ದೃಢೀಕರಣದ ಶಕ್ತಿಯನ್ನು ಹೇಗೆ ಬಳಸಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು
ಶ್ರೀ ಶ್ರೀ ಪರಮಹಂಸ ಯೋಗಾನಂದರ ಸೈಂಟಿಫಿಕ್ ಹೀಲಿಂಗ್ ಅಫರ್ಮೇಶನ್ಸ್ ಪುಸ್ತಕದಿಂದ
ಮಾನವನ ನುಡಿಯು ಮಾನವನಲ್ಲಿರುವ ಪರಮಾತ್ಮನೇ ಆಗಿದೆ….ಪ್ರಾಮಾಣಿಕತೆ, ದೃಢನಂಬಿಕೆ, ಶ್ರದ್ಧೆ ಮತ್ತು ಅಂತರ್ಬೋಧೆಯಿಂದ ಸಂಪೂರಿತವಾದ ಮಾತುಗಳು ಅತಿಶಯವಾಗಿ ಆಸ್ಫೋಟಿಸುವ ಸ್ಪಂದನಾ ಬಾಂಬ್‌ಗಳಂತೆ, ಸ್ಫೋಟಿಸಿದಾಗ, ಕಷ್ಟಗಳ ಬಂಡೆಗಳನ್ನು ಛಿದ್ರ ಮಾಡಿ, ಬಯಸಿದ ಬದಲಾವಣೆಯನ್ನುಂಟು ಮಾಡುತ್ತವೆ.

ಖಿನ್ನತೆ ಅಥವಾ ಸಂತೋಷ, ಕಿರಿಕಿರಿ ಅಥವಾ ಶಾಂತತೆಯ ಪ್ರತಿಯೊಂದು ಆಲೋಚನೆಯು ಮೆದುಳಿನ ಜೀವಕೋಶಗಳಲ್ಲಿ ಸೂಕ್ಷ್ಮವಾದ ತೋಡುಗಳನ್ನು ಉಂಟುಮಾಡುತ್ತದೆ ಮತ್ತು ಅನಾರೋಗ್ಯ ಅಥವಾ ಯೋಗಕ್ಷೇಮದ ಕಡೆಗಿನ ಪ್ರವೃತ್ತಿಯನ್ನು ಬಲಪಡಿಸುತ್ತದೆ.
ಸುಪ್ತ ಪ್ರಜ್ಞೆಯಲ್ಲಿನ ಆರೋಗ್ಯ ಮತ್ತು ಅನಾರೋಗ್ಯದ ಆಲೋಚನಾ ವಿಧಾನದ ಅಭ್ಯಾಸವು ಪ್ರಬಲವಾದ ಪ್ರಭಾವ ಬೀರುತ್ತದೆ. ಪಟ್ಟುಬಿಡದ ಮಾನಸಿಕ ಅಥವಾ ದೈಹಿಕ ವ್ಯಾಧಿಗಳು ಸದಾ ಸುಪ್ತಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುತ್ತವೆ. ಅನಾರೋಗ್ಯವನ್ನು, ಅದರ ಗುಪ್ತ ಬೇರುಗಳನ್ನು ಕಿತ್ತು ಹಾಕುವುದರ ಮೂಲಕ ಗುಣಪಡಿಸಬಹುದು. ಆದ್ದರಿಂದಲೇ ಜಾಗೃತ ಮನಸ್ಸಿನ ಎಲ್ಲ ದೃಢೀಕರಣಗಳು ಸುಪ್ತಪ್ರಜ್ಞೆಯನ್ನು ವ್ಯಾಪಿಸುವಷ್ಟು ಪರಿಣಾಮಕಾರಿಯಾಗಿರಬೇಕು. ಹಾಗಿದ್ದಲ್ಲಿ, ಅವು ತಿರುಗಿ ಜಾಗೃತ ಮನಸ್ಸಿನ ಮೇಲೆ ತಾವಾಗಿಯೇ ಪ್ರಭಾವ ಬೀರುತ್ತವೆ. ಶಕ್ತಿಯುತವಾದ ಪ್ರಜ್ಞಾಪೂರ್ವಕ ದೃಢೀಕರಣಗಳು ಹೀಗೆ ಮನಸ್ಸು ಮತ್ತು ದೇಹದ ಮೇಲೆ ಸುಪ್ತಪ್ರಜ್ಞೆಯ ಮಾಧ್ಯಮದ ಮೂಲಕ ಪ್ರತಿಕ್ರಿಯಿಸುತ್ತವೆ.
ಶಕ್ತಿಯುತವಾದ ಪ್ರಜ್ಞಾಪೂರ್ವಕ ದೃಢೀಕರಣಗಳು ಹೀಗೆ ಮನಸ್ಸು ಮತ್ತು ದೇಹದ ಮೇಲೆ ಸುಪ್ತಪ್ರಜ್ಞೆಯ ಮಾಧ್ಯಮದ ಮೂಲಕ ಪ್ರತಿಕ್ರಿಯಿಸುತ್ತವೆ. ಇನ್ನೂ ಹೆಚ್ಚು ಪ್ರಬಲವಾದ ದೃಢೀಕರಣಗಳು ಸುಪ್ತಪ್ರಜ್ಞೆಯನ್ನಷ್ಟೇ ಅಲ್ಲದೆ ಅಲೌಕಿಕ ಶಕ್ತಿಗಳ ಐಂದ್ರಜಾಲಿಕ ಭಂಡಾರವಾದ ಅತೀತ ಮನಸ್ಸನ್ನೂ ತಲುಪುತ್ತವೆ.

ಸತ್ಯದ ಘೋಷಣೆಗಳನ್ನು ಸ್ವಯಂಪ್ರೇರಿತವಾಗಿ, ನಿರಾತಂಕವಾಗಿ, ಬುದ್ಧಿವಂತಿಕೆಯಿಂದ ಮತ್ತು ಭಕ್ತಿಯಿಂದ ಅಭ್ಯಾಸ ಮಾಡಬೇಕು. ಗಮನವನ್ನು ಬೇರೆಡೆಗೆ ಹೋಗಲು ಬಿಡಬಾರದು. ಒಮ್ಮೆ ಗಮನ ಸಡಿಲಗೊಂಡರೆ, ಚಿಕ್ಕ ಮಗುವಿನಂತೆ ಆ ಗಮನವನ್ನು ಮತ್ತೆ ಮತ್ತೆ ಮರಳಿಸಿ ಮತ್ತೊಮ್ಮೆ, ಪುನಃ ತಾಳ್ಮೆಯಿಂದ ನಿಗದಿತ ಕಾರ್ಯವನ್ನು ನಿರ್ವಹಿಸಲು ತರಬೇತಿ ನೀಡುವುದು ಅಗತ್ಯವಾಗಿದೆ.

ತಾಳ್ಮೆ ಮತ್ತು ಲಕ್ಷ್ಯವಿಡುವ, ಬುದ್ಧಿವಂತಿಕೆಯಿಂದ ಕೂಡಿದ ಪುನರಾವರ್ತನೆಗಳು ಪವಾಡವನ್ನುಂಟುಮಾಡುತ್ತವೆ. ದೀರ್ಘಕಾಲೀನ ಮಾನಸಿಕ ಅಥವಾ ದೈಹಿಕ ಕಾಯಿಲೆಗಳನ್ನು ವಾಸಿ ಮಾಡಲು ದೃಢೀಕರಣ ವಾಕ್ಯಗಳನ್ನು ಆಳವಾಗಿ ಹಾಗೂ ಅವಿರತವಾಗಿ (ಯಾವುದೇ ಬದಲಾಯಿಸದ ಅಥವಾ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಅವುಗಳನ್ನು ಸಂಪೂರ್ಣವಾಗಿ ಅಲಕ್ಷಿಸುತ್ತ) ಅವು ನಮ್ಮ ಗಾಢವಾದ ಅಂತರ್ಬೋಧೆಯ ನಿಶ್ಚಿತಾಭಿಪ್ರಾಯವಾಗುವವರೆಗೆ ಬಹುಬಾರಿ ಪುನರುಚ್ಚರಿಸಬೇಕಾಗುತ್ತದೆ.

ಹೇ ಪ್ರಜ್ವಲಿಸುವ ಪ್ರಕಾಶವೇ! ನನ್ನ ಹೃದಯವನ್ನು ಜಾಗೃತಗೊಳಿಸು, ನನ್ನ ಆತ್ಮವನ್ನು ಜಾಗೃತಗೊಳಿಸು, ನನ್ನ ಅಂಧಕಾರವನ್ನು ದಹಿಸು, ಮೌನದ ಮುಸುಕನ್ನು ಹರಿದು ಹಾಕು, ನನ್ನ ಮಂದಿರವನ್ನು ನಿನ್ನ ಮಹಿಮೆಗಳಿಂದ ತುಂಬಿಸು.

ನಿಮ್ಮ ದೃಢೀಕರಣ ವಾಕ್ಯವನ್ನು ಆಯ್ದುಕೊಂಡು ಅದನ್ನು ಪೂರ್ಣವಾಗಿ ಮೊದಲು ಗಟ್ಟಿಯಾಗಿ, ನಂತರ ಮೆಲ್ಲಗೆ ಮತ್ತು ನಿಧಾನವಾಗಿ, ನಿಮ್ಮ ದನಿಯು ಪಿಸುನುಡಿಯಾಗುವವರೆಗೆ ಪುನರುಚ್ಚರಿಸಿ. ನಂತರ ಕ್ರಮೇಣವಾಗಿ ಅದನ್ನು ಮನಸ್ಸಿನಲ್ಲೇ, ನಾಲಿಗೆ ಅಥವಾ ತುಟಿಗಳನ್ನು ಅಲುಗಿಸದೆ, ನೀವು ಆಳವಾದ ಅಪ್ರಜ್ಞಾಪೂರ್ವಕವಲ್ಲದ, ಆದರೆ ತಡೆರಹಿತ ಆಲೋಚನೆಯ ಗಾಢವಾದ ನಿರಂತರತೆಯನ್ನು — ಆಳವಾದ ಅಖಂಡ ಏಕಾಗ್ರತೆಯನ್ನು ಅನುಭವಿಸುವವರೆಗೆ ದೃಢೀಕರಿಸಿ.

ನೀವು ನಿಮ್ಮ ಮಾನಸಿಕ ದೃಢೀಕರಣವನ್ನು ಮುಂದುವರೆಸುತ್ತಾ, ಇನ್ನೂ ಆಳವಾಗಿ ಹೋದರೆ, ನಿಮಗೆ ಹೆಚ್ಚುತ್ತಿರುವ ಆನಂದದ ಮತ್ತು ಶಾಂತಿಯ ಅನುಭವವಾಗುತ್ತದೆ. ಆಳವಾದ ಏಕಾಗ್ರತೆಯ ಸ್ಥಿತಿಯಲ್ಲಿ ನಿಮ್ಮ ದೃಢೀಕರಣವು ಸುಪ್ತಪ್ರಜ್ಞೆಯ ಪ್ರವಾಹದೊಂದಿಗೆ ವಿಲೀನವಾಗಿ ನಂತರ ಅಭ್ಯಾಸ ಬಲದ ನಿಯಮದ ಮೂಲಕ ನಿಮ್ಮ ಜಾಗೃತ ಮನಸ್ಸಿನ ಮೇಲೆ ಪ್ರಭಾವ ಬೀರುವ ಶಕ್ತಿಯೊಂದಿಗೆ ಮತ್ತೆ ಹಿಂದಿರುಗಿ ಬರುತ್ತದೆ.

ಸದಾ ವೃದ್ಧಿಸುತ್ತಿರುವ ಶಾಂತಿಯನ್ನು ನೀವು ಅನುಭವಿಸುತ್ತಿರುವಾಗ, ನಿಮ್ಮ ದೃಢೀಕರಣ ಇನ್ನೂ ಆಳಕ್ಕಿಳಿದು, ಅತೀತ ಪ್ರಜ್ಞೆಯ ಕ್ಷೇತ್ರವನ್ನು ತಲುಪಿ, ನಂತರ ನಿಮ್ಮ ಜಾಗೃತ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಹಾಗೂ ನಿಮ್ಮ ಬಯಕೆಗಳನ್ನು ಈಡೇರಿಸುವಂತಹ ಅಸೀಮ ಶಕ್ತಿಯೊಂದಿಗೆ ಭರಿತವಾಗಿ ಹಿಂದಿರುಗಿ ಬರುತ್ತದೆ. ಸಂದೇಹ ಪಡದಿರಿ, ಆಗ ನೀವು ಈ ವೈಜ್ಞಾನಿಕ ಶ್ರದ್ಧೆಯ ಪವಾಡವನ್ನು ಸಾಕ್ಷೀಕರಿಸುವಿರಿ.
ದೃಢೀಕರಣಗಳನ್ನು ಹೇಗೆ ಅಭ್ಯಾಸ ಮಾಡಬೇಕು
- ನಿಮ್ಮ ನಿರ್ದಿಷ್ಟ ಅಗತ್ಯಕ್ಕಾಗಿ ಒಂದು ದೃಢೀಕರಣವನ್ನು ಆಯ್ಕೆ ಮಾಡಿ.
- ಬೆನ್ನುಮೂಳೆ ನೇರವಾಗಿಟ್ಟು ಕುಳಿತುಕೊಳ್ಳಿ.
- ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ದೃಷ್ಟಿಯನ್ನು ಮತ್ತು ಗಮನವನ್ನು ಭ್ರೂಮಧ್ಯದ ನಡುವಿನ ಬಿಂದುವಿನ ಮೇಲೆ ಕೇಂದ್ರೀಕರಿಸಿ.
- ನಂತರ, ಪರಮಹಂಸಜಿಯವರ ಹೇಳಿದ್ದಾರೆ, "ಆಳವಾಗಿ ಉಸಿರೆಳೆದುಕೊಳ್ಳಿ ಮತ್ತು ಉಸಿರನ್ನು ಹೊರಹಾಕಿ, ಮೂರು ಬಾರಿ ಈ ರೀತಿ ಮಾಡಿರಿ. ದೇಹವನ್ನು ವಿಶ್ರಾಂತ ಸ್ಥಿತಿಗೆ ತನ್ನಿ ಮತ್ತು ನಿಶ್ಚಲವಾಗಿರಿಸಿ....
- ಆತಂಕ, ಅಪನಂಬಿಕೆ, ಮತ್ತು ಚಿಂತೆ ಇವುಗಳನ್ನು ದೂರ ಮಾಡಿ....
- ದೃಢೀಕರಣವನ್ನು ಪೂರ್ಣವಾಗಿ ಮೊದಲು ಗಟ್ಟಿಯಾಗಿ, ನಂತರ ಮೆಲ್ಲಗೆ ಮತ್ತು ನಿಧಾನವಾಗಿ, ನಿಮ್ಮ ದನಿಯು ಪಿಸುನುಡಿಯಾಗುವವರೆಗೆ ಪುನರುಚ್ಚರಿಸಿ.
- ನಂತರ ಕ್ರಮೇಣವಾಗಿ ಅದನ್ನು ಮನಸ್ಸಿನಲ್ಲೇ, ನಾಲಿಗೆ ಅಥವಾ ತುಟಿಗಳನ್ನು ಅಲುಗಿಸದೆ, ನೀವು ಆಳವಾದ ಅಪ್ರಜ್ಞಾಪೂರ್ವಕವಲ್ಲದ, ಆದರೆ ತಡೆರಹಿತ ಆಲೋಚನೆಯ ಗಾಢವಾದ ನಿರಂತರತೆಯನ್ನು — ಆಳವಾದ ಅಖಂಡ ಏಕಾಗ್ರತೆಯನ್ನು ಅನುಭವಿಸುವವರೆಗೆ ದೃಢೀಕರಿಸಿ.
- ನೀವು ನಿಮ್ಮ ಮಾನಸಿಕ ದೃಢೀಕರಣವನ್ನು ಮುಂದುವರೆಸುತ್ತಾ, ಇನ್ನೂ ಆಳವಾಗಿ ಹೋದರೆ, ನಿಮಗೆ ಹೆಚ್ಚುತ್ತಿರುವ ಆನಂದದ ಮತ್ತು ಶಾಂತಿಯ ಅನುಭವವಾಗುತ್ತದೆ.
ಮುಂದಿನ ಓದುವಿಕೆ
ಶ್ರೀ ಶ್ರೀ ಪರಮಹಂಸ ಯೋಗಾನಂದರ ಸೈಂಟಿಫಿಕ್ ಹೀಲಿಂಗ್ ಅಫರ್ಮೇಶನ್ಸ್