ಪ್ರಾರ್ಥನಾ ಸೇವೆ (ಕಾಲಾವಧಿ: 15-20 ನಿಮಿಷಗಳು)
ಆಧುನಿಕ ವಿಜ್ಞಾನವು, ವಿಶ್ವದಲ್ಲಿ ಎಲ್ಲವೂ ಶಕ್ತಿಯಿಂದ ಕೂಡಿದೆ ಹಾಗೂ ಘನವಸ್ತುಗಳು, ದ್ರವಗಳು, ಅನಿಲಗಳು, ಶಬ್ದ ಮತ್ತು ಬೆಳಕಿನ ನಡುವಿನ ತೋರಿಕೆಯ ವ್ಯತ್ಯಾಸವೆಂದರೆ ಕೇವಲ ಅವುಗಳ ಕಂಪನ ದರಗಳಲ್ಲಿನ ವ್ಯತ್ಯಾಸ ಎಂದು ತೋರಿಸಿದೆ. ಅಂತೆಯೇ, ಪ್ರಪಂಚದ ಶ್ರೇಷ್ಠ ಧರ್ಮಗಳು ಸೃಷ್ಟಿಯಾದ ಎಲ್ಲ ವಸ್ತುಗಳೂ ಓಮ್ ಅಥವಾ ಆಮೆನ್, ಅಂದರೆ ಶಬ್ದ ಅಥವಾ ಹೋಲಿ ಘೋಸ್ಟ್‌ನ ಬ್ರಹ್ಮಾಂಡೀಯ ಸ್ಪಂದನಾತ್ಮಕ ಶಕ್ತಿಯಲ್ಲಿ ಹುಟ್ಟಿಕೊಂಡಿವೆ ಎಂದು ಹೇಳುತ್ತವೆ. “ಆರಂಭದಲ್ಲಿ ಶಬ್ದವಿತ್ತು, ಶಬ್ದವು ದೇವರೊಂದಿಗಿತ್ತು, ಶಬ್ದವೇ ದೇವರಾಗಿತ್ತು…..ಎಲ್ಲವೂ ಅವನಿಂದ (ಶಬ್ದ ಅಥವಾ ಓಂನಿಂದ) ಮಾಡಲ್ಪಟ್ಟವು; ಮತ್ತು ಸೃಷ್ಟಿಯಾದ ಯಾವುದೂ ಅವನಿಲ್ಲದೆ ಮಾಡಲ್ಪಟ್ಟಿಲ್ಲ.” (ಜಾನ್ 1:1, 3).
“ಇದು ಭಗವಂತನ ಸೃಷ್ಟಿಯ ಮೂಲವಾದ, ನಿಷ್ಠಾವಂತ ಹಾಗೂ ನೈಜ ಸಾಕ್ಷಿಯಾದ ಆಮೆನ್‌ನ ಸಂದೇಶ” (ರಿವಿಲೇಶನ್ 3:14). ಚಲಿಸುವ ಮೋಟಾರಿನ ಕಂಪನದಿಂದ ಶಬ್ದ ಉಂಟಾಗುವಂತೆ, ಸರ್ವವ್ಯಾಪಿ ಓಂ ಶಬ್ದವು “ಬ್ರಹ್ಮಾಂಡ ಮೋಟಾರ್”ನ ಚಲನೆಗೆ ನೈಜ ಸಾಕ್ಷಿಯಾಗಿರುತ್ತದೆ, ಅದು ಸೃಷ್ಟಿಯ ಎಲ್ಲ ಜೀವಿಗಳನ್ನೂ, ಪ್ರತಿಯೊಂದು ಕಣವನ್ನೂ ಸ್ಪಂದನದ ಬಲದಿಂದ ಎತ್ತಿಹಿಡಿಯುತ್ತದೆ.
ಏಕಾಗ್ರತೆ ಮತ್ತು ಇಚ್ಛಾಶಕ್ತಿಯಿಂದ ನಾವು ಪ್ರಜ್ಞಾಪೂರ್ವಕವಾಗಿ ಶರೀರಕ್ಕೆ ವಿಶ್ವ ಶಕ್ತಿಯ ಪೂರೈಕೆಯನ್ನು ಹೆಚ್ಚಿಸಬಹುದು. ಆ ಶಕ್ತಿಯನ್ನು ಶರೀರದ ಯಾವುದೇ ಭಾಗಕ್ಕೆ ಕಳಿಸಬಹುದು; ಅಥವಾ ಅದನ್ನು ಬೆರಳ ತುದಿಗಳ ಸೂಕ್ಷ್ಮ ಆಂಟೆನಾ ಮೂಲಕ ಮತ್ತೆ ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಬಹುದು, ಆಗ ಅದು ಅಗತ್ಯವಿರುವವರಿಗೆ ಉಪಶಮನಕಾರಕ ಶಕ್ತಿಯಾಗಿ ಹರಿಯುತ್ತದೆ — ಅವರು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ. ಮಹಾನ್ ಓಮ್ ಸ್ಪಂದನದ ಮೂಲಕ, ನಾವು ಭಗವಂತನ ಸರ್ವವ್ಯಾಪಿ ಪ್ರಜ್ಞೆಯನ್ನು ನೇರವಾಗಿ ಸಂಪರ್ಕಿಸಬಹುದು — ಅಲ್ಲಿ ಸಮಯ ಮತ್ತು ಸ್ಥಳದ ಭ್ರಮಾತ್ಮಕ ಪರಿಕಲ್ಪನೆಗಳು ಇರುವುದಿಲ್ಲ. ಹೀಗೆ ಅಗತ್ಯವಿರುವವರ ಶ್ರದ್ಧಾಪೂರ್ವಕ ವಿನಂತಿ ಮತ್ತು ಈ ಕೆಳಗಿನ ವಿಧಾನದಿಂದ ಇತರರಿಗಾಗಿ ಪ್ರಾರ್ಥಿಸುತ್ತಿರುವವರು ಕಳುಹಿಸುವ ಕೇಂದ್ರೀಕೃತ ಶಕ್ತಿಯ ನಡುವೆ ತತ್‌ಕ್ಷಣದ ಸಂಪರ್ಕವಿರುತ್ತದೆ:
(ಮಾಡುವಾಗ ನಿಂತಿರಿ)
ಕಣ್ಣುಗಳನ್ನು ಮುಚ್ಚಿಕೊಂಡು, ಈ ಕೆಳಗಿನಂತೆ ಪ್ರಾರ್ಥಿಸಿ:
-
“ಭಗವಂತನೇ, ನೀನು ಸರ್ವವ್ಯಾಪಿ. ನೀನು ನಿನ್ನೆಲ್ಲ ಮಕ್ಕಳಲ್ಲೂ ಇರುವೆ. ನಿನ್ನ ಉಪಶಮನಕಾರಕ ಸಾನ್ನಿಧ್ಯವನ್ನು ಅವರ ಶರೀರಗಳಲ್ಲಿ ಪ್ರಕಟಪಡಿಸು.” ಕಣ್ಣುಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು 10-20 ಸೆಕೆಂಡುಗಳವರೆಗೆ ಜೋರಾಗಿ ತಿಕ್ಕಿ (ಅಂಗೈಗಳು ಅಭಿಮುಖವಾಗಿರಲಿ.) (ಈ ಚಲನೆ ಮತ್ತು ಮುಂದಿನ ಪ್ಯಾರಾದಲ್ಲಿ ವಿವರಿಸಲಾದ ಚಲನೆಯು ಕೈಗಳಲ್ಲಿ ಶಕ್ತಿಯನ್ನು ಸಂಗ್ರಹಿಸುವ ಮತ್ತು ಭಾವಿಸುವ ವಿಶೇಷ ಪರಿಣಾಮಕಾರಿ ಮಾರ್ಗವಾಗಿದೆ.) ಅದೇ ಸಮಯಕ್ಕೆ ವಿಶ್ವ ಶಕ್ತಿಯು ಮೆಡುಲ್ಲಾ ಒಬ್ಲಾಂಗೆಟಾದ ಮೂಲಕ ನಿಮ್ಮ ದೇಹದೊಳಕ್ಕೆ ಹರಿದು ನಿಮ್ಮ ತೋಳುಗಳಿಗೆ ಹಾಗೂ ಕೈಗಳಿಗೆ ಹೋಗುವುದರ ಮೇಲೆ ಆಳವಾಗಿ ಕೇಂದ್ರೀಕರಿಸಿ. ಆ ಉಪಶಮನಕಾರಕ ಶಕ್ತಿಯು ನಿಮ್ಮ ತೋಳುಗಳು ಮತ್ತು ಕೈಗಳಲ್ಲಿ ಸಂಗ್ರಹವಾಗುವುದರಿಂದ ಅಲ್ಲಿ ನೀವು ಉಷ್ಣತೆ ಮತ್ತು ಜುಮ್ಮೆನಿಸುವಿಕೆಯನ್ನು ಅನುಭವಿಸುವಿರಿ. ಎಲ್ಲೂ ಒತ್ತಡ ಬೇಡ; ಎಲ್ಲ ಸಮಯದಲ್ಲೂ ದೇಹವು ಸಡಿಲವಾಗಿರಲಿ.
ಈಗ ನಿಮ್ಮ ಕೈಗಳನ್ನು ಮುಂದೆ ಚಾಚಿ ಹಣೆಯ ಎತ್ತರದವರೆಗೂ ಮೇಲೆತ್ತಿ, ಮತ್ತು ಓಂ ಎಂದು ಉಚ್ಚರಿಸಿ. ಓಂ ಎನ್ನುತ್ತಿರುವಾಗಲೇ ನಿಧಾನವಾಗಿ ಕೈಗಳನ್ನು ನಿಮ್ಮೆದುರಿನಿಂದ ಅವು ನಿಮ್ಮ ಬದಿಗಳಲ್ಲಿ ವಿರಮಿಸುವಷ್ಟು ಕೆಳಗೆ ತನ್ನಿ. ಹಾಗೆ ಮಾಡುತ್ತಿರುವಾಗ ಉಪಶಮನಕಾರಕ ಸ್ಪಂದನಗಳು ನಿಮ್ಮ ಕೈಗಳಿಂದ ಹೊರ ಹರಿದು ಉಪಶಮನದ ಅವಶ್ಯಕತೆ ಇರುವವರಿಗೆ ಹೋಗುತ್ತಿರುವುದನ್ನು ಮಾನಸಿಕವಾಗಿ ಭಾವಿಸಿ. -
ಪ್ರಾರ್ಥಿಸಿ: “ಭಗವಂತನೇ, ನೀನು ಸರ್ವವ್ಯಾಪಿ; ನೀನು ನಿನ್ನೆಲ್ಲ ಮಕ್ಕಳಲ್ಲೂ ಇರುವೆ. ನಿನ್ನ ಉಪಶಮನಕಾರಕ ಸಾನ್ನಿಧ್ಯವನ್ನು ಅವರ ಮನಸ್ಸಿನಲ್ಲಿ ಪ್ರಕಟಪಡಿಸು.” ನಿಮ್ಮ ಕೈಗಳನ್ನು (ಮುಮ್ಮುಖವಾಗಿ) ಒಂದರ ಸುತ್ತ ಒಂದನ್ನು ವೇಗವಾಗಿ ತಿರುಗಿಸಿ. ನಿಮ್ಮ ಕೈಗಳು ಶೀಘ್ರದಲ್ಲೇ ವಿಶ್ವ ಶಕ್ತಿಯಿಂದ ತುಂಬಿಕೊಳ್ಳುತ್ತವೆ. ವಿಶ್ವ ಶಕ್ತಿಯು ಮೆಡುಲ್ಲಾ ಅಬ್ಲಾಂಗೇಟಾ ಮೂಲಕ ನಿಮ್ಮ ಕೈಗಳಿಗೆ ಹರಿಯುತ್ತಿರುವುದರ ಮೇಲೆ ಏಕಾಗ್ರಗೊಳ್ಳಿ. 10-20 ಸೆಕೆಂಡುಗಳವರೆಗೆ ಕೈಗಳನ್ನು ತಿರುಗಿಸುವುದನ್ನು ಮುಂದುವರೆಸಿ.
ಈಗ ನಿಮ್ಮ ಕೈಗಳನ್ನು ಮುಂದೆ ಚಾಚಿ ಹಣೆಯ ಎತ್ತರದವರೆಗೂ ಮೇಲೆತ್ತಿ ಹಾಗೂ ಓಂ ಎಂದು ಉಚ್ಚರಿಸಿ. ಮುಂದೆ ಚಾಚಿದ ತೋಳುಗಳನ್ನು ನಿಧಾನವಾಗಿ ಕೆಳಗೆ ತನ್ನಿ, ಹಾಗೆ ಮಾಡುತ್ತಿರುವಾಗ ಉಪಶಮನಕಾರಕ ಸ್ಪಂದನವು ನಿಮ್ಮ ಕೈಗಳಿಂದ ನೀವು ಪ್ರಾರ್ಥನೆ ಮಾಡುತ್ತಿರುವವರೆಡೆಗೆ ಹರಿಯುತ್ತಿರುವಂತೆ ದೃಶ್ಯೀಕರಿಸಿಕೊಳ್ಳಿ. - ಪ್ರಾರ್ಥಿಸಿ: “ಭಗವಂತನೇ, ನೀನು ಸರ್ವವ್ಯಾಪಿ. ನೀನು ನಿನ್ನೆಲ್ಲ ಮಕ್ಕಳಲ್ಲೂ ಇರುವೆ. ನಿನ್ನ ಉಪಶಮನಕಾರಕ ಸಾನ್ನಿಧ್ಯವನ್ನು ಅವರ ಆತ್ಮಗಳಲ್ಲಿ ಪ್ರಕಟಪಡಿಸು.” (ಮೊದಲನೆಯದರಲ್ಲಿ ವಿವರಿಸಿದಂತೆ ಕೈಗಳನ್ನು ಒಟ್ಟಿಗೆ ತಿಕ್ಕುವ ಮತ್ತು ಓಮ್ ಅನ್ನು ಪಠಿಸುವ ತಂತ್ರವನ್ನು ಪುನರಾವರ್ತಿಸಿ.)
- ಇಡೀ ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯದ ಉಪಶಮನಕಾರಕ ಸ್ಪಂದನಗಳನ್ನು ಕಳುಹಿಸುತ್ತ ಎತ್ತಿದ ಕೈಗಳಿಂದ, ಮತ್ತೊಮ್ಮೆ ಓಮ್ ಅನ್ನು ಪಠಿಸಿ.
ಮನೆಯಲ್ಲಿ ಪ್ರಾರ್ಥನಾ ಸೇವೆಯನ್ನು ನಡೆಸುವುದು
ಸಮೂಹ ಪ್ರಾರ್ಥನಾ ವಲಯಕ್ಕೆ ಸೇರಲು ಸಾಧ್ಯವಾಗದವರು ಮೇಲೆ ವಿವರಿಸಿದ ವಿಧಾನವನ್ನು ಅನುಸರಿಸಿ ಮನೆಯಲ್ಲಿ ಖಾಸಗಿ ಅಥವಾ ಕೌಟುಂಬಿಕ ಪ್ರಾರ್ಥನಾ ಸೇವೆಯನ್ನು ನಡೆಸಬಹುದು. ಬಯಸಿದಲ್ಲಿ ಇದನ್ನು ಒಬ್ಬರ ನಿಯತವಾದ ಬೆಳಿಗ್ಗೆ ಅಥವಾ ಸಂಜೆಯ ಧ್ಯಾನದ ಭಾಗವಾಗಿ ಮಾಡಿಕೊಳ್ಳಬಹುದು. (ಸಾಧ್ಯವಾದರೆ, ಯಾವಾಗಲೂ ಈ ಉದ್ದೇಶಕ್ಕೆಂದೇ ಬಳಸಲಾಗುವ ಕೋಣೆಯಲ್ಲಿ ಅಥವಾ ಕೋಣೆಯ ಒಂದು ಭಾಗದಲ್ಲಿ ಪ್ರಾರ್ಥನಾ ಸೇವೆಗಳನ್ನು ನಡೆಸುವುದು ಒಳ್ಳೆಯದು, ಏಕೆಂದರೆ ಇದರಿಂದ ಒಬ್ಬರ ಏಕಾಗ್ರತೆ ಮತ್ತು ಪ್ರೀತಿಪೂರ್ವಕ ಗಮನವನ್ನು ದೇವರ ಮೇಲೆ ಕೇಂದ್ರೀಕರಿಸುವುದು ಹೆಚ್ಚು ಸುಲಭವಾಗುತ್ತದೆ.
ಇತರರಿಗಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಲು ಒಟ್ಟಿಗೆ ಸೇರುವುದರಿಂದ — ಸ್ನೇಹಿತರು ಮತ್ತು ಸಮುದಾಯದ ಇತರ ಸದಸ್ಯರನ್ನೂ ಆಹ್ವಾನಿಸುವುದರಿಂದ — ಮನೆಯಲ್ಲಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುದಾಯದಲ್ಲಿ, ಪ್ರೀತಿ ಮತ್ತು ಸಾಮರಸ್ಯದ ಮನೋಭಾವಕ್ಕೆ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ ಎಂದು ಅನೇಕ ಕುಟುಂಬಗಳು ಕಂಡುಕೊಂಡಿವೆ.
ಇತರರಿಗಾಗಿ ಪ್ರಾರ್ಥಿಸುವವರು ಧನ್ಯರು, ಏಕೆಂದರೆ ಹಾಗೆ ಮಾಡುವುದರಿಂದ, ಅವರಿಗೆ ಎಲ್ಲ ಜೀವಿಗಳ ಏಕತೆಯು ಅರಿವಿಗೆ ಬರುತ್ತದೆ. ನಾವು ಪ್ರತಿಕೂಲ ಶಕ್ತಿಗಳ ವಿರುದ್ಧ ಏಕಾಂಗಿಯಾಗಿ ಹೋರಾಡುವ ಒಂಟಿ ಜೀವಿಗಳಲ್ಲ. ನಮ್ಮ ಸಂತೋಷವು ಎಲ್ಲರ ಸಂತೋಷದೊಂದಿಗೆ ಕೂಡಿಕೊಂಡಿದೆ; ನಮ್ಮ ಅತ್ಯುನ್ನತ ಸಾಫಲ್ಯವಿರುವುದು ಎಲ್ಲರ ಕಲ್ಯಾಣದಲ್ಲಿ. ಈ ಸತ್ಯವನ್ನು ಅರಿತು ಜಾಗತಿಕ ಪ್ರಾರ್ಥನಾ ವೃಂದದಲ್ಲಿ ಭಾಗವಹಿಸುವ ಮೂಲಕ ಸಮಯ ಮತ್ತು ಸಹಾನುಭೂತಿಯನ್ನು ಕೊಡುವ ನಿಮ್ಮೆಲ್ಲರಿಗೂ, ನಾವು ನಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಮನುಕುಲಕ್ಕೆ ಇಂತಹ ನಿಸ್ವಾರ್ಥ ಸೇವೆಯ ಮೂಲಕ, ಭಗವಂತನ ನಿರಂತರ ರಕ್ಷಣೆ ಮತ್ತು ಸರ್ವ ತೃಪ್ತಿದಾಯಕ ಪ್ರೀತಿಯ ಅರಿವು ನಿಮಗೆ ಸದಾ ಉಂಟಾಗಲಿ.
— ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ತಮಗಾಗಿಯಾಗಲಿ ಅಥವಾ ಇತರರಿಗಾಗಿಯಾಗಲಿ ಪ್ರಾರ್ಥನೆಗಾಗಿ ವಿನಂತಿಗೆ ಯಾವಾಗಲೂ ಸ್ವಾಗತ ಮತ್ತು ವಿನಂತಿಗೆ ಪ್ರಾರ್ಥನಾ ಮಂಡಳಿಯ ಸದಸ್ಯರು ತಕ್ಷಣದ ಪ್ರೀತಿಪೂರ್ವಕ ಗಮನವನ್ನು ನೀಡುತ್ತಾರೆ. ಅವುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಅಥವಾ ಫೋನ್ ಅಥವಾ ಪತ್ರದ ಮೂಲಕ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಗೆ ಸಲ್ಲಿಸಬಹುದು. ಸಲ್ಲಿಸಿದ ಹೆಸರುಗಳನ್ನು ವಿಶೇಷ ಬೆಳಗಿನ ಮತ್ತು ಸಂಜೆಯ ಉಪಶಮನಕಾರಕ ಸೇವೆಗಳಲ್ಲಿ ಮೂರು ತಿಂಗಳ ಕಾಲ ಸೇರಿಸಲಾಗುತ್ತದೆ. ಅದರ ಗುಣಕಾರಕ ಶಕ್ತಿಯಿಂದ ಪ್ರಯೋಜನ ಪಡೆಯಲು ಅವರು ಪ್ರಾರ್ಥನಾ ಸೇವೆಯಲ್ಲಿ ಭಾಗವಹಿಸಬೇಕೆಂದಿಲ್ಲ.
ಪ್ರಾರ್ಥನಾ ವಿನಂತಿಗಳನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿ ಇರಿಸಲಾಗುತ್ತದೆ. ವಿನಂತಿಯಲ್ಲಿ ಸಮಸ್ಯೆಯ ವಿವರಣೆ ಬೇಕಾಗಿಲ್ಲ, ಒಬ್ಬರಿಗೆ ಅದು ಅವಶ್ಯವೆನಿಸದ ಹೊರತು. ಪ್ರಾರ್ಥನಾ ಮಂಡಳಿ ಮತ್ತು ಜಾಗತಿಕ ಪ್ರಾರ್ಥನಾ ವೃಂದಕ್ಕೆ ಬೇಕಾಗಿರುವುದು ಕೇವಲ ಉಪಶಮನ ಬಯಸುವವರ ಹೆಸರು. ಪ್ರಾರ್ಥನಾ ವೃಂದದಲ್ಲಿರುವವರಿಗೆ ಸಮಸ್ಯೆಯ ವಿವರಗಳು ತಿಳಿದಿದ್ದಲ್ಲಿ, ಅಂತಹ ವಿವರಗಳನ್ನು ಚರ್ಚಿಸಬಾರದು. ಏಕೆಂದರೆ, ನಕಾರಾತ್ಮಕ ಮಾನಸಿಕ ನಂಟುಗಳು ಪ್ರಾರ್ಥನೆಯ ಬಲವನ್ನು ದುರ್ಬಲಗೊಳಿಸಬಹುದು. ಅದರ ಬದಲು, ಸಮೂಹದ ಸದಸ್ಯರು ಭಗವಂತನ ಉಪಶಮನಕಾರಕ ಶಕ್ತಿಯ ಮೇಲೆ ಮತ್ತು ಯಾವುದೇ ಅಸಂಗತ ಸ್ಥಿತಿಯನ್ನು ಬಿಟ್ಟು ಪರಿಪೂರ್ಣತೆಯ ಸ್ಥಿತಿಯ ಮೇಲೆ ಮಾತ್ರ ಕೇಂದ್ರೀಕರಿಸಬೇಕು.
















