ಆತ್ಮೀಯರೇ,
22 ಜುಲೈ, 2013
“ಹಿಮಾಲಯದ ಸುನಾಮಿ” ಎಂದು ಕರೆಯಲ್ಪಡುವ ದುರಂತ ಘಟನೆಯ ನಂತರ ಪರಮಹಂಸ ಯೋಗಾನಂದರ ಆಶ್ರಮದಲ್ಲಿರುವ ನಮ್ಮೆಲ್ಲರ ಪ್ರಾರ್ಥನೆಗಳು ಮತ್ತು ಆಳವಾದ ಸಹಾನುಭೂತಿ ಮತ್ತು ಪ್ರೇಮಮಯ ಆಲೋಚನೆಗಳು ನಮ್ಮ ಪ್ರೀತಿಯ ಭಾರತಮಾತೆಯನ್ನು ಮತ್ತು ಅವಳ ಮಕ್ಕಳನ್ನು ಆವರಿಸಿವೆ. ಈ ದುರಂತದ ಪ್ರಮಾಣವನ್ನು ಕೇವಲ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದರೆ ಸಂತ್ರಸ್ತರ ಪರವಾಗಿ ನಮ್ಮ ಹೃದಯವು ಮಿಡಿಯುತ್ತಿದೆ.
ಹಠಾತ್ತಾಗಿ ತಮ್ಮ ಮರ್ತ್ಯ ದೇಹದಿಂದ ಕಸಿಯಲ್ಪಟ್ಟ ಆ ಭಾರತ ಮಾತೆಯ ಮಕ್ಕಳು ಈಗ ಪರಮಾತ್ಮನ ದಿವ್ಯ ಶಾಂತಿಯ ಸಾನ್ನಿಧ್ಯದಲ್ಲಿದ್ದಾರೆ ಎಂಬ ಅರಿವಿನಿಂದ ಮಾತ್ರ ನಾವು ಸಾಂತ್ವನವನ್ನು ಅನುಭವಿಸುತ್ತಿದ್ದೇವೆ. ಭಗವಂತನ ಅವತಾರೀ ಪುರುಷರು, ಸಂತರು ಮತ್ತು ಭಕ್ತರ ಸಮಾಧಿ ಸ್ಥಿತಿಯ ಧ್ಯಾನದ ಮೂಲಕ ಉತ್ಪನ್ನವಾದ ದೈವೀ ಕಂಪನಗಳು ಪವಿತ್ರವಾದ ಆ ಜಾಗದ ನಿವಾಸಿಗಳ ಮತ್ತು ತೀರ್ಥಯಾತ್ರಿಗಳ ಅನುಭೂತಿಗೆ ಬರುತ್ತವೆ ಮತ್ತು ಅವರು ಯಾತ್ರೆಯಿಂದ ಆಶೀರ್ವಾದವನ್ನು ಪಡೆಯಲು ಬಂದಿದ್ದಾರೆ ಎಂಬುದನ್ನು ನಿರಂತರವಾಗಿ ಅವರಿಗೆ ನೆನಪಿಸುತ್ತದೆ ಮತ್ತು ಅದು ಅವರ ಮನಸ್ಸುಗಳನ್ನು ಭಗವಂತನೆಡೆಗಿನ ಪ್ರೀತಿ ಹಾಗೂ ಆಳವಾದ ನಂಬಿಕೆಯೆಡೆಗೆ ತಿರುಗಿಸುತ್ತದೆ. ಈ ಘಟನೆಯಿಂದ ಹಠಾತ್ ಆಗಿ ಅವರ ಜೀವನವು ಕೊನೆಗೊಂಡರೂ, ಅಲ್ಲಿನ ಭಕ್ತಿಯ ಕಂಪನಗಳಿಗೆ ಈಗಾಗಲೇ ತೆರೆದಿದ್ದ ಅವರ ಹೃದಯಗಳು ಈ ಮರಣದ ಕತ್ತಲೆಯಿಂದ ಬೆಳಕು ಮತ್ತು ಶಾಂತಿಯೆಡೆಗೆ ಅವರ ಯಾತ್ರೆಯನ್ನು ಸುಗಮಗೊಳಿಸಿತು. ಅವರು ಬ್ರಹ್ಮಾಂಡದ ಕ್ಷಣಿಕ ಸಮಯದ ದುಃಸ್ವಪ್ನದಿಂದ ಎಚ್ಚೆತ್ತು, ಸಕಲ ವಿವೇಚನೆಯ ಎಲ್ಲೆಯನ್ನು ಮೀರಿದ, ಭಗವಂತನ ಶಾಂತಿ ಸಹಾನುಭೂತಿ ಮತ್ತು ಪ್ರೀತಿಯ ಮಡಿಲಿನ ಅರಿವಿನಲ್ಲಿ ಸಂರಕ್ಷಿಸಲ್ಪಟ್ಟಿದ್ದಾರೆ.
ಆದರೆ ಪ್ರೀತಿಪಾತ್ರರನ್ನು ಮತ್ತು ತಮ್ಮ ಮನೆ ಮಠಗಳನ್ನು ಕಳೆದುಕೊಂಡ ನೋವಿನಲ್ಲಿರುವ ನಿರಾಶ್ರಿತರನ್ನು ನಮ್ಮ ಆಳವಾದ ಪ್ರಾರ್ಥನೆಗಳು ತಲುಪುತ್ತಲೇ ಇವೆ. ಭಾರತ ಮತ್ತು ಪ್ರಪಂಚದಾದ್ಯಂತ ಶುಭ ಹಾರೈಸುವ ಜನರು ಅವರಿಗೆ ಬೆಂಬಲ ಹಾಗೂ ಸಹಾಯ ನೀಡಬೇಕೆಂದು ನಾವು ಪ್ರಾರ್ಥಿಸುತ್ತೇವೆ, ಗುರುದೇವರ ಸಂಸ್ಥೆಯ ಮುಖ್ಯ ಧ್ಯೇಯ ಸಮಾಜದೊಡನೆ ಬೆರೆತು ಸಂತ್ರಸ್ಥರ ಚೇತರಿಕೆಗೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳಿಗೆ ನೆರವಾಗುವುದೇ ಆಗಿದೆ. ದೈವೀ ಜಾಗೃತಿಯಿಂದ ಅವರ ದುಃಸ್ವಪ್ನವು ದೂರವಾಗಿ ಅವರಲ್ಲಿ ಧೈರ್ಯ, ಶಕ್ತಿ ಮತ್ತು ನಂಬಿಕೆ ತುಂಬಲಿ ಎಂದು ನಾವು ವಿಶೇಷವಾಗಿ ಪ್ರಾರ್ಥಿಸುತ್ತೇವೆ. ಈ ಅಪೂರ್ಣ ಭೌತಿಕ ಸೃಷ್ಟಿಯ ಭಾಗವಾಗಿರುವ ಬೆಳಕು ಮತ್ತು ಅಂಧಕಾರದ, ದುಷ್ಟ ಮತ್ತು ಶಿಷ್ಟ ಶಕ್ತಿಗಳ ನಡುವಿನ ಯುದ್ಧದಿಂದುಂಟಾಗುವ ದುರಂತಗಳು ನಮ್ಮ ಗುರುದೇವರ ಕರುಣಾಮಯ ಹೃದಯದ ಮೇಲೆ ಆಳವಾದ ಗಾಯವನ್ನೇ ಉಂಟುಮಾಡುತ್ತಿದ್ದವು, ಹಾಗೂ ಅವರ ಸಹಾಯ ಮತ್ತು ಆಶೀರ್ವಾದವು ನಿರಂತರವಾಗಿ ಮುಂದುವರೆಯುತ್ತಿದೆ ಎಂದು ನನಗೆ ಅರಿವಿದೆ. ಅವರು ಅಗತ್ಯವಿರುವ ಸಮಯದಲ್ಲಿ ದೈವೀ ಮಾತೆಯ ಮಕ್ಕಳಿಗೆ ಸಹಾಯಮಾಡಲು ಅಗತ್ಯವಿರುವ ಆ ಪ್ರೀತಿ ಮತ್ತು ಆಶೀರ್ವಾದ ಒದಗಿಸುವ ಸಲುವಾಗಿ ಆ ಮಾತೆಯೊಡನೆ ಮಧ್ಯಸ್ಥಿಕೆಯನ್ನು ವಹಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಮಾಯೆಯ ಬಂಧನದಿಂದ ಮುಕ್ತರಾಗದ ಜನರನ್ನು ಬಾಧಿಸುವ ಸಂಕಟದ ವಾಸ್ತವತೆಯನ್ನು ಅವರು ಅರಿತಿದ್ದರು ಹಾಗೂ ಆ ಯಾತನೆಯನ್ನು ತಮ್ಮಲ್ಲಿ ಅನುಭವಿಸುತ್ತಿದ್ದರು.
ಅದೇ ಸಮಯದಲ್ಲಿ “ಸದಾ ನೆನಪಿಡಿ, ಈ ಭೂಮಿ ನಮ್ಮ ಮನೆಯಲ್ಲ, ನಮ್ಮ ಮನೆ ಭಗವಂತನಲ್ಲಿದೆ.” ಎಂದು ಅವರು ನಮಗೆ ನೆನಪಿಸುತ್ತಿದ್ದರು. ಹಲವು ಭಯಂಕರ ಘಟನಾವಳಿಗಳು ಬಂದು ಹೋಗುವಂತಹ ಈ ನಮ್ಮ ಬದುಕಿನಲ್ಲಿ ಪರಿಪೂರ್ಣತೆ ಮತ್ತು ಶಾಂತಿಯ ಬಯಕೆಯನ್ನು ಈ ಪ್ರಪಂಚದಲ್ಲಿ ಹೇಗೆ ಪಡೆಯಬಹುದು ಎಂದು ಹುಡುಕಿದರೆ ತಿಳಿಯುವುದು ಅಸಾಧ್ಯ. ಬದಲಿಗೆ, ಧ್ಯಾನದಲ್ಲಿ ಆಳವಾದ ಆಧ್ಯಾತ್ಮಿಕ ಪ್ರಯತ್ನದ ಮೂಲಕ ದೇವರಲ್ಲಿ ಎಷ್ಟು ಸ್ಥಿರವಾಗಿ ಅಂಕುರಿಸಬೇಕೆಂದರೆ ದುರಂತಗಳು ನಿಮ್ಮ ಈ ಕನಸಿನ ಮರ್ತ್ಯಜೀವನದ ಭಾಗವಾಗಲೇಬೇಕಾದರೂ, “ಕುಸಿಯುತ್ತಿರುವ ಪ್ರಪಂಚದ ನಡುವೆ ನೀವು ಸದೃಢವಾಗಿ ನಿಲ್ಲಬಲ್ಲರಾಗುವಿರಿ.” ಆ ಪ್ರಭು ನಮಗೆ ನೆನಪಿಸುತ್ತಾನೆ: “ಯಾವುದು ಬದಲಾಗುವುದಿಲ್ಲವೋ ಅದಕ್ಕೆ ಸ್ಥಿರವಾಗಿ ನೆಲೆಗೊಳ್ಳಿ. “ ಅದು ಸೋಲದ ಭಗವಂತನ ಪ್ರೇಮ, ಮತ್ತು ಭಗವಂತನ ಸರ್ವವ್ಯಾಪಕತೆ ಆತನ ಮಕ್ಕಳಿಗೆ ಕೇವಲ ಒಂದು ಯೋಚನೆಯಷ್ಟೇ ದೂರದಲ್ಲಿದೆ. ಆತನು ತನ್ನ ಪ್ರೀತಿ, ಭದ್ರತೆ ಮತ್ತು ತನ್ನ ಎಂದಿಗೂ ವಿಫಲಗೊಳ್ಳದ ದೈವೀ ಕಾಳಜಿಯ ಮಧುರವಾದ ನೋಟದಿಂದ ನಮ್ಮನ್ನು ಆಶೀರ್ವದಿಸಲು ಸದಾ ಉತ್ಸುಕನಾಗಿದ್ದಾನೆ.
ನಮ್ಮ ದೈನಂದಿನ ಧ್ಯಾನದಲ್ಲಿ, ಈ ಪ್ರಕ್ಷುಭ್ಧ ಜಗತ್ತಿನಲ್ಲಿ ನರಳುತ್ತಿರುವ ಎಲ್ಲರೂ, ಹಲವು ಜನ್ಮಗಳಿಂದ ನಮ್ಮನ್ನು ಯಾರು ಕಾಯುತ್ತಿರುವನೋ ಮತ್ತು ಭ್ರಮೆಯ ಕನಸಿನಿಂದ ಅವನನ್ನು ಸುತ್ತುವರೆದ ಬೆಳಕಿನಲ್ಲಿ ನಾವು ಎಚ್ಚರಗೊಳ್ಳಲಿ ಎಂದು ಹಂಬಲಿಸುತ್ತಿರುವನೋ ಆ ಭಗವಂತನಲ್ಲಿ ಆಶ್ರಯ, ಶಾಂತಿ ಮತ್ತು ಗುಣಕಾರೀಶಕ್ತಿಯ ಉಪಸ್ಥಿತಿಯನ್ನು ಪಡೆಯಲಿ ಎಂದು ನಾವು ನೆನಪಿಸಿಕೊಳ್ಳುತ್ತೇವೆ.
ಭಗವಂತ ಮತ್ತು ಗುರುದೇವರ ನಿರಂತರ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ

ಶ್ರೀ ಶ್ರೀ ಮೃಣಾಲಿನಿ ಮಾತಾ
















