Mahavatar Babaji

ಮಹಾವತಾರ್ ಬಾಬಾಜಿಯವರ ಜನನ ಮತ್ತು ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಮರಣವಿಲ್ಲದ ಅವತಾರವಾದ ಬಾಬಾಜಿಯವರು ಭಾರತದ ದೂರದ ಹಿಮಾಲಯದ ಪ್ರದೇಶಗಳಲ್ಲಿ ಅಗಣಿತ ವರ್ಷಗಳಿಂದ ನೆಲೆಸಿದ್ದಾರೆ ಎಂದು ಪರಮಹಂಸ ಯೋಗಾನಂದರು ಯೋಗಿಯ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಬಾಬಾಜಿಯವರು ಪುಣ್ಯಶಾಲಿಯಾದ ಕೆಲವರಿಗೆ ಮಾತ್ರ ತಮ್ಮನ್ನು ತಾವು ಅಪರೂಪವಾಗಿ ಬಹಿರಂಗವಾಗಿ ಪ್ರಕಟಪಡಿಸಿಕೊಳ್ಳುತ್ತಾರೆ.

ಕಳೆದುಹೋಗಿದ್ದ ವೈಜ್ಞಾನಿಕ ಧ್ಯಾನ ತಂತ್ರವಾದ ಕ್ರಿಯಾ ಯೋಗವನ್ನು ಈ ಯುಗದಲ್ಲಿ ಪುನರುಜ್ಜೀವನಗೊಳಿಸಿದವರು ಮಹಾವತಾರ್ ಬಾಬಾಜಿ. ತಮ್ಮ ಶಿಷ್ಯ ಲಾಹಿರಿ ಮಹಾಶಯರಿಗೆ ಕ್ರಿಯಾ ದೀಕ್ಷೆಯನ್ನು ದಯಪಾಲಿಸುತ್ತಾ ಬಾಬಾಜಿ ಹೇಳಿದರು, “ಈ ಹತ್ತೊಂಬತ್ತನೆಯ ಶತಮಾನದಲ್ಲಿ ನಿನ್ನ ಮೂಲಕ ನಾನು ಪ್ರಪಂಚಕ್ಕೆ ಕೊಡುತ್ತಿರುವ ಈ ಕ್ರಿಯಾಯೋಗವೆಂಬುದು ಸಹಸ್ರಾರು ವರ್ಷಗಳ ಹಿಂದೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ವಿಜ್ಞಾನದ ಪುನರುಜ್ಜೀವನವಷ್ಟೇ; ಅದೇ ಅನಂತರ ಪತಂಜಲಿ, ಕ್ರಿಸ್ತ, ಸಂತ ಜಾನ್, ಸಂತ ಪಾಲ್ ಮತ್ತಿತರ ಶಿಷ್ಯರ ತಿಳಿವಳಿಕೆಗೆ ಬಂದುದು.”

1920 ರಲ್ಲಿ ಪರಮಹಂಸ ಯೋಗಾನಂದರು ಅಮೇರಿಕಾಕ್ಕೆ ತೆರಳುವ ಸ್ವಲ್ಪ ಸಮಯದ ಮೊದಲು, ಮಹಾವತಾರ್ ಬಾಬಾಜಿ ಕಲ್ಕತ್ತಾದಲ್ಲಿರುವ ಯೋಗಾನಂದಜಿಯವರ ಮನೆಗೆ ಬಂದರು, ಅಲ್ಲಿ ಯುವ ಸನ್ಯಾಸಿಯಾದ ಯೋಗಾನಂದರು ಕೈಗೊಳ್ಳಲಿರುವ ಧ್ಯೇಯೋದ್ದೇಶದ ಬಗ್ಗೆ ದೈವೀ ಭರವಸೆಗಾಗಿ ಆಳವಾಗಿ ಪ್ರಾರ್ಥಿಸುತ್ತಿದ್ದರು. ಬಾಬಾಜಿಯವರು ಯೋಗಾನಂದರಿಗೆ ಹೇಳಿದರು: “ನಿನ್ನ ಗುರುವಿನ ಅಪ್ಪಣೆಯನ್ನು ಪಾಲಿಸು. ಅಮೆರಿಕಕ್ಕೆ ಹೋಗು, ಹೆದರಬೇಡ; ನಿನಗೆ ರಕ್ಷಣೆಯಿದೆ. ಪಶ್ಚಿಮದಲ್ಲಿ ಕ್ರಿಯಾಯೋಗದ ಸಂದೇಶವನ್ನು ಪ್ರಸಾರ ಮಾಡಲು ನಿನ್ನನ್ನೇ ನಾನು ಆಯ್ಕೆ ಮಾಡಿರುವುದು.”

ಮಹಾವತಾರ್‌ ಬಾಬಾಜಿಯವರ ಕುರಿತು ಹೆಚ್ಚಿನ ಮಾಹಿತಿಗಾಗಿ ಓದಿ: ಬಾಬಾಜಿ, ಆಧುನಿಕ ಭಾರತದ ಯೋಗಿ-ಕ್ರಿಸ್ತ

ಮಹಾವತಾರ್‌ ಬಾಬಾಜಿಯವರಿಂದ ಒಂದು ಅನುಗ್ರಹ

ಇದನ್ನು ಹಂಚಿಕೊಳ್ಳಿ