
21, ಯು. ಎನ್. ಮುಖರ್ಜಿ ರೋಡ್, ದಕ್ಷಿಣೇಶ್ವರ, ಕೋಲ್ಕತ್ತಾ – 700 076.
ದೂರವಾಣಿ +91 (33) 2564 5931, +91 (33) 2564 6208, +91 8420873743, +91 9073581656
ರೆಜಿಸ್ಟರ್ಡ್ ಆಫೀಸ್ ಆಫ್ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ.
ಇಮೇಲ್: [email protected]
ವೆಬ್ ಸೈಟ್ ಲಿಂಕ್: dakshineswar.yssashram.org
ಪರಮಹಂಸ ಯೋಗಾನಂದರು 1935-36 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಲ್ಕತ್ತಾದಿಂದ ರಾಜರ್ಷಿ ಜನಕಾನಂದರಿಗೆ ಹೀಗೆ ಬರೆದರು, “ಬಂಗಾಳದ ಕಲಶಪ್ರಾಯ ನಗರವಾದ ಕಲ್ಕತ್ತಾದಲ್ಲಿ ಶಾಶ್ವತ ಕೇಂದ್ರವನ್ನು ಸ್ಥಾಪಿಸಲು ನಾನು ಅವಿರತವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿದರೆ ನೀವು ಸಂತೋಷಪಡುತ್ತೀರಿ ಮತ್ತು ನಾನು ಬಹುತೇಕ ಯಶಸ್ವಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ.” (ರಾಜರ್ಷಿ ಜನಕಾನಂದ-ಒಬ್ಬ ಮಹಾನ್ ಪಾಶ್ಚಾತ್ಯ ಯೋಗಿ). ನಂತರ, ಅವರು ತಮ್ಮ ಆತ್ಮಚರಿತ್ರೆ ಯೋಗಿಯ ಆತ್ಮಕಥೆ ಯಲ್ಲಿ ಹೀಗೆ ಬರೆದಿದ್ದಾರೆ, “1939 ರಲ್ಲಿ ಗಂಗಾನದಿಯ ತಟದಲ್ಲಿರುವ ದಕ್ಷಿಣೇಶ್ವರದಲ್ಲಿ ಒಂದು ಭವ್ಯವಾದ ಯೋಗದಾ ಸತ್ಸಂಗ ಮಠವನ್ನು ಲೋಕಾರ್ಪಣೆ ಮಾಡಲಾಯಿತು. ಕಲ್ಕತ್ತಾದಿಂದ ಉತ್ತರಕ್ಕೆ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ಈ ಆಶ್ರಮವು ನಗರವಾಸಿಗಳಿಗೆ ಶಾಂತಿಯ ಸ್ವರ್ಗವನ್ನು ನೀಡುತ್ತದೆ. ದಕ್ಷಿಣೇಶ್ವರ ಮಠವು ಭಾರತದಲ್ಲಿನ ಯೋಗದಾ ಸತ್ಸಂಗ ಸೊಸೈಟಿ ಮತ್ತು ಭಾರತದ ವಿವಿಧ ಭಾಗಗಳಲ್ಲಿರುವ ಅದರ ಶಾಲೆಗಳು, ಕೇಂದ್ರಗಳು ಮತ್ತು ಆಶ್ರಮಗಳಿಗೆ ಪ್ರಧಾನ ಕಛೇರಿಯಾಗಿದೆ.
ಮಠವು ಮೂಲತಃ ಎರಡು ಎಕರೆ ಭೂಮಿಯಲ್ಲಿ ವ್ಯಾಪಿಸಿರುವ ‘ತೋಟದ ಮನೆ’ಯಾಗಿದ್ದು, ಅಶ್ವ ಶಾಲೆಗಳನ್ನು ಕೆಲಸದ ಕಚೇರಿಗಳಾಗಿ ಪರಿವರ್ತಿಸಲಾಯಿತು. ಅಲ್ಲಿ ಒಂದು ದೊಡ್ಡ ಕೊಳವಿದ್ದು ಅದನ್ನು ಈಗಲೂ ನಿರ್ವಹಿಸಲಾಗುತ್ತಿದೆ. ನಮ್ಮ ದಿವ್ಯ ಗುರುಗಳು ಯೋಚಿಸಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ವಿದೇಶಗಳಿಂದ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಅತಿಥಿ ಗೃಹ, ಅಡುಗೆಮನೆ ಮತ್ತು ಊಟದ ಪ್ರದೇಶಗಳನ್ನು ಸೇರಿಸಲಾಯಿತು.
ದಕ್ಷಿಣೇಶ್ವರವು ಕೋಲ್ಕತ್ತಾದ (ಕಲ್ಕತ್ತಾ) ಉತ್ತರಕ್ಕೆ, ಹೂಗ್ಲಿ ನದಿಯ – ಈ ಭಾಗಗಳ ಸುತ್ತಲೂ ತಾಯಿ ಗಂಗಾ ಈ ಹೆಸರಿನಿಂದ ಕರೆಯಲ್ಪಡುತ್ತಾಳೆ – ಪೂರ್ವ ದಂಡೆಯ ಉದ್ದಕ್ಕೂ ಇದೆ. ಪಕ್ಕದಲ್ಲಿರುವ ದಕ್ಷಿಣಕ್ಕೆ ಮುಖಮಾಡಿರುವ ಪ್ರಸಿದ್ಧ ಕಾಳಿ ದೇಗುಲದಿಂದಾಗಿ ದಕ್ಷಿಣೇಶ್ವರ ಎಂಬ ಹೆಸರು ಬಂದಿದೆ. ಹವಾಮಾನವು ಹೆಚ್ಚಾಗಿ ಬೆಚ್ಚಗಿರುತ್ತದೆ ಮತ್ತು ಆರ್ದ್ರವಾಗಿರುತ್ತದೆ ಆದರೆ ನವೆಂಬರ್‌ನಿಂದನಿಂದ-ಫೆಬ್ರವರಿಯವರೆಗೆ ತಂಪಾಗಿರುತ್ತದೆ.
ಶ್ರೀ ಶ್ರೀ ದಯಾ ಮಾತಾ ಜೀ ಮತ್ತು ಶ್ರೀ ಶ್ರೀ ಮೃಣಾಲಿನಿ ಮಾತಾ ಜೀಯವರ ಉಪಸ್ಥಿತಿಯಿಂದ ಮಠವು ಆಶೀರ್ವದಿಸಲ್ಪಟ್ಟಿದೆ, ಅವರು ಅನೇಕ ಬಾರಿ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿಯೇ ತಂಗಿದ್ದರು.
ಭಕ್ತರಿಗೆ ವೈಯುಕ್ತಿಕ ಮತ್ತು ನಿರ್ದೇಶಿತ ಆಧ್ಯಾತ್ಮಿಕ ಏಕಾಂತವಾಸಕ್ಕೆ ಸ್ವಾಗತ. ಮುಂಗಡವಾಗಿ ಕಾದಿರಿಸುವುದು ಅತ್ಯಗತ್ಯ. ವೈಯಕ್ತಿಕ ವ್ಯವಹಾರಗಳಿಗಾಗಿ ಕೋಲ್ಕತ್ತಾಗೆ ಬರುವ ಭಕ್ತರು ಆಶ್ರಮದ ಹೊರಗೆ ಉಳಿಯಲು ಸಲಹೆ ನೀಡಲಾಗುತ್ತದೆ ಆದರೆ ತಮ್ಮ ವ್ಯವಹಾರವನ್ನು ಪೂರ್ಣಗೊಳಿಸಿದ ನಂತರ ಭೇಟಿ ನೀಡಲು ಅಥವಾ ವೈಯಕ್ತಿಕ ಏಕಾಂತದಲ್ಲಿ ತೊಡಗಿಕೊಳ್ಳುವುದು ಸ್ವಾಗತಾರ್ಹವಾಗಿದೆ.
ಕೋಲ್ಕತ್ತಾದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳೆಂದರೆ 4, ಗರ್ಪಾರ್ ರಸ್ತೆಯಲ್ಲಿರುವ ಗುರೂಜಿಯವರ ಮನೆ. ಎರಡನೇ ಮಹಡಿ ಮೇಲಿನ ಅಟ್ಟವು ಅವರ ಆರಂಭಿಕ ಸಾಧನೆಯ ಸಮಯದಲ್ಲಿನ ಧ್ಯಾನಗಳು, ಕಣ್ಣೀರು ಮತ್ತು ಕೋಲಾಹಲಗಳಿಗೆ ಸಾಕ್ಷಿಯಾಗಿತ್ತು. ಅವರ ಅಡಚಣೆಯಿಂದ ಕೂಡಿದ ಹಿಮಾಲಯದ ಪಯಣದ ಸಮಯದಲ್ಲಿ, ಅವರು ತಮ್ಮ ಪ್ರಯಾಣದ ಅಗತ್ಯ ವಸ್ತುಗಳ ಕಟ್ಟನ್ನು ಈ ಅಟ್ಟದ ಕಿಟಕಿಯಿಂದ ಕೆಳಗೆ ಎಸೆದಿದ್ದರು. ನಂತರ, ಮಾಸ್ಟರ್ ಮಹಾಶಯರಿಂದ ಪ್ರೋತ್ಸಾಹಿಸಲ್ಪಟ್ಟ ಅವರು, ದಿವ್ಯ ಮಾತೆಯು ಅವರ ಮುಂದೆ ಕಾಣಿಸಿಕೊಳ್ಳುವವರೆಗೂ, ಮತ್ತು “ಯಾವಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ! ನಾನು ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ! ಎಂದು ಭರವಸೆ ನೀಡುವವರೆಗೂ ಇಲ್ಲಿ ಧ್ಯಾನ ಮಾಡಿದರು.
1920 ರಲ್ಲಿ, ಬಾಬಾಜಿ ಗುರೂಜಿಯವರನ್ನು ಅವರ ಕೋಣೆಯಲ್ಲಿ ಭೇಟಿ ಮಾಡಿದ್ದರು. ಗುರೂಜಿಯವರು ಅಮೆರಿಕಕ್ಕೆ ಹೋಗುವ ಮೊದಲು ದೇವರ ಅನುಮತಿಯನ್ನು ಪಡೆಯಲು ನಿರ್ಧರಿಸಿದ್ದರು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಯಾ ಯೋಗದ ಸಂದೇಶವನ್ನು ಹರಡಲು ನಾನು ಆರಿಸಿಕೊಂಡವನು ನೀನೇ ಎಂದು ಬಾಬಾಜಿ ಅವರಿಗೆ ಭರವಸೆ ನೀಡಿದ್ದರು. ಆ ದಿನವನ್ನು- ಜುಲೈ 25-ನ್ನು– ವೈಎಸ್ಎಸ್/ಎಸ್ ಆರ್‌ಎಫ್ ನ ಭಕ್ತರು ಬಾಬಾಜಿ ಸ್ಮೃತಿ ದಿವಸ್ ಎಂದು ಆಚರಿಸುತ್ತಾರೆ. ಈ ಮೊದಲ ಮಹಡಿಯ ಕೊಠಡಿಯು ಕುಟುಂಬದ ಕೆಲವು ಹಳೆಯ ಛಾಯಾಚಿತ್ರಗಳನ್ನು ಸಹ ಒಳಗೊಂಡಿದೆ. ಗುರೂಜಿಯವರ ಮನೆಯನ್ನು ಅವರ ಸಹೋದರ ಸನಂದ ಲಾಲ್ ಘೋಷ್ ಅವರ ವಂಶಸ್ಥರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ, ಅವರು ಸೌಜನ್ಯಶೀಲರು ಮತ್ತು ಭಕ್ತರನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ.
ಭಟ್ಟಾಚಾರ್ಯ ಲೇನ್‌ನಲ್ಲಿರುವ ವೈಎಸ್‌ಎಸ್ ಗರ್ಪಾರ್ ರಸ್ತೆಯ ಕೇಂದ್ರ, ಎಲ್ಲಿ ಗುರೂಜಿಯವರು ಯುವಕರಾಗಿದ್ದಾಗ ಧ್ಯಾನ ಮಾಡುತ್ತಿದ್ದರೋ ಅದು. ಇದು ಅವರ ಬಾಲ್ಯದ ಸ್ನೇಹಿತ ತುಳಸಿ ಬೋಸ್ ಅವರ ಮನೆಯ ಹಿಂಭಾಗದಲ್ಲಿದೆ. ಈಗಲೂ ಇಲ್ಲಿ ಪ್ರತಿ ಶನಿವಾರ ಸಂಜೆ 4.30-7.00 ಗಂಟೆಯವರೆಗೆ ಧ್ಯಾನವನ್ನು ನಡೆಸಲಾಗುತ್ತದೆ. ಗುರೂಜಿಯವರ ತಾಯಿಯು 50 ಅಮ್ಹೆರ್ಸ್ಟ್ ಸ್ಟ್ರೀಟ್ ನಲ್ಲಿ ನಿಧನರಾಗಿದ್ದರು. ನಂತರ, ಮಾಸ್ಟರ್ ಮಹಾಶಯರು ಅನೇಕ ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು. ಗುರೂಜಿ ಮತ್ತು ಅವರ ಸಹೋದರ ಇಲ್ಲಿ ಮಾಸ್ಟರ್ ಮಹಾಶಯರೊಂದಿಗೆ ಧ್ಯಾನ ಮಾಡುವಾಗ ಅವರ ತಾಯಿಯ ದರ್ಶನ ಪಡೆದರು. ಅಪ್ಪರ್ ಸರ್ಕ್ಯುಲರ್ ರಸ್ತೆ (ಪಿ.ಸಿ. ರೋಡ್) ಯಲ್ಲಿರುವ, ಭಾದುರಿ ಮಹಾಶಯರ ಮನೆ (ದಿ ಲೆವಿಟೇಟಿಂಗ್ ಸೇಂಟ್), ನಾಗೇಂದ್ರ ಮಠವಾಗಿ ಪರಿವರ್ತನೆಯಾದಾಗಿನಿಂದ ಭಕ್ತರಿಗೆ ತೆರೆದಿರುತ್ತದೆ.
ದಕ್ಷಿಣೇಶ್ವರದಿಂದ ಸಿರಾಂಪುರ ಸುಮಾರು 20 ಕಿ.ಮೀ. ದೂರದಲ್ಲಿದೆ. ಗುರೂಜಿಯವರ ಕಾಲೇಜು ವರ್ಷಗಳಿಗೆ ಸಂಬಂಧಿಸಿದ ಹೆಚ್ಚಿನ ಸ್ಥಳಗಳು ರಾಯ್ ಘಾಟ್ ಲೇನ್ (ಬುರೋ ಬೀಬಿ ಲೇನ್) ನಲ್ಲಿರುವ ಶ್ರೀ ಯುಕ್ತೇಶ್ವರ್ ಜೀ ಯವರ ಆಶ್ರಮದ ಸಮೀಪದಲ್ಲಿವೆ. ಹಳೆಯ ಆಶ್ರಮದ ಸ್ಥಳದಲ್ಲಿ, ಸ್ಮೃತಿ ಮಂದಿರವಿದೆ. ಅಲ್ಲೇ ಹತ್ತಿರದಲ್ಲೇ ಗುರೂಜಿಯವರು ಸ್ವಲ್ಪ ಕಾಲ ವಾಸಿಸಿದ್ದ, ಅವರ ಚಿಕ್ಕಪ್ಪ ಶಾರದ ಪ್ರಸಾದ್ ಘೋಷ್ ಅವರ ಮನೆಯಿದೆ. ಗುರೂಜಿಯವರ ಸೋದರ ಸಂಬಂಧಿ, ಪ್ರಭಾಸ್ ಚಂದ್ರ ಘೋಷ್ ಅವರು, ಗುರೂಜಿಯವರ ಕೋಣೆಯನ್ನು ದೇಗುಲವನ್ನಾಗಿ ಪರಿವರ್ತಿಸಿ ಆನಂದಲೋಕ ಎಂದು ಹೆಸರಿಸಿದ್ದಾರೆ.
ಗಂಗೆಯ ಕಡೆಗೆ ಕೆಲವು ನಿಮಿಷಗಳ ನಡಿಗೆಯ ದೂರದಲ್ಲಿ ರಾಯ್ ಘಾಟ್ ಇದೆ, ಇದು ಬಾಬಾಜಿ ಅವರು ‘ದಿ ಹೋಲಿ ಸೈನ್ಸ್‘ ಮುಗಿಸಿದ ನಂತರ ಶ್ರೀ ಯುಕ್ತೇಶ್ವರ್ ಜೀ ಅವರಿಗೆ ದರ್ಶನ ನೀಡಿದ ಸ್ಥಳ (ಆಲದ ಮರವನ್ನು ಒಳಗೊಂಡಂತೆ).
ವಿದ್ಯಾರ್ಥಿಗಳಿಗಾಗಿ ಇರುವ ಪಂಥಿ ವಸತಿಗೃಹ, ಗುರೂಜಿ ಕೆಲವು ವರ್ಷಗಳ ಕಾಲ ಇಲ್ಲಿ ವಾಸವಾಗಿದ್ದರು, ಇದು ಗಂಗಾನದಿಯ ತಟದಲ್ಲಿದೆ ಮತ್ತು ರಾಯ್ ಘಾಟ್‌ನಿಂದ ಸ್ವಲ್ಪ ದೂರದಲ್ಲಿದೆ. ಹಳೆಯ ಕಟ್ಟಡದ ಕೆಲವು ಭಾಗಗಳು ಇನ್ನೂ ಉಳಿದಿವೆ.
ಸಿರಾಂಪುರ ಕಾಲೇಜ್, ಸ್ವಲ್ಪ ದೂರದಲ್ಲಿ ಗಂಗಾನದಿಯ ದಡದಲ್ಲಿದೆ. ಇಲ್ಲಿಯೇ ಗುರೂಜಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಗಾಗಿಅಧ್ಯಯನ ಮಾಡಿದ್ದು. ಇಲ್ಲಿಗೆ ಬಂದವರು ಕಾಲೇಜು ಕಟ್ಟಡದೊಳಗೆ ಹೋಗಬಹುದು ಮತ್ತು ಅವರು ಓದಿದ ತರಗತಿಯ ಕೋಣೆಗಳನ್ನು ಸಹ ಪ್ರವೇಶಿಸಬಹುದು.
1855 ರಲ್ಲಿ ನಿರ್ಮಿಸಲಾದ ದಕ್ಷಿಣೇಶ್ವರದ ಪ್ರಸಿದ್ಧ ಕಾಳಿ ದೇವಸ್ಥಾನವು ನಮ್ಮ ಆಶ್ರಮದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಒಂಬತ್ತು-ಗೋಪುರಗಳಿರುವ ದೇವಾಲಯದ ಗರ್ಭಗುಡಿಯಲ್ಲಿ ಮಾ ಕಾಳಿಯ ಮೂರ್ತಿಯು ಭವತಾರಾಣಿ (ತನ್ನ ಭಕ್ತರನ್ನು ಅಸ್ತಿತ್ವದ ಸಾಗರದಾಚೆಗೆ ಕರೆದೊಯ್ಯುವವಳು) ರೂಪದಲ್ಲಿ ಮಲಗಿರುವ ಶಿವನ ಎದೆಯ ಮೇಲೆ ನಿಂತಿದೆ; ಎರಡೂ ವಿಗ್ರಹಗಳನ್ನು ಮೆರುಗುಗೊಳಿಸಿದ ಬೆಳ್ಳಿಯ ಸಹಸ್ರ ದಳಗಳ ಕಮಲದ ಮೇಲೆ ಇರಿಸಲಾಗಿದೆ.
ಈ ದೇವಾಲಯದೊಂದಿಗೆ ಗುರೂಜಿಯವರ ನಿಕಟ ಸಂಬಂಧವನ್ನು ಅವರ ಆತ್ಮಚರಿತ್ರೆಯಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಉದಾಹರಣೆಗೆ, ಒಮ್ಮೆ ಅವರು ತಮ್ಮ ಹಿರಿಯ ಸಹೋದರಿ ರೋಮಾ ಮತ್ತು ಅವರ ಪತಿ ಸತೀಶ್ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದಾಗ, ಅವರಿಗೆ ದೇವಿಯ ದರ್ಶನವಾಯಿತು. ವಾಸ್ತವವಾಗಿ, ಗುರೂಜಿ ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಮೊದಲು ದೇವಾಲಯದ ಮುಂಭಾಗದ ಪೋರ್ಟಿಕೋದಲ್ಲಿ, ನಂತರ ಶ್ರೀರಾಮಕೃಷ್ಣರ ಕೋಣೆಯಲ್ಲಿ, ಮತ್ತು ನಂತರ ಶ್ರೀರಾಮಕೃಷ್ಣರು ಜ್ಞಾನೋದಯವನ್ನು ಪಡೆದ ಪಂಚವಟಿಯ ಆಲದ ಮರದ ಕೆಳಗೆ ಹಲವಾರು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದರು. ಗುರೂಜಿ ಕೂಡ ಪಂಚವಟಿಯಲ್ಲಿ ಧ್ಯಾನ ಮಾಡುವಾಗ ಸಮಾಧಿಯನ್ನು ಅನುಭವಿಸಿದ್ದರು.
20 ಎಕರೆ ವಿಸ್ತೀರ್ಣದ ದೇವಾಲಯದ ಸಂಕೀರ್ಣವು ನದಿಯ ಮುಂಭಾಗದಲ್ಲಿ ಶಿವನ ವಿವಿಧ ಅಂಶಗಳಿಗೆ ಸಮರ್ಪಿತವಾದ 12 ದೇವಾಲಯ, ರಾಧಾ-ಕೃಷ್ಣರ ದೇವಾಲಯ ಮತ್ತು ಗಂಗೆಯ ತಟದ ಮೇಲಿನ ಒಂದು ಸ್ನಾನದ ಘಟ್ಟವನ್ನು ಹೊಂದಿದೆ. ಶ್ರೀರಾಮಕೃಷ್ಣರು ತಮ್ಮ ಜೀವನದ ಕೊನೆಯ 14 ವರ್ಷಗಳ ಕಾಲ ತಂಗಿದ್ದ ಕೊಠಡಿಯಲ್ಲಿ ಅವರು ಬಳಸಿದ ಹಲವಾರು ಲೇಖನಗಳ ಪ್ರದರ್ಶನವಿದೆ. ಪವಿತ್ರ ಮಾತೆ, ಶ್ರೀ ಶಾರದಾ ದೇವಿ ವಾಸಿಸುತ್ತಿದ್ದ ಮತ್ತೊಂದು ಕೋಣೆ ಇದೆ. ಬಕುಲ್ ತಲ ಘಾಟ್ ಎಂಬಲ್ಲಿ ಭೈರವಿ ಬ್ರಾಹ್ಮಣಿ ಯೋಗೇಶ್ವರಿ ಶ್ರೀ ರಾಮಕೃಷ್ಣರನ್ನು ‘ತಂತ್ರ ಸಾಧನ’ದಲ್ಲಿ ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ಬಕುಲ್ ತಲದ ಉತ್ತರಕ್ಕೆ ಪಂಚವಟಿ ಎಂಬ ವಿಶಾಲವಾದ ಬಯಲು ಪ್ರದೇಶವಿದ್ದು, ಶ್ರೀರಾಮಕೃಷ್ಣರ ಮಾರ್ಗದರ್ಶನದಲ್ಲಿ 5 ಆಲದ, ಅಶ್ವತ್ಥ, ಬೇವು, ನೆಲ್ಲಿಕಾಯಿ ಮತ್ತು ಬಿಲ್ವ ಅಥವಾ ಬೇಲ್ ಮರಗಳನ್ನು ನೆಡಲಾಗಿತ್ತು. ಇಲ್ಲಿಯೇ ಶ್ರೀ ರಾಮಕೃಷ್ಣರು ಶ್ರೀ ತೋತಾಪುರಿಯವರ ಮಾರ್ಗದರ್ಶನವಲ್ಲಿ ಒಟ್ಟು 12 ವರ್ಷಗಳ ಕಾಲ ತಮ್ಮ ಸಾಧನೆಯನ್ನು ಮಾಡಿದರು.
ಆಶ್ರಮದಲ್ಲಿರುವ ಸೇವಕರು ಈ ಮೇಲೆ ಹೇಳಲಾದ ಮತ್ತು ಇತರ ಸ್ಥಳಗಳಾದ ಬೇಲೂರು ಮಠ, ಸ್ವಾಮಿ ವಿವೇಕಾನಂದರ ಮನೆ ಇತ್ಯಾದಿಗಳಿಗೆ ಭೇಟಿ ನೀಡಲು ಭಕ್ತರಿಗೆ ಸಂತೋಷದಿಂದ ಸಹಾಯ ಮಾಡುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ.