“ನೀವು ಎಲ್ಲ ಜನರನ್ನೂ ಪ್ರೀತಿಸಲು, ಅವರ ದೇಹ-ಮಂದಿರಗಳಲ್ಲಿ ಸರ್ವತ್ರಗೋಚರ ಕ್ರಿಸ್ತನ ನಿವಾಸವನ್ನು ಕಾಣಲು–ನಿಮ್ಮ ಅಂತರಾಳವನ್ನು ಕ್ರಿಸ್ತ-ಪ್ರೇಮದ ಪೂಜಾಪೀಠವನ್ನಾಗಿ ಮಾಡಿಕೊಳ್ಳಿ.”
—ಪರಮಹಂಸ ಯೋಗಾನಂದ
ಪರಮಹಂಸ ಯೋಗಾನಂದರ ಆಶ್ರಮದಿಂದ ಆನಂದಪೂರ್ಣ ಕ್ರಿಸ್ಮಸ್ ಶುಭಾಶಯಗಳು ಮತ್ತು ರಜಾ ದಿನಗಳ ಸದಾಶಯಗಳು! ಜಗದಾದ್ಯಂತ ಅಸಂಖ್ಯಾತ ಜನರು ಪ್ರಿಯ ಪ್ರಭು ಏಸುವಿನ ಜನನವನ್ನು ಆಚರಿಸುತ್ತಿರುವ ಈ ಪವಿತ್ರ ಸಮಯದಲ್ಲಿ ಕ್ಷಿಪ್ರ ಗ್ರಾಹಿ ಆತ್ಮಗಳು ಮನಗಾಣುತ್ತಿರುವ ಸ್ವರ್ಗಸದೃಶ ಆನಂದ ಮತ್ತು ಶಾಂತಿಯಿಂದ ನಿಮ್ಮೆಲ್ಲರ ಹೃದಯಗಳು ಪೂರಿತವಾಗಲಿ.
ಏಸುವಿನ ಅವತಾರದಲ್ಲಿ ಭಗವಂತನ ಜಗತ್ — ಪಾಲನೆಯ ಪ್ರಜ್ಞೆಯ ಅಸೀಮತೆ ಮತ್ತು ಭವ್ಯತೆ ಸಂಪೂರ್ಣವಾಗಿ ಅಭಿವ್ಯಕ್ತಿಯಾಗಿದ್ದವು; ಆದರೂ ಪ್ರಾಯಶಃ ಅತ್ಯಂತ ವೈಯಕ್ತಿಕವಾಗಿ ನಮ್ಮ ಮನಮುಟ್ಟುವಂತಹದ್ದೆಂದರೆ, ಅವನು ಬದುಕಿದ ರೀತಿ ಮತ್ತು ಅವನ ಕಾಲದ ಸಮುದಾಯದ ಪ್ರತಿಯೊಂದು ಆತ್ಮದೊಡನೆ ಅವನಿಗಿದ್ದ ದೈನ್ಯತೆ ಮತ್ತು ಅಪರಿಮಿತ ದಯೆ. ನಮ್ಮ ಮಾನವೀಯ ಅನುಭವಗಳನ್ನು ಹಂಚಿಕೊಂಡಂತವನಾಗಿ ಹಾಗೂ ನಮ್ಮ ಹೆಣಗಾಟಗಳನ್ನು ತಿಳಿದವನಂತಾಗಿ ಅವನು ತಾದಾತ್ಮ್ಯದಿಂದ ಮತ್ತು ಅರಿವಿನಿಂದ ಎಲ್ಲ ಜನರನ್ನೂ ಭಗವಂತನ ಮಕ್ಕಳಂತೆ ನೋಡುತ್ತಿದ್ದನು. ಭಗವತ್ — ಸಾಕ್ಷಾತ್ಕಾರ ಹೊಂದಿದ ಆತ್ಮಗಳನ್ನು ಭೂಮಿಯ ಮೇಲೆ ಕಳಿಸುವಾಗ, ಭಗವಂತನು ನಾವು ಕೂಡ ಅವರ ಹೃದಯಾಂತರಾಳದ ಸಾರ್ವತ್ರಿಕ ಆದರ್ಶ ಜೀವನದ ಉದಾಹರಣೆಯನ್ನು ಅನುಸರಿಸಿ, ಅದನ್ನು ನಮ್ಮ ಅಂತರಾಳಗಳಲ್ಲಿ ಕಂಡುಕೊಂಡು ಕ್ರಿಸ್ತನ ರೀತಿಯ ಸರ್ವಾಂಗೀಣ-ಪ್ರೇಮ, ಸರ್ವಸಮರ್ಪಣೆಯ ದಿವ್ಯ ಪ್ರಜ್ಞೆಯನ್ನು ವ್ಯಕ್ತಪಡಿಸಬೇಕೆಂದು ಕೇಳಿಕೊಳ್ಳುತ್ತಾನೆ.
ಆಧ್ಯಾತ್ಮಿಕವಾಗಿ ಪವಿತ್ರವಾದ ಸಂದರ್ಭಗಳು ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಕರೆ ಎಂದು ನಮ್ಮ ಗುರುದೇವರಾದ ಪರಮಹಂಸಜಿ ಒತ್ತಿ ಹೇಳುತ್ತಿದ್ದರು — ಭಗವಂತನ ಸರ್ವವ್ಯಾಪಿ ಪ್ರೇಮದ ಸುಪ್ತ ಶಕ್ತಿಯ ಒಂದು ಹೊಸ ಜನನಕ್ಕೆ ಒಂದು ಆಶಾದಾಯಕ ಅವಕಾಶ. ಅದು ನಮ್ಮ ಜೀವನವನ್ನು ಬದಲಾಯಿಸುತ್ತದೆ ಮತ್ತು ತತ್ಪರಿಣಾಮವಾಗಿ ಯಾರೆಲ್ಲರೊಡನೆ ನಾವು ಸಂಪರ್ಕಕ್ಕೆ ಬರುತ್ತೇವೋ ಅವರೆಲ್ಲರನ್ನೂ ಅನುಗ್ರಹಿಸುತ್ತದೆ.
“ನಿಮ್ಮೊಳಗಿರುವ ವೈಶಾಲ್ಯವನ್ನು ಅರಿಯುವುದಕ್ಕಾಗಿ ಸಣ್ಣತನದ ಕನಸುಗಳಿಂದ ಎದ್ದೇಳಿ” ಎಂದು ಗುರುಗಳು ನಮ್ಮನ್ನು ಪ್ರಚೋದಿಸುತ್ತಿದ್ದರು. ಅದಕ್ಕಾಗಿ ಭಗವಂತ ಮತ್ತು ಜೀವಿಗಳ ಪ್ರತಿಯೊಂದು ಅಣುವಿನಲ್ಲೂ ಸರ್ವವ್ಯಾಪಿಯಾದ ಅವನ ಸಾರ್ವತ್ರಿಕ ಕೂಟಸ್ಥ ಚೈತನ್ಯದ ಆತ್ಮ-ವಿಕಸನದ ಭಕ್ತಿಪೂರ್ಣ ಧ್ಯಾನಕ್ಕಾಗಿ ಒಂದು ದಿನವನ್ನು ಮೀಸಲಿರಿಸಿ ನಿಜವಾದ ಕ್ರಿಸ್ಮಸ್ ಅನ್ನು ಆಚರಿಸಲು ನಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದರು.
ಭೌತಿಕವಾಗಿಯಾಗಲೀ ಅಥವಾ ನಮ್ಮ ಸಮಯ, ಗಮನ ಮತ್ತು ರಕ್ಷಣೆಯ ಉಡುಗೊರೆಗಳನ್ನು ನೀಡುತ್ತಾ ನಾವು ಇತರರಿಗೆ ಸಹಾನುಭೂತಿಯ ಸಹಕಾರವನ್ನು ಕೊಡಲು ನಿರ್ಧರಿಸಿದಾಗ, ನಮ್ಮ ಪ್ರಜ್ಞೆಯು ಅದರ ಸ್ವಾರ್ಥದ ಮಿತಿಗಳನ್ನು ಸೂಕ್ತ ಪ್ರಮಾಣದಲ್ಲಿ ಕಳಚಿಹಾಕುತ್ತದೆ. ನಮಗೆ ತೊಂದರೆ ಕೊಟ್ಟವರಿಗೂ ಸಹ ನಮ್ಮ ಹೃದಯಗಳಲ್ಲಿ ಪ್ರೀತಿ ತೋರಲು ಮತ್ತು ಕ್ಷಮಾಪಣೆಯ ಮಾಧುರ್ಯ ಮತ್ತು ಪರಿಜ್ಞಾನದ ಸಹನೆಯಿಂದ ಸಮರಸದಿಂದಿರಲು ಮತ್ತು ಪರಿಹರಿಸಲು ಮಾಡುವ ಪ್ರತಿಯೊಂದು ಪ್ರಯತ್ನದಿಂದ, ಎಲ್ಲವನ್ನು ಒಳಗೊಳ್ಳುವ ಪ್ರಜ್ಞೆಯನ್ನು ನಮ್ಮಡೆಗೆ ಸೆಳೆಯುತ್ತ, ಈ ಪವಿತ್ರ ಋತುವಿನಲ್ಲಿ ನಾವು ಏಸುವನ್ನು ಗೌರವಿಸುತ್ತೇವೆ. ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಎಲ್ಲೆಗಳ ಬಂಧನಗಳಿಂದ ಮುಕ್ತವಾಗಿ, ಎಲ್ಲ ಮಾನವರನ್ನೂ ಆತ್ಮಗಳನ್ನೂ ಎಲ್ಲ ಮನುಷ್ಯರನ್ನೂ ದಿವ್ಯ ಬಂಧುಗಳೆಂದು ಅವನು ಭಾವಿಸಿದ ಹಾಗೆ ನಾವೂ ತಿಳಿಯುವುದೇ ನಮ್ಮ ಕಾಲದ ಈ ಹಲವಾರು ಸವಾಲುಗಳಿಗೆ ಅಂತಿಮವಾದ ಉತ್ತರ.
ಧ್ಯಾನದಲ್ಲಿ ಭಗವಂತನ ಸರ್ವವ್ಯಾಪಿತ್ವದ ಸಂಸರ್ಗದಲ್ಲಿ, ನಾವು ಕೂಡ ಏಸುವು ತಿಳಿದಿದ್ದ ಪರಮಾತ್ಮನನ್ನು ಆಳವಾಗಿ ಅನುಭವಿಸುತ್ತೇವೆ. ಹೃದಯದ ಭಾವನೆ ತನ್ನೆಲ್ಲ ಮಿತಿಗಳನ್ನು ದಾಟಿಬಿಡುತ್ತದೆ, ಎಲ್ಲರನ್ನೂ ತನ್ನವರೇ ಎಂದು ಭಾವಿಸುತ್ತದೆ; ಆ ಪ್ರೇಮದಿಂದ ಯಾರನ್ನೂ ಕೂಡ ನೀವು ಕಡೆಗಣಿಸಲಾಗುವುದಿಲ್ಲ. ನಿಮ್ಮೊಡನೆ ಹೊಸ ವರ್ಷಕ್ಕೆ ತೆಗೆದುಕೊಂಡು ಹೋಗಲು ಈ ಕ್ರಿಸ್ಮಸ್‌ನಲ್ಲಿ ಆ ವೈಶಾಲ್ಯತೆಯ ಪ್ರಜ್ಞೆಯ ದಿವ್ಯ ಉಡುಗೊರೆಯನ್ನು ನೀವು ಪಡೆಯುವಂತಾಗಲಿ. “ಏಸುವಿನ ಜೀವನದಲ್ಲಿ ನಿರೂಪಣೆಯಾದ ಆದರ್ಶಗಳನ್ನು, ಧ್ಯಾನದ ಮೂಲಕ ಆ ಸದ್ಗುಣಗಳನ್ನು ಅವರ ಜೀವನದ ಒಂದು ಭಾಗ ಮಾಡಿಕೊಂಡು ಪ್ರತಿಯೊಬ್ಬರೂ ಜೀವಿಸಿದಲ್ಲಿ, ಭೂಮಿಯ ಮೇಲೆ ಒಂದು ಅಗಣಿತ ಶಾಂತಿ ಮತ್ತು ಭ್ರಾತೃತ್ವ ಬರುತ್ತದೆ.”
ನಿಮಗೆ ಮತ್ತು ನಿಮ್ಮ ಪೀತಿಪಾತ್ರರಿಗೆ ಎಲ್ಲ ಸಂತೋಷ, ಶಾಂತಿ ಮತ್ತು ಆಶೀರ್ವಾದಗಳನ್ನು ಬಯಸುತ್ತಾ,

ಶ್ರೀ ಶ್ರೀ ಮೃಣಾಲಿನಿ ಮಾತಾ
ಯೋಗದಾ ಸತ್ಸಂಗ ಸೊಸೈಟಿ ಆಪ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸಂಘಮಾತಾ ಮತ್ತು ಅಧ್ಯಕ್ಷರು
ಕೃತಿಸ್ವಾಮ್ಯ © 2011 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾದಿರಿಸಲಾಗಿದೆ.