀರಸ್ಫಟಿಕ ಸಾಗರದಿಂದ ಅಲಂಕೃತ ಭೂಮಂಡಲ, ಥಳಥಳಿಸುತ್ತಿರುವ ನಕ್ಷತ್ರಗಳಿಂದ ತುಂಬಿದ ನೀಲಾಕಾಶದ ಹುಲ್ಲುಗಾವಲು, ಸ್ವಾರ್ಥತ್ಯಾಗದ ಹುತಾತ್ಮರ ಹಾಗೂ ಸಂತರ ಕಡುಕೆಂಪಿನ ಪ್ರೀತಿ ಎಲ್ಲವೂ ಎಲ್ಲೆಡೆ ವ್ಯಾಪಿಸಿರುವ ಬಾಲ ಕ್ರಿಸ್ತನಿಗೆ ಒಂದು ಧಾಮವನ್ನು ನೀಡಲು ಒಂದರೊಡನೊಂದು ಸ್ಪರ್ಧಿಸುತ್ತಿವೆ.

ಎಲ್ಲೆಡೆಯಿರುವ ಈ ಕ್ರಿಸ್ತನು ನಿತ್ಯತೆಯ ಮಡಿಲಲ್ಲಿ ನಿದ್ರಿಸುತ್ತಿದ್ದಾನೆ; ಯಾವುದೇ ಸಮಯದಲ್ಲಾದರೂ, ಎಲ್ಲೇ ಆದರೂ, ಅದರಲ್ಲೂ ವಿಶೇಷವಾಗಿ ನಿಮ್ಮ ನೈಜ ಪ್ರೇಮದ ಬೆಚ್ಚಗೆಯಲ್ಲಿ ಅವನು ಹೊಸ ಜನ್ಮವನ್ನು ಪಡೆಯಲು ಬಯಸುತ್ತಾನೆ. ಊಹಾತೀತನಾದ ಕ್ರಿಸ್ತನು ಆಕಾಶದ ಪ್ರತಿಯೊಂದು ಚುಕ್ಕೆಯಲ್ಲಿ ನಿತ್ಯನೂತನ ಪರಿಜ್ಞಾನ ಮತ್ತು ಸೃಜನಶೀಲ ಅಭಿವ್ಯಕ್ತಿಯ ಉಜ್ವಲ ಪ್ರಭೆಯಾಗಿ ಉಪಸ್ಥಿತನಿದ್ದಾನೆ, ಆದರೂ ನಿಮ್ಮ ನಿರಂತರ ಶ್ರದ್ಧಾಭಕ್ತಿಯ ತೊಟ್ಟಿಲಿನಲ್ಲಿ ಕಾಣಿಸಿಕೊಳ್ಳಲು ಅವನೇ ನಿರ್ಧರಿಸದ ಹೊರತು ನೀವು ಕ್ರಿಸ್ತನನ್ನು ಕಾಣಲಾರಿರಿ.

ಕೇವಲ ಸ್ವ-ಪ್ರೇಮವನ್ನು ಹಿಡಿದಿಟ್ಟುಕೊಂಡು ನಿಮ್ಮ ಹೃದಯದ ಆರಾಮದಾಯಕ ತೊಟ್ಟಿಲು ಬಹಳ ದೀರ್ಘ ಕಾಲದಿಂದ ಸಣ್ಣದಾಗಿಯೇ ಉಳಿದಿದೆ; ಸಾಮಾಜಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಜೀವಿಗಳ ಮತ್ತು ವಿಶ್ವ ಕ್ರಿಸ್ತ-ಪ್ರೀತಿಯು ಅದರಲ್ಲಿ ಜನಿಸುವಂತಾಗಲು ಮತ್ತು ಅದು ಏಕೈಕ ಪ್ರೀತಿಯಾಗಲು ಈಗ ನೀವು ಅದನ್ನು ಬೃಹತ್ತಾಗಿ ಮಾಡಬೇಕು.

ಕ್ರಿಸ್ಮಸ್‌ ಅನ್ನು ಕೇವಲ ತಕ್ಕ ಉತ್ಸವ ಸಮಾರಂಭಗಳು ಮತ್ತು ಭೌತಿಕ ಉಡುಗೊರೆಗಳ ವಿನಿಮಯದಿಂದ ಮಾತ್ರ ಆಚರಿಸುವುದಲ್ಲ, ಆಳವಾದ, ನಿರಂತರ ಧ್ಯಾನದಿಂದ ನಿಮ್ಮ ಪ್ರಜ್ಞೆಯನ್ನು ಕ್ರಿಸ್ತನ ಒಂದು ವಿಶ್ವ ಕ್ಯಾಥೆಡ್ರಲ್‌ (ಇಗರ್ಜಿ) ಮಾಡಿಕೊಂಡು ಕೂಡ ಅಚರಿಸಬೇಕು. ನಿಮ್ಮ ವಿರೋಧಿ ಸಹೋದರರು ಹಾಗೂ ನಿಮ್ಮ ಮಿತ್ರ ಸಹೋದರರನ್ನು ಉದ್ಧರಿಸಲು ನೀವು ಅಲ್ಲಿ ನಿಮ್ಮ ಪ್ರೀತಿಯ, ಸದಾಶಯದ, ಮತ್ತು ಸೇವೆಯ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಬೇಕು – ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ.

ಊಹಾತೀತ ಕ್ರಿಸ್ತನು ಎಲ್ಲೆಡೆಯಿದ್ದಾನೆ; ಅವನ ಜನನವನ್ನು ಹಿಂದು, ಬೌದ್ಧ, ಕ್ರೈಸ್ತ, ಮಹಮ್ಮದೀಯ, ಯೆಹೂದ್ಯ, ಮತ್ತು ಇತರ ಎಲ್ಲ ನೈಜ ಧರ್ಮಗಳ ಮಂದಿರಗಳಲ್ಲೂ ಆರಾಧಿಸಿ. ಸತ್ಯದ ಪ್ರತಿಯೊಂದು ಅಭಿವ್ಯಕ್ತಿಯೂ ಸರ್ವವ್ಯಾಪಕ ಕ್ರಿಸ್ತಾನುಭವದಿಂದ ಹರಿಯುತ್ತದೆ, ಆದ್ದರಿಂದ ಆ ಪವಿತ್ರ ಸರ್ವವ್ಯಾಪಿ ಬುದ್ಧಿಶಕ್ತಿಯನ್ನು ಪ್ರತಿಯೊಂದು ನೈಜ ಧರ್ಮ, ನಂಬಿಕೆ ಮತ್ತು ಬೋಧನೆಗಳಲ್ಲಿ ಆರಾಧಿಸುವುದನ್ನು ಕಲಿತುಕೊಳ್ಳಿ. ವಿಶ್ವವ್ಯಾಪಿ ಕ್ರಿಸ್ತನು ದಿವ್ಯ ಜೀವಿಯಾಗಿ ಅಂದರೆ ಮನುಷ್ಯನಾಗಿ ಅವತರಿಸಲು ಕನಸು ಕಂಡಿದ್ದರಿಂದ, ನೀವು ಪ್ರತಿಯೊಂದು ರಾಷ್ಟ್ರೀಯತೆ ಮತ್ತು ಜನಾಂಗದೆಡೆಗೆ ಹೊಸದಾಗಿ ಜಾಗೃತಗೊಂಡ ನಿಮ್ಮ ಸಮಾನ ಪ್ರೀತಿಯಲ್ಲಿ ಕ್ರಿಸ್ತನ ಜನನವನ್ನು ಆರಾಧಿಸಬೇಕು.

ಹೊಸದಾಗಿ ಅರಳಿದ ಎಲ್ಲ ಹೂಗಳು ಮತ್ತು ಆಕಾಶದ ಮಿನುಗುಗಳು ಊಹಾತೀತ ಕ್ರಿಸ್ತನ ಪ್ರತಿಬಿಂಬಗಳು; ಪ್ರತಿಯೊಂದನ್ನೂ ನಿಮ್ಮ ಪ್ರೀತಿಯಿಂದ ಅಲಂಕರಿಸಿರಿ. ನಿಮ್ಮ ಪೋಷಕರು, ಸ್ನೇಹಿತರು, ಬಂಧುಗಳು, ನೆರೆಹೊರೆಯವರು ಮತ್ತು ಎಲ್ಲ ಜನಾಂಗಗಳಿಗಾಗಿ ಮಾದಕ ಕ್ರಿಸ್ತ-ಪ್ರೇಮದ ಜನನವನ್ನು ನಿಮ್ಮ ಪ್ರೀತಿಯಲ್ಲಿ ಅವಲೋಕಿಸಿ. ನಿಮ್ಮ ಆತ್ಮದ ಧಾಮದಲ್ಲಿ, ನಿಮ್ಮ ಚಂಚಲ ಆಲೋಚನೆಗಳೆಲ್ಲ ಸೇರಿ, ಕ್ರಿಸ್ತನಿಗಾಗಿ ಆಚರಿಸುವ ಆಳವಾದ ಸಂಘಟಿತ ಪ್ರೇಮದ ಸೇವೆಯಲ್ಲಿ ತಮ್ಮನ್ನು ತಾವು ಸ್ತಬ್ಧಗೊಳಿಸಿಕೊಳ್ಳಲು ಅವುಗಳನ್ನು ಆಹ್ವಾನಿಸಿ.

ಕ್ರಿಸ್ಮಸ್‌ನ ಉಡುಗೊರೆಗಳನ್ನು ಕುಟುಂಬ ವೃಕ್ಷದ ಸುತ್ತ ಇಟ್ಟಾಗ, ಪ್ರತಿಯೊಂದು ಚಿಂತನೆಯನ್ನೂ ಕ್ರಿಸ್ತನ ಪೂಜಾವೇದಿಕೆಯನ್ನಾಗಿ ಮಾಡಿಕೊಳ್ಳಿ ಮತ್ತು ಉಡುಗೊರೆಗಳನ್ನು ನಿಮ್ಮ ಸದ್ಭಾವನೆಯಿಂದ ಸಂಪೂರಿತಗೊಳಿಸಿ. ಇಡೀ ಸೃಷ್ಟಿಯಲ್ಲಿ ಜನನವಾಗಿರುವಂತೆ ಕ್ರಿಸ್ತನನ್ನು ಆರಾಧಿಸಿ: ನಕ್ಷತ್ರದಲ್ಲಿ, ಎಲೆಯಲ್ಲಿ, ಹೂವಿನಲ್ಲಿ, ನೈಟಿಂಗೇಲ್‌ನಲ್ಲಿ, ಕಿರು ಹೂಗೊಂಚಲಿನಲ್ಲಿ ಮತ್ತು ನಿಮ್ಮ ಮಖಮಲ್ಲಿನ ಭಕ್ತಿಯಲ್ಲಿ. ನಿಮ್ಮ ಹೃದಯವನ್ನು ಎಲ್ಲ ಹೃದಯಗಳ ಜೊತೆ ಒಂದಾಗಿಸಿ, ಕ್ರಿಸ್ತನು ಜನಿಸಿ ಎಂದೆಂದೂ ಅಲ್ಲಿಯೇ ಇರಲೆಂದು.

(ಪರಮಹಂಸ ಯೋಗಾನಂದರ ದಿ ಸೆಕಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್‌: ದಿ ರಿಸರೆಕ್ಷನ್‌ ಆಫ್‌ ದಿ ಕ್ರೈಸ್ಟ್‌ ವಿದಿನ್‌ ಯು ನಿಂದ ಆಯ್ದ ಭಾಗಗಳು)

ಇದನ್ನು ಹಂಚಿಕೊಳ್ಳಿ