ಆನಂದ ಮಾತಾರ ನೆನಪುಗಳು

ಆನಂದ ಮಾತಾ (1915–2005)

ಪರಮಹಂಸ ಯೋಗಾನಂದರ ಆರಂಭಿಕ ಮತ್ತು ಆಪ್ತ ಶಿಷ್ಯರಲ್ಲಿ ಒಬ್ಬರು ಹಾಗೂ ನಮ್ಮ ದಿವಂಗತ ಅಧ್ಯಕ್ಷೆ ಶ್ರೀ ದಯಾ ಮಾತಾರವರ ಸಹೋದರಿಯಾದ ಆನಂದ ಮಾತಾ ಫೆಬ್ರವರಿ 5, 2005 ರಂದು ತಮ್ಮ ದೇಹವನ್ನು ತ್ಯಜಿಸಿದರು. ಅವರು ಪರಮಹಂಸಜಿ ಮತ್ತು ಅವರ ಕಾರ್ಯದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದರೂ, ಸಾರ್ವಜನಿಕ ಉಪನ್ಯಾಸಕಿ ಅಥವಾ ಶಿಕ್ಷಕಿಗಿಂತ ಹೆಚ್ಚಾಗಿ “ತೆರೆಮರೆಯಲ್ಲಿ”ರುವುದು ಆಕೆಯ ಆಯ್ಕೆಯಾಗಿತ್ತು. ಆದ್ದರಿಂದ ನಾವು ಪರಮಹಂಸಜಿಯವರ ಬಗ್ಗೆ ಆಕೆಯ ಸ್ವಂತ ಮಾತುಗಳಲ್ಲಿರುವ ನೆನಪುಗಳಿಗಿಂತ ಹೆಚ್ಚಾಗಿ ಆಕೆಯ ಜೀವನದ ಬಗ್ಗೆ ಇತರರು ಹೇಳಿರುವ ಈ ವಿವರವನ್ನು ಸೇರಿಸುತ್ತಿದ್ದೇವೆ.

ತಮ್ಮ ವಿಶ್ವವ್ಯಾಪಿ ಪ್ರಚಾರಕಾರ್ಯಕ್ಕೆ ಅಡಿಪಾಯವನ್ನು ಹಾಕಲು ಮತ್ತು ಅದರ ಭವಿಷ್ಯದ ವಿಕಸನಕ್ಕಾಗಿ ತಾವು ಹಾಕಿದ್ದ ನೀಲನಕ್ಷೆಯಂತೆ ನೆರವೇರಿಸಲು ಪರಮಹಂಸಜಿಯವರು ವೈಯಕ್ತಿಕವಾಗಿ ತರಬೇತಿ ನೀಡಿದ ಆಯ್ದ ಭಕ್ತರಲ್ಲಿ ಆನಂದ ಮಾತಾ ಒಬ್ಬರಾಗಿದ್ದಾರೆ. ಲೂಸಿ ವರ್ಜೀನಿಯಾ ರೈಟ್‌ ಎಂಬ ಪೂರ್ವಾಶ್ರಮದ ಹೆಸರಿನ ಆಕೆ 1915 ರ ಅಕ್ಟೋಬರ್ 7 ರಂದು ಜನಿಸಿದರು. ಆಕೆಯು 1931 ರಲ್ಲಿ ಗುರುಗಳನ್ನು ಭೇಟಿಯಾದಾಗಿನಿಂದ ಮತ್ತು 1933 ರಲ್ಲಿ ಅವರ ಆಶ್ರಮವನ್ನು ಪ್ರವೇಶಿಸಿದಾಗಿನಿಂದ, ಪರಮಹಂಸಜಿಯವರ ಬೋಧನೆಗಳನ್ನು ಅರಗಿಸಿಕೊಂಡು ಬದುಕುವ ಮೂಲಕ ಮತ್ತು ಗುರುವಿನ ಪವಿತ್ರ ಉದ್ದೇಶಕ್ಕೆ ನಿಸ್ಸಂಕೋಚವಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮನ್ನು ಭಗವಂತನ ಪ್ರೀತಿ ಮತ್ತು ಸೇವೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡರು. ಪುರಾತನ ಸನ್ಯಾಸಿಗಳ ಸ್ವಾಮಿ ಶ್ರೇಣಿಗೆ ಗುರುಗಳಿಂದ ಸನ್ಯಾಸ ದೀಕ್ಷೆಯನ್ನು ಪಡೆದ ಕೆಲವೇ ಕೆಲವು ಆರಂಭಿಕ ಶಿಷ್ಯರಲ್ಲಿ ಅವರೂ ಒಬ್ಬರು, 1935 ರಲ್ಲಿ ತಮ್ಮ ಆಜೀವ ಸಂನ್ಯಾಸದ ಅಂತಿಮ ಪ್ರತಿಜ್ಞೆಯನ್ನು ತೆಗೆದುಕೊಂಡರು. ಗುರುಗಳು ಅವರನ್ನು ಸೆಲ್ಫ್‌-ರಿಯಲೈಝೇಷನ್‌ ಫೆಲೋಶಿಪ್/ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನಿರ್ದೇಶಕರ ಮಂಡಳಿಯ ಸದಸ್ಯೆಯನ್ನಾಗಿ ನೇಮಿಸಿದರು.

ಎಲ್ಲ ಆಶ್ರಮ ಕೇಂದ್ರಗಳಿಂದ ಸೆಲ್ಫ್‌-ರಿಯಲೈಝೇಷನ್‌ ಫೆಲೋಶಿಪ್ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಭಾಗವಹಿಸಿದ ಸ್ಮರಣಾರ್ಥ ಸೇವೆಯನ್ನು ಫೆಬ್ರವರಿ 11, 2005 ರಂದು ಮದರ್ ಸೆಂಟರ್‌ನಲ್ಲಿ ನಡೆಸಲಾಯಿತು. ಸ್ವಾಮಿ ವಿಶ್ವಾನಂದರು ಆರೋಹಣ ವಿಧಿಗಳನ್ನು ಅಧಿಕೃತವಾಗಿ ನೆರವೇರಿಸಿದರು; ಪ್ರಧಾನ ಭಾಷಣಕಾರರೆಂದರೆ, ಶ್ರೀ ದಯಾ ಮಾತಾ, ಮೃಣಾಲಿನಿ ಮಾತಾ ಮತ್ತು ಸ್ವಾಮಿ ಆನಂದಮೊಯಿ. ಆನಂದ ಮಾತೆಯವರ, ಭಗವಂತ ಮತ್ತು ಗುರುಗಳಿಗೆ ನೀಡಿದ ನಿರುಪಾಧಿಕ ಸಮರ್ಪಣೆಯ ಸಂತರಂತಹ ಜೀವನಕ್ಕೆ ಅವರೆಲ್ಲರು ಸಲ್ಲಿಸಿದ ಶ್ರದ್ಧಾಂಜಲಿಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ.


ಸ್ವಾಮಿ ಆನಂದಮೊಯಿ:


ಒಮ್ಮೆ ನಾನು ಗುರುಗಳೊಂದಿಗೆ ನೆಲಮಾಳಿಗೆಯಲ್ಲಿನ ಲಿಫ್ಟ್‌ನಿಂದ ಹೊರಬಂದು ಅವರ ಕಾರಿನ ಕಡೆಗೆ ಹೋಗುತ್ತಿದ್ದೆ ಎಂದು ನನಗೆ ನೆನಪಿದೆ. ಆನಂದ ಮಾ ಅವರಿಗಾಗಿ ಕಾಯುತ್ತಿದ್ದರು; ಸಾಮಾನ್ಯವಾಗಿ ಆಕೆಯೇ ಗುರುಗಳಿಗಾಗಿ ಕಾರ್‌ ಡ್ರೈವ್‌ ಮಾಡುತ್ತಿದ್ದರು. ನಾವು ನಡೆಯುತ್ತಿದ್ದಾಗ, ಗುರುಗಳು ನನ್ನ ತೋಳನ್ನು ಹಿಡಿದುಕೊಂಡರು, ಮತ್ತು ಅಲುಗಾಡದೆ ನಿಂತು ಹೇಳಿದರು: “ಯಾವಾಗಲೂ ನೆನಪಿರಲಿ: ಫೇ ಮತ್ತು ವರ್ಜೀನಿಯಾ ಸದಾ ನೂರು ಪ್ರತಿಶತ ಭಕ್ತಿ, ನೂರು ಪ್ರತಿಶತ ವಿಧೇಯತೆ ಮತ್ತು ನೂರು ಪ್ರತಿಶತ ನಿಷ್ಠೆಯಿಂದ ಜೀವನವನ್ನು ನಡೆಸುತ್ತಿದ್ದಾರೆ. ನೀನು ಅವರನ್ನು ಅನುಸರಿಸಬೇಕೆಂದು ನಾನು ಬಯಸುತ್ತೇನೆ.” ಮತ್ತು ಹಾಗೆ ಹೇಳುತ್ತಿರುವಾಗ, ಅದರ ಬಗ್ಗೆ ನನ್ನ ಮೇಲೆ ನಿಜವಾಗಿಯೂ ಪ್ರಭಾವ ಬೀರಲು ಅವರು ನನ್ನ ತೋಳನ್ನು ಹಿಂಡಿದರು. ಆಗ ನಾನಿನ್ನೂ ಆಶ್ರಮಕ್ಕೆ ತಕ್ಕಮಟ್ಟಿಗೆ ಹೊಸಬನೇ ಆಗಿದ್ದೆ.


ಒಂದೆರಡು ವರ್ಷಗಳ ನಂತರ, ಅವರು ಅದೇ ಮಾತುಗಳನ್ನು ಮತ್ತೆ ಹೇಳಿದರು. ಮತ್ತು ಆ ಹೊತ್ತಿಗೆ ನನಗೆ ಗುರೂಜಿ, ಅವರ ಕಾರ್ಯ ಮತ್ತು ಆಧ್ಯಾತ್ಮಿಕ ಜೀವನದ ಬಗ್ಗೆ ಸ್ವಲ್ಪ ಹೆಚ್ಚು ತಿಳುವಳಿಕೆ ಬಂದಿತ್ತು. ನಾನು ಯೋಚಿಸಿದೆ: “ಗುರುಗಳು ಒಬ್ಬ ಅವತಾರ ಪುರುಷ, ಭಗವಂತನ ಅವತಾರ; ಮತ್ತು ಈ ನುಡಿಗಳು, ಅವು ಎಷ್ಟೇ ಸರಳವಾಗಿದ್ದರೂ, ಅದೇ ಶಿಷ್ಯನಿಗೆ ಸರ್ವಶ್ರೇಷ್ಠ ಪ್ರಶಂಸೆ. ಗುರುಗಳು ಹೇಳಿದ್ದಕ್ಕಿಂತ ಮಿಗಿಲಾದ ಹೊಗಳಿಕೆ ಮತ್ತೊಂದಿಲ್ಲ.”


ಆನಂದ ಮಾ ಬಗ್ಗೆ ಇನ್ನೊಂದು ಸಣ್ಣ ಕಥೆ: ಇದು 1951 ರ ಸುಮಾರಿಗೆ ನಡೆಯಿತು. ನನಗೆ ಗುರೂಜಿಯವರ ಸ್ನಾನಗೃಹದ ಗೋಡೆಗಳನ್ನು ರಿಪ್ಲಾಸ್ಟರ್ ಮಾಡುವ ಕೆಲಸವನ್ನು ವಹಿಸಲಾಗಿತ್ತು. ನಾನು ಪ್ಲಾಸ್ಟರ್ ಅನ್ನು ಕಟ್ಟಡದ ಹೊರಗಡೆ ಬೆರೆಸಿದೆ, ಮತ್ತು ನಂತರ ಅದನ್ನು ಎರಡು ಬಕೆಟ್‌ಗಳಲ್ಲಿ ಮೂರನೇ ಮಹಡಿಗೆ ಲಿಫ್ಟ್‌ನಲ್ಲಿ ತೆಗೆದುಕೊಂಡು ಹೋದೆ. ಬಕೆಟ್‌ಗಳು ಸಾಕಷ್ಟು ಭಾರವಾಗಿದ್ದವು ಮತ್ತು ಕೇವಲ ತಂತಿಗಳೇ ಅವುಗಳ ಹಿಡಿಕೆಗಳಾಗಿದ್ದವು, ಒಮ್ಮೆ ನಾನು ಆ ಬಕೆಟ್‌ಗಳನ್ನು ಹಜಾರದ ಮೂಲಕ ಒಯ್ಯುತ್ತಿದ್ದಾಗ ಅವು ನನ್ನ ಕೈಗಳನ್ನು ಕೊಯ್ದವು — ನನ್ನ ಕೈಗಳಿಗೆ ವಿಶ್ರಾಂತಿ ಕೊಡಲು ನಾನು ಅವುಗಳನ್ನು ಕೆಲವು ಕ್ಷಣಗಳವರೆಗೆ ಕೆಳಗೆ ಇರಿಸಿದೆ. ಅಷ್ಟರಲ್ಲಿ ಹತ್ತಿರದಲ್ಲಿಯೇ ಇದ್ದ ಫೋನ್ ರಿಂಗಣಿಸಿತು, ಅದಕ್ಕೆ ಉತ್ತರಿಸಲು ಆನಂದ ಮಾ ತಮ್ಮ ಕಚೇರಿಯಿಂದ ಹೊರಬಂದರು.


ನೋಡಿ, ನಾನು ದರ್ಶನಗಳಿಗೆ ಅಥವಾ ಅಸಾಧಾರಣ ಅನುಭವಗಳಿಗೆ ಒಲವು ತೋರುವ ವ್ಯಕ್ತಿಯಲ್ಲ. ಅಂತಹ ವಿಷಯಗಳಲ್ಲಿ ನಾನು ಎಂದಿಗೂ ಆಸಕ್ತಿ ಹೊಂದಿರಲಿಲ್ಲ. ಆದರೆ ಆನಂದ ಮಾ ಫೋನ್‌ಗೆ ಉತ್ತರಿಸುವುದನ್ನು ನಾನು ನೋಡುತ್ತಿದ್ದಂತೆ, ನನಗೆ ಆಶ್ಚರ್ಯವಾಗುವಂತೆ ಆಕೆಯ ಸುತ್ತಲೂ ಬೆಳಕನ್ನು ನೋಡಿದೆ – ಇಡೀ ಬೆಳಕಿನ ಗೋಳ. ಅದು ಹೆಚ್ಚು ಹೆಚ್ಚು ಪ್ರಕಾಶಮಾನವಾಯಿತು, ಮತ್ತು ನಾನು ಯೋಚಿಸಿದೆ: “ಏನು ನಡೆಯುತ್ತಿದೆ?” ತದನಂತರ ಆನಂದ ಮಾ ಅವರ ರೂಪ ಬದಲಾಗುವುದನ್ನು ನಾನು ನೋಡಿದೆ. ಆಕೆಯು ನಂಬಲಾಗದಷ್ಟು ಸುಂದರವಾದ ದಿವ್ಯ ವ್ಯಕ್ತಿಯಾದರು. ನಾನು ನೋಡುತ್ತಿರುವುದನ್ನು ನನಗೆ ನಂಬಲಾಗಲಿಲ್ಲ. ಮತ್ತು ಇದು ಕೇವಲ ಕ್ಷಣಕಾಲದ ದೃಶ್ಯವಾಗಿರಲಿಲ್ಲ; ಇದು ಹಲವಾರು ನಿಮಿಷಗಳ ಕಾಲ ನಡೆಯಿತು. ನಂತರ ಬೆಳಕು ಕ್ರಮೇಣ ಮರೆಯಾಯಿತು ಮತ್ತು ಆ ದಿವ್ಯ ವ್ಯಕ್ತಿಯು ಮತ್ತೊಮ್ಮೆ ಆನಂದ ಮಾತೆಯಾದರು ಹಾಗೂ ಆಕೆ ಸಂಭಾಷಣೆಯನ್ನು ಮುಗಿಸಿ ಕಚೇರಿಗೆ ಹಿಂದಿರುಗಿದರು.


ಹಲವಾರು ವರ್ಷಗಳ ನಂತರ, ನಾನು ಭಗವಾನ್ ಕೃಷ್ಣನ ಬಗ್ಗೆ ದಂತಕಥೆಗಳಿರುವ ಪುಸ್ತಕವನ್ನು ಓದಿದೆ, ಅದರಲ್ಲಿ, ಭಗವಂತ ಭೂಮಿಯಲ್ಲಿ ಅವತಾರ ಎತ್ತಿದಾಗ, ಆ ಅವತಾರದೊಂದಿಗೆ ಕೆಲವು ದಿವ್ಯ ಜೀವಿಗಳು ಸ್ವಇಚ್ಛೆಯಿಂದ ಬರುತ್ತಾರೆ ಎಂದು ಹೇಳಲಾಗಿತ್ತು. ಮತ್ತು ಗತಕಾಲದ ಮಹಾನ್ ಋಷಿಮುನಿಗಳು ಕೃಷ್ಣನ ಸಹಚರರಾಗಿ ಜನ್ಮ ತಾಳಿದರು ಎಂದು ಹೇಳಲಾಗುತ್ತದೆ; ಅವರು, ಬೃಂದಾವನದಲ್ಲಿ ಬೆಳೆಯುತ್ತಿದ್ದ ಬಾಲ ಕೃಷ್ಣನೊಂದಿಗೆ ಆಟವಾಡುತ್ತಿದ್ದ ಗೋಪಿಯರು ಅಥವಾ ಗೋಪಾಲಕರ ನಡುವೆ ಇದ್ದರು. ಮತ್ತು ದಯಾ ಮಾತಾ, ಆನಂದ ಮಾತಾರಂತಹ ಹಲವಾರು ಶ್ರೇಷ್ಠ ಶಿಷ್ಯರು ಗುರುಗಳ ಬಳಿ ಬಂದದ್ದು, ತಮ್ಮ ಸ್ವಂತದ ಕರ್ಮವನ್ನು ಸವೆಸುವುದಕ್ಕಲ್ಲ, ಬದಲಿಗೆ ನಮ್ಮ ಗುರುಗಳ ದಿವ್ಯ ಅವತಾರವಿರುವಾಗ ಭಗವಂತನ ಸೇವೆ ಮಾಡಲು ಬಂದವರೆಂದು ನನಗೆ ಖಾತ್ರಿಯಿದೆ.


ಆನಂದ ಮಾ ನಿಷ್ಠೆಯಿಂದ ಅನೇಕ ವರ್ಷಗಳ ಕಾಲ, ಹೆಚ್ಚಾಗಿ ಹಗಲೂ ರಾತ್ರಿ, ದಣಿವರಿಯದೆ, ಸೇವೆ ಸಲ್ಲಿಸಿದರು. ಮತ್ತು ಆಕೆ ಕೆಲವೊಮ್ಮೆ ಬಹಳ ಕಟ್ಟುನಿಟ್ಟಾಗಿರುತ್ತಿದ್ದರೆಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ! ಆದರೆ ಕೊನೆಗಾಲದಲ್ಲಿ, ಆಕೆ ಅನಾರೋಗ್ಯಕ್ಕೆ ತುತ್ತಾದಾಗ ಮತ್ತು ಕೆಲಸ ಮಾಡಲು ಸಾಧ್ಯವಿಲ್ಲವೆಂದಾದಾಗ — ಆಕೆಯ ಮನಸ್ಸು ಸಂಸ್ಥೆಯ ಕಾಳಜಿ, ಚಿಂತೆ ಮತ್ತು ಸಮಸ್ಯೆಗಳಿಂದ ತುಂಬಿಕೊಳ್ಳದಿದ್ದುದರಿಂದ — ಆಕೆಯ ವ್ಯಕ್ತಿತ್ವದ ಹೊಸ ಭಾಗವೊಂದು ಪ್ರಕಟವಾಯಿತು: ಬಹಳ ಮಧುರ, ಬಹಳ ಪ್ರೀತಿಪೂರ್ವಕ. ನಾನು ಆಕೆಯನ್ನು ನೋಡಿದಾಗಲೆಲ್ಲ, ಆಕೆಯು ನನ್ನ ಬಳಿಗೆ ಬಂದು ನನ್ನ ಎರಡೂ ಕೈಗಳನ್ನು ತೆಗೆದುಕೊಂಡು — ಒಂದು ಮಾತನ್ನೂ ಆಡದೆ, ಕೇವಲ ಪ್ರೀತಿಯನ್ನು, ಪ್ರೀತಿಯನ್ನಷ್ಟೇ ಹೊರಸೂಸುತ್ತಿದ್ದರು.


ನಂತರ, ಆಕೆಯ ದೇಹಸ್ಥಿತಿ ಹದಗೆಡುತ್ತಿದೆ ಎಂದು ನನಗೆ ಕೇಳಿಬಂದಾಗ, ವಿದಾಯ ಹೇಳಲು ಆಕೆಯ ಕೋಣೆಗೆ ಬರುವಂತೆ ನನ್ನನ್ನು ಆಹ್ವಾನಿಸಲಾಯಿತು. ಆಕೆಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಕೆ ತನ್ನ ಕಣ್ಣುಗಳಿಂದ ಮತ್ತು ಕೈಗಳಿಂದ ಮಾತನಾಡುತ್ತಿದ್ದಳು. ಆಕೆಯು ನನ್ನ ಎರಡೂ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿದರು. ಅದೊಂದು ವಿಸ್ಮಯಕಾರೀ ಅನುಭವವಾಗಿತ್ತು. ತದನಂತರ, ಆಕೆಯು ಗುರುಗಳನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದಿದ್ದ ನಾನು ಆಕೆಗೆ ಹೇಳಿದೆ: “ಗುರುಗಳು ನಿಮಗಾಗಿ ಕಾಯುತ್ತಿದ್ದಾರೆ.” ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಪ್ರೀತಿ ಮತ್ತು ಆನಂದದ ಪ್ರಚಂಡ ಲಹರಿಯನ್ನು ಅನುಭವಿಸಿದೆ — ಅದು: “ನಾನು ಪುನಃ ಗುರುಗಳ ಬಳಿ ಇರುತ್ತೇನೆ!” ಎಂದು ಆಕೆ ವ್ಯಕ್ತಪಡಿಸುತ್ತಿರುವಂತಿತ್ತು. ನನಗೆ ಏನನ್ನಿಸಿತೋ ಅದನ್ನು ಹೇಳಲಾರೆ, ಕೇವಲ ಅಗಾಧ ಪ್ರೀತಿ ಮತ್ತು ಆನಂದ. ನಾನು ಯೋಚಿಸಿದೆ, “ಭಗವಂತ ಮತ್ತು ಗುರುಗಳಿಗೆ ತನ್ನನ್ನು ಅರ್ಪಿಸಿಕೊಂಡ ಅದ್ಭುತ ರೀತಿಯ ಜೀವಮಾನದ ಸೇವೆಯ ನಂತರ, ಈಗ ಅದು ಮುಗಿದಿದೆ; ಆಕೆ, ‘ನಾನು ಮನೆಗೆ ಹೋಗುತ್ತಿದ್ದೇನೆ’ ಎಂದು ಹೇಳಬಹುದು. ಮತ್ತು ನಾನು ಯೋಚಿಸಿದೆ: “ನಾನೂ ಹೋಗಲು ಸಾಧ್ಯವಿದ್ದರೆ ಒಳ್ಳೆಯದಿತ್ತು!”


ಆನಂದ ಮಾತೆಯ ಬಗ್ಗೆ ನನ್ನ ನೆನಪು ಹೀಗಿದೆ: ಎಂತಹ ಮಹಾನ್ ಶಿಷ್ಯೆ, ತನ್ನ ಗುರುಗಳ ಬಳಿ ಇರಲು ಮತ್ತು ಅವರ ಸೇವೆ ಮಾಡಲು ಭೂಮಿಗೆ ಬಂದ ದಿವ್ಯ ಆತ್ಮ. ಅದು ನನ್ನಲ್ಲಿರುವ ಚಿತ್ರಣ, ನಾನು ಬದುಕಿರುವವರೆಗೂ ಅದನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿರುತ್ತೇನೆ. ಗುರುಗಳು ಹೇಳಿದಂತೆ, ಭಗವಂತನಿಗೆ, ಗುರುವಿಗೆ ಸಂಪೂರ್ಣ ಸಮರ್ಪಣೆ-ಮತ್ತು ಪ್ರೀತಿ. ಅದು ಆಕೆ ಬಿಟ್ಟು ಹೋಗಿರುವ ಉದಾಹರಣೆ.


ಮೃಣಾಲಿನಿ ಮಾತಾ:


ಅರವತ್ತು ವರ್ಷಗಳ ಕಾಲ ನಾನು ಪ್ರೀತಿಯ ಮಾ ಮತ್ತು ಆನಂದ ಮಾ ಅವರ ಒಡನಾಟದಲ್ಲಿರಲು ಅದೃಷ್ಟ ಮಾಡಿದ್ದೆ; ಫೇ ಮತ್ತು ವರ್ಜೀನಿಯಾ – ಆ ದಿನಗಳಲ್ಲಿ ಗುರುಗಳು ಅವರಿಬ್ಬರನ್ನು ಹಾಗೇ ಕರೆಯುತ್ತಿದ್ದುದು: “ಎರಡು ಬಟಾಣಿ ಕಾಳುಗಳು-ಒಂದು-ಕೋಡು.” ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಯೋಚಿಸುವುದು ಕಷ್ಟ.


ನಾನು ಆಶ್ರಮವನ್ನು ಪ್ರವೇಶಿಸುವ ಮೊದಲೇ ಪ್ರಿಯ ಆನಂದ ಮಾ ಅವರ ಪರಿಚಯವಾಗಿತ್ತು. ನಾನು ಜೂನಿಯರ್ ಹೈಸ್ಕೂಲ್ ಓದುತ್ತಿರುವಾಗ ವಾರಾಂತ್ಯದಲ್ಲಿ ಎನ್ಸಿನಿಟಾಸ್ ಆಶ್ರಮಕ್ಕೆ ಬರಲು ಗುರುದೇವರು ನನ್ನನ್ನು ಆಹ್ವಾನಿಸುತ್ತಿದ್ದರು. ನನ್ನ ಮೊದಲ ಭೇಟಿಯಲ್ಲಿ, ನಾನು ಆಶ್ರಮದಲ್ಲಿ ಶನಿವಾರದ ಶುಚಿಗೊಳಿಸುವಿಕೆಯಲ್ಲಿ ನೆರವಾಗುತ್ತಿದ್ದೆ, ಡ್ರಾಯಿಂಗ್ ರೂಮಿನಲ್ಲಿ ಸೂಕ್ಷ್ಮ ಕೆತ್ತನೆಯ ಆನೆಯುಳ್ಳ ಟೇಬಲ್‌ನ ಧೂಳು ಒರೆಸುತ್ತಿದ್ದೆ. ಆಗ ಗುರುಗಳು ಹಜಾರದ ಮೂಲಕ ಬಂದರು ಮತ್ತು ಒಂದು ಕ್ಷಣ ಅಲ್ಲೇ ನಿಂತು ನೋಡಿದರು. ನಂತರ ಅವರು ನನಗೆ ಹೇಳಿದರು: “ನೀನು ಅದನ್ನು ಚೆನ್ನಾಗಿ ಮಾಡುವುದು ಒಳ್ಳೆಯದು. ವರ್ಜೀನಿಯಾ ಪರಿಪೂರ್ಣವಾಗಿರಬೇಕೆಂದು ಬಯಸುತ್ತಾಳೆ!”


ನಮ್ಮ ಕುಟುಂಬವು ಭಾನುವಾರದಂದು ಗುರುದೇವರ ಉಪನ್ಯಾಸವನ್ನು ಕೇಳಲು ಸ್ಯಾನ್ ಡಿಯಾಗೋ ಮಂದಿರದ ಸತ್ಸಂಗಗಳಿಗೆ ಹೋಗುವಾಗಿನಿಂದ ನನಗೆ ಮಾ ಮತ್ತು ಆನಂದ ಮಾ ಅವರ ಪರಿಚಯವಿತ್ತು. ಗುರುಗಳು ವೇದಿಕೆಗೆ ಹತ್ತಿ ಮಾತನಾಡಲು ಸಿದ್ಧರಾದ ಕೂಡಲೆ ಗುರುಗಳ ಈ ಇಬ್ಬರು ಶಿಷ್ಯರು ಮೆಟ್ಟಿಲುಗಳನ್ನು ಇಳಿದು ಮಂದಿರದೊಳಗೆ ಬರುತ್ತಿದ್ದರು. ನಾವು ಅವರನ್ನೇ ನೋಡುತ್ತಿದ್ದೆವು; ಒಬ್ಬ ಯುವ ಭಕ್ತರು ಹೇಳಿದರು, “ನಿಮಗೆ ಗೊತ್ತೇ, ಅವರು ಆ ಮೆಟ್ಟಿಲುಗಳಿಂದ ಇಳಿದು ಬರುವಾಗ, ಅವರು ನಡೆಯುವುದಿಲ್ಲ, ತೇಲಿಕೊಂಡು ಬರುತ್ತಾರೆ!” ಮತ್ತು ನಾವೆಲ್ಲರೂ ಅದನ್ನು ಒಪ್ಪಿಕೊಂಡೆವು: ನಮ್ಮ ಮನಸ್ಸಿನಲ್ಲಿ, ಯಾರು ಗುರುಗಳ ಹತ್ತಿರ ಇರುತ್ತಾರೋ ಅವರು ದೇವತೆಗಳೇ, ಸ್ವಾಮಿ ಆನಂದಮೊಯಿ ಹೇಳಿದಂತೆ.


ಅದು ಆಕೆಯ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಚಿತ್ರಣ, ಮತ್ತು ನಾನು ಆ ಟೇಬಲ್ ಅನ್ನು ಸ್ವಚ್ಛಗೊಳಿಸುತ್ತಿರುವಾಗ ನಾನು ಅದನ್ನು ಚೆನ್ನಾಗಿ ಮಾಡಲು ಬಹಳ ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದೆ, ಒಬ್ಬ ದೇವತೆಯನ್ನು ಮೆಚ್ಚಿಸಲು! ಮತ್ತು ಖಚಿತವಾಗಿ, ಗುರೂಜಿ ಹೊರಟು ಹೋದ ಸ್ವಲ್ಪ ಸಮಯದ ನಂತರ, ಮಾತಾಜಿ1 ಡ್ರಾಯಿಂಗ್ ರೂಮಿಗೆ ಬಂದರು. ನಾನು ಕೆಲಸ ಮಾಡುತ್ತಿದ್ದ ಕಡೆ ಬಂದು ಸ್ವಲ್ಪ ಹೊತ್ತು ನಿಂತರು. ಪ್ರತಿ ಚಿಕ್ಕ ಸಂದುಗಳ ನಡುವೆಯೂ ಧೂಳೊರೆಸುವ ಬಟ್ಟೆಯನ್ನು ಎಳೆಯುತ್ತಾ ನಾನು ನನ್ನ ಕೆಲಸದಲ್ಲಿ ತೊಡಗಿದ್ದಾಗ ಆಕೆ ನನ್ನನ್ನು ಗಮನಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಆಕೆ ನನ್ನ ತಲೆಯನ್ನು ಸವರಿ ಹೇಳಿದರು: “ಬಹಳ ಚೆನ್ನಾಗಿ ಮಾಡುತ್ತಿರುವೆ ಮಗಳೆ!” ಮತ್ತು ನಾನಂದುಕೊಂಡೆ, ಓಹ್, ನಾನು ಪರೀಕ್ಷೆಯಲ್ಲಿ ಪಾಸಾದೆ!


ಹೀಗಿದ್ದರು ಆನಂದ ಮಾ. ಆಕೆ ಯಾವ ಸೂಕ್ಷ್ಮ ಅಂಶಗಳನ್ನೂ ಬಿಡುತ್ತಿರಲಿಲ್ಲ, ಏಕೆಂದರೆ ಆಕೆಗೆ ತಾನು ಮಾಡುತ್ತಿದ್ದ ಎಲ್ಲವೂ ತನ್ನ ಗುರುವಿಗೆ ಮಾಡುವ ಸೇವೆಯ ಮೂಲಕ ಭಗವಂತನಿಗೆ ಮಾಡುವ ಸೇವೆಯಾಗಿತ್ತು. ನಾನು ಬರುವ ಹೊತ್ತಿಗೆ, ಗುರುದೇವರ ವಾಸಸ್ಥಾನವನ್ನು ನೋಡಿಕೊಳ್ಳುವ ಹಾಗೂ ಈ ಜಗತ್ತಿನಲ್ಲಿ ಒಬ್ಬ ಅವತಾರ ಪುರುಷನು ಅಸ್ತಿತ್ವದಲ್ಲಿರಲು ಅವಶ್ಯವಿರುವ ಮತ್ತು ಕಾರ್ಯನಿರ್ವಹಿಸಲು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆ ಅದಾಗಲೇ ತೆಗೆದುಕೊಂಡಿದ್ದರು. ಆಕೆ ಆ ಜವಾಬ್ದಾರಿಗಳನ್ನು ಸ್ವಲ್ಪವೂ ಯಾರ ಗಮನಕ್ಕೂ ಬಾರದಂತೆ, ಸ್ವಲ್ಪವೂ ಸದ್ದಿಲ್ಲದೆ ಮತ್ತು ಬಹಳ ಆದ್ಯಂತವಾಗಿ ಮಾಡುತ್ತಿದ್ದರು. ಆಕೆ ಕೆಲವೊಮ್ಮೆ ಗುರುಗಳಿಗಾಗಿ ಅಡುಗೆ ಮಾಡುತ್ತಿದ್ದರು; ಭಾರತದ ವಿಶೇಷ ಅತಿಥಿಗಳಿದ್ದಾಗ, ಗುರುಗಳು ಆಕೆಗೆ ರಸಗುಲ್ಲಾಗಳನ್ನು ಮಾಡುವಂತೆ ಹೇಳುತ್ತಿದ್ದರು. “ಭಾರತದಲ್ಲಿ ಯಾರೂ ಅಷ್ಟು ರುಚಿಕರವಾಗಿ ಮಾಡಲು ಸಾಧ್ಯವಿಲ್ಲ!” ಎಂದು ಗುರುಗಳು ಆಗಾಗ ಹೇಳುತ್ತಿದ್ದರು.


ಗುರುವಿನ ಸೇವೆಯ ಮೂಲಕ ಗುರು-ಭಕ್ತಿ (ಗುರುವಿನಲ್ಲಿ ನೆಲೆಸಿರುವ ಭಗವಂತನೆಡೆಗೆ ಭಕ್ತಿ)ಯೇ ಆಕೆಯ ಜೀವನವಾಗಿತ್ತು. ಗುರುದೇವರು ತಮ್ಮ ದೇಹವನ್ನು ತೊರೆಯುವುದರ ಜೊತೆಗೆ, ಆ ಗುರುಭಕ್ತಿ ಕೊನೆಗೊಳ್ಳಲಿಲ್ಲ. ಅದು ಪ್ರಜ್ಞಾಪೂರ್ವಕ ಕ್ರಿಯೆಯಾಗಿತ್ತೋ ಅಥವಾ ಗುರುದೇವರು ನಮಗೆ ಹೇಳಿದ, “ನಾನು ಇನ್ನು ಮುಂದೆ ದೇಹದಲ್ಲಿ ಇಲ್ಲದಿರುವಾಗ, ಈ ಸಂಸ್ಥೆಯೇ ನನ್ನ ದೇಹವಾಗಿರುತ್ತದೆ. ನಾನು ಇದ್ದಾಗ ನೀವು ನನಗೆ ಹೇಗೆ ಸಹಾಯ ಮಾಡಿದಿರೋ ಮತ್ತು ಈ ಶರೀರಕ್ಕೆ ಹೇಗೆ ಸೇವೆ ಮಾಡಿದಿರೋ ಅಂತೆಯೇ, ಈ ಸಂಸ್ಥೆಗೂ ಸೇವೆ ಸಲ್ಲಿಸಿ,” ಈ ಮಾತುಗಳಿಂದಾಗಿ ಅದು ಆಕೆಗೆ ಸಹಜವಾಗಿತ್ತೋ, ನಾನರಿಯೆ. ಒಂದು ಕ್ರಮವನ್ನೂ ಬಿಡದೆ ಆನಂದ ಮಾ ಸೇವೆಯನ್ನು ಮುಂದುವರೆಸಿದರು. ಪ್ರಚಾರಕಾರ್ಯದ ವಿವಿಧ ಕ್ಷೇತ್ರಗಳಲ್ಲಿ ಆಕೆ ಹೆಚ್ಚು ಹೆಚ್ಚು ಕರ್ತವ್ಯಗಳನ್ನು ವಹಿಸಿಕೊಂಡರು—ಯಾವಾಗಲೂ ಅದೇ ಶ್ರದ್ಧಾಪೂರ್ವಕ ಕಾಳಜಿಯೊಂದಿಗೆ. ಗುರುವಿನ ಸಂಸ್ಥೆಯ ಜವಾಬ್ದಾರಿಯು ದಯಾ ಮಾತಾರವರ ಹೆಗಲಿಗೆ ಬಿದ್ದಾಗ, ಆನಂದ ಮಾ, ಅವರೊಂದಿಗಿದ್ದರು — ಗುರುದೇವರೊಂದಿಗೆ ಇದ್ದಂತೆಯೇ — ಎಲ್ಲ ಸಣ್ಣ ಮತ್ತು ದೊಡ್ಡ ರೀತಿಗಳಲ್ಲಿ ಸಹಾಯ ಮಾಡಲು.


ನೀವು ಕೆಲಸದ ಕೆಲವು ಅಂಶಗಳ ಬಗ್ಗೆ ವರದಿ ಅಥವಾ ಪ್ರಸ್ತಾವನೆಯನ್ನು ಸಿದ್ಧಪಡಿಸಬಹುದು, ತಿಳಿಸಬೇಕಾದ ಎಲ್ಲಾ ಅಂಶಗಳನ್ನು ಪಟ್ಟಿಮಾಡುವಲ್ಲಿ ನೀವು ಸಂಪೂರ್ಣವಾಗಿ ಆತ್ಮಸಾಕ್ಷಿಯಂತೆ ನಡೆದುಕೊಂಡಿರುವಿರಿ ಎಂದು ಭಾವಿಸುತ್ತೀರಿ. ಮತ್ತು ನೀವು ಅದನ್ನು ಆನಂದ ಮಾ ಅವರ ಡೆಸ್ಕ್‌ಗೆ ಕಳುಹಿಸುವಿರಿ ಮತ್ತು ಅವರು ಅದಕ್ಕೆ ಇನ್ನೂ ಹತ್ತು ಸೇರಿಸುತ್ತಾರೆ! ಅದು ಆಕೆಯ ಶ್ರದ್ಧೆ. ಗುರೂಜಿಯವರು ನಮಗೆ ಹೇಳುತ್ತಿದ್ದಂತೆ, “ಯಾವುದನ್ನು ಮಾಡಲು ಯೋಗ್ಯವೋ ಅದನ್ನು ಚೆನ್ನಾಗಿ ಮಾಡುವುದು ಯೋಗ್ಯವಾಗಿದೆ.” ಆಕೆ ಅದನ್ನು ಮನಸ್ಸಿಗೆ ತೆಗೆದುಕೊಂಡರು. ತಾನು ಮಾಡಿದುದರೆಲ್ಲದರಲ್ಲೂ, ತನ್ನ ಜವಾಬ್ದಾರಿಗಳನ್ನು ಪೂರೈಸಲು ಆಕೆ ತನ್ನ ಸಾವಿರ ಪ್ರತಿಶತವನ್ನು ಕೊಟ್ಟರು. ಗುರೂಜಿ ನಮಗೆಲ್ಲರಿಗೂ ಹೀಗೆ ಮಾಡಲು ಕಲಿಸಿದರು, ಮತ್ತು ಆಕೆಯು ಖಂಡಿತವಾಗಿಯೂ ಅದರಲ್ಲಿ ಉತ್ಕೃಷ್ಟರಾಗಿದ್ದರು.


ಆಕೆ ಆ ಆತ್ಮಸಾಕ್ಷಿಯನ್ನು, ಉದಾಹರಣೆಗೆ, ಗುರುದೇವರು ವಾಸಿಸಿದ್ದ ಮತ್ತು ತಮ್ಮ ಮಹಾನ್‌ ಕಾರ್ಯವನ್ನು ಆರಂಭಿಸಿದ್ದ ಈ ಕಟ್ಟಡಗಳನ್ನು, ಭಗವಂತನ ಈ ಮಂದಿರಗಳನ್ನು ಸಂರಕ್ಷಿಸಲು ಬಳಸಿಕೊಂಡರು. ಮೌಂಟ್ ವಾಷಿಂಗ್ಟನ್, ಎನ್ಸಿನಿಟಾಸ್ ಆಶ್ರಮ, ಹಾಲಿವುಡ್ ಆಶ್ರಮ, ಲೇಕ್ ಶ್ರೈನ್ — ಅವುಗಳನ್ನು ತುಂಬಾ ಸುಂದರವಾಗಿ ಉಳಿಸಿಕೊಂಡು ಬರಲಾಗಿದೆ, ಏಕೆಂದರೆ ಅವುಗಳ ನಿರ್ವಹಣೆಯು ಆಕೆಯ ಮೇಲ್ವಿಚಾರಣೆಯಲ್ಲಿತ್ತು. ಇದು ಕೇವಲ “ಇವು ಸುಂದರವಾದ ಕಟ್ಟಡಗಳು ಮತ್ತು ಅವುಗಳನ್ನು ಉಳಿಸಿಕೊಳ್ಳಬೇಕು,” ಎಂಬ ಕಾರಣಕ್ಕಾಗಿ ಅಲ್ಲ. ಬದಲಿಗೆ ಅವು ಗುರುದೇವರ ಭಾಗವಾಗಿದ್ದವು ಎಂಬ ಕಾರಣಕ್ಕಾಗಿ. ಆ ಕಾಳಜಿಯು ಗುರುಗಳು ನೆಟ್ಟ ಮತ್ತು ಅವರು ಪ್ರೀತಿಸಿದ ತೋಟದ ಪ್ರತಿಯೊಂದು ಸಣ್ಣ ಪೊದೆಗೂ ಮತ್ತು ಮರಕ್ಕೂ ವಿಸ್ತರಿಸಿತು; ಆಕೆಯು ಅವುಗಳನ್ನು ತುಂಬಾ ಜೋಪಾನದಿಂದ ನೋಡಿಕೊಳ್ಳುತ್ತಿದ್ದರು. ಆಕೆಯ ಬಲವಾದ ನಂಬಿಕೆ ಮತ್ತು ದಣಿವರಿಯದ ಪ್ರಯತ್ನವೇನಾಗಿತ್ತೆಂದರೆ: “ಪ್ರಕೃತಿಯು ಅವುಗಳನ್ನು ಬದುಕಲು ಬಿಡುವವರೆಗೂ ಅವುಗಳನ್ನು ಸಂರಕ್ಷಿಸುವುದು,” ಏಕೆಂದರೆ ಅವು ಗುರುದೇವರ ಭಾಗವಾಗಿದ್ದವು.


ಆನಂದ ಮಾ ತಮ್ಮ ಜೀವನವನ್ನು ಹೆಚ್ಚಾಗಿ ಹಿನ್ನಲೆಯಲ್ಲಿ ಕಳೆದರು ಎಂದು ಹಲವಾರು ಬಾರಿ ಹೇಳಲಾಗಿದೆ. ಹೌದು, ಆಕೆ ಬಹಳ ಶಾಂತ ಸ್ವಭಾವದವರಾಗಿದ್ದರು. ಆದರೆ 1981 ರಲ್ಲಿ, ಭಾರತದಲ್ಲಿ ಅನೇಕ ಆಡಳಿತಾತ್ಮಕ ವಿಷಯಗಳನ್ನು ನೋಡಿಕೊಳ್ಳಬೇಕಾಗಿದ್ದುದರಿಂದ ಮತ್ತು ಮಾ ಹೋಗಲು ಸಾಧ್ಯವಾಗದಿದ್ದಾಗ, ಆಕೆಯು ಆನಂದ ಮಾ ಮತ್ತು ನನ್ನನ್ನು ಕಳುಹಿಸಿದರು. ಆ ಭೇಟಿಯ ಸಮಯದಲ್ಲಿ, ಆನಂದ ಮಾ ಅನಾರೋಗ್ಯಕ್ಕೆ ಒಳಗಾದರು, ಆಗ ವೈಎಸ್ಎಸ್ ನಿರ್ದೇಶಕರು ಬಹಳ ಚಿಂತಿತರಾದರು. ಆದ್ದರಿಂದ ಸ್ವಲ್ಪ ಸಮಯದವರೆಗೆ ಆಕೆಯನ್ನು ಕೋಲ್ಕತ್ತಾದ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲು ನಿರ್ಧರಿಸಲಾಯಿತು, ಅಲ್ಲಿ ಆಕೆ ಕೆಲವು ದಿನ ವಿಶ್ರಾಂತಿ ಪಡೆಯಬಹುದು ಮತ್ತು ಕೆಲವು ಪರೀಕ್ಷೆಗಳಿಗೆ ಒಳಗಾಗಬಹುದು ಎಂದು. ಮತ್ತು ಆಕೆ ಏಕಾಂತವಾಗಿ ವಿಶ್ರಾಂತಿಯನ್ನು ಹೊಂದಲಿ ಎಂದು ನಾವು ಆ ವಿಷಯವನ್ನು ಬಹಳ ಗುಪ್ತವಾಗಿರಿಸಿದ್ದೆವು.


ಪ್ರತಿದಿನ ಮಧ್ಯಾಹ್ನ ಆಶ್ರಮದಲ್ಲಿ ಸತ್ಸಂಗಗಳು, ಸಭೆಗಳು ಮುಗಿದ ನಂತರ ನಾನು ಆಕೆಯನ್ನು ನೋಡಲು ನರ್ಸಿಂಗ್ ಹೋಂಗೆ ಹೋಗುತ್ತಿದ್ದೆ. ಒಂದು ದಿನ, ಕೆಲವು ಆತ್ಮೀಯ, ನಿಕಟ ಸದಸ್ಯರು ಆಕೆ ಎಲ್ಲಿದ್ದಾರೆಂದು ಕಂಡುಕೊಂಡರು; ಮತ್ತು ನಾನು ಆಕೆಯ ಕೋಣೆಯನ್ನು ಪ್ರವೇಶಿಸಿದಾಗ ಆಕೆಯ ಹಾಸಿಗೆಯ ಸುತ್ತಲೂ ಇಡೀ ಭಕ್ತರ ಗುಂಪು ಜಮಾಯಿಸಿತ್ತು. ಅಲ್ಲಿ ಆಕೆ ಎದ್ದು ಕುಳಿತು, ಅವರಿಗೆ ಅತ್ಯಂತ ಸುಂದರವಾದ ಸತ್ಸಂಗವನ್ನು ನೀಡುತ್ತಿದ್ದರು! ಅವರೆಲ್ಲರು ತಮ್ಮ ಆಧ್ಯಾತ್ಮಿಕ ಸಮಸ್ಯೆಗಳ ಕುರಿತು ಆಕೆಯ ಸಲಹೆ ಮತ್ತು ಸಹಾಯವನ್ನು ಕೇಳುತ್ತಿದ್ದರು ಮತ್ತು ಆಕೆಯು ಅತ್ಯಂತ ಅದ್ಭುತವಾದ ಸಲಹೆಯನ್ನು ನೀಡುತ್ತಿದ್ದರು. ನಾನು ಸುಮಾರು ಒಂದು ಗಂಟೆಯ ಕಾಲ ದ್ವಾರದಲ್ಲಿ ನಿಂತು ಕೇಳುತ್ತಿದ್ದೆ. ನೋಡಲು ತುಂಬಾ ಸುಂದರವಾಗಿತ್ತು; ನಾನು ಹೇಳಿಕೊಂಡೆ: “ಆಕೆಯಲ್ಲಿರುವ ಈ ಎಲ್ಲಾ ಜ್ಞಾನ, ಈ ಎಲ್ಲಾ ಪ್ರೀತಿ — ಅದನ್ನು ಆಕೆ ವರ್ಷಿಸುತ್ತಿದ್ದಾರೆ!” ನಂತರ ನಾನು ಹೇಳಿದೆ: “ನೋಡಿ, ಆನಂದ ಮಾ, ನೀವು ಕೆಲವು ಸತ್ಸಂಗಗಳನ್ನು ನಡೆಸಬಹುದು.” ಅದು ಎಂದಿಗೂ ಸಂಭವಿಸಲಿಲ್ಲ! ಆದರೆ ಆ ಆತ್ಮದೊಳಗೆ ಎಷ್ಟೆಲ್ಲ ಇತ್ತು ಎನ್ನುವುದನ್ನು ನಾನು ಆ ದಿನ ನೋಡಿದೆ — ಆಕೆ ಗುರುದೇವ ಮತ್ತು ಜಗನ್ಮಾತೆಯ ಪ್ರೀತಿಯನ್ನು ಎಷ್ಟು ಸಂಗ್ರಹಿಸಿದ್ದಾರೆ. ಅದು ಈ ಜನ್ಮದಲ್ಲಿ ಆಕೆ ಕೊಟ್ಟ ಏಕೈಕ ಸತ್ಸಂಗವಾಗಿರಬಹುದು!


ಈ ಜಗತ್ತಿನಲ್ಲಿ ಚೆನ್ನಾಗಿ ಬದುಕಿದ ಜೀವನವು ನಮಗೆಲ್ಲರಿಗೂ ಏನೋ ಒಂದನ್ನು ಕೊಡುತ್ತದೆ; ಮತ್ತು ಇದು ನಮ್ಮ ಆತ್ಮೀಯ ಆನಂದ ಮಾ ಅವರ ಜೀವನದಲ್ಲಿ ಖಂಡಿತವಾಗಿಯೂ ಸತ್ಯವಾಗಿದೆ, ಗುರು-ಭಕ್ತಿಯ ಆ ಮಾದರಿ. ಮತ್ತು ಆಕೆ ಏನಾಗಿದ್ದಾರೆ — ಏನಾಗಿದ್ದರು ಎಂಬುದಲ್ಲ ಬದಲಿಗೆ ಏನಾಗಿದ್ದಾರೆ, ಏಕೆಂದರೆ ಆಕೆಯು ಸದಾ ಗುರುದೇವರ ಕಾರ್ಯದ ಅವಿಭಾಜ್ಯ ಅಂಗವಾಗಿರುತ್ತಾರೆ — ಎಂಬುದನ್ನು ನಾವು ನೆನಪಿಡಬೇಕು ಮತ್ತು ಆಕೆಯ ಉದಾಹರಣೆಯನ್ನು ಅಂದರೆ ಗುರುವಿನ ಪ್ರಚಾರಕಾರ್ಯಕ್ಕೆ ನಿಸ್ವಾರ್ಥ ಸೇವೆಯ ಮೂಲಕ ಗುರು-ಭಕ್ತಿಯನ್ನು ಅತ್ಯುನ್ನತ ರೂಪದಲ್ಲಿ ಸಲ್ಲಿಸುವುದನ್ನು ಅನ್ವಯಿಸಬೇಕು. ತಾನು ನೀಡಿದ ಸಮಯ ಮತ್ತು ಶಕ್ತಿಗೆ ಆಕೆ ಯಾವತ್ತೂ ಪರಿಮಿತಿಯನ್ನು ಇಟ್ಟುಕೊಳ್ಳಲಿಲ್ಲ ಎಂಬ ಬಗ್ಗೆ ನೀವು ಅನೇಕ ಕಥೆಗಳನ್ನು ಕೇಳಿರುತ್ತೀರಿ. ಜವಾಬ್ದಾರಿ ಅಥವಾ ಸಮಸ್ಯೆ ಅಥವಾ ಕರ್ತವ್ಯ ಎಷ್ಟೇ ಸಣ್ಣದಾಗಿರಲಿ ಅಥವಾ ಎಷ್ಟೇ ದೊಡ್ಡದಾಗಿರಲಿ, ಅದೆಲ್ಲವೂ ಭಗವಂತನಿಗೆ ಮತ್ತು ಗುರುಗಳಿಗೆ ಸಂಬಂಧಿಸಿದ್ದಾಗಿರಲಿ — ಆನಂದ ಮಾ ಬದುಕಿದ್ದ ರೀತಿ ಇದು. ಆಕೆ ಆಡಳಿತಾತ್ಮಕ ಕರ್ತವ್ಯಗಳಲ್ಲಿ ಕೆಲಸ ಮಾಡುವುದಾಗಲಿ ಅಥವಾ ಗುರುಗಳು ಉಪನ್ಯಾಸ ಸತ್ಸಂಗಕ್ಕಾಗಿ ಮಂದಿರಕ್ಕೆ ಹೋಗುವ ಮೊದಲು ಆಕೆ ಗುರುದೇವರ ಕಾರನ್ನು ತೊಳೆದು ಪಾಲಿಶ್ ಮಾಡಲು ಸದ್ದಿಲ್ಲದೆ ಅದನ್ನು ತೆಗೆದುಕೊಂಡು ಹೋಗುವುದಾಗಲಿ, ಅದು ಯಾವಾಗಲೂ ಅದೇ ಭಕ್ತಿಯಿಂದ, ಅದೇ ಕಾಳಜಿಯಿಂದ ಇರುತ್ತಿತ್ತು.


ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮದೇ ಆದ ರೀತಿಯಲ್ಲಿ ಆಕೆಯ ಭೌತಿಕ ಉಪಸ್ಥಿತಿಯ ಕೊರತೆಯನ್ನು ಅನುಭವಿಸುತ್ತಿದ್ದೇವೆ. ಆಕೆ ನನಗೆ ಸಹೋದರಿಯಾಗಿದ್ದರು, ಗುರುದೇವರ ಪಾದದಲ್ಲಿದ್ದ ಗೌರವಾನ್ವಿತ ಶಿಷ್ಯೆಯಾಗಿದ್ದರು, ಆಧ್ಯಾತ್ಮಿಕ ಮಾರ್ಗದರ್ಶಕಿಯಾಗಿದ್ದರು ಮತ್ತು ಒಂದು ಮಾದರಿಯಾಗಿದ್ದರು. ಆಕೆ ಸದಾ ನನ್ನ ಹೃದಯದಲ್ಲಿ ಮತ್ತು ಆತ್ಮದಲ್ಲಿ ಸ್ಥಾನವನ್ನು ಹೊಂದಿರುತ್ತಾರೆ, ಅದು ಕೇವಲ ಈ ಜೀವಿತಾವಧಿಯಲ್ಲಿ ಪ್ರಾರಂಭವಾದುದಲ್ಲ ಎಂಬ ರೀತಿಯಲ್ಲಿ, ಅದು ನನಗೆ ತಿಳಿದಿದೆ. ಗುರುಗಳ ಸುತ್ತ ಇದ್ದ ನಾವೆಲ್ಲರೂ ಹಿಂದಿನ ಜನ್ಮಗಳಲ್ಲಿ ಅನೇಕ ಬಾರಿ ಅವರ ಜೊತೆಗಿದ್ದೆವು ಎಂದು ಅವರು ನಮಗೆ ಹೇಳಿದ್ದಾರೆ. ಆದ್ದರಿಂದ ಆ ಬಂಧ ಇದ್ದೇ ಇದೆ, ಮತ್ತು ಸಾವು ಕೂಡ ಅದನ್ನು ಕತ್ತರಿಸಲು ಸಾಧ್ಯವಿಲ್ಲ — ಸಾವು ನಿಮ್ಮೆಲ್ಲರ ಬಂಧವನ್ನೂ ಕೂಡ ಕಡಿದುಹಾಕಲು ಸಾಧ್ಯವಿಲ್ಲ. ನೀವು ಉತ್ತಮ ಮತ್ತು ಅನುಕರಣೀಯ ರೀತಿಯಲ್ಲಿ ಸೇವೆ ಸಲ್ಲಿಸಿದಾಗ, ಆನಂದ ಮಾ, ದಯಾ ಮಾ ಮತ್ತು ಗುರುಗಳ ಇತರ ಶಿಷ್ಯರಂತೆಯೇ — ಅವರನ್ನು ಕುರಿತು ಗುರುಗಳೇ ಹೇಳಿದ್ದರು: “ಭಗವಂತ ನನಗೆ ದೇವತೆಗಳನ್ನು ಕಳಿಸಿದ್ದಾನೆ,” — ನೀವೂ ಕೂಡ ಗುರುಗಳ ದೇವತೆಗಳು ಎಂಬುದು ನಿಮಗೆ ತಿಳಿದಿರುತ್ತದೆ. ನಂತರ ಅವರು ನಮ್ಮಲ್ಲಿ ಪ್ರತಿಯೊಬ್ಬರನ್ನು ನೋಡಿ ಹೇಳುತ್ತಿದ್ದರು: “ಈಗ, ನೀವೆಲ್ಲರೂ ದೇವತೆಗಳಂತೆ ವರ್ತಿಸಬೇಕು!”


ಭಗವಂತ ಮತ್ತು ಗುರುಗಳ ದೃಷ್ಟಿಯಲ್ಲಿ ಬಹಳ ಪ್ರಿಯರಾಗಿರುವ ಮತ್ತು ಬಹಳ ಉನ್ನತಸ್ಥಿತಿಯಲ್ಲಿರುವ ಹಾಗೂ ನಮ್ಮೆಲ್ಲರ ದಿವ್ಯ ಸ್ನೇಹದಲ್ಲಿ ಬಹಳ ಪ್ರಿಯರಾಗಿರುವ ಆತ್ಮಕ್ಕೆ ಪ್ರೀತಿ ಮತ್ತು ಮೆಚ್ಚುಗೆಯ ಒಂದು ಸಣ್ಣ ಮಾತನ್ನು ಹೇಳುವುದು ಒಂದು ಗೌರವವೆಂದು ನಾನು ಭಾವಿಸುತ್ತೇನೆ. ಜೈ ಗುರು!

ಶ್ರೀ ದಯಾ ಮಾತಾ:

ಆತ್ಮೀಯರೇ, ನನ್ನ ಮನಸ್ಸು ಅನೇಕ ವರ್ಷಗಳ ಹಿಂದೆ ನಮ್ಮ ತಾಯಿಯ ಪಾದದ ಬಳಿ ನಮ್ಮ ಅತ್ಯಂತ ಮೊದಲಿನ ದಿನಗಳತ್ತ ಪಯಣಿಸುತ್ತಿದೆ. ಆನಂದ ಮಾ ಮತ್ತು ನಾನು ಸುಮಾರು ಎಂಬತ್ತೊಂಬತ್ತು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ನಾನು ಅವಳಿಗಿಂತ ಸ್ವಲ್ಪ ಹಿರಿಯಳು – ನಾವು ಶಾಲೆಗೆ ಹೋಗುವಾಗ ಯಾವಾಗಲೂ ನನ್ನ ಕೈ ಹಿಡಿದಿರುತ್ತಿದ್ದ ಮಗು ಅವಳು, ಯಾವಾಗಲೂ ದಯಾ ಮಾತೆಯ ಹೆಜ್ಜೆಗಳನ್ನು ಅನುಸರಿಸುತ್ತಿದ್ದಳು.

ಆ ಹೆಜ್ಜೆಗಳು ಅವಳನ್ನೂ ಇಲ್ಲಿಗೆ ಕರೆತರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ. ಗುರೂಜಿ ಮಾತನಾಡುವುದನ್ನು ನಾವು ಮೊದಲು ಕೇಳಿದ್ದು ಸಾಲ್ಟ್ ಲೇಕ್‌ನಲ್ಲಿ ಅಪಾರ ಪ್ರೇಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾಗ. ನಮ್ಮನ್ನು ನಮ್ಮ ತಾಯಿ ಅವರ ಉಪನ್ಯಾಸಕ್ಕೆ ಕರೆದೊಯ್ದಿದ್ದರು; ಮತ್ತು ನಾವು ಆ ದೊಡ್ಡ ಸಭಾಂಗಣದ ಹೊಸ್ತಿಲಲ್ಲಿ ನಿಂತು ಅವರು ದೂರದಲ್ಲಿ ನಿಂತಿರುವುದನ್ನು ನೋಡಿದಾಗ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಆತ್ಮದಲ್ಲಿ ಆಳವಾದ ಪ್ರಚೋದನೆಯನ್ನು ಅನುಭವಿಸಿದೆವು. ಕೆಲವು ತಿಂಗಳುಗಳ ನಂತರವಷ್ಟೇ ನನಗೆ ಮೌಂಟ್ ವಾಷಿಂಗ್ಟನ್‌ಗೆ ಬರುವ ಅವಕಾಶ ಸಿಕ್ಕಿತು; ಆಗ ನನಗೆ ಹದಿನೇಳು ವರ್ಷ. ನನ್ನ ಹೃದಯದಲ್ಲಿದ್ದ ಸಂತೋಷ ಮತ್ತು ಶಾಂತಿಯನ್ನು ನನಗೆ ಮರೆಯಲು ಸಾಧ್ಯವಿಲ್ಲ. ಆಗ ಆನಂದ ಮಾಗೆ ಹದಿನೈದು ವರ್ಷ; ಆದರೂ ಅವಳು ಬರಬೇಕೆಂದು ಹಂಬಲಿಸುತ್ತಿದ್ದಳು. ಮತ್ತು 1933 ರಲ್ಲಿ ಅವಳು ಆಶ್ರಮವನ್ನು ಸೇರಿದಳು, ಅಂತೆಯೇ ನನ್ನ ಪ್ರೀತಿಯ ಸಹೋದರ ರಿಚರ್ಡ್2 ಕೂಡ. ವರ್ಷಗಳು ಕಳೆದಂತೆ, ಗುರೂಜಿ ನಮ್ಮ ತಾಯಿಯ ಎಲ್ಲ ಮಕ್ಕಳನ್ನೂ ತಮ್ಮ ಸುತ್ತಲೂ ಒಟ್ಟುಗೂಡಿಸಿದರು: ಡಿಕ್, ಆನಂದ ಮಾ, ನನ್ನ ಕಿರಿಯ ಸಹೋದರ ಮತ್ತು ನಾನು. ಎಂತಹ ಅದ್ಭುತ ನೆನಪುಗಳು! ಅವು ದಿವ್ಯಾನಂದದ ದಿನಗಳು, ಏಕೆಂದರೆ ಗುರುಗಳು ನಮ್ಮ ಮುಂದೆ ಇಟ್ಟ ತಮ್ಮ ಉದಾಹರಣೆಯಿಂದ ನಾವು ಬಹಳ ಪ್ರಭಾವಿತರಾಗಿದ್ದೆವು.

ಗುರುಗಳ ಶಿಸ್ತು ಬಲವಾಗಿತ್ತು ಮತ್ತು ಆನಂದ ಮಾ ಅದನ್ನು ಭಕ್ತಿಯಿಂದ, ಹೃತ್ಪೂರ್ವಕವಾಗಿ ಅನುಸರಿಸಿದರು. ಮತ್ತು ನಾನು ಅಧ್ಯಕ್ಷೆಯಾದ ನಂತರ, ಈ ಎಲ್ಲಾ ವರ್ಷಗಳಲ್ಲಿ ನನ್ನ ಎಲ್ಲಾ ಕರ್ತವ್ಯಗಳಲ್ಲಿ ನನಗೆ ಅವಳೇ ಸಹಾಯ ಮಾಡಿದುದು. ನಾನು ಯುರೋಪಿನಾದ್ಯಂತ, ಭಾರತ, ಮೆಕ್ಸಿಕೋ, ಜಪಾನ್ ಮತ್ತು ಇತರ ದೇಶಗಳಾದ್ಯಂತ ಪ್ರಯಾಣಿಸಿದಾಗ, ಅವಳು ನನ್ನ ನೆರವಿಗಿದ್ದಳು. ನಾನು ಆ ಪ್ರೀತಿಯನ್ನು ಅತ್ಯಮೂಲ್ಯವೆಂದು ಭಾವಿಸುತ್ತೇನೆ; ಅವಳ ಸ್ನೇಹವನ್ನು ಅತ್ಯಮೂಲ್ಯವೆಂದು ಭಾವಿಸುತ್ತೇನೆ.

ಅವಳ ದಿನಚರಿಯಿಂದ ನಾನು ನಿಮಗೆ ಒಂದು ಚಿಂತನೆಯನ್ನು ಓದುತ್ತೇನೆ: ಏಪ್ರಿಲ್ 11, 1950 ರಂದು ಅವಳು ಬರೆದಿದ್ದಳು: “ನಿಜಕ್ಕೂ ಆಶ್ಚರ್ಯ! ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಗುರುಗಳು ನನ್ನನ್ನು ಆಯ್ಕೆ ಮಾಡಿದ್ದಾರೆಂದು ನನಗೆ ಹೇಳಿದರು. ನಾನು ಆ ಗೌರವವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ನಾನು ಅವರಿಗೆ ಹೇಳಿದೆ, ಏಕೆಂದರೆ ಒಂದು ಕುಟುಂಬದಿಂದ ಒಬ್ಬ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಮತ್ತು ಸ್ವಾಭಾವಿಕವಾಗಿ ಫೇ ಸಮರ್ಥನೀಯಳಾಗಿದ್ದಳು. ಆದರೆ ನಾನು ಮಂಡಳಿಯಲ್ಲಿ ಇಲ್ಲದಿರುವುದು ಸರಿಯಲ್ಲ ಎಂದು ಗುರುಗಳು ಹೇಳಿದರು. ಮತ್ತು ರಾಜರ್ಷಿಯೊಂದಿಗಿನ ಮೀಟಿಂಗ್‌ನಲ್ಲಿ ಅವರು ನನ್ನನ್ನು ನೇಮಿಸಿದರು…. ನಾನು ಆಯ್ಕೆಯಾಗಿರುವುದಕ್ಕೆ ಮನ್ನಣೆ ನೀಡುತ್ತೇನೆ, ಆದರೆ ನಾನು ಆ ಪ್ರತಿಷ್ಠೆಯಲ್ಲಿ ನಲಿದಾಡುವುದಿಲ್ಲ. ನಿಜವಾಗಿಯೂ ಈ ವಿಷಯಗಳು ನನಗೆ ಏನೂ ಮಹತ್ವದ್ದೆನಿಸುವುದಿಲ್ಲ.

“ಗುರುಗಳು ಆಳವಾದ ಚಿಂತನೆಯಲ್ಲಿ ಮುಳುಗಿದ್ದಾರೆ. ಅವರ ಮೂಲಕ ಅನೇಕ ಅದ್ಭುತ ಸತ್ಯಗಳು ವ್ಯಕ್ತವಾಗುತ್ತಿವೆ: ಭಗವಂತನ ಈ ಕನಸಿನಲ್ಲಿ ನಾವು ಅಸ್ತಿತ್ವದಲ್ಲಿರುವುದು ಏಕೆ, ಯಾವ ಕಾರಣಕ್ಕಾಗಿ. ನಾವೆಲ್ಲರೂ ಇಲ್ಲಿ ಬದುಕಲು ಮತ್ತು ಭಗವಂತನನ್ನು ಅರಸಲು ಬಂದಿರುವ ಜೀವನದ ಬಗ್ಗೆ ಹಾಗೂ ಅವನು ನಮ್ಮನ್ನು ಏಕೆ ಸೃಷ್ಟಿಸಿದ ಎಂಬುದಕ್ಕೆ ಉತ್ತರವನ್ನು ಅವರು ಬಹಳ ಸ್ಪಷ್ಟವಾಗಿ ಹೇಳುತ್ತಾರೆ.”

ಮತ್ತು ಸ್ವಲ್ಪ ಸಮಯದ ನಂತರ ಅವಳು ಹೇಳಿದಳು: “ಗುರುಗಳು ಕೆಲವು ಶಿಷ್ಯರೊಂದಿಗೆ ಮಾತನಾಡುತ್ತಿದ್ದರು, ಮತ್ತು ಆ ಸಂಭಾಷಣೆಯ ಸಮಯದಲ್ಲಿ ಅವರು ಹೇಳಿದರು: ‘ನಾನು ನಿಮ್ಮ ಪ್ರತಿಯೊಬ್ಬರ ಜೀವನದಲ್ಲೂ ಹಾದುಹೋಗುತ್ತೇನೆ. ಭಗವಂತನನ್ನು ಭಕ್ತಿಯು ಮೊದಲು ಮುಟ್ಟುತ್ತದೆ ಎಂದು ಸಂತರು ಯಾವಾಗಲೂ ಹೇಳಿದ್ದಾರೆ. ಯಾರಿಗೆ ಇಚ್ಛೆ ಇದೆಯೋ ಅವರು ಅದನ್ನು ಸದಾ ಅರಸಿ.’ ಇಚ್ಛೆ ಇರುವವರಲ್ಲಿ ನಾನೂ ಒಬ್ಬಳು ಮತ್ತು ನಾನು ಭಕ್ತಿಯಿಂದ ಭಗವಂತನನ್ನು ಅರಸುತ್ತೇನೆ.” ಆ ಆಲೋಚನೆಗಳು ಮಾತಾಜಿ ಬದುಕಿದ್ದ ರೀತಿಯನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.

ಇದು ನನ್ನ ಪಾಲಿಗೆ ಪವಿತ್ರವಾದ ದಿನ. ಇದು ದುಃಖದ ದಿನವೂ ಹೌದು, ಏಕೆಂದರೆ ನಾನು ಆ ಆತ್ಮೀಯ, ಪ್ರೀತಿಯ ಸಹೋದರಿ ಮತ್ತು ಸುಮಾರು ಎಂಬತ್ತೊಂಬತ್ತು ವರ್ಷಗಳ ಸ್ನೇಹಿತೆಯನ್ನು ಕಳೆದುಕೊಳ್ಳುತ್ತಿದ್ದೇನೆ. ಆದರೆ ನಾನು ಸಾವರಿಸಿಕೊಂಡು ಹೋಗುತ್ತೇನೆ; ನಾನು ನಿರಾಶಳಾಗುವುದಿಲ್ಲ! ನೀವೆಲ್ಲರು ಅವಳ ಬಗ್ಗೆ ಮಾತನಾಡಿದ ರೀತಿಯು ನನ್ನ ಮನಸ್ಸನ್ನು ತಟ್ಟಿದೆ. ನೀವು ನನ್ನ ಕಣ್ಣಲ್ಲಿ ನೀರು ತರಿಸಿದಿರಿ. ಭಗವಂತ ನಿಮ್ಮೆಲ್ಲರನ್ನೂ ಆಶೀರ್ವದಿಸಲಿ. ಮತ್ತು ನಾನು ನಿಮ್ಮೆಲ್ಲರಲ್ಲಿ ಒಂದು ವಿಷಯವನ್ನು ಕೇಳುತ್ತೇನೆ: ಈ ಸಂದರ್ಭವು ನಮ್ಮನ್ನು ಬದಲಾಯಿಸಲಿ! ಸಂತರ ಜೀವನದ ಉದಾಹರಣೆಗಳು ನಮ್ಮನ್ನು ಬದಲಾಯಿಸುವ ಉದ್ದೇಶವನ್ನು ಹೊಂದಿರುತ್ತವೆ, ಬೇರೆಯವರನ್ನಲ್ಲ. ನಿಮ್ಮನ್ನು ಕೇಳಿಕೊಳ್ಳಿ: ನಾನು ಸ್ನೇಹಮಯಿಯೇ? ನಾನು ಕರುಣಾಳುವೇ? ನನ್ನದು ಶಾಂತ ಸ್ವಭಾವವೇ? ನಾನು ಸಹಾನುಭೂತಿ ಮತ್ತು ಪ್ರೀತಿಯನ್ನು ಹೊರಸೂಸುತ್ತೇನೆಯೇ? ಗುರುಗಳು ಹಾಗಿದ್ದರು; ಅದನ್ನೇ ನಮಗಿಂತ ಮುಂದೆ ಹೋದ ಇವರೆಲ್ಲರೂ — ರಾಜರ್ಷಿ, ಜ್ಞಾನಮಾತಾ, ದುರ್ಗಾ ಮಾ, ಡಾ. ಲೂಯಿಸ್ ಮತ್ತು ಇತರರು ಹಾಗೂ ಈಗ ನಮ್ಮ ಪ್ರೀತಿಯ ಆನಂದ ಮಾ — ಕಲಿಸಿದ್ದು. ಮನಸ್ಸಿನ ಸಣ್ಣತನವಿಲ್ಲ — ಮತ್ತು ಯಾವಾಗಲೂ ಯೋಚಿಸುವುದು: “ನಾನು ಯಾವ ರೀತಿ ಸೇವೆ ಮಾಡಬಹುದು?” ಅವಳಿಗೆ ಗೊತ್ತಿದ್ದ ಅತ್ಯಂತ ಅಪಾರ ಆನಂದ, ನಮಗೆಲ್ಲರಿಗೂ ಗೊತ್ತಿರುವ ಅಪಾರ ಆನಂದವೆಂದರೆ, ನಿಸ್ವಾರ್ಥವಾಗಿ ಸೇವೆ ಮಾಡುವುದು — ಎಂದಿಗೂ ನಾನು-ನಾನು-ನಾನು ಎಂದು ಯೋಚಿಸದೆ. ಗುರುಗಳು ಹೇಳಿದಂತೆ, “ಈ ‘ನಾನು’ ಸತ್ತಾಗ, ನಾನು ಯಾರೆಂದು ನನಗೆ ತಿಳಿಯುತ್ತದೆ.” ಮಾತಾಜಿ ಹಾಗಿದ್ದರು. ಅವಳು ಯಾವತ್ತೂ ಮೊದಲು ತನ್ನ ಬಗ್ಗೆ ಯೋಚಿಸಲಿಲ್ಲ. ಸದಾ ಗುರುವಿನ ಸೇವೆ, ಎಲ್ಲವನ್ನೂ ನೋಡಿಕೊಳ್ಳುವುದು, ಅವರ ಪ್ರಚಾರಕಾರ್ಯಕ್ಕಾಗಿ ಕೆಲಸ ಮಾಡುವುದು; ಮತ್ತು ಅವಳ ಮಧುರ, ಪ್ರೀತಿಪೂರ್ವಕ ರೀತಿಯಲ್ಲಿ, ತನ್ನ ಸಹೋದರಿ ದಯಾ ಮಾತಾಳ ಸೇವೆ ಮಾಡುವುದು.

ಅವಳಿಗೆ ಸಲ್ಲಿಸಿದ ಈ ಸುಂದರ ಶ್ರದ್ಧಾಂಜಲಿಗೆ ಧನ್ಯವಾದಗಳು. ಭಗವಂತ ನಿಮ್ಮೆಲ್ಲರನ್ನು ಆಶೀರ್ವದಿಸಲಿ.

1ಪರಮಹಂಸಜಿಯವರು ಬದುಕಿದ್ದಾಗ ಆನಂದ ಮಾತೆಯನ್ನು ಹೆಚ್ಚಾಗಿ “ಮಾತಾಜಿ” ಎಂದು ಕರೆಯುತ್ತಿದ್ದರು — ಸಂಸ್ಕೃತದಲ್ಲಿ “ಗೌರವಾನ್ವಿತ ತಾಯಿ.”

2ಸಿ. ರಿಚರ್ಡ್ ರೈಟ್, 1935-36 ರಲ್ಲಿ ಪರಮಹಂಸ ಯೋಗಾನಂದರ ಭಾರತ ಭೇಟಿಯ ಸಮಯದಲ್ಲಿ ಅವರ ಸಹಾಯಕರಾಗಿ ಸೇವೆ ಸಲ್ಲಿಸಿದರು, ಇದನ್ನು ಯೋಗಿಯ ಆತ್ಮಕಥೆಯಲ್ಲಿ ವಿವರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ