ಪ್ರಪಂಚದಾದ್ಯಂತ ಕ್ರಿಯಾ ಯೋಗದ ಬೀಜ ಪ್ರಸರಣೆ

ಕ್ರಿಯಾ ಸಾಧಕರಲ್ಲಿರುವ ಅತೀಂದ್ರಿಯ ಪ್ರಜ್ಞೆಯ ಮಿನುಗುನೋಟ

1920 ರಲ್ಲಿ, ಆಧುನಿಕ ಯುಗಕ್ಕೆ ಕ್ರಿಯಾ ಯೋಗವನ್ನು ಪುನರುತ್ಥಾನಗೊಳಿಸಿದ ಮಹಾನ್ ಗುರು ಮಹಾವತಾರ್ ಬಾಬಾಜಿ ಅವರು ಕಲ್ಕತ್ತಾದ 4 ಗಾರ್ಪರ್ ರಸ್ತೆಯಲ್ಲಿ ಪರಮಹಂಸ ಯೋಗಾನಂದರನ್ನು ಭೇಟಿಯಾದರು. ಬಾಬಾಜಿ ಯುವ ಸನ್ಯಾಸಿಗೆ ಹೇಳಿದರು: “ಪಶ್ಚಿಮದಲ್ಲಿ ಕ್ರಿಯಾಯೋಗದ ಸಂದೇಶವನ್ನು ಪ್ರಸಾರ ಮಾಡಲು ನಿನ್ನನ್ನೇ ನಾನು ಆಯ್ಕೆ ಮಾಡಿರುವುದು. ಬಹಳ ಹಿಂದೆಯೇ ಕುಂಭ ಮೇಳದಲ್ಲಿ ನಾನು ನಿನ್ನ ಗುರು ಯುಕ್ತೇಶ್ವರರನ್ನು ಭೇಟಿಯಾಗಿದ್ದೆ; ನಿನ್ನನ್ನು ಆತನ ಬಳಿಗೆ ಕಳಿಸುವೆನೆಂದು ಆಗ ಆತನಿಗೆ ಹೇಳಿದ್ದೆ” ಎಂದರು.

ಸ್ವಾಮಿ ಶ್ರೀ ಯುಕ್ತೇಶ್ವರರ ಮಾರ್ಗದರ್ಶನದಲ್ಲಿ ಕ್ರಿಯಾಯೋಗದ ಮೂಲಕ ವಿಶ್ವಾತ್ಮಕ ಪ್ರಜ್ಞೆಯ ಉತ್ಕೃಷ್ಟ ಸ್ಥಿತಿಗಳನ್ನು ಪ್ರವೇಶಿಸಲು ಸಾಧ್ಯವಾಗುವಂತೆ ಮಾಡಿದ ತರಬೇತಿಯನ್ನು ವಿವರಿಸುತ್ತಾ, ಪರಮಹಂಸಜಿಯವರು ಹೀಗೆ ಬರೆದಿದ್ದಾರೆ: “ಇಚ್ಛಿಸಿದಾಗ ಆ ದಿವ್ಯಾನುಭವವನ್ನು ಪಡೆಯುವ ಬಗೆಯನ್ನೂ, ಇತರರಿಗೆ ಅವರ ಅಂತಃಪ್ರಜ್ಞೆಯ ಹಾದಿಗಳೆಲ್ಲ ಅಣಿಗೊಂಡಾಗ ಆ ದಿವ್ಯಾನುಭವವನ್ನು ಉಂಟುಮಾಡಬಹುದಾದ ಬಗೆಯನ್ನೂ ಶ್ರೀ ಯುಕ್ತೇಶ್ವರರು ನನಗೆ ಕಲಿಸಿದರು.”

ಈ ದೈವೀ ಪ್ರಜ್ಞೆ ಮತ್ತು ಅನುಗ್ರಹದ ಪ್ರಸರಣವು — ಆರಂಭದಲ್ಲಿ ಶಿಷ್ಯನ ಗ್ರಹಿಕೆ ಮತ್ತು ಪ್ರಗತಿಯ ಆಧಾರದ ಮೇಲೆ ಹೆಚ್ಚಿನ ಅಥವಾ ಕಡಿಮೆ ಮಟ್ಟದಲ್ಲಿ ಅನುಭವಿಸಲ್ಪಡುತ್ತದೆ — ಇದು ಕ್ರಿಯಾ ಯೋಗದ ಪ್ರಸರಣದಲ್ಲಿ ಅತ್ಯಗತ್ಯ ಅಂಶವಾಗಿದೆ. ಬಾಬಾಜಿಯವರು ಸೂಚಿಸಿದಂತೆ, ಕ್ರಿಯಾವನ್ನು ಕೇವಲ ತಾತ್ವಿಕ ಬೋಧನೆಯಾಗಿ ನೀಡಲಾಗುವುದಿಲ್ಲ, ಬದಲಿಗೆ ಶಿಷ್ಯ ಮತ್ತು ದೈವಿಕವಾಗಿ ನೇಮಿಸಲ್ಪಟ್ಟ, ನಿಜವಾದ ಗುರುವಿನ ನಡುವಿನ ಪವಿತ್ರ ಸಂಬಂಧದ ಸಂಕೇತವಾಗಿ ಆಧ್ಯಾತ್ಮಿಕ ದೀಕ್ಷೆಯ ರೂಪದಲ್ಲಿ (ದೀಕ್ಷಾ) ನೀಡಲಾಗುತ್ತದೆ.

ಪರಮಹಂಸಜಿ ಅವರು ತಮ್ಮ ಆತ್ಮಚರಿತ್ರೆಯಾದ ಯೋಗಿಯ ಆತ್ಮಕಥೆ ಯ ಕೊನೆಯಲ್ಲಿ ಹೀಗೆ ಬರೆದಿದ್ದಾರೆ: “ಶಾಂತಿ ಸಮೃದ್ಧಿಗಳಿಂದ ಕೂಡಿದ ಜಗತ್ತನ್ನು ಸ್ಥಾಪಿಸಬೇಕಾದರೆ, ಹತ್ತಾರಲ್ಲ, ಸಹಸ್ರಾರು ಕ್ರಿಯಾಯೋಗಿಗಳ ಆವಶ್ಯಕತೆಯಿದೆ. ದಿವ್ಯ ತಂದೆಯ ಪುತ್ರರಾಗಿ ತಮ್ಮ ಸ್ಥಾನಮಾನವನ್ನು ಪುನಃಸ್ಥಾಪಿಸಲು ಯೋಗ್ಯ ಪ್ರಯತ್ನವನ್ನು ಮಾಡುವ ಜನರಿಗಾಗಿ ಕಾಯುತ್ತಿದೆ ಅಂತಹ ಜಗತ್ತು….ಎಲ್ಲಾ ಮಾನವ ದುಃಖಗಳನ್ನು ಜಯಿಸಲು ಸ್ವಯಂ-ಸಾಕ್ಷಾತ್ಕಾರದ ಒಂದು ನಿರ್ದಿಷ್ಟವಾದ, ವೈಜ್ಞಾನಿಕ ತಂತ್ರವಿದೆ ಎಂದು ಎಲ್ಲಾ ಮನುಷ್ಯರು ತಿಳಿದುಕೊಳ್ಳಲಿ!” ಆತ್ಮದ ಈ ಪವಿತ್ರ ವಿಜ್ಞಾನವನ್ನು ಗುರುಗಳು ವಿಶ್ವಾದ್ಯಂತ ಹರಡಿರುವುದರಿಂದ ವೈಎಸ್‌ಎಸ್/ಎಸ್‌ಆರ್‌ಎಫ್‌ನಲ್ಲಿರುವ ಸಾವಿರಾರು ಪರಮಹಂಸ ಯೋಗಾನಂದರ ಶಿಷ್ಯರಲ್ಲಿ ಕೆಲವರ ಜೀವನವು ಹೇಗೆ ಉನ್ನತೀಕರಣಗೊಂಡಿದೆ ಎಂಬುದನ್ನು ಈ ಕೆಳಗೆ ಸಂಕ್ಷಿಪ್ತ ಕಥನಗಳಾಗಿ ನೀಡಲಾಗಿದೆ.

ಡಾ. ಎಂ. ಡಬ್ಲ್ಯೂ. ಲೂಯಿಸ್

ಬೋಸ್ಟನ್‌ನ ದಂತವೈದ್ಯರಾದ ಡಾ. ಮಿನೊಟ್ ಡಬ್ಲ್ಯು.ಲೂಯಿಸ್ ರು, ಗುರುಗಳು 1920ರಲ್ಲಿ ಅಮೇರಿಕಾಕ್ಕೆ‌ ಆಗಮಿಸಿದ ಸ್ವಲ್ಪ ಸಮಯದ ನಂತರ ಪರಮಹಂಸಜಿಯವರನ್ನು ಭೇಟಿಯಾದರು ಮತ್ತು ಅವರ ಆಜೀವ ಶಿಷ್ಯರಾದರು. ಅವರು ಉಪಾಧ್ಯಕ್ಷರಾಗಿ ಮತ್ತು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಜನಪ್ರಿಯ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಅನೇಕ ವರ್ಷಗಳಲ್ಲಿ, ತಮ್ಮ ಶ್ರೋತೃಗಳೊಂದಿಗೆ ಪರಮಹಂಸಜಿ ಬಗ್ಗೆ ಉನ್ನತಿಗೇರಿಸುವಂತಹ ಕಥೆಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಪರಮಹಂಸಜಿಯವರೊಂದಿಗಿನ ಅವರ ಮೊದಲ ಭೇಟಿಯ ಕುರಿತಾದ ಅವರ ಕಥನವು ಅತ್ಯಂತ ಸ್ಫೂರ್ತಿದಾಯಕವಾದುದು. ಈ ಕೆಳಗಿನ ನಿರೂಪಣೆಯು ಡಾಕ್ಟರರು ಅನೇಕ ವರ್ಷಗಳಲ್ಲಿ ನೀಡಿದ ಹಲವಾರು ಉಪನ್ಯಾಸಗಳಿಂದ ಸಂಗ್ರಹಿಸಲಾದ ವಿವರಗಳನ್ನು ಒಳಗೊಂಡಿದೆ.

1920 ರ ಕೊನೆಯಲ್ಲಿ, ಪರಮಹಂಸ ಯೋಗಾನಂದರು ಅಮೇರಿಕಾಕ್ಕೆ ಆಗಮಿಸಿದ ಸ್ವಲ್ಪ ಸಮಯದ ನಂತರ, ಯುವ ಸ್ವಾಮಿಯನ್ನು ಬೋಸ್ಟನ್ ಪ್ರದೇಶದಲ್ಲಿನ ಯುನಿಟೇರಿಯನ್ ಚರ್ಚ್‌ನಲ್ಲಿ ಮಾತನಾಡಲು ಆಹ್ವಾನಿಸಲಾಯಿತು, ಅಲ್ಲಿ ಡಾ. ಲೂಯಿಸ್‌ನ ದೀರ್ಘಕಾಲದ ಸ್ನೇಹಿತೆ ಶ್ರೀಮತಿ ಆಲಿಸ್ ಹೇಸಿ ಕೂಟದ ಸದಸ್ಯೆಯಾಗಿದ್ದರು. ಶ್ರೀಮತಿ ಹೇಸಿ (ಅವರಿಗೆ ಪರಮಹಂಸರು ನಂತರ ಸೋದರಿ ಯೋಗಮಾತಾ ಎಂದು ಹೆಸರಿಸಿದರು), ಡಾ. ಲೂಯಿಸ್‌ರ ಆಧ್ಯಾತ್ಮಿಕತೆಯಲ್ಲಿನ ಆಸಕ್ತಿಯನ್ನು ತಿಳಿದಿದ್ದರು ಮತ್ತು “ನೀವು ಸ್ವಾಮಿ ಯೋಗಾನಂದರನ್ನು ಭೇಟಿಯಾಗಬೇಕು,” ಎಂದು ಅವರಿಗೆ ಮನಮುಟ್ಟುವಂತೆ ಸೂಚಿಸಿದರು.




“ಆಗ ಗುರುಗಳು ತಮ್ಮ ಹಣೆಯನ್ನು ನನ್ನ ಹಣೆಯ ಮೇಲೆ ಇಟ್ಟರು. ಅವರು ನನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ಹುಬ್ಬುಗಳ ನಡುವಿನ ಬಿಂದುವನ್ನು ನೋಡಲು ಹೇಳಿದರು, ನಾನು ಹಾಗೆಯೇ ಮಾಡಿದೆ ಮತ್ತು ಅಲ್ಲಿ ನಾನು ಆಧ್ಯಾತ್ಮಿಕ ಚಕ್ಷುವಿನ ಉಜ್ವಲವಾದ ಬೆಳಕನ್ನು ನೋಡಿದೆ.”

ಯೂನಿಟಿ ಹೌಸ್‌ನಲ್ಲಿ ಕ್ರಿಸ್‌ಮಸ್‌ನ ಮುನ್ನಾ ದಿನಕ್ಕಾಗಿ ಭೇಟಿಯನ್ನು ನಿಗದಿ ಪಡಿಸಲಾಯಿತು, ಅಲ್ಲಿ ಗುರುಗಳಿಗೆ ಒಂದು ಕೊಠಡಿ ಇತ್ತು. ಈ ಭೇಟಿಗಾಗಿ ಡಾಕ್ಟರು ತಮ್ಮ ಮನೆಯಿಂದ ಹೊರಟಾಗ, ಇದು ಸ್ವಲ್ಪ ಸಮಯದವರೆಗೆ ಮಾತ್ರ ಎಂದು ಭಾವಿಸಿದ್ದರು. ತಮ್ಮ ಪತ್ನಿ ಮಿಲ್ಡ್ರೆಡ್‌ಗೆ ಅವರು, ಕ್ರಿಸ್‌ಮಸ್‌ ಗಿಡವನ್ನು ಅಲಂಕರಿಸಲು ತಾನು ಶೀಘ್ರದಲ್ಲೇ ಹಿಂತಿರುಗುವುದಾಗಿ ಹೇಳಿದರು.

ಯೂನಿಟಿ ಹೌಸ್‌ಗೆ ಹೋಗುತ್ತಿರುವಾಗ ದಾರಿಯಲ್ಲಿ, ಧಾರ್ಮಿಕ ಶಿಕ್ಷಕರಂತೆ ನಟಿಸುವ ಬೂಟಾಟಿಗರಿಂದ ಮೋಸಹೋಗುವ ಅಥವಾ ತಪ್ಪು ದಾರಿಗೆ ಎಳೆಯಲ್ಪಡುವುದರ ವಿರುದ್ಧ ಪೋಷಕರ ಎಚ್ಚರಿಕೆಗಳನ್ನು ಡಾಕ್ಟರು ನೆನಪಿಸಿಕೊಂಡರು; ಅವರ ಮನೋಭಾವ ಸಂಶಯದಿಂದ ಕೂಡಿತ್ತು.

ಪರಮಹಂಸಜಿ, ಡಾ. ಲೂಯಿಸ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಯುವ ದಂತವೈದ್ಯರಿಗೆ ಮನಸ್ಸಿನಲ್ಲಿ ಅನೇಕ ಆಧ್ಯಾತ್ಮಿಕ ಪ್ರಶ್ನೆಗಳಿದ್ದವು ಹಾಗೂ ಪರಮಹಂಸಜಿ, ಅವರಿಗೆ ತೃಪ್ತಿಕರ ಉತ್ತರಗಳನ್ನು ನೀಡಿದರು. ಅನೇಕ ವರ್ಷಗಳ ನಂತರ, ವೈದ್ಯರು ಈ ವಿಶೇಷ-ಘಟನೆಯ ಬಗ್ಗೆ ಹೇಳಿದರು, “ನಾನು ‘ಮಿಝೋರಿಯವನು’ ಮತ್ತು ನನಗೆ ಪುರಾವೆ ಬೇಕಾಗಿತ್ತು. ಅದಕ್ಕಿಂತ ಕೆಟ್ಟದ್ದೆಂದರೆ, ನಾನು ನ್ಯೂ ಇಂಗ್ಲೆಂಡ್‌ನಿಂದ ಬಂದವನು, ಮತ್ತು ನಾನು ಕಂಡುಕೊಳ್ಳಬೇಕಾಗಿತ್ತು!”

1920 ರಲ್ಲಿ ಕ್ರಿಸ್ಮಸ್‌ನ ಆ ಮುನ್ನಾದಿನದಂದು ಅವರು ಪರಮಹಂಸಜಿಯವರಿಗೆ ಹೇಳಿದರು: “ಬೈಬಲ್ ನಮಗೆ ಹೇಳುತ್ತದೆ: ‘ಶರೀರದ ಬೆಳಕು ಕಣ್ಣು: ಆದ್ದರಿಂದ ನಿನ್ನ ಕಣ್ಣು ಒಂದೇ ಆಗಿದ್ದರೆ, ನಿನ್ನ ಇಡೀ ಶರೀರವು ಬೆಳಕಿನಿಂದ ತುಂಬಿಕೊಳ್ಳುತ್ತದೆ.’ ನೀವು ಇದನ್ನು ವಿವರಿಸಬಹುದೇ?”

“ನಾನು ಹಾಗೆ ಅಂದುಕೊಂಡಿದ್ದೇನೆ,” ಗುರುಗಳು ಉತ್ತರಿಸಿದರು.

ಡಾಕ್ಟರ್‌ಗೆ ಇನ್ನೂ ಅನುಮಾನವಿತ್ತು. “ನಾನು ಅನೇಕ ಜನರನ್ನು ಕೇಳಿದ್ದೇನೆ, ಆದರೆ ಯಾರಿಗೂ ಅದರ ಅರ್ಥ ತಿಳಿದಿಲ್ಲವೆಂಬಂತೆ ಕಾಣುತ್ತದೆ,” ಎಂದು ಅವರು ಹೇಳಿದರು.

“ಕುರುಡನು ಕುರುಡನನ್ನು ಮುನ್ನಡೆಸಬಲ್ಲನೆ? ಇಬ್ಬರೂ ತಪ್ಪು ತಿಳುವಳಿಕೆಯ ಒಂದೇ ಹೊಂಡಕ್ಕೆ ಬೀಳುತ್ತಾರೆ ಅಷ್ಟೆ,” ಪರಮಹಂಸಜೀ ಪ್ರತಿಕ್ರಿಯಿಸಿದರು.

“ನೀವು ಇವುಗಳನ್ನು ನನಗೆ ತೋರಿಸಬಲ್ಲಿರಾ?”

“ನಾನು ಹಾಗೆ ಅಂದುಕೊಂಡಿದ್ದೇನೆ,” ಗುರುಗಳು ಪುನರುಚ್ಚರಿಸಿದರು.

“ಓ ದೇವರೇ! ಹಾಗಾದರೆ, ದಯವಿಟ್ಟು ನನಗೆ ತೋರಿಸಿ!”

ನೆಲದ ಮೇಲೆ ಹುಲಿಯ ಚರ್ಮವನ್ನು ಹಾಸಿ, ಗುರುಗಳು ಡಾಕ್ಟರಿಗೆ, ಅದರ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿದರು ಹಾಗೂ ತಾವು ಅವರ ಎದುರು ಕುಳಿತರು. ಡಾಕ್ಟರರ ಕಣ್ಣುಗಳೊಳಗೆ ನೇರವಾಗಿ ನೋಡುತ್ತಾ, ಪರಮಹಂಸಜಿ ಕೇಳಿದರು: “ನಾನು ನಿಮ್ಮನ್ನು ಪ್ರೀತಿಸುವಂತೆ ನೀವು ಯಾವಾಗಲೂ ನನ್ನನ್ನು ಪ್ರೀತಿಸುವಿರಾ?”

ಡಾಕ್ಟರು ಸಕಾರಾತ್ಮಕವಾಗಿ ಉತ್ತರಿಸಿದರು. ಆಗ ಗುರು ಹೇಳಿದರು, “ನಿಮ್ಮ ಪಾಪಗಳನ್ನು ಕ್ಷಮಿಸಲಾಗಿದೆ ಮತ್ತು ನಿಮ್ಮ ಜೀವನದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ.”

“ಈ ಮಾತುಗಳಿಂದ,” ಡಾಕ್ಟರ್ ನಂತರ ವಿವರಿಸಿದರು, “ನನ್ನ ಭುಜಗಳಿಂದ ದೊಡ್ಡದೊಂದು ಹೊರೆಯನ್ನು ಎತ್ತಲ್ಪಟ್ಟಂತೆ ಆಯಿತು. ಇದು ನಿಜವೇ. ನಾನು ಕರ್ಮ ಮತ್ತು ಭ್ರಮೆಯ ಪರ್ವತಗಳಿಂದ ಮುಕ್ತನಾದಂತೆನಿಸಿ ದೊಡ್ಡ ನೆಮ್ಮದಿಯನ್ನು ಅನುಭವಿಸಿದೆ. ದೊಡ್ಡ ಭಾರವೊಂದು ಎತ್ತಲ್ಪಟ್ಟಿತು, ಮತ್ತು ಎತ್ತಲ್ಪಟ್ಟ ಭಾರವು ಅಂದಿನಿಂದ ಹಾಗೇ ಇದೆ. ಅನೇಕ ಕಷ್ಟಗಳು ಬಂದವು — ಬೇಕಾದಷ್ಟು — ಆದರೆ ಆ ಭಾರ ಮತ್ತೆಂದೂ ಹಿಂದಿರುಗಲಿಲ್ಲ.”

ಕಥೆಯನ್ನು ಮುಂದುವರಿಸುತ್ತಾ, ಡಾ. ಲೂಯಿಸ್ ಹೇಳಿದರು:

“ನಂತರ ಗುರುಗಳು ತಮ್ಮ ಹಣೆಯನ್ನು ನನ್ನ ಹಣೆಯ ಮೇಲಿಟ್ಟರು. ಅವರು, ನನಗೆ ಕಣ್ಣುಗಳನ್ನು ಮೇಲಕ್ಕೆತ್ತಿ ಭ್ರೂಮಧ್ಯದ ಬಿಂದುವನ್ನು ನೋಡಲು ಹೇಳಿದರು, ನಾನು ಹಾಗೇ ಮಾಡಿದೆ. ಮತ್ತು ಅಲ್ಲಿ ನಾನು ಆಧ್ಯಾತ್ಮಿಕ ಚಕ್ಷುವಿನ ದೊಡ್ಡ ಬೆಳಕನ್ನು ನೋಡಿದೆ. ನಾನು ಏನನ್ನು ನೋಡಬೇಕೆಂದು ಗುರುಗಳು ಸೂಚಿಸಿರಲಿಲ್ಲ. ಅವರು ಯಾವುದೇ ರೀತಿಯಲ್ಲಿ ಸಲಹೆ ನೀಡುವ ಮೂಲಕ ನನ್ನ ಮೇಲೆ ಪ್ರಭಾವ ಬೀರಲಿಲ್ಲ. ನಾನು ನೋಡಿದ್ದು ತಾನಾಗಿಯೇ ಬಂದದ್ದು.

“ನಾನು ಸಂಪೂರ್ಣವಾಗಿ ಪ್ರಜ್ಞಾಪೂರ್ಣನಾಗಿದ್ದೆ, ಸಂಪೂರ್ಣವಾಗಿ ಜಾಗೃತನಾಗಿದ್ದೆ, ಸಂಪೂರ್ಣವಾಗಿ ಎಚ್ಚರದಿಂದಿದ್ದೆ, ಮತ್ತು ನಾನು ಆಧ್ಯಾತ್ಮಿಕ ಚಕ್ಷುವನ್ನು ಕಂಡೆ ಏಕೆಂದರೆ ಗುರುಗಳು ನನ್ನ ಮನಸ್ಸಿನ ಅಲೆಗಳನ್ನು ಶಾಂತಗೊಳಿಸುವ ಮೂಲಕ ನನ್ನ ಆತ್ಮದ ಅಂತರ್ಬೋಧೆಯೇ ಅದನ್ನು ನನಗೆ ತೋರಿಸುವಂತೆ ಅವಕಾಶ ಮಾಡಿಕೊಟ್ಟರು. ನಾನು ದೊಡ್ಡ ಹೊನ್ನ ಬೆಳಕಿನಲ್ಲಿ ಮತ್ತೂ ಮುಂದಕ್ಕೆ ನೋಡಿದಾಗ, ನನ್ನೊಳಗಿನ ಕ್ರಿಸ್ತ ಪ್ರಜ್ಞೆಯನ್ನು ಪ್ರತಿನಿಧಿಸುವ ಅಥವಾ ಪ್ರಕಟಪಡಿಸುವ ಒಳಗಿನ ಗಾಢ-ನೀಲಿ ಕೇಂದ್ರ, ಮತ್ತು ಅಂತಿಮವಾಗಿ ಮಧ್ಯದಲ್ಲಿರುವ, ವಿಶ್ವಪ್ರಜ್ಞೆಯ ಮೂರ್ತ ರೂಪವಾದ ಸಣ್ಣ ರಜತ ನಕ್ಷತ್ರದೊಂದಿಗೆ ಇಡೀ ಆಧ್ಯಾತ್ಮಿಕ ಚಕ್ಷು ರೂಪುಗೊಂಡಿತು. [ಶಬ್ದಾರ್ಥ ಸಂಗ್ರಹದಲ್ಲಿ “ಆಧ್ಯಾತ್ಮಿಕ ಚಕ್ಷು” ನೋಡಿ.]

“ಖಂಡಿತವಾಗಿಯೂ, ನಮ್ಮಲ್ಲಿ ಪ್ರತಿಯೊಬ್ಬರ ಒಳಗಿರುವ ಆಂತರಿಕ ವಾಸ್ತವತೆಯನ್ನು ನನಗೆ ತೋರಿಸಬಲ್ಲ ವ್ಯಕ್ತಿಯೊಬ್ಬರನ್ನು ಕಂಡುಕೊಂಡಿದ್ದರಿಂದ ನನಗೆ ಮಾತೇ ಹೊರಡದಂತಾಗಿತ್ತು. ಅವರು ಸಾಮಾನ್ಯ ವ್ಯಕ್ತಿಯಲ್ಲ, ಅಂತಹ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಮಗೆ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಸಾಮಾನ್ಯ ಜನರಿಗಿಂತ ಬಹಳ ವಿಭಿನ್ನರು ಎಂದು ನಾನು ಅರಿತುಕೊಂಡೆ. “ನಾವು ಕೆಲವು ನಿಮಿಷಗಳ ಕಾಲ ಮಾತನಾಡಿದೆವು, ನಂತರ ಅವರು ಮತ್ತೊಮ್ಮೆ ತಮ್ಮ ಹಣೆಯನ್ನು ನನ್ನ ಹಣೆಯ ಮೇಲೆ ಒತ್ತಿದರು; ಆಗ ನಾನು ಸಹಸ್ರ ದಳ ಪದ್ಮದ ದೊಡ್ಡ ಬೆಳಕನ್ನು ನೋಡಿದೆ [ಮೆದುಳಿನ ಮೇಲ್ಭಾಗದಲ್ಲಿರುವ ಅತ್ಯುನ್ನತ ಆಧ್ಯಾತ್ಮಿಕ ಕೇಂದ್ರ] — ಬೆಳ್ಳಿಯ ಎಲೆಗಳ ಅನೇಕ ದಳಗಳಿಂದ ಕೂಡಿದ ಅದು ಅತ್ಯಂತ ಮನೋಜ್ಞವಾದ ದೃಗ್ಗೋಚರ ವಿಷಯವಾಗಿತ್ತು. ಸಾವಿರ ದಳಗಳ ಪದ್ಮದ ಕೆಳಭಾಗದಲ್ಲಿ, ಮಿದುಳಿನ ಬುಡದಲ್ಲಿ ದೊಡ್ಡ ಅಪಧಮನಿಗಳ ಗೋಡೆಗಳನ್ನು ಸ್ಥೂಲತರ ಬೆಳಕಿನಲ್ಲಿ ನಾನು ನೋಡಿದೆ. ಮತ್ತು ನೋಡುನೋಡುತ್ತಿದ್ದಂತೆ, ಅಪಧಮನಿಗಳೊಳಗಿನ ಬೆಳಕಿನ ಸಣ್ಣ ಕಿಡಿಗಳು ನನ್ನ ಕಣ್ಣ ಮುಂದೆ ಹಾದುಹೋಗುವಾಗ ಗೋಡೆಗಳಿಗೆ ಢಿಕ್ಕಿ ಹೊಡೆಯುತ್ತ ಪುಟಿದೇಳುತ್ತಿದ್ದವು. ಇವು ಭಗವಂತನ ಬೆಳಕಿನಾಟದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವಂತೆ, ಪ್ರತಿಯೊಂದೂ, ಸೂಕ್ಷ್ಮ ಬೆಳಕಿನ ಸಣ್ಣ ಕಿಡಿಯನ್ನು ಪ್ರಕಟಪಡಿಸುತ್ತಿದ್ದ ರಕ್ತದ ಕಣಗಳಾಗಿದ್ದವು.

“ಪರಮಹಂಸಜಿಯವರು ನನಗೆ ದೇವರ ಮಹಾನ್ ಬೆಳಕನ್ನು ತೋರಿಸಿದರು ಮತ್ತು ನನಗೆ ಹೀಗೆ ಹೇಳಿದರು: ’ನೀವು ಈ ಮಾರ್ಗಕ್ಕೆ ಅಂಟಿಕೊಂಡರೆ ಮತ್ತು ನಿಯಮಿತವಾಗಿ ಧ್ಯಾನ ಮಾಡಿದರೆ, ಈ ದೃಶ್ಯ ಸದಾ ನಿಮ್ಮದೇ ಆಗಿರುತ್ತದೆ.’ ಆದ್ದರಿಂದ ನಾನು ಅವರ ಸಲಹೆಯನ್ನು ಅನುಸರಿಸಿದೆ. ಕ್ರಿಯಾ ಯೋಗದ ನನ್ನ ಅಭ್ಯಾಸವನ್ನು ನಾನು ಎಂದಿಗೂ ತಪ್ಪಿಸಲಿಲ್ಲ. ಕ್ರಮೇಣ ದೇವರ ಬೆಳಕು ನನ್ನೊಳಗೆ ಬಂದಿತು. ನಾನು ಏನು ಪಡೆದಿರುವೆನೋ, ಅದೆಲ್ಲವನ್ನೂ ಗುರುಗಳಿಂದಲೇ ಪಡೆದಿರುವೆನು. ಅವರು ನನ್ನನ್ನು ಭ್ರಮೆಯ ಅನಿಶ್ಚಿತತೆಯಿಂದ ವಾಸ್ತವತೆಯ ಬೆಳಕಿನೆಡೆಗೆ ಎತ್ತಿದರು. ಆ ಅನುಭವ ಬಂದಾಗ ಅದು ಹೃದಯವನ್ನು ಬದಲಾಯಿಸುತ್ತದೆ. ಆಗ ನಾವು ಮನುಷ್ಯನ ನಿಜವಾದ ಸಹೋದರತ್ವ ಮತ್ತು ದೇವರ ಪಿತೃತ್ವವನ್ನು ಅನುಭವಿಸುತ್ತೇವೆ.“ 

ತಾರಾ ಮಾತಾ

ತಾರಾ ಮಾತಾ 1924 ರಿಂದ 1971 ರಲ್ಲಿ ಅವರು ನಿಧನರಾಗುವವರೆಗೆ ಯೋಗಿಯ ಆತ್ಮಕಥೆ ಮತ್ತು ಪರಮಹಂಸ ಯೋಗಾನಂದರ ಇತರ ಕೃತಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ ಕ್ರಿಯಾ ಯೋಗದ ತುಂಬಾ ಮುಂದುವರಿದ ಶಿಷ್ಯರಾಗಿದ್ದರು. 1924 ರಲ್ಲಿ ತಾರಾ ಮಾತಾರವರು ಪರಮಹಂಸಜೀಯವರನ್ನು ಭೇಟಿಯಾದ ಸ್ವಲ್ಪ ಸಮಯದಲ್ಲೇ ವಿಶ್ವಾತ್ಮಕ ಪ್ರಜ್ಞೆಯ ಅನುಭವದಿಂದ ಆಶೀರ್ವದಿಸಲ್ಪಟ್ಟ “ಮನುಷ್ಯ” ಎಂಬ ಬಗ್ಗೆ ಈ ಕೆಳಕಂಡ ಲೇಖನವನ್ನು ಬರೆದರು. ಉಲ್ಲೇಖಿಸಿದ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳುವುದನ್ನು ಅವರು ವಿನಮ್ರವಾಗಿ ತಪ್ಪಿಸಿಕೊಂಡರೂ, ತಾರಾ ಮಾತಾ ವಿವರಿಸಿರುವ ಅನುಭವಗಳು ಸ್ವತಃ ಅವರದ್ದೇ ಆಗಿವೆ. (ಅವರ ಸಂಪೂರ್ಣ ಹೇಳಿಕೆಯನ್ನು ಫೋರ್ ರನ್ನರ್ ಆಫ್ ಎ ನ್ಯೂ ರೇಸ್ ಎಂಬ ಕಿರುಪುಸ್ತಕವಾಗಿ ಪ್ರಕಟಿಸಲಾಗಿದೆ, ಇದು ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನಲ್ಲಿ ಲಭ್ಯವಿದೆ.)

ಆಯ್ದ ಕೆಲವರಿಗೆ ಮಾತ್ರ ದೈವೀ ಜ್ಞಾನವನ್ನು ಪಡೆಯಲು ಸಾಧ್ಯ ಎಂದು ಹೆಚ್ಚಿನ ಜನರು ನಂಬುತ್ತಾರೆ ಮತ್ತು ಸಾಧಾರಣ ಮನುಷ್ಯನು ತನ್ನ “ನಂಬಿಕೆ” ಎಷ್ಟು ಹತ್ತಿರ ತೆಗೆದುಕೊಂಡು ಹೋಗುವುದೋ ಅದಕ್ಕಿಂತ ಹೆಚ್ಚು ದೇವರ ಹತ್ತಿರ ಹೋಗಲು ಸಾಧ್ಯವಿಲ್ಲ ಎಂದು ನಂಬುತ್ತಾನೆ. ದೇವರನ್ನು ಸಂಪರ್ಕಿಸಲು ಒಂದು ನಿರ್ದಿಷ್ಟ ಮಾರ್ಗವಿದೆ, ಎಲ್ಲಾ ಸಂದರ್ಭಗಳಲ್ಲಿ ಎಲ್ಲಾ ಮನುಷ್ಯರು ಬಳಸಬಹುದಾದ ತಂತ್ರವಾಗಿದೆ [ಕ್ರಿಯಾ ಯೋಗ], ಇದು ಹಲವಾರು ಸೆಲ್ಫ್‌-ರಿಯಲೈಝೇಷನ್‌ ವಿದ್ಯಾರ್ಥಿಗಳಿಗೆ ಎಂತಹ ವಿಮೋಚನೆಯ ವಿಸ್ಮಯವನ್ನು ತಂದಿತು ಎಂದರೆ, ಅವರು ಹೊಸ ಜನ್ಮವನ್ನು ಪಡೆದಿದ್ದೇವೆ ಎಂದು ಭಾವಿಸುತ್ತಾರೆ.

ನನ್ನ ಮನಸ್ಸಿನಲ್ಲಿ ಅಂತಹ ಒಂದು ಪ್ರಕರಣವಿದೆ — ಅವರು ಸೆಲ್ಫ್‌-ರಿಯಲೈಝೇಷನ್‌ನ ಸಂದೇಶವನ್ನು ಕೇಳಿದ ತಕ್ಷಣ, ವಿಶ್ವಾತ್ಮಕ ಪ್ರಜ್ಞೆಯಲ್ಲಿ ಮುಳುಗಿದ ವ್ಯಕ್ತಿ….ಈ ವ್ಯಕ್ತಿಯು ತೀವ್ರವಾದ ಧಾರ್ಮಿಕ ನಂಬಿಕೆ ಮತ್ತು ಆಕಾಂಕ್ಷೆಯನ್ನು ಹೊಂದಿದ್ದರು. ಪ್ರಪಂಚದ ಪವಿತ್ರ ಗ್ರಂಥಗಳನ್ನು, ವಿಶೇಷವಾಗಿ ಹಿಂದೂ ಗ್ರಂಥಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರೂ, ಈ ಬೌದ್ಧಿಕ ಜ್ಞಾನವು ಸತ್ವಹೀನ ಮತ್ತು ಕಠಿಣವಾದದ್ದು ಎಂದು ಅವರು ತಿಳಿದಿದ್ದರು; ಅದು ಅವರೊಳಗಿನ ಆತ್ಮದ ಹಸಿವನ್ನು ಹಿಂಗಿಸಲಿಲ್ಲ. ಅವರು ಕೇವಲ ಆಧ್ಯಾತ್ಮಿಕವೆಂಬ ಆಹಾರದ ಬಗ್ಗೆ ಓದಲು ಬಯಸಲಿಲ್ಲ, ಬದಲಾಗಿ ಅದರ ರುಚಿಯನ್ನು ಕೂಡ ನೋಡಬೇಕೆಂದು ಬಯಸಿದ್ದರು. ಅವರ ಜೀವನದ ಒಳ್ಳೆಯ ದಿನಗಳ ಅಡಿಯಲ್ಲಿ ಹತಾಶೆಯ ಕಪ್ಪು ಪ್ರಪಾತವು ಬಾಯ್ತೆರೆಯಿತು — ದೇವರೊಂದಿಗೆ ಯಾವುದೇ ನೇರ ಸಂಪರ್ಕಕ್ಕೆ ಅವರು ಅರ್ಹರೋ ಅಲ್ಲವೋ ಎಂಬ ಹತಾಶೆ, ಏಕೆಂದರೆ ಅವರಿಗೆ ಅಂತಹ ಯಾವುದೇ ಅನುಭವವು ದಕ್ಕಿರಲಿಲ್ಲ. ಕೊನೆಗೂ ಅವರಿಗೆ ಅನುಮಾನ ಬಂದಿತು, ದೇವರಲ್ಲ, ಬದಲಾಗಿ ತಮ್ಮ ಬೌದ್ಧಿಕ ಗ್ರಹಿಕೆಗಿಂತ ಹೆಚ್ಚಿನದಾದ್ದನ್ನು ಹೊಂದಲು ಸಾಧ್ಯ ಎಂಬ ಸಾಧ್ಯತೆಯ ಬಗ್ಗೆ ಅವರಿಗೆ ಅನುಮಾನ ಉಂಟಾಯಿತು. ಈ ಗಾಢ ನಿರ್ಧಾರವು ಅವರ ಜೀವನದ ಬೇರುಗಳಿಗೇ ಪೆಟ್ಟು ಕೊಟ್ಟಿತ್ತು ಮತ್ತು ಅದು ನಿಷ್ಪ್ರಯೋಜಕ ಮತ್ತು ಅರ್ಥಹೀನ ವಿಷಯವೆಂದು ಕಾಣುವಂತೆ ಮಾಡಿತ್ತು.

“ದೇವರನ್ನು ಸಂಪರ್ಕಿಸಲು ಒಂದು ನಿರ್ದಿಷ್ಟ ಮಾರ್ಗವಿದೆ, ಎಲ್ಲಾ ಸಂದರ್ಭಗಳಲ್ಲಿ ಎಲ್ಲಾ ಮನುಷ್ಯರು ಬಳಸಬಹುದಾದ ತಂತ್ರವಾಗಿದೆ [ಕ್ರಿಯಾ ಯೋಗ] ಎಂಬ ಅರಿವು, ಹಲವಾರು ಸೆಲ್ಫ್‌-ರಿಯಲೈಝೇಷನ್‌ ವಿದ್ಯಾರ್ಥಿಗಳಿಗೆ ಎಂತಹ ವಿಮೋಚನೆಯ ವಿಸ್ಮಯವನ್ನು ತಂದಿತು ಎಂದರೆ, ಅವರು ಹೊಸ ಜನ್ಮವನ್ನು ಪಡೆದಿದ್ದೇವೆ ಎಂದು ಭಾವಿಸುತ್ತಾರೆ.”

 

ಅವರ ಆತ್ಮದ ಈ ಕರಾಳ ರಾತ್ರಿಯೊಳಗೆ ಆತ್ಮಸಾಕ್ಷಾತ್ಕಾರದ ಬೆಳಕು ಬಂದಿತು. ಪರಮಹಂಸ ಯೋಗಾನಂದರ ಕೆಲವು ಸಾರ್ವಜನಿಕ ಉಪನ್ಯಾಸಗಳಿಗೆ ಹೋದ ಮೇಲೆ ಮತ್ತು ಪಾಠಗಳ ತರಗತಿಯನ್ನು ತೆಗೆದುಕೊಳ್ಳುವ ಮೊದಲು, ಅವರ ಹೃದಯದಿಂದ ಹತಾಶೆಯ ಒಂದು ದೊಡ್ಡ ಭಾರ ಕೆಳಗಿಳಿದಿರುವಂತೆ ಈ ವ್ಯಕ್ತಿಗೆ ಭಾಸವಾಯಿತು. ಒಂದಾನೊಂದು ಸಾರ್ವಜನಿಕ ಉಪನ್ಯಾಸಗಳ ನಂತರ ರಾತ್ರಿ ಮನೆಗೆ ಹಿಂತಿರುಗುವಾಗ ಅವರಿಗೆ ತಮ್ಮೊಳಗೆ ಒಂದು ಮಹಾನ್‌ ಶಾಂತಿಯ ಅರಿವಾಯಿತು. ಎಲ್ಲೋ ಆಳದಲ್ಲಿ ಖಂಡಿತವಾಗಿಯೂ ಅವರು ಒಬ್ಬ ವಿಭಿನ್ನ ವ್ಯಕ್ತಿಯಾಗಿದ್ದಾರೆ ಎಂಬ ಭಾವನೆ ಉದಿಸಿತು. ಒಂದು ಅಂತಃಪ್ರಚೋದನೆ ಅವರು ಒಬ್ಬ ಹೊಸ ಮನುಷ್ಯನನ್ನು ಕಾಣು ಎಂದು ಅವರ ಕೋಣೆಯಲ್ಲಿದ್ದ ಕನ್ನಡಿಯೊಳಗೆ ನೋಡುವಂತೆ ಅವರನ್ನು ಪ್ರೇರಿಸಿತು. ಆದರೆ ಅಲ್ಲಿ ಅವರು ನೋಡಿದ್ದು ತಮ್ಮ ಮುಖವನ್ನಲ್ಲ, ಬದಲಾಗಿ ಆ ದಿನ ಸಂಜೆ ಅವರು ಕೇಳಿದ್ದ ಉಪನ್ಯಾಸವನ್ನು ನೀಡಿದ್ದ ಪರಮಹಂಸ ಯೋಗಾನಂದರ ಮುಖವನ್ನು.

ಅವರ ಆತ್ಮದಲ್ಲಿ ಆನಂದ ಪ್ರವಾಹದ ದ್ವಾರಗಳು ತೆರೆದವು; ಅವರು ಒಂದು ರೀತಿಯ ಅವರ್ಣನೀಯವಾದ ಭಾವಪರವಶತೆಯ ಪ್ರವಾಹದಲ್ಲಿ ಮುಳುಗಿದ್ದರು. ಅವರಿಗೆ ಈ ಹಿಂದೆ ಕೇವಲ ಪದಗಳಾಗಿದ್ದ — ಆನಂದ, ಅಮರತೆ, ಅನಂತತೆ, ಸತ್ಯ, ದೈವೀ ಪ್ರೇಮ ಎಲ್ಲವೂ ಕಣ್ಣು ಮಿಟುಕಿಸುವುದರಲ್ಲಿ, ಅವರ ಅಸ್ತಿತ್ವದ ತಿರುಳು, ಅವರ ಜೀವನದ ಸಾರ, ಏಕೈಕ ಸಂಭವನೀಯ ವಾಸ್ತವತೆಗಳಾಗಿ ಬದಲಾದವು. ಈ ಆಳವಾದ, ಚಿರಂತನ ಆನಂದದ ಚಿಲುಮೆಗಳು ಪ್ರತಿಯೊಂದು ಹೃದಯದಲ್ಲೂ ಅಸ್ತಿತ್ವದಲ್ಲಿವೆ, ಈ ಅಮರ ಜೀವನವು ಎಲ್ಲ ಮಾನವಕೋಟಿಯ ಮರ್ತ್ಯ ಸ್ಥಿತಿಗೆ ಆಧಾರವಾಗಿದೆ, ಸೃಷ್ಟಿಯ ಪ್ರತಿಯೊಂದು ಕಣ, ಪ್ರತಿಯೊಂದು ಅಣುವನ್ನು ಸರ್ವಾಂಗೀಣ ಪ್ರೇಮವು ಆವರಿಸಿದೆ, ಸಂರಕ್ಷಿಸುತ್ತಿದೆ ಮತ್ತು ಮಾರ್ಗದರ್ಶಿಸುತ್ತಿದೆ ಎಂಬ ಅರಿವು ದೃಢವಾಗಿ, ದೈವೀ ನಿಶ್ಚಿತತೆಯಾಗಿ ಅವರ ಮೇಲೆ ಆಸ್ಪೋಟಿಸಿತು. ಇದು ಅವರ ಇಡೀ ಅಸ್ತಿತ್ವವು ಶ್ಲಾಘನೆ ಮತ್ತು ಕೃತಜ್ಞತೆಯ ಪ್ರವಾಹದಲ್ಲಿ ಕೊಚ್ಚಿ ಹೋಗುವಂತೆ ಮಾಡಿತು.

ಅವರಿಗೆ ತಿಳಿದಿತ್ತು; ಕೇವಲ ಅವರ ಮನಸ್ಸಿನಿಂದ ಮಾತ್ರವಲ್ಲ, ಅವರ ಅಂತರಾಳ ಮತ್ತು ಅಂತರಾತ್ಮದಿಂದ, ಅವರ ಶರೀರದ ಪ್ರತಿಯೊಂದು ಜೀವಕೋಶ ಮತ್ತು ಅಣುವಿನಿಂದ. ಈ ಆವಿಷ್ಕಾರದ ಅದ್ಭುತ ಪ್ರಭೆ ಮತ್ತು ಆನಂದ ಎಷ್ಟು ವಿಸ್ತೃತವಾಗಿತ್ತೆಂದರೆ, ಅಂತಹ ಮಾರ್ಗದಿಂದ ಈ ಪರಮಾನಂದವನ್ನು ಪಡೆದುಕೊಳ್ಳಬಹುದಾದರೆ, ಯಾತನೆಯ ಶತಮಾನಗಳ, ಶತಶತಮಾನಗಳ, ಅಸಂಖ್ಯಾತ ಗಣನಾತೀತ ಕಾಲವು ಏನೂ ಅಲ್ಲ, ಎಲ್ಲದಕ್ಕಿಂತ ನಗಣ್ಯ ಎಂಬ ಅರಿವಾಯಿತು. ಪಾಪ, ದುಃಖ, ಸಾವು — ಇವು ಕೇವಲ ಪದಗಳು ಮಾತ್ರ, ಅರ್ಥವಿಲ್ಲದ ಪದಗಳು, ಏಳು ಸಾಗರಗಳು ಸಂತೋಷದಿಂದ ನುಂಗಿದ ಚಿಕ್ಕ ಮೀನುಗಳಂತಹ ಪದಗಳು.

ಶಾರೀರಿಕ ಬದಲಾವಣೆಗಳು

ಈ ಮೊದಲ ಜ್ಞಾನೋದಯದ ಅವಧಿಯಲ್ಲಿ ಮತ್ತು ನಂತರದ ವಾರಗಳಲ್ಲಿ, ತಮ್ಮೊಳಗಾದ ಹಲವಾರು ಶಾರೀರಿಕ ಬದಲಾವಣೆಗಳ ಬಗ್ಗೆ ಅವರಿಗೆ ಅರಿವಿತ್ತು. ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಅವರ ಮೆದುಳಿನಲ್ಲಿನ ಅಣು ರಚನೆಯ ಮರುಜೋಡಣೆ ಅಥವಾ ಅಲ್ಲಿ ಹೊಸ ಜೀವ ಕೋಶಗಳ-ರಚನೆಯಾಗಿರುವುದು. ನಿರಂತರವಾಗಿ, ಹಗಲಿರುಳೂ, ಈ ಕ್ರಿಯೆ ನಡೆಯುತ್ತಿರುವುದರ ಅರಿವು ಅವರಿಗಿತ್ತು. ಒಂದು ರೀತಿಯ ವಿದ್ಯುತ್ ಚಾಲಿತ ಕೊರೆಯುವ ಯಂತ್ರ ಹೊಸ ಜೀವ ಕೋಶಗಳಿಂದಾದ ಆಲೋಚನಾ-ವಾಹಿನಿಗಳನ್ನು ಕೊರೆಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ಈ ವಿದ್ಯಮಾನವು ವಿಶ್ವಾತ್ಮಕ ಪ್ರಜ್ಞೆಯು ಮನುಷ್ಯನ ಸಹಜ ಶಕ್ತಿಯಾಗಿದೆ ಎಂಬ ಬಕೆಯ ಸಿದ್ಧಾಂತಕ್ಕೆ ಬಲವಾದ ಪುರಾವೆಯಾಗಿದೆ, ಏಕೆಂದರೆ ಈ ಸಹಜ ಶಕ್ತಿಯೊಂದಿಗೆ ಸಂಪರ್ಕ ಹೊಂದಿದ ಮೆದುಳಿನ ಕೋಶಗಳು ಈಗಾಗಲೇ ಮನುಷ್ಯನಲ್ಲಿವೆ ಎಂಬುದಕ್ಕೆ ಪುರಾವೆಯನ್ನು ನೀಡುತ್ತದೆ, ಆದಾಗ್ಯೂ ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಮಾನವರಲ್ಲಿ ಇದು ನಿಷ್ಕ್ರಿಯವಾಗಿದೆ ಅಥವಾ ಕಾರ್ಯನಿರ್ವಹಿಸುತ್ತಿಲ್ಲ.

ಮತ್ತೊಂದು ಪ್ರಮುಖ ಬದಲಾವಣೆಯು ಅವರ ಬೆನ್ನುಮೂಳೆಯಲ್ಲಿ ಕಂಡುಬಂದಿತು. ಇಡೀ ಬೆನ್ನುಮೂಳೆಯು ಹಲವಾರು ವಾರಗಳವರೆಗೆ ಕಬ್ಬಿಣವಾಗಿ ಮಾರ್ಪಟ್ಟಂತೆ ತೋರುತ್ತಿತ್ತು, ಆದ್ದರಿಂದ ಅವರು ದೇವರನ್ನು ಧ್ಯಾನಿಸಲು ಕುಳಿತಾಗ, ಅವರು ನಿರಂತರವಾಗಿ ಧೃಡವಾಗಿ ಒಂದು ಜಾಗದಲ್ಲಿ ಕುಳಿತುಕೊಳ್ಳುವ ಸಾಮರ್ಥ್ಯ ಪಡೆದಂತೆ ಭಾಸವಾಯಿತು, ಯಾವುದೇ ದೈಹಿಕ ಕ್ರಿಯೆಯ ಚಲನೆ ಅಥವಾ ಪ್ರಜ್ಞೆಯಿಲ್ಲದೆ ಶಾಶ್ವತವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಯಿತು. ಕೆಲವೊಮ್ಮೆ ಅತಿಮಾನುಷ ಶಕ್ತಿಯ ಒಳಹರಿವು ಅವರನ್ನು ಆಕ್ರಮಿಸಿತು, ಮತ್ತು ಅವರಿಗೆ ಇಡೀ ವಿಶ್ವವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದೇನೆ ಎಂಬ ಭಾವನೆ ಉಂಟಾಯಿತು. ಜೀವನದ ಅಮೃತ, ಅಮರತ್ವದ ಮಕರಂದವು, ಅವರ ರಕ್ತನಾಳಗಳಲ್ಲಿ ನಿಜವಾದ, ಸ್ಪಷ್ಟವಾದ ಶಕ್ತಿಯಾಗಿ ಹರಿಯುತ್ತಿದ್ದಂತೆ ಭಾಸವಾಯಿತು. ಅವರ ದೇಹದಾದ್ಯಂತ ಪಾದರಸ ಅಥವಾ ಒಂದು ರೀತಿಯ ವಿದ್ಯುತ್, ದ್ರವದ ಬೆಳಕು ಹರಿದಂತೆ ಭಾಸವಾಗುತ್ತಿತ್ತು.

ಅವರ ಜ್ಞಾನೋದಯದ ವಾರಗಳಲ್ಲಿ, ಅವರು ತಮಗೆ ಆಹಾರ ಅಥವಾ ನಿದ್ರೆಯ ಅಗತ್ಯವಿಲ್ಲ ಎಂದು ಭಾವಿಸಿದರು. ಆದರೆ ಅವರು ತಮ್ಮ ಬಾಹ್ಯ ಜೀವನವನ್ನು ಮನೆಯ ವಿಧಾನಕ್ಕೆ ಹೊಂದಿಸಿಕೊಂಡರು ಮತ್ತು ಅವರ ಕುಟುಂಬವು ತಿನ್ನುವಾಗ ಮತ್ತು ಮಲಗುವಾಗ ಅವರೂ ಅಂತೆಯೇ ಮಾಡಿದರು. ಎಲ್ಲಾ ಆಹಾರವು ಅವರಿಗೆ ಶುದ್ಧ ಚೈತನ್ಯದಂತೆ ಕಂಡುಬರುತ್ತಿತ್ತು, ಮತ್ತು ನಿದ್ರೆಯಲ್ಲಿ ಎಲ್ಲಾ ಪದಗಳನ್ನು ಮೀರಿದ, ವಿವರಣೆಯ ಎಲ್ಲಾ ಶಕ್ತಿಗಳನ್ನು ಮೀರಿದ ಸಂತೋಷದಲ್ಲಿ ಜಾಗೃತಗೊಳ್ಳುತ್ತಾ “ಶಾಶ್ವತ ತೋಳುಗಳ” ದಿಂಬಿನ ಮೇಲೆ ಮಲಗಿದರು.

ಅವರು ಈ ಹಿಂದೆ ದೀರ್ಘಕಾಲದ ಕಣ್ಣಿನ ಪೊರೆಯಿಂದ ಬಳಲುತ್ತಿದ್ದರು; ಈಗ ಅವರ ದೇಹವು ಎಲ್ಲಾ ಕಾಯಿಲೆಗಳಿಂದ ಮುಕ್ತವಾಯಿತು. ಅವರ ನೋಟ ಮತ್ತು ನಡವಳಿಕೆಯಲ್ಲಿ ದೊಡ್ಡ ಬದಲಾವಣೆಯ ಬಗ್ಗೆ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಅರಿವಾಗಿತ್ತು; ಅವರ ಮುಖವು ಪ್ರಕಾಶಮಾನವಾದ ಬೆಳಕಿನಿಂದ ಹೊಳೆಯುತ್ತಿತ್ತು; ಅವರ ಕಣ್ಣುಗಳು ಸಂತೋಷದ ಕೊಳಗಳಾಗಿದ್ದವು. ವಿಚಿತ್ರವಾದ ಸಹಾನುಭೂತಿಯಿಂದ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳಲಾಗದೆ, ಅಪರಿಚಿತರೂ ಅವರೊಂದಿಗೆ ಮಾತನಾಡುತ್ತಿದ್ದರು; ಸ್ಟ್ರೀಟ್‌ಕಾರ್‌ನಲ್ಲಿ, ಮಕ್ಕಳು ಅವರ ತೊಡೆಯ ಮೇಲೆ ಕುಳಿತುಕೊಳ್ಳಲು ಬರುತ್ತಿದ್ದರು, ಅವರನ್ನು ಭೇಟಿ ಮಾಡಲು ಕೇಳಿಕೊಳ್ಳುತ್ತಿದ್ದರು.

ಇತರ ವೈ ಎಸ್ ಎಸ್/ಎಸ್ ಆರ್ ಎಫ್ ಕ್ರಿಯಾಬನ್‌ಗಳ ಅನುಭವಗಳು

ನಾನು 45 ವರ್ಷಗಳಿಂದ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಿದ್ದೇನೆ. 20 ವರ್ಷಗಳಿಗೂ ಹೆಚ್ಚು ಕಾಲ, ನನ್ನ ಧ್ಯಾನಗಳು ನೀರಸವಾಗಿದ್ದವು, ಆದರೆ ನಾನು ಎರಡು ಬಾರಿ ನನ್ನ ದೈನಂದಿನ ಅಭ್ಯಾಸವನ್ನು ಮುಂದುವರಿಸಿದೆ. ಈಗ, ನನ್ನ ನಂತರದ ವರ್ಷಗಳಲ್ಲಿ, ಪದಗಳಲ್ಲಿ ವಿವರಿಸಲಾಗದಷ್ಟು ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಇತ್ತೀಚೆಗೆ ಕ್ರಿಯಾ ಅಭ್ಯಾಸದ ನಂತರ ಆಳವಾದ ಧ್ಯಾನದಲ್ಲಿ, ನಾನು ಗುರುಗಳನ್ನು ಕೇಳಿದೆ, “ವಿಶ್ವಾತ್ಮಕ ಶಾಂತಿ ಎಂದರೇನು?” ಮೌನವಿತ್ತು; ನಾನು ಧ್ಯಾನದಲ್ಲಿ ಆಳವಾಗಿ ಹೋದೆ, ಮತ್ತು ಕ್ರಮೇಣ ನಾನು ಕೆಳ ಬೆನ್ನುಮೂಳೆಯಿಂದ ಮೇಲಕ್ಕೆ ಬೆನ್ನುಮೂಳೆಯ ಕೇಂದ್ರಗಳ ಕಡೆಗೆ ಮೇಲಕ್ಕೆ ಏರುತ್ತಿರುವ ಆನಂದದಾಯಕ ಶಾಂತಿಯ ಅಲೆಯನ್ನು ಅನುಭವಿಸಿದೆ, ಮತ್ತು ಅದು ದೇಹದಾದ್ಯಂತ ಹರಡಿತು – ಈ ರೀತಿ ಶಾಂತಿಯ ಗ್ರಹಿಕೆ ಹಿಂದೆಂದೂ ಅನುಭವವಾಗಿರಲಿಲ್ಲ. ಆ ಶಾಂತಿಯ ಅಲೆಯಲ್ಲಿ ಈ ದೇಹದ ಎಲ್ಲಾ ಪರಮಾಣುಗಳು ವಿಶ್ವಧರ್ಮದ ಎಲ್ಲಾ ಕಂಪನಗಳೊಂದಿಗೆ ಪರಿಪೂರ್ಣ ಸಾಮರಸ್ಯದಿಂದ ಅನುರಣಿಸುತ್ತಿವೆ ಎಂದು ಅನ್ನಿಸುತ್ತಿತ್ತು. ಈ ಆನಂದದಾಯಕ ಶಾಂತಿಯ ಬೆಳಕಿನಲ್ಲಿ ದೇಹವು ಕರಗಿ ಹೋಗುತ್ತಿದೆ, ಮತ್ತು ನನ್ನ ಆತ್ಮವು ಪ್ರೀತಿಯ ಅಲೆಗಳಲ್ಲಿ ಏರುತ್ತಿದೆ ಮತ್ತು ವಿಸ್ತರಿಸುತ್ತಿದೆ ಎಂದು ನನಗೆ ಭಾಸವಾಗುತ್ತಿತ್ತು. ಆಳವಾದ ಧ್ಯಾನದಲ್ಲಿ ನನ್ನ ಆತ್ಮವು ಇನ್ನೂ ಹೆಚ್ಚಿನ ಮಟ್ಟದ ಆನಂದದಾಯಕ ಶಾಂತಿಯನ್ನು ಪ್ರವೇಶಿಸಿತು, ಕಂಪನವಿಲ್ಲದ, ಪರಿಪೂರ್ಣ, ಮಧುರವಾದ ಶಾಂತಿಯ ಸ್ಥಿತಿ, ಮತ್ತು ಕೆಲವು ಕ್ಷಣಗಳು ನಾನು ನಿಜವಾದ ಮನೆಯಲ್ಲಿದ್ದೇನೆ ಎಂದು ನನಗೆ ತಿಳಿದಿತ್ತು. ಈ ಅನುಭವದಲ್ಲಿ, “ವಿಶ್ವಾತ್ಮಕ ಶಾಂತಿ ಎಂದರೇನು?” ಎಂಬ ನನ್ನ ಪ್ರಶ್ನೆಗೆ ನನ್ನ ಗುರುಗಳ ಉತ್ತರವನ್ನು ನಾನು ಅರಿತುಕೊಂಡೆ.

  — ಎಸ್.ಬಿ., ಜಾರ್ಜಿಯಾ

ದೇವರ ಕೃಪೆಯಿಂದ ನಾನು ಇಪ್ಪತ್ತು ವರ್ಷಗಳ ಹಿಂದೆ ಕ್ರಿಯಾಯೋಗದ ದೀಕ್ಷೆ ಪಡೆದೆ. ಧ್ಯಾನಕ್ಕಾಗಿ ಬೆಳಗ್ಗೆ 4 ಗಂಟೆಗೇ ಎದ್ದು, ಬೆಳಿಗ್ಗೆ 6 ಗಂಟೆಗೆ ಮನೆಯವರನ್ನು ಎಬ್ಬಿಸುವ ನಡುವಿನ ಸಮಯ ದಿನದ ಬಹಳ ಅತ್ಯಂತ ಪ್ರಶಾಂತವಾದ ಸಮಯ. ವಿಶೇಷವಾಗಿ ನನ್ನ ಬೆಳಗಿನ ಧ್ಯಾನವನ್ನು ನಾನು ಬಹಳ ಗಾಢವಾಗಿ ಆನಂದಿಸುತ್ತೇನೆ. ದೇವರಿಗೆ ಇರುವ ಅಂತರವು ನಮ್ಮ ಭಕ್ತಿಗೆ ಅನುಗುಣವಾಗಿರುತ್ತದೆ ಎಂಬ ನನ್ನ ಒಳನೋಟವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಾನು ದೇವರೊಂದಿಗೆ ಇರಲು ಎಷ್ಟು ಹೆಚ್ಚು ಹಂಬಲಿಸುತ್ತಿದ್ದೆನೋ ಅಷ್ಟು ಅವನು ನನಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದನು.
ಒಂದು ವರ್ಷದ ಹಿಂದೆ, ಉಸಿರು ನಿಂತಿತು, ಬೆನ್ನುಮೂಳೆಯು ಕೆಳಗಿನಿಂದ ಮೇಲಿನವರೆಗೂ ನೇರವಾಯಿತು ಮತ್ತು ಸ್ವಲ್ಪ ದಿನದಲ್ಲೇ ಇಡೀ ದೇಹವು ನಿಷ್ಕ್ರಿಯವಾಯಿತು. ಆದರೆ ಮನಸ್ಸು ಪ್ರಕಾಶಮಾನವಾದ ಬೆಳಕು ಮತ್ತು ಅಂತ್ಯವಿಲ್ಲದ ಸಂತೋಷದಿಂದ ಮುಳುಗಿತು.
ಎಸ್‌ಆರ್‌ಎಫ್ ವೆಬ್‌ಸೈಟ್‌ನಲ್ಲಿ ಶ್ರೀ ಯೋಗಾನಂದರು ಉಲ್ಲೇಖಿಸಿದ ಸತ್ಯವನ್ನು ಮಾತ್ರ ನಾನು ದೃಢೀಕರಿಸಬಲ್ಲೆ: “ದೇವರ ಉಪಸ್ಥಿತಿಯ ಮೊದಲ ಪುರಾವೆಯು ವರ್ಣನಾತೀತ ಶಾಂತಿಯಾಗಿದೆ. ಇದು ಮಾನವನ ಕಲ್ಪನಾತೀತ ಸಂತೋಷವಾಗಿ ವಿಕಸನಗೊಳ್ಳುತ್ತದೆ.” ನನ್ನ ಗುರು ಶ್ರೀ ಯೋಗಾನಂದರಿಗೆ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲಾ ಆಧ್ಯಾತ್ಮಿಕ ಪುರುಷರಿಗೆ ನಮನಗಳು, ದೇವರಿಗೆ ಜಯ ಜಯ!

— ಎನ್.ಕೆ., ನಮೀಬಿಯಾ

ಒಂದು ಸಂಜೆ ಮೊದಲ ಆರು ತಿಂಗಳವರೆಗೆ ದಿನಕ್ಕೆ ಎರಡು ಬಾರಿ ಧ್ಯಾನ ಮಾಡಿದ ನಂತರ ನಾನು ನನ್ನ ಹೆಂಡತಿಗೆ ತುಂಬಾ ದಣಿದಿರುವುದರಿಂದ ಧ್ಯಾನ ಮಾಡುವುದರ ಬದಲಿಗೆ ಮಲಗುತ್ತೇನೆ ಎಂದು ಹೇಳಿದೆ. ಹಿಂಜರಿಕೆಯಿಲ್ಲದೆ ನನ್ನ ಹೆಂಡತಿ ನನ್ನ ಅಂಗಿಯ ಕುತ್ತಿಗೆ ಪಟ್ಟಿಯನ್ನು ಎರಡೂ ಕೈಗಳಿಂದ ಹಿಡಿದುಕೊಂಡಳು, ಮತ್ತು ಅವಳ ಮುಖವು ನನ್ನಿಂದ ಇಂಚುಗಳಷ್ಟು ಮಾತ್ರ ದೂರದಲ್ಲಿತ್ತು, ನಾನು ಮಲಗುವ ಮೊದಲು ಧ್ಯಾನಕ್ಕೆ ಹೋಗಬೇಕೆಂದು ಅವಳು ನನಗೆ ನಿವೇದಿಸಿದಳು. ನಾನು ಬಹಳ ಆಶ್ಚರ್ಯದಿಂದ ಎಸ್ ಆರ್ ಎಫ್ ನೊಂದಿಗೆ ನನ್ನ ಭಾಗವಹಿಸುವಿಕೆಯಿಂದ ನಾನು ನಮ್ಮದಲ್ಲದ ಯಾವುದೋ ಪಂಥದ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ನಿನಗೆ ವಿರೋಧವಿದೆ ಎಂದು ಭಾವಿಸಿದ್ದೆ ಎಂದು ಹೇಳಿದೆ. ಅವಳು, “ಈ ಆರು ತಿಂಗಳಲ್ಲಿ ನೀನು, ನಾನು ಒಬ್ಬ ಪತಿ ಎಂದರೆ ಹೇಗಿರಬೇಕು ಎಂದು ಬಯಸುತ್ತಿದ್ದೆನೋ ಅಂತಹ ಪತಿಯಾಗಿದ್ದೀಯ. ನೀನು ಹಿಂದೆ ಇದ್ದ ದಾರಿಗೆ ಮತ್ತೆ ಹಿಂತಿರುಗಲು ನಾನು ಬಿಡುವುದಿಲ್ಲ. ಹೋಗಿ ಧ್ಯಾನ ಮಾಡು!” ಎಂದು ಹೇಳಿದಳು.
ಊಹಿಸಿಕೊಳ್ಳಿ! ಅದು 33 ವರ್ಷಗಳ ಹಿಂದೆ, ಮತ್ತು ನನ್ನ ಧ್ಯಾನ (ಮತ್ತು ನನ್ನ ಮದುವೆ) ಎಲ್ಲವೂ ತುಂಬಾ ಮಧುರವಾಗಿತ್ತು. ನಾನು ಸಾಕಷ್ಟು ಸಮಯದಿಂದ ಈ ಮಾರ್ಗದಲ್ಲಿರುವುದರಿಂದ ಹಲವು ಕ್ಷೇತ್ರಗಳಲ್ಲಿ ಗುರುಗಳ ಬೋಧನೆಯ ಮಾತುಗಳು ನನ್ನ ಜೀವನದಲ್ಲಿ ಮತ್ತು ಆಲೋಚನೆಯಲ್ಲಿ ನಿಜವಾಗುತ್ತಿತ್ತು. ನನಗೆ “ಸಾವಿರ ವರ್ಷಗಳು ಅಥವಾ ನಾಳೆಯವರೆಗೆ” ಎಂಬ ಪದಗಳು ಸಂತೋಷದಾಯಕ ಭರವಸೆಯಾಗಿದ್ದು, ದಿನದಿಂದ ದಿನಕ್ಕೆ ಗುರುಗಳು ನನಗೆ ಆತ್ಮವು ಎಲ್ಲದರ ನಿಜವಾದ ವಾಸ್ತವವೆಂಬುದರ ಬಗ್ಗೆ ನನ್ನ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತಿದ್ದಾರೆ.

— ಡಿ. ಸಿ. ಎಚ್., ಟೆಕ್ಸಾಸ್

ಅವರ ದೃಷ್ಟಿಯಲ್ಲಿ ಇಡೀ ವಿಶ್ವವೇ ಪ್ರೀತಿಯ ಸಮುದ್ರದಲ್ಲಿ ಮುಳುಗಿತ್ತು; ಅವರು ತುಂಬಾ ಸಲ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು, “ಈಗ ಕೊನೆಗೂ ನನಗೆ ಪ್ರೀತಿ ಎಂದರೆ ಏನೆಂದು ತಿಳಿಯಿತು! ದೇವರ ಪ್ರೀತಿ, ಇದು ಉದಾತ್ತ ಮಾನವನ ವಾತ್ಸಲ್ಯವನ್ನೂ ನಾಚಿಸುವಂತಿದೆ. ಶಾಶ್ವತ ಪ್ರೀತಿ, ಜಯಿಸಲಾಗದ ಪ್ರೀತಿ, ಎಲ್ಲವನ್ನೂ ತೃಪ್ತಿಪಡಿಸುವ ಪ್ರೀತಿ!” ಪ್ರೀತಿಯು ವಿಶ್ವವನ್ನು ಸೃಷ್ಟಿಸುತ್ತದೆ ಮತ್ತು ಪೋಷಿಸುತ್ತದೆ ಮತ್ತು ಎಲ್ಲಾ ಸೃಷ್ಟಿಯಾದ ವಸ್ತುಗಳು, ಮಾನುಷ ಅಥವಾ ಅಮಾನುಷ, ಈ ಪ್ರೀತಿಯನ್ನು ಕಂಡುಕೊಳ್ಳುವುದೇ ಎಲ್ಲದರ ಉದ್ದೇಶವಾಗಿದೆ, ಈ ಅಮರ ಆನಂದವು ಜೀವನದ ಮೂಲತತ್ವವಾಗಿದೆ, ಎಂದು ಅವರು ಎಲ್ಲಾ ಸಾಧ್ಯತೆಗಳು ಅಥವಾ ಅನುಮಾನಗಳನ್ನು ಮೀರಿ ತಿಳಿದಿದ್ದರು. ಅವರ ಮನಸ್ಸು ವಿಸ್ತಾರಗೊಳ್ಳುತ್ತಿದೆ, ಅವರ ತಿಳುವಳಿಕೆಯು, ಅನಂತವಾಗಿ ವಿಸ್ತರಿಸುತ್ತಿದೆ, ಬೆಳೆಯುತ್ತಿದೆ, ಬ್ರಹ್ಮಾಂಡದ ಎಲ್ಲವನ್ನೂ ಸ್ಪರ್ಶಿಸುತ್ತದೆ, ಎಲ್ಲವನ್ನೂ, ಎಲ್ಲಾ ಆಲೋಚನೆಗಳನ್ನು ತನ್ನೊಂದಿಗೆ ಬಂಧಿಸುತ್ತದೆ ಎಂದು ಅವರಿಗೆ ತಿಳಿದಿತ್ತು. “ಅವನು ಸುತ್ತಳತೆಯೇ ಇಲ್ಲದ ವೃತ್ತದ ನಟ್ಟನಡುವಿನಲ್ಲಿದ್ದಾನೆ.”

ಪರಮಾಣು-ಪ್ರಕೃತಿಯ ನೃತ್ಯ

ಅವರು ಉಸಿರಾಡಿದ ಗಾಳಿಯು ಸ್ನೇಹಪರ, ಆತ್ಮೀಯ, ಜೀವನದ ಪ್ರಜ್ಞೆಯುಳ್ಳದ್ದಾಗಿದೆ. ಯಾವುದೇ ಸ್ಥಳಕ್ಕೆ ತಾನು ಅಪರಿಚಿತ ಅಥವಾ ಅನ್ಯಲೋಕದವನು ಎಂಬ ಭಾವನೆ ಬರದಂತೆ ಇರಲು ಇಡೀ ಪ್ರಪಂಚವೇ ತನ್ನ “ಮನೆ” ಎಂಬ ಭಾವನೆ ಬರುತ್ತಿತ್ತು; ಅವರು ನೋಡದೇ ಇರುವ ಪರ್ವತಗಳು, ಸಮುದ್ರಗಳು, ದೂರದ ದೇಶಗಳೂ ಸಹ, ಅವರ ಬಾಲ್ಯದ ಮನೆಯಂತೆ ಅವರದೇ ಎಂದೆನಿಸುತ್ತದೆ. ಅವರು ಎಲ್ಲಿ ನೋಡಿದರೂ, ಪ್ರಕೃತಿಯ “ಅಣು-ನೃತ್ಯ”ವನ್ನು; ಗಾಳಿಯು ಬೆಳಕಿನ ಅಸಂಖ್ಯಾತ ಚಲಿಸುವ ಕಣಗಳಿಂದ ತುಂಬಿರುವುದನ್ನು ನೋಡಿದರು.

ಈ ವಾರಗಳಲ್ಲಿ, ಅವರು ಎಂದಿನಂತೆ ತಮ್ಮ ದೈನಂದಿನ ಕರ್ತವ್ಯಗಳನ್ನು ಮಾಡಿದರು, ಆದರೆ ಇದುವರೆಗೆ ತಿಳಿದಿಲ್ಲದ ದಕ್ಷತೆ ಮತ್ತು ವೇಗದಲ್ಲಿ. ಟೈಪ್ ಮಾಡಿದ ಕಾಗದಗಳು ಅವರ ಯಂತ್ರದಿಂದ ಹಾರತೊಡಗಿದವು, ಅವರ ವಾಡಿಕೆಯ ಸಮಯದ ನಾಲ್ಕನೇ ಒಂದು ಭಾಗದಲ್ಲೇ ದೋಷವಿಲ್ಲದೆ ಪೂರ್ಣಗೊಳಿಸಿದರು. ದಣಿವು ಅವರಿಗೆ ತಿಳಿದಿರಲಿಲ್ಲ; ಅವರ ಕೆಲಸವು ಮಗುವಿನ ಆಟದಂತೆ, ಸಂತೋಷ ಮತ್ತು ನಿರಾತಂಕವಾಗಿ ತೋರುತ್ತಿತ್ತು. ತಮ್ಮ ಗ್ರಾಹಕರೊಂದಿಗೆ ಖುದ್ದಾಗಿ ಅಥವಾ ಟೆಲಿಫೋನ್ ಮೂಲಕ ಮಾತನಾಡುತ್ತಾ, ಅವರ ಆಂತರಿಕ ಸಂತೋಷವು ಪ್ರತಿಯೊಂದು ಕ್ರಿಯೆ ಮತ್ತು ಸನ್ನಿವೇಶವನ್ನು ವಿಶ್ವಾತ್ಮಕ ಭಾವದಿಂದ ಆವರಿಸಿದೆ, ಅವರಿಗೆ ಈ ಜನರು, ಈ ದೂರವಾಣಿ, ಈ ಟೇಬಲ್, ಈ ಧ್ವನಿ ಎಲ್ಲವೂ ದೇವರು, ದೇವರು ತನ್ನ ಮತ್ತೊಂದು ಆಕರ್ಷಕ ವೇಷದಲ್ಲಿ ತನ್ನನ್ನು ತಾನು ವ್ಯಕ್ತಪಡಿಸುತ್ತಿರುವುದು.

ಅವರ ಕೆಲಸದ ಮಧ್ಯೆ, ಅವರಿಗೆ ಈ ಅದ್ಭುತವಾದ, ಹೇಳಲಾಗದ ಸಂತೋಷವನ್ನು ನೀಡಿದ ದೇವರ ಒಳ್ಳೆಯತನವನ್ನು ನೆನೆದು ಅವರು ಇದ್ದಕ್ಕಿದ್ದಂತೆ ಭಾವಪರವಶರಾಗುತ್ತಿದ್ದರು. ಅಂತಹ ಸಮಯದಲ್ಲಿ ಅವರ ಉಸಿರು ಸಂಪೂರ್ಣವಾಗಿ ನಿಲ್ಲುತ್ತಿತ್ತು; ಅವರು ಅನುಭವಿಸುವ ಪೂಜನೀಯ ವಿಸ್ಮಯವು ಒಳಗೆ ಮತ್ತು ಹೊರಗೆ ಸಂಪೂರ್ಣ ನಿಶ್ಚಲತೆಯೊಂದಿಗೆ ಇರುತ್ತಿತ್ತು. ಅವರ ಎಲ್ಲಾ ಪ್ರಜ್ಞೆಯ ಆಧಾರವು ಅಳೆಯಲಾಗದ ಮತ್ತು ಹೇಳಲಾಗದ ಕೃತಜ್ಞತೆಯ ಭಾವವಾಗಿತ್ತು; ಇತರರಿಗೆ ತಮ್ಮೊಳಗೆ ಇರುವ ಸಂತೋಷವನ್ನು ತಿಳಿಯಪಡಿಸುವ ಹಂಬಲವಿತ್ತು; ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಮಾನವ ಗ್ರಹಿಕೆಗಳನ್ನು ಮೀರಿದ ದೈವೀ ಜ್ಞಾನ, ಪ್ರಪಂಚದೊಂದಿಗೆ ಎಲ್ಲವೂ ಚೆನ್ನಾಗಿದೆ, ಎಲ್ಲವೂ ವಿಶ್ವಾತ್ಮಕ ಪ್ರಜ್ಞೆ, ಅಮರ ಆನಂದದ ಗುರಿಯತ್ತ ಸಾಗುತ್ತಿದೆ ಎನ್ನುವ ಭಾವವಿತ್ತು. ಈ ಜ್ಞಾನೋದಯದ ಸ್ಥಿತಿಯು ಸುಮಾರು ಎರಡು ತಿಂಗಳುಗಳ ಕಾಲ ಮನುಷ್ಯನೊಂದಿಗೆ ಇತ್ತು ಮತ್ತು ನಂತರ ಕ್ರಮೇಣ ದೂರವಾಯಿತು. ಕೆಲವು ವೈಶಿಷ್ಟ್ಯಗಳು, ವಿಶೇಷವಾಗಿ ದೈವೀ ಶಾಂತಿ ಮತ್ತು ಸಂತೋಷದ ಭಾವನೆ, ಅವರು ಸ್ವಯಂ-ಸಾಕ್ಷಾತ್ಕಾರದ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಿದಾಗಲೆಲ್ಲಾ ಹಿಂದಿರುಗಿದರೂ ಅದು ತನ್ನ ಎಲ್ಲಾ ಮೊದಲಿನ ಶಕ್ತಿಯೊಂದಿಗೆ ಹಿಂತಿರುಗಲಿಲ್ಲ.

"ಯೋಗದ ಅಭ್ಯಾಸವು ದೇವರ ಅನುಗ್ರಹವನ್ನು ಉನ್ನತ ರೀತಿಯಲ್ಲಿ ತರುತ್ತದೆ"

ಶ್ರೀ ಜ್ಞಾನಮಾತಾರವರು ಪರಮಹಂಸ ಯೋಗಾನಂದರ ಅತ್ಯಂತ ಹಿರಿಯ ಕ್ರಿಯಾ ಯೋಗ ಶಿಷ್ಯರಲ್ಲಿ ಒಬ್ಬರು, ಅವರು ಭಕ್ತರಿಗೆ ನೀಡಿದ ಅವರ ವಿವೇಕಯುಕ್ತ ಮತ್ತು ಪ್ರೀತಿಯ ಸಲಹೆಯನ್ನು ಗಾಡ್ ಅಲೋನ್: ದಿ ಲೈಫ್ ಅಂಡ್ ಲೆಟರ್ಸ್ ಆಫ್ ಎ ಸೇಂಟ್ ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. 1951 ರಲ್ಲಿ ಅವರ ನಿಧನದ ನಂತರ, ಗುರುಗಳು ತಮ್ಮ ಇತರ ಶಿಷ್ಯರಿಗೆ ಜ್ಞಾನಮಾತಾ ಸಂಪೂರ್ಣ ವಿಮೋಚನೆಯನ್ನು ಸಾಧಿಸಿದ್ದಾರೆ ಎಂದು ಹೇಳಿದರು. ಪರಮಹಂಸಜಿ ವಿವರಿಸಿದರು:

[ಅವರ ಮರಣದ ಎರಡು ದಿನಗಳ ಮೊದಲು] ನಿರ್ವಿಕಲ್ಪ ಸಮಾಧಿಗಾಗಿ ಅವರು ನನ್ನನ್ನು ಕೇಳಿದರು; ಆದರೆ ನಾನು ಹೇಳಿದೆ, “ನಿಮಗೆ ಅದರ ಅಗತ್ಯವಿಲ್ಲ. ನಾನು ನಿಮ್ಮನ್ನು ದೇವರಲ್ಲಿ ನೋಡಿದೆ. ನೀವು ಅರಮನೆಯನ್ನೇ ತಲುಪಿರುವಾಗ, ಇನ್ನು ಮುಂದೆ ಉದ್ಯಾನಕ್ಕೆ ಹೋಗಬೇಕೆಂದು ಏಕೆ ಬಯಸುತ್ತೀರಿ?…

ಅವರು ತಮ್ಮ ಹಿಂದಿನ ಜನ್ಮ ಮತ್ತು ಈ ಜನ್ಮದಲ್ಲಿ ತಮ್ಮ ಸ್ವಂತ ಕರ್ಮವನ್ನು ಸಂಪೂರ್ಣವಾಗಿ ದಹಿಸಿಕೊಂಡಿದ್ದರು ಮತ್ತು ಭಗವಂತನ ಕೃಪೆಯಿಂದ ಈ ಜೀವನದಲ್ಲಿ ಅತ್ಯುನ್ನತ ಸಮಾಧಿ ಇಲ್ಲದೆ ಶಾಶ್ವತ ಸ್ವಾತಂತ್ರ್ಯಕ್ಕೆ ಅವರು ಸೆಳೆಯಲ್ಪಟ್ಟರು. ಇದರರ್ಥ ಜ್ಞಾನಮಾತೆಗೆ ಅತ್ಯುನ್ನತ ಸಮಾಧಿ (ನಿರ್ವಿಕಲ್ಪ ಸಮಾಧಿ) ಸಿಗಲಿಲ್ಲ ಎಂದಲ್ಲ. ಅವರು ಅದನ್ನು ತಮ್ಮ ಹಿಂದಿನ ಜನ್ಮದಲ್ಲೇ ಹೊಂದಿದ್ದರು. ಆದರೆ — ಅವರ ಕೋಣೆಯಲ್ಲಿರುವ ಪುಟ್ಟ ಫಲಕದ ಮೇಲೆ ಬರೆದಿರುವಂತೆ: “ದೇವರು ಒಬ್ಬನೇ” — ಈ ಜೀವನದಲ್ಲಿ ದೇವರ ಅನುಗ್ರಹ ಒಂದೇ ಅವರ ನೋವು-ರಹಿತ, ಯಶಸ್ವಿ ಆತ್ಮವನ್ನು ಸರ್ವವ್ಯಾಪಿ ವಿಮೋಚನೆಗೆ ಎತ್ತಿತು….

ಯೋಗದ ನಿರಂತರ ಅಭ್ಯಾಸದಿಂದ ಮಾತ್ರ ಭಗವಂತನ ಅನುಗ್ರಹವು ಅತ್ಯುನ್ನತ ರೀತಿಯಲ್ಲಿ ದೊರೆಯುತ್ತದೆ ಎಂಬುದನ್ನು ಎಲ್ಲಾ ಭಕ್ತರು ನೆನಪಿನಲ್ಲಿಟ್ಟುಕೊಳ್ಳಬೇಕು, ಕೃಷ್ಣನು ಅರ್ಜುನನಿಗೆ ಹೇಳಿದನು: “ಓ ಅರ್ಜುನ, ಜ್ಞಾನಯೋಗ ಮಾರ್ಗದಲ್ಲಿ ನಿರತನಾಗಿರುವವನಿಗಿಂತಲೂ, ಅಥವಾ ಕರ್ಮಯೋಗದಲ್ಲಿ ನಿರತನಾಗಿರುವವನಿಗಿಂತಲೂ, ಅಥವಾ ಯಾವುದೇ ಇತರ ಮಾರ್ಗಗಳಿಗಿಂತ ಯೋಗದ ಮಾರ್ಗವು ಹೆಚ್ಚಿನದು. ಆದ್ದರಿಂದ, ಅರ್ಜುನ, ನೀನು ಯೋಗಿಯಾಗು!”

ಇದನ್ನು ಹಂಚಿಕೊಳ್ಳಿ