“ನಮ್ಮ ಪ್ರತಿಯೊಂದು ಆಲೋಚನೆ ಮತ್ತು ಇಚ್ಛೆಯ ಹಿಂದೆ ಭಗವಂತನ ಅನಂತ ಚೇತನವಿದೆ. ಅವನನ್ನು ಅರಸಿ, ನೀವು ಸಂಪೂರ್ಣ ವಿಜಯವನ್ನು ಸಾಧಿಸುವಿರಿ.”
—ಪರಮಹಂಸ ಯೋಗಾನಂದ
ಹೊಸ ವರ್ಷ 2010
ನಾವು ಈ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದಂತೆ ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಾವೆಲ್ಲರೂ, ವಿಶ್ವದಾದ್ಯಂತದ ನಮ್ಮ ಆಧ್ಯಾತ್ಮ ಕುಟುಂಬ ಮತ್ತು ಮಿತ್ರರಿಗೆ ಪ್ರೇಮದ ಶುಭಾಶಯಗಳನ್ನು ಕಳುಹಿಸುತ್ತೇವೆ. ಕ್ರಿಸ್ ಮಸ್ ಸಮಯದಲ್ಲಿ ನಮ್ಮನ್ನು ನೆನಪಿಸಿಕೊಂಡದ್ದಕ್ಕಾಗಿ ಮತ್ತು ಕಳೆದ ವರ್ಷ ಅನೇಕ ವಿಧಗಳಲ್ಲಿ ಸಹಕಾರ ತೋರಿಸಿದುದಕ್ಕಾಗಿ ನಮ್ಮ ಹೃತ್ಪೂರ್ವಕ ವಂದನೆಗಳು. ದೈವೀ ಸ್ನೇಹವು ಭಗವಂತನ ಅತ್ಯುನ್ನತ ಆಶೀರ್ವಾದಗಳಲ್ಲಿ ಒಂದು. ಎಲ್ಲೆಡೆ ಇರುವ ಅವನ ಮಕ್ಕಳ ಜೀವನಗಳಲ್ಲಿ ಮಹತ್ತರ ಶಾಂತಿ ಮತ್ತು ಸಾಮರಸ್ಯಗಳಿಗಾಗಿ ಆ ಸ್ನೇಹವನ್ನು, ನಮ್ಮ ಸಾಮೂಹಿಕ ಪ್ರಾರ್ಥನೆಗಳ ಮೂಲಕ, ಎಲ್ಲರಿಗೂ ವಿಸ್ತರಿಸಲು ನಮ್ಮನ್ನು ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುತ್ತೇವೆ.
ಹೊಸ ಆರಂಭಗಳ ಸುಸಮಯಗಳು ನಮ್ಮ ಅತಿ ಶ್ರೇಷ್ಠ ಕನಸುಗಳನ್ನು ಮತ್ತು ಆಕಾಂಕ್ಷೆಗಳನ್ನು ಪುನಶ್ಚೇತನ ಗೊಳಿಸಿ, ಅವುಗಳನ್ನು ಸಾಧಿಸಲು ನಮ್ಮ ಸಾಮರ್ಥ್ಯದಲ್ಲಿ ನವೀಕೃತ ವಿಶ್ವಾಸದೊಡನೆ ಮುಂದುವರೆಯಲು, ಹೊಸ ಅವಕಾಶಗಳನ್ನು ಕಲ್ಪಿಸುತ್ತವೆ. ಅದು ನಾವು ನಮ್ಮ ಜೀವನಗಳಲ್ಲಿ, ಧನಾತ್ಮಕ ಬದಲಾವಣೆಗಳನ್ನು ತರಲು ಇಚ್ಚಿಸುವುದನ್ನು ಮತ್ತು ಈ ಜಗತ್ತಿನಲ್ಲಿ ಅದು ಪ್ರಕಟಗೊಳ್ಳುವುದನ್ನು ನೋಡಲು ಬಲವಾಗಿ ದೃಶ್ಯೀಕರಿಸುವ ಸಮಯವಾಗಿರುತ್ತದೆ. ಏಕೆಂದರೆ ಚಿಂತನಾ ಶಕ್ತಿಯಿಂದಲೇ ಪ್ರತಿಯೊಂದು ಅಮೂಲ್ಯ ಸಾಧನೆಯೂ ಜನಿಸುತ್ತದೆ. ನಮ್ಮ ಮನಸ್ಸಿನಲ್ಲಿ ನಾವು ಸೃಷ್ಟಿಸುವ ಮಾದರಿಗಳು, ನಮ್ಮ ಹಣೆಬರಹವನ್ನು ರೂಪಿಸುತ್ತವೆ ಮತ್ತು ನಮ್ಮ ಸುತ್ತಮುತ್ತಲು ಇರುವವರ ಜೀವನಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ನಾವು ಧನಾತ್ಮಕವಾಗಿ ಆಲೋಚಿಸುವುದು, ಪ್ರೇಮಭರಿತ, ಆತ್ಮವಿಶ್ವಾಸವನ್ನು ಪ್ರೋತ್ಸಾಹಿಸುವ ಆಲೋಚನೆಗಳು-ಇವುಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡೋಣ. ಅದರಿಂದ ನಮ್ಮ ಅಸ್ತಿತ್ವದ ಅನಂತ ಮೂಲದೊಡನೆ ಶ್ರುತಿಗೊಂಡು, ನಮ್ಮಲ್ಲಿ ಮತ್ತು ಇತರರಲ್ಲಿನ ಅತ್ಯತ್ತಮವಾದುದನ್ನು ಹೊರಗೆ ಸೆಳೆಯೋಣ.
ನಮ್ಮ ಸದುದ್ದೇಶಗಳನ್ನು ವಾಸ್ತವವಾಗಿಸಲು, ಬಲವಾದ ದೃಢ ನಿರ್ಧಾರ ಮತ್ತು ಇಚ್ಛಾಶಕ್ತಿಯ ನಿರಂತರ ಬಳಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ದಿನವೂ ಮತ್ತು ಪ್ರತಿಯೊಂದು ಕ್ಷಣವೂ ನಾವು, ನಮ್ಮ ಆಲೋಚನೆಗಳು ಮತ್ತು ಕಾರ್ಯಗಳನ್ನು ಭಗವಂತನೊಡನೆ ಅಥವಾ ಮಾಯೆಯ ಭ್ರಮಾತ್ಮಕ ಶಕ್ತಿಯೊಡನೆ ಹೊಂದಿಕೆಯಾಗುವ ಆಯ್ಕೆಯನ್ನು ಎದುರಿಸಬೇಕಾಗುತ್ತದೆ. ಮಾಯೆಯು ನಮ್ಮನ್ನು ಒಗ್ಗಿಕೊಂಡಿರುವ ಮಾದರಿಗಳನ್ನು ಪುನರಾವರ್ತಿಸಲು, ಮತ್ತು ನಮ್ಮ ಅಹಂನ ಸೀಮಿತಗಳೊಡನೆ ಗುರುತಿಸಿಕೊಳ್ಳವಂತೆ ಪ್ರಲೋಭನೆ ಉಂಟು ಮಾಡುತ್ತದೆ. ಆದರೆ ನೆನಪಿಡಿ. ಸೀಮಾ ರಹಿತ ಮೂಲಗಳು ನಿಮ್ಮ ನಿಯಂತ್ರಣದಲ್ಲಿರುವ ನೀವು ಆತ್ಮಸ್ವರೂಪರು. ಯಾವಾಗ ನೀವು ಒಂದು ನೈಜ, ಅಮೂಲ್ಯ ಧ್ಯೇಯವನ್ನು ಆಯ್ಕೆ ಮಾಡಿ, ನಿಮ್ಮ ಪ್ರಯತ್ನಗಳನ್ನು ಕ್ರಿಯಾತ್ಮಕ ಸಾಮರ್ಥ್ಯದಿಂದ ಚೈತನ್ಯಯುಕ್ತವನ್ನಾಗಿ ಮಾಡುವಿರೋ, ಆಗ ನೀವು ಯಶಸ್ವಿಯಾಗುವುದನ್ನು ಯಾವುದೂ ತಡೆಯಲಾಗುವುದಿಲ್ಲ. ಇದೇ ಗುರುದೇವರು ವ್ಯಕ್ತಪಡಿಸಿದ ಅದಮ್ಯ ಸಂಕಲ್ಪ. “ಅಸಾಧ್ಯ”ಎಂಬ ಪದಕ್ಕೆ, ಅವರ ಶಬ್ದ ಭಂಡಾರದಲ್ಲಿ ಅಥವಾ ಅವರ ಪ್ರಜ್ಞೆಯಲ್ಲಿ ಸ್ಥಳವಿರಲಿಲ್ಲ. ಮತ್ತು ಅವರು ನಿಮಗೂ ಸಹ ನೀವು ತೆಗೆದುಕೊಂಡಿರುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು, ಅದಕ್ಕೆ ಬೇಕಾದ ಮನೋಧೈರ್ಯವನ್ನು ಕೃಷಿ ಮಾಡಲು ಪ್ರೋತ್ಸಾಹಿಸುತ್ತಿದ್ದರು.
ಒಂದು ವೇಳೆ ಸಂದರ್ಭಗಳಾಗಲಿ ಅಥವಾ ಆಂತರ್ಯದ ಪ್ರತಿರೋಧವಾಗಲಿ, ನಿಮ್ಮ ಪರಿವರ್ತನೆಯ ಪ್ರಯತ್ನಗಳಿಗೆ ಅಡಚಣೆ ಉಂಟು ಮಾಡಿದರೂ, ನೀವು ನಿಮಗೆ ಅತ್ಯುನ್ನತ ಒಳಿತಿಗಾಗಿ ಇರುವುದನ್ನು ಆಯ್ಕೆ ಮಾಡಲು, ನಿಮ್ಮ ಆತ್ಮದ ಸ್ವಾತಂತ್ರ್ಯವನ್ನು ಪ್ರತಿಪಾದಿಸಬಲ್ಲಿರಿ. ನೀವು ಕೇವಲ ನಿಮ್ಮ ಮೇಲೆಯೇ ಅವಲಂಬಿಸಬೇಕಾಗಿಲ್ಲ. ಏಕೆಂದರೆ ನಿಮ್ಮ ಮಾನವೀಯ ಇಚ್ಛೆಯ ಹಿಂದೆ ಭಗವಂತನ ಸರ್ವಶಕ್ತ ಇಚ್ಛೆಯು ಇದ್ದೇ ಇರುತ್ತದೆ ಮತ್ತು ಅವನ ಪ್ರೇಮವೂ ನಿಮಗೆ ಆಧಾರವಾಗಿರುತ್ತದೆ. ಅವನಲ್ಲಿ ನಂಬಿಕೆ ಇಡಿ. ಅವನು ಮಾನವೀಯ ದುರ್ಬಲತೆಗಳ ಆಚೆ ನೋಡುತ್ತಾನೆ ಮತ್ತು ನಿಮ್ಮ ಆತ್ಮದ ಅಪರಿಮಿತ ಸಾಮರ್ಥ್ಯಗಳನ್ನು ಕಾಣುತ್ತಾನೆ. ಗುರುದೇವರ ವಚನಗಳನ್ನು ಹೃದಯದಾಳಕ್ಕೆ ತೆಗೆದುಕೊಂಡು ಹೋಗಿ: “ಭಗವಂತನು ಏನನ್ನಾದರೂ ಮಾಡಬಲ್ಲ. ಹಾಗೆಯೇ ನೀನೇನಾದರೂ ಅವನ ಅಕ್ಷಯ ಸ್ವರೂಪವನ್ನು ಗುರುತಿಸಲು ಕಲಿತರೆ ನೀನೂ ಸಹ ಮಾಡಬಲ್ಲೆ.” ನೀವು ನಿತ್ಯವೂ ಯೋಚನೆಗಳು ಮತ್ತು ಭಾವಗಳಿಂದಾಚೆಗಿನ ನಿಶ್ಚಲತೆಯಲ್ಲಿ ಅವನೊಡನೆ ಸಂಪರ್ಕಿಸಲು ಸಮಯ ತೆಗೆದುಕೊಳ್ಳುತ್ತಿರುವಂತೆ, ನೀವು ಅವನ ಆವರಿಸಲ್ಪಡುವ ಉಪಸ್ಥಿತಿಯನ್ನು ಅನುಭವಿಸಿ. ಮತ್ತು ಅವನು ನಿರಂತರವಾಗಿಯೂ, ಪ್ರೇಮಪೂರ್ವಕವಾಗಿಯೂ ನಿಮಗೆ ಸಹಾಯ ಮಾಡುವನು ಎಂಬುದನ್ನು ಅರಿಯಿರಿ.
ನಿಮಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ, ಹೊಸ ವರುಷ ಭಗವಂತನ ಶುಭಾಶೀರ್ವಾದಗಳಿಂದ ತುಂಬಲಿ ಎಂದು ಹಾರೈಸುತ್ತೇನೆ,
ಶ್ರೀ ದಯಾ ಮಾತಾ
![]()
ಗ್ರಂಥ ಸ್ವಾಮ್ಯ© 2009 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ.
















