ಆತ್ಮಾವಲೋಕನ: ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಹೇಗೆ ಸಾಧಿಸುವುದು

Butterfly, roses and eyes of introspectionಯೋಗದಾ ಸತ್ಸಂಗ ಪತ್ರಿಕೆಯ 2009 ಅಕ್ಟೋಬರ್-ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಿಂದ ಆಯ್ದಭಾಗಗಳು.

ಭಾರತದ ಋಷಿಗಳು ಅತಿ ಪ್ರಾಚೀನ ಕಾಲದಿಂದ ಇಡೀ ಮಾನವ ಜೀವನದ ಅಸ್ತಿತ್ವವನ್ನು ಆಳವಾಗಿ ವಿಶ್ಲೇಷಿಸಿದ್ದಾರೆ ಮತ್ತು ಜೀವನದ ಅತ್ಯುನ್ನತ ಸಾಮರ್ಥ್ಯಗಳನ್ನು ಸಾಧಿಸಿಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ. ಮನೋವಿಜ್ಞಾನವು ನಿಮಗೆ, ನೀವು ಏನು ಎಂಬುದನ್ನು ತಿಳಿಸುತ್ತದೆ; ನೈತಿಕತೆ ನಿಮಗೆ ನೀವು ಏನಾಗಿರಬೇಕು ಎಂಬುದನ್ನು ತಿಳಿಸುತ್ತದೆ. ಶರೀರ, ಮನಸ್ಸು ಮತ್ತು ಆತ್ಮದ ಆಧ್ಯಾತ್ಮಿಕ ವಿಕಸನಕ್ಕಾಗಿ ನೈಜ ಧಾರ್ಮಿಕ ತರಬೇತಿಯ ಭಾಗವಾಗಿ ಋಷಿಗಳು ಈ ಎರಡನ್ನೂ ಒತ್ತಿ ಹೇಳಿದ್ದಾರೆ.

ಪ್ರತಿದಿನ ನೀವು ನಿಮ್ಮ ಮುಖ ಮತ್ತು ದೇಹವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವಿರಿ, ಏಕೆಂದರೆ ನೀವು ಇತರರ ಮುಂದೆ ಉತ್ತಮವಾಗಿ ಕಾಣಬೇಕೆಂದು ಬಯಸುತ್ತೀರಿ. ಮೇಲ್ನೋಟದ ಚಹರೆಯ ಹಿಂದಿನ ನಿಮ್ಮ ಮುಖವನ್ನು ಖಚಿತಪಡಿಸಲು ನೀವು ಪ್ರತಿದಿನ ಆತ್ಮಾವಲೋಕನ, ಆತ್ಮ-ವಿಶ್ಲೇಷಣೆಯ ಆಂತರಿಕ ಕನ್ನಡಿಯಲ್ಲಿ ನೋಡಿಕೊಳ್ಳುವುದು ಇನ್ನೂ ಹೆಚ್ಚು ಮುಖ್ಯವಲ್ಲವೆ? ಎಲ್ಲ ಬಾಹ್ಯ ಸೌಂದರ್ಯವು ಅಂತರ್ಗತ ಆತ್ಮದ ದೈವತ್ವದಿಂದಲೇ ಬರುವುದು. ಹೇಗೆ ಮುಖದ ಮೇಲಿನ ಸಣ್ಣ ಮೊಡವೆ ಅಥವಾ ಗಾಯದ ಗುರುತು ಸೌಂದರ್ಯವನ್ನು ಹಾಳು ಮಾಡುವುದೋ, ಹಾಗೆಯೇ ಆತ್ಮದ ಪ್ರತಿಬಿಂಬವನ್ನು ಕೆಡಿಸುವಂತಹ, ಮರ್ತ್ಯ ಅಸ್ತಿತ್ವದ ಅನಿಶ್ಚಿತತೆಯಿಂದ ಉಂಟಾಗುವ ಕೋಪ, ಭಯ, ದ್ವೇಷ, ಅಸೂಯೆ, ಚಿಂತೆಗಳೆಂಬ ಮಾನಸಿಕ ಅಂದಗೆಡಿಸುವಿಕೆಗಳಿವೆ. ನೀವು ಪ್ರತಿದಿನವೂ ಈ ರೂಪಗೆಡಿಸುವುಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಆಂತರಿಕ ಅಸ್ತಿತ್ವದ ಸೌಂದರ್ಯವು ಪ್ರಕಾಶಿಸುತ್ತದೆ.

ವಿಶ್ಲೇಷಣೆಯ ಮೂಲಕ ಮಾನವ ಸಮಸ್ಯೆಗಳು ಮೂರು ವಿಧ ಎಂದು ನಾವು ನೋಡಬಹುದು: ದೇಹವನ್ನು ಭಾದಿಸುವಂತಹವು, ಮನಸ್ಸಿನ ಮೇಲೆ ದಾಳಿ ಮಾಡುವಂತಹವು, ಮತ್ತು ಆತ್ಮವನ್ನು ನಿರ್ಬಂಧಿಸುವಂತಹವು. ವ್ಯಾಧಿ, ವೃದ್ಧಾಪ್ಯ, ಮತ್ತು ಮರಣಗಳು ದೇಹದ ಸಮಸ್ಯೆಗಳಾಗಿವೆ. ದುಃಖ, ಭಯ, ಕೋಪ, ಈಡೇರದ ಬಯಕೆಗಳು, ಅತೃಪ್ತಿ, ದ್ವೇಷ, ನರಗಳ ಉದ್ದೀಪನದ ಒತ್ತಡ ಅಥವಾ ಮಾನಸಿಕ ಕ್ಯಾನ್ಸರ್‌ ಆದ ಮಾನಸಿಕ ಗೀಳು ಇವುಗಳಿಂದ ಮಾನಸಿಕ ವ್ಯಾಧಿಗಳು ಬರುತ್ತವೆ. ಮತ್ತು ಆತ್ಮದ ಅಜ್ಞಾನವೆಂಬ ವ್ಯಾಧಿಯು ಎಲ್ಲಕ್ಕಿಂತ ಹಾನಿಕಾರಕ, ಅದೇ ಬೇರೆಲ್ಲ ಕಷ್ಟಗಳಿಗೆ ಮೂಲ ಕಾರಣ.

ನಿಜವಾದ ಸ್ವಾತಂತ್ರ್ಯವಿರುವುದು ಆತ್ಮದ ಅರಿವಿನಲ್ಲಿ ಮಾತ್ರ. ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಿ ಮತ್ತು ನಿಮ್ಮ ಆತ್ಮದ ಅರಿವು ಎಷ್ಟರಮಟ್ಟಿಗೆ ಅಜ್ಞಾನದ ಬೇರುಗಳಿಂದ ಬಂಧಿತವಾಗಿವೆ ಎಂಬುದನ್ನು ಗೊತ್ತುಪಡಿಸಿಕೊಳ್ಳಿ. ನಿಜವಾದ ಸ್ವಾತಂತ್ರ್ಯವು ಆ ಬೇರುಗಳನ್ನು ಕತ್ತರಿಸಿದಾಗ ಮಾತ್ರವೇ ಸಾಧ್ಯ.

ಯೋಚಿಸಿ ಮತ್ತು ನಿಮ್ಮ ಜೀವನವನ್ನು ಯೋಜಿಸಿ, ಆಗ ನೀವು ಹೇಗೆ ಬದಲಾಗುತ್ತೀರೋ ನೋಡಿ. ಸದಾ ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ಒಳ್ಳೆಯ ಸಹವಾಸ ಮಾಡಿ, ನಿಮಗೆ ದೇವರನ್ನು ಮತ್ತು ಜೀವನದ ಪವಿತ್ರ ಸಂಗತಿಗಳನ್ನು ನೆನಪಿಸುವಂತಹ ಒಡನಾಡಿಗಳ ಸಹವಾಸ. ಪ್ರತಿದಿನವೂ ನೀವು ನಿಮ್ಮ ದುರಭ್ಯಾಸಗಳನ್ನು ಹೇಗೆ ಬದಲಿಸುತ್ತೀರಿ; ನಿಮ್ಮ ದಿನವನ್ನು ಹೇಗೆ ಆಯೋಜಿಸುತ್ತೀರಿ; ಹೇಗೆ ನಿಮ್ಮ ಶಾಂತತೆಯನ್ನು ಕಾಪಾಡುತ್ತೀರಿ ಎಂಬವುಗಳ ಬಗ್ಗೆ ನಿಮಗೆ ಅರಿವಿರಲಿ. ಮತ್ತು ಆಗಾಗ್ಗೆ ಆಂತರಿಕವಾಗಿ ಕೇಳಿಕೊಳ್ಳಿ, “ಪ್ರಭು, ನಾನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿರುವೆನೆ? ಕೇವಲ ನಿನ್ನೊಂದಿಗಿರಲೋಸುಗ ನಾನು ಪ್ರತಿದಿನ ಸ್ವಲ್ಪ ಬಿಡುವಿನ ವೇಳೆಯನ್ನು ಹೇಗೆ ಹೊಂದಿಸಿಕೊಳ್ಳಲಿ?” ನಾನು ಯಾವಾಗಲೂ ಹೀಗೇ ಕೇಳುತ್ತೇನೆ. ಆಗ ಅವನು ಉತ್ತರಿಸುತ್ತಾನೆ, “ನೀನು ನನ್ನೊಂದಿಗೇ ಇರುವೆ, ಏಕೆಂದರೆ ನೀನು ನನ್ನ ಬಗ್ಗೆಯೇ ಯೋಚಿಸುತ್ತಿರುವೆ.”

ಧ್ಯಾನ ಮತ್ತು ದೇವರಲ್ಲಿ ಆಳವಾದ ಪ್ರಾರ್ಥನೆಯೊಂದಿಗೆ ನಿಮ್ಮ ಮುಂಜಾನೆಯನ್ನು ಆರಂಭಿಸಿ; ಮತ್ತು ಧ್ಯಾನದ ನಂತರ ನಿಮ್ಮ ಜೀವನ ಮತ್ತು ನಿಮ್ಮ ಎಲ್ಲ ಉದಾತ್ತ ಪ್ರಯತ್ನಗಳಲ್ಲಿ ಮಾರ್ಗದರ್ಶಿಸುವಂತೆ ದೇವರಲ್ಲಿ ಕೇಳಿಕೊಳ್ಳಿ: “ಪ್ರಭು, ನಾನು ವಿವೇಚಿಸುತ್ತೇನೆ, ನಾನು ಸಂಕಲ್ಪಿಸುತ್ತೇನೆ, ನಾನು ಕ್ರಿಯಾಶೀಲನಾಗುತ್ತೇನೆ; ಆದರೆ ನಾನು ಮಾಡಬೇಕಾದ ಸರಿಯಾದುದರೆಡೆಗೆ ನನ್ನ ವಿವೇಚನೆ, ಸಂಕಲ್ಪ ಹಾಗೂ ಕಾರ್ಯಶೀಲತೆಯನ್ನು ಮಾರ್ಗದರ್ಶನ ಮಾಡು.” ಆ ದಿನದಲ್ಲಿ ಪ್ರತಿಯೊಂದರಲ್ಲಿಯೂ ಉತ್ತಮರಾಗಿರಲು ನಿರ್ಧರಿಸಿ. ನೀವು ಶಾಂತತೆಯೊಂದಿಗೆ ಬೆಳಗಿನ ಹೊತ್ತನ್ನು ಆರಂಭಿಸಿ, ಅದನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅಥವಾ ನೀವು ಹೊಂದಬಯಸುವ ಒಂದು ಒಳ್ಳೆಯ ಅಭ್ಯಾಸವನ್ನು ಕಾರ್ಯಗತ ಮಾಡಲು ಪ್ರಯತ್ನಿಸುತ್ತಿರುವಾಗ, ಎಲ್ಲ ಸಮಯದಲ್ಲೂ ದೇವರನ್ನು ಸ್ಮರಿಸುತ್ತಾ ಇದ್ದರೆ, ರಾತ್ರಿಯಾದಾಗ ನೀವು ಆ ದಿನವನ್ನು ಚೆನ್ನಾಗಿ ಬಳಸಿಕೊಂಡಿರುವಿರಿ, ಎಂಬ ಅರಿವಿನೊಂದಿಗೆ ನಿದ್ರಿಸಬಹುದು. ಆಗ ನೀವು ಪ್ರಗತಿ ಸಾಧಿಸುತ್ತಿರುವಿರಿ ಎಂದು ನಿಮಗೆ ತಿಳಿಯುತ್ತದೆ.

ಇದನ್ನು ಹಂಚಿಕೊಳ್ಳಿ