ನಮ್ಮ ಗೌರವಾನ್ವಿತ ಸಂಘ ಮಾತಾ ಶ್ರೀ ಶ್ರೀ ಮೃಣಾಲಿನಿ ಮಾತಾರವರಿಂದ, ಈ ವರ್ಷ ಜುಲೈ 22ರಂದು ಆಚರಿಸಲಿರುವ, ಗುರು ಪೂರ್ಣಿಮೆಯ ವಿಶೇಷ ಸಂದೇಶ
ಆತ್ಮೀಯರೇ,
22 ಜುಲೈ, 2013
ಅನಾದಿಕಾಲದಿಂದ ಭಾರತದಲ್ಲಿನ ಭಕ್ತರು ತಮ್ಮ ಗುರುವಿಗೆ — ಭಗವಂತನು ಪ್ರಾಮಾಣಿಕರಾದ ಅನ್ವೇಷಕ ಆತ್ಮಗಳನ್ನು ತನ್ನೆಡೆಗೆ, ಹಿಂದಕ್ಕೆ ಕರೆ ತರಲು ಕಳುಹಿಸಿರುವ ಸಂದೇಶವಾಹಕನಾಗಿರುವವನಿಗೆ — ಗುರುವಂದನೆಯನ್ನು ಸಲ್ಲಿಸುತ್ತ ಬಂದಿದ್ದಾರೆ. ಈ ಪವಿತ್ರ ದಿನವಾದ ಗುರುಪೂರ್ಣಿಮೆಯಂದು ನಾವೆಲ್ಲರೂ, ನಮ್ಮವರೇ ಆದ ಪ್ರಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ, ಆ ಸಂಪ್ರದಾಯದಂತೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು, ನಾವೆಲ್ಲ ಒಟ್ಟಾಗಿ ಸೇರಿರುವಾಗ, ನಮ್ಮನ್ನು ಮಾನವ ಪ್ರಜ್ಞೆಯಿಂದ ದೈವೀ ಪ್ರಜ್ಞೆಗೆ ಮೇಲೇರಿಸಬಲ್ಲವರೆಡೆಗೆ ನಮ್ಮನ್ನು ಸೆಳೆದು ತಂದಿರುವ ಆ ಅತ್ಯಮೂಲ್ಯ ಉಡುಗೊರೆಯನ್ನು, ಹೊಸದಾಗಿ ಆಲೋಚಿಸುವ ಸದವಕಾಶ ನಮಗೆ ಬಂದಿರುತ್ತದೆ. ಆತ್ಮತೃಪ್ತಿಯನ್ನು ಅರಸುವಲ್ಲಿ, ನಮ್ಮ ಸೀಮಿತ ಇಂದ್ರಿಯ ಬಂಧಿತ ಮನಸ್ಸು, ನಮ್ಮ ಗ್ರಹಿಕೆಗಳ ಮೇಲೆ ಈ ಜಗತ್ತಿನ ವೈವಿಧ್ಯತೆಗಳ ಮತ್ತು ಮಾಯೆಯ ಪ್ರಭಾವಗಳಿಂದ, ವಿಭಿನ್ನ ದಿಕ್ಕುಗಳಿಗೆ ಸೆಳೆಯಲ್ಪಡುತ್ತದೆ. ಆದರೆ ನಿಜವಾದ ಗುರುವಿನ ಸಹಾಯದಿಂದ, ಮಾರ್ಗವು ನೇರ ಮತ್ತು ಸ್ಪಷ್ಟವಾಗುವುದು ಮತ್ತು ನಮ್ಮ ಅಂತಿಮ ವಿಜಯವು ನಿಶ್ಚಿತವಾಗಿರುತ್ತದೆ.
ಗುರುದೇವರು ನಮಗೆ ಹೇಳಿದ್ದಾರೆ, “ಗುರುವನ್ನು ಆಲಿಸುವುದು ಒಂದು ಕಲೆ. ಅದು ಶಿಷ್ಯನನ್ನು ಅಂತಿಮದ ಗುರಿಯೆಡೆಗೆ ಕರೆದೊಯ್ಯುತ್ತದೆ.” ತನ್ನ ಚರಣಗಳಲ್ಲಿ ಶರಣಾಗತನಾದ ಪ್ರತಿಯೊಂದು ಆತ್ಮವನ್ನೂ ಅವನು ತನ್ನ ಸರ್ವವ್ಯಾಪಿ ಪ್ರೇಮ ಮತ್ತು ವಿವೇಕದೊಂದಿಗೆ ತಲುಪುತ್ತಾನೆ; ನಮ್ಮ ಪಾತ್ರವೇನೆಂದರೆ, ಅವರ ಮಾರ್ಗದರ್ಶನ ಮತ್ತು ಅನುಗ್ರಹಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ಅನುವಾಗುವಂತೆ ತೀವ್ರಮಟ್ಟದಲ್ಲಿ ಆಲಿಸುವ ಸಾಮರ್ಥ್ಯವನ್ನು ಬೆಳಿಸಿಕೊಳ್ಳುವುದು. ನಮ್ಮ ಗಮನದಲ್ಲಿ ಏನಾದರೂ ಕೊರತೆ ಇದ್ದಲ್ಲಿ, ಅವರ ನುಡಿಗಳಿಂದ ಲಭಿಸಿದ ಸ್ಪೂರ್ತಿಯು, ನಮ್ಮ ನಿತ್ಯ ಜೀವನದ ತಲ್ಲೀನತೆಗಳಲ್ಲಿ, ಅತಿ ಸುಲಭವಾಗಿ ಮರೆಯಾಗುತ್ತದೆ. ಆದಾಗ್ಯೂ, ಯಾವಾಗ ಮನಸ್ಸಿನ ಏಕಾಗ್ರತೆಯಿಂದ ನಾವು, ನಮ್ಮನ್ನು ಅವರ ಉಪಸ್ಥಿತಿಯಲ್ಲಿ ಇಟ್ಟಾಗ ಮತ್ತು ಅವರು ನೀಡಿರುವ ಒಂದು ವಿಮೋಚನೆಯ ಸತ್ಯವನ್ನು ಆಂತರಿಕವಾಗಿ ಹೀರಿಕೊಂಡಾಗ, ಅದು ಒಂದು ಪ್ರೇರಕಶಕ್ತಿಯಾಗುತ್ತದೆ, ಗುರುವಿನ ಸಹಾಯಕ ಸಾಧನವಾಗುತ್ತದೆ. ನಮ್ಮ ಮಾನವ ತರ್ಕ, ಅವರನ್ನು ಅನುಸರಿಸುವ ಪ್ರಯತ್ನದಲ್ಲಿ ಒಂದು ಪ್ರಮುಖ ಸಾಧನವಾಗಿದ್ದರೂ, ಅದು ಸಹ ನಮ್ಮ ಅಹಂನ ಪಕ್ಷಪಾತಕ್ಕೆ, ಅದರ ಆದ್ಯತೆಗಳು ಮತ್ತು ದುರ್ಬಲತೆಗಳಿಗೆ ಬಲಿಯಾಗಿ, ಅವರ ಮಾರ್ಗದರ್ಶಿತ ಮಾತುಗಳನ್ನು ಆಲಿಸುವ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮನಸ್ಸು ನಮ್ಮ ಆಸೆಗಳನ್ನು ಗುರುವಿನ ಇಚ್ಛೆ ಎಂದು ತರ್ಕಬದ್ಧಗೊಳಿಸುತ್ತದೆ, ಅಥವಾ “ಚಿಕ್ಕ ಅಹಂ” ಕಷ್ಟವೆಂದು ಗುರುತಿಸಿದುದನ್ನು ಪ್ರತಿರೋಧಿಸುತ್ತದೆ. ನಾವು ತೆರೆದ ಮನಸ್ಸು ಮತ್ತು ವಿಶ್ವಾಸವಿಟ್ಟ ಹೃದಯ ಇವುಗಳೆರಡರಿಂದಲೂ ಆಲಿಸಿದಾಗ, ಆಳವಾದ ಶ್ರುತಿಗೂಡುವಿಕೆ ಹಾಗೂ ತಿಳಿವಳಿಕೆಗಳು ಬರುತ್ತವೆ. ಭಗವಂತನ ಅನುಗ್ರಹದ ಸೆಳೆತಕ್ಕೆ ಮತ್ತು ಗುರುವಿನ ಪ್ರೇಮಕ್ಕೆ, ಅವನಿಗೆ ನಮ್ಮ ಅತ್ಯುನ್ನತ ಒಳಿತು ಮಾತ್ರ ಬೇಕು, ಎಂಬುದನ್ನು ಅರಿತುಕೊಂಡು ನಾವು ಪ್ರತಿಕ್ರಿಯಿಸಿದಾಗ, ಅಹಂನ ರಕ್ಷಣಾತ್ಮಕ ಕವಚ ಕರಗಲು ಪ್ರಾರಂಭಿಸುತ್ತದೆ. ನಾವು ಅವರ ಪರಿವರ್ತನಾ ಸ್ಪರ್ಶಕ್ಕೆ ಹೆಚ್ಚು ವಿಧೇಯರಾಗುತ್ತೇವೆ, ನಮ್ಮ ಅವಶ್ಯಕ ಬದಲಾವಣೆಗೆ ಹೆಚ್ಚು ತೆರೆದುಕೊಳ್ಳುತ್ತೇವೆ. ನಾವು ಅವರಲ್ಲಿ ವಿನಮ್ರತೆ ಮತ್ತು ಭಕ್ತಿಯಿಂದ ಸಂಪೂರ್ಣವಾಗಿ ಶರಣಾಗತರಾದಲ್ಲಿ, ನಾವು ನಮ್ಮ ಆತ್ಮದ ಅನಾವರಣದ ಕೆಲಸವನ್ನು ತ್ವರಿತಗೊಳಿಸಲು, ಗುರುವಿನ ಶಕ್ತಿಯು ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಅನುವು ಮಾಡಿ ಕೊಡುತ್ತೇವೆ. ಸವಾಲುಗಳ ಸಂದರ್ಭಗಳು ನಮ್ಮೆದರು ಬಂದಾಗಲೂ ಕೂಡ, ನಾವು ಅವುಗಳನ್ನು, ಭಗವಂತನೆಡೆಗೆ ಸೆಳೆಯುವ ಶುದ್ಧೀಕರಣ ಸಂಸ್ಕಾರದ ಭಾಗವೆಂದು ಒಪ್ಪಿಕೊಳ್ಳಲು, ನಮಗೆ ಸಾಧ್ಯವಾಗುತ್ತದೆ.
ಗುರುದೇವರು ಕಲಿಸಿರುವ ಪವಿತ್ರ ಧ್ಯಾನ ತಂತ್ರಗಳ ಮೂಲಕ, ಅವರೊಡನೆ ನೇರವಾಗಿ ಶ್ರುತಿಗೂಡುವ ವಿಧಾನವನ್ನು ಕೊಟ್ಟಿರುತ್ತಾರೆ — ಅವರನ್ನು ನಮ್ಮ ಆತ್ಮದೊಂದಿಗೆ ಆಲಿಸುವ ಮೂಲಕ. ಚಂಚಲ ಆಲೋಚನೆಗಳು ಮತ್ತು ಭಾವಗಳು ನಿಶ್ಚಲಗೊಂಡಾಗ ಅಹಂನ ಸ್ಥಾಯಿ ಸ್ವಭಾವ ನಿಂತು ಹೋಗುತ್ತದೆ, ಅದು ನಮ್ಮ ಆತ್ಮದ ಅಂತರ್ಬೋಧೆಯು ಗುರುವಿನ ಉಪಸ್ಥಿತಿಯನ್ನು ಗ್ರಹಿಸಲು ಜಾಗೃತಗೊಳ್ಳುತ್ತದೆ. ಅವರ ಅನಂತಪ್ರಜ್ಞೆಯನ್ನು ಸ್ಪರ್ಶಿಸಿದ ಕೂಡಲೇ, ನಮ್ಮ ಗ್ರಹಿಕೆಯ ಶಕ್ತಿಯೂ ಅತ್ಯುನ್ನತ ಸ್ಥಿತಿಗೆ ಮೇಲೇರುತ್ತದೆ. ಅವರ ಚಿಂತನೆಗಳನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತೇವೆ, ಅದು ಶಬ್ದಗಳ ಮಾಧ್ಯಮವನ್ನು ಅತೀತವಾಗಿಸುತ್ತದೆ. ಒಂದು ವೇಳೆ ನಿಮ್ಮ ಸಂಪೂರ್ಣತನ್ಮಯತೆಯಿಂದ, ಅವನ ಮಾತುಗಳನ್ನು ಆಲಿಸಿ ಮತ್ತು ಅವರನ್ನು ವಿಶ್ವಾಸ ಪೂರ್ವಕವಾಗಿ ಅನುಸರಿಸಿದಲ್ಲಿ, ಅವರು ನಿಮಗೆ, ನೀವು ನಿಮ್ಮ ಆತ್ಮದ ಪ್ರಿಯ ಪ್ರಭುವಿನಲ್ಲಿ ತಾದಾತ್ಮ್ಯತೆ ಹೊಂದುವವರೆಗೆ, ಪ್ರತಿಯೊಂದು ಅಡಚಣೆಯನ್ನೂ ಪರಿಹರಿಸಲು ಸಹಾಯ ಮಾಡುತ್ತಾರೆ. ಜೈ ಗುರು!
ಭಗವಂತನ ಮತ್ತು ಗುರುದೇವರ ಪ್ರೇಮದಲ್ಲಿ ಮತ್ತು ಅವಿರತ ಆಶೀರ್ವಾದಗಳೊಂದಿಗೆ,
ಶ್ರೀ ಶ್ರೀ ಮೃಣಾಲಿನಿ ಮಾತಾ
















