ಪ್ರಾರ್ಥನಾ ಸೇವೆ (ಅವಧಿ: 15 – 20 ನಿಮಿಷಗಳು)

ಕೆಳಗಿನ ಪ್ರಾರ್ಥನಾ ಸೇವೆಯನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆಶ್ರಮಗಳು, ಕೇಂದ್ರಗಳು ಮತ್ತು ಜಗದಾದ್ಯಂತದ ಧ್ಯಾನ ಸಮೂಹಗಳಲ್ಲಿ ಪ್ರತೀ ವಾರ ನಡೆಸಲಾಗುತ್ತದೆ. ಇದು ವೈಜ್ಞಾನಿಕ ಪ್ರಾರ್ಥನೆಯ ಎರಡು ಮೂಲಭೂತ ಅಂಶಗಳನ್ನು ಬಳಸುತ್ತದೆ: ಯೋಚನೆ ಮತ್ತು ಶಕ್ತಿ. ಮೊದಲಿಗೆ, ದೇವರ ಸಹಾಯದೊಂದಿಗೆ ಪರಿಪೂರ್ಣತೆ ಮತ್ತು ಶ್ರುತಿಗೂಡುವಿಕೆಯ ಆಲೋಚನೆಗಳನ್ನು ಅಗತ್ಯವಿರುವ ಎಲ್ಲರಿಗೂ ಪ್ರಸಾರ ಮಾಡಲಾಗುತ್ತದೆ. ನಂತರ, ಪರಮಹಂಸ ಯೋಗಾನಂದರು ಕಲಿಸಿರುವ ವಿಧಾನದ ಮೂಲಕ ಉಪಶಮನಕಾರಕ ಶಕ್ತಿಯನ್ನು ನೆರವಿನ ಅವಶ್ಯಕತೆ ಇರುವವರಿಗೆ ಕಳುಹಿಸಲಾಗುತ್ತದೆ.
- ಪ್ರಾರಂಭ ಪ್ರಾರ್ಥನೆ.
- ಐಚ್ಛಿಕ: ಪರಮಹಂಸ ಯೋಗಾನಂದರ ಬರಹಗಳಿಂದ ಸಣ್ಣ ಸ್ಫೂರ್ತಿದಾಯಕ ಓದುವಿಕೆ ಮತ್ತು/ಅಥವಾ ಅವರ ಕಾಸ್ಮಿಕ್ ಚಾಂಟ್ಸ್ ಪುಸ್ತಕದಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
-
ಸಣ್ಣ ಧ್ಯಾನ. ನಿಮಗೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಧ್ಯಾನ ತಂತ್ರಗಳು ಗೊತ್ತಿದ್ದರೆ ಅವುಗಳನ್ನು ಅಭ್ಯಾಸ ಮಾಡುವ ಮೂಲಕ, ದೇವರ ಉಪಶಮನಕಾರಕ ಉಪಸ್ಥಿತಿಗೆ ನಿಮ್ಮ ಆಲೋಚನೆಗಳನ್ನು ಶ್ರುತಿಗೂಡಿಸಿ. ನಂತರ, ಪ್ರಾರ್ಥನಾ ವೃಂದದ ಸಹಾಯವನ್ನು ಕೇಳಿದ ಎಲ್ಲರಿಗಾಗಿ ಮನಸ್ಸಿನಲ್ಲಿ ಆಳವಾಗಿ ಪ್ರಾರ್ಥನೆ ಮಾಡಿರಿ. ಅದಲ್ಲದೆ, ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರಿಗಾಗಿ ಅಥವಾ ನಿಮ್ಮ ಸ್ವಂತ ಕಷ್ಟಗಳನ್ನು ದೂರ ಮಾಡುವಲ್ಲಿ ದೈವೀ ಸಹಾಯಕ್ಕಾಗಿ ಪ್ರಾರ್ಥಿಸಬಹುದು.
ಭ್ರೂಮಧ್ಯದ ಬಿಂದುವಿನ ಮೇಲೆ ಗಮನವನ್ನು ಕೇಂದ್ರೀಕರಿಸಿ, ಭಗವಂತನ ಸ್ಪಂದನಾತ್ಮಕ ಬೆಳಕನ್ನು ದೃಶ್ಯೀಕರಿಸಿಕೊಳ್ಳಿ. ಸರ್ವಶಕ್ತ ದೈವಿಕ ಪ್ರಜ್ಞೆಯು ಕೇಂದ್ರೀಕೃತ ಉಪಶಮನಕಾರಕ ಸ್ಪಂದನಗಳ ಆ ಕಿರಣಗಳನ್ನು ನಿಮ್ಮ ಆಧ್ಯಾತ್ಮಿಕ ಚಕ್ಷುವಿನ ಮೂಲಕ, ಪ್ರಾರ್ಥನೆಗಾಗಿ ಕೋರಿಕೊಂಡವರಿಗೆಲ್ಲ ಕಳುಹಿಸುತ್ತಿದೆ ಎಂದು ಭಾವಿಸಿ. ಭ್ರೂಮಧ್ಯದ ಬಿಂದುವಿನಲ್ಲಿ ಶಾಂತಿಯ ಭಾವನೆ ಮತ್ತು ಜುಮ್ಮೆನಿಸುವ ಅಥವಾ ಎಳೆತದ ಸಂವೇದನೆಯನ್ನು ಅನುಭವಿಸಬಹುದು. ನೀವು ಯಾರಿಗಾಗಿ ಪ್ರಾರ್ಥಿಸುತ್ತಿರುವಿರೊ ಅವರಿಗೆ ದೇವರ ಉಪಶಮನಕಾರಕ ಶಕ್ತಿಯು ನಿಜವಾಗಿಯೂ ಅನುಗ್ರಹಿಸುತ್ತಿದೆ ಎಂಬುದರ ಬಗ್ಗೆ ಯಾವ ಸಂದೇಹವೂ ಬೇಡ. - ಐಚ್ಛಿಕ: ಧ್ಯಾನದ ಅವಧಿಯ ನಂತರ, ಬಯಸಿದಲ್ಲಿ, ಸಣ್ಣ ದೃಢೀಕರಣವನ್ನು ಬಳಸಬಹುದು. (ಪರಮಹಂಸ ಯೋಗಾನಂದರ ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್ ಪುಸ್ತಕದ 5ನೇ ಅಧ್ಯಾಯದಲ್ಲಿ ಸೂಚನೆಗಳನ್ನು ನೀಡಲಾಗಿದೆ.)
- ಪರಮಹಂಸ ಯೋಗಾನಂದರು ಕಲಿಸಿದ ಉಪಶಮನಕಾರಕ ತಂತ್ರ ವನ್ನು ಅಭ್ಯಾಸ ಮಾಡಿ.
- ವಿಶ್ವಶಾಂತಿಗಾಗಿ ಮುಕ್ತಾಯದ ಪ್ರಾರ್ಥನೆ.