ಚಿಲಿಯಲ್ಲಾದ ಭೂಕಂಪದ ಬಗ್ಗೆ ಶ್ರೀ ದಯಾ ಮಾತಾರವರಿಂದ ಒಂದು ವಿಶೇಷ ಸಂದೇಶ

ಮಾರ್ಚ್‌ 2010

ಪ್ರೀತಿ ಪಾತ್ರರೇ,

ಚಿಲಿಯಲ್ಲಾದ ವಿಧ್ವಂಸಕ ಭೂಕಂಪ ಮತ್ತು ಅದರ ಪರಿಣಾಮವಾಗಿ ಪರಿತಪಿಸುತ್ತಿರುವ ಪ್ರತಿಯೊಬ್ಬರಿಗಾಗಿಯೂ ನನ್ನ ಹೃದಯ ಮಿಡಿಯುತ್ತಿದೆ. ಈ ಹೃದಯ ವಿದ್ರಾವಕ ಸಂಗತಿಯ ಬಗ್ಗೆ ನಮಗೆ ತಿಳಿದ ಕೂಡಲೇ ಗುರುದೇವರ ಆಶ್ರಮದಲ್ಲಿದ್ದ ನಾವೆಲ್ಲರೂ ನೊಂದವರಿಗಾಗಿ ಪ್ರಾರ್ಥಿಸಲು ಆರಂಭಿಸಿದೆವು. ನಿಮ್ಮಲ್ಲಿ ಕೂಡ ಹಲವರು ಹೀಗೆ ಮಾಡಿದ್ದೀರೆಂಬ ಭರವಸೆ ನನಗಿದೆ. ಅದೇ ಕಾರ್ಯಗಳಲ್ಲಿ ನೀವೆಲ್ಲರೂ ಮುಂದುವರೆಯಿರಿ ಎಂದು ನಾನು ನಿಮ್ಮನ್ನು ಉತ್ತೇಜಿಸುತ್ತಿದ್ದೇನೆ. ಇಂತಹ ಅನಾಹುತಗಳು ಹಠಾತ್ ಆಗಿ ಅನೇಕರ ಜೀವನವನ್ನು ಛಿದ್ರಗೊಳಿಸಿದಾಗ ಮತ್ತು ಈ ಪ್ರಪಂಚದ ಅನಿಶ್ಚಿತ ಸ್ವಭಾವದಿಂದ ನಮ್ಮ ಭದ್ರತೆಗೆ ಆತಂಕ ಮತ್ತು ಭಯ ಉಂಟಾದಾಗ, ಅವುಗಳನ್ನು ಎದುರಿಸಲು ಪ್ರಾರ್ಥನೆಯು ಅತ್ಯಂತ ಶಕ್ತಿಶಾಲಿಯಾದ ಮಾರ್ಗವಾಗಿದೆ. ಆಂತರ್ಯದಲ್ಲಿ ಭಗವಂತನೆಡೆಗೆ ತಿರುಗುವುದರಿಂದ, ನಮಗೆ ಸಹಾಯ ಮಾಡಲು ನಾವು ಅವನ ಶಾಂತಿ, ಅವನ ದಿವ್ಯ ಪ್ರೇಮ ಮತ್ತು ಎಣೆಯಿಲ್ಲದ ಶಕ್ತಿಯೊಡನೆ ಶ್ರುತಿಗೂಡುತ್ತೇವೆ. ನಾವು ಉಚ್ಛ್ರಾಯದ ಸ್ಥಿತಿಗೇರುವ ಸಂಕ್ರಮಣದ ಕಾಲದಲ್ಲಿದ್ದೇವೆ; ಅವನ ಆಶೀರ್ವಾದಗಳನ್ನು ಪಡೆಯಲು ಹಾಗೂ ವಿಶೇಷ ಸಹಾಯಕ್ಕಾಗಿ ಕೋರುವ ಆ ಆತ್ಮಗಳಿಗೆ ಇನ್ನಿಲ್ಲದ ಆಳವಾದ ದಯೆಯನ್ನು ತೋರುವುದಕ್ಕಾಗಿ ನಮ್ಮ ಹೃದಯ ಮತ್ತು ಮನಸ್ಸು ಸದಾ ತೆರೆದಿರುತ್ತದೆ. ಮತ್ತು ಗುರುದೇವರು ವಿವರಿಸಿದ ಹಾಗೆ, ಈ ಸಂಕ್ರಮಣದ ದಾರಿಯಲ್ಲಿ ನಾವು ಕೆಲವು ಸವಾಲಿನ ಸಂದರ್ಭಗಳನ್ನು ಹಾದುಹೋಗಬೇಕಾಗುತ್ತದೆ ಎಂದು ಭವಿಷ್ಯವನ್ನು ಕಂಡಿದ್ದರು. ಆದರೆ, ಭಗವಂತನ ಬಗ್ಗೆ ಚಿಂತಿಸಲು ಮತ್ತು ಅವನ ಒಳ್ಳೆಯತನವನ್ನು ಅವರ ಬದುಕಿನಲ್ಲಿ ಅಭಿವ್ಯಕ್ತಗೊಳಿಸುವ ಎಲ್ಲರ ಶ್ರಮದಿಂದ ಈ ಕಷ್ಟಗಳನ್ನು ತಗ್ಗಿಸಬಹುದು ಮತ್ತು ಅಂತಿಮವಾಗಿ ಜಯಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. ಸದಾ ಈ ಮಾಯಾ ಪ್ರಪಂಚದ ಭಾಗವಾಗಿರುವ ದ್ವಂದ್ವಗಳಿಂದ ಭಯಪಡಬೇಕೆಂದು ನಾವಿಲ್ಲಿಲ್ಲ, ಬದಲಾಗಿ ನಾವು ಅರಸುತ್ತಿರುವ ಆತ್ಯಂತಿಕ ಸುರಕ್ಷತೆ ಮತ್ತು ನೆಮ್ಮದಿಯನ್ನು ಕೇವಲ ಆಂತರ್ಯದೊಳಗೆ ಹೋಗಿ ಕಂಡುಕೊಳ್ಳಬಹುದು ಎಂಬುದನ್ನು ಕಲಿಯಲಿಕ್ಕಾಗಿ — ನಮ್ಮನ್ನು ಸೃಷ್ಟಿಸಿದವನಡಿಯಲ್ಲಿ ರಕ್ಷಣೆ ಪಡೆಯುವುದು ಮತ್ತು ಯಾವುದೇ ಬಾಹ್ಯ ಪರಿಸ್ಥಿತಿಯನ್ನು ನಾವು ಎದುರಿಸಲಿ, ನಮ್ಮ ಸಂಪೂರ್ಣ ನಂಬಿಕೆಯನ್ನು ಅವನಲ್ಲಿಡುವುದು. ಗುರೂಜಿ ನಮಗೆ ಹೇಳಿದ್ದಾರೆ, “ಭಗವಂತನೇ ಪ್ರೇಮ; ಅವನ ಸೃಷ್ಟಿಯ ಉದ್ದೇಶ ಕೇವಲ ಪ್ರೇಮದಲ್ಲಿ ಮಾತ್ರ ನೆಲೆಗೊಳ್ಳಬಹುದು…ಸತ್ಯತೆಯ ಅಂತರಂಗವನ್ನು ಭೇದಿಸಿದ ಪ್ರತಿಯೊಬ್ಬ ಸಂತನೂ, ವಿಶ್ವಾದ್ಯಂತ ಒಂದು ದಿವ್ಯಯೋಜನೆ ಅಸ್ತಿತ್ವದಲ್ಲಿದೆ ಮತ್ತು ಅದು ಅತ್ಯಂತ ಸುಂದರವೂ ಆನಂದಮವೂ ಆಗಿದೆ ಎಂದು ಘೋಷಿಸಿದ್ದಾನೆ.” ಇತರರಿಗೆ ಮತ್ತು ನಮಗೆ ನಾವು ಸಹಾಯ ಪಡೆದುಕೊಳ್ಳಲು ನಮ್ಮ ಚಿಂತನೆಗಳು ಮತ್ತು ಸಂಕಲ್ಪದ ಶಕ್ತಿಯನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡು ನಾವು ಧೈರ್ಯದಿಂದ ಮುನ್ನುಗ್ಗೋಣ ಮತ್ತು ಆ ದಿವ್ಯ ಉದ್ದೇಶದೊಂದಿಗೆ ಸಹಕರಿಸೋಣ. ಹಾಗೆ ಮಾಡುವುದರಿಂದ, ನಾವು ಕೇವಲ ನಮ್ಮ ಆತ್ಮ ವಿಕಸನವನ್ನು ಮಾತ್ರ ತ್ವರಿತಗೊಳಿಸುವುದಿಲ್ಲ, ಈ ಪ್ರಪಂಚದಲ್ಲಿ ಹಂತ ಹಂತವಾಗಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳ ಕಡೆಗೂ ನಮ್ಮ ಕೈಲಾದದ್ದನ್ನು ಮಾಡಬಹುದು. ನಮಗಾಗುವ ಪ್ರತಿಯೊಂದು ಅನುಭವವೂ ನಮ್ಮನ್ನು ನಮ್ಮ ನಿತ್ಯ ಸ್ನೇಹಿತ ಮತ್ತು ಸಂರಕ್ಷಕನ ಹತ್ತಿರ ಸೆಳೆಯುವಲ್ಲಿ, ಮತ್ತು ನಮ್ಮ ಆತ್ಮದಾಳದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲ ಅಮಿತ ಸಂಪನ್ಮೂಲಗಳಿವೆ ಎಂದು ಅರಿಯುವುದಕ್ಕೆ ಸಹಾಯ ಮಾಡುವುದರಲ್ಲಿ ಒಂದು ಮುಖ್ಯವಾದ ಪಾತ್ರವನ್ನು ಹೊಂದಿದೆ. ಯಾರು ನಮ್ಮ ಪ್ರತಿಯೊಬ್ಬರನ್ನೂ ತನ್ನ ಪಾಲನೆ ಪೋಷಣೆಯಲ್ಲಿಟ್ಟುಕೊಂಡಿರುವನೋ ಅವನೊಡನೆ ನಿಮ್ಮ ಬದುಕನ್ನು ಶ್ರುತಿಗೂಡಿಸಿಕೊಳ್ಳುವ ಪ್ರಯತ್ನಗಳನ್ನು ಅವನು ಆಶೀರ್ವದಿಸಲಿ ಮತ್ತು ಭೂಮಿಯ ಮೇಲೆ ಕಷ್ಟ ಪಡುತ್ತಿರುವವರೆಲ್ಲರೂ ಅವನ ಹಿತದಾಯಕ ಶಾಂತಿಯನ್ನು ಅನುಭವಿಸಲಿ.

ಭಗವಂತ ನಿಮ್ಮನ್ನು ಪ್ರೀತಿಸಲಿ ಮತ್ತು ಆಶೀರ್ವದಿಸಲಿ,

ಶ್ರೀ ದಯಾ ಮಾತಾ

ಇದನ್ನು ಹಂಚಿಕೊಳ್ಳಿ