ಶ್ರೀ ಶ್ರೀ ದಯಾ ಮಾತಾ ಅವರಿಂದ
ಪರಮಹಂಸ ಯೋಗಾನಂದರ ಉಪನ್ಯಾಸಗಳು ಹಾಗೂ ಲೇಖನಗಳ ಸಂಗ್ರಹದ ಮೂರು ಸಂಪುಟಗಳಿಗೆ ದಯಾ ಮಾತಾರ ಮುನ್ನುಡಿಯಿಂದ
ಶ್ರೀ ಶ್ರೀ ಪರಮಹಂಸ ಯೋಗಾನಂದರನ್ನು ನಾನು ಮೊಟ್ಟ ಮೊದಲು ನೋಡಿದಾಗ, ಅವರು ಸಾಲ್ಟ್ ಲೇಕ್ ಸಿಟಿಯಲ್ಲಿ ಆನಂದಪರವಶಗೊಂಡಿದ್ದ ಒಂದು ದೊಡ್ಡ ಪ್ರೇಕ್ಷಕವೃಂದದೆದುರು ಮಾತನಾಡುತ್ತಿದ್ದರು. ಅದು 1931ನೇ ಇಸವಿ. ಕಿಕ್ಕಿರಿದ ಸಭಾಂಗಣದ ಹಿಂದೆ ನಿಂತಿದ್ದ ನಾನು, ಉಪನ್ಯಾಸಕರು ಹಾಗೂ ಅವರ ಮಾತುಗಳನ್ನು ಹೊರತುಪಡಿಸಿ, ಸುತ್ತಲಿನ ಪರಿವೆಯೇ ಇಲ್ಲದಂತೆ, ಸ್ತಂಭೀಭೂತಳಾಗಿ ನಿಂತಿದ್ದೆ. ನನ್ನ ಆತ್ಮದೊಳಗೆ ಹರಿದು ನನ್ನ ಹೃದಯ ಮತ್ತು ಮನಸ್ಸಿನಲ್ಲಿ ತುಂಬಿ ಹರಿಯುತ್ತಿರುವ ಜ್ಞಾನ ಹಾಗೂ ದಿವ್ಯಪ್ರೇಮದಲ್ಲಿ ನನ್ನ ಇಡೀ ಅಸ್ತಿತ್ವ ತಲ್ಲೀನವಾಗಿತ್ತು. ನನಗೆ ಇಷ್ಟೇ ಯೋಚಿಸಲಾಗಿದ್ದು, “ಈ ವ್ಯಕ್ತಿ ಭಗವಂತನನ್ನು ಪ್ರೇಮಿಸುತ್ತಾರೆ, ಸದಾ ನಾನು ಅವನನ್ನು ಪ್ರೇಮಿಸಲು ಹಂಬಲಿಸುತ್ತಿದ್ದ ಹಾಗೇ. ಇವರು ಭಗವಂತನನ್ನು ಅರಿತುಕೊಂಡಿದ್ದಾರೆ. ಇವರನ್ನು ನಾನು ಅನುಸರಿಸುತ್ತೇನೆ.” ಹಾಗೂ ಆ ಕ್ಷಣದಿಂದ, ನಾನು ಹಾಗೇ ಮಾಡಿದೆ.
ಪರಮಹಂಸರ ಜೊತೆಗಿನ ಆ ಆರಂಭಿಕ ದಿನಗಳಲ್ಲಿ ನನ್ನ ಸ್ವಂತ ಜೀವನದ ಮೇಲೆ ಅವರ ವಚನಗಳ ಪರಿವರ್ತಕ ಶಕ್ತಿಯ ಅನುಭವವಾಗುತ್ತಿದ್ದ ಹಾಗೇ, ಅವರ ನುಡಿಗಳನ್ನು ಇಡೀ ಜಗತ್ತಿಗಾಗಿ, ಸದಾಕಾಲಕ್ಕೆ ಸುರಕ್ಷಿತವಾಗಿಡುವ ತುರ್ತು ಅಗತ್ಯವಿದೆ ಎಂಬ ಭಾವನೆ ನನ್ನಲ್ಲಿ ಉದಿಸಿತು. ಪರಮಹಂಸ ಯೋಗಾನಂದರ ಜೊತೆಗೆ ನಾನು ಇದ್ದ ಅನೇಕ ವರ್ಷಗಳಲ್ಲಿ, ಅವರ ಉಪನ್ಯಾಸಗಳನ್ನು ಹಾಗೂ ತರಗತಿಗಳನ್ನು ಹಾಗೂ ಅನೇಕ ಅನೌಪಚಾರಿಕ ಮಾತುಕತೆಗಳನ್ನೂ ಹಾಗೂ ವೈಯಕ್ತಿಕ ಸಮಾಲೋಚನೆಯ ನುಡಿಗಳನ್ನು — ನಿಜವಾಗಿಯೂ ಅದ್ಭುತ ಜ್ಞಾನ ಹಾಗೂ ಭಗವತ್ಪ್ರೇಮದ ಅಗಾಧಭಂಡಾರ — ದಾಖಲಿಸುವುದು ನನ್ನ ಪವಿತ್ರ ಹಾಗೂ ಆನಂದಕರ ಸುಯೋಗವಾಗಿತ್ತು.
ಗುರುದೇವ ಮಾತನಾಡುತ್ತಿರುವಾಗ, ಅವರ ಸ್ಫೂರ್ತಿಯ ರಭಸ ಅನೇಕ ಬಾರಿ ಅವರ ಮಾತಿನ ವೇಗದಲ್ಲಿ ಪ್ರತಿಫಲಿಸುತ್ತಿತ್ತು; ಒಂದೊಂದು ಬಾರಿ ತಡೆರಹಿತವಾಗಿ ಎಡೆಬಿಡದೆ ನಿಮಿಷಗಳ ಕಾಲ ಮಾತನಾಡುತ್ತ, ಒಂದು ಗಂಟೆಯವರೆಗೆ ಮುಂದುವರೆಸುತ್ತಿದ್ದರು. ಅವರ ಶ್ರೋತೃಗಳು ಪರವಶಗೊಂಡು ಕುಳಿತಿದ್ದರೆ, ನನ್ನ ಪೆನ್ನು ಹಾರುತ್ತಿತ್ತು! ನಾನು ಅವರ ಮಾತುಗಳನ್ನು ಶೀಘ್ರಲಿಪಿಯಲ್ಲಿ ಬರೆದುಕೊಳ್ಳುತ್ತಿದ್ದಂತೆ, ವಿಶೇಷ ಅನುಗ್ರಹ ಇಳಿದು ಬಂದಂತೆ, ಗುರುವಿನ ದನಿಯು ಪುಟದ ಮೇಲೆ ಶೀಘ್ರಲಿಪಿ ಅಕ್ಷರಗಳಾಗಿ ಆ ಕೂಡಲೆ ಅನುವಾದವಾಗುತ್ತಿತ್ತು. ಅವುಗಳ ಪ್ರತಿಲಿಪಿ (transcription) ಮಾಡುವುದು ಒಂದು ಪವಿತ್ರ ಕಾರ್ಯವಾಗಿದೆ, ಅದು ಇಂದಿಗೂ ಮುಂದುವರೆದಿದೆ. ಇಷ್ಟು ದೀರ್ಘ ಸಮಯದ ನಂತರವೂ, ನನ್ನ ಕೆಲವೊಂದು ಟಿಪ್ಪಣಿಗಳು ನಲವತ್ತು ವರ್ಷಗಳಷ್ಟು ಹಳೆಯವು, ಅವುಗಳನ್ನು ನಾನು ಪ್ರತಿ ಲಿಪಿ ಮಾಡಲಾರಂಭಿಸಿದಾಗ, ಅವು ಪವಾಡ ಸದೃಶ ರೀತಿಯಲ್ಲಿ ನನ್ನ ಮನದಲ್ಲಿ ಹೊಚ್ಚಹೊಸದೆಂಬಂತೆ ಉಳಿದಿವೆ, ಅವುಗಳನ್ನು ನಿನ್ನೆಯಷ್ಟೇ ದಾಖಲಿಸಲಾಗಿತ್ತೇನೋ ಎಂಬಂತೆ. ಪ್ರತಿಯೊಂದು ನುಡಿಗಟ್ಟಿನಲ್ಲೂ ಗುರುದೇವರ ದನಿಯ ಏರಿಳಿತಗಳು ಕೂಡ ನನ್ನ ಅಂತರಂಗದಲ್ಲಿ ಕೇಳಿಬರುತ್ತವೆ.
ಗುರುಗಳು ತಮ್ಮ ಉಪನ್ಯಾಸಗಳಿಗಾಗಿ ಸ್ವಲ್ಪವೂ ತಯಾರಿ ಮಾಡಿಕೊಳ್ಳುತ್ತಿರಲಿಲ್ಲ; ಅವರು ಏನಾದರೂ ತಯಾರಿ ಮಾಡಿಕೊಂಡಿದ್ದರೆ, ಅದು ಅವಸರದಲ್ಲಿ ಗೀಚಿಕೊಂಡ, ನಿಜಸಂಗತಿಗೆ ಸಂಬಂಧಿಸಿದ ಒಂದೆರಡು ಟಿಪ್ಪಣಿಗಳಾಗಿರಬಹುದು. ಬಹಳಷ್ಟು ಸಲ, ಕಾರಿನಲ್ಲಿ ಮಂದಿರಕ್ಕೆ ಹೋಗುವಾಗ, ದಾರಿಯಲ್ಲಿ ನಮ್ಮಲ್ಲಿ ಒಬ್ಬರನ್ನು ಪ್ರಾಸಂಗಿಕವಾಗಿ ಕೇಳುತ್ತಿದ್ದರು: “ನನ್ನ ಇಂದಿನ ವಿಷಯವೇನು?”ನಂತರ ಅವರು ತಮ್ಮ ಮನಸ್ಸನ್ನು ಅದರ ಮೇಲಿರಿಸುತ್ತಿದ್ದರು, ಹಾಗೂ ನಂತರ ಅಂತರಂಗದ ದಿವ್ಯಸ್ಫೂರ್ತಿಯ ಭಂಡಾರದಿಂದ ಆಶುಭಾಷಣ ಮಾಡುತ್ತಿದ್ದರು.
ಮಂದಿರಗಳಲ್ಲಿ ಗುರುದೇವರ ಪ್ರವಚನಗಳ ವಿಷಯಗಳನ್ನು ಮುಂಚಿತವಾಗಿಯೇ ನಿರ್ಧರಿಸಿ ಪ್ರಕಟಿಸಲಾಗುತ್ತಿತ್ತು. ಆದರೆ ಅವರು ಮಾತನಾಡಲು ಪ್ರಾರಂಭಿಸಿದಾಗ, ಕೆಲವೊಮ್ಮೆ ಅವರ ಮನಸ್ಸು ಸಂಪೂರ್ಣ ವಿಭಿನ್ನ ಧಾಟಿಯಲ್ಲಿ ಕೆಲಸ ಮಾಡುತ್ತಿತ್ತು. “ಇಂದಿನ ವಿಷಯ,” ಏನೇ ಇರಲಿ, ತಮ್ಮ ಸ್ವಂತದ ಆಧ್ಯಾತ್ಮಿಕ ಅನುಭವ ಹಾಗೂ ಅಂತರ್ಬೋಧಿತ ಗ್ರಹಿಕೆಯ ಬಾಹುಳ್ಯದಿಂದ ಅಮೂಲ್ಯಜ್ಞಾನವನ್ನು ಏಕಪ್ರಕಾರವಾಗಿ ಪ್ರವಾಹದೋಪಾದಿಯಲ್ಲಿ ವರ್ಷಿಸುತ್ತ, ಆ ಕ್ಷಣದಲ್ಲಿ ಅವರ ಪ್ರಜ್ಞೆಯನ್ನು ಹಿಡಿದಿಟ್ಟುಕೊಂಡಿರುವ ಸತ್ಯಗಳಿಗೆ ಗುರುಗಳು ದನಿಯಾಗುತ್ತಿದ್ದರು. ಹೆಚ್ಚು ಕಡಿಮೆ, ಯಾವಾಗಲೂ, ಒಂದು ಸತ್ಸಂಗ ಮುಗಿಯುತ್ತಿದ್ದ ಹಾಗೇ ಅನೇಕ ಜನರು, ತಮಗೆ ತೊಂದರೆ ಕೊಡುತ್ತಿದ್ದ ಸಮಸ್ಯೆಯೊಂದರ ಮೇಲೆ ಗುರುಗಳು ಬೆಳಕು ಹರಿಸಿದ್ದಕ್ಕಾಗಿ, ಅಥವಾ ಬಹುಶಃ ತಮಗೆ ವಿಶೇಷವಾಗಿ ಆಸಕ್ತಿಯಿದ್ದ ಯಾವುದೋ ಒಂದು ತಾತ್ವಿಕ ಪರಿಕಲ್ಪನೆಯನ್ನು ವಿವರಿಸಿದ್ದಕ್ಕಾಗಿ ಮುಂದೆ ಬಂದು ಅವರಿಗೆ ಧನ್ಯವಾದ ಹೇಳುತ್ತಿದ್ದರು.
ಕೆಲವೊಮ್ಮೆ ಅವರು ಉಪನ್ಯಾಸ ಮಾಡುತ್ತಿರುವಾಗ, ಅವರ ಪ್ರಜ್ಞೆ ಎಷ್ಟು ಔನ್ನತ್ಯಕ್ಕೇರುತ್ತಿತ್ತೆಂದರೆ, ಗುರುಗಳು ಕ್ಷಣಕಾಲ ಶ್ರೋತೃಗಳನ್ನು ಮರೆತು ಭಗವಂತನೊಡನೆ ನೇರವಾಗಿ ಮಾತನಾಡುತ್ತಿದ್ದರು; ಅವರ ಇಡೀ ಅಸ್ತಿತ್ವ ಭಗವದಾನಂದ ಮತ್ತು ಪರವಶಗೊಳಿಸುವ ಪ್ರೇಮದಿಂದ ತುಂಬಿ ಹರಿಯುತ್ತಿತ್ತು. ಪ್ರಜ್ಞೆಯ ಈ ಉನ್ನತ ಅವಸ್ಥೆಗಳಲ್ಲಿ ಅವರ ಮನಸ್ಸು ದಿವ್ಯಪ್ರಜ್ಞೆಯೊಂದಿಗೆ ಸಂಪೂರ್ಣವಾಗಿ ಒಂದಾಗಿರುತ್ತಿತ್ತು, ಅವರು ಸತ್ಯವನ್ನು ಆಂತರಿಕವಾಗಿ ಗ್ರಹಿಸುತ್ತಿದ್ದರು, ಹಾಗೂ ತಾವು ಕಂಡಿದ್ದನ್ನು ವಿವರಿಸುತ್ತಿದ್ದರು. ಕೆಲವೊಂದು ಸಂದರ್ಭಗಳಲ್ಲಿ ಭಗವಂತ, ಜಗನ್ಮಾತೆಯಾಗಿ ಅವರಿಗೆ ಕಾಣಿಸಿಕೊಳ್ಳುತ್ತಿದ್ದ, ಅಥವಾ ಇನ್ನಾವುದಾದರೂ ಒಂದು ರೂಪದಲ್ಲಿ; ಅಥವಾ ನಮ್ಮ ಮಹಾನ್ ಗುರುಗಳಲ್ಲಿ ಒಬ್ಬರು ಅಥವಾ ಇತರ ಸಂತರು ಅವರ ಮುಂದೆ ದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಸಮಯಗಳಲ್ಲಿ, ಶ್ರೋತೃಗಳೂ ಕೂಡ, ಅಲ್ಲಿ ಉಪಸ್ಥಿತರಿದ್ದ ಎಲ್ಲರ ಮೇಲೆ ಅನುಗ್ರಹಿಸಲಾದ ವಿಶೇಷ ಆಶೀರ್ವಾದವನ್ನು ಆಳವಾಗಿ ಅನುಭವಿಸುತ್ತಿದ್ದರು. ಗುರುದೇವ ಆಳವಾಗಿ ಗೌರವಿಸುತ್ತಿದ್ದ ಅಸಿಸ್ಸಿಯ ಸಂತ ಫ್ರಾನ್ಸಿಸ್‌ರ ಅಂತಹ ಒಂದು ದಿವ್ಯಸಂದರ್ಶನದ ಸಂದರ್ಭದಲ್ಲಿ ಗುರುಗಳು “ದೇವಾ! ದೇವಾ! ದೇವಾ!” ಎಂಬ ಒಂದು ಸುಂದರ ಕವನವನ್ನು ರಚಿಸಲು ಪ್ರೇರಿತರಾದರು.
ಭಗವದ್ಗೀತೆಯು ಒಬ್ಬ ಜ್ಞಾನೋದಯ ಹೊಂದಿದ ಗುರುವನ್ನು ಈ ರೀತಿ ವಿವರಿಸುತ್ತದೆ, “ಜ್ಞಾನದಿಂದ ಅಜ್ಞಾನವನ್ನು ಹೊಡೆದೋಡಿಸಿದವರಲ್ಲಿ ಪರಮಾತ್ಮ ಸೂರ್ಯನಂತೆ ಪ್ರಕಾಶಿಸುತ್ತಾನೆ” (V:16). ಪ್ರತಿಯೊಬ್ಬರನ್ನೂ ತಕ್ಷಣವೇ ನಿರಾಳವಾಗಿಸುವಂತಹ, ಪರಮಹಂಸ ಯೋಗಾನಂದರ ವಾತ್ಸಲ್ಯ ಮತ್ತು ಸಹಜತೆ ಹಾಗೂ ಶಾಂತ ನಮ್ರತೆ ಇಲ್ಲದೇ ಹೋಗಿದ್ದಲ್ಲಿ, ಅವರ ಆಧ್ಯಾತ್ಮಿಕ ತೇಜಸ್ಸು ಒಬ್ಬ ವ್ಯಕ್ತಿಯನ್ನು ಬೆಚ್ಚಿಬೀಳಿಸಬಹುದಿತ್ತು. ಶ್ರೋತೃವೃಂದದಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಗೂ ಗುರುದೇವರ ಮಾತು ತನಗೇ ವೈಯಕ್ತಿಕವಾಗಿ ಸಂಬೋಧಿಸುತ್ತಿದೆಯೇನೋ ಎನಿಸುತ್ತಿತ್ತು. ಗುರುಗಳ ಪ್ರೀತಿಹುಟ್ಟಿಸುವಂತಹ ಗುಣಗಳಲ್ಲಿ ಅವರ ವಿವೇಚನಾಯುಕ್ತ ಹಾಸ್ಯಪ್ರಜ್ಞೆಯು ಕಡಿಮೆಯದೇನೂ ಆಗಿರಲಿಲ್ಲ. ಸರಿಯಾದ ಕ್ಷಣದಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಅಥವಾ ವಿಶೇಷವಾಗಿ ಗಹನವಾದ ಒಂದು ವಿಷಯದ ಬಗ್ಗೆ ದೀರ್ಘ ಮತ್ತು ತೀವ್ರವಾದ ಏಕಾಗ್ರತೆಯ ನಂತರ ತನ್ನ ಶ್ರೋತೃಗಳಿಗೆ ವಿಶ್ರಾಂತಿ ನೀಡಲು ಅವರ ಯಾವುದೋ ಒಂದು ಆಯ್ದ ನುಡಿಗಟ್ಟು, ಅಂಗಸನ್ನೆ, ಮುಖಭಾವವು ಮೆಚ್ಚುಗೆಯ ಪ್ರತಿಕ್ರಿಯೆಯಾಗಿ ಹೃತ್ಪೂರ್ವಕ ನಗೆ ತರಿಸುತ್ತಿತ್ತು.
ಈ ಸರಣಿಯಲ್ಲಿ ಮೊದಲನೆಯ ಸಂಪುಟ ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್ ನ, ತಮ್ಮ ಒಂದು ಉಪನ್ಯಾಸದಲ್ಲಿ ಪರಮಹಂಸಜಿ ಹೇಳುತ್ತಾರೆ: “ಪರಮಾತ್ಮನ ವೈಯಕ್ತಿಕ ಸಂಪರ್ಕದ ಮಾರ್ಗವನ್ನು ಒಬ್ಬನಿಗೆ ಕಲಿಸುವುದು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಉದ್ದೇಶಗಳಲ್ಲಿ ಒಂದು.” ನಮ್ಮ ಆತ್ಮಗಳಲ್ಲಿ, ಭಗವಂತನ ಉಪಸ್ಥಿತಿಯಲ್ಲಿ ಆವಿಷ್ಕಾರಕ್ಕಾಗಿ ಕಾಯುತ್ತಿರುವ ಮಹತ್ತರ ಪ್ರೇಮ ಮತ್ತು ಅರಿವನ್ನು ಕಂಡುಕೊಳ್ಳಲು ಸಮಯವನ್ನು ತೆಗೆದುಕೊಂಡು, ಅಲ್ಲಿಂದ ಅದರ ಹರಿವನ್ನು ನಮ್ಮ ಜಾಗತಿಕ ಕುಟುಂಬದ ಎಲ್ಲ ಸದಸ್ಯರೆಡೆಗೆ ಉಪಶಮನದಾಯಕ ಲೇಪನವಾಗಿ ನಿರ್ದೇಶಿಸುವವರಲ್ಲಿ ಇರುವುದು ಮನುಕುಲದ ನಿಜವಾದ ಭರವಸೆ.
ನನ್ನ ಪೂಜ್ಯ ಗುರುಗಳ ವ್ಯಕ್ತಿಸ್ವರೂಪದಿಂದ ಆ ಅನುಗ್ರಹಗಳು ಅದೆಷ್ಟು ಸ್ಪಷ್ಟವಾಗಿ ಹೊರಹೊಮ್ಮಿದವು. ಸಾರ್ವಜನಿಕವಾಗಿ, ಬೀದಿಯಲ್ಲಿರುವ ಅಪರಿಚಿತರೂ ಕೂಡ ತಡೆಯಲಾಗದ ಸೆಳೆತದಿಂದ ಗೌರವಪೂರ್ಣವಾಗಿ ವಿಚಾರಿಸಲು ತೊಡಗುತ್ತಾರೆ: “ಇವರು ಯಾರು? ಆ ಮನುಷ್ಯ ಯಾರು?” ಆಳವಾದ ಧ್ಯಾನದ ಅವಧಿಗಳಲ್ಲಿ ಅವರ ಉಪಸ್ಥಿತಿಯಲ್ಲಿ, ಅವರು ಸಂಪೂರ್ಣವಾಗಿ ದೈವೀ ಒಡನಾಟದಲ್ಲಿ ಆನಂದಪರವಶರಾಗಿದ್ದನ್ನು ನಾವು ನೋಡಿದ್ದೇವೆ. ಭಗವಂತನ ಪ್ರೇಮದ ಪ್ರಭಾಮಂಡಲ ಕೋಣೆಯನ್ನು ಸಂಪೂರ್ಣವಾಗಿ ವ್ಯಾಪಿಸಿರುತ್ತಿತ್ತು. ಪರಮಹಂಸಜಿಯವರು ಜೀವನ ಪಯಣದ ಅತ್ಯುನ್ನತ ಗುರಿಯನ್ನು ಸಾಧಿಸಿದ್ದರು; ಅವರ ಉದಾಹರಣೆ ಹಾಗೂ ನುಡಿಗಳು ಈಗ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮಾರ್ಗವನ್ನು ಬೆಳಗುತ್ತಲಿವೆ.
ಪರಮಹಂಸ ಯೋಗಾನಂದರ ಎದ್ದು ಕಾಣುವ ಸ್ನೇಹಮಯ ವ್ಯಕ್ತಿತ್ವದ ಅನನ್ಯತೆ ಮತ್ತು ಸಾರ್ವತ್ರಿಕತೆಯನ್ನು ಒಂದು ಪುಸ್ತಕದ ಪುಟಗಳಲ್ಲಿ ತಿಳಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ಸಂಕ್ಷಿಪ್ತ ಹಿನ್ನೆಲೆಯನ್ನು ಕೊಡುವಲ್ಲಿ, ಈ ಸಂಪುಟದಲ್ಲಿ ಪ್ರಸ್ತುತಪಡಿಸಲಾದ ಉಪನ್ಯಾಸಗಳನ್ನು ಕುರಿತ ಓದುಗರ ಸಂತೋಷ ಮತ್ತು ಮೆಚ್ಚುಗೆಯನ್ನು ಹೆಚ್ಚಿಸುವಂತಹ ಒಂದು ವೈಯಕ್ತಿಕ ನೋಟವನ್ನು ನೀಡುತ್ತದೆ ಎನ್ನುವುದು ನನ್ನ ನಮ್ರ ಭರವಸೆ.
ದಿವ್ಯ ಸಂಸರ್ಗದಲ್ಲಿರುವ ನನ್ನ ಗುರುದೇವರನ್ನು ನೋಡಿದುದು; ಆಳವಾದ ಸತ್ಯಗಳನ್ನು ಹಾಗೂ ಅವರ ಆತ್ಮದ ಭಕ್ತಿಪೂರ್ವಕ ಭಾವಪ್ರವಾಹಗಳನ್ನು ಕೇಳಿದುದು; ಯುಗಗಳಿಗಾಗಿ ಅವುಗಳನ್ನು ದಾಖಲಿಸಿದುದು; ಹಾಗೂ ಅದನ್ನೀಗ ಎಲ್ಲರೊಂದಿಗೆ ಹಂಚಿಕೊಳ್ಳುವುದು—ನನ್ನದು ಎಂತಹ ಆನಂದ! ಗುರುಗಳ ಮಹೋನ್ನತ ಮಾತುಗಳು, ಭಗವಂತನಲ್ಲಿ ಅಚಲ ಶ್ರದ್ಧೆಗೆ ಹಾಗೂ ನಮ್ಮ ಪ್ರೀತಿಯ ತಂದೆ, ತಾಯಿ ಮತ್ತು ಚಿರಂತನ ಸ್ನೇಹಿತನಾದ ಆ ಒಬ್ಬ ಭಗವಂತನಲ್ಲಿ ಇನ್ನೂ ಆಳವಾದ ಪ್ರೇಮಕ್ಕೆ ಬಾಗಿಲುಗಳನ್ನು ವಿಶಾಲವಾಗಿ ತೆರೆಯಲಿ.
















