ಜನವರಿ 2010
ಆತ್ಮೀಯರೆ,
ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ನಮಗೆ ತಿಳಿದಾಗಿನಿಂದ, ಗುರುದೇವ ಪರಮಹಂಸ ಯೋಗಾನಂದರ ಆಶ್ರಮದಲ್ಲಿರುವ ನಾವೆಲ್ಲರೂ ಬಾಧಿತರಾದವರಿಗಾಗಿ ಆಳವಾಗಿ ಪ್ರಾರ್ಥಿಸುತ್ತಿದ್ದೇವೆ, ಅಂತೆಯೇ ನಮ್ಮ ಜಾಗತಿಕ ಪ್ರಾರ್ಥನಾ ವೃಂದದ ಸದಸ್ಯರೂ ಕೂಡಾ ಪ್ರಾರ್ಥಿಸುತ್ತಿದ್ದಾರೆ ಮತ್ತು ನಡೆಯುತ್ತಿರುವ ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಹೈಟಿಯ ಜನರು ಅನುಭವಿಸುತ್ತಿರುವ ಸಂಕಟವು ನೋಡುವುದಕ್ಕೆ ಹೃದಯ ವಿದ್ರಾವಕವಾಗಿದೆ ಮತ್ತು ಈ ದುರಂತದ ನಂತರದ ಪರಿಣಾಮವನ್ನು ನಿಭಾಯಿಸಲು ಅವರಿಗೆ ನಮ್ಮ ನಿರಂತರ ಸಹಾಯದ ಅಗತ್ಯವಿದೆ. ಅವರಿಗೆ ತಮ್ಮ ಜೀವನವನ್ನು ಪುನರ್ನಿರ್ಮಿಸಲು ಕೇವಲ ಭೌತಿಕ ಸಂಪನ್ಮೂಲಗಳು ಮಾತ್ರವಲ್ಲ, ಬದಲಿಗೆ ಅವರು ಎದುರಿಸುತ್ತಿರುವ ತೊಂದರೆಗಳಿಂದ ಮೇಲೆ ಬರಲು ಧೈರ್ಯ ಮತ್ತು ಚೇತರಿಕೆಗಾಗಿ ನಮ್ಮ ಪ್ರಾರ್ಥನೆಗಳ ಆಧ್ಯಾತ್ಮಿಕ ಬೆಂಬಲವೂ ಸಹ ಅಗತ್ಯವಾಗಿರುತ್ತದೆ. ನೆರವು ಬೇಕಾಗಿರುವವರನ್ನು ಮೇಲಕ್ಕೆತ್ತುವಲ್ಲಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅದರಿಂದ ಹೊರಬರುವ ಅವರ ಪ್ರಯತ್ನಗಳಲ್ಲಿ ಅವರನ್ನು ಬಲಪಡಿಸಲು ಮತ್ತು ನಿತ್ಯ-ಪ್ರಸ್ತುತ ಭಗವಂತನ ನೆರವಿನ ಬಗ್ಗೆ ಅವರ ಗ್ರಹಣಶೀಲತೆಯನ್ನು ಹೆಚ್ಚಿಸಲು ಪ್ರಾರ್ಥನೆಯ ಶಕ್ತಿಯು ಎಂದಿಗೂ ಕಡಿಮೆಯದೆಂದು ಎಣಿಸಬೇಡಿ ಎಂದು ಗುರುದೇವರು ನಮಗೆ ಹೇಳಿದ್ದಾರೆ.
ಇಂತಹ ವಿಪತ್ತುಗಳು ಜೀವನದ ನಿರಂತರ ಅನಿಶ್ಚಿತ ಸ್ವರೂಪವನ್ನು ನಮಗೆ ನೆನಪಿಸುತ್ತವೆ ಮತ್ತು ಅನೇಕರು ಕೇಳುವ ಪ್ರಶ್ನೆಯೆಂದರೆ, “ಭಗವಂತ ಇದನ್ನು ಏಕೆ ಆಗಗೊಡುತ್ತಾನೆ?” ನಮ್ಮ ಮಾನುಷ ಬುದ್ಧಿಶಕ್ತಿಗೆ ಸಂಪೂರ್ಣವಾಗಿ ತೃಪ್ತಿಪಡಿಸುವಂತಹ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ದೃಷ್ಟಿಕೋನವು ತುಂಬಾ ಸೀಮಿತವಾದುದು. ನಾವು ಸೃಷ್ಟಿಯ ಸಮಗ್ರ ನೋಟದ ಒಂದು ಸಣ್ಣ ಭಾಗವನ್ನು ಮಾತ್ರ ನೋಡುತ್ತೇವೆ; ಭಗವಂತನು ಮಾತ್ರ ಅಖಂಡವಾಗಿ ನೋಡುತ್ತಾನೆ ಮತ್ತು ನಮ್ಮ ಎಲ್ಲಾ ಅನುಭವಗಳ ಆಳವಾದ ಉದ್ದೇಶವನ್ನು ತಿಳಿದಿರುತ್ತಾನೆ. ಅಂತಹ ಸಮಯಗಳಲ್ಲಿ, ಆಗಿರುವುದನ್ನು ಮನಸ್ಸಿಗೆ ಅರ್ಥಮಾಡಿಕೊಳ್ಳಲು ಮತ್ತು ಹೃದಯಕ್ಕೆ ಒಪ್ಪಿಕೊಳ್ಳಲು ಕಷ್ಟವಾದಾಗ, ಈ ಪ್ರಕ್ಷುಬ್ಧ ಜಗತ್ತಿನಲ್ಲಿ ವಿಶೇಷವಾಗಿ ನಮ್ಮ ಪ್ರಧಾನ ಆಶ್ರಯ ಮತ್ತು ಸಾಂತ್ವನದ ಮೂಲವಾಗಿರುವ ಭಗವಂತನ ಕಡೆಗೆ ನಾವು ತಿರುಗಬೇಕಾಗುತ್ತದೆ. ಪರಿಸ್ಥಿತಿಗಳು ಅವನಲ್ಲಿ ನಮ್ಮ ವಿಶ್ವಾಸವನ್ನು ಪರೀಕ್ಷಿಸಿದಾಗಲೂ, ನಾವು ಭಯ ಅಥವಾ ನಿರುತ್ಸಾಹಕ್ಕೆ ಒಳಗಾಗಲು ಒಪ್ಪದಿದ್ದರೆ, ಅವನ ಅಮಿತ ಪ್ರೀತಿಯೊಂದಿಗೆ ನಮ್ಮನ್ನು ಶ್ರುತಿಗೂಡಿಸಲು ಸಾಧ್ಯವಾಗುತ್ತದೆ, ಅದು ನಮ್ಮನ್ನು ಎಲ್ಲಾ ಪರೀಕ್ಷೆಗಳಿಗಿಂತ ಮೇಲಕ್ಕೆತ್ತುತ್ತದೆ. ಅಂತಿಮವಾಗಿ, ವಾಸ್ತವದಲ್ಲಿ, ನಾವು ಈ ನಾಜೂಕಾದ ಭೌತಿಕ ರೂಪವಲ್ಲ, ಆದರೆ ಅವಿನಾಶಿಯಾದ ಆತ್ಮ ಹಾಗೂ ಪ್ರತಿಯೊಂದು ಸವಾಲನ್ನು ಜಯಿಸಲು ನಮ್ಮಲ್ಲಿ ಸಂಪನ್ಮೂಲಗಳಿವೆ ಎಂದು ಅರಿತುಕೊಳ್ಳಲು ಅವನು ನಮಗೆ ಸಹಾಯ ಮಾಡುತ್ತಾನೆ — ನಮ್ಮ ಜೀವನವನ್ನು ತನ್ನ ಆರೈಕೆಯಲ್ಲಿ ಇಟ್ಟುಕೊಂಡಿರುವ ಅವನಲ್ಲಿ ನಾವು ಬದ್ಧವಾಗಿದ್ದರೆ.
ಭಗವಂತನ ಮಕ್ಕಳಾಗಿ, ನಾವು ಮನುಕುಲದ ಒಂದು ದೊಡ್ಡ ಕುಟುಂಬಕ್ಕೆ ಸೇರಿದ್ದೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರಿಗೂ ಈ ಪ್ರಪಂಚದ ನೋವುಗಳನ್ನು ನಿವಾರಿಸಲು ನೆರವಾಗುವ ಜವಾಬ್ದಾರಿ ಇದೆ, ಏಕೆಂದರೆ ನಮ್ಮ ಒಟ್ಟುಗೂಡಿದ ಆಲೋಚನೆಗಳು ಮತ್ತು ಕ್ರಿಯೆಗಳೇ ನಮ್ಮ ಮತ್ತು ಇತರರ ವಿಧಿಯ ಮೇಲೆ ಒಳ್ಳೆಯ ರೀತಿಯಲ್ಲೋ ಅಥವಾ ಕೆಟ್ಟ ರೀತಿಯಲ್ಲೋ ಪ್ರಭಾವ ಬೀರುವುದು. ನಿಸ್ವಾರ್ಥತೆ ಮತ್ತು ಕಾಳಜಿ ತುಂಬಿದ ನಮ್ಮ ಪ್ರತಿಯೊಂದು ಕ್ರಿಯೆಯಿಂದ ಕಷ್ಟಕರ ಪರಿಸ್ಥಿತಿಗಳ ಪ್ರಭಾವವನ್ನು ತಗ್ಗಿಸಲು ನಾವು ಎಷ್ಟೆಲ್ಲ ಮಾಡಬಹುದು ಎಂಬುದು ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಹೈಟಿಯ ಜನರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯ ಅನುಕಂಪದ ಪ್ರವಾಹವು ದಿವ್ಯ ಶಕ್ತಿಗೆ ಸಾಕ್ಷಿಯಾಗಿದೆ, ಅದು ಅಗತ್ಯವಿರುವವರನ್ನು ಗುಣಪಡಿಸಲು ಮತ್ತು ಅವರಿಗೆ ಸಾಂತ್ವನವನ್ನು ತರಲು, ಕರುಣಾಮಯಿ ಹೃದಯಗಳ ಮೂಲಕ ಸದಾ ಕಾರ್ಯನಿರತವಾಗಿರುತ್ತದೆ. ದೇವರು ನಮ್ಮನ್ನು ಎಲ್ಲಿ ಇರಿಸಿದ್ದಾನೋ ಅಲ್ಲೆಲ್ಲಾ ಆತನ ಬೆಳಕು ಮತ್ತು ಪ್ರೀತಿಯನ್ನು ನೀಡುವವರಾಗಿರಲು ನಾವು ಸಂಕಲ್ಪ ಮಾಡೋಣ ಮತ್ತು ಎಲ್ಲೆಡೆ ಕಷ್ಟಪಡುತ್ತಿರುವ ಆತ್ಮಗಳಿಗೆ ನಮ್ಮ ನಿರಂತರ ಬೆಂಬಲ ಮತ್ತು ಪ್ರಾರ್ಥನೆಗಳನ್ನು ನೀಡೋಣ. ನಮ್ಮ ಸಕಾರಾತ್ಮಕ ಆಲೋಚನೆಗಳು ಮತ್ತು ಕ್ರಿಯೆಗಳ ಮೂಲಕ, ನಾವು ಭಗವಂತನ ಸರ್ವಶಕ್ತ ಇಚ್ಛೆಯೊಂದಿಗೆ ನಮ್ಮ ಇಚ್ಛೆಯನ್ನು ಒಂದುಗೂಡಿಸಬಹುದು ಮತ್ತು ಯಾವ ಮಹಾನ್ ಪ್ರೀತಿಯಲ್ಲಿ ಅವನು ನಮಗೆಲ್ಲರಿಗೂ ಆಶ್ರಯ ನೀಡಿರುವನೋ ಅದನ್ನು ನಾವು ಅನುಭವಿಸಬಹುದು.
ನಿಮಗೆಲ್ಲರಿಗೂ ಭಗವಂತ ಅವನ ಪ್ರೇಮ ಮತ್ತು ಆಶೀರ್ವಾದವನ್ನು ನೀಡಲಿ
ಶ್ರೀ ದಯಾ ಮಾತಾ
















