ಪ್ರೀತಿಪಾತ್ರರೇ,
ಜಗದಾದ್ಯಂತ ಜನ್ಮಾಷ್ಠಮಿಯನ್ನು, ಭಗವಾನ್ ಶ್ರೀಕೃಷ್ಣನ ಜನ್ಮದಿನಾಚರಣೆಯನ್ನು, ಆಚರಿಸಲು ನಾವೆಲ್ಲರೂ ಹೀಗೆ ಒಂದುಗೂಡಿರುವಾಗ, ನೀವು ದಿವ್ಯ ಪ್ರೇಮದ ಮಹಾನ್ ಅವತಾರದ ಆತ್ಮವನ್ನು ಜಾಗೃತಿಗೊಳಿಸುವ ಹಾಡನ್ನು ನಿಮ್ಮ ಹೃದಯದಲ್ಲಿ ಕೇಳುವಂತಾಗಲಿ. ಕೃಷ್ಣನ ಕೊಳಲಿನ ಮನಸೂರೆಗೊಳ್ಳುವ ಇಂಪಾದ ಗಾನ, ನಮ್ಮ ಕಳೆದುಕೊಂಡ ನಿತ್ಯ ಜೀವನ ಮತ್ತು ಆನಂದದ ಸಾಮ್ರಾಜ್ಯದ ಗಾಢವಾದ ಹಂಬಲಿಕೆಯನ್ನು ಜಾಗೃತಗೊಳಿಸುತ್ತಾ, ನಮ್ಮ ಆತ್ಮದ ವಿಕಾಸದಲ್ಲಿ ನಮ್ಮನ್ನು ಮುಂದಕ್ಕೆ ಸೆಳೆಯುವ ಭಗವಂತನ ಆಂತರ್ಯದ ಕರೆಯನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ ಕೃಷ್ಣನ ಜೀವನ ಮತ್ತು ಅರ್ಜುನನಿಗೆ ಅವನು ನೀಡಿದ ಜ್ಞಾನದ ದರ್ಶನವು, ಆ ಸಾಮ್ರಾಜ್ಯವನ್ನು ಪುನಃ ಪಡೆಯಲು, ನಾವು ಆ ಗುರಿಯಿಂದ ನಮ್ಮನ್ನು ವಿಮುಖಗೊಳಿಸಲು ಪ್ರಯತ್ನಿಸುವ ಎಲ್ಲ ಅಂತರಿಕ ಮತ್ತು ಬಾಹ್ಯ ಸನ್ನಿವೇಶಗಳು ನಮ್ಮನ್ನು ಬೆದರಿಸಲಾಗದಂತಹ ಒಬ್ಬ ನೈಜ ಆಧ್ಯಾತ್ಮಿಕ ಯೋಧನ ಶೌರ್ಯ, ಶಿಸ್ತು ಮತ್ತು ಅಭೇದ್ಯವಾದ ನಿರ್ಧಾರವನ್ನು ಬೆಳೆಸಿಕೊಳ್ಳಲೇ ಬೇಕಾಗುತ್ತದೆ ಎಂಬುದನ್ನು ಜ್ಞಾಪಿಸುತ್ತದೆ.
ಇಂದಿನ ಜಗತ್ತಿನಲ್ಲಿ ಎಲ್ಲವೂ ಕೂಡ ನಮ್ಮ ಗಮನವನ್ನು ಹೊರಕ್ಕೆ ಸೆಳೆಯಲು ಸಂಚು ಹೂಡುತ್ತವೆ ಎಂದು ಅನಿಸಬಹುದು — ದಿನನಿತ್ಯದ ಒತ್ತಡಗಳು ಮತ್ತು ಜವಾಬ್ದಾರಿಗಳು, ಮತ್ತು ಬದಲಾವಣೆಯ ಹೆಚ್ಚುತ್ತಿರುವ ಗತಿ. ಬಹಳಷ್ಟು ಸಲ ಮನುಷ್ಯನ ಸ್ವಭಾವದ ಪ್ರಕೃತಿಯೇನೆಂದರೆ, ನಮ್ಮ ಗಮನದ ಮೇಲಿನ ಆ ಬೇಡಿಕೆಗಳಿಂದ ಎದೆಗುಂದುವುದು ಅಥವಾ ತಿರುಗಿ ಬೀಳುವುದು, ಮತ್ತು ನಮ್ಮ ಜೀವನ ಬಹಳ ಸರಳವಾಗಿದ್ದಲ್ಲಿ ನಾವು ಹೆಚ್ಚು ಶೀಘ್ರವಾಗಿ ಮುಂದುವರೆಯುತ್ತಿದ್ದೆವು ಎಂದು ಅಂದುಕೊಳ್ಳುವುದು. ಆದರೆ ಗುರುದೇವ ಪರಮಹಂಸ ಯೋಗಾನಂದರು ನಮಗೆ ಹೇಳಿರುವ ಹಾಗೆ, “ಭಗವದ್ಗೀತೆಯಲ್ಲಿರುವ ಶ್ರೀ ಕೃಷ್ಣನ ಸಂದೇಶವು ಆಧುನಿಕ ಯುಗಕ್ಕೆ, ಮತ್ತು ಎಲ್ಲ ಯುಗಗಳಿಗೆ ಯಥೋಚಿತವಾದ ಉತ್ತರ: ಮಮಕಾರರಹಿತ ಕರ್ತವ್ಯನಿರತ ಯೋಗ, ಮತ್ತು ಭಗವದ್-ಸಾಕ್ಷಾತ್ಕಾರಕ್ಕಾಗಿ ಧ್ಯಾನ.” ಭಗವಂತ ಮತ್ತು ನಮ್ಮ ಕರ್ಮ ನಮ್ಮನಿರಿಸಿರುವ ಯುದ್ಧಭೂಮಿಯಲ್ಲಿರಿಸಿರುವುದು. ನಾವು ಮಾಯೆಯ ಮೇಲೆ ವಿಜಯವನ್ನು ಸಾಧಿಸುವ ಸಮತೋಲಿತ ಜೀವನದ ಕಲೆಯನ್ನು ಕಲಿಯಬೇಕೆಂಬುದಾಗಿದೆ. ಭಗವಂತನು ನಮಗೆ ಆದರ್ಶ ಬಾಹ್ಯ ಸನ್ನಿವೇಶಗಳನ್ನೇನೂ ಖಾತರಿಪಡಿಸಲಾರ. ಬದಲಾಗಿ, ಅವನು ಅದಕ್ಕಿಂತ ಹೆಚ್ಚಿನದನ್ನು ಕೊಡುತ್ತಾನೆ — ಶಕ್ತಿ ಮತ್ತು ಆತ್ಮದ ಮುಕ್ತಿಯನ್ನು ಪಡೆಯಲು ನಮಗೆ ಅವಶ್ಯಕತೆಯಿರುವ ಅವಕಾಶಗಳನ್ನು ಕೊಡುವನು. ಬದುಕಿನ ಹಲವಾರು ಸನ್ನಿವೇಶಗಳು ಧ್ಯಾನ ಮಾಡುವ ನಿಮ್ಮ ಸಾಮರ್ಥ್ಯವನ್ನು ಮೊಟಕುಗೊಳಿಸಿದಾಗ ಅಥವಾ ನಿಮ್ಮ ಮಾರ್ಗದಲ್ಲಿ ತಡೆಯೊಡ್ಡುತ್ತಿವೆ ಎಂದೆನಿಸಿದಾಗ, ಆ ಸನ್ನಿವೇಶಗಳನ್ನು ನಿಮ್ಮಲ್ಲಿ ಭಗವಂತನ ಬಗ್ಗೆ ಒಂದು ಮಹತ್ತಾದ ಹಂಬಲವನ್ನು ಬಡಿದೆಬ್ಬಿಸಲು ಉಪಯೋಗಿಸಿ. ಆಂತರ್ಯದೊಳಗೆ ಅವನೊಡನಿರಲು ಮಾರ್ಗಗಳನ್ನು ಕಂಡುಕೊಳ್ಳಲು ನಿಮ್ಮ ನಿರ್ಧಾರವನ್ನು ಬಡಿದೆಬ್ಬಿಸಿ — ಚಟುವಟಿಕೆಯಲ್ಲಿ ಅವನ ಉಪಸ್ಥಿತಿಯನ್ನು ಮನಗಾಣುವ ಅಭ್ಯಾಸ ಮಾಡುವುದು, ಮತ್ತು ಅದರಿಂದ ಅವನೊಡನೆಯ ಆಂತರ್ಯದ ಸಂಸರ್ಗದ ಅಲ್ಪ ಕಾಲಾವಧಿಯಲ್ಲೂ ನಿಮ್ಮನ್ನು ನೀವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವಂತೆ ನಿಮ್ಮ ಮನಸ್ಸನ್ನು ತರಬೇತುಗೊಳಿಸಿ. ಬಾಹ್ಯ ಸನ್ನಿವೇಶಗಳು ನಮ್ಮನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಅವುಗಳೊಡನೆಯ ನಮ್ಮ ಅಹಂಕಾರದ ಪ್ರತಿಭಟನೆ ಮತ್ತು ಭಾವಾತ್ಮಕ ಒಳಗೊಳ್ಳುವಿಕೆ, ಮಾಯೆಯ ಪ್ರಪಂಚದಲ್ಲಿ ನಮ್ಮನ್ನು ಸಿಕ್ಕಿಹಾಕಿಸುತ್ತವೆ. ನಮ್ಮ ಕ್ರಿಯೆಗಳ ಫಲಿತಗಳ ಮಮಕಾರದಿಂದ ಏಳುವ ಇಷ್ಟಾನಿಷ್ಟಗಳು, ಕಿರಿಕಿರಿಗಳು ಬಹಳಷ್ಟು ಸಲ ಗೊಂದಲಮಯವಾಗಿರುತ್ತವೆ. ಆ ಮಮಕಾರಗಳನ್ನು ನಾವು ಬಿಟ್ಟುಹಾಕಲು ಶುರು ಮಾಡಿದಾಗ, ಮತ್ತು ನಮ್ಮ ಪ್ರೇಮದ ಸರಳ ಅರ್ಪಣೆಯನ್ನು ನಮ್ಮ ಅತ್ಯುತ್ತಮ ಪ್ರಯತ್ನಗಳಾಗಿ ಭಗವಂತನ ಪಾದದಡಿಯಿರಿಸಿದಾಗ, ನಾವು ಮನಸ್ಸಿನ ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಮತ್ತು ನಮ್ಮ ಪರಿಸ್ಥಿತಿಗಳು ಏನೇ ಇರಲಿ ಆಂತರಿಕ ಸಮತೋಲನೆಯ ಭಾವನೆಯನ್ನು ಹೊಂದುತ್ತೇವೆ.
ಪ್ರತಿಯೊಂದು ಸನ್ನಿವೇಶವನ್ನು ಭಗವಂತನ ಬಳಿ ಸಾಗುವ ಒಂದು ಮಾರ್ಗ ಎಂದು ನೋಡಿದಾಗ, ನಾವು ನಮ್ಮ ಜೀವನದ ಉಡುಗೆಯಲ್ಲಿ ಭಗವಂತನ ನಿರಂತರ ಚಿಂತನೆಯನ್ನು ಹೆಣೆಯುತ್ತೇವೆ, ಮತ್ತು ಅಂತಿಮವಾಗಿ ಒಂದು ಕ್ಷಣವೂ ನಾವು ಅವನಿಂದ ದೂರವಿರಲಾರೆವು ಎಂಬುದನ್ನು ಅರಿಯುತ್ತೇವೆ. ಅರ್ಜುನನಿಗೆ ಭಗವಂತನು ಹೇಳಿದ ಹಾಗೆ: “ಯಾರು ಎಲ್ಲೆಡೆಯೂ ನನ್ನನ್ನು ಕಾಣುತ್ತಾನೋ ಮತ್ತು ಎಲ್ಲವನ್ನೂ ನನ್ನಲ್ಲಿ ನೋಡುತ್ತಾನೋ ಅವನು ಎಂದಿಗೂ ನನ್ನ ಉಪಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ, ಅಥವಾ ನನ್ನಿಂದ ಅವನೆಂದೂ ಮರೆಯಾಗುವುದಿಲ್ಲ.”
ಜೀವನದ ಎಲ್ಲ ಅನುಭವಗಳಲ್ಲೂ ನೀವು ಆ ದಿವ್ಯ ಭರವಸೆಯು ನಿಮ್ಮನ್ನು ಪೋಷಿಸುತ್ತಿದೆ ಮತ್ತು ಶಕ್ತಿಯುತ ಮಾಡುತ್ತಿದೆ ಎಂದು ಮನಗಾಣುವಂತಾಗಲಿ.
ಭಗವಂತ ಹಾಗೂ ಗುರುದೇವರ ದಿವ್ಯ ಪ್ರೇಮ ಮತ್ತು ನಿರಂತರ ಆಶೀರ್ವಾದಗಳೊಂದಿಗೆ,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕೃತಿಸ್ವಾಮ್ಯ © 2015 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾದರಿಸಲಾಗಿದೆ.
















