ಗುರು ಪೂರ್ಣಿಮೆ 2012

ಆತ್ಮೀಯರೆ,

ಗುರು ಪೂರ್ಣಿಮೆಯ ಈ ಪವಿತ್ರ ದಿನದಂದು, ತಮ್ಮ ಗುರುವಿಗೆ ಪೂಜ್ಯ ಭಕ್ತಿಯನ್ನು ಅರ್ಪಿಸುವ ಭಾರತೀಯ ಸಂಪ್ರದಾಯವನ್ನು ಅನುಸರಿಸುವ ಎಲ್ಲಾ ಭಕ್ತರೊಂದಿಗೆ ನಾವು ಸೇರಿಕೊಳ್ಳುತ್ತಿದ್ದೇವೆ. ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತ, ಅವರ ಅಪರಿಮಿತ ಪ್ರೀತಿ ಮತ್ತು ಜ್ಞಾನನಿಧಿಯಿಂದ ಪ್ರತಿಯೊಬ್ಬ ಶಿಷ್ಯರಿಗೂ ಅವರು ನೀಡುವ ನಿರಂತರ ಅನುಗ್ರಹಕ್ಕಾಗಿ ನಾವು ಅವರನ್ನು ಗೌರವಿಸುತ್ತೇವೆ. “ಪರವಶಗೊಳಿಸುವ ದಿವ್ಯ ಪ್ರೇಮದ ಸರ್ವಶಕ್ತ ಸಾಮರ್ಥ್ಯವನ್ನು ಒಬ್ಬರು ವ್ಯಕ್ತಪಡಿಸಲು ಸಾಧ್ಯವಾದಾಗ, ಅದು ಇತರರ ಜೀವನದಲ್ಲಿ ಭಗವತ್‌ಪ್ರೇಮದ ಜೀವಂತ ಹೃದಯವನ್ನು ಜಾಗೃತಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ. ಅವರ ನುಡಿಗಳು ಮತ್ತು ಆಶೀರ್ವಾದಗಳಲ್ಲಿ ನಮ್ಮನ್ನು ಸಾಕ್ಷಾತ್‌ ಭಗವಂತನ ಸನ್ನಿಧಿಗೆ ಮೇಲಕ್ಕೆತ್ತುವ ಗ್ರಾಹ್ಯ ಸ್ಪಂದನೀಯ ಶಕ್ತಿಯಿದೆ. “ವಿಮೋಚನೆಗೊಂಡ ಗುರುಗಳು ಅನಂತತೆಯ ಸರ್ವವ್ಯಾಪಿತ್ವದಲ್ಲಿ ಅನಿರ್ಬಂಧಿತರಾಗಿರುತ್ತಾರೆ, ಶರೀರವು ಗತಿಸಿದ ನಂತರವೂ ತಮ್ಮ ಆಶೀರ್ವಾದಗಳನ್ನು ಅನುಗ್ರಹಿಸುತ್ತಾರೆ,” ಎಂದು ಅವರು ನಮಗೆ ಹೇಳಿದರು.

ಶ್ರದ್ಧಾವಂತ ಶಿಷ್ಯನು ನಿಜವಾದ ಗುರುವಿನಲ್ಲಿ, ಭಗವಂತನದೇ ಪ್ರೀತಿಯು ಮಾನವ ರೂಪದಲ್ಲಿ ಪ್ರಕಟವಾಗುತ್ತಿರುವುದನ್ನು ಕಾಣುತ್ತಾನೆ ಎಂದು ಗುರೂಜಿ ನಮಗೆ ಕಲಿಸಿದರು. ಅವರು ಬರೆದ ಈ ಮಾತುಗಳನ್ನು ಹೃದ್ಗತ ಮಾಡಿಕೊಳ್ಳಿ:

ಸ್ನೇಹಿತರ ಪರಿಶುದ್ಧ ಪ್ರೀತಿಯಲ್ಲಿ ಒಬ್ಬ ವ್ಯಕ್ತಿಯು, ಅದೃಶ್ಯನಾದ ಭಗವಂತನು ಭಾಗಶಃ ಗೋಚರಿಸುವ ನಸುನೋಟವನ್ನು ಕಾಣುತ್ತಾನೆ, ಆದರೆ ಗುರುವಿನಲ್ಲಿ ಅವನು ವಾಸ್ತವವಾಗಿ ಪ್ರಕಟವಾಗುತ್ತಾನೆ. ಗುರುವಿನ ಮೂಲಕ, ಮೌನಿ ಭಗವಂತನು ಮುಕ್ತವಾಗಿ ಮಾತನಾಡುತ್ತಾನೆ. ಅಜ್ಞಾತ ಭಗವಂತನಿಗಾಗಿ ಹೃದಯವು ಹಾತೊರೆತದಿಂದ ಉರಿಯುತ್ತಿರುವಾಗ ಅವನು ನಿಜವಾಗಿ ಗುರುವಾಗಿ ಬಂದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಏನಿದೆ?… ಶಿಷ್ಯನಿಗೆ ಕತ್ತಲೆಯ ಮಾರ್ಗಗಳನ್ನು ತೊರೆಯಲು ಮತ್ತು ಭಗವಂತನೆಡೆಗಿನ ಪ್ರಕಾಶಿತ ಹಾದಿಯನ್ನು ಅನುಸರಿಸಲು, ಸಹಾಯ ಮಾಡುವ ಗುರುವಿನ ಬಯಕೆಯೊಂದಿಗೆ ಭಕ್ತನ ವಿಮೋಚನೆಯ ಬಗ್ಗೆ ಭಗವಂತನು ತನಗಿರುವ ಬಯಕೆಯನ್ನು ಸಂಯೋಜಿಸುತ್ತಾನೆ. ಭಗವಂತ ಕಳುಹಿಸಿದ ಗುರುವನ್ನು ಅನುಸರಿಸುವವನು ಭಗವಂತನ ಶಾಶ್ವತ ಬೆಳಕಿನಲ್ಲಿ ನಡೆಯುತ್ತಾನೆ. ಮೌನವು (ಭಗವಂತನು) ಗುರುವಿನ ಧ್ವನಿಯ ಮೂಲಕ ಅಭಿವ್ಯಕ್ತವಾಗುತ್ತದೆ; ಗುರುವಿನ ಭಗವತ್‌ ಸಾಕ್ಷಾತ್ಕಾರದಲ್ಲಿ ಅಗ್ರಾಹ್ಯವು (ಭಗವಂತನು) ಗ್ರಾಹ್ಯವಾಗುತ್ತದೆ….

ಗ್ರಹಣಶೀಲರಾದವರು, ಗುರುಗಳು ಮಾತನಾಡುವಾಗ, ಭಗವಂತನ ಅನುಭಾವದ ಉನ್ನತ ಪ್ರಜ್ಞೆಯು ತಮ್ಮ ಹೃದಯ ಮತ್ತು ಮನಸ್ಸಿನೊಳಗೆ ಹರಿಯುತ್ತಾ ತಮ್ಮನ್ನು ಕರೆದುಕೊಂಡು ಹೋಗುತ್ತಿರುವಂತೆ ಮನಗಾಣುತ್ತಾರೆ. ಆಳವಾದ, ಭಕ್ತಿಪುರಸ್ಸರ ಧ್ಯಾನದ ಆಂತರಿಕ ಮಂದಿರದಲ್ಲಿ ಗುರುವಿನ ಅನುಗ್ರಹಕ್ಕಾಗಿ ಕರೆ ನೀಡಿದಾಗಲೆಲ್ಲ ಈ ಶ್ರುತಿಗೂಡುವಿಕೆಯು ಭಕ್ತನ ಪ್ರಜ್ಞೆಯನ್ನು ಅತ್ಯುನ್ನತ ರೀತಿಯಲ್ಲಿ ವ್ಯಾಪಿಸುತ್ತದೆ.

ಈ ಸಂದರ್ಭದಲ್ಲಿ ನೀವು ಗುರುವಿನ ಬೋಧನೆಗಳ “ಧ್ವನಿಯನ್ನು” ನಿಷ್ಠೆಯಿಂದ ಆಲಿಸಿದರೆ ಮತ್ತು ಅದರತ್ತ ಗಮನ ಹರಿಸಿದರೆ, ಹಾಗೂ ದಿವ್ಯ ಸಂಸರ್ಗಕ್ಕಾಗಿ ಗುರು ನೀಡಿದ ಯೋಗ ತಂತ್ರಗಳನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ, ನಿಮ್ಮ ದೈನಂದಿನ ಜೀವನದಲ್ಲಿ ವ್ಯಾಪಿಸುವ ಗುರುವಿನ ಪರಿವರ್ತನದಾಯಕ ಉಪಸ್ಥಿತಿಯನ್ನು ನೀವು ಮತ್ತೊಮ್ಮೆ ಅರಿತುಕೊಳ್ಳುವಂತಾಗಲಿ ಎಂದು ನಾನು ಪ್ರೀತಿಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ;. ನಿಮ್ಮ ಹೃದಯವು ಯಾವಾಗಲೂ ಸಂಪೂರ್ಣವಾಗಿ ತೆರೆದಿರಲಿ ಮತ್ತು ಗುರುವಿನ ಆಶೀರ್ವಾದಗಳ ಸಮೃದ್ಧಿಯನ್ನು ಸ್ವೀಕರಿಸಲಿ. ಜೈ ಗುರು!

 

ಭಗವಂತ ಮತ್ತು ಗುರುದೇವರ ದಿವ್ಯ ಪ್ರೇಮದಲ್ಲಿ,


ಶ್ರೀ ಶ್ರೀ ಮೃಣಾಲಿನಿ ಮಾತಾ

ಕಾಪಿರೈಟ್‌ © ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್.‌ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. 

ಇದನ್ನು ಹಂಚಿಕೊಳ್ಳಿ