“ತನ್ನನು ತಾನು ಗೆಲ್ಲುವುದೇ ನಿಜವಾದ ವಿಜಯ — ಮಿತಿಗೊಳಪಟ್ಟ ನಿಮ್ಮ ಪ್ರಜ್ಞೆಯನ್ನು ಜಯಿಸುವುದು ಮತ್ತು ನಿಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಮಿತಿಯಿಲ್ಲದೆ ವಿಸ್ತರಿಸುವುದು. ನೀವು ಎಲ್ಲ ಮಿತಿಗಳನ್ನು ಮೀರಿ, ಎಲ್ಲಿಯವರೆಗೆ ಹೋಗಲು ಬಯಸುವಿರೋ ಅಲ್ಲಿಯವರೆಗೆ ಹೋಗಬಹುದು ಮತ್ತು ಅತ್ಯುನ್ನತ ವಿಜಯದ ಅಸ್ತಿತ್ವವನ್ನು ಬದುಕಬಹುದು.”
— ಪರಮಹಂಸ ಯೋಗಾನಂದ
ಹೊಸ ವರ್ಷಕ್ಕೆ ನಾವು ಪ್ರವೇಶಿಸುತ್ತಿರುವಂತೆ, ಗುರುದೇವ ಪರಮಹಂಸ ಯೋಗಾನಂದರ ಬೋಧನೆಗಳಲ್ಲಿರುವ ಕಾಲಾತೀತ ಸತ್ಯಗಳನ್ನು ಅಭ್ಯಾಸ ಮಾಡುತ್ತಿರುವ ಪ್ರಾಮಾಣಿಕ ಆತ್ಮಗಳ ಬೆಳೆಯುತ್ತಿರುವ ಕುಟುಂಬವನ್ನು ಕಂಡು ಅವರ ಆಶ್ರಮಗಳಲ್ಲಿರುವ ನಾವೆಲ್ಲರೂ ಉದ್ಧರಿಸಲ್ಪಟ್ಟಿದ್ದೇವೆ ಮತ್ತು ಪ್ರೇರಿತರಾಗಿದ್ದೇವೆ; ಈ ಸತ್ಯಗಳು ದೈವತ್ವದೊಂದಿಗೆ ಶ್ರುತಿಗೂಡಿಸುತ್ತವೆ ಮತ್ತು ತನಗೆ ಹಾಗೂ ಇತರರಿಗೆ ಸಂತೋಷವನ್ನು ನೀಡುತ್ತವೆ. ಈ ಆದರ್ಶಗಳಿಗೆ ನೀವು ತೋರಿಸುತ್ತಿರುವ ಸಮರ್ಪಣೆ, ಮತ್ತು ನಿಮ್ಮ ರಜಾದಿನದ ಶುಭಾಶಯಗಳಲ್ಲಿ ಮತ್ತು ಸ್ಮರಣೆಯಲ್ಲಿ ವ್ಯಕ್ತಪಡಿಸಲಾದ ದೈವಿ ಸ್ನೇಹಕ್ಕೆ ಹಾಗೂ ವರ್ಷಪೂರ್ತಿ ತೋರಿದ ನಿಮ್ಮ ವಿಚಾರ ಪೂರ್ಣತೆಗೆ ಧನ್ಯವಾದಗಳು. ನಿಮ್ಮ ಉದಾತ್ತ ನಿರ್ಣಯಗಳಿಗೆ ಮತ್ತು ನೀವು ಮಾಡುವ ಎಲ್ಲಾ ಕಾರ್ಯಗಳಿಗೆ ನಿಮ್ಮ ಜೀವನದ ಮೂಲಕ ದೈವೀ ಬೆಳಕನ್ನು ಮತ್ತು ಪ್ರೀತಿಯನ್ನು ಹರಿಸುವಂತೆ ಪ್ರತಿದಿನವೂ ನಮ್ಮ ಪ್ರಾರ್ಥನೆಯಲ್ಲಿ ನಾವು ದೇವರ ಆಶೀರ್ವಾದವನ್ನು ಕೇಳಿಕೊಳ್ಳುತ್ತೇವೆ.
ಹೊಸ ಆರಂಭದ ಈ ಋತುವಿನಲ್ಲಿ ಅನುಭವಕ್ಕೆ ಬಂದ ಸಕಾರಾತ್ಮಕ ಬದಲಾವಣೆಯ ಆವೇಗವು ನಮ್ಮ ಆತ್ಮಗಳ ಅಪರಿಮಿತ ಸಾಮರ್ಥ್ಯದಲ್ಲಿ ನಮ್ಮ ಇಚ್ಛೆಯನ್ನು ಮತ್ತು ವಿಶ್ವಾಸವನ್ನು ಉತ್ತೇಜಿಸುತ್ತದೆ. ಇದು ನಮ್ಮ ದಿಗಂತಗಳನ್ನು ವಿಸ್ತರಿಸಿಕೊಳ್ಳುವ ಸಮಯ, “ನಾನು ಮಾಡಬಲ್ಲೆ” ಎಂಬ ಮನೋಭಾವವನ್ನು ಜಾಗೃತಗೊಳಿಸುವ ಸಮಯ — ನಮ್ಮ ಮಾನುಷ ದೋಷಗಳತ್ತ ಗಮನಹರಿಸದೆ, ದೇವರು ನಮ್ಮನ್ನು ಹೇಗೆ ಕಾಣುವನೋ ಹಾಗೆ ನಮ್ಮನ್ನು ನಾವು ನೋಡುವತ್ತ ಕೇಂದ್ರೀಕರಿಸುವುದು: ಅವನ ದಿವ್ಯ ಗುಣಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುವ, ಅವನ ಅಸ್ತಿತ್ವದ ಅನನ್ಯ ಅಭಿವ್ಯಕ್ತಿ. ಈ ದೃಷ್ಟಿಕೋನದಿಂದ ನಮ್ಮ ಸುಧಾರಣೆಗೆ ಪ್ರಯತ್ನಿಸುವಾಗ, ನಾವು ನಮ್ಮೊಳಗಿನ ಆಧ್ಯಾತ್ಮಿಕ ವಿಜಯಿಯನ್ನು ಹೊರತರುತ್ತೇವೆ. ನಮ್ಮ ಜೀವನವನ್ನು ನಾವು ನಿಯಂತ್ರಿಸಲು ದೇವರು ನಮಗೆ ಸ್ವತಂತ್ರ ಇಚ್ಛೆಯನ್ನು ಅನುಗ್ರಹಿಸಿದ್ದಾನೆ. ಈಗಿನಿಂದಲೇ ಆ ದೈವೀ ಉಡುಗೊರೆಯನ್ನು ಸರಿಯಾಗಿ ಉಪಯೋಗಿಸುವ ನಿರ್ಧಾರ ಮಾಡಿ, ಆಗ ನೀವು ಮಿತಿಯಿಲ್ಲದ ಸಾಧನೆಯನ್ನು ಸಾಧಿಸಬಹುದು ಎಂಬುದನ್ನು ಅರಿಯುವಿರಿ. ಗುರುಗಳು ನಮಗೆ ಹೇಳಿದರು: “ನೀವು ಶುದ್ಧತೆ, ಪ್ರೀತಿ, ಸೌಂದರ್ಯ ಮತ್ತು ಆಧ್ಯಾತ್ಮಿಕ ಆನಂದವನ್ನು ಎಷ್ಟರ ಮಟ್ಟಿಗೆ ವ್ಯಕ್ತಪಡಿಸುತ್ತೀರಿ ಎಂಬುದು ನಿಮ್ಮ ಕೈಯಲ್ಲಿದೆ, ನೀವು ಮಾಡುವ ಕಾರ್ಯಗಳ ಮೂಲಕ ಮಾತ್ರವಲ್ಲ, ನಿಮ್ಮ ಚಿಂತನೆ, ಭಾವನೆ ಮತ್ತು ಬಯಕೆಗಳಲ್ಲಿ ಕೂಡಾ.” ನಾವು, ಜನರು ಮತ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ಯಾವ ಮಾದರಿಗಳನ್ನು ಸೃಷ್ಟಿಸಿಕೊಂಡಿದ್ದೇವೆ, ನಮ್ಮ ಆದ್ಯತೆಗಳನ್ನು ಹೇಗೆ ನಿರ್ಧರಿಸುತ್ತೇವೆ ಮತ್ತು ನಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದರಲ್ಲಿ, ಮತ್ತು ಜೀವನದ ಮೇಲೆ ನಮ್ಮ ದೃಷ್ಟಿಕೋನವನ್ನು ಪ್ರಭಾವಿಸುವ ಆಲೋಚನೆಗಳು ಮತ್ತು ಮನೋಭಾವಗಳ ಸೂಕ್ಷ್ಮ ಕ್ಷೇತ್ರದಲ್ಲಿ ನಾವು ಯಾವ ರೀತಿಯ ಮಾದರಿಗಳನ್ನು ಸೃಷ್ಟಿಸಿದ್ದೇವೆ ಎಂಬುದರ ಅರಿವು ಉಂಟಾದಂತೆ, ನಾವು ಉತ್ತಮವಾದುದನ್ನು ಮಾಡಲು, ನಮ್ಮ ಜೀವನದಲ್ಲಿ ಹೆಚ್ಚು ದೇವರ ಪ್ರೀತಿ ಮತ್ತು ಆನಂದವನ್ನು ಪ್ರಕಟಿಸಲು, ನಮ್ಮ ದೈವದತ್ತ ಸ್ವಾತಂತ್ರ್ಯವನ್ನು ದೃಢೀಕರಿಸಬಹುದು. ದೈನಂದಿನ ಸಣ್ಣ ಸಣ್ಣ ವಿಷಯಗಳಲ್ಲಿಯೂ, ನಾವು ನಮ್ಮ ಚಿಂತನೆ ಮತ್ತು ವರ್ತನೆಯನ್ನು ಧನಾತ್ಮಕ ದಿಕ್ಕಿನಲ್ಲಿ ಮುಂದುವರಿಸುವಲ್ಲಿ ನಿರಂತರವಾಗಿ ಪ್ರಯತ್ನಿಸಿದರೆ — ಅಭ್ಯಾಸಗಳು, ಇಂದ್ರಿಯ ಪ್ರಚೋದನೆಗಳು, ಅಥವಾ ಭಾವನಾತ್ಮಕ ಪ್ರತಿಕ್ರಿಯೆಗಳು ಹಸ್ತಕ್ಷೇಪ ಮಾಡಲು ಅವಕಾಶ ನೀಡದೆ — ನಾವು ನಮಗೆ ಮತ್ತು ನಮ್ಮ ಸುತ್ತಲಿರುವವರಿಗೆ ಬಹಳಷ್ಟು ಪ್ರಯೋಜನವನ್ನು ನೀಡುವ ಬದಲಾವಣೆಗಳನ್ನು ಮಾಡಬಹುದು, ಮತ್ತು ದೇವರ ನಿತ್ಯ-ಪ್ರಸ್ತುತ ಆಶೀರ್ವಾದಗಳ ಗ್ರಹಣಶೀಲತೆಯನ್ನು ವಿಸ್ತರಿಸಬಹುದು.
ನಮ್ಮ ಸ್ವಂತ ವಿಮೋಚನೆಯಲ್ಲಿ ನಾವು ಸಕ್ರಿಯ ಪಾತ್ರವನ್ನು ವಹಿಸಬೇಕೆಂಬುದು ದೈವದ ಉದ್ದೇಶ, ಆದರೂ ನಮ್ಮ ಆತ್ಮದ ಅಭಿವ್ಯಕ್ತಿಯನ್ನು ಸೀಮಿತಗೊಳಿಸುವ ಅಹಂ ಮತ್ತು ಅಭ್ಯಾಸದ-ಅಡೆತಡೆಗಳನ್ನು ತೊಡೆದುಹಾಕುವಲ್ಲಿ ನಮಗೆ ನೆರವಾಗಲು ಅವನಿಗಿಂತ ಯಾರೂ ಹೆಚ್ಚು ಉತ್ಸುಕರಾಗಿಲ್ಲ. ಆಳವಾದ ಧ್ಯಾನದಿಂದ ಮತ್ತು ನಮ್ಮ ಜೀವನವನ್ನು ದೇವರೊಂದಿಗೆ ಸಮನ್ವಯಗೊಳಿಸುವ ಪ್ರತಿದಿನದ ಪ್ರಯತ್ನದಿಂದ ಪೋಷಿಸಲ್ಪಟ್ಟ ದೇವರೊಂದಿಗಿನ ನಮ್ಮ ಆಂತರಿಕ ಸಂಬಂಧವು, ಅವನ ಪರಿವರ್ತನಾ ಶಕ್ತಿಯನ್ನು ಪಡೆದುಕೊಳ್ಳಲು ನಮ್ಮ ಪ್ರಜ್ಞೆಯನ್ನು ಸಂಪೂರ್ಣವಾಗಿ ತೆರೆಸುತ್ತದೆ. ದೇವರಲ್ಲಿ ನಿಮ್ಮ ನಂಬಿಕೆ ಆಳಗೊಳ್ಳುತ್ತಿರುವಂತೆಯೇ, ನೀವು ನಿಮ್ಮ ವಿಶ್ವಾಸ ಮತ್ತು ಸಮಚಿತ್ತತೆಯನ್ನು ಪರೀಕ್ಷಿಸುವಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ, ದೇವರು ನಿಮಗೆ ಏಳಿಗೆಯ ಅವಕಾಶವನ್ನು ನೀಡುತ್ತಿರುವುದನ್ನು ಗುರುತಿಸುವಿರಿ. ಒಬ್ಬ ಮೇರು ಕಲಾವಿದನು ಅಮೃತಶಿಲೆಯ ಬಂಡೆಯಿಂದ ಬೇಡವಾದ ಭಾಗವನ್ನು ಕೆತ್ತಿ ತೆಗೆದಾಗ ಹೇಗೆ ಒಂದು ಸುಂದರ ಪ್ರತಿಮೆ ಅನಾವರಣಗೊಳ್ಳುತ್ತದೆಯೋ, ಹಾಗೆಯೇ, ನೀವು ನಿಮ್ಮ ಇಚ್ಛೆಯನ್ನು ದೇವರ ಸರ್ವಶಕ್ತ ಇಚ್ಛೆಯೊಂದಿಗೆ ಶ್ರುತಿಗೂಡಿಸಿದಾಗ ಮತ್ತು ನಿಮ್ಮ ಜೀವನವನ್ನು ರೂಪಿಸುತ್ತಿರುವ ಆ ದಿವ್ಯ ಶಿಲ್ಪಿಯೊಂದಿಗೆ ಸಹಕರಿಸಿದಾಗ, ನಿಮ್ಮ ಶುದ್ಧ ಆತ್ಮ-ಪ್ರಕೃತಿಯು ಮಾಯೆಯ ಆವರಣದಿಂದ ಹೊರಬರುತ್ತದೆ.
ನಿಮಗೆ ಮತ್ತು ನಿಮ್ಮ ಆತ್ಮೀಯರಿಗೆ ದೇವರ ಆಶೀರ್ವಾದ ಮತ್ತು ಪ್ರೀತಿಯಿಂದ ತುಂಬಿದ ಹೊಸ ವರ್ಷದ ಶುಭಾಶಯಗಳು,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕಾಪಿರೈಟ್ © 2014 ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್. ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.