ಶ್ರೀ ಶ್ರೀ ದಯಾ ಮಾತಾರವರಿಂದ ಕೊನೆಯ ಕ್ರಿಸ್ಮಸ್‌ ಹಬ್ಬದ ಸಂದೇಶ

“ನಿಮ್ಮ ಆಧ್ಯಾತ್ಮಿಕ ಜಾಗೃತಿಯ ತೊಟ್ಟಿಲಿನಲ್ಲಿ ಮತ್ತೆ ಜನಿಸಿದ, ಯೇಸುವಿನಲ್ಲಿ ಪ್ರಕಟವಾದ, ದಿವ್ಯ ಕ್ರಿಸ್ತ ಪ್ರಜ್ಞೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಭೂಮಿಯ ಮೇಲೆ ಕ್ರಿಸ್ತನ ಆಗಮನವನ್ನು ಆಚರಿಸಿ...”

ಕ್ರಿಸ್ತ ಪ್ರಜ್ಞೆಯ ಉಗಮವನ್ನು ಪೂಜ್ಯ ಪ್ರಭು ಏಸುವಿನ ರೂಪದಲ್ಲಿ ನಾವು ಗೌರವಿಸುತ್ತಿರುವಂತೆ, ಈ ಪವಿತ್ರ ಸುಸಂದರ್ಭದಲ್ಲಿ ಬಲವಾಗಿ ಅನುಭವಕ್ಕೆ ಬರುವ ಆನಂದ ಮತ್ತು ಭರವಸೆಗಳಿಂದ ನಿಮ್ಮೆಲ್ಲರ ಹೃದಯಗಳು ನವ ಉತ್ತುಂಗಕ್ಕೇರಲಿ. ದೇವರ ಬೆಳಕನ್ನು ಪರಿಶುದ್ಧವಾಗಿ ಪ್ರತಿಫಲಿಸುವ ಅಂತಹ ಮಹನೀಯರ ಆಗಮನವು ವಿಷಯ ಕೇಂದ್ರಿತ ಅಸ್ತಿತ್ವದಿಂದ ನಮ್ಮ ಆತ್ಮದ ಅಗಣಿತ ಸ್ವರೂಪದೆಡೆಗೆ ಪುನರ್‌ ಜನ್ಮತಾಳುವ ಅನುಭವವನ್ನು ಹೊಂದಲು ಸಾಧ್ಯವೆಂಬ ವಿಶ್ವಾಸವನ್ನು ಬಲಪಡಿಸುತ್ತದೆ. ನಮ್ಮ ಪ್ರಜ್ಞೆಯನ್ನು ವಿಸ್ತರಿಸಲು ಮತ್ತು ನಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ದೇವರ ಒಳ್ಳೆಯತನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಅವರಲ್ಲಿ ನಾವು ನಮ್ಮ ಅಸೀಮ ಸಾಮರ್ಥ್ಯವನ್ನು ಕಾಣುತ್ತೇವೆ.

ಏಸುವು ಜನ್ಮ ತಳೆದು ಶತಮಾನಗಳೇ ಕಳೆದಿದ್ದರೂ, ಅವನ ದೃಷ್ಟಾಂತದ ಶಕ್ತಿ ಮತ್ತು ಸರ್ವವ್ಯಾಪಿ ಪ್ರೀತಿಯು ಗ್ರಹಣಶೀಲ ಆತ್ಮಗಳನ್ನು ಪರಿವರ್ತಿಸುತ್ತಲೇ ಸಾಗಿದೆ. ಅವನೂ ಸಹ ಸಾಕಷ್ಟು ಸಂಘರ್ಷ ಮತ್ತು ಪ್ರಕ್ಷುಬ್ಧತೆಯಿದ್ದ ಸಮಯದಲ್ಲಿ ವಾಸಿಸುತ್ತಿದ್ದ, ಆದರೆ ಇಂತಹ ಸನ್ನಿವೇಶದಲ್ಲೂ ಅತ್ಯುತ್ಕೃಷ್ಟವಾಗಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅವನು ನಮಗೆ ತೋರಿಸಿಕೊಟ್ಟಿದ್ದಾನೆ — ನಾವು ಈ ಪ್ರಪಂಚದ ದ್ವಂದ್ವಗಳಿಂದ ಮೇಲೇರಿ ನಮ್ಮೊಳಗೆ ಶಾಂತಿಯನ್ನು ಕಂಡುಕೊಳ್ಳಲು ಮತ್ತು ಇತರರಿಗೆ ಶಾಂತಿ ಮತ್ತು ಪ್ರೀತಿಯನ್ನು ಹಂಚಲು ಸಾಧ್ಯವಾಗುವಂತೆ, ಪರಮಪಿತನಂತೆಯೇ ಎಲ್ಲರೆಡೆಗೆ ಸಹಾನುಭೂತಿ ತೋರಲು ಸಾಧ್ಯವಾಗುವಂತೆ ಅವನೊಂದಿಗೆ ತಾದಾತ್ಮ್ಯ ಹೊಂದುವ ಬಗೆಯನ್ನು ನಮಗೆ ತಿಳಿಸಿಕೊಟ್ಟಿದ್ದಾನೆ.

ಕ್ರಿಸ್ತನ ಜೀವನದಿಂದ ಸ್ಫೂರ್ತಿ ಪಡೆದು, ಅವನು ವ್ಯಕ್ತಪಡಿಸಿದ ಗುಣಗಳನ್ನು ಅನುಸರಿಸಲು ಶ್ರಮಿಸುವ ಮೂಲಕ, ನೀವು ಅವನಲ್ಲಿ ಮತ್ತು ದೇವರಲ್ಲಿ-ಒಂದಾದ ಎಲ್ಲ ಆತ್ಮಗಳಲ್ಲಿ ಪ್ರಕಟವಾಗಿರುವ ಚೈತನ್ಯವನ್ನು ಹೆಚ್ಚು ಆಳವಾಗಿ ಅರಗಿಸಿಕೊಳ್ಳಲು ನಿಮ್ಮ ಹೃದಯವನ್ನು ಮುಕ್ತವಾಗಿ ತೆರೆಯಬೇಕು. ವಿಶ್ವವನ್ನು ಎತ್ತಿಹಿಡಿಯುವ ಶಕ್ತಿಯು ಅವನ ಅಸ್ತಿತ್ವವನ್ನು ತುಂಬಿತ್ತು; ಆದರೆ ಅವನ ನಮ್ರತೆಯು ಅದಕ್ಕೂ ಮಿಗಿಲಾಗಿತ್ತು, ಅದು ಅವನಿಗೆ ದೇವರ ಇಚ್ಛೆ ಮತ್ತು ಪ್ರೀತಿಯನ್ನು ಪರಿಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿತು. ಎಲ್ಲಿಯವರೆಗೆ ನಾವು ನಮ್ಮದೇ ಅಹಂಗಳ ಅವಶ್ಯಕತೆಗಳು ಮತ್ತು ಅಭಿಪ್ರಾಯಗಳ ಕೋಟೆಯೊಳಗೆ ವಾಸಿಸುವೆವೋ ಅಲ್ಲಿಯವರೆಗೆ, ದೇವರು ಮತ್ತು ಪರಸ್ಪರರಿಂದ ನಮ್ಮನ್ನು ಪ್ರತ್ಯೇಕಗೊಳಿಸಿಕೊಳ್ಳುವ ಅಡೆತಡೆಗಳನ್ನು ಸುಲಭವಾಗಿ ನಿರ್ಮಾಣ ಮಾಡಿಕೊಳ್ಳುತ್ತೇವೆ. ಆದರೆ ಯಾವಾಗ ನಮ್ಮ ಬಗ್ಗೆ ನಾವು ಕಡಿಮೆ ಆಲೋಚಿಸುತ್ತೇವೆಯೋ, ಆಗ ಎಲ್ಲ ಮಾರ್ಗಗಳಿಂದಲೂ ಹರಿದುಬರುವ ಆ ದೇವರ ವಿವೇಕವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆ ಮೂಲಕ ನಮ್ಮ ಅರ್ಥಗ್ರಹಿಕೆ ಮತ್ತು ಕರುಣೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಹುದ್ದೆ ಅಥವಾ ಬಾಹ್ಯ ಮನ್ನಣೆಗಳ ಅಗತ್ಯವಿಲ್ಲದೇ ಕ್ರಿಸ್ತನು ಪರಮ ಪಿತನ ಪ್ರೀತಿಯಲ್ಲಿ ಸುರಕ್ಷಿತವಾಗಿದ್ದನು. ಅವನು ಬಯಸಿದ್ದು ಸೇವೆ ಮಾಡುವುದನ್ನು ಮಾತ್ರ ಮತ್ತು ನಾವೂ ಅದನ್ನೇ ಮಾಡುವ ಮೂಲಕ, ಇತರರಿಗೆ ಕೊಡುವುದರಲ್ಲಿರುವ ಆನಂದದ ಅನುಭವ, ಅವನಿಗಾದಂತೆ ನಮಗೂ ಆಗುತ್ತದೆ. ತಪ್ಪುಗಳನ್ನು ಮಾಡಿದವರನ್ನೂ ಒಳಗೊಂಡಂತೆ ಕ್ರಿಸ್ತನು ಎಲ್ಲರಲ್ಲಿಯೂ ದೇವರನ್ನು ಕಂಡನು, ಏಕೆಂದರೆ ಮಾನುಷ ದೋಷಗಳಿಂದಾಚೆ ಅವರ ನೈಜ ಆತ್ಮವನ್ನು ಅವನು ನೋಡಿದನು. ನಾವೂ ಸಹ ಪ್ರೀತಿಯ ಮತ್ತು ವಿಮರ್ಶನಾತ್ಮಕವಲ್ಲದ ಮನೋಭಾವವನ್ನು ಅಭ್ಯಾಸ ಮಾಡಬಹುದು; ಅದು, “ನನ್ನ ದೇವರು ಆ ಆತ್ಮದಲ್ಲೂ ಇದ್ದಾನೆ,” ಎಂಬ ಅರಿವು ಮೂಡಿದಾಗ ಬರುತ್ತದೆ.

ಪ್ರತಿಯೊಂದು ಕಲ್ಯಾಣ ಕಾರ್ಯವೂ ನಮ್ಮ ಪ್ರಜ್ಞೆಯನ್ನು ವಿಸ್ತರಿಸುತ್ತದೆ. ಆದರೆ ಪ್ರಕ್ಷುಬ್ಧ ಆಲೋಚನೆಗಳು ಮತ್ತು ಭಾವನೆಗಳು ಕಡಿಮೆಯಾಗುವ ಮೌನ ಮಂದಿರವನ್ನು ಪ್ರವೇಶಿಸುವ ಮೂಲಕ ನಾವು “ಎಲ್ಲಾ ತಿಳುವಳಿಕೆಗಳನ್ನು ಮೀರಿದ ಶಾಂತಿ”ಯನ್ನು ಸಂಪೂರ್ಣವಾಗಿ ಅನುಭವಿಸಬಹುದು, ಕ್ರಿಸ್ತನು ಅನುಭವಿಸಿದ ಅನಂತ ಪ್ರೀತಿ – ದೇವರು ಎಲ್ಲಾ ಆತ್ಮಗಳನ್ನು ತನ್ನೆಡೆಗೆ ಸೆಳೆಯುವಂತಹ ಪ್ರೀತಿಯನ್ನು ಅನುಭವಿಸಬಹುದು. ಅಂತಹ ಆಂತರಿಕ ಸಂಸರ್ಗದ ಆಳವು ಕ್ರಮೇಣ ಬರುತ್ತದೆ. ಈ ನಿಟ್ಟಿನಲ್ಲಿ ನಾವು ಕೈಗೊಳ್ಳುವ ಪ್ರತಿಯೊಂದು ಪ್ರಯತ್ನವು ನಮ್ಮ ಜೀವನದಲ್ಲಿ ಹೆಚ್ಚಿನ ಶಾಂತತೆ, ಇತರರೆಡೆಗೆ ಸಹಾನುಭೂತಿ ಮತ್ತು ದೈವದ ಜೊತೆಗಿನ ನಿಕಟತೆಯನ್ನು ಸಾಧ್ಯವಾಗಿಸುತ್ತದೆ. ಇನ್ನಷ್ಟು ಪರಿಶ್ರಮಪಟ್ಟರೆ, ನಾವು “ಅನಂತ ಕೃಪೆಯೊಂದಿಗೆ (ಭಗವಂತನೊಂದಿಗೆ), ವರ್ಣನಾತೀತ ಮಹಿಮೆಯೊಂದಿಗೆ (ಭಗವಂತನೊಂದಿಗೆ), ಶಾಶ್ವತ ರಕ್ಷಣೆಯೊಂದಿಗೆ (ಭಗವಂತನೊಂದಿಗೆ) ಅನಿರ್ವಚನೀಯ ಮಾಧುರ್ಯದ ಸಂಸರ್ಗವನ್ನು ಹೊಂದಬಹುದು,” ಎಂದು ಗುರುದೇವರು ನಮಗೆ ಹೇಳಿದ್ದಾರೆ. ಇದು ಈ ಕ್ರಿಸ್ಮಸ್ ಋತುವಿನಲ್ಲಿ ದೇವರು ನಿಮಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಇದು ಸಂತಸದ ಆತ್ಮ-ಜಾಗೃತಿಯ ಆರಂಭವಾಗಿರಲಿ ಮತ್ತು ಇತರರೊಂದಿಗೆ ಸರ್ವರನ್ನೂ ಒಳಗೊಳ್ಳುವ ಅವನ ಪ್ರೀತಿ ಮತ್ತು ತಿಳುವಳಿಕೆಯನ್ನು ಹಂಚಿಕೊಳ್ಳುವ ಸಮಯವಾಗಿರಲಿ.

ನಿಮಗೆ ಮತ್ತು ನಿಮ್ಮೆಲ್ಲಾ ಆತ್ಮೀಯರಿಗೆ ಕ್ರಿಸ್ಮಸ್ ಹಬ್ಬದ ಶುಭಾಶೀರ್ವಾದಗಳು.

ಶ್ರೀ ದಯಾಮಾತಾ

Copyright © 2010 Self-Realization Fellowship. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ