ಭಗವತ್‌-ಸಾಕ್ಷಾತ್ಕಾರ: ವ್ಯಕ್ತಿಗಳು ಮತ್ತು ರಾಷ್ಟ್ರಗಳ ಸ್ವರ್ಗೀಯ ನಿಧಿ

ಪರಮಹಂಸ ಯೋಗಾನಂದರಿಂದ

(ದಿ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್:‌ ದ ರಿಸರೆಕ್ಷನ್‌ ಆಫ್‌ ದಿ ಕ್ರೈಸ್ಟ್ ವಿದಿನ್‌ ಯು, ಲ್ಯೂಕ್‌ 12:22-31 ರಲ್ಲಿನ ಏಸುವಿನ ನುಡಿಗಳ ವ್ಯಾಖ್ಯಾನದಿಂದ ಆಯ್ದ ಭಾಗಗಳು)

ಹಾಗೂ ಅವನು ತನ್ನ ಶಿಷ್ಯರಿಗೆ ಹೇಳಿದ, “ಆದ್ದರಿಂದ ನಾನು ನಿಮಗೆ ಹೇಳುತ್ತೇನೆ, ನಿಮಗೆ ತಿನ್ನಲು ಏನಿದೆ ಎಂದು ನಿಮ್ಮ ಜೀವನಕ್ಕಾಗಿ; ಅಥವಾ ಶರೀರಕ್ಕಾಗಿ ನೀವು ಏನನ್ನು ಧರಿಸಬೇಕು ಎಂಬ ಬಗ್ಗೆ ಚಿಂತಿಸಬೇಡಿ. ಬದುಕು ಮಾಂಸಕ್ಕಿಂತ ಮಿಗಿಲು ಹಾಗೂ ಶರೀರವು ಉಡುಪಿಗಿಂತ ಮಿಗಿಲು.

“ಕಾಗೆಗಳನ್ನು ನೋಡಿ: ಅವು ಬಿತ್ತುವುದಿಲ್ಲ, ಬೆಳೆಯುವುದಿಲ್ಲ; ಅವುಗಳ ಬಳಿ ಉಗ್ರಾಣ ಅಥವಾ ಕೊಟ್ಟಿಗೆ ಇರುವುದಿಲ್ಲ; ಮತ್ತು ಭಗವಂತ ಅವುಗಳನ್ನು ಪೋಷಿಸುತ್ತಾನೆ: ನೀವು ಹಕ್ಕಿಗಳಿಗಿಂತ ಎಷ್ಟು ಹೆಚ್ಚು ಉತ್ತಮರು? ಮತ್ತು ನಿಮ್ಮಲ್ಲಿ ಯಾರು ಕೇವಲ ಆಲೋಚಿಸುವುದರಿಂದಲೇ, ನಿಮ್ಮ ಎತ್ತರಕ್ಕೆ ಒಂದು ಮೊಳವನ್ನು ಸೇರಿಸಬಲ್ಲರು? ಈ ಕನಿಷ್ಟ ಕೆಲಸವನ್ನೂ ನಿಮಗೆ ಮಾಡಲು ಸಾಧ್ಯವಾಗದಿದ್ದ ಮೇಲೆ, ಉಳಿದವುಗಳ ಬಗ್ಗೆ ಏಕೆ ಯೋಚಿಸುವಿರಿ?

“ಹೂವುಗಳು ಹೇಗೆ ಬೆಳೆಯುತ್ತವೆ ಎಂದು ನೋಡಿ: ಅವು ಶ್ರಮಿಸುವುದಿಲ್ಲ, ಅವು ನೂಲುವುದಿಲ್ಲ; ಆದರೂ ಸಾಲೋಮನ್ನನು ತನ್ನ ಎಲ್ಲಾ ಮಹಿಮೆಯಲ್ಲಿ ಇವುಗಳಲ್ಲಿ ಒಂದರಂತೆಯೂ ಸಿಂಗರಿಸಲ್ಪಟ್ಟಿರಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ಇಂದು ಹೊಲದಲ್ಲಿರುವ ಮತ್ತು ನಾಳೆ ಒಲೆಗೆ ಹಾಕಲ್ಪಡುವ ಹುಲ್ಲಿಗೆ ಭಗವಂತ ಹೀಗೆ ಉಡುಪು ತೊಡಿಸುವನಾದರೆ, ಹೇ ಅಲ್ಪ ನಂಬಿಕೆಯವರೇ, ಅವನು ನಿಮಗೆ ಎಷ್ಟು ಹೆಚ್ಚು ಉಡುಪುಗಳನ್ನು ಒದಗಿಸಬಹುದು?

“ಮತ್ತು ನೀವು ಏನು ತಿನ್ನಬೇಕು ಅಥವಾ ಏನು ಕುಡಿಯಬೇಕು ಎಂಬುದಕ್ಕಾಗಿ ಅರಸದಿರಿ, ಅಥವಾ ನೀವು ಅನಿಶ್ಚಿತ ಮನಸ್ಕರೂ ಆಗಬೇಡಿ. ಲೋಕದ ರಾಷ್ಟ್ರಗಳು ಇವೆಲ್ಲವುಗಳಿಗಾಗಿ ಅರಸುತ್ತವೆ; ಮತ್ತು ಇವುಗಳ ಅವಶ್ಯಕತೆ ನಿಮಗಿದೆಯೆಂದು ನಿಮ್ಮ ಪರಮ ಪಿತನಿಗೆ ತಿಳಿದಿದೆ. ಆದರೆ ಅದರ ಬದಲು ನೀವು ಭಗವಂತನ ಅಧಿಪತ್ಯವನ್ನು ಅರಸಿ; ಆಗ ಇವೆಲ್ಲವೂ ನಿಮ್ಮದಾಗುತ್ತವೆ” (ಲ್ಯೂಕ್ 12:22-31).

ಭಗವಂತನನ್ನು ಬದುಕಿನ ಪ್ರಮುಖ ಗುರಿಯನ್ನಾಗಿ ಮಾಡಿಕೊಳ್ಳಬೇಕು ಎಂಬ ಯೇಸುವಿನ ಬುದ್ಧಿವಾದವನ್ನು ರಾಷ್ಟ್ರಗಳು ಮತ್ತು ವ್ಯಕ್ತಿಗಳು ಪಾಲಿಸಿದರೆ ಭೂಮಿಯು ನಿಜವಾದ ಸ್ವರ್ಗವಾಗುತ್ತದೆ. ಇತರರಿಗೆ ತೊಂದರೆಯುಂಟು ಮಾಡಿ ಅಧಿಕಾರ ಮತ್ತು ಐಷಾರಾಮಿಗಳ ರಾಷ್ಟ್ರೀಯ ಮತ್ತು ವೈಯಕ್ತಿಕ ಕ್ರೋಢೀಕರಣಕ್ಕಾಗಿ ಜನರು ರಾಜಕೀಯ ಮತ್ತು ವ್ಯವಹಾರದ ಸ್ವಾರ್ಥದ ಮೇಲೆ ಕೇಂದ್ರೀಕರಿಸಿದಾಗ, ಸಂತೋಷ ಮತ್ತು ಸಮೃದ್ಧಿಯ ದೈವಿಕ ನಿಯಮವು ಮುರಿದು, ಕುಟುಂಬ, ರಾಷ್ಟ್ರ ಮತ್ತು ಪ್ರಪಂಚದಲ್ಲಿ ಅವ್ಯವಸ್ಥೆ ಮತ್ತು ಅಭಾವಗಳು ಸೃಷ್ಟಿಯಾಗುತ್ತವೆ. ವಿವಿಧ ರಾಷ್ಟ್ರಗಳ ನಾಯಕರು ಆಕ್ರಮಣಶೀಲತೆ ಮತ್ತು ದೇಶಭಕ್ತಿಯ ಸ್ವಾರ್ಥತೆಯನ್ನು ಕೊಂಡಾಡುವ ಬದಲು, ತಮ್ಮ ನಾಗರಿಕರ ಮನಸ್ಸನ್ನು, ಆಂತರಿಕ ಶಾಂತಿ, ಭಗವಂತನ ಮತ್ತು ನೆರೆಹೊರೆಯವರ ಪ್ರೀತಿ ಹಾಗೂ ಧ್ಯಾನದ ಆನಂದವನ್ನು ಹೊಂದುವತ್ತ ತಿರುಗಿಸಿದರೆ, ಐಹಿಕ ಸಮೃದ್ಧಿ, ಆರೋಗ್ಯ ಮತ್ತು ಅಂತರರಾಷ್ಟ್ರೀಯ ಸಾಮರಸ್ಯವು ತಾನಾಗಿಯೇ ರಾಷ್ಟ್ರಗಳ ಆಧ್ಯಾತ್ಮಿಕ ಸಂಪತ್ತಿಗೆ ಸೇರಿಸಲ್ಪಡುತ್ತವೆ.

ವೈಯಕ್ತಿಕ ಸಂತೋಷಕ್ಕಾಗಿ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗಕ್ಷೇಮಕ್ಕೂ ಅತ್ಯುತ್ತಮ ಸೂತ್ರವಾಗಿ “ಭಗವಂತ ಮೊದಲು” ಎಂಬ ಅತ್ಯುನ್ನತ ವಿವೇಕವನ್ನು ಯೇಸು ಸೂಚಿಸಿದ್ದಾನೆ: “ಎಲ್ಲ ರಾಷ್ಟ್ರಗಳು ಐಹಿಕ ಸಮೃದ್ಧಿ ಮತ್ತು ಅಧಿಕಾರವನ್ನು ಅತಿಯಾಗಿ ಮತ್ತು ಸ್ವಾರ್ಥಪರತೆಯಿಂದ ಅರಸುತ್ತವೆ, ಅದು ಅನಿವಾರ್ಯವಾಗಿ ಯಾತನಾಮಯ ಅಸಮಾನತೆಗಳು, ಯುದ್ಧಗಳು ಮತ್ತು ವಿನಾಶಕ್ಕೆ ಕಾರಣವಾಗುತ್ತವೆ. ಅದರ ಬದಲು ಅವರು ಭಗವಂತನಿಗಾಗಿ ಅರಸಲಿ ಮತ್ತು ತಮ್ಮ ಪ್ರಯತ್ನಗಳಲ್ಲಿ ಅವನ ವಸ್ತುನಿಷ್ಠ ನ್ಯಾಯಪರತೆಯನ್ನು ಸೇರಿಸಲಿ ಹಾಗೂ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಭ್ರಾತೃತ್ವದ ಚಾವಣಿಯಡಿ ಸಾಮರಸ್ಯದಿಂದ ಬದುಕಲಿ. ಪರಸ್ಪರ ಶಾಂತಿಯಿಂದ ಹಾಗೂ ಭಗವತ್‌ಪ್ರಜ್ಞೆಯ ಅನ್ವೇಷಣೆಯಲ್ಲಿ ಬದುಕುವ ರಾಷ್ಟ್ರಗಳ ಮೇಲೆ ಪರಮಪಿತನು ಶಾಶ್ವತವಾದ ಸಮೃದ್ಧಿಯನ್ನು ದಯಪಾಲಿಸುತ್ತಾನೆ, ಅದು ವಿಶ್ವ ಕುಟುಂಬದೆಡೆಗೆ ನೆರವು, ಸದ್ಭಾವನೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಸಹಕಾರದಿಂದಾಗಿ ನ್ಯಾಯದಿಂದ ಬಂದಿರುತ್ತದೆ. ಬ್ರಹ್ಮಾಂಡಕ್ಕೇ ಒದಗಿಸುವವನಾದ ಭಗವಂತನು, ವ್ಯಕ್ತಿಗಳು ಮತ್ತು ರಾಷ್ಟ್ರಗಳ ಅಗತ್ಯಗಳನ್ನು ಅರಿತಿದ್ದಾನೆ; ಅವನು ಕಾಗೆಗೆ ಆಹಾರವನ್ನು ನೀಡುತ್ತಾನಾದರೆ ಮತ್ತು ನೈದಿಲೆಗೆ ಉಡುಪು ತೊಡಿಸುತ್ತಾನಾದರೆ, ತನ್ನ ಆದರ್ಶಗಳಿಗೆ ಶ್ರುತಿಗೂಡಿರುವ ವ್ಯಕ್ತಿಗೆ ಮತ್ತು ರಾಷ್ಟ್ರಕ್ಕೆ ಅವನು ಇನ್ನೆಷ್ಟು ಅಧಿಕವಾಗಿ ಒದಗಿಸಬಹುದು!”

ಹಣದ ಹುಚ್ಚು ಹಿಡಿದಿರುವ ಆಧುನಿಕ ನಾಗರಿಕತೆಯ ಸ್ಥಿತಿಯು, ಸ್ವಾರ್ಥತೆ ವೈಯಕ್ತಿಕ ಮತ್ತು ರಾಷ್ಟ್ರೀಯ ಸಂತೋಷವನ್ನು ಹಾಳುಮಾಡುತ್ತದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ವ್ಯಾಪಾರೀ ಜೀವನದ ಅತಿಯಾದ ಸ್ಪರ್ಧಾತ್ಮಕತೆಯು ವಿನಾಶಕಾರಿಯಾದುದು, ಏಕೆಂದರೆ ಪ್ರತಿಯೊಬ್ಬರೂ ಇತರರ ಸಂಪತ್ತನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ 1000 ಜನರಿರುವ ಸಮುದಾಯದಲ್ಲಿ ಪ್ರತಿಯೊಬ್ಬ ಉದ್ಯಮಿಗೆ 999 ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳಿರುತ್ತಾರೆ. ತಮ್ಮ ಸಂಪತ್ತನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ಯೇಸು ಜನರನ್ನು ಒತ್ತಾಯಿಸಿದ್ದಾನೆ; ಆ ನಿಯಮವನ್ನು ಅನುಸರಿಸಿದಾಗ, 1000 ಜನಗಳ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ 999 ಜನ ನೆರವಿಗಿರುತ್ತಾರೆ.

“ದೇಶಭಕ್ತಿಯ ಮತ್ತು ಕೈಗಾರಿಕಾ ಸ್ವಾರ್ಥದಿಂದ ರಾಷ್ಟ್ರೀಯ ಭದ್ರತೆ ಮತ್ತು ಸಮೃದ್ಧಿಯನ್ನು ಎಂದಿಗೂ ಖಚಿತಪಡಿಸಲು ಸಾಧ್ಯವಿಲ್ಲ…. ದೀರ್ಘಕಾಲೀನ ರಾಷ್ಟ್ರೀಯ ಸಮೃದ್ಧಿಯು ನೈಸರ್ಗಿಕ ಸಂಪನ್ಮೂಲಗಳು ಮತ್ತು ರಾಷ್ಟ್ರದ ನಾಗರಿಕರ ಉಪಕ್ರಮದ ಮೇಲೆ ಮಾತ್ರವಲ್ಲ, ಆದರೆ ಪ್ರಮುಖವಾಗಿ ಜನರ ನೈತಿಕ ನಡವಳಿಕೆ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ನಿರ್ಭರವಾಗಿರುತ್ತದೆ.”

— ಪರಮಹಂಸ ಯೋಗಾನಂದ

ಪ್ರಸ್ತುತ ಘಾತಕ ವ್ಯಾಪಾರೀ ಪರಿಸರದಲ್ಲಿ ಉಳಿವಿಗೆ ಎಷ್ಟು ವಿಶೇಷ ಗಮನ ಕೊಡಬೇಕಾಗುವುದೆಂದರೆ, ಅದು ಉದ್ಯಮಿಯನ್ನು ಸಾಕು ಮಾಡುತ್ತದೆ ಮತ್ತು ಅವನು ತನ್ನ ಜೀವನವನ್ನು ಹೃತ್ಪೂರ್ವಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಂತೋಷದಿಂದ ಇರುವಂತೆ ನೋಡಿಕೊಳ್ಳುವತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಉದ್ಯಮವನ್ನು ಮನುಷ್ಯನ ಸಂತೋಷಕ್ಕಾಗಿ ಮಾಡಲಾಗಿದೆ; ಮನುಷ್ಯನನ್ನು ಉದ್ಯಮಕ್ಕಾಗಿ ಮಾಡಲಾಗಿಲ್ಲ. ಮನುಷ್ಯನ ಆಧ್ಯಾತ್ಮಿಕ ಬೆಳವಣಿಗೆಗೆ ಅಡ್ಡಿಪಡಿಸದಷ್ಟು ಮಾತ್ರ ವ್ಯವಹಾರ ಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಮಾನವ ಜನಾಂಗದ ಒಳಿತಿಗಾಗಿ ಬಳಸಿದಾಗ ಶ್ಲಾಘಿಸಬೇಕು; ಆದರೆ ವ್ಯಾವಹಾರಿಕ ಬಳಕೆಯಲ್ಲಿ, ಎಲ್ಲ ರಾಷ್ಟ್ರಗಳು ಆಧ್ಯಾತ್ಮಿಕ ಅಭಿವೃದ್ಧಿ, ಸ್ಫೂರ್ತಿದಾಯಕ ಸಾಹಿತ್ಯ, ತತ್ವಶಾಸ್ತ್ರ, ಸೃಷ್ಟಿಯ ಅದ್ಭುತಗಳು ಮತ್ತು ಕಾರ್ಯಗಳ ಜ್ಞಾನದತ್ತ ತಮ್ಮ ಮನಸ್ಸನ್ನು ಹೆಚ್ಚು ಕೇಂದ್ರೀಕರಿಸುತ್ತ, ಹಣದ ಹುಚ್ಚನ್ನು ಪ್ರೋತ್ಸಾಹಿಸುವಂತಹ ಹತೋಟಿ ತಪ್ಪಿದ ​​ತಂತ್ರಜ್ಞಾನಗಳತ್ತ ಕಡಿಮೆ ಕೇಂದ್ರೀಕರಿಸಿ, ಸರಳ ಜೀವನ ಮತ್ತು ಉನ್ನತ ಚಿಂತನೆಯ ಪ್ರಜ್ಞೆಯನ್ನು ಪ್ರತಿಪಾದಿಸಿದರೆ ತಮ್ಮ ನಾಗರಿಕರ ಸಂತೋಷವನ್ನು ಹೆಚ್ಚಿಸಬಹುದು.

ಶ್ರೀಮಂತ ದೇಶಗಳಲ್ಲಿ ಅತಿಯಾದ ಉತ್ಪಾದನೆ ಮತ್ತು ಅತಿಯಾದ ಬಳಕೆ ಮತ್ತು ದುರ್ಬಲ ರಾಷ್ಟ್ರಗಳಲ್ಲಿ ಶೋಷಣೆ ಮತ್ತು ಮಿತವ್ಯಯಗಳಿಗೆ ಕಾರಣವಾಗುವ ಕೈಗಾರಿಕಾ ಸ್ವಾರ್ಥದಿಂದಾಗಿ ಎಲ್ಲ ರಾಷ್ಟ್ರಗಳು ನಾಗರಿಕತೆಯನ್ನು ಸಂಕೀರ್ಣಗೊಳಿಸದಿದ್ದಿದ್ದರೆ, ಎಲ್ಲ ಜನರಿಗೂ ತಿನ್ನಲು ಮತ್ತು ಚೆನ್ನಾಗಿ ಬದುಕಲು ಬೇಕಾದಷ್ಟಿರುತ್ತಿತ್ತು. ಆದರೆ ತಮ್ಮ ನೆರೆಹೊರೆಯವರ ಅಗತ್ಯಗಳೇನೇ ಇದ್ದರೂ, ದೇಶಭಕ್ತಿಯ ಸ್ವಾರ್ಥ ಮತ್ತು ಐಹಿಕ ಶ್ರೇಷ್ಠತೆಯು ಬಹುತೇಕ ಎಲ್ಲಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಗುರಿಗಳಾಗಿರುವುದರಿಂದ, ಜಗತ್ತು ಆಗಾಗ್ಗೆ ಅವ್ಯವಸ್ಥೆಗಳನ್ನು ಮತ್ತು ಸಿದ್ಧಾಂತಗಳ ಗೊಂದಲಗಳನ್ನು ಅನುಭವಿಸುತ್ತದೆ, ಹಾಗೂ ಅದು ಕ್ಷಾಮ, ಬಡತನ ಮತ್ತು ತಪ್ಪಿಸಬಹುದಾದ ಯುದ್ಧಗಳ ದುರಂತಗಳಿಗೆ ಕಾರಣವಾಗುತ್ತದೆ. ಈ ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಕಾಣಿಸಿಕೊಂಡ ಘಟನೆಗಳು, ದೇಶಭಕ್ತಿ ಮತ್ತು ಕೈಗಾರಿಕಾ ಸ್ವಾರ್ಥದಿಂದ ರಾಷ್ಟ್ರೀಯ ಭದ್ರತೆ ಮತ್ತು ಸಮೃದ್ಧಿಯನ್ನು ಎಂದಿಗೂ ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತೋರಿಸಿವೆ. ಅವು ಆರ್ಥಿಕ ಅನರ್ಥಗಳು, ಎರಡು ವಿಶ್ವ ಯುದ್ಧಗಳು, ನಿರುದ್ಯೋಗ, ಭಯ, ಅಭದ್ರತೆ, ಹಸಿವು ಮತ್ತು ನೈಸರ್ಗಿಕ ಪ್ರಕೋಪಗಳಾದ ಭೂಕಂಪಗಳು, ಚಂಡಮಾರುತಗಳು ಮತ್ತು ಕ್ಷಾಮಗಳನ್ನು ತಂದಿವೆ. (ಅವು ವ್ಯಕ್ತಿಗಳು ಮತ್ತು ರಾಷ್ಟ್ರಗಳ ದುಷ್ಕಾರ್ಯಗಳ ಸಂಗ್ರಹಣೆಯ ಪರೋಕ್ಷ ಪರಿಣಾಮದಿಂದಾಗಿ ಉಂಟಾದ ಸಾಮೂಹಿಕ ಕರ್ಮದ ಕಾರ್ಯಾಚರಣೆಗಳು).

ಪ್ರಪಂಚದಾದ್ಯಂತದ ಆಧುನಿಕ ಅವ್ಯವಸ್ಥೆಯ ಪರಿಸ್ಥಿತಿಗಳು ದೈವನಿಷ್ಠೆರಹಿತ ಜೀವನದ ಪರಿಣಾಮವಾಗಿದೆ. ಭ್ರಾತೃತ್ವದ ದಿವ್ಯ ಆದರ್ಶಗಳು, ಕೈಗಾರಿಕಾ ಸಹಕಾರ, ಹಾಗೂ ಐಹಿಕ ಸರಕುಗಳ ಮತ್ತು ಆಧ್ಯಾತ್ಮಿಕ ಅನುಭವಗಳ ಅಂತರರಾಷ್ಟ್ರೀಯ ವಿನಿಮಯದಿಂದ ಬದುಕಿದರೆ ವ್ಯಕ್ತಿಗಳು ಮತ್ತು ರಾಷ್ಟ್ರಗಳನ್ನು ಸ್ವಯಂ- ನಿರ್ಮಿತ ಸಂಪೂರ್ಣ ವಿನಾಶದಿಂದ ರಕ್ಷಿಸಲು ಸಾಧ್ಯವಿದೆ. ಅತಿಲಾಭದಾಸೆ ಮತ್ತು ಶೋಷಣೆಯಿಂದ ಕೂಡಿದ ಪ್ರಸ್ತುತ ಆರ್ಥಿಕ ವ್ಯವಸ್ಥೆಯು ವಿಫಲವಾಗಿದೆ; ರಾಷ್ಟ್ರಗಳ ಭ್ರಾತೃತ್ವ ಮತ್ತು ಅಗತ್ಯ ಕೈಗಾರಿಕೆಗಳು ಮತ್ತು ಕೈಗಾರಿಕೋದ್ಯಮಿಗಳ ಭ್ರಾತೃತ್ವ ಮಾತ್ರ ಜಗತ್ತಿಗೆ ಶಾಶ್ವತವಾದ ಸಮೃದ್ಧಿಯನ್ನು ತರಲು ಸಾಧ್ಯ.

1930 ರ ದಶಕದ ಮಹಾ ಆರ್ಥಿಕ ಕುಸಿತವು ಅನೇಕ ಲಕ್ಷಾಧಿಪತಿಗಳ ಗರ್ವಭಂಗ ಮಾಡಿತು, ತಮ್ಮ ಭಾರೀ ಸಂಪತ್ತನ್ನು ಉಳಿಸಿಕೊಳ್ಳುವ ತಮ್ಮ ಆರ್ಥಿಕ ಕುಶಾಗ್ರಮತಿಯ ಬಗ್ಗೆ ಅವರಿಗೆ ನಂಬಿಕೆಯಿತ್ತು. ಅತ್ಯಂತ ಚಾಣಾಕ್ಷ ಉದ್ಯಮಿಗಳೂ ಕೂಡ ಎತ್ತ ಕಡೆ ತಿರುಗಬೇಕೆಂದು ತಿಳಿಯದೇ ವಿಧಿ ಮತ್ತು ಖಿನ್ನತೆಯ ಕೈಗಳಲ್ಲಿ ದಿಗ್ಭ್ರಮೆಗೊಂಡ ಮಕ್ಕಳಾದರು. “ನಿಸ್ವಾರ್ಥತೆ” ಮತ್ತು “ಒಬ್ಬರ ಸ್ವಂತದ ಅಭ್ಯುದಯದೊಂದಿಗೆ ಇತರರ ಅಭ್ಯುದಯವನ್ನೂ ಸೇರಿಸಿಕೊಳ್ಳುವುದು” ಎಂಬ ಆಧ್ಯಾತ್ಮಿಕ ನಿಯಮಗಳು ಮುರಿಯಲ್ಪಟ್ಟಿದ್ದವು; ಆದ್ದರಿಂದಲೇ ವಿಶ್ವಾದ್ಯಂತ ಕೈಗಾರಿಕೋದ್ಯಮಿಗಳ ಆರ್ಥಿಕ ವ್ಯವಸ್ಥೆಯ ಕುಸಿತವಾಯಿತು. ಕೈಗಾರಿಕಾ ಸ್ವಾರ್ಥವು ಚಿನ್ನಕ್ಕಾಗಿ ಮಾನವನ ವಿಪತ್ಕಾರಕ ದುರಾಸೆಯಿಂದ ಪ್ರಚೋದಿತವಾಗಿದೆ, ಇದು ಅಹಿತಕರ ಆತ್ಮಘಾತಕ ಸ್ಪರ್ಧೆಗೆ ಮತ್ತು ಪ್ರತಿಸ್ಪರ್ಧಿಯನ್ನು ನಾಶಮಾಡಲು ಬೆಲೆಗಳನ್ನು ತಗ್ಗಿಸಲು ಕಾರಣವಾಯಿತು. ಲೌಕಿಕ ಮನಸ್ಸಿನ ವ್ಯಾಪಾರಿಯ ಮನಸ್ಸು ದುರಾಸೆಯಿಂದ ಗೊಂದಲಕ್ಕೊಳಗಾಗಿರುವಾಗ, ಅವನ ಬುದ್ಧಿಯು ಒಂದರ ನಂತರ ಒಂದರಂತೆ ವಿಫಲಗೊಳ್ಳುವ ಯೋಜನೆಗಳನ್ನೇ ಹೂಡುತ್ತದೆ. ಇದು ಭಗವಂತನನ್ನು ಮರೆತಿರುವ ಎಲ್ಲ ಲೌಕಿಕ ಅಹಂಕಾರಿಗಳು ಒಂದಲ್ಲ ಒಂದು ದಿನ ತೆರಲೇಬೇಕಾದ ಬೆಲೆಯಾಗಿದೆ.

ಕೈಗಾರಿಕಾ ಉತ್ಪಾದನೆಗೆ ಕೃತಕ ವಿತ್ತೀಯ ಮೌಲ್ಯವನ್ನು ನೀಡುವ ಮೂಲಕ, ಮನುಷ್ಯನು ಬಂಡವಾಳಗಾರರು ಮತ್ತು ಕಾರ್ಮಿಕರ ನಡುವೆ ಕಲಹವನ್ನು ಸೃಷ್ಟಿಸಿದ್ದಾನೆ, ಇದು ಮರುಕಳಿಸುವ ಹಣದುಬ್ಬರ ಮತ್ತು ಖಿನ್ನತೆಯನ್ನು ವ್ಯವಸ್ಥಿತವಾಗಿ ಉಂಟುಮಾಡುತ್ತದೆ. ಬಂಡವಾಳಗಾರರು ಮತ್ತು ಕಾರ್ಮಿಕರು ಹೋರಾಡುತ್ತ, ಪರಸ್ಪರರ ನಾಶವನ್ನು ಖಚಿತಪಡಿಸಿಕೊಳ್ಳುವ ಬದಲು, ಮಿದುಳು ಮತ್ತು ಅಂಗಗಳಂತೆ, ರಾಷ್ಟ್ರದ ದೇಹ ಮತ್ತು ಆತ್ಮದ ಒಟ್ಟಾರೆ ಯೋಗಕ್ಷೇಮಕ್ಕೆ ಸಹಕರಿಸಬೇಕು. ಶರೀರವನ್ನು ಪೋಷಿಸಲು ಮತ್ತು ಹೊಟ್ಟೆಯಲ್ಲಿನ ಆಹಾರವನ್ನು ಹಂಚಿಕೊಳ್ಳಲು ಮಿದುಳು ಮತ್ತು ಕೈಗಳು ಎರಡೂ ಸಹಕರಿಸುತ್ತವೆ; ಅಂತೆಯೇ ಬಂಡವಾಳಗಾರರು (ಸಮಾಜದ ಮಿದುಳುಗಳು) ಮತ್ತು ಕಾರ್ಮಿಕರು (ಅದರ ಕೈಕಾಲುಗಳು) ಜೀವನವನ್ನು ಸಮೃದ್ಧಗೊಳಿಸಲು ಮತ್ತು ಅವರ ಹೇರಳ ಉತ್ಪಾದನೆಯನ್ನು ಹಂಚಿಕೊಳ್ಳಲು ಸಹಕರಿಸಬೇಕು. ಸಾಮ್ರಾಜ್ಯಶಾಹಿ ಮತ್ತು ಸಮಾಜವಾದಿ ಸರ್ಕಾರಗಳೆರಡರ ಅಪಾಯಗಳನ್ನೂ ತಪ್ಪಿಸಲು ಬಂಡವಾಳಗಾರರಿಗಾಗಲಿ ಅಥವಾ ಕಾರ್ಮಿಕರಿಗಾಗಲಿ ವಿಶೇಷ ಆದ್ಯತೆ ದೊರೆಯಬಾರದು. ಬಂಡವಾಳಗಾರರು ಮತ್ತು ಕಾರ್ಮಿಕರಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ಥಾನವಿದೆ ಹಾಗೂ ಇಬ್ಬರೂ ಸಮಾನತೆಯಲ್ಲಿ ತಮ್ಮ ತಮ್ಮ ಕರ್ತವ್ಯಗಳನ್ನು ಮಾಡಬೇಕು. ರಾಷ್ಟ್ರೀಯ ಸಂಪತ್ತಿನ ಹಂಚಿಕೆಯ ಮೂಲಕ ಪ್ರತಿಯೊಬ್ಬರಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ವೈದ್ಯಕೀಯ ಸವಲತ್ತನ್ನು ಒದಗಿಸಬೇಕು; ಅಥವಾ ಪ್ರಕೃತಿಯ ವೈಪರೀತ್ಯಗಳಿಂದಾಗಿ ಬಡತನವು ಅನಿವಾರ್ಯವಾಗಿ ಬಂದರೆ ಪ್ರತಿಯೊಬ್ಬರೂ ಅದರ ಹೊರೆಯನ್ನು ಸಮಾನವಾಗಿ ಹೊರಬೇಕು. ಪ್ರಗತಿಶೀಲ ಲೌಕಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವ ಬೇಕೆಂದರೆ, ಮೂಲಭೂತ ಅವಶ್ಯಕತೆಗಳ ಅಸಮಾನ ಹಂಚಿಕೆ ಇರಬಾರದು; ಉಳ್ಳದವರು ಉಳ್ಳವರ ವಿರುದ್ಧ ಹೋಗುವುದೇ ಅಪರಾಧ, ದುರಾಸೆ, ಸ್ವಾರ್ಥ ಮತ್ತು ಇತರ ಹೆಸರಿಸಲಾಗದ ಸಾಮಾಜಿಕ ಅನಿಷ್ಟಗಳಿಗೆ ಮೂಲ ಕಾರಣವಾಗಿದೆ.

ರೋಗಿಯೋ ಅಥವಾ ಅಂಗವಿಕಲನೋ ಆಗಿರುವ ಕುಟುಂಬದ ಸದಸ್ಯನು ಯಾಚಕನಲ್ಲ, ಬದಲಿಗೆ ಅವನು ಗೌರವಯುತವಾಗಿ ಕುಟುಂಬದ ಆಹಾರ ಮತ್ತು ಆರ್ಥಿಕ ಸಂಪನ್ಮೂಲಗಳಲ್ಲಿ ಪಾಲು ಪಡೆಯುತ್ತಾನೆ. ಅದೇ ವಿಶ್ವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯಿಸಬೇಕು. ಉದ್ಯೋಗ ಸಿಗದ ಕಾರಣ ಅಥವಾ ವಯಸ್ಸಾದ ಕಾರಣ ಅಥವಾ ಅಂಗವಿಕಲರಾದ ಕಾರಣಕ್ಕಾಗಿ ಯಾರೂ ಹಸಿವಿನಿಂದ ಬಳಲಬಾರದು. ಎಲ್ಲ ರಾಷ್ಟ್ರಗಳೂ ಭಗವಂತನನ್ನು ಮೆಚ್ಚಿಸಬಯಸಿದರೆ, ಅವರು ವಿಶ್ವ ಸಂಯುಕ್ತ ಸಂಸ್ಥಾನದ ಸಹೋದರರಾಗಿ ಕ್ರಿಸ್ತನಂತಹ ತತ್ವಗಳ ಪ್ರಕಾರ ಬದುಕುತ್ತಾರೆ, ಯಾವುದೇ ವ್ಯಕ್ತಿಯು ಕೊರತೆ, ಕ್ಷಾಮ ಅಥವಾ ಬಡತನದಿಂದ ಬಳಲದಂತೆ ಸರಕುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ವ್ಯಕ್ತಿಗಳು ಮತ್ತು ರಾಷ್ಟ್ರಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲು ಸ್ವಾರ್ಥವನ್ನು ತ್ಯಜಿಸುವುದು ಈಗ ಅನಿವಾರ್ಯವಾಗಿದೆ. ರಾಷ್ಟ್ರೀಯ ಪ್ರಜಾಸಮುದಾಯವು ಸ್ವಹಿತಾಸಕ್ತಿಯಲ್ಲಿ ಮುಳುಗಿರುವುದನ್ನು ಕಡಿಮೆ ಮಾಡಿ, ಜ್ಞಾನಾರ್ಜನೆ ಮಾಡಿಕೊಳ್ಳಲು, ಮತ್ತು ಧ್ಯಾನ ಮಾಡಲು ಹಾಗೂ ಅನಂತತೆಯೊಂದಿಗೆ ಶ್ರುತಿಗೂಡಿಕೊಂಡಿರಲು ಕಲಿಯಬೇಕು, ಆಗ ಅವರು ಸಾಮೂಹಿಕವಾಗಿ ರಾಷ್ಟ್ರೀಯ ಆತ್ಮವನ್ನು ಸರ್ವಾಂಗೀಣ ಸಂತೋಷದಿಂದ ಪೋಷಿಸುತ್ತಾರೆ. ಭಗವಂತನೊಂದಿಗೆ ಶ್ರುತಿಗೂಡಿಕೊಂಡು, ಅವನ ಆದರ್ಶಗಳಾದ ಭ್ರಾತೃತ್ವ ಮತ್ತು ಶಾಂತಿಯೊಂದಿಗೆ ಬದುಕುತ್ತಿರುವ ರಾಷ್ಟ್ರಗಳು ಶತಮಾನಗಳವರೆಗೆ ಯುದ್ಧಗಳು ಅಥವಾ ಕ್ಷಾಮಗಳಿಲ್ಲದೆ ಇರಬಹುದು ಮತ್ತು ಚಿರಂತನ ಸಮೃದ್ಧಿ ಮತ್ತು ಆಧ್ಯಾತ್ಮಿಕ ಆನಂದದಲ್ಲಿರಬಹುದು. ಸಮೃದ್ಧಿಯಲ್ಲಿ ಶ್ರೀಮಂತವಾಗಿದ್ದು ವಿವೇಚನೆ ಮತ್ತು ಭಗವದಾನಂದದಲ್ಲಿ ಬಡವರಾಗಿರುವ ರಾಷ್ಟ್ರಗಳು, ಅಂತರ್ಯುದ್ಧ, ಬಂಡವಾಳಗಾರರು ಮತ್ತು ಕಾರ್ಮಿಕರ ನಡುವಿನ ಹೋರಾಟಗಳು ಹಾಗೂ ಆ ರಾಷ್ಟ್ರಗಳ ಸಮೃದ್ಧಿಯ ಬಗ್ಗೆ ಅಸೂಯೆ ಪಡುವ ನೆರೆಹೊರೆಯವರ ತೊಂದರೆಗಳಿಂದಾಗಿ ಅವು ತಮ್ಮ ಭಾರೀ ಬಂಡವಾಳದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬಹುದು. ಒಂದು ರಾಷ್ಟ್ರವು ಹಸಿವಿನಿಂದ ಸಾಯುತ್ತಿರುವಾಗ ಮತ್ತೊಂದು ರಾಷ್ಟ್ರವು ಸಮೃದ್ಧಿಯನ್ನು ಹೊಂದಿರುವಂತಹ ಸ್ಥಿತಿಯು ಎಂದಿಗೂ ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡುವ ಸೂತ್ರವಾಗಲು ಸಾಧ್ಯವಿಲ್ಲ.

ರಾಷ್ಟ್ರಗಳು ಒಂದನ್ನೊಂದು ನೋಡಿಕೊಳ್ಳಬೇಕು ಇಲ್ಲದಿದ್ದರೆ ಅವು ನಾಶವಾಗುತ್ತವೆ. ಆದ್ದರಿಂದಲೇ ಯೇಸು ಎಲ್ಲ ರಾಷ್ಟ್ರಗಳಿಗೆ ಹೀಗೆ ಹೇಳುತ್ತಾನೆ: “ಹೇ ರಾಷ್ಟ್ರಗಳೇ, ಸ್ವಾರ್ಥಿಗಳಾಗದಿರಿ ಹಾಗೂ ಭ್ರಾತೃತ್ವ ಮತ್ತು ಸರ್ವ- ದಾತಾರನಾದ ಭಗವಂತನನ್ನು ಸಂಪೂರ್ಣವಾಗಿ ಮರೆತು, ಕೇವಲ ಆಹಾರ, ಉದ್ಯಮ ಮತ್ತು ಉಡುಪುಗಳ ಬಗ್ಗೆ ಮಾತ್ರ ಯೋಚಿಸಬೇಡಿ, ಹಾಗೆ ಮಾಡಿದರೆ, ನಿಮ್ಮ ಅಜ್ಞಾನ ಮತ್ತು ಅದರ ಫಲವಾದ ಯುದ್ಧಗಳು, ಪಿಡುಗು ಮತ್ತು ಇತರ ಕ್ಲೇಶಗಳ ಮೂಲಕ ನೀವು ಸ್ವಯಂಕೃತ ವಿಪತ್ತನ್ನು ನಿಮ್ಮ ಮೇಲೆ ತಂದುಕೊಳ್ಳುವಿರಿ.”

ಸಮೃದ್ಧಿಯು ಸಾಮಾನ್ಯವಾಗಿ ಸಾಮಾಜಿಕ ಆತ್ಮಸಾಕ್ಷಿಯನ್ನು ಮಂದಗೊಳಿಸುತ್ತದೆ: “ನಮಗೆ ಇತರ ರಾಷ್ಟ್ರಗಳ ಬಗ್ಗೆ ಕಾಳಜಿ ಇಲ್ಲ: ನಾವು ಶ್ರೀಮಂತಿಕೆಯಲ್ಲಿ ಹೊರಳಾಡಬೇಕೆಂದು ನಮ್ಮ ಸಮೃದ್ಧಿಯನ್ನು ಸೃಷ್ಟಿಸಲು ಕೆಲಸ ಮಾಡಿದ್ದೇವೆ! ಅವರೂ ಏಕೆ ಹಾಗೆ ಮಾಡಬಾರದು?” ಕಠೋರವಾದ ದುರಹಂಕಾರದಲ್ಲಿ ದೂರಾಲೋಚನೆ ಇರುವುದಿಲ್ಲ. ನಿರಂತರವಾದ ರಾಷ್ಟ್ರೀಯ ಸಮೃದ್ಧಿಯು ನೈಸರ್ಗಿಕ ಸಂಪನ್ಮೂಲಗಳು ಮತ್ತು ರಾಷ್ಟ್ರದ ನಾಗರಿಕರ ಉಪಕ್ರಮದ ಮೇಲೆ ಮಾತ್ರವಲ್ಲದೆ, ಮುಖ್ಯವಾಗಿ ಜನರ ನೈತಿಕ ನಡವಳಿಕೆ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ನಿರ್ಭರವಾಗಿರುತ್ತದೆ. ಒಂದು ರಾಷ್ಟ್ರವು ಎಷ್ಟೇ ಯಶಸ್ವಿಯಾಗಿದ್ದರೂ, ಅದು ನೀತಿಗೆಟ್ಟಿದ್ದೂ, ಸ್ವಾರ್ಥಿಯೂ ಹಾಗೂ ಸಮರಸವಿಲ್ಲದುದೂ ಆಗಿದ್ದರೆ, ಅದಕ್ಕೆ ಅದರ ನೆಮ್ಮದಿ ಮತ್ತು ಅದೃಷ್ಟವನ್ನು ಹಾಳುಮಾಡಲು ಅಂತರ್ಯುದ್ಧಗಳು, ವಿಶ್ವಾಸಘಾತುಕತನ ಮತ್ತು ವಿದೇಶೀ ಆಕ್ರಮಣಗಳಿರುತ್ತವೆ.

ಆದ್ದರಿಂದ, ಯಾವುದೇ ವ್ಯಕ್ತಿ ಅಥವಾ ರಾಷ್ಟ್ರವು ಸ್ವಾರ್ಥಿಯಾಗಿರಬಾರದು ಮತ್ತು ಇಡೀ ಆಲೋಚನೆಯನ್ನು ಆಹಾರ ಅಥವಾ ಬಟ್ಟೆ ಅಥವಾ ಐಹಿಕ ಸಂಪತ್ತಿನ ಆರ್ಜನೆಗಾಗಿ ಮೀಸಲಿಡಬಾರದು, ಬದಲಿಗೆ ವಿನಮ್ರವಾಗಿರಬೇಕು, ನಿರ್ಗತಿಕ ಸಹೋದರರೊಂದಿಗೆ ಸಮೃದ್ಧಿಯನ್ನು ಹಂಚಿಕೊಳ್ಳಬೇಕು ಮತ್ತು ಭಗವಂತನೊಬ್ಬನೇ ಸ್ವಾಮಿ ಮತ್ತು ಭೂಮಿಯ ಎಲ್ಲ ಕೊಡುಗೆಗಳನ್ನು ಕೊಡುವವನು ಎಂದು ಒಪ್ಪಿಕೊಳ್ಳಬೇಕು ಎಂದು ಯೇಸು ಬುದ್ಧಿವಾದ ಹೇಳುತ್ತಾನೆ.

ಇದನ್ನು ಹಂಚಿಕೊಳ್ಳಿ