(ಈಸ್ಟರ್ ಋತುವಿನಲ್ಲಿ ಸಾಧಕರು ತಮ್ಮ ಪ್ರಜ್ಞೆಯನ್ನು ಅನಂತ ಕ್ರಿಸ್ತ ಪ್ರಜ್ಞೆಯೊಡನೆ ಶ್ರುತಿಗೂಡಿಸುವ ಮೂಲಕ ಅದನ್ನು ವಿಸ್ತರಿಸುವಂತೆ ಪರಮಹಂಸ ಯೋಗಾನಂದರು ಎಲ್ಲ ಸಾಧಕರನ್ನು ಪ್ರೋತ್ಸಾಹಿಸಿದರು — ಕ್ರಿಸ್ತ ಪ್ರಜ್ಞೆಯೆಂದರೆ ಇಡೀ ಸೃಷ್ಟಿಯಲ್ಲಿ ಅಂತರ್ಗತವಾಗಿರುವ ಭಗವಂತನ ಪ್ರಕ್ಷೇಪಿತ ಪ್ರಜ್ಞೆ; ಯೇಸು, ಕೃಷ್ಣ ಮತ್ತು ಇತರ ಅವತಾರಗಳಿಂದ ಅಭಿವ್ಯಕ್ತಿಸಲ್ಪಟ್ಟ ವಿಶ್ವವ್ಯಾಪಿ ಪ್ರಜ್ಞೆ, ಅಂದರೆ ಭಗವಂತನೊಡನೆಯ ಐಕ್ಯತೆ. ಕೆಳಗೆ ಕೊಟ್ಟಿರುವುದು ಅವರು ನೀಡಿದ ಧ್ಯಾನಗಳಲ್ಲಿ ಒಂದು:)
ಕ್ರಿಸ್ತನು ಉದಯವಾಗಿದ್ದಾನೆ. ಅವನು ಭೌತ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರದ ಮಿತಿಗಳನ್ನು ಮೀರಿ ಸರ್ವವ್ಯಾಪಿತ್ವದಲ್ಲಿ ಪುನರುತ್ಥಾನಗೊಂಡಿದ್ದಾನೆ. ಸರ್ವವ್ಯಾಪಿ ಕ್ರಿಸ್ತ ಪ್ರಜ್ಞೆಯೊಡನೆ ಐಕ್ಯತೆಯನ್ನು ಹೊಂದಿರುವ ಏಸುವು ಪ್ರತಿಯೊಂದು ಸುಮದ ಹೃದಯದಲ್ಲಿ, ಸೂರ್ಯಪ್ರಕಾಶದ ಪ್ರತಿ ಕಿರಣದಲ್ಲಿ, ಪ್ರತಿ ಉದಾತ್ತ ಚಿಂತನೆಯಲ್ಲಿ ಪುನರ್‌ಜೀವಿತಗೊಂಡಿದ್ದಾನೆ. ಅಣುಯುಗದಲ್ಲಿ ಅವನು ಉದಯಿಸಿದ್ದಾನೆ ಹಾಗೂ ಅದರ ಎಲ್ಲ ವಿನಾಶಗಳು, ಜ್ಞಾನ ಮತ್ತು ವಿಶ್ವವ್ಯಾಪಿ ಪ್ರೇಮದ ತೊಟ್ಟಿಲಿನಿಂದ ಉದಯಿಸಿದ ಅವನ ನವ ಜೀವನ, ನವ ಮಾನವೀಯತೆಯ ಚೈತನ್ಯದ ಹುಟ್ಟನ್ನು ಮರೆಮಾಚಲು ಸಾಧ್ಯವಿಲ್ಲ.
ಅವನು ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ, ನಮ್ಮ ಆತ್ಮಗಳಲ್ಲಿ ಮರುಹುಟ್ಟನ್ನು ಪಡೆದಿದ್ದಾನೆ — ಅವನ ಮತ್ತು ನಮ್ಮ ನಡುವೆ ಯಾವುದೇ ಅಗಲಿಕೆಯಿಲ್ಲ. ಅವನು ನಮ್ಮ ಪ್ರೇಮದ ಉದ್ಯಾನವನದಲ್ಲಿ, ನಮ್ಮ ಪವಿತ್ರ ಭಕ್ತಿಯ ತೋಟದಲ್ಲಿ, ನಮ್ಮ ಧ್ಯಾನ ಮತ್ತು ಕ್ರಿಯಾಯೋಗದ ಉದ್ಯಾನದಲ್ಲಿ ನಡೆದಾಡುತ್ತಿದ್ದಾನೆ.
ಅವನು ಪ್ರತಿ ಪರಮಾಣು ಮತ್ತು ಜೀವಕೋಶದಲ್ಲಿಯೂ ಸಚೇತನಗೊಂಡಿದ್ದಾನೆ, ಅವನು ಮೇಘಗಳಲ್ಲಿ ಸಚೇತನಗೊಂಡಿದ್ದಾನೆ, ಅವನು ಎಲ್ಲಾ ಗ್ರಹಗಳಲ್ಲಿಯೂ ಸಚೇತನಗೊಂಡಿದ್ದಾನೆ. ಅವನು ಬ್ರಹ್ಮಾಂಡಗಳಲ್ಲಿ ಮತ್ತು ಬ್ರಹ್ಮಾಂಡಗಳ ಸುತ್ತಲೂ ಸುತ್ತುತ್ತಿರುವ ವಿಕಿರಣಗಳಲ್ಲಿ ಮತ್ತು ಅತೀತವಾದ ಶೀತಲ ಬೆಳಕಿನಲ್ಲಿ ಸಚೇತನಗೊಂಡಿದ್ದಾನೆ. ಅವನು ಬ್ರಹ್ಮಾಂಡಗಳಿಂದ ಬ್ರಹ್ಮಾಂಡ ಪ್ರಜ್ಞೆಯ ಶಾಂತತೆಯಲ್ಲಿ ಜಾಗೃತಗೊಂಡಿದ್ದಾನೆ. ಅವನು ನಿಮ್ಮ ಭಕ್ತಿ ಮತ್ತು ಕ್ರಿಯಾ ಯೋಗದ ಮೂಲಕ ನಿಮ್ಮಲ್ಲಿ ಮತ್ತೆ ಜಾಗೃತಗೊಳ್ಳುತ್ತಾನೆ. ನಿಮ್ಮ ಜ್ಞಾನವು ಜಾಗೃತಗೊಂಡಾಗ, ನಿಮ್ಮೊಳಗಿರುವ ಕ್ರಿಸ್ತನ ಪುನರುತ್ಥಾನವನ್ನು ನೀವು ಅನುಭವಿಸುತ್ತೀರಿ. ಮತ್ತು ನಿಮ್ಮ ಧ್ಯಾನ ಮತ್ತು ದೈವೀ ಸಂಸರ್ಗದ ಮೂಲಕ ನೀವು ಅವನೊಂದಿಗೆ ದೇಹ ಮತ್ತು ಮರ್ತ್ಯ ಪ್ರಜ್ಞೆಯ ಗೋರಿಯಿಂದ ಆತ್ಮದ ನಿತ್ಯ ಆನಂದದಾಯಕ ಅನಂತತೆಯೆಡೆಗೆ ಪುನರುತ್ಥಾನಗೊಳ್ಳುವಿರಿ.
“ಓ ಕ್ರಿಸ್ತನೇ, ನೀನು ಭಗವಂತನಲ್ಲಿ ಪುನರುತ್ಥಾನಗೊಂಡಿರುವೆ. ನಿನ್ನ ಪುನರುತ್ಥಾನದಲ್ಲಿ ಮತ್ತು ನಿನ್ನ ವಾಗ್ದಾನದ ಭರವಸೆಯಲ್ಲಿ ನಾವು ಸಂತೋಷಪಡುತ್ತೇವೆ: ಭಗವಂತನ ಮಕ್ಕಳಾಗಿ, ದೇಹದ ಪಂಜರದಲ್ಲಿಳಿದ ನಾವು ಕೂಡ ನಮ್ಮ ತಂದೆಯ ಸಾಮ್ರಾಜ್ಯಕ್ಕೆ ಮರಳುತ್ತೇವೆ. ಈ ಈಸ್ಟರ್‌ನಂದು, ನಮ್ಮ ಎಲ್ಲ ಭಕ್ತಿ, ನಮ್ಮ ಹೃದಯದ ಎಲ್ಲ ಕೂಗುಗಳು, ನಮ್ಮೊಳಗಿನ ಒಳ್ಳೆಯತನದ ಎಲ್ಲ ಸುಗಂಧ, ನಾವು ಸರ್ವವ್ಯಾಪಿಯಾದ ನಿನ್ನ ಪಾದಗಳಲ್ಲಿ ಅರ್ಪಿಸುತ್ತಿದ್ದೇವೆ. ನಾವು ನಿನ್ನವರು, ನಮ್ಮನ್ನು ಸ್ವೀಕರಿಸು! ಕ್ರಿಸ್ತ ಪ್ರಜ್ಞೆಯ ಮೂಲಕ, ಚಿರಂತನ ಭಗವತ್ ಚೇತನದಲ್ಲಿ ನಿನ್ನೊಂದಿಗೆ ನಮ್ಮನ್ನು ಪುನರುತ್ಥಾನಗೊಳಿಸು. ನಮ್ಮನ್ನು ಆ ಪರಮಾನಂದದ ಸಾಮ್ರಾಜ್ಯದಲ್ಲಿ ಎಂದೆಂದಿಗೂ ನೆಲೆಗೊಳಿಸು.”

ಈಸ್ಟರ್‌ನ ಬೆಳಗಿನ ಸಮಯಕ್ಕಾಗಿ ಪ್ರಾರ್ಥನೆ ಮತ್ತು ದೃಢೀಕರಣ
“ಸ್ವರ್ಗೀಯ ಕ್ರಿಸ್ತನೇ, ನಿನ್ನ ಪ್ರಜ್ಞೆಯು ನಮ್ಮ ಪ್ರಜ್ಞೆಯನ್ನು ಆವರಿಸಲಿ. ನಿನ್ನಲ್ಲಿ ನಮಗೆ ಹೊಸ ಜನ್ಮವನ್ನು ದಯಪಾಲಿಸು.”
ದೃಢೀಕರಿಸಿ ಮತ್ತು ಅನುಭವಿಸಿ:
“ಪರಮಪಿತನೇ, ಕ್ರಿಸ್ತ ಪ್ರಜ್ಞೆಯಲ್ಲಿ ನನ್ನನ್ನು ಜಾಗೃತಗೊಳಿಸು.
ಕ್ರಿಸ್ತ ಹಾಗು ನಾನು ಒಂದೇ.
ಆನಂದ ಹಾಗು ನಾನು ಒಂದೇ.
ಶಾಂತಿ ಹಾಗು ನಾನು ಒಂದೇ.
ಪ್ರಜ್ಞಾನ ಹಾಗು ನಾನು ಒಂದೇ.
ಪ್ರೇಮ ಮತ್ತು ನಾನು ಒಂದೇ.
ಪರಮಾನಂದ ಮತ್ತು ನಾನು ಒಂದೇ.
ಕ್ರಿಸ್ತ ಮತ್ತು ನಾನು ಒಂದೇ. ಕ್ರಿಸ್ತ ಮತ್ತು ನಾನು ಒಂದೇ. ಕ್ರಿಸ್ತ ಮತ್ತು ನಾನು ಒಂದೇ.”

“ಪುನರುತ್ಥಾನದ ಕುರಿತಾದ ಒಂದು ಧ್ಯಾನ” ಇದು ಪರಮಹಂಸ ಯೋಗಾನಂದರಿಂದ ರಚಿತವಾದ ದಿ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್: ದಿ ರಿಸರೆಕ್ಷನ್ ಆಫ್ ದಿ ಕ್ರೈಸ್ಟ್ ವಿದಿನ್ ಯು — ಎ ರಿವಿಲೇಟರಿ ಕಾಮೆಂಟರಿ ಆನ್ ದಿ ಒರಿಜಿನಲ್ ಟೀಚಿಂಗ್ಸ್ ಆಫ್ ಜೀಸಸ್ ಪುಸ್ತಕದಿಂದ ಆಯ್ದ ಭಾಗ